ADVERTISEMENT

ಸ್ಪಂದನ| ಕಡಿಮೆ ತೂಕ ಅಂಡಾಣು ಉತ್ಪತ್ತಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 19:30 IST
Last Updated 12 ಆಗಸ್ಟ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಯಸ್ಸು 35, ತೂಕ 38 ಕೆ.ಜಿ. ಎಲ್ಲರೂ ಸಣಕಲಿ ಎಂದು ಆಡಿಕೊಳ್ಳುತ್ತಾರೆ. ಮದುವೆಯಾಗಿದೆ. ಮಕ್ಕಳಾಗಿಲ್ಲ.ಮಕ್ಕಳಾಗುವುದಕ್ಕೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಮಕ್ಕಳು ಆಗದೇ ಇರುವುದಕ್ಕೆ ತೂಕ ಕಾರಣವಿರಬಹುದಾ? ಮಕ್ಕಳಾಗಲುಇಂತಿಷ್ಟೆ ತೂಕವಿರಬೇಕಾ? ಎಷ್ಟೇ ತಿಂದರೂ ದಪ್ಪಗಾಗುತ್ತಿಲ್ಲ. ಇದು ಅನಾರೋಗ್ಯದ ಸಂಕೇತವೇ?

ಸಂಗೀತಾ, ಊರು ತಿಳಿಸಿಲ್ಲ

Caption

ಸಂಗೀತಾ ಅವರೇ, ಮಕ್ಕಳಾಗಲೂ ಇಷ್ಟೇ ತೂಕವಿರಬೇಕೆಂಬ ನಿಯಮವಿಲ್ಲ. ನಿಮ್ಮ ಎತ್ತರ ಎಷ್ಟೆಂದು ತಿಳಿಸಿಲ್ಲ. ಒಬ್ಬ ವ್ಯಕ್ತಿಯ ಎತ್ತರಕ್ಕೆ ತಕ್ಕ ಹಾಗೇ ತೂಕ ಇದೆಯೇ ಎಂದು ನೋಡಲು ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) ಸೂಚಿಯನ್ನು ಬಳಸಲಾಗುತ್ತದೆ. ದೇಹದ ತೂಕವನ್ನು ಕೆ.ಜಿಯಲ್ಲಿ ಅಳೆದು, ಎತ್ತರವನ್ನು ಮೀಟರ್‌ನಲ್ಲಿ ಅಳೆದು, ತೂಕವನ್ನು ಎತ್ತರದ ಸ್ಕ್ವಯರ್‌ ಮೀಟರ್‌ನಿಂದ ಭಾಗಿಸಿದರೆ ಬಿಎಂಐ ಕಂಡುಹಿಡಿಯಬಹುದು. ಆರೋಗ್ಯವಂತ ಶರೀರದ ಬಿಎಂಐ 20 ರಿಂದ 25ರವರೆಗೆ ಇರಬಹುದು. ಇಂಥವರಲ್ಲಿ ಸಂತಾನೋತ್ಪತ್ತಿ ಕ್ರಿಯೆ ಸೇರಿದಂತೆ ದೇಹದ ಎಲ್ಲ ಪ್ರಮುಖ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ.

