ರಷ್ಯಾದ ಉಕ್ರೇನ್ ಯುದ್ಧ ಅನಿರೀಕ್ಷಿತವೇನೂ ಆಗಿರಲಿಲ್ಲ. ಈ ಯುದ್ಧ ನಾಲ್ಕಾರು ವರ್ಷಗಳ ಹಿಂದೆಯೇ ಆಗುವ ಸಂಭವ ಇತ್ತು. ಜಾಗತಿಕ ಬೆಳವಣಿಗೆಗಳು ಪುಟಿನ್ ಅವರ ಕೈಗಳನ್ನು ಕಟ್ಟಿಹಾಕಿದ್ದವು. ಇದೀಗ ಉಕ್ರೇನಿನ ಮೇಲೆ ರಷ್ಯಾ ಮುಗಿಬಿದ್ದಿದೆ. ಯುದ್ಧದ ವ್ಯಾಪ್ತಿ ಹಿರಿದಾಗಬಹುದೇ ಎಂಬ ಆತಂಕ ಪ್ರಪಂಚವನ್ನು ಕಾಡುತ್ತಿದೆ. ರಷ್ಯಾದ ಉಕ್ರೇನ್ ಯುದ್ಧಕ್ಕೆ ನ್ಯಾಟೊದ ವಿಸ್ತರಣಾ ದಾಹ ಪ್ರಮುಖ ಕಾರಣವಾದರೂ, ಅದನ್ನು ಮೀರಿದ ಹಿತಾಸಕ್ತಿಗಳು ಈ ಯುದ್ಧಕ್ಕೆ ಪ್ರಚೋದನೆ ಒದಗಿಸಿವೆ.
ಇತಿಹಾಸವನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕುವುದಾದರೆ, ಎರಡನೇ ವಿಶ್ವಸಮರದ ಬಳಿಕ ಅಮೆರಿಕ ಮತ್ತು ಸೋವಿಯತ್ ರಷ್ಯಾ ಸೂಪರ್ ಪವರ್ ರಾಷ್ಟ್ರಗಳಾಗಿ ಹೊರಹೊಮ್ಮಿದವು. ಈ ಸೂಪರ್ ಪವರ್ ರಾಷ್ಟ್ರಗಳ ನಡುವೆ ಮಾತ್ಸರ್ಯ ಮತ್ತು ಅನುಮಾನ ಮೊಳಕೆಯೊಡೆದಿತ್ತು. 1949ರಲ್ಲಿ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ಪ್ರಮುಖ ರಾಷ್ಟ್ರಗಳು ಭದ್ರತೆಯ ಹೆಸರಿನಲ್ಲಿ ಕೈ ಕೈ ಹಿಡಿದು ನಿಂತವು. ನ್ಯಾಟೊ ಅಸ್ತಿತ್ವಕ್ಕೆ ಬಂತು. ಇದಕ್ಕೆ ಪ್ರತಿಯಾಗಿ ಪೂರ್ವ ಐರೋಪ್ಯ ರಾಷ್ಟ್ರಗಳನ್ನು ಸಂಘಟಿಸಿದ ಸೋವಿಯತ್ ಒಕ್ಕೂಟ, ವಾರ್ಸಾ ಒಪ್ಪಂದಕ್ಕೆ ಮುಂದಾಯಿತು. ಈ ಎರಡು ಒಕ್ಕೂಟಗಳ ಮೂಲಕ ತಮ್ಮ ಪ್ರಭಾವ ವಲಯವನ್ನು ಕಾಯ್ದುಕೊಳ್ಳಲು ಅಮೆರಿಕ ಮತ್ತು ಸೋವಿಯತ್ ರಷ್ಯಾ ಯತ್ನಿಸಿದವು.
