ಮಕ್ಕಳು ಶಾಲೆಗೆ ಗೈರುಹಾಜರಾಗುವುದಕ್ಕೆ ಆರೋಗ್ಯದ ಸಮಸ್ಯೆಗಳು ಹೇಗೆ ಕಾರಣವಾಗಿರಬಹುದು ಎಂಬ ಬಗ್ಗೆ ವಿ.ಎಸ್. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗದಿಂದಇತ್ತೀಚೆಗೆ ಒಂದು ಅಧ್ಯಯನ ನಡೆಸಲಾಗಿದೆ. ಇದರಡಿ, ಬೆಂಗಳೂರಿನ ಆಯ್ದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶಾಲೆಯಿಂದ ದೂರ ಉಳಿದ ದಿನಗಳನ್ನು ಲೆಕ್ಕಹಾಕಲಾಗಿದೆ.
ಶೇ 68ರಷ್ಟು ಮಕ್ಕಳು ವರ್ಷದಲ್ಲಿ 65 ದಿನಗಳು ಸಾಮಾನ್ಯ ಆರೋಗ್ಯದ ಸಮಸ್ಯೆಗಳಿಂದ, 25 ದಿನಗಳು ಸಾಮಾಜಿಕ ಕಾರಣಗಳಿಂದ ಮತ್ತು 12 ದಿನಗಳು ದಂತ ಆರೋಗ್ಯದ ಸಮಸ್ಯೆಗಳಿಂದ ಶಾಲೆಗೆ ಗೈರುಹಾಜರಾಗಿದ್ದರು. ಮಕ್ಕಳ ಶಾಲೆಯ ಗೈರುಹಾಜರಿಗೆ ಇರಬಹುದಾದ ಕಾರಣಗಳನ್ನು ವಿಶ್ಲೇಷಿಸಲು ಬಡತನದ ಬಹು ಆಯಾಮಗಳ ಮಾಪನವಾದ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್‌ನ ‘ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್’ ಅನ್ನು ಬಳಸಲಾಗಿತ್ತು.
ಈ ಸೂಚ್ಯಂಕವು ಬಡತನವನ್ನು ಶಿಕ್ಷಣ, ಆರೋಗ್ಯ ಮತ್ತು ಜೀವನ ಗುಣಮಟ್ಟದ ಆಧಾರದ ಮೇಲೆ ವಿಶ್ಲೇಷಿಸುತ್ತದೆ. ಶಿಕ್ಷಣ ಮತ್ತು ಆರೋಗ್ಯದ ಮಟ್ಟವು ಬಡತನದ ಬಹುರೂಪಿ ಹೊದಿಕೆಗಳು. ಒಂದು ‘ಕುಟುಂಬದ ಬಡತನ’ವನ್ನು ಕೇವಲ ಆ ಕುಟುಂಬದ ಸಂಪಾದನೆಯನ್ನಷ್ಟೇ ಪರಿಗಣಿಸಿ ವಿಶ್ಲೇಷಿಸದೆ, ಆ ಕುಟುಂಬದ ಸದಸ್ಯರ ಶಿಕ್ಷಣ, ಆರೋಗ್ಯದ ಮಟ್ಟ ಮತ್ತು ಜೀವನದ ಸ್ಥಿತಿಗತಿ ಆಧಾರದ ಮೇಲೆ ವಿಶ್ಲೇಷಿಸಲಾಗುತ್ತದೆ. ಬಡತನದಲ್ಲಿರುವ ಕುಟುಂಬಗಳು ಈ ಸೂಚಕಗಳಲ್ಲಿ ಕಟ್ಟಕಡೆಯಲ್ಲಿರುವ ಕುಟುಂಬಗಳಾಗಿರುತ್ತವೆ. ಈ ಅಧ್ಯಯನದಲ್ಲಿ ಕಂಡುಬಂದಂತೆ, ಬೆಂಗಳೂರಿನಸುಮಾರು ಶೇ 36ರಷ್ಟು ಮಕ್ಕಳು ಇಂತಹ ಕುಟುಂಬಗಳಿಗೆ ಸೇರಿದ್ದಾರೆ. ಕಡು ಬಡತನದ ತೀವ್ರತರ ಅನನುಕೂಲಗಳನ್ನು ಅನುಭವಿಸುತ್ತಿರುವ ಮಕ್ಕಳು ಇವರಾಗಿದ್ದಾರೆ. ಈ ಮಕ್ಕಳ ಕುಟುಂಬಸ್ಥರು ಶಿಕ್ಷಣದಲ್ಲಿ ಮತ್ತು ಆರೋಗ್ಯದ ಸ್ಥಿತಿಯಲ್ಲಿ ತುಂಬಾ ಹಿಂದುಳಿದವರು.