ADVERTISEMENT

ಬಿಎಂಐ 18.5 ಕ್ಕಿಂತ ಕಡಿಮೆ ಇದ್ದರೆ ಕೃಶದೇಹ ಎನಿಸಿಕೊಳ್ಳುತ್ತದೆ. ಈ ತೂಕವಿದ್ದವರಿಗೆ ದೇಹದಲ್ಲಿ ಪ್ರಮುಖ ಕ್ರಿಯೆಗಳಾದ ಉಸಿರಾಟ, ಜೀರ್ಣಕ್ರಿಯೆಗೆ ಹೆಚ್ಚಿನ ಶಕ್ತಿ ವ್ಯಯವಾಗಿ ಸಂತಾನೋತ್ಪತ್ತಿ ಕ್ರಿಯೆಗೆ ಕೊನೆಯ ಪ್ರಾಮುಖ್ಯ ಸಿಗುತ್ತದೆ. (ಉದಾಹರಣೆ: ನೀರಿನ ಕೊರತೆಯಿದ್ದಾಗ ಕುಡಿಯಲು ಮೊದಲು ಆದ್ಯತೆ ಕೊಟ್ಟು, ಸ್ನಾನಕ್ಕೆ ಕೊನೆಯ ಆದ್ಯತೆಯನ್ನಾಗಿ ಪರಿಗಣಿಸುತ್ತೇವೆಲ್ಲ ಹಾಗೆ). ಕಡಿಮೆ ತೂಕವಿದ್ದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಅಂಡಾಣು ಉತ್ಪತ್ತಿಯಾಗುವುದಕ್ಕೆ ಅಡ್ಡಿಯಾಗಬಹುದು. ಹಾಗಾಗಿ ಗರ್ಭಧಾರಣೆಗೆ ಹೆಚ್ಚಿನ ಸಮಯ ಬೇಕಾಗಬಹುದು.

ಮೊದಲಿಗೆ ಈ ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ಶರ್ಕರಪಿಷ್ಠ ಜತೆಗೆ ಅಕ್ಕಿ, ಗೋಧಿ, ರಾಗಿ, ಜೋಳ , ಪ್ರೋಟಿನ್‌ಯುಕ್ತ ಬೇಳೆಕಾಳು, ಕೊಬ್ಬು ಇರುವ ಬಾದಾಮಿ, ಶೇಂಗಾ, ಎಳ್ಳು ಸೇವಿಸಿ. ಖನಿಜ, ವಿಟಮಿನ್‌ ಹೇರಳವಾಗಿರುವ ಹಸಿರುಸೊಪ್ಪು, ತರಕಾರಿ ಹೆಚ್ಚು ಸೇವಿಸಿ. ಸಂತುಲಿತ ಆಹಾರದಿಂದ ದೇಹಾರೋಗ್ಯ ಉತ್ತಮಗೊಂಡು ಮಗು ಪಡೆಯಲು ಸಹಾಯವಾಗುತ್ತದೆ.

–––

2. ವಯಸ್ಸು 21. ಪತಿಗೆ 28 ವರ್ಷ. ಮದುವೆಯಾಗಿ ಎರಡು ವರ್ಷಗಳಾಗಿವೆ. ಮಕ್ಕಳಾಗಿಲ್ಲ. ಒಂದು ಬಾರಿ ಗರ್ಭಪಾತವಾಗಿತ್ತು. ನಿಶ್ಯಕ್ತಿಯ ಕಾರಣದಿಂದ ಗರ್ಭಪಾತವಾಗಿದೆ ಎಂದು ವೈದ್ಯರು ಹೇಳಿದ್ದರು. ಇದಾಗಿ ಒಂದೂವರೆ ವರ್ಷವಾದರೂ ಮಕ್ಕಳಾಗಿಲ್ಲ. ಪತಿಗೂ ಯಾವುದೇ ಸಮಸ್ಯೆ ಇಲ್ಲ. ಈಗ ಮಕ್ಕಳಾಗಿಲ್ಲವೆಂದರೆ ಇನ್ನು ಮಕ್ಕಳು ಆಗುವುದೇ ಇಲ್ಲ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ. ದಯಾಮಾಡಿ ಪರಿಹಾರ ಹೇಳಿ.

