ADVERTISEMENT

ಸೀಮೋಲ್ಲಂಘನ: ರಷ್ಯಾ-ಉಕ್ರೇನ್– ಭಾರತಕ್ಕೆ ಸಂಧಾನ ಸುಲಭವೇ?

ಸಂಘರ್ಷ ಅಂತ್ಯಕ್ಕೆ ಭಾರತದಿಂದ ನಡೆಯಬಹುದು ಪ್ರಾಮಾಣಿಕ ಪ್ರಯತ್ನ

ಸುಧೀಂದ್ರ ಬುಧ್ಯ
Published 2 ಸೆಪ್ಟೆಂಬರ್ 2024, 19:40 IST
Last Updated 2 ಸೆಪ್ಟೆಂಬರ್ 2024, 19:40 IST
<div class="paragraphs"><p>ಸೀಮೋಲ್ಲಂಘನ: ರಷ್ಯಾ-ಉಕ್ರೇನ್– ಸಂಧಾನ ಸುಲಭವೇ?</p></div>

ಸೀಮೋಲ್ಲಂಘನ: ರಷ್ಯಾ-ಉಕ್ರೇನ್– ಸಂಧಾನ ಸುಲಭವೇ?

   

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉಕ್ರೇನಿಗೆ ಭೇಟಿಯಿತ್ತಾಗ ಅದನ್ನು ಜಗತ್ತು ಕುತೂಹಲದಿಂದ ನೋಡಿತು. ಉಕ್ರೇನ್ ಮತ್ತು ರಷ್ಯಾವನ್ನು ಮಾತುಕತೆಯ ಮೇಜಿಗೆ ಭಾರತ ತರಬಲ್ಲದೇ ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ನಡೆದವು. ರಷ್ಯಾದ ಅಧ್ಯಕ್ಷ ಪುಟಿನ್ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಹಾಗೂ ದಿಗ್ಬಂಧನದ ಹೊರತಾಗಿಯೂ ರಷ್ಯಾದೊಂದಿಗೆ ವಾಣಿಜ್ಯಿಕ ಸಂಬಂಧವನ್ನು ಮುಂದುವರಿಸಿರುವ ಭಾರತದ ಪ್ರಧಾನಿ ಉಕ್ರೇನಿಗೆ ಭೇಟಿಯಿತ್ತು ಸಾಧಿಸುತ್ತಿರುವುದಾದರೂ ಏನು ಎಂಬ ಮೂದಲಿಕೆಯೂ ಕೇಳಿಬಂತು.

ಪ್ರಧಾನಿ ಮೋದಿ ಅವರ ಉಕ್ರೇನ್ ಭೇಟಿಯನ್ನು ಜುಲೈನಲ್ಲಿ ಅವರು ಕೈಗೊಂಡ ರಷ್ಯಾ ಭೇಟಿಯ ಮುಂದುವರಿಕೆಯ ಭಾಗವಾಗಿಯೇ ನೋಡಬೇಕು. ಜುಲೈನಲ್ಲಿ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿಯಿತ್ತಾಗ, ‘ರಷ್ಯಾದ ಪರಮಮಿತ್ರ ರಾಷ್ಟ್ರ ಭಾರತ’ ಎಂಬ ಮಾತನ್ನು ಪುಟಿನ್ ಆಡಿದ್ದರು. ಮೋದಿ ಅವರು ಎಂದಿನ ತಮ್ಮ ಶೈಲಿಯಲ್ಲಿಯೇ ಪುಟಿನ್ ಅವರನ್ನು ಆಲಿಂಗಿಸಿಕೊಂಡಿದ್ದರು. ಈ ಬೆಳವಣಿಗೆಯನ್ನು ಅಮೆರಿಕ ಕೆಂಗಣ್ಣಿನಿಂದ ನೋಡಿತ್ತು. ಹಾಗಾದರೆ ಮೋದಿ ಅವರ ಉಕ್ರೇನ್ ಭೇಟಿ, ರಷ್ಯಾ ಭೇಟಿಯನ್ನು ಸರಿದೂಗಿಸುವ ಒಂದು ಪ್ರಯತ್ನವೇ ಅಥವಾ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಧಾನದ ಕೊಂಡಿಯಾಗಲು ಭಾರತ ನಿಜಕ್ಕೂ ಬಯಸುತ್ತಿದೆಯೇ?