ವರ್ಷಗಳು ಉರುಳಿದ ಹಾಗೆ ಒಂದು ಕಡೆ ಮುಕ್ತ ಮಾರುಕಟ್ಟೆ, ಉದ್ಯಮಸ್ನೇಹಿ ಯೋಜನೆಗಳಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕವಾಗಿ ಸಬಲವಾದರೆ, ಮತ್ತೊಂದೆಡೆ ಸೈದ್ಧಾಂತಿಕವಾಗಿ ತಾನು ಪ್ರತಿಪಾದಿಸುತ್ತಿದ್ದ ಬಿಗಿಮುಷ್ಟಿಯ ಯೋಜನೆಗಳಿಂದ ಸೋವಿಯತ್ ಆರ್ಥಿಕವಾಗಿ ಕುಗ್ಗತೊಡಗಿತು. ಸೋವಿಯತ್ ಪತನಕ್ಕೆ ದಾರಿಯಾಯಿತು. ಅನೇಕ ಹೊಸ ರಾಷ್ಟ್ರಗಳು ಉದಯಿಸಿದವು. ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವ ಕಂಡುಕೊಂಡಿತು. ಆದರೆ ತನ್ನ ಪ್ರಭಾವ ವಲಯವನ್ನು ಬಿಟ್ಟುಕೊಡಲು ರಷ್ಯಾ ಸಿದ್ಧವಿರಲಿಲ್ಲ. ತನ್ನ ನೆರೆರಾಷ್ಟ್ರಗಳಿಗೆ ಭದ್ರತೆಯ ಅಭಯ ನೀಡಿ ತನ್ನ ಜೊತೆ ಇಟ್ಟುಕೊಳ್ಳಲು ಪ್ರಯತ್ನಿಸಿತು. ಉಕ್ರೇನ್ ತನ್ನ ನೆಲದ ಅಣುಶಸ್ತ್ರಾಗಾರ
ಗಳನ್ನು ರಷ್ಯಾಕ್ಕೆ ಒಪ್ಪಿಸಿ, ಅದರ ಕೈಗೊಂಬೆಯಾಗುವತ್ತ ಹೆಜ್ಜೆಯಿರಿಸಿತು.
ಒಂದು ಹೆಜ್ಜೆ ಮುಂದೆ ಹೋದ ರಷ್ಯಾ, ಪೂರ್ವ ಐರೋಪ್ಯ ರಾಷ್ಟ್ರಗಳನ್ನು ನ್ಯಾಟೊ ಪರಿಧಿಗೆ ತೆಗೆದುಕೊಳ್ಳುವ ಪ್ರಯತ್ನವಾಗಬಾರದು ಎಂಬ ಕರಾರನ್ನು ಅಮೆರಿಕದ ಎದುರು ಇರಿಸಿತು. ಸೋವಿಯತ್ ಪತನದ ಖುಷಿಯಲ್ಲಿದ್ದ ಅಮೆರಿಕ ಆ ಕರಾರಿಗೆ ಒಪ್ಪಿತಾದರೂ, ರಷ್ಯಾ ಮುಂದೆಂದೂ ಸೋವಿಯತ್ ಆಗದಂತೆ ತಡೆಯಬೇಕು ಎಂಬ ದಿಸೆಯಲ್ಲಿ ಕಾರ್ಯತಂತ್ರ ಹೆಣೆಯಿತು. ನ್ಯಾಟೊ ‘ಮುಕ್ತ ದ್ವಾರ’ ಯೋಜನೆಯನ್ನು ಪ್ರತಿಪಾದಿಸಿ, ರಷ್ಯಾದ ಗಡಿಯವರೆಗೂ ತನ್ನ ವ್ಯಾಪ್ತಿ ವಿಸ್ತರಿಸಲು ಮುಂದಾಯಿತು.
