ADVERTISEMENT

ಸ್ಪಂದನ | ಉದರದ ಬೊಜ್ಜು ಅಪಾಯವೇ?

ಡಾ.ವೀಣಾ ಎಸ್‌ ಭಟ್ಟ‌
Published 24 ಫೆಬ್ರುವರಿ 2023, 19:30 IST
Last Updated 24 ಫೆಬ್ರುವರಿ 2023, 19:30 IST
   

1. ನನಗೆ ವಯಸ್ಸು 32 ವರ್ಷ. ತೂಕ 64 ಕೆ.ಜಿ. ಮೊದಲನೆಯದು ಸಿಸೇರಿಯನ್‌ ಹೆರಿಗೆ. ಮಗುವಿಗೆ 5 ವರ್ಷ. ಈಗ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೇನೆ. ತಿಂಗಳ ಮುಟ್ಟು ನಾರ್ಮಲ್ ಇದೆ. ಆದರೆ ಹೊಟ್ಟೆಯಭಾಗ ದಪ್ಪ ಇದೆ. ಹೊಟ್ಟೆ 4-5 ತಿಂಗಳ ಬಸುರಿ ರೀತಿ ಕಾಣಿಸುತ್ತದೆ. ನಾನು ಈಗ ಗರ್ಭಿಣಿಯಾದರೆ ಈ ಬೊಜ್ಜು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ?
ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮಗಿರುವುದು ಉದರದ(ಹೊಟ್ಟೆ) ಬೊಜ್ಜು. ಅಂದರೆ ದೇಹದಲ್ಲಿ ಆಂಡ್ರಾಯ್ಡ್ ಅಥವಾ ಸೇಬು ತರಹದ ಕೊಬ್ಬು. ಅಂದರೆ ಕೊಬ್ಬಿನ ಶೇಖರಣೆ ದೇಹದ ಮಧ್ಯಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಉಂಟಾಗುವುದು.

ಡಾ. ವೀಣಾ ಎಸ್. ಭಟ್‌

ನಿಮ್ಮ ಸೊಂಟದ ಸುತ್ತಳತೆ 90 ಸೆಂ.ಮೀ. ಒಳಗೆ ಇರಬೇಕು. ನಿಮಗೆ 100 ಸೆಂ.ಮೀಗಿಂತ ಹೆಚ್ಚಾಗಿರಬೇಕಲ್ಲವೇ? ಹೌದಾದರೆ, ಅದು ಒಳ್ಳೆಯದಲ್ಲ. ಹಾಗಿದ್ದರೆ, ಅದು ಗರ್ಭಧಾರಣೆಯ ಸಮಯದಲ್ಲಿ ಹಾಗೂ ಭವಿಷ್ಯದ ದಿನಗಳಲ್ಲೂ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಮುನ್ಸೂಚನೆ.

ADVERTISEMENT

ಉದರದಲ್ಲಿ ಕರುಳಿನ ಸುತ್ತಲು ಹರಡಿರುವ ಒಮೆಂಟಮ್‌ನ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿದೆ. ಇದು ಇಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರಲ್ಲಿ ಚರ್ಮದ ಕೆಳಗಿನ ಕೊಬ್ಬಿನಾಂಶಕ್ಕಿಂತ ಹೊಟ್ಟೆಯೊಳಗಿನ ಬೊಜ್ಜಿನಾಂಶ (ವಿಸರಲ್ ಫ್ಯಾಟ್) ಯುನಿಟ್ ಮಾಸ್‌ಗೆ ಹೆಚ್ಚು ಕೊಬ್ಬಿನ ಕಣಗಳನ್ನು ಹೊಂದಿರುತ್ತದೆ. ಈ ಕೊಬ್ಬಿನ ಕಣಗಳಿಗೆ ರಕ್ತಸರಬರಾಜು ಕೂಡಾ ಹೆಚ್ಚಿರುತ್ತದೆ. ಇವುಗಳಿಂದ ಉತ್ಪತ್ತಿಯಾಗುವ ಹಾರ್ಮೋನುಗಳು ಮತ್ತು ಕೊಬ್ಬಿನ ಆಮ್ಲಗಳು ರಕ್ತಕ್ಕೆ ನೇರವಾಗಿ ತಲುಪಿ, ಇನ್ಸುಲಿನ್ ಪ್ರತಿರೋಧತೆಯಲ್ಲಿ ಹೆಚ್ಚಳ ಉಂಟಾಗಿ ಗ್ಲೂಕೋಸ್ ಅಸಮತೋಲನ, ಏರುರಕ್ತದೊತ್ತಡ(ಬಿ.ಪಿ), ಕೊಲೆಸ್ಟ್ರಾಲ್‌ ಮಟ್ಟ ಏರಿಕೆ ಎಲ್ಲವನ್ನೊಳಗೊಂಡ ಮೆಟಬಾಲಿಕ್‌ಸಿಂಡ್ರೋಂ ಉಂಟುಮಾಡುತ್ತದೆ. ಪಿತ್ತಕೋಶದಕಲ್ಲುಗಳು, ಲಿವರ್‌ನಕೊಬ್ಬು ರೋಗ ಇತ್ಯಾದಿಗಳ ಸಂಭವ ಹೆಚ್ಚು.