ADVERTISEMENT

ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ಆರಂಭವಾದ ಬಳಿಕ ಹಲವು ದೇಶಗಳು ಸಂಘರ್ಷವನ್ನು ಕೊನೆಗಾಣಿಸುವ ದಿಸೆಯಲ್ಲಿ ಪ್ರಯತ್ನಗಳನ್ನು ಮಾಡಿವೆ. ಮೊದಲಿಗೆ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರನ್ನು ಮಾತುಕತೆಯ ಮೇಜಿಗೆ ತರುವ ಪ್ರಯತ್ನವನ್ನು ಇಸ್ರೇಲ್ ಮಾಡಿತು. ನಂತರ ಟರ್ಕಿ ಶಾಂತಿ ಮಾತುಕತೆಗೆ ವೇದಿಕೆ ಒದಗಿಸುವ ಕೆಲಸಕ್ಕೆ ಮುಂದಾಯಿತು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಕೂಡ ಒಂದು ಹಂತದಲ್ಲಿ ಪುಟಿನ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಉತ್ತರ ಹುಡುಕಲು ನೋಡಿದರು. ಆದರೆ ಈ ಯಾವ ಪ್ರಯತ್ನಗಳೂ ಯಶ ಕಾಣಲಿಲ್ಲ.

2022ರ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ಪುಟಿನ್ ಅವರನ್ನು ನೇರವಾಗಿ ಭೇಟಿಯಾಗಿದ್ದ ಮೋದಿ ಅವರು, ‘ಇದು ಯುದ್ಧದ ಕಾಲವಲ್ಲ’ ಎಂಬ ಮಾತನ್ನು ಆಡಿದ್ದರು. ರಷ್ಯಾದ ನಡೆಯನ್ನು ಪರೋಕ್ಷವಾಗಿ ಖಂಡಿಸಿದ್ದರು. ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಆಗ್ರಹ ಆ ಮಾತಿನಲ್ಲಿತ್ತು. ಪುಟಿನ್ ಆ ಮಾತಿಗೆ ಎದುರಾಡಲಿಲ್ಲ. ಆ ಬಳಿಕ ಚೀನಾ ಮತ್ತು ರಷ್ಯಾ ಸಖ್ಯದ ಕುರಿತು ಚರ್ಚೆಯಾಯಿತು. ಆಗ 12 ಅಂಶಗಳ ಪ್ರಕಟಣೆಯೊಂದನ್ನು ಹೊರಡಿಸಿದ ಚೀನಾ, ತಾನು ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿದ್ಧ ಎಂದಿತು. ಆದರೆ ಚೀನಾದ ಪ್ರಸ್ತಾಪವನ್ನು ಉಕ್ರೇನ್ ಪುರಸ್ಕರಿಸಲಿಲ್ಲ.

ಆ ಬಳಿಕ ದಕ್ಷಿಣ ಜಗತ್ತಿನ ರಾಷ್ಟ್ರಗಳ ನಾಯಕರ ನಿಯೋಗವೊಂದು ಪುಟಿನ್ ಮತ್ತು ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿತು. ಆದರೆ ಸ್ಪಂದನೆ ವ್ಯಕ್ತವಾಗಲಿಲ್ಲ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವಿವಿಧ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿ, 10 ಅಂಶಗಳ ಶಾಂತಿ ಪ್ರಸ್ತಾವವನ್ನು ಮುಂದಿಟ್ಟರು. ಝೆಲೆನ್ಸ್ಕಿ ಮಂಡಿಸಿದ ಈ ಶಾಂತಿ ಪ್ರಸ್ತಾವದಲ್ಲಿ ರಷ್ಯಾ ಒಪ್ಪಬಹುದಾದ ಕೆಲವು ಅಂಶಗಳಿದ್ದವು. ಧಾನ್ಯಗಳ ರಫ್ತು, ಯುದ್ಧ ಕೈದಿಗಳ ಹಸ್ತಾಂತರ, ವಿಕಿರಣ ಮತ್ತು ಪರಮಾಣು ಸುರಕ್ಷತೆ ಹಾಗೂ ಸೇನಾ ಹಿಂತೆಗೆತದ ವಿಷಯಗಳಲ್ಲಿ ರಷ್ಯಾ ಒಲ್ಲೆ ಎನ್ನಲು ಕಾರಣಗಳಿರಲಿಲ್ಲ. ಆದರೆ 1991ರ ಗಡಿರೇಖೆಗೆ ರಷ್ಯಾ ಬದ್ಧವಾಗಬೇಕು ಎನ್ನುವುದು ಕ್ರಿಮಿಯಾವನ್ನು ರಷ್ಯಾ ತೊರೆಯಬೇಕು ಎನ್ನುವುದರ ಬದಲಿ ಹೇಳಿಕೆಯಾಗಿತ್ತು. ಉಕ್ರೇನಿಗೆ ಇತರ ದೇಶಗಳು ಭದ್ರತೆಯ ಅಭಯ ನೀಡಬೇಕು ಎನ್ನುವುದು ಉಕ್ರೇನ್ ನ್ಯಾಟೊ ಭಾಗವಾಗಬೇಕು ಎಂಬುದರ ಸಮರ್ಥನೆಯಾಗಿತ್ತು. ಹಾಗಾಗಿ, ಶಾಂತಿ ಪ್ರಸ್ತಾವವನ್ನು ರಷ್ಯಾ ತಿರಸ್ಕರಿಸಿತು.

