ಬುಲಂದ್‌ಶಹರ್‌ನಲ್ಲಿ ಗೋಹತ್ಯೆ ನಡೆದಿದೆ ಎನ್ನುವ ವದಂತಿಯಿಂದ ಭುಗಿಲೆದ್ದ ಹಿಂಸಾಚಾರದಲ್ಲಿ ಸ್ಥಳೀಯ ಠಾಣಾಧಿಕಾರಿ ಸುಬೋಧಕುಮಾರ್ ಸಿಂಗ್ ಹಾಗೂ ಸುಮಿತ್ ಎಂಬ ಯುವಕ ಬಲಿಯಾದರು. ದಾದ್ರಿ ಕಡೆಯಿಂದ ನಾನು ದೆಹಲಿಯಲ್ಲಿ ಕೆಲಸ ಮಾಡುವ ಕಂಪನಿಗೆ ಬರುವ ಸಿಬ್ಬಂದಿ ಒಂದಿಲ್ಲೊಂದು ಸುದ್ದಿ ತರುತ್ತಾರೆ. ‘ಇಡೀ ಬಸ್ಸಿನಲ್ಲಿ ಹಿಂದೂಗಳು ಇದ್ದದ್ದು ನಾವಿಬ್ಬರೇ, ಉಳಿದವರೆಲ್ಲ ಮುಸ್ಲಿಮರು’ ಅಂತ ಒಬ್ಬಾಕೆ ಹೇಳಿದರೆ, ಇನ್ನೊಬ್ಬ ‘ಟ್ರಕ್ಕು ತುಂಬಾ ದನದ ಮೂಳೆಗಳಿದ್ದವಂತೆ’ ಎನ್ನುತ್ತಾನೆ. ಮತ್ತೊಬ್ಬ ‘ಲಕ್ಷಾಂತರ ಮುಸ್ಲಿಮರು ರಹಸ್ಯದ ಸಭೆ ನಡೆಸಿದ್ದರು, ಮೋದಿ ವಿರೋಧಿ ಭಾಷಣ- ಏನೇನೊ ನಡಾವಳಿಗಳಾದವಂತೆ...’ ಇಂಥ ಅಂತೆಕಂತೆಗಳ ಕಥೆಗಳೇ ಇಲ್ಲಿನವರ ಮಾತಿನ ವೈಖರಿಯಾಗಿದೆ.
ಮುಸ್ಲಿಂ ಬಾಹುಳ್ಯವಿರುವ ಉತ್ತರಪ್ರದೇಶದ ಹಳ್ಳಿಗಳಿಗೆ ನುಗ್ಗಿ, ಜನರಲ್ಲಿ ಅಸುರಕ್ಷತೆ, ಆತಂಕವನ್ನು ಸೃಷ್ಟಿಸಿ ಮನುಷ್ಯ ಮನುಷ್ಯನನ್ನೇ ನೆಚ್ಚದಂಥ ದುಃಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಸೃಷ್ಟಿಸಿರುವುದು ಭಯ ಉಂಟುಮಾಡುತ್ತದೆ. ಶತಮಾನಗಳಿಂದ ಸೌಹಾರ್ದದಿಂದ ಬಾಳಿದ್ದ ಎರಡು ಕೋಮಿನವರು ಇಂದು ಕೋಮು ಭಯೋತ್ಪಾದಕರಿಂದ ಹಲ್ಲೆಗೊಳಗಾಗುತ್ತ, ಮನೆ ಮಠ ತೊರೆದು ತಲೆಮರೆಸಿಕೊಂಡು ದಿವಾಳಿಯಾಗುತ್ತಿದ್ದಾರೆ. ಹಳ್ಳಿಗೆ ಸಂಬಂಧಪಡದ ಪುಂಡರ ಗುಂಪು ಸೂಕ್ಷ್ಮ ಪ್ರದೇಶಗಳಿಗೆ ನುಗ್ಗಿ ಹಿಂಸಾಚಾರ ಎಸಗುವ ದುಷ್ಟಶಕ್ತಿಗಳನ್ನು ಹತ್ತಿಕ್ಕುವಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಫಲವಾಗಿದೆ. ಬಿಜೆಪಿಯನ್ನು ಗೆಲ್ಲಿಸುವ ಅಭಿಯಾನ ನಡೆಸುತ್ತಿರುವ ಯೋಗಿ ತಮ್ಮ ರಾಜ್ಯದ ಅರಾಜಕತೆಗೆ ಕುರುಡರಾಗಿದ್ದಾರೆ!
