ADVERTISEMENT

ಮುಂದಿದೆ ಚಳಿಗಾಲ, ಪುಟಿನ್ ದಾಳ: ಸುಧೀಂದ್ರ ಬುಧ್ಯ ಲೇಖನ

ಉಕ್ರೇನ್‌ ದೇಶವನ್ನು ಮಾತುಕತೆಗೆ ಆಹ್ವಾನಿಸಿರುವುದರ ಹಿಂದೆ ಪುಟಿನ್ ಲೆಕ್ಕಾಚಾರ ಬೇರೆಯೇ ಇದೆ

ಸುಧೀಂದ್ರ ಬುಧ್ಯ
Published 3 ಅಕ್ಟೋಬರ್ 2022, 21:41 IST
Last Updated 3 ಅಕ್ಟೋಬರ್ 2022, 21:41 IST
simollanghana
simollanghana   

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಒಂದು ಮುಖ್ಯ ತಿರುವಿಗೆ ಬಂದು ನಿಂತಿದೆ. 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಳ್ಳಲು ಬಳಸಿದ್ದ ತಂತ್ರವನ್ನೇ ಪುಟಿನ್ ಮತ್ತೊಮ್ಮೆ ಬಳಸಿದ್ದಾರೆ. ಕೆರ್ಸಾನ್, ಝಪೋರಿಝಿಯಾ, ಲೂಹಾನ್‍ಸ್ಕ್ ಮತ್ತು ಡೊನೆಟ್‍ಸ್ಕ್ ಪ್ರದೇಶಗಳನ್ನು ರಷ್ಯಾದ ಭಾಗವಾಗಿಸಿಕೊಳ್ಳುವ ದಾಖಲೆ ಪತ್ರಗಳಿಗೆ ಸಹಿ ಮಾಡಿದ್ದಾರೆ. ಹಿಂದಿನ ಒಂದು ವಾರದಲ್ಲಿ ಆದ ಬೆಳವಣಿಗೆಗಳು, ಈ ಏಳು ತಿಂಗಳ ಯುದ್ಧ ಯಾವ ದಿಕ್ಕಿಗೆ ಹೊರಳಬಹುದು ಎಂಬ ಕುರಿತು ಹೊಸ ಸಾಧ್ಯತೆಗಳನ್ನು ಮುಂದಿರಿಸಿವೆ. ಯುದ್ಧದ ವ್ಯಾಪ್ತಿ ಹಿರಿದಾಗಿ, ಅಣ್ವಸ್ತ್ರ ದಾಳಿಯಂತಹ ಅನಾಹುತಕ್ಕೂ ಕಾರಣವಾಗಬಹುದೇ ಎಂಬ ಆತಂಕವನ್ನು ಸೃಷ್ಟಿಸಿವೆ.

ಫೆಬ್ರುವರಿ 24ರಂದು ಉಕ್ರೇನ್ ಮೇಲೆ ರಷ್ಯಾ ದಾಳಿಗಿಳಿದಾಗ, ರಷ್ಯಾದ ಗುರಿ ಈ ನಾಲ್ಕು ಪ್ರಾಂತ್ಯ ಗಳಷ್ಟೇ ಆಗಿರಲಿಲ್ಲ. ನ್ಯಾಟೊ ಸದಸ್ಯ ರಾಷ್ಟ್ರವಾಗಲು ಉಕ್ರೇನ್ ಹವಣಿಸುತ್ತಿದೆ, ಅಣ್ವಸ್ತ್ರ ಹೊಂದುವ ಪ್ರಯತ್ನಕ್ಕೂ ಚಾಲನೆ ನೀಡಿದೆ, ತನ್ನ ಭದ್ರತೆಗೆ ಇದರಿಂದ ಅಪಾಯವಿದೆ, ಜೊತೆಗೆ ಡಾನ್ ಬಾಸ್ ಪ್ರದೇಶದಲ್ಲಿ ರಷ್ಯನ್ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಹಾಗಾಗಿ ಉಕ್ರೇನಿನ ಸೇನಾ ಶಕ್ತಿಯನ್ನು ಕುಂದಿಸುವುದು, ಡಾನ್ ಬಾಸ್ ಪ್ರದೇಶವನ್ನು ಸ್ವತಂತ್ರಗೊಳಿಸುವುದುತನ್ನ ಉದ್ದೇಶ ಎಂದು ರಷ್ಯಾ ಹೇಳಿತ್ತು. ಆದರೆ ಯುದ್ಧ ಮುಂದುವರಿದಂತೆ ಉಕ್ರೇನ್ ಸೇನೆ ಎದೆಸೆಟೆಸಿ ಕಾದಾಡಿತು.