ನೀವು ನಿಮ್ಮ ಎತ್ತರವನ್ನು ತಿಳಿಸಿಲ್ಲ. ನಿಮ್ಮ ತೂಕವೂ ಅಗತ್ಯಕ್ಕಿಂತ ಹೆಚ್ಚಿರಬಹುದು. ಹಲವು ಅಧ್ಯಯನಗಳ ಪ್ರಕಾರ ಬೊಜ್ಜಿರುವ ಮಹಿಳೆಯರು ಗರ್ಭಿಣಿಯಾದಾಗ ಬಿ.ಪಿ, ಗರ್ಭಾವಸ್ಥೆಯ ಮಧುಮೇಹ, ಹೆಚ್ಚಾಗುವ ಸಿಸೇರಿಯನ್ ಸಂಭನೀಯತೆ ಹೆಚ್ಚಿರುತ್ತದೆ. ಸ್ತನ್ಯಪಾನದಲ್ಲೂ ತೊಡಕುಉಂಟಾಗುವುದು, ಮಗುವಿಗೂ ಮುಂದೆ ಬೊಜ್ಜುಂಟಾಗುವುದು.. ಹೀಗೆ ಹಲವು ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಗರ್ಭಧಾರಣೆಗೂ ಮೊದಲೇ ಬೊಜ್ಜು ಕಡಿಮೆಮಾಡಿಕೊಳ್ಳಿ.

ಹಲವು ಮಹಿಳೆಯರು ಹೊಟ್ಟೆಯನ್ನು ಮಾತ್ರ ಹೇಗಾದರೂ ಸಣ್ಣ ಮಾಡಿಕೊಡಿ ಮೇಡಂ ಎಂದು ಕೇಳುತ್ತಾರೆ ಮತ್ತು ಅವರಾಗಿಯೇ ಜಾಹೀರಾತಿನಲ್ಲಿ ತೋರಿಸುವ ತರಹವಾರಿ ಎಣ್ಣೆ, ಟಮ್ಮಿಟ್ರಮ್ಮರ್ ಇತ್ಯಾದಿ ಉಪಯೋಗಿಸು ತ್ತಾರೆ. ಆದರೆ ಇವೆಲ್ಲಾ ತಪ್ಪು. ಹಿತಮಿತ ಆಹಾರ ನಿಯಮಿತ ವ್ಯಾಯಾಮವನ್ನು ಅನುಸರಿಸಿದಾಗ ಇಡೀ ಶರೀರದ ಕೊಬ್ಬು ಕರಗಿದಾಗ ಹೊಟ್ಟೆಯ ಬೊಜ್ಜೂ ಕರಗುತ್ತದೆ. ದೇಹದ ಒದೊಂದೇ ಭಾಗದ ಕೊಬ್ಬನ್ನ ಕರಗಿಸಲು ಸಾಧ್ಯವಿಲ್ಲ.

ಹಾಗಾಗಿ ನೀವು ಹೆಚ್ಚು ಪ್ರಕೃತಿದತ್ತ ಆಹಾರಗಳನ್ನ ಸೇವಿಸಿ. ಉಪ್ಪಿನಾಂಶ ಹಾಗೂ ಸಕ್ಕರೆ ಹೆಚ್ಚಿರುವ ಆಹಾರ ಸೇವನೆ ಕಡಿಮೆ ಮಾಡಿ. ದಿನಾಲೂ 4ಲೀಟರ್ ನೀರು ಕುಡಿಯಿರಿ. ಕಾಫಿ, ಕೋಲಾ, ಜಂಕ್‌ಫುಡ್ ಸೇವನೆ (ಅಭ್ಯಾಸವಿದ್ದರೆ) ಕಡಿಮೆ ಮಾಡಿ. ಎಲ್ಲದಕ್ಕಿಂತ ಮುಖ್ಯವಾಗಿ ಒತ್ತಡ ಕಡಿಮೆಮಾಡಿಕೊಳ್ಳಿ.