2004ರಲ್ಲಿ ಬಾಲ್ಟಿಕ್ ರಾಷ್ಟ್ರಗಳು ನ್ಯಾಟೊ ಒಕ್ಕೂಟ ಸೇರಿಕೊಂಡವು. ರಷ್ಯಾ ತುಟಿಕಚ್ಚಿತು. ನ್ಯಾಟೊ 2008ರಲ್ಲಿ ಜಾರ್ಜಿಯಾ ಮತ್ತು ಉಕ್ರೇನಿಗೆ ಸದಸ್ಯತ್ವದ ಆಹ್ವಾನ ನೀಡಿತು. ರಷ್ಯಾ ಕೆರಳಿತು. ಜಾರ್ಜಿಯಾ ಮೇಲೆ ದಾಳಿ ಮಾಡಿತು. ಐರೋಪ್ಯ ಒಕ್ಕೂಟದ ಮುಕ್ತ ಮಾರುಕಟ್ಟೆ, ಆರ್ಥಿಕ ಏಳಿಗೆಯ ಕಡೆ ಆಕರ್ಷಿತಗೊಂಡಿದ್ದ ಉಕ್ರೇನಿಯನ್ನರು ಐರೋಪ್ಯ ಒಕ್ಕೂಟದ ಭಾಗವಾಗುವ ಇಚ್ಛೆ ಹೊಂದಿದ್ದರು. ಆದರೆ ರಷ್ಯಾ ಪರ ಇದ್ದ ಉಕ್ರೇನ್ ಆಡಳಿತವು ಐರೋಪ್ಯ ಒಕ್ಕೂಟ ಸೇರಲು ನಿರಾಕರಿಸಿದಾಗ, ಜನಾಂದೋಲನ ಆರಂಭವಾಯಿತು. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ತೆರೆಯ ಹಿಂದೆ ನಿಂತು ಅದನ್ನು ಉಕ್ರೇನ್ ಕ್ರಾಂತಿಯಾಗಿ ಬೆಳೆಸಿದವು. 2014ರಲ್ಲಿ ರಷ್ಯಾ ಪರ ಇದ್ದ ಉಕ್ರೇನ್ ಸರ್ಕಾರ ಪತನಗೊಂಡಿತು. ಇದರಿಂದ ಕೆರಳಿದ ರಷ್ಯಾ, ರಷ್ಯನ್ ಭಾಷಿಕರು ಹೆಚ್ಚಿದ್ದ ಕ್ರಿಮಿಯಾವನ್ನು ವಶಪಡಿಸಿ
ಕೊಂಡಿತು. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನದ ‘ಮೊಂಡು ಅಸ್ತ್ರ’ ಹೂಡಿದವು. ಐರೋಪ್ಯ ರಾಷ್ಟ್ರಗಳು ತೈಲ ಮತ್ತು ಅನಿಲಕ್ಕಾಗಿ ರಷ್ಯಾದ ಮೇಲೆ ಅವಲಂಬನೆ ಬೆಳೆಸಿಕೊಂಡಿದ್ದರಿಂದ ಹೆಚ್ಚಿನ ಕ್ರಮ ಸಾಧ್ಯವಾಗಲಿಲ್ಲ.
ಅಮೆರಿಕ ತನ್ನ ಹಿತಾಸಕ್ತಿಗೆ ಪೂರಕವಾಗಿ ಉಕ್ರೇನನ್ನು ಬಳಸಿಕೊಳ್ಳುವ ಯೋಜನೆ ರೂಪಿಸಿತು. ಉಕ್ರೇನಿಗೆ ಆರ್ಥಿಕ ನೆರವು ಹೆಚ್ಚಿಸುವ, ಶಸ್ತ್ರಾಸ್ತ್ರ ಕೊಟ್ಟು ರಷ್ಯಾವನ್ನು ಕೆರಳಿಸುವ ಕೆಲಸ ಮಾಡಿತು. ನ್ಯಾಟೊ ಸೇರುವ ಬಯಕೆಯನ್ನು ಉಕ್ರೇನಿಯನ್ನರಲ್ಲಿ ಜೀವಂತ ಇರಿಸಿತು. ಬುಷ್ ಅವರ ಅವಧಿಯಲ್ಲಿ ಜಾರ್ಜಿಯಾದ ಮೇಲೆ ದಾಳಿ ಮಾಡಿದ್ದ, ಒಬಾಮ ಅವರ ಅವಧಿಯಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದ ರಷ್ಯಾ, ಉಕ್ರೇನಿನ ಮೇಲೆ ಮುಗಿಬೀಳಲು ಕಾಯುತ್ತಿತ್ತು. ಆದರೆ ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲಿ ಆ ಕೆಲಸಕ್ಕೆ ರಷ್ಯಾ ಮುಂದಾಗಲಿಲ್ಲ.