ಬಡತನದಿಂದ ಅತಿಹೆಚ್ಚು ಅನನುಕೂಲಗಳಾಗುವುದು ಮಕ್ಕಳಿಗೆ. ಪ್ರಪಂಚದಾದ್ಯಂತ ಸುಮಾರು 68.9 ಕೋಟಿ ಮಕ್ಕಳು, ಅಂದರೆ ಪ್ರತಿ ಐವರು ಮಕ್ಕಳಲ್ಲಿ ಇಬ್ಬರು, ಬಡತನದ ಬಹು-ಆಯಾಮಗಳಿಂದ ನಲುಗುತ್ತಿರುವ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಸುಮಾರು ಶೇ 87ರಷ್ಟು ಮಕ್ಕಳು ಸಬ್ ಸಹಾರಾ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಅಂದರೆ, ಬಡತನವನ್ನು ಮಕ್ಕಳು ಮೊದಲು ಅನುಭವಿಸುವುದೇ ಅವರ ಕುಟುಂಬಗಳಲ್ಲಿ. ಇಂತಹ ತೀವ್ರತರ ಬಡತನದಲ್ಲಿ ಸಿಲುಕಿರುವ ಮಕ್ಕಳಲ್ಲಿ ಶೇ 21ರಷ್ಟು ಮಕ್ಕಳು 0-9 ವರ್ಷದವರಾಗಿದ್ದರೆ, ಶೇ 15-19ರಷ್ಟು ಮಂದಿ 10-17ರ ಹದಿಹರೆಯದವರಾಗಿದ್ದಾರೆ. ಪ್ರಪಂಚದಲ್ಲಿರುವ ವಯಸ್ಕರ ಪೈಕಿ ತೀವ್ರತರ ಬಡತನದಲ್ಲಿ ಬೇಯುತ್ತಿರುವವರ ಪ್ರಮಾಣ ಶೇ 10ರಷ್ಟು (ಯುನಿಸೆಫ್ ಮತ್ತು ವಿಶ್ವ ಬ್ಯಾಂಕ್ ವರದಿ ಆಧರಿಸಿ). ಇದಕ್ಕೆ ಹೋಲಿಸಿದರೆ ಮಕ್ಕಳು ಮತ್ತು ಹದಿಹರೆಯದವರ ಬಡತನವು ಹೆಚ್ಚಾಗಿ ಇರುವುದನ್ನು ನಾವು ಕಳಕಳಿಯಿಂದ ಗಮನಿಸಲೇಬೇಕಾಗಿದೆ.
ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ದೇಹವು ಬಡತನದ ಪರಿಣಾಮಗಳಿಂದ ಹೆಚ್ಚು ಆಘಾತಕ್ಕೊಳಗಾಗುತ್ತದೆ. ಪೌಷ್ಟಿಕ ಆಹಾರ, ಶುಚಿತ್ವದ ಪರಿಸರ, ಕುಡಿಯಲು ಯೋಗ್ಯವಾದ ನೀರು, ತಾಯಿಯ ಆರೋಗ್ಯ, ಕುಟುಂಬದ ಆದಾಯ, ವೈದ್ಯಕೀಯ ನೆರವು, ಆರೋಗ್ಯ ಸೇವೆಗಳ ಲಭ್ಯತೆ ಇವು ಮಕ್ಕಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಬಡತನದ ಬವಣೆಯಲ್ಲಿ ಬೇಯುತ್ತಿರುವ ಕುಟುಂಬಗಳು ಇವುಗಳಿಂದ ವಂಚಿತವಾಗಿರುತ್ತವೆ. ಮಕ್ಕಳ ಸರ್ವತೋಮುಖ ಆರೋಗ್ಯದ ಬೆಳವಣಿಗೆಗೆ ಅತ್ಯವಶ್ಯಕವಾಗಿ ಬೇಕಾಗುವ ಈ ಅಂಶಗಳಿಗೆ ಆಸರೆಯಾಗಿ ನಿಲ್ಲುವ ಶಿಕ್ಷಣದ ಮಟ್ಟ ಕುಟುಂಬದ ಸಂಪಾದನೆಯನ್ನು ನಿರ್ಧರಿಸುತ್ತದೆ.