ರಷ್ಯಾ ತನಗಾದ ಹಿನ್ನಡೆಯನ್ನು ಒಪ್ಪಲಿಲ್ಲ. ಆದರೆ ರಷ್ಯಾಕ್ಕೆ ಆದ ಹಿನ್ನಡೆ ಅದು ತೆಗೆದುಕೊಂಡ ನಿಲುವಿನಲ್ಲಿ ಪ್ರತಿಫಲಿಸುತ್ತಿತ್ತು. ಮೊದಲಿಗೆ ಕೀವ್ ನಗರದತನಕ ಹೆಜ್ಜೆ ಇರಿಸಿದ್ದ ರಷ್ಯಾ ಪಡೆಗಳು ನಂತರ ಡಾನ್ ಬಾಸ್ ಭಾಗಕ್ಕಷ್ಟೇ ಸೀಮಿತಗೊಂಡವು. ಹೆಚ್ಚುವರಿಯಾಗಿ ಮೀಸಲು ಪಡೆಯನ್ನು ಯುದ್ಧಸನ್ನದ್ಧಗೊಳಿಸುವ ಆದೇಶಕ್ಕೆ ಪುಟಿನ್ ಅಂಕಿತ ಹಾಕಿದರು. ‘ರಷ್ಯಾದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟಾದರೆ ನಮ್ಮ ಬಳಿ ಇರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಖಂಡಿತವಾಗಿ ಬಳಸುತ್ತೇವೆ’ ಎನ್ನುವ ಮೂಲಕ ಅಣ್ವಸ್ತ್ರ ಬಳಸುವ ಧಮಕಿ ಹಾಕಿದರು. ರಷ್ಯಾದ ಸೇನೆಯ ಹಿಡಿತದಲ್ಲಿದ್ದ ನಾಲ್ಕು ಪ್ರಾಂತ್ಯಗಳಲ್ಲಿ ಕೂಡಲೇ ಜನಾಭಿಪ್ರಾಯ ಸಂಗ್ರಹ ನಡೆಸಲಾಯಿತು. ನಿರೀಕ್ಷಿಸಿದ್ದ ಫಲಿತಾಂಶ ಬಂತು. ಎರಡೇ ದಿನದಲ್ಲಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆ ಪತ್ರಗಳಿಗೆ ಪುಟಿನ್ ಅಂಕಿತ ಹಾಕಿದರು. ಕ್ಷಿಪ್ರವಾಗಿ ನಡೆದ ಈ ಬೆಳವಣಿಗೆಗಳು ರಷ್ಯಾಕ್ಕೆ ಆದ ಹಿನ್ನಡೆಯನ್ನು, ಪುಟಿನ್ ಅವರು ಹುಡುಕಿಕೊಂಡ ಮುಖ ಉಳಿಸಿಕೊಳ್ಳುವ ಮಾರ್ಗವನ್ನು, ರಷ್ಯಾದ ನೂತನ ತಂತ್ರಗಾರಿಕೆಯನ್ನು ಹೇಳುತ್ತಿವೆ.

