ADVERTISEMENT

ಯೋಗಿ ಆಡಳಿತವೂ ಬೀಡಾಡಿ ದನಗಳೂ

ಉತ್ತರಪ್ರದೇಶದಲ್ಲಿ ಫಸಲು ಕಸಿಯುವ ಬೀಡಾಡಿ ದನಗಳು ರೈತರಿಗೆ ದುಃಸ್ವಪ್ನವಾಗಿವೆ

ರೇಣುಕಾ ನಿಡಗುಂದಿ
Published 31 ಜನವರಿ 2019, 20:27 IST
Last Updated 31 ಜನವರಿ 2019, 20:27 IST
ಯೋಗಿ ಆಡಳಿತವೂ ಬೀಡಾಡಿ ದನಗಳೂ
ಯೋಗಿ ಆಡಳಿತವೂ ಬೀಡಾಡಿ ದನಗಳೂ   

ಡಿಸೆಂಬರ್ ಕೊನೆಯಲ್ಲಿ ಉತ್ತರಪ್ರದೇಶದ ಆಗ್ರಾ, ಅಲಿಗಡದ ಹಥರಸ್, ಗೊಂಡಾ, ವಾರಾಣಸಿ, ಇಟಾವಾ ಮುಂತಾದ ನಗರಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೀಡಾಡಿ ದನಗಳು ಹೊಲಗಳಿಗೆ ನುಗ್ಗಿ ರಾಬಿ ಬೆಳೆಗಳನ್ನು ನಾಶ ಮಾಡಿ ರೈತರ ಕನಸುಗಳನ್ನೆಲ್ಲ ನುಚ್ಚುನೂರು ಮಾಡಿದ್ದವು.

ಉಪಾಯ ಕಾಣದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸುಮಾರು 500 ದನಗಳನ್ನು ಹಿಡಿದು ಊರಿನ ಸರ್ಕಾರಿ ಶಾಲೆ, ಪೊಲೀಸ್ ಸ್ಟೇಷನ್ನಿನ ಅಂಗಳದಲ್ಲಿ ಕಟ್ಟಿಹಾಕಿದ ಸುದ್ದಿ ಒಂದೆರಡು ದಿನಗಳ ಕಾಲ ಸುದ್ದಿವಾಹಿನಿಗಳಲ್ಲಿ ಹರಿದಾಡಿ, ಮೀಸಲಾತಿಯ ಅಬ್ಬರದಲ್ಲಿ ಅಡಗಿಯೂ ಹೋಯಿತು.

ಅನ್ನದಾತನ ಬೆಳೆ ಹಾಳಾಗಿದ್ದರ ಬಗ್ಗೆ ಒಂದಿನಿತೂ ವಿಷಾದ ವ್ಯಕ್ತಪಡಿಸದ ಯೋಗಿ ಆದಿತ್ಯನಾಥ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಬೀದಿ ದನಗಳ ಬಗ್ಗೆ ಕಾಳಜಿ ವಹಿಸುವಂತೆ ಮತ್ತು ದನಗಳನ್ನು ಬೀದಿಪಾಲು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಪ್ರತಿ ಹಳ್ಳಿಯಲ್ಲಿ ಗೋಶಾಲೆಗಳನ್ನು ನಿರ್ಮಿಸಲಿಕ್ಕಾಗಿ ಮತ್ತು ಗೋರಕ್ಷಣೆಗಾಗಿ ಶೇ 0.5ರಷ್ಟು ‘ಗೋಕಲ್ಯಾಣ್’ ತೆರಿಗೆಯನ್ನು ವಿಧಿಸಿದೆ ಉತ್ತರಪ್ರದೇಶ ಸರ್ಕಾರ.