ಉತ್ತರ ಕೊರಿಯಾದ ಹುಂಬ ಅಧ್ಯಕ್ಷರನ್ನು ಮಾತುಕತೆಯ ಮೇಜಿಗೆ ತಂದಿದ್ದ, ಯುಎಇ, ಬಹರೇನ್, ಸುಡಾನ್ ಮತ್ತು ಮೊರಕ್ಕೊಗಳು ಇಸ್ರೇಲ್ ಜೊತೆ ಕೈ ಕುಲುಕುವಂತೆ ಮಾಡಿದ್ದ, ಇರಾನಿನ ಖುದ್ಸ್ ಪಡೆಯ ಮುಖ್ಯಸ್ಥ ಸುಲೇಮಾನಿ ಹತ್ಯೆಗೆ ಆದೇಶಿಸಿದ್ದ ಟ್ರಂಪ್, ಯಾವುದೇ ಅಪಾಯಕಾರಿ ಸಾಹಸಕ್ಕೂ ಕೈ ಹಾಕಬಲ್ಲೆ ಎಂಬ ಇಮೇಜ್ ಸೃಷ್ಟಿಸಿಕೊಂಡಿದ್ದರು. ಜೊತೆಗೆ ‘ಅಮೆರಿಕ ಮೊದಲು’ ನೀತಿಯನ್ನು ಮುಂದೊಡ್ಡಿ, ಇತರ ದೇಶಗಳ ಭದ್ರತೆಗೆ ಅಮೆರಿಕ ತನ್ನ ಬೊಕ್ಕಸದಿಂದ ಹಣ ತೆರುತ್ತಿರುವುದು ಮೂರ್ಖತನ ಎಂದು ನ್ಯಾಟೊಕ್ಕೆ ಅಂಕುಶ ಹಾಕುವ ಯತ್ನ ಮಾಡಿದ್ದರು. ಉಕ್ರೇನ್ ಸೇನಾ ನೆರವಿಗೆ ಅಮೆರಿಕದ ಸಂಸತ್ತು ಅನುಮೋದಿಸಿದ್ದ ಹಣವನ್ನು ಬಿಡುಗಡೆ ಮಾಡದೆ ತಡೆದಿದ್ದರು. ಟ್ರಂಪ್ ಅವರ ಖಡಕ್ ವ್ಯಕ್ತಿತ್ವ ಮತ್ತು ಅವರು ತೆಗೆದುಕೊಂಡ ಈ ನಿಲುವುಗಳು ಪುಟಿನ್ ಅವರನ್ನು ಉಕ್ರೇನ್ ವಿಷಯದಲ್ಲಿ ಮುಂದುವರಿಯದಂತೆ ತಡೆದಿದ್ದವು.
ಬೈಡನ್ ಅಮೆರಿಕದ ಅಧ್ಯಕ್ಷರಾದ ಬಳಿಕ ಉಕ್ರೇನಿಗೆ ನೆರವು ನೀಡುವ ಕೆಲಸ ಮುಂದುವರಿಯಿತು. ರಷ್ಯಾ ತನ್ನ ಸೇನೆಯನ್ನು ಉಕ್ರೇನ್ ಗಡಿಯಲ್ಲಿ ನಿಲ್ಲಿಸಿತು. ಯುದ್ಧಕ್ಕೆ ಆಸ್ಪದವಾಯಿತು. ಇದೀಗ ಮತ್ತೊಮ್ಮೆ ಅಮೆರಿಕವು ದಿಗ್ಬಂಧನ ಎಂಬ ‘ಮೊಂಡು ಅಸ್ತ್ರ’ ಹೂಡಿ ಕೈಕಟ್ಟಿ ನಿಂತಿದೆ!
ಹಾಗಾದರೆ ಯುದ್ಧಕ್ಕೆ ರಷ್ಯಾ ಮುಂದಾಗಲಿ ಎಂದು ಅಮೆರಿಕ ಬಯಸಿತ್ತೇ? ಇತ್ತೀಚಿನ ವರ್ಷಗಳಲ್ಲಿ ಐರೋಪ್ಯ ರಾಷ್ಟ್ರಗಳು ರಷ್ಯಾದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವತ್ತ ಹೆಜ್ಜೆಯಿರಿಸಿದ್ದವು. ಮುಖ್ಯವಾಗಿ ಜರ್ಮನಿ, ನೈಸರ್ಗಿಕ ಅನಿಲ ಪೂರೈಕೆಯ ನಾರ್ಡ್ ಸ್ಟ್ರೀಮ್- 2 ಯೋಜನೆಗೆ ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡಿತು. ರಷ್ಯಾ ಕುರಿತು ಫ್ರಾನ್ಸ್ ಮೃದು ನಿಲುವು ತಳೆಯಿತು. ಅತ್ತ ಸಿರಿಯಾದಲ್ಲಿ ವಾಯುನೆಲೆಗಳನ್ನು ಸ್ಥಾಪಿಸಿಕೊಂಡ ರಷ್ಯಾ, ಇಸ್ರೇಲಿಗೆ ಹತ್ತಿರವಾಗುವತ್ತ ಹೆಜ್ಜೆಯಿರಿಸಿತು. ಇರಾನ್ ಜೊತೆಗೆ ಸಂಬಂಧ ವೃದ್ಧಿಸಿಕೊಂಡಿತು. ಸೌದಿ ಅರೇಬಿಯಾದೊಂದಿಗೆ ಮಿಲಿಟರಿ ಸಹಕಾರ ಒಪ್ಪಂದ ಮಾಡಿಕೊಂಡಿತು. ಈ ಎಲ್ಲವೂ ಅಮೆರಿಕದ ಹಿತಾಸಕ್ತಿಗೆ ಮಾರಕವಾಗಿದ್ದವು. ಜೊತೆಗೆ ಕೊರೊನಾದಿಂದಾಗಿ ಅಮೆರಿಕ ಆರ್ಥಿಕವಾಗಿ ನಲುಗಿತು.