ADVERTISEMENT

ಹಾಗಾದರೆ ಈ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನತ್ತ ಹೊರಳಬಹುದು? ಮೊದಲನೆಯದು, ಮಾತುಕತೆಯ ಹಾದಿ. ಕ್ರೆಮ್ಲಿನ್‌ನ ಸೇಂಟ್ ಜಾರ್ಜ್ ಸಭಾಂಗಣದಲ್ಲಿ ನಾಲ್ಕು ಪ್ರದೇಶಗಳ ಸ್ವಾಧೀನ ಪ್ರಕ್ರಿಯೆಗೆ ಅಂಕಿತ ಹಾಕಿ ಮಾತನಾಡಿರುವ ಪುಟಿನ್, ಉಕ್ರೇನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ ಈ ನಾಲ್ಕು ಪ್ರದೇಶಗಳ ಕುರಿತು ಯಾವುದೇ ಚೌಕಾಶಿಗೆ ಸಿದ್ಧವಿಲ್ಲ ಎಂಬ ಷರತ್ತನ್ನೂ ವಿಧಿಸಿದ್ದಾರೆ. ಯುದ್ಧ ಆರಂಭವಾದ ಬಳಿಕ ಟರ್ಕಿ ಮಧ್ಯಸ್ಥಿಕೆಯಲ್ಲಿ ಒಂದು ಹಂತದ ಮಾತುಕತೆ ನಡೆದಿತ್ತು. ಫೆಬ್ರುವರಿ 24ರ ಪೂರ್ವಸ್ಥಿತಿಗೆ ಮರಳಿದರಷ್ಟೇ ಮಾತುಕತೆ ಮತ್ತು ಕದನವಿರಾಮ ಸಾಧ್ಯ ಎಂದು ಉಕ್ರೇನ್ ಪಟ್ಟು ಹಿಡಿದಾಗ ಮಾತುಕತೆ ಮುರಿದುಬಿತ್ತು. ಇದೀಗ ತನ್ನ ನಾಲ್ಕು ಪ್ರದೇಶಗಳ ಸ್ವಾಧೀನ ಪ್ರಕ್ರಿಯೆಯನ್ನು
ರಷ್ಯಾ ಆರಂಭಿಸಿರುವಾಗ ರಷ್ಯಾದ ಜೊತೆ ಉಕ್ರೇನ್ ಮಾತುಕತೆಗೆ ಕೂರಲು ಸಾಧ್ಯವೇ? ಇದು ಪುಟಿನ್ ಅವರಿಗೂ ತಿಳಿದಿದೆ. ಅವರ ಲೆಕ್ಕಾಚಾರ ಬೇರೆಯೇ ಇದೆ.

ಸದ್ಯದ ಮಟ್ಟಿಗೆ ಉಕ್ರೇನ್ ಬೆಂಬಲಕ್ಕೆ ಐರೋಪ್ಯ ರಾಷ್ಟ್ರಗಳು ಇಡಿಯಾಗಿ ನಿಂತಿವೆ. ಈ ಒಗ್ಗಟ್ಟನ್ನು ಮುರಿಯುವುದು ಪುಟಿನ್ ಅವರ ತಂತ್ರ. ಆರ್ಥಿಕವಾಗಿ ಮತ್ತು ಸೇನಾ ದೃಷ್ಟಿಯಿಂದ ಐರೋಪ್ಯ ರಾಷ್ಟ್ರಗಳು ಇದೀಗ ಚೈತನ್ಯ ಉಳಿಸಿಕೊಂಡಿಲ್ಲ. ಈ ಸಂಘರ್ಷ ಅಂತ್ಯಗೊಂಡರೆ ಸಾಕು ಎಂದು ಕಾಯುತ್ತಿವೆ. ಚಳಿಗಾಲ ಎದುರಿರುವಾಗ ಐರೋಪ್ಯ ರಾಷ್ಟ್ರಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ರಷ್ಯಾ ಸಂಪೂರ್ಣವಾಗಿ ನಿಲ್ಲಿಸಿದರೆ, ಇಂಧನ ದರ ಏರುತ್ತದೆ, ಕಾರ್ಖಾನೆಗಳು ಮುಚ್ಚುವ ಸಂದರ್ಭ ಬರುತ್ತದೆ, ಹಣದುಬ್ಬರ ಆಕಾಶಕ್ಕೆ ಜಿಗಿಯುತ್ತದೆ. ಚಳಿ ಪ್ರದೇಶಗಳ ಜನ ಬೆಚ್ಚಗಿರಬೇಕಾದರೆ ಹೀಟರ್‌ಗಳಿಗೆ ಇಂಧನ ಅಗತ್ಯ. ಹಾಗಾಗಿ, ಪುಟಿನ್ ಈ ಪರಿಸ್ಥಿತಿಯನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳಬಹುದು. ಈ ನಾಲ್ಕು ಪ್ರಾಂತ್ಯಗಳನ್ನು ಮತ್ತು ಕ್ರಿಮಿಯಾವನ್ನು ರಷ್ಯಾದ ಭಾಗವೆಂದು ಅನುಮೋದಿಸುವ ರಾಷ್ಟ್ರಗಳಿಗೆ ಇಂಧನ ಪೂರೈಸುವುದಾಗಿ ಹೇಳಬಹುದು. ಆಗ ಐರೋಪ್ಯ ರಾಷ್ಟ್ರಗಳಲ್ಲಿ ಅಮೆರಿಕದ ನಿಲುವಿನ ಕುರಿತು ಅಪಸ್ವರ ಏಳಬಹುದು. ಒಗ್ಗಟ್ಟು ಮುರಿಯಬಹುದು. ರಷ್ಯಾದ ಷರತ್ತಿಗೆ ಒಪ್ಪಿ ಮಾತುಕತೆಯ ಮೇಜಿಗೆ ಬರುವುದು ಉಕ್ರೇನಿಗೆ ಅನಿವಾರ್ಯ ಆಗಬಹುದು. ನ್ಯಾಟೊ ಸೇರುವ ಬಯಕೆಯನ್ನು ಬಿಡಬೇಕಾಗಬಹುದು. ರಷ್ಯಾಕ್ಕೆ ಬೇಕಿರುವುದು ಇದೇ. ಪುಟಿನ್ ಈ ಸಾಧ್ಯತೆಯ ಕುರಿತು ಗಮನ ನೆಟ್ಟಂತಿದೆ.