ನಂತರ ಇಂಡೊನೇಷ್ಯಾ ಕಡೆಯಿಂದ ಮತ್ತೊಂದು ಪ್ರಸ್ತಾವ ಬಂತು. ಪ್ರಸ್ತುತ ಯಾವ ಪ್ರದೇಶಗಳು ಯಾರ ಹಿಡಿತದಲ್ಲಿವೆಯೋ ಅಷ್ಟಕ್ಕೇ ಗಡಿ ಸೀಮಿತವಾಗಬೇಕು. ವೀಕ್ಷಕರ ಸಮ್ಮುಖದಲ್ಲಿ ಎರಡು ದೇಶಗಳ ನಡುವೆ ಸೇನಾರಹಿತ ವಲಯವನ್ನು ಗುರುತಿಸಬೇಕು. ವಿವಾದಿತ ಪ್ರದೇಶಗಳ ಜನರ ಅಭಿಪ್ರಾಯ ಸಂಗ್ರಹಿಸಿ, ಆ ಪ್ರದೇಶಗಳ ಒಡೆತನ ನಿರ್ಧರಿಸುವ ಕೆಲಸವನ್ನು ವಿಶ್ವಸಂಸ್ಥೆಗೆ ಬಿಡಬೇಕು ಎಂದು ತನ್ನ ಅಭಿಪ್ರಾಯವನ್ನು ಇಂಡೊನೇಷ್ಯಾ ಹೇಳಿತು. ಇದನ್ನು ರಷ್ಯಾ ಪರ ಇರುವ ಪ್ರಸ್ತಾವ ಎಂದು ಉಕ್ರೇನ್ ತಿರಸ್ಕರಿಸಿತು.

ಯುದ್ಧ ಆರಂಭವಾದ ಬಳಿಕದ ಈ ಮೂವತ್ತು ತಿಂಗಳುಗಳಲ್ಲಿ ನಡೆದ ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯವರ್ತಿಯಾಗಿ ಸಂಧಾನಕ್ಕೆ ಕೂರುವುದು ಸುಲಭವಲ್ಲ ಎನ್ನುವುದಂತೂ ಸ್ಪಷ್ಟ. ಹೀಗಿದ್ದೂ ಭಾರತ ವ್ಯರ್ಥ ಪ್ರಯತ್ನವೊಂದನ್ನು ಮಾಡುತ್ತಿದೆಯೇ? ಯುದ್ಧ ಆರಂಭವಾದ ಬಳಿಕ ಹಲವು ಸಂದರ್ಭಗಳಲ್ಲಿ ಭಾರತದ ನಿಲುವಿನ ಕುರಿತು ಪ್ರಶ್ನೆ ಎದ್ದಿತ್ತು.

ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತ ಯಾರ ಪರ ಎಂಬ ಪ್ರಶ್ನೆಗೆ, ಭಾರತದ ವಿದೇಶಾಂಗ ಸಚಿವರು ‘ಭಾರತ ಭಾರತದ ಪರ’ ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದ್ದರು. ಯುರೋಪಿನ ಸಮಸ್ಯೆಯನ್ನು ಜಗತ್ತಿನ ಸಮಸ್ಯೆ ಎಂದು ಬಿಂಬಿಸುವ ಪರಿಪಾಟ ಇದೆ. ಉಕ್ರೇನ್– ರಷ್ಯಾ ನಡುವಿನ ಯುದ್ಧ ಯುರೋಪಿನ ಯುದ್ಧ. ಅದಕ್ಕೆ ಜಗತ್ತಿನ ಇತರ ರಾಷ್ಟ್ರಗಳು ಸ್ಪಂದಿಸಬೇಕು ಎಂದು ಬಯಸುವುದಾದರೆ, ಜಗತ್ತಿನ ಇತರ ಭಾಗದ ಸಮಸ್ಯೆಗಳನ್ನು, ಮುಖ್ಯವಾಗಿ ದಕ್ಷಿಣ ಜಗತ್ತಿನ ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನು ಆ ದೃಷ್ಟಿಯಿಂದಲೇ ಪಶ್ಚಿಮ ಜಗತ್ತು ನೋಡಬೇಕು ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ನೇರವಾಗಿಯೇ ಹೇಳಿದ್ದರು.

ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ, ವಿಶ್ವಸಂಸ್ಥೆಯ ನಿಯಮಗಳ ಅಡಿಯಲ್ಲಿ ರಾಜತಾಂತ್ರಿಕ ಪ್ರಕ್ರಿಯೆಯ ಮೂಲಕ ಸಂಘರ್ಷಕ್ಕೆ ಉತ್ತರ ಕಂಡುಕೊಳ್ಳಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿತ್ತು. ಸೌದಿ ಅರೇಬಿಯಾದಲ್ಲಿ ಮೊದಲ ಶಾಂತಿ ಶೃಂಗ ನಡೆದಾಗ, ರಷ್ಯಾವನ್ನು ಹೊರಗಿಟ್ಟು ನಡೆಸುವ ಯಾವುದೇ ಮಾತುಕತೆ ಫಲಪ್ರದವಾಗುವುದಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿತ್ತು.

ಇದೀಗ ಉಕ್ರೇನ್ ಭೇಟಿಯ ವೇಳೆ ಹೊರಡಿಸಲಾದ ಜಂಟಿ ಹೇಳಿಕೆಯಲ್ಲೂ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ. ‘ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಾಯೋಗಿಕ ದೃಷ್ಟಿಕೋನದ ಅವಶ್ಯಕತೆ ಇದೆ ಮತ್ತು ಶಾಂತಿ ಸ್ಥಾಪನೆಗೆ ಭಾರತ ಎಲ್ಲ ರೀತಿಯಿಂದಲೂ ಸಹಕರಿಸಲು ಸಿದ್ಧವಿದೆ’ ಎಂದಿದೆ.

ಉಕ್ರೇನ್ ಭೇಟಿಯ ಬಳಿಕ ಆ ಕುರಿತು ಅಮೆರಿಕದ ಅಧ್ಯಕ್ಷ ಬೈಡನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆಗೆ ಪ್ರಧಾನಿ ಮೋದಿ ಮಾತನಾಡಿರುವುದು ವರದಿಯಾಗಿದೆ. ಇದೇ ತಿಂಗಳು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುವ ಮೋದಿ ಅವರು ಅಮೆರಿಕದ ಅಧ್ಯಕ್ಷರನ್ನು ಮತ್ತು ಐರೋಪ್ಯ ರಾಷ್ಟ್ರಗಳ ಇತರ ನಾಯಕರನ್ನು ಭೇಟಿಯಾಗಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯುವ ಬ್ರಿಕ್ಸ್ ಅಧಿವೇಶನದಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಸಂಭವವಿದೆ. ಹಾಗಾಗಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗಾಣಿಸುವ ದಿಸೆಯಲ್ಲಿ ಒಂದು ಪ್ರಾಮಾಣಿಕ ಪ್ರಯತ್ನ ಭಾರತದ ನೇತೃತ್ವದಲ್ಲಿ ನಡೆಯಬಹುದು.

ಒಂದಂತೂ ನಿಜ, ರಷ್ಯಾ- ಉಕ್ರೇನ್ ಯುದ್ಧವನ್ನು ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯ ಪ್ರಕರಣವಾಗಿ ಮಾತ್ರ ನೋಡಲು ಸಾಧ್ಯವಿಲ್ಲ. ರಾಷ್ಟ್ರೀಯ ಭದ್ರತೆ, ಭೌಗೋಳಿಕ ರಾಜಕೀಯ, ಬಾಹ್ಯ ಹಸ್ತಕ್ಷೇಪ, ಪಾರಂಪರಿಕ ಹಿನ್ನೆಲೆ ಮತ್ತು ಜನಾಂಗೀಯ ಸ್ವಾತಂತ್ರ್ಯದ ಮಗ್ಗುಲು ಆ ಸಂಘರ್ಷಕ್ಕೆ ಇದೆ. ಯಾವುದೇ ಪ್ರಾಮಾಣಿಕ ಪ್ರಯತ್ನ ಯಶ ಕಾಣಬೇಕಾದರೆ, ಪ್ರಾಯೋಗಿಕ ದೃಷ್ಟಿಕೋನ ಅಗತ್ಯ. ಮೋದಿ ಉಕ್ರೇನ್‌ನಿಂದ ನಿರ್ಗಮಿಸಿದ ಬಳಿಕ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿರುವ ಮಾತನ್ನು ಗಮನಿಸಿದರೆ, ಪ್ರಾಯೋಗಿಕ ದೃಷ್ಟಿಕೋನದ ಅಭಾವ ಎದ್ದುಕಾಣುತ್ತದೆ. ಎರಡು ಕಡೆಯಿಂದ ಸ್ಪಂದನೆ ದೊರೆಯದಿದ್ದರೆ ಸಂಧಾನ ಹೇಗೆ ಸಾಧ್ಯ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.