ಸಾಮಾನ್ಯವಾಗಿ ಅಮೆರಿಕ ಆರ್ಥಿಕವಾಗಿ ಹೈರಾಣಾದಾಗ, ಶಕ್ತಿ ಒದಗಿಸುವುದು ಅಲ್ಲಿನ ಶಸ್ತ್ರ ಉದ್ಯಮ. ಆಕ್ರಮಣಕಾರಿ ರಷ್ಯಾವನ್ನು ಗುಮ್ಮನಂತೆ ತೋರಿಸಿ ಈ ಹಿಂದೆಯೂ ಅಮೆರಿಕ ಯುರೋಪಿನಲ್ಲಿ ಶಸ್ತ್ರಾಸ್ತ್ರ ಮಾರಾಟ ಹೆಚ್ಚಿಸಿಕೊಂಡಿತ್ತು. ಹಾಗಾಗಿ ಉಕ್ರೇನ್ ಯುದ್ಧ ಆರ್ಥಿಕವಾಗಿ ಅಮೆರಿಕಕ್ಕೆ ಮುಂದಿನ ದಿನಗಳಲ್ಲಿ ಚೈತನ್ಯ ತುಂಬಬಲ್ಲದು. ಜೊತೆಗೆ ಐರೋಪ್ಯ ರಾಷ್ಟ್ರಗಳನ್ನು ರಷ್ಯಾದಿಂದ ದೂರ ನಿಲ್ಲಿಸಿ, ತನ್ನ ಕಕ್ಷೆಯಲ್ಲೇ ಇರಿಸಿಕೊಳ್ಳಲು ರಾಜಕೀಯವಾಗಿಯೂ ಈ ಯುದ್ಧ ಅಮೆರಿಕಕ್ಕೆ ನೆರವಾಗಬಲ್ಲದು.
ಅದೇನೇ ಇರಲಿ, ತನ್ನ ಬತ್ತಳಿಕೆಯಲ್ಲಿದ್ದ ಅಣ್ವಸ್ತ್ರವನ್ನು ರಷ್ಯಾಕ್ಕೆ ಹಸ್ತಾಂತರಿಸಿ ರಷ್ಯಾದ ಮುಲಾಜಿಗೆ ಬಿದ್ದ ಉಕ್ರೇನ್, ಇದೀಗ ಅಮೆರಿಕ ಮತ್ತು ರಷ್ಯಾ ನಡುವಿನ ರಾಜಕೀಯ ದಾಳವಾಗಿ ಸಂಕಷ್ಟ ಅನುಭವಿಸುತ್ತಿದೆ. ರಷ್ಯಾ- ಉಕ್ರೇನ್ ಯುದ್ಧದ ಅಧ್ಯಾಯ ಮುಗಿದ ಮೇಲೆ ತೈವಾನ್‌ನತ್ತ ಚೀನಾ ದೃಷ್ಟಿ ನೆಡಬಹುದು ಎಂಬ ಆತಂಕ ಸಾಂದ್ರಗೊಳ್ಳುತ್ತಿದೆ.
ಅಮೆರಿಕ ಮತ್ತು ರಷ್ಯಾದಂತೆ ಪ್ರಬಲ ಸೇನಾ ಶಕ್ತಿಯಾಗಿ ಹೊರಹೊಮ್ಮಿರುವ ಚೀನಾದ ಬಗಲಲ್ಲಿರುವ ನಾವು, ಒಂದೊಮ್ಮೆ ಆದರ್ಶಕ್ಕೆ ಕಟ್ಟುಬಿದ್ದು ಅಥವಾ ದಿಗ್ಬಂಧನಕ್ಕೆ ಹೆದರಿ ಅಣ್ವಸ್ತ್ರ ಹೊಂದುವ ಪ್ರಯತ್ನ ಮಾಡದಿದ್ದರೆ ಏನೆಲ್ಲಾ ಸಂಕಷ್ಟ ಎದುರಿಸಬೇಕಿತ್ತು ಎಂದು ನೆನೆದರೆ ದಿಗಿಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.