ADVERTISEMENT

ವಿಶ್ಲೇಷಣೆ| ಪರ್ವತಗಳು ಕರೆಯುತ್ತಿಲ್ಲ, ನೀವು ಬರಬೇಡಿ

ಗಿರಿಧಾಮಗಳ ಧಾರಣಶಕ್ತಿ ಕುರಿತ ಅಧ್ಯಯನಗಳು ತ್ವರಿತಗತಿಯಲ್ಲಿ ನಡೆಯಬೇಕಿದೆ

ಡಾ.ಎಚ್.ಆರ್.ಕೃಷ್ಣಮೂರ್ತಿ
Published 25 ಜನವರಿ 2023, 22:51 IST
Last Updated 25 ಜನವರಿ 2023, 22:51 IST
   

‘ಮೌಂಟನ್ಸ್ ಆರ್ ಕಾಲಿಂಗ್, ಐ ಮಸ್ಟ್ ಗೋ’- ಇದು ಅಮೆರಿಕದ ಸಾಹಸೀ ನಿಸರ್ಗಾಸಕ್ತ, ಜೀವವಿಜ್ಞಾನಿ, ಪರಿಸರ ಚಿಂತಕ, ಲೇಖಕ, ರಾಷ್ಟ್ರೀಯ ಉದ್ಯಾನಗಳ ಪಿತಾಮಹ ಎಂಬ ಹಿರಿಮೆಯ ಜಾನ್ ಮ್ಯುವರ್ ಅವರ ಪ್ರಸಿದ್ಧ ಸಾಲು, ಹೊರಾಂಗಣ ಸಾಹಸೀ ಉತ್ಸಾಹಿಗಳನ್ನು ಪ್ರಕೃತಿಯತ್ತ ಸೆಳೆಯುವ ಮೋಹಕ ಮಂತ್ರ. ಪ್ರಪಂಚದಾ ದ್ಯಂತ ನಿಸರ್ಗ ಪ್ರವಾಸೋದ್ಯಮದ ಎಲ್ಲ ಮಳಿಗೆಗಳ ಆಕರ್ಷಕ ಉತ್ಪನ್ನಗಳ ಮೇಲೆ ತಪ್ಪದೇ ಕಾಣಿಸುವ ಪ್ರೇರಣಾತ್ಮಕ ಸಂದೇಶ.

ಡಾ. ಎಚ್.ಆರ್.ಕೃಷ್ಣಮೂರ್ತಿ

‘ಮೌಂಟನ್ಸ್ ಆರ್ ನಾಟ್ ಕಾಲಿಂಗ್, ಪ್ಲೀಸ್ ಡೋಂಟ್ ಕಮ್’- ಇದು, ಮೂರು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಪರಿಸರಾಸಕ್ತ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ತದ್ವಿರುದ್ಧವಾದ ಸಂದೇಶ. ಪ್ರವಾಸಿ ಋತುವಿನಲ್ಲಿ, ನಮ್ಮ ದೇಶದ ಅನೇಕ ಗಿರಿಧಾಮಗಳಿಂದ ಇಂತಹ ಕಳಕಳಿಯ ಕೋರಿಕೆ ಇದೀಗ ಮತ್ತೆ ಮತ್ತೆ ಬರಲು ಪ್ರಾರಂಭವಾಗಿದೆ.

ಒಂದು ಕಾಲದಲ್ಲಿ ಶಿಮ್ಲಾ, ಹಿಮಾಲಯದ ಚಳಿಯಲ್ಲಿ ಮುಸುಕು ಹಾಕಿ ಮಲಗಿದ್ದಂತಹ ಪುಟ್ಟ, ಸುಂದರ ಪಟ್ಟಣ. ಬೆಟ್ಟದ ಬೆನ್ನಮೇಲೆ ಸಾಲುಮರಗಳಿಂದ ಅಲಂಕೃತವಾಗಿ ನಿಧಾನವಾಗಿ ಏರುವ ರಸ್ತೆಗಳು, ಸ್ಟ್ರಾಬೆರ್‍ರಿ, ರಾಸ್ಪ್‌ಬೆರ್‍ರಿ, ಚೆರ್‍ರೀಸ್‍ನಂತಹ ಹಣ್ಣಿನ ತೋಟಗಳು, ಹೂಗಳಿಂದ ತುಂಬಿದ ಕಾಲುದಾರಿಗಳು, ಬ್ರಿಟಿಷ್ ಕಾಲದ ವಿಶಾಲವಾದ ಹುಲ್ಲುಹಾಸಿನ ಬಂಗಲೆಗಳು ಬಹು ಪ್ರಸಿದ್ಧ. ಆದರೆ 90ರ ದಶಕದಿಂದ ಪ್ರಾರಂಭವಾಗಿ, ವರ್ಷ ವರ್ಷವೂ ಪ್ರವಾಹ ದೋಪಾದಿಯಲ್ಲಿ ಏರುತ್ತಿರುವ ಪ್ರವಾಸಿಗರಿಂದ ಈ ಎಲ್ಲವೂ ಕಣ್ಮರೆಯಾಗುವ ಹಂತ ತಲುಪುತ್ತಿವೆ. ಈ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹೋಟೆಲುಗಳು, ವಸತಿಗೃಹಗಳು, ಹೋಮ್‍ಸ್ಟೇಗಳು, ರೆಸಾರ್ಟ್‌ಗಳು ಯಾವುದೇ ನಿಯಮ, ನಿಯಂತ್ರಣ ಗಳಿಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದಿವೆ. ತೀವ್ರವಾದ ನೀರಿನ ಕೊರತೆ, ತ್ಯಾಜ್ಯ ವಿಲೇವಾರಿ, ವಾಹನಗಳ ವಿಪರೀತ ದಟ್ಟಣೆ, ವಾಯುಮಾಲಿನ್ಯದಂತಹ ಸಮಸ್ಯೆಗಳು ಕೈಮೀರಿ ಬೆಳೆಯುತ್ತಿವೆ.