ADVERTISEMENT

ಇಲ್ಲೀಗ ಶಿಶಿರದ ಮಂಜಿನ ಹೊದಿಕೆಯಲ್ಲಿ ಬಸಿರುಗಟ್ಟಿದ ಗೋಧಿಗೆ ಪೂರ್ಣ ಗರ್ಭಾವಸ್ಥೆ. ಜೊತೆಗೆ ಆಲೂಗಡ್ಡೆ, ಕಡಲೆ, ಬಟಾಣಿ, ಸಾಸಿವೆ ಫಸಲುಗಳೂ ಕೊಯ್ಲಿಗೆ ಬರುತ್ತಿವೆ. ಗೋಧಿ ಬೆಳೆಗಾಗಿಯೇ ಶರಧ್ರುತು ಭೂಮಿಗೆ ಬರುತ್ತದೆ, ಚಳಿ ಹೆಚ್ಚಿದಷ್ಟೂ ಬೆಳೆ ಸಮೃದ್ಧವೆಂದು ರೈತ ಹಿಗ್ಗುತ್ತಾನೆ. ಗೋಧಿಗೆ ಇಬ್ಬನಿ ಬೇಕು. ದನಗಳ ಉಪದ್ರವದಿಂದಾಗಿ ರೈತರು ಊಟ, ನಿದ್ದೆ, ನೀರಡಿಕೆಗಳನ್ನು ಮರೆತು ಕಡು ಚಳಿಯನ್ನೂ ಲೆಕ್ಕಿಸದೆ ತಮ್ಮ ತಮ್ಮ ಹೊಲಗಳ ಪಹರೆಗೆ ನಿಂತರು. ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದರೆ ಏನು ಗತಿ!

ಮುಳ್ಳಿರುವ ಬೇಲಿ ಹಾಕಿದರೆ ದನಗಳು ಗಾಯಗೊಳ್ಳುತ್ತವೆಂದು ಬಿದಿರಿನ ಬೇಲಿ ಹಾಕಿದ್ದರು. ಅದನ್ನು ಮುರಿದು ದನಗಳು ಹೊಲಗಳಿಗೆ ನುಗ್ಗಿದವು. ಬೇಲಿಯಾಗಿದ್ದ ಹಳೇ ಸೀರೆಗಳು ಗಾಳಿಪಟವಾದವು. ಇಡೀ ಹೊಲಕ್ಕೆ ತಂತಿ ಬೇಲಿ ಹಾಕುವ ಶಕ್ತಿಯೆಲ್ಲಿದೆ? ಇನ್ನು ರಾತ್ರಿಯಿಡೀ ಪಹರೆ ನಡೆಸುವ ರೈತರ ಕಷ್ಟಗಳು ನೂರಾರು. ರಾತ್ರಿಗಳ್ಳರು, ಪುಂಡರು, ಕ್ರೂರಮೃಗಗಳ ಭಯ. ಯಾಕಾದರೂ ಈ ಬೇಸಾಯ ಮಾಡುತ್ತಿದ್ದೇವೆಯೋ ಅಂತ ರೈತರು ಹಳಿದುಕೊಳ್ಳುತ್ತಿದ್ದಾರೆ.

ಯೋಗಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುತ್ತಲೂ, ಐದು ಎಕರೆಯೊಳಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರ ₹ 1 ಲಕ್ಷದವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಿತು. ಸುಮಾರು 86 ಲಕ್ಷ ರೈತರು ಸಾಲಮನ್ನಾದ ಲಾಭ ಪಡೆದಿದ್ದರು. ಈಗ ಬೆಳೆಹಾನಿಯಿಂದಾದ ನಷ್ಟವನ್ನು ಭರಿಸಲಾಗದ ಕಂಗಾಲುತನವಿದೆ. ಉತ್ತರಪ್ರದೇಶ ಸರ್ಕಾರ ಗೋಹತ್ಯೆ ನಿಷೇಧ ಮಾಡಿದಾಗಿನಿಂದ ಬೀದಿ ದನಗಳು ಹೆಚ್ಚಾಗಿದ್ದು, ಮಥುರಾದಲ್ಲಿ ಬೀದಿದನಗಳ ಸುತ್ತಾಟವನ್ನು ತಡೆಗಟ್ಟಲು ಸಂತಾನ ಶಕ್ತಿಹರಣ ಚಿಕಿತ್ಸೆ ನಡೆಸುವಂತೆ ಜನರು ಆಗ್ರಹಿಸುತ್ತಿದ್ದಾರಂತೆ. ಮುದಿಯಾದ ನಿರುಪಯುಕ್ತ ದನಗಳನ್ನು ಸಾಕಲಾರದೆ, ಮಾರಲೂ ಆಗದೆ ಅವು ಸಾರ್ವಜನಿಕರಿಗೆ ಉಪದ್ರವವಾಗಿವೆ.