ಬಡತನದ ಆರ್ಥಿಕ ದುಃಸ್ಥಿತಿಯಿಂದ ಉಂಟಾಗುವ ಕೌಟುಂಬಿಕ ಕಲಹ ಮತ್ತು ಇಂತಹ ಕುಟುಂಬಗಳು ಬದುಕುವ ಕೇರಿಗಳಲ್ಲಿರುವ ಬದುಕಿನ ಕ್ರೌರ್ಯ ಹಾಗೂ ಹಿಂಸಾತ್ಮಕ ಚಟುವಟಿಕೆಗಳು ಮಕ್ಕಳಲ್ಲಿ ಅತಿಯಾದ ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದ ಮಗುವಿನ ಮಾನಸಿಕ ಕ್ಷಮತೆ ಮತ್ತು ಗ್ರಹಿಕೆಯ ಕ್ಷಮತೆ ಕುಂಠಿತಗೊಳ್ಳುತ್ತವೆ. ಮೊದಲೇ ದೈಹಿಕ ಅನಾರೋಗ್ಯದಿಂದ ಸೊರಗುವ ಮಗು ಈ ರೀತಿಯ ಮಾನಸಿಕ ಅನಾರೋಗ್ಯದಿಂದ ಮತ್ತಷ್ಟು ನಿಕೃಷ್ಟ ಸ್ಥಿತಿಗೆ ತಲುಪುತ್ತದೆ. ಇದರಿಂದ ಮುಂದೆ ಆ ಮಗು ಒಬ್ಬ ಆರೋಗ್ಯವಂತ ವ್ಯಕ್ತಿ ಆಗುವುದಾದರೂ ಹೇಗೆ? ದೇಶದ ಉನ್ನತಿಗಾಗಿ ಕ್ಷಮತೆಯಿಂದ ಶ್ರಮಿಸುವ ಸದೃಢ ದೇಹ ಮತ್ತು ಮಾನಸಿಕ ಕ್ಷಮತೆಯನ್ನು ಪಡೆಯುವುದಾದರೂ ಹೇಗೆ? ವ್ಯಕ್ತಿಗತವಾಗಿ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗೆ ಏರುವುದಾದರೂ ಹೇಗೆ?
ಮಕ್ಕಳ ಪೋಷಣೆಗೆ ಆರ್ಥಿಕ ಸಹಾಯ ನೀಡಿರುವ ದೇಶಗಳಲ್ಲಿ ಬಡತನದ ಅಡ್ಡ ಪರಿಣಾಮಗಳು ಸ್ವಲ್ಪ
ಮಟ್ಟಿಗೆ ನಿಯಂತ್ರಣದಲ್ಲಿವೆ ಎಂದು ಯುನಿಸೆಫ್ ಅಧ್ಯಯನಗಳು ಹೇಳುತ್ತವೆ. ಅಂದರೆ, ಒಂದು ಮಗು ಯಾವುದೇ ಕುಟುಂಬದಲ್ಲಿ ಜನಿಸಲಿ, ಅದು ಬಡತನದ ಬೇಗೆ ಅನುಭವಿಸಬಾರದು ಎಂಬುದೇ ಈ ಆರ್ಥಿಕ ನೆರವಿನ ಉದ್ದೇಶ. ಇದು ಸರ್ಕಾರಗಳ ನೈತಿಕ ಜವಾಬ್ದಾರಿಯೂ ಆಗಿರುತ್ತದೆ. ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವುದಲ್ಲದೆ, ಶಾಲೆಯಲ್ಲಿ ಮಕ್ಕಳ ಹಾಜರಾತಿಯೂ ಹೆಚ್ಚುತ್ತದೆ. ಮುಖ್ಯವಾಗಿ, ಹೆಣ್ಣುಮಕ್ಕಳ ಶಾಲೆಯ ಹಾಜರಾತಿ ಹೆಚ್ಚಿಸಲು ಆರ್ಥಿಕ ಸಹಾಯವಷ್ಟೇ ಅಲ್ಲದೆ, ಸಾಮಾಜಿಕ ಅನಿಷ್ಟಗಳಾದ ಬಾಲ್ಯವಿವಾಹ, ಋತುಸ್ರಾವದ ಮೂಢ ಪದ್ಧತಿಗಳು ಮತ್ತು ಬಾಲಕಾರ್ಮಿಕ ಪದ್ಧತಿ ನಿಷೇಧಿಸುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಅನಾರೋಗ್ಯದ ಸಮಸ್ಯೆಗಳಿಂದಾಗುವ ಶಾಲೆಯ ಗೈರುಹಾಜರಿಯನ್ನು ತಪ್ಪಿಸಲು ಸರ್ಕಾರದ ಗುಣಮಟ್ಟದ ಆರೋಗ್ಯ ಸೇವೆಗಳು ಎಲ್ಲರಿಗೂ ಸಿಗುವಂತಾಗಬೇಕು. ಶಾಲೆಯ ಹಾಜರಾತಿ ಹೆಚ್ಚಿದಷ್ಟೂ ಶಿಕ್ಷಣದ ಮಟ್ಟ ಹೆಚ್ಚುತ್ತದೆ. ಶಿಕ್ಷಣದ ಮಟ್ಟ ಹೆಚ್ಚಿದಷ್ಟೂ ಬಡತನದ ಬಹುರೂಪಿ ಬವಣೆಗಳಿಂದ ಹಂತ ಹಂತವಾಗಿ ಬಿಡುಗಡೆ ಹೊಂದಬಹುದು. ಬಡತನದಿಂದ ಬಿಡುಗಡೆ ಹೊಂದಿದಷ್ಟೂ ವ್ಯಕ್ತಿಯ ಮತ್ತು ದೇಶದ ಆರೋಗ್ಯದ ಮಟ್ಟದಲ್ಲೂ ಉನ್ನತಿಯನ್ನು ಕಾಣಬಹುದು.
ಕಳೆದ ತಿಂಗಳು ಯುನಿಸೆಫ್ ನೀಡಿರುವ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಕೇವಲ ಶೇ 35ರಷ್ಟು ಮಕ್ಕಳು ಇಂತಹ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಭಾರತ ತನ್ನ ಜಿಡಿಪಿಯ ಶೇ 2ರಷ್ಟನ್ನು ಮೇಲೆ ವಿವರಿಸಿದ ಸಾಮಾಜಿಕ ಪ್ರಗತಿಯ ಅಂಶಗಳಿಗೆ ಮೀಸಲಿಟ್ಟಿದ್ದರೂ ಅದರ ಅನುಷ್ಠಾನದಲ್ಲಿ ಎಡವಿದೆ. ಉದಾಹರಣೆಗೆ, ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ರಾಜ್ಯ ಸರ್ಕಾರಗಳ ಪಡಿತರ ಮತ್ತು ಆಹಾರ ಪೂರೈಕೆ ಯೋಜನೆಗಳು ಸುಮಾರು ಶೇ 59ರಷ್ಟು ಬಡ ಕುಟುಂಬಗಳಿಗೆ ನಿಯಮಿತವಾಗಿ ತಲುಪುವುದೇ ಇಲ್ಲ. ಇನ್ನು ಬಡತನದ ಬೇಗೆಯಲ್ಲಿ ಬೇಯುವ ಮಕ್ಕಳಿಗೆ ಎಲ್ಲಿಯ ಪೌಷ್ಟಿಕ ಆಹಾರ? ಮಕ್ಕಳ ಬಡತನವನ್ನು ನೀಗಿಸುವ ಬಹು ಆಯಾಮದ ಯೋಜನೆಗಳ ಸ್ವರೂಪ ಮತ್ತು ಅನುಷ್ಠಾನದ ಬಗ್ಗೆ ಸರ್ಕಾರ ಮತ್ತು ಸಮಾಜ ತುರ್ತಾಗಿ ಸಮಾಲೋಚಿಸಬೇಕಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಕ್ಕಳ ಬಡತನವನ್ನು ನೀಗಿಸುವ ನೈತಿಕ ಹೊಣೆಗಾರಿಕೆಯನ್ನು ನಮ್ಮ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ಪ್ರಕಟಿಸಬೇಕು. ಇಂದಿನ ಮಕ್ಕಳು ನಮ್ಮ ಮುಂದಿನ ಭವಿಷ್ಯವಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.