1. ನನಗೆ 30 ವರ್ಷ. ಈಗ 7 ತಿಂಗಳ ಗರ್ಭಿಣಿ. ನನಗೆ ಆಗಾಗ್ಗೆ ಬೆನ್ನು ನೋವು ಬರುತ್ತಿದೆ. ನೋವಿನ ಮಾತ್ರೆ ಬೇಡವೆಂದು ಕ್ಯಾಲ್ಸಿಯಂ ಮಾತ್ರೆ ಮತ್ತು ಕಬ್ಬಿಣಾಂಶದ ಮಾತ್ರೆ ವೈದ್ಯರು ಕೊಟ್ಟಿದ್ದಾರೆ. ಒಮೊಮ್ಮೆ ತುಂಬಾ ನೋವು ಬರುತ್ತದೆ. ಏನು ಮಾಡುವುದು?
–ಹರಿಣಿ, ರಾಯಚೂರು
ಹರಿಣಿಯವರೇ ಗರ್ಭಿಣಿಯರಲ್ಲಿ ಬೆನ್ನು ನೋವು ಸಹಜ. ಇದಕ್ಕೆ ಕಾರಣ ಇಡೀ ಗರ್ಭಧಾರಣೆ ಅವಧಿಯಲ್ಲಿ ಗರ್ಭಿಣಿಯರ ತೂಕ ಸರಾಸರಿ 10 ಕೆ.ಜಿಯಿಂದ 12 ಕೆ.ಜಿಯಷ್ಟು ಹೆಚ್ಚಾಗುತ್ತದೆ. ಭ್ರೂಣ ಬೆಳೆದಂತೆ ಹೆಚ್ಚಿನ ಭಾರವನ್ನು ನಿಭಾಯಿಸಲು ಗರ್ಭಿಣಿಯರಲ್ಲಿ ಗುರುತ್ವಾಕರ್ಷಣ ಕೇಂದ್ರ ಬದಲಾಗಿ ಬೆನ್ನು ಮೂಳೆ ಹೆಚ್ಚು ಬಾಗುತ್ತದೆ. ಬೆಳೆಯುತ್ತಿರುವ ಗರ್ಭಕೋಶ ಕಿಬ್ಬೊಟ್ಟೆಯ ಸ್ನಾಯು, ರಕ್ತನಾಳ ಹಾಗೂ ನರಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ(ಲಂಬಾರ್‌ಲಾರ್ಡೊಸಿಸ್). ಅಷ್ಟೇಅಲ್ಲದೇ ಗರ್ಭಧಾರಣೆಯಲ್ಲಿ ಹೆಚ್ಚಾಗಿ ಸ್ರವಿಸಲ್ಪಡುವ ರಿಲ್ಯಾಕ್ಸಿನ್ ಎನ್ನುವ ಹಾರ್ಮೋನಿನಿಂದ ಬೆನ್ನುಮೂಳೆ ಹಾಗೂ ಕಿಬ್ಬೊಟ್ಟೆ ಸಂದಿಯ ಲಿಗಮೆಂಟ್ಸ್(ಸ್ನಾಯುರಜ್ಜುಗಳು) ಮೆತ್ತಗಾಗಿ, ಹೆರಿಗೆಗೆ ಅನುಕೂಲವಾಗಲೆಂದು ಸಡಿಲವಾಗುವುದರಿಂದ ಬೆನ್ನುನೋವು ಬರಬಹುದು. ಉಬ್ಬುತ್ತಿರುವ ಹೊಟ್ಟೆಯ ಮಾಂಸಖಂಡಗಳ ಬೇರ್ಪಡುವಿಕೆಯಿಂದಾಗಿ ಬೆನ್ನುನೋವು ಉಂಟಾಗಬಹುದು. ಹುಟ್ಟುವ ಮಗುವಿನ ಬಗ್ಗೆ ಆತಂಕ, ಮಾನಸಿಕ ಒತ್ತಡದಿಂದಲೂ ಬೆನ್ನುನೋವು ಉಂಟಾಗಬಹುದು.
ಗರ್ಭಿಣಿಯರು ಬೆನ್ನುನೋವಿಗೆ ನೋವುನಿವಾರಕ ಮಾತ್ರೆಗಳನ್ನ ಉಪಯೋಗಿಸುವುದು ಸೂಕ್ತವಲ್ಲ. ಬದಲಾಗಿ ಗರ್ಭಧಾರಣೆ ಸಮಯದಲ್ಲಿ ನಿಲ್ಲುವಾಗ, ಕೂರುವಾಗ, ನಡೆಯುವಾಗ ಸರಿಯಾದ ಭಂಗಿಯನ್ನು ಅನುಸರಿಸು ವುದು ಮುಖ್ಯ. ನಿಲ್ಲುವಾಗ ಎದೆಯಭಾಗ ಎತ್ತರಿಸಿ ಬೆನ್ನುಹುರಿಯನ್ನು ನೇರವಾಗಿಡಲು ಪ್ರಯತ್ನಿಸಿ. ಭುಜ ಸಡಿಲವಾಗಿರಲಿ, ಗಲ್ಲ ನೆಲಕ್ಕೆ ಸಮಾನಾಂತರವಾಗಿರಲಿ ಮತ್ತು ಎರಡು ಕಾಲುಗಳ ಮೇಲೆ ಸಮಭಾರ ಹಾಕಿ ನಿಲ್ಲಬೇಕು. ದೀರ್ಘಾವಧಿಯಲ್ಲಿ ನಿಲ್ಲಬೇಕಾದಾಗ ಒಂದೊಂದು ಕಾಲನ್ನು ಸಣ್ಣ ಸ್ಟೂಲಿನ ಮೇಲಿಟ್ಟು ಆಗಾಗ ಬದಲಾಯಿಸುತ್ತಿರಿ.
ಹೆಚ್ಚು ಭಾರದ ವಸ್ತುಗಳನ್ನ ಎತ್ತಬೇಡಿ, ನೆಲದಿಂದ ವಸ್ತುಗಳನ್ನ ಮೇಲಕ್ಕೆತ್ತುವಾಗ ಮಂಡಿಗಳನ್ನು ಮಡಚಿ (ಸೊಂಟವನ್ನಲ್ಲ) ಕುಳಿತುಕೊಳ್ಳುವಾಗ ಕುರ್ಚಿಯ ಹಿಂಭಾಗಕ್ಕೆ ಬೆನ್ನನ್ನು ಒತ್ತಿ ಕುಳಿತುಕೊಳ್ಳಿ ಅಥವಾ ಕೆಳಬೆನ್ನಿನ ಭಾಗಕ್ಕೆ ಸಣ್ಣ ದಿಂಬನ್ನ ಇಟ್ಟುಕೊಳ್ಳಿ.
ಹೈಹಿಲ್ಡ್ ಚಪ್ಪಲಿಗಳನ್ನ ಬಳಸಬೇಡಿ. ಬದಲಿಗೆ ಸಮತಟ್ಟಾದ ಆಧಾರ ಇರುವ ಚಪ್ಪಲಿ ಧರಿಸಿರಿ. ಮಲಗುವಾಗ ಹಾಗೂ ಏಳುವಾಗ ನಿಧಾನವಾಗಿ ಕೈಗಳಸಹಾಯದಿಂದ ಏಳಿ. ಮಲಗುವಾಗ ಮಂಡಿಗಳ ಕೆಳಗೆ ಸಣ್ಣದಿಂಬನ್ನು ಇಟ್ಟುಕೊಳ್ಳಬಹುದು. ಸಾಕಷ್ಟು ವಿಶ್ರಾಂತಿ/ರಾತ್ರಿನಿದ್ರೆ ಅಗತ್ಯ (6–8ತಾಸು).