ADVERTISEMENT

ಹಿಮಾಲಯದ ಸೂಕ್ಷ್ಮ ಪರ್ವತ ಪ್ರದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸು ತ್ತಿವೆ. ಇದು ಕೇವಲ ಶಿಮ್ಲಾದ ಚಿತ್ರಣವಲ್ಲ. ಡಾಲ್‌ಹೌಸಿ, ಮನಾಲಿ, ಕಸೌಲಿ, ಮಸ್ಸೂರಿ, ನೈನಿತಾಲ್, ರಾಣೀಖೇತ್, ಮಹಾಬಲೇಶ್ವರ, ದಕ್ಷಿಣದ ಕೊಡೈ ಕೆನಾಲ್, ಊಟಿ, ಮಡಿಕೇರಿಯ ಕಥೆಯೂ ಇದೇ.

ಹಿಮಾಲಯದ ಪರ್ವತಶ್ರೇಣಿಯಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳೂ ಇದಕ್ಕಿಂತ ಭಿನ್ನವಿಲ್ಲ. ಅನಾಕರ್ಷಕ ಕಂಬಳಿಹುಳು ಮನಮೋಹಕ ಬಣ್ಣಗಳ ಚಿಟ್ಟೆಯಾಗಿ ಪರಿವರ್ತಿತವಾಗುವುದು ನಿಸರ್ಗದ ಅದ್ಭುತ ಪ್ರಕ್ರಿಯೆ. ಆದರೆ ಅಂತಹ ವರ್ಣಮಯ ಚಿಟ್ಟೆ ತನ್ನೆಲ್ಲ ಸೌಂದರ್ಯವನ್ನು ಕಳೆದುಕೊಂಡು ಕಂಬಳಿಹುಳುವಾದರೆ? ನಮ್ಮ ದೇಶದ ಬಹುತೇಕ ಗಿರಿಧಾಮಗಳಲ್ಲಿ ಆಗುತ್ತಿರುವುದು ಇದೇ ವಿಪರ್ಯಾಸದ ಬೆಳವಣಿಗೆ ಎನ್ನುವುದು 60 ವರ್ಷಗಳಿಂದ ಮಸ್ಸೂರಿಯ ನಿವಾಸಿಯಾದ ಪ್ರಸಿದ್ಧ ಲೇಖಕ ರಸ್ಕಿನ್ ಬಾಂಡ್ ಮಾತುಗಳು.

ಇದೀಗ ಸುದ್ದಿಯಲ್ಲಿರುವ ಜೋಶಿಮಠವನ್ನೇ ಪರಿಗಣಿಸಿ. ಈ ಪಟ್ಟಣದ ಸ್ಥಳೀಯ ಜನಸಂಖ್ಯೆ 25,000. ಆದರೆ 2017ರಲ್ಲಿ ಜೋಶಿಮಠದಲ್ಲಿ ತಂಗಿದ್ದು, ಮುಂದೆ ಬದರಿನಾಥ, ಹೇಮಕುಂಡ್ ಸಾಹಿಬ್, ಹೂ ಕಣಿವೆ, ಸ್ಕೀಯಿಂಗ್ ತಾಣ ಔಲಿಗಳತ್ತ ಸಾಗಿದ ಪ್ರವಾಸಿಗರ ಸಂಖ್ಯೆ 2.4 ಲಕ್ಷ. 2018ರಲ್ಲಿ 4.3 ಲಕ್ಷವಾದರೆ, 2019ರಲ್ಲಿ 4.9 ಲಕ್ಷ. 2022ರಲ್ಲಿ ಸುಮಾರು 10 ಲಕ್ಷ! ಜೋಶಿಮಠಕ್ಕೆ ಈ ಪ್ರಮಾಣದ ಪ್ರವಾಸಿಗರ ಒತ್ತಡವನ್ನು ತಡೆಯುವ ಸಾಮರ್ಥ್ಯವೇ ಇಲ್ಲವೆಂಬುದು ಸಾಮಾನ್ಯ ಅಭಿಪ್ರಾಯ.