ಹಗಲುನಿದ್ರೆ ಮಾಡದೇ ರಾತ್ರಿ 6 ರಿಂದ 8 ತಾಸು ನಿದ್ರಿಸಿ. ಹೊಟ್ಟೆಯ ಮಾಂಸಖಂಡಗಳನ್ನು ಬಲಪಡಿಸಿ ಕೊಳ್ಳುವುದು ಬಹಳಮುಖ್ಯ. ಇದಕ್ಕಾಗಿ ನೀವು ನಿಲ್ಲುವಾಗ ಸದಾ ಕಾಲುಗಳ ಮೇಲೆ ಸಮಭಾರ ಹಾಕಿ, ಹೊಟ್ಟೆಯನ್ನ ಒಳಗೆಳೆದುಕೊಂಡು ನಿಲ್ಲಲು ಪ್ರಯತ್ನಿಸಿ. ದ್ವಿಪಾದ ಉತ್ಥಾನಾಸನ, ನೌಕಾಸನ ಸೂರ್ಯ ನಮಸ್ಕಾರದಂತಹ ಆಸನಗಳನ್ನು ನಿಯಮಿತವಾಗಿ ಮಾಡುತ್ತಾ, ನಿಮ್ಮ ಉದರದಬೊಜ್ಜು ಸರಿಪಡಿಸಿಕೊಂಡು ನಂತರ ಗರ್ಭಧರಿಸಿಕೊಳ್ಳಲು ಪ್ರಯತ್ನಿಸಿ.

ಮತ್ತಷ್ಟು ಪ್ರಶ್ನೋತ್ತರಕ್ಕೆ: https://www.prajavani.net/health ನೋಡಿ

***

2. ನನಗೆ 16ವರ್ಷ. ತಿಂಗಳಮುಟ್ಟು 2 ರಿಂದ 3ತಿಂಗಳಿಗೆ ಆಗುತ್ತಿತ್ತು ಮತ್ತು ನೋವು ಕೂಡಾ (ಬೆನ್ನುನೋವು, ಹೊಟ್ಟೆನೋವು) ಜಾಸ್ತಿ ಆಗುತ್ತಿತ್ತು. ಆದ್ದರಿಂದ ನಾನು ವೈದ್ಯರ ಬಳಿ ಹೋದಾಗ ಅವರು ಗರ್ಭಾಶಯದ ಮೇಲೆ ಸಣ್ಣ ಸಣ್ಣ ಗುಳ್ಳೆಗಳಾಗಿವೆ ಎಂದು ಮಾತ್ರೆಗಳನ್ನು ನೀಡಿದರು. ಅವನ್ನು ತೆಗೆದುಕೊಂಡಾಗ ನೋವು ಮತ್ತು ಸರಿಯಾದ ವೇಳೆಯಲ್ಲಿ ತಿಂಗಳಮುಟ್ಟು ಆಗತೊಡಗಿತು. ಆದರೆ ಯಾಕೆ ಹೀಗಾಗಿದೆ?

ಉತ್ತರ: ನಿಮಗಿನ್ನೂ 16 ವರ್ಷ. ನಿಮಗೆ ಗರ್ಭಾಶಯದ ಮೇಲೆ ಗುಳ್ಳೆಗಳಾಗಿವೆ ಎಂದು ಹೇಳಿರಲಕ್ಕಿಲ್ಲ. ಅದು ಅಂಡಾಶಯದಲ್ಲಿ ಗುಳ್ಳೆಗಳಾಗಿದೆ ಎಂದು ವೈದ್ಯರು ತಿಳಿಸಿರಬೇಕು. ಈ ವಯಸ್ಸಿನಲ್ಲಿ ಅಂಡಾಶಯದಲ್ಲಿ ಸಣ್ಣ ಸಣ್ಣ ಹಾರ್ಮೋನು ಅವಲಂಬಿತ ಗುಳ್ಳೆಗಳಾಗುವುದು ಸಹಜ. ಕೆಲವೊಮ್ಮೆ ಅದಕ್ಕೆ ಏನೂ ಚಿಕಿತ್ಸೆಇಲ್ಲದೆಯೂ ತಾನೇ ತಾನಾಗಿ ಹೋಗುತ್ತದೆ. ಕೆಲವೊಮ್ಮೆ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಬೇಕಾಗಬಹುದು. ಹೆಚ್ಚಿನ ಸಂದರ್ಭದಲ್ಲಿ ಹಾರ್ಮೋನು ಚಿಕಿತ್ಸೆಯನ್ನು ಕೊಡುತ್ತಾರೆ. ನೀವು ಈ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.