ದಾದ್ರಿಯ ಇಖ್ಲಾಕ್‌ ಹತ್ಯೆ, ಅಲ್ವಾರ್‌ನಲ್ಲಿ ರಕ್ಬರ್ ಖಾನ್, 15 ವರ್ಷದ ಜುನೈದ್‍ ಖಾನ್‍ನನ್ನು ಹಾಡಹಗಲೇ ಗುಂಪೊಂದು ಹೊಡೆದು ಕೊಂದದ್ದು, ರಾಜಸ್ಥಾನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆಂದು ರೈತ ಪೆಹ್ಲೂಖಾನ್‌ರನ್ನು ಗೋರಕ್ಷಕರು ಥಳಿಸಿ ಕೊಂದಿದ್ದು, ಗುಜರಾತ್‌ನ ಊನಾ ಗ್ರಾಮದಲ್ಲಿ ಏಳು ಜನ ದಲಿತರನ್ನು ಕಟ್ಟಿಹಾಕಿ ಪೈಶಾಚಿಕ ಹಲ್ಲೆ ನಡೆಸಿದ್ದು, ಬೀಡಾಡಿ ಹಸುಗಳನ್ನು ತಂದು ಅವುಗಳಿಗೆ ಹಿಂದೂ ದೇವರ ಹೆಸರುಗಳನ್ನಿಟ್ಟು ಸಾಕುತ್ತಿದ್ದ ಮಧ್ಯಪ್ರದೇಶದ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮುಂದಿನ ಬಾರಿ ಆ್ಯಸಿಡ್ ಎರಚುವ ಬೆದರಿಕೆ ಒಡ್ಡಿದ ಮತಾಂಧರಿಗೆ ಲಗಾಮು ಹಾಕಲು ಅಶ್ವಮೇಧದ ಕುದುರೆಗೂ ಅಸಾಧ್ಯ ಎಂಬಂತಾಗಿದೆ.

ಆರ್‌ಎಸ್‌ಎಸ್‌ ಪ್ರಣೀತ ಹಿಂದುತ್ವವಾದಿ ಪ್ರಭುತ್ವ ‘ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಆ್ಯಕ್ಟ್’ಗೆ (ಪಿಸಿಎಎ) ತಿದ್ದುಪಡಿಯನ್ನು ತರುವುದರ ಮೂಲಕ ರಾಜಕೀಯ ಗೂಂಡಾಗಿರಿಯನ್ನು ಜೀವಂತವಾಗಿಟ್ಟಿದೆ. ಅಂಕಿ ಅಂಶದ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಗೋವು ಸಂಬಂಧಿತ ಹಿಂಸಾಚಾರ ಪ್ರಕರಣಗಳ ಸಂಖ್ಯೆ 70 ಆಗಿದೆ.

2017ರಲ್ಲಿ ಸುಪ್ರೀಂ ಕೋರ್ಟ್, ಗೋರಕ್ಷಣೆಯ ಹೆಸರಿನಲ್ಲಿ ಗುಂಪುದಾಳಿಗಳನ್ನು ನಿಲ್ಲಿಸಲು ಎಲ್ಲ ರಾಜ್ಯಗಳಿಗೆ ತಾಕೀತು ಮಾಡಿತ್ತು. ತಾವೇ ಕಾನೂನು ಎಂದು ವರ್ತಿಸುವ ಗೋಭಕ್ತರ ಮೇಲೆ ನಿಗಾ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವುದಾಗಿ ಹೇಳಿತ್ತು.

ಚುನಾವಣೆಯ ಸುಗ್ಗಿ ಸನಿಹವಾದರೆ ಅದು ಭಾರತೀಯ ಸಂಸ್ಕೃತಿ, ಗೋವು ಮತ್ತು ಗಂಗಾ ನದಿಯ ರಾಜಕಾರಣದ ಪಿತ್ಥ ನೆತ್ತಿಗೇರುವ ಕಾಲ. ಛತ್ತೀಸಗಡದ ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಹಸುವಿಗೆ ಉಪದ್ರವ ಕೊಡುವವರನ್ನು ನೇಣಿಗೇರಿಸುವುದಾಗಿ ಬೆದರಿಸಿದವರು, ಬೀಡಾಡಿ ದನಗಳ ಉಪದ್ರವದ ಬಗ್ಗೆ ಚಕಾರವೆತ್ತಿಲ್ಲ. ಪೆಹ್ಲೂ ಖಾನ್‌ರನ್ನು ಗೋರಕ್ಷಕ ಗೂಂಡಾಗಳು ಮಾರಣಾಂತಿಕವಾಗಿ ಬಡಿದು ಬಿಸಾಡಿದಾಗ ಆ ರಾಜ್ಯದ ಮಂತ್ರಿಯೊಬ್ಬರು, ಪೊಲೀಸರು ಪೆಹ್ಲೂ ಖಾನ್ ಹಂತಕರನ್ನು ಹಿಡಿಯುವ ಮೊದಲು ಜಾನುವಾರುಗಳ ಹತ್ಯೆ ಮಾಡುವವರನ್ನು ಹಿಡಿಯಬೇಕೆಂದು ನಿರ್ದೇಶನ ನೀಡಿದ್ದರು. ರಾಜ್ಯದಲ್ಲಿ 75 ಸಾವಿರ ಗೋರಕ್ಷಕರನ್ನು ನೇಮಿಸುತ್ತೇವೆ ಎಂದು ಹಿಂದೆ ಯೋಗಿ ಅವರು ಹೇಳಿದ್ದು ನೆನಪಿರಬಹುದು. ಹೊಲಗಳನ್ನು ಕಾಯಲು ಬರುತ್ತಾರೆಯೇ ಈ ಗೋರಕ್ಷಕರು?