ಹೆಸರು, ಊರು ತಿಳಿಸಿಲ್ಲ

ನಿಮಗಿನ್ನು 21 ವರ್ಷವಷ್ಟೆ. ನಿಮಗೆ ರಕ್ತಹೀನತೆ ಅಥವಾ ಅಪೌಷ್ಟಿಕತೆ ಇರಬಹುದು. ವೈದ್ಯರ ಸಲಹೆಯ ಮೇರೆಗೆ ಹೆಚ್ಚು ಹಸಿರು ಸೊಪ್ಪು, ತರಕಾರಿ, ಮೊಳಕೆಕಾಳು ಸೇವಿಸಬೇಕು. ಪ್ರತಿ ತಿಂಗಳು ಅಂಡಾಣು ಬಿಡುಗಡೆಯಾಗಲು ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳನ್ನು ಸೇವಿಸಿ. ತಿಂಗಳಿಗೊಮ್ಮೆ ಸರಿಯಾಗಿ ಮುಟ್ಟಾಗುತ್ತೀರಾ ಎಂದಾದರೆ ಮುಟ್ಟಾದ ದಿನದಿಂದ 8 ರಿಂದ 18 ದಿನದೊಳಗೆ (ಋತುಫಲಪ್ರದ ದಿನಗಳು) ಪತಿಯೊಡನೆ ನಿಯಮಿತವಾಗಿ ಲೈಂಗಿಕ ಸಂಪರ್ಕ ಮಾಡಿ. ಖಂಡಿತವಾಗಿಯೂ 6 ತಿಂಗಳ ಒಳಗೆ ಗರ್ಭಧಾರಣೆಯಾಗುತ್ತದೆ. ಆಗದೇ ಇದ್ದಲ್ಲಿ ಮತ್ತೊಮ್ಮೆ ತಜ್ಞವೈದ್ಯರ ಸಲಹೆ ಪಡೆಯಿರಿ.

––––

3. 45 ವರ್ಷ. ಅಂಡಾಶಯದಲ್ಲಿ 5.7 ನೀರಿನ ಗುಳ್ಳೆ ಇದೆ. ಅದು ಎಷ್ಟು ಗಾತ್ರದವರೆಗೆ ಇರಬಹುದು. ಯಾವಾಗ ಸರ್ಜರಿ ಮಾಡಿಸಬೇಕು. ಮುಟ್ಟಿನ ವೇಳೆ ತುಂಬಾ ಹೊಟ್ಟೆ ನೋವು ಇರುತ್ತದೆ. ಗರ್ಭಕೋಶ ದಪ್ಪ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ತಪ್ಪಿಸಲು ಏನು ಮಾಡಬೇಕು ?

ಹೆಸರು, ಊರು ತಿಳಿಸಿಲ್ಲ

ಗರ್ಭಕೋಶ ದಪ್ಪಗಿದ್ದರೆ ಏನೂ ತೊಂದರೆ ಇಲ್ಲ. ಅಂಡಾಶಯದಲ್ಲಿ 5.7 ಸೆಂ.ಮೀ ನೀರು ಗುಳ್ಳೆ ಇರುವುದು ಅಪಾಯಕಾರಿ ಅಲ್ಲ. ಈ ಗುಳ್ಳೆ 8 ಸೆಂ.ಮೀಗಿಂತ ದೊಡ್ಡದಿದ್ದರೆ , ಗುಳ್ಳೆ ಏನಾದರೂ ತಿರುಚಿಕೊಂಡು ತೀವ್ರತರದ ಹೊಟ್ಟೆ ನೋವು ಉಂಟು ಮಾಡಿದರೆ ಆಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಹೇಳುತ್ತಾರೆ. ಅಲ್ಲಿಯವರೆಗೆ ಶಸ್ತ್ರಚಿಕಿತ್ಸೆ ಬೇಡ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಬರುತ್ತಿದ್ದರೆ, ಅದು ಗರ್ಭ ಕೋಶದಲ್ಲಿ ಏನಾದರೂ ಸೋಂಕು ಉಂಟಾಗಿದ್ದರೂ ಹೀಗೆ ನೋವು ಬರಬಹುದು. ತಜ್ಞ ವೈದ್ಯರನ್ನು ಸಂಪರ್ಕಿಸಿದರೆ, ಆ್ಯಂಟಿ ಬಯಾಟಿಕ್‌ಗಳನ್ನು ಕೊಡುತ್ತಾರೆ. ಎಂಡೋಮೆಟ್ರಿಯೋಸಿಸ್‌ ಮತ್ತು ಅಡಿನೋಮಯೋಸಿಸ್‌ ಕಾರಣಗಳಿಂದಲೂ ಮುಟ್ಟಾಗುವ ಸಂದರ್ಭದಲ್ಲಿ ಹೊಟ್ಟೆ ನೋವು ಬರಬಹುದು. ಸ್ಕ್ಯಾನಿಂಗ್‌ನಿಂದ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.