ಬುಲಂದ್‌ಶಹರಿನ ದರಿಯಾಪುರ್ ಹಳ್ಳಿಯಲ್ಲಿ ಮೂರು ದಿನ (ಡಿ. 1, 2 ಮತ್ತು 3) ನಡೆದ ಅಂತರರಾಷ್ಟ್ರೀಯ ಮುಸ್ಲಿಂ ಧಾರ್ಮಿಕ ಮಹಾಸಭೆ ತಬ್ಲೀಗ್ ಇಜ್ತೆಮಾ ಸೋಮವಾರದಂದು ಸಂಪನ್ನಗೊಂಡಿತ್ತು. ದೇಶ ವಿದೇಶದಿಂದ ಮುಸ್ಲಿಂ ಪ್ರವಚನಕಾರರು, ಪಂಡಿತರುಗಳೆಲ್ಲ ಸೇರಿದ್ದರು. ಭಾನುವಾರದಿಂದಲೇ ಪ್ರವಾಹದಂತೆ ಹರಿದು ಬಂದ ಲಕ್ಷಾಂತರ ಜನಸ್ತೋಮವನ್ನು ನಿಯಂತ್ರಿಸುವುದು ಪೊಲೀಸ್ ಪಡೆಗೆ ದೊಡ್ದ ಸಾಹಸವೇ ಆಗಿತ್ತು. ಬುಲಂದ್‌ಶಹರ್– ದಾದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರ ಮೂರ್ನಾಲ್ಕು ತಾಸುಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಅದರಲ್ಲಿ ಕುರಾನ್ ಪಠಣ, ಪ್ರವಚನ, ಧಾರ್ಮಿಕ ಬೋಧನೆಗಳನ್ನು ಮಾಡಲಾಗುತ್ತದೆ.
1926ರಲ್ಲಿ ಮೌಲಾನಾ ಇಲಿಯಾಸ್ ರಹಮತ್ ಉಲ್ಲಾಹಿ ಅಲೈಹ್ ಎಂಬ ಸೂಫಿ ಸಂತ ಈ ತಬ್ಲೀಗ್ ಇಜ್ತೆಮಾ ಜಮಾತನ್ನು ಆಚರಣೆಗೆ ತಂದರು. ಅವರ ನಿಧನದ ನಂತರ 1944ರಿಂದ ಮೌಲಾನಾ ಯುಸೂಫ್ ರಹಮತ್ ಉಲ್ಲಾಹಿ ಅಲೈಹ್ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋದರು. ಅವರ ನಂತರ 1965ರಿಂದ ಮೌಲಾನಾ ಇನಾಮುಲ್ ಹಸನ್ ಹಾಗೂ 1995ರಿಂದ ಮೌಲಾನಾ ಸಾದ್ ಸಾಹಬ್ ಈ ಪರಂಪರೆಯನ್ನು ನಿಭಾಯಿಸಿಕೊಂಡು ಬರುತ್ತಿದ್ಡಾರೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಖಿಲ ಭಾರತ ಇಜ್ತೆಮಾ ಸಭೆಗಳು ನಡೆಯುತ್ತಿರುತ್ತವೆ. ಈ ಬಾರಿ ಬುಲಂದ್‌ಶಹರಿನ ದರಿಯಾಪುರ್‌ನಲ್ಲಿ ಆಯೋಜಿತ ಅಂತರರಾಷ್ಟ್ರೀಯ ಇಜ್ತೆಮಾ ಮಹಾಸಭೆಯ ತಯಾರಿ ಕೆಲ ತಿಂಗಳಿಂದಲೇ ನಡೆಯುತ್ತಿತ್ತು. ಅಂಥದ್ದೊಂದು ಸಭೆಯನ್ನು ಮೋದಿ ವಿರೋಧದ ರಹಸ್ಯಮಯ ಸಭೆ ಎಂದು ಗುಲ್ಲೆಬ್ಬಿಸಿದ ಒಳಸಂಚಿಗೆ ಏನನ್ನೋಣ? ಹಿಂದೂಗಳು ಆಚರಿಸುವ ಭಾಗವತ ಸಪ್ತಾಹ, ಪಠಿಸುವ ಸುಂದರಕಾಂಡ, ಗೀತಾ ಪಾರಾಯಣದಷ್ಟೇ ಸಹಜ ಅವರ ತಬ್ಲೀಗ್ ಇಜ್ತೆಮಾ ಸಭೆ.