ಎರಡನೆಯದು, ಸಂಘರ್ಷದ ಹಾದಿ. ಪುಟಿನ್ ಅವರ ಸೇನೆ ಕಳೆಗುಂದಿದೆ, ಉಕ್ರೇನ್ ಸೇನೆಯ ಪ್ರತಿದಾಳಿಗೆ ತತ್ತರಿಸುತ್ತಿದೆ. ಪುಟಿನ್ ಅವರಿಗೆ ಪಾಠ ಕಲಿಸಲು ಟೊಂಕ ಕಟ್ಟಿರುವ ಬೈಡನ್ ಆಡಳಿತ, ಉಕ್ರೇನ್ ಬತ್ತಳಿಕೆ ಬರಿದಾಗದಂತೆ ನೋಡಿಕೊಳ್ಳುತ್ತಿದೆ. ಹಾಗಾಗಿ ಅಮೆರಿಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಕ್ತಿಯನ್ನು ಉಕ್ರೇನ್ ಸೇನೆಗೆ ತುಂಬಬಹುದು, ರಷ್ಯಾವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು ಪ್ರಚೋದಿಸಬಹುದು. ಒಂದೊಮ್ಮೆ ಹೀಗಾದರೆ ಸಂಘರ್ಷ ತಾರಕಕ್ಕೇರುತ್ತದೆ.
ನಾಲ್ಕು ಪ್ರದೇಶಗಳ ಸ್ವಾಧೀನ ಪ್ರಕ್ರಿಯೆಗೆ ಅಂಕಿತ ಹಾಕಿ, ರಷ್ಯನ್ನರ ಎದುರು ಕಾಲರ್ ಏರಿಸಿಕೊಂಡಿರುವ ಪುಟಿನ್ ಅವರಿಗೆ ಮುಖಭಂಗವಾಗುತ್ತದೆ. ಅಮೆರಿಕಕ್ಕೆ ಬೇಕಿರುವುದು ಇದೇ.

ಇಂತಹ ಪರಿಸ್ಥಿತಿಯಲ್ಲಿ ಪುಟಿನ್ ಅಂತಿಮವಾಗಿ ಅಣ್ವಸ್ತ್ರದ ಮೊರೆ ಹೋಗಬಹುದೇ? ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಪ್ಯಾರಿಸ್ ಶಾಂತಿ ಮಾತುಕತೆಯ ವೇಳೆ ಅಮೆರಿಕ ಮುಂದಿರಿಸಿದ್ದ ಷರತ್ತುಗಳಿಗೆ ವಿಯೆಟ್ನಾಂ ಮಣಿಯದಿದ್ದರೆ ಅಣ್ವಸ್ತ್ರ ದಾಳಿ ನಡೆಸುವ ಬೆದರಿಕೆಯನ್ನು ಅಮೆರಿಕದ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಒಡ್ಡಿದ್ದರು. ಹಾಗಾಗಿ ಉಕ್ರೇನನ್ನು ಮಾತುಕತೆಯ ಮೇಜಿಗೆಳೆಯಲು ಅಣ್ವಸ್ತ್ರ ದಾಳಿಯ ಬೆದರಿಕೆಯನ್ನು ಪುಟಿನ್ ಒಡ್ಡುತ್ತಿರ ಬಹುದು ಎಂದು ಭಾವಿಸಿದರೂ, ಕೈ ಸೋತಾಗ ಪುಟಿನ್ ದುಸ್ಸಾಹಸಕ್ಕೆ ಮುಂದಾದರೆ ಎಂಬ ದಿಗಿಲಂತೂ ಇದೆ.