ಆಗಾಗ್ಗೆ ಮೈಕೈಗಳನ್ನು ಚಾಚುವ ವ್ಯಾಯಾಮ ಮಾಡಿ. ದಿನಾಲೂ ಬೆಳಿಗ್ಗೆ ಸಂಜೆ ಅರ್ಧಗಂಟೆಯಾದರೂ ವಾಕಿಂಗ್ ಮಾಡಿ. ಯೋಗ ತಜ್ಞರ/ವೈದ್ಯರ ಸಲಹೆಯ ಮೇರೆಗೆ ಸೂಕ್ತ ಯೋಗಾಸನಗಳನ್ನು ಮಾಡಬಹುದು. ನೋವಿರುವ ಜಾಗಕ್ಕೆ ಮಂಜುಗಡ್ಡೆ (ಐಸ್ ಕ್ಯೂಬ್ಸ್)ಗಳನ್ನು ಇಡಬಹುದು. ನಂತರ ಬಿಸಿಶಾಖವನ್ನು ಕೊಡಬಹುದು. ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡರೂ ಬೆನ್ನು ನೋವು ಬಂದಲ್ಲಿ ವೈದ್ಯರ ಸಲಹೆ ಮೇರೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಿ.
ನೆನಪಿರಲಿ ಬೆನ್ನುನೋವು ಜೊತೆಗೆ ಹೊಟ್ಟೆನೋವು ಅಥವಾ ಜ್ವರವಿದ್ದಲ್ಲಿ, ಉರಿಮೂತ್ರವಿದ್ದಲ್ಲಿ, ಯೋನಿ ಯಿಂದ ಯಾವುದೇ ತರಹ ಸ್ರಾವವಿದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಬೇಕು.
***
2. ಅತಿಯಾದ ಮುಟ್ಟಿನಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆಯೇ?
–ಹೆಸರು, ಊರು ತಿಳಿಸಿಲ್ಲ
ನೀವು ನಿಮ್ಮ ವಯಸ್ಸನ್ನು ತಿಳಿಸಿಲ್ಲ. ವಿವಾಹವಾಗಿದೆಯೇ ಎಂಬುದನ್ನೂ ತಿಳಿಸಿಲ್ಲ. ಇರಲಿ, ನೀವು ಕೇಳಿರುವ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವೆ.
ಸಂತಾನೋತ್ಪತ್ತಿ ವಯಸ್ಸಿನಲ್ಲಿ ಅತಿಯಾದ ಋತುಸ್ರಾವಕ್ಕೆ ಹಲವು ಕಾರಣಗಳಿವೆ. ಗರ್ಭಕೋಶದ ನಾರುಗಡ್ಡೆಗಳು (ಫೈಬ್ರಾಯ್ಡ್) ಅದರಲ್ಲೂ ಒಳಾವರಣದಲ್ಲಿದ್ದರೆ ಮಕ್ಕಳಾಗುವುದಕ್ಕೆ ತೊಂದರೆಯಾಗಬಹುದು. ಫೈಬ್ರಾಯ್ಡ ಪಾಲಿಪ್ ಇದ್ದರೂ ಮಕ್ಕಳಾಗಲು ತೊಂದರೆಯಾಗಬಹುದು. ಇನ್ನು ಪಿ.ಸಿ.ಓ.ಡಿ ಸಮಸ್ಯೆ, ಎಂಡೋಮೆಟ್ರಿಯೋಸಿಸ್, ಗರ್ಭಕೋಶದ ಸೋಂಕು, ಥೈರಾಯ್ಡಗ್ರಂಥಿ ಸ್ರಾವದ ಏರುಪೇರು, ರಕ್ತಹೆಪ್ಪುಗಟ್ಟು ವಿಕೆಯಲ್ಲಿನ ದೋಷಗಳು ಹೀಗೆ ಹಲವು ಕಾರಣಗಳಿಂದ ಅಧಿಕ ರಕ್ತಸ್ರಾವವಾಗಬಹುದು. ಇವೆಲ್ಲವೂ ಮಕ್ಕಳಾಗುವ ಪ್ರಕ್ರಿಯೆಗೂ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ತಜ್ಞವೈದ್ಯರನ್ನ ಸಂಪರ್ಕಿಸಿ ಸೂಕ್ತ ಪರಿಕ್ಷೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.