ಇಜ್ತೆಮಾ ಜಮಾತ್ ಮುಗಿಸಿ ಜನ ತಮ್ಮ ಊರುಗಳಿಗೆ ಹೋದರು. ಆದರೆ ಗೋರಕ್ಷಣೆಯ ಸೋಗಿನಲ್ಲಿ ಹಿಂಸಾಚಾರಕ್ಕಿಳಿದ ಗುಂಪು ಸುಮ್ಮನೆ ಕೂರಲಿಲ್ಲ. ಬಜರಂಗದಳ, ಗೋರಕ್ಷಾ ಸಂಘಟನೆಯ ಧರ್ಮಾಂಧರು ಚಿಂಗರವಾಟಿ ಹಳ್ಳಿಯ ರಾಜಕುಮಾರ್ ಎಂಬ ಮುಖಂಡನ ಹೊಲದಲ್ಲಿ ದನದ ಅವಶೇಷ ಸಿಕ್ಕಿವೆಯೆಂಬ ವದಂತಿಯನ್ನು ಹಬ್ಬಿಸಿ ಬುಲಂದ್‌ಶಹರಿನ ಸಿಯಾನಾ ಹಳ್ಳಿಯ ಪೊಲೀಸ್ ಚೌಕಿಯ ಮೇಲೆ ದಾಳಿಯಿಟ್ಟರು. ಟ್ರ್ಯಾಕ್ಟರಿನಲ್ಲಿ ದನದ ಮೂಳೆಗಳನ್ನು ಸಾಕ್ಷಿಗಾಗಿ ತಂದು ಪೊಲೀಸ್ ಚೌಕಿಯ ಮುಂದೆ ನಿಂತು ಸೂಕ್ತ ಕ್ರಮ ಕೈಗೊಳ್ಳುವಂತೆ ಗಲಾಟೆ ಮಾಡತೊಡಗಿದ್ದರು. ಪೊಲೀಸರು ಹಳ್ಳಿಗರೊಂದಿಗೆ ಮಾತಾಡಿ ಒಪ್ಪಂದವಾದರೂ ನೂರಾರು ಜನ ದುರುಳರು ಕಲ್ಲೆಸೆಯತೊಡಗಿದ್ದಲ್ಲದೇ ಚೌಕಿಯಲ್ಲಿನ ಹತ್ತಾರು ವಾಹನಗಳನ್ನು ಸುಟ್ಟುಹಾಕಿದರು. ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಿದ್ದ ಪೊಲೀಸ್ ಅಧಿಕಾರಿ ಸುಬೋಧಕುಮಾರ್ ಸಿಂಗ್ ಅವರ ಸರ್ವಿಸ್ ರಿವಾಲ್ವರ್, ವೈರ್‌ಲೆಸ್ ಸೆಟ್ ಮತ್ತು ಮೊಬೈಲ್ ಕಿತ್ತುಕೊಂಡು ಅವರ ಮೇಲೆ ದಾರುಣವಾಗಿ ಹಲ್ಲೆ ನಡೆಸಿದರು. ಗುಂಪಿನಿಂದ ತೂರಿಬಂದ ಗುಂಡು ಪ್ರಾಣವನ್ನೇ ತೆಗೆಯಿತು. ಪೊಲೀಸರೂ ತತ್ತರಿಸಿದರು. ಉನ್ಮತ್ತ ಗುಂಪು ಅವರನ್ನು ಆಸ್ಪತ್ರೆಗೆ ಸಾಗಿಸಲೂಬಿಡದೆ ‘ಮಾರ್ ದೋ, ಜಲಾ ದೋ...’ ಎಂದುಅಟ್ಟಾಡಿಸುತ್ತಿತ್ತು. ಸಿಯಾನಾ ಪೊಲೀಸ್ ಚೌಕಿಯ ಬೆರಳೆಣಿಕೆಯ ಪೊಲೀಸರು ಜನಸಮೂಹವನ್ನು ಎದುರಿಸಲಾಗಲಿಲ್ಲ, ಗಾಯಗೊಂಡ ತಮ್ಮ ಅಧಿಕಾರಿಯನ್ನು ಶೀಘ್ರವಾಗಿ ಆಸ್ಪತ್ರೆಗೂ ಸಾಗಿಸಲಾಗಲಿಲ್ಲ. ಆಸ್ಪತ್ರೆ ತಲುಪುವ ಮೊದಲೇ ಸುಬೋಧಕುಮಾರ್ ಸಿಂಗ್ ಅಸುನೀಗಿದ್ದರು.
ಇವೆಲ್ಲ ಘಟನೆಗಳನ್ನು ಗಮನಿಸಿದರೆ ಮುಸ್ಲಿಂ ಸಮುದಾಯಗಳನ್ನೇ ಗುರಿ ಮಾಡಿಕೊಂಡು ಕೋಮುದ್ವೇಷ, ಧ್ರುವೀಕರಣ, ಹಿಂಸಾಚಾರವನ್ನು ಹಬ್ಬಿಸುವುದೇ ಬಿಜೆಪಿಯ ಚುನಾವಣಾ ತಂತ್ರವಾಗಿರುವುದು ನಿಚ್ಚಳ. ಮೊಹಮ್ಮದ್ ಅಖ್ಲಾಕ್ ಹತ್ಯೆಯ ನಂತರ ದೇಶದ ನಾನಾ ಭಾಗಗಳಲ್ಲಿ ಈ ಗುಂಪುದಾಳಿ ಹಲ್ಲೆಗಳು ಕೊನೆಮೊದಲಿಲ್ಲದೇ ನಡೆಯುತ್ತಲೇ ಇವೆ. ಬಿಜೆಪಿ ಸರ್ಕಾರ, ವಿಶ್ವ ಹಿಂದೂ ಪರಿಷತ್ತು, ಬಜರಂಗದಳಗಳು ಹಿಂಸಾಚಾರವನ್ನು ಬಾಯಲ್ಲಿ ವಿರೋಧಿಸುತ್ತ ವಾಸ್ತವದಲ್ಲಿ ಪೋಷಿಸುತ್ತಿವೆ. ಉದ್ಯೋಗವಿಲ್ಲದ ಯುವಜನರನ್ನು ಹಾದಿ ತಪ್ಪಿಸುತ್ತಿವೆ. ಇನ್ನು ಇಂಥ ಸುದ್ದಿಗಾಗಿಯೇ ಹೊಂಚಿಕೊಂಡು ಕುಳಿತಿರುವ ಕೆಲ ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿಯುವಂತೆ ಊಹಾಪೋಹಗಳನ್ನು ಬಿತ್ತರಿಸಿ ಜನರನ್ನು ಉತ್ತೇಜಿಸುತ್ತಿವೆ.
ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಕ್ಕೇ ಕಣ್ಣಿಟ್ಟು ಕಾಯುವ ಸುದ್ದಿವಾಹಿನಿಯ ಒಬ್ಬ ಬುದ್ಧಿವಂತ ಹ್ಯಾಷ್ ಟ್ಯಾಗ್ ಹರಿಬಿಟ್ಟ... ‘ಬುಲಂದ್‌ಶಹರಿನ ಇಜ್ತೆಮಾ ಹಲ್ಲೆಯ ದೊಂಬಿಯಲ್ಲಿ ಅನೇಕ ಶಾಲಾ ಮಕ್ಕಳು ಸಿಕ್ಕಿಕೊಂಡಿವೆ, ಮಕ್ಕಳು ಅಳುತ್ತಿದ್ದಾರೆ, ಜನ ಕಾಡಿನ ಪಾಲಾಗಿದ್ದಾರೆ, ಬಾಗಿಲು ಮುಚ್ಚಿ ಮನೆಗಳಲ್ಲಿ ಅಡಗಿಕೊಂಡ ಜನ ಭಯಗ್ರಸ್ತರಾಗಿದ್ಡಾರೆ’. ಜನಸಮೂಹವನ್ನು ವಿನಾಕಾರಣ ಉತ್ತೇಜಿಸಿ ದಂಗೆಗಳಾಗಲೆಂದೇ ಈ ಥರದ ಟ್ವೀಟ್‌ಗಳನ್ನು ಹರಿಬಿಡುತ್ತವೆ ಫೇಕ್ ಸುದ್ದಿವಾಹಿನಿಗಳು. ಇಂಥ ಭ್ರಾಮಕ ಊಹಾಪೋಹಗಳನ್ನು, ಸುಳ್ಳು ವದಂತಿಗಳನ್ನು ನಂಬಬೇಡಿರೆಂದು ಸಾರ್ವಜನಿಕ ಹಿತಾಸಕ್ತಿಯ ಸೂಚನೆಗಳು, ಅಧಿನಿಯಮಗಳು ಸಾರಿದರೂ ಸಾರ್ವಜನಿಕ ಸಮೂಹಸನ್ನಿಯ ತಲೆಗೇರಿದ ಪಿತ್ಥ ಇಳಿಯುವುದಿಲ್ಲ.
ಇಜ್ತೆಮಾ ಜಮಾತ್ ನಡೆದ ದರಿಯಾಪುರಕ್ಕೂ ಹಲ್ಲೆ ನಡೆದ ಸಿಯಾನಾ ಪೋಲಿಸ್ ಚೌಕಿಗೂ ಸುಮಾರು 50 ಕಿ.ಮೀ. ಅಂತರವಿದೆ. ‘ದನದ ಮೂಳೆಗಳು ಸಿಗುತ್ತವೆ, ನೀನು ಹೊಲಕ್ಕೆ ಹೋಗಿ ನೋಡು’ ಎಂದು ಚಿಂಗರವಾಟಿ ಮುಖ್ಯಸ್ಥನಿಗೇನು ಕನಸು ಬಿದ್ದಿತ್ತೇ? ತೆಲಂಗಾಣದಲ್ಲಿ ಬಿಜೆಪಿ ಪಕ್ಷಆಡಳಿತಕ್ಕೆ ಬಂದರೆ ಒವೈಸಿ ದೇಶಬಿಟ್ಟು ಓಡಬೇಕೆಂದು ಅಸಾಂವಿಧಾನಿಕ ಮಾತುಗಳನ್ನಾಡಿದ ಯೋಗಿ ಆದಿತ್ಯನಾಥ್ ಈಗ ಮೌನ ವಹಿಸಿದ್ದೇಕೆ? ಭಾರತದಂಥ ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ಮಹಾಸಭೆ ಶಾಂತಿಯುತವಾಗಿ ನಡೆಯಬಲ್ಲುದಾದರೆ ತಬ್ಲೀಗ್ ಇಜ್ತೆಮಾ ಜಮಾತ್ ಯಾಕೆ ನಡೆಯಬಾರದು?
ಇದು ಉತ್ತರಿಸಲಾಗದ ಮಿಲಿಯನ್ ಡಾಲರ್ ಪ್ರಶ್ನೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.