ಹಾಗಾಗಿ ರಷ್ಯಾದ ಅಣ್ವಸ್ತ್ರ ದಾಳಿಯ ಬೆದರಿಕೆಗೆ ಅಮೆರಿಕ ಪ್ರತಿತಂತ್ರ ರೂಪಿಸಬಹುದು. ಉಕ್ರೇನಿಗೆ ತಾಗಿಕೊಂಡ ನ್ಯಾಟೊ ರಾಷ್ಟ್ರಗಳಲ್ಲಿ ತನ್ನ ಅಣ್ವಸ್ತ್ರ ಕ್ಷಿಪಣಿ
ಗಳನ್ನು ರಷ್ಯಾದತ್ತ ಮುಖಮಾಡಿ ನಿಲ್ಲಿಸಿ ಅಮೆರಿಕ ತೊಡೆ ತಟ್ಟಿದರೆ ಅಚ್ಚರಿಯಿಲ್ಲ. 1962ರಲ್ಲಿ ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವೆ ಇಂತಹದೇ ಬಿಕ್ಕಟ್ಟು ಏರ್ಪಟ್ಟಿತ್ತು. ಸೋವಿಯತ್ ರಷ್ಯಾವು ಅಮೆರಿಕದ ಬಗಲಿಗಿರುವ ಕ್ಯೂಬಾದಲ್ಲಿ ಅಣ್ವಸ್ತ್ರ ಸಿಡಿತಲೆ
ಗಳನ್ನು ಹೊತ್ತು ಚಿಮ್ಮಬಲ್ಲ ಕ್ಷಿಪಣಿ ವ್ಯವಸ್ಥೆಗಳನ್ನು ಸಜ್ಜಾಗಿ ನಿಲ್ಲಿಸಿತ್ತು. ಸೋವಿಯತ್ ಕಡೆ ಮುಖ ಮಾಡಿದ್ದ ಅಮೆರಿಕದ ಕ್ಷಿಪಣಿಗಳು ಇಟಲಿ ಮತ್ತು ಟರ್ಕಿಯಲ್ಲಿ ಆದೇಶಕ್ಕೆ ಕಾದು ನಿಂತಿದ್ದವು. ಕೊನೆಗೆ ಹಿಂಬಾಗಿಲಿನ ಮಾತುಕತೆ ನಡೆದು ಪರಿಸ್ಥಿತಿ ತಿಳಿಗೊಂಡಿತ್ತು. ಇದೀಗ ಅಮೆರಿಕ ಅದೇ ತಂತ್ರದ ಮೊರೆಹೋದರೆ, ಆತಂಕ ಹೆಚ್ಚಬಹುದು.

ಅದೇನೇ ಇರಲಿ, ಉಕ್ರೇನ್– ರಷ್ಯಾ ನಡುವಿನ ಸಂಘರ್ಷವು ಇದೀಗ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿದಿಲ್ಲ. ಹಲವು ಹಿತಾಸಕ್ತಿಗಳು ಹಿಂದೆ ನಿಂತು ದಾಳ ಉರುಳಿಸುತ್ತಿವೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ಬಳಸಬಹುದಾದ ಎಲ್ಲ ರೀತಿಯ ದಿಗ್ಬಂಧನದ ಅಸ್ತ್ರವನ್ನು ಇದೀಗ ಬಳಸಿಯಾಗಿದೆ. ರಷ್ಯಾದ ರಟ್ಟೆ ಗಟ್ಟಿಯಾಗಿರುವಂತೆ ಚೀನಾ ನೋಡಿಕೊಳ್ಳುತ್ತಿದೆ. ಉಕ್ರೇನ್ ಬಸವಳಿಯದಂತೆ ಅಮೆರಿಕ ಪೊರೆಯುತ್ತಿದೆ. ಹಾಗಾಗಿ ದಿನ ಕಳೆದಂತೆ ಸಂಘರ್ಷ ಹೊಸ ರೂಪವನ್ನು ತಳೆಯುತ್ತಿದೆ. ಆತಂಕವನ್ನು ಹೆಚ್ಚಿಸುತ್ತಿದೆ. ಯುದ್ಧದ ಪರಿಣಾಮ ಜಗತ್ತಿನ ಜನರನ್ನು ಬಾಧಿಸುತ್ತಿದೆ. ಎಲ್ಲ ಆತಂಕಗಳು ಕರಗಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ನಾವು ವಿಜಯದಶಮಿಯ ಸಂದರ್ಭದಲ್ಲಿ ಹಾರೈಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.