ಪೈಪೋಟಿಯಲ್ಲಿ ಹಿಂದೆ ಬೀಳದ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವು ಬೀದಿ ದನಗಳನ್ನು ದತ್ತು ಸ್ವೀಕರಿಸುವ ಸಹೃದಯ ಗೋಪ್ರೇಮಿಗಳನ್ನು ಸ್ವಾತಂತ್ರ್ಯ ದಿನದಂದು ಮತ್ತು ಗಣರಾಜ್ಯೋತ್ಸವ ದಿನದಂದು ಗೌರವಿಸುವುದಾಗಿ ಘೋಷಿಸಿದೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹರಿಯಾಣದಲ್ಲಿ ಪ್ರಚಾರ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಸುವಿಗೆ ಆಶ್ರಯ ಕಲ್ಪಿಸಲು ಒಂದು ತಿಂಗಳ ಸಂಬಳ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಮತ್ತು ತಮ್ಮ ಸ್ನೇಹಿತರಿಗೂ ತಿಂಗಳ ವೇತನವನ್ನು ಗೋವಾಸಕ್ಕಾಗಿ ನೀಡುವಂತೆ ಕೋರಿದ್ದಾರೆ.

ಗೋ ಭಯೋತ್ಪಾದನೆಗೆ ಬೆದರಿದ ಜನರು ಹಸುವನ್ನು ಬಯಲಿಗಟ್ಟಿ ಎಮ್ಮೆ ಸಾಕಾಣಿಕೆಯನ್ನು ಮುಂದುವರಿಸಿದ್ದಾರೆ. ದನಗಳನ್ನು ಸೆರೆಹಿಡಿದು ಕಟ್ಟಿದ ತಪ್ಪಿಗೆ, ಹೊಲ ಕಾಯುತ್ತಿದ್ದ ಹದಿನಾಲ್ಕು ರೈತರು ಜೈಲಿನ ಕಂಬಿ ಎಣಿಸಿ ದಂಡ ತೆತ್ತು ಹೊರಬರಬೇಕಾಯಿತು. ಮೊನ್ನೆಯಷ್ಟೇ ಬೀದಿ ಗೂಳಿಯ ದಾಳಿಯಿಂದ ನಾಲ್ವರು ರೈತರು ಸಾವನ್ನಪ್ಪಿದ್ದಾರೆ.

ವಾಹನ ಸಂಚಾರ ದಟ್ಟವಾಗಿರುವ ಉತ್ತರಪ್ರದೇಶದ ಬೀದಿಗಳಲ್ಲಿ ಕನಿಷ್ಠ ನಾಲ್ಕಾರು ದನ-ಗೂಳಿಗಳಾದರೂ ಕ್ಯಾರೇ ಎನ್ನದೆ ನಿಂತಿರುತ್ತವೆ. ಇವೆಲ್ಲ ಸಂಕಟಗಳ ಒಜ್ಜೆಯಲ್ಲಿ ಜಜ್ಜಿಹೋದ ರೈತ ಫಾಲ್ಗುಣ-ಚೈತ್ರದ ಹದದಲ್ಲಿ ಫಸಲಿನ ಕೊಯ್ಲಾಗಿ, ಕೈತುಂಬ ಕಾಸಾಗಿ, ಸಾಲಸೋಲದ ಭಾರ ಕಳೆದು, ಹೋಳಿ ಹಬ್ಬದ ಗುಲಾಲಿನ ಕನಸು ಕಾಣುತ್ತ ಕಡು ಚಳಿಯ ಕ್ಷುದ್ರತೆ ಮರೆತು ಹೊಲ ಕಾಯುತ್ತಿದ್ದಾನೆ. ತಬ್ಬಲಿ ದನಗಳು ಕಸದ ತೊಟ್ಟಿಯಲ್ಲಿ ಮೇವು ಹುಡುಕುತ್ತಿವೆ…!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.