ಇನ್ನು ಒಟ್ಟಾರೆಯಾಗಿ ಉತ್ತರಾಖಂಡದ ಪರಿಸ್ಥಿತಿ ಮತ್ತಷ್ಟು ಗಾಬರಿ ಹುಟ್ಟಿಸುವಂತಿದೆ. 2022ರ ಅಂತ್ಯದ ವೇಳೆಗೆ ಉತ್ತರಾಖಂಡ ರಾಜ್ಯದ ಸೂಕ್ಷ್ಮ ಪರ್ವತ ಪ್ರದೇಶದ ತಾಣಗಳಿಗೆ ಭೇಟಿಯಿತ್ತ ಪ್ರವಾಸಿಗರ ಸಂಖ್ಯೆ ಸುಮಾರು 5 ಕೋಟಿ. ಇವರಲ್ಲದೇ ಹರಿದ್ವಾರ, ಗೋಮುಖ ಮತ್ತು ಗಂಗೋತ್ರಿಯಿಂದ ಪವಿತ್ರ ಗಂಗಾ ನದಿಯ ನೀರನ್ನು ಒಯ್ಯುವ 4 ಕೋಟಿ ಶಿವಭಕ್ತ ಕನ್ವಾರ್ ಯಾತ್ರಿಗಳು. ಚಾರ್‌ಧಾಮ್‍ಗಳಿಗೆ ಭೇಟಿಯಿತ್ತ 45 ಲಕ್ಷ ಭಕ್ತರು! ಒಟ್ಟಾರೆ ಸುಮಾರು 10 ಕೋಟಿ. ಕೇದಾರ ನಾಥದಲ್ಲಿ ಈ ಜನದಟ್ಟಣೆಯಿಂದ ಉತ್ಪನ್ನವಾದ ಘನ ತ್ಯಾಜ್ಯದ ಪ್ರಮಾಣ ಪ್ರತಿದಿನ 10,000 ಕಿಲೊಗ್ರಾಮ್‍ಗಳು. ಕೇದಾರನಾಥದಿಂದ 10 ಕಿ.ಮೀ. ದೂರದಲ್ಲಿರುವ ಗೌರಿಕುಂಡ್ ಬಳಿ, ಏಳು ಅಡಿ ಆಳದ ಗುಂಡಿಗಳನ್ನು ಅಗೆದು, ಬಿಸ್ಕತ್ತು ಮತ್ತು ಹೊಗೆಸೊಪ್ಪಿನ ಪ್ಯಾಕೆಟ್‍ಗಳ ಹೊರಹೊದಿಕೆಗಳನ್ನು ಹೂಳಲಾಗುತ್ತಿದೆ. ಅಪಾರ ಪ್ರಮಾಣದ ತ್ಯಾಜ್ಯವನ್ನು ನೇರವಾಗಿ ಗಂಗಾ, ಅಲಕಾನಂದ ನದಿಗಳಿಗೆ ಸುರಿಯಲಾಗುತ್ತಿದೆ. ಕುಲು ಮತ್ತು ಮನಾಲಿ ಮುನಿಸಿಪಲ್ ಕೌನ್ಸಿಲ್‍ಗಳು, ಪ್ರವಾಸಿ ಋತುವಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ 50,000 ಕೆ.ಜಿ.ಯಷ್ಟು ಘನತ್ಯಾಜ್ಯವನ್ನು ಬಿಯಾಸ್ ನದಿಗೆ ಸುರಿಯುತ್ತವೆ.

ದೇಶದ ಬಹುತೇಕ ಎಲ್ಲ ಗಿರಿಧಾಮಗಳ ಕಥೆಯೂ ಇದೇ. 2022ರ ಜುಲೈ ಅಂತ್ಯದ ವೇಳೆಗೆ, 60 ದಿವಸಗಳ ಅವಧಿಯಲ್ಲಿ ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ಭೇಟಿ ನೀಡಿದ್ದ ಯಾತ್ರಾರ್ಥಿಗಳ ಸಂಖ್ಯೆ 28 ಲಕ್ಷ. ಹಿಮಾಲಯದ ಆಂತರಿಕ ರಚನೆ, ಅಸ್ಥಿರತೆ, ನಿರಂತರ ಸ್ಥಿತ್ಯಂತರಗಳು ಸಾಮಾನ್ಯವಾಗಿರುವ ಪ್ರಪಂಚದ ಅತಿ ಕಿರಿಯ ವಯಸ್ಸಿನ ಪರ್ವತಶ್ರೇಣಿಯ ತಾಣಗಳಲ್ಲಿ ಈ ಸಂಖ್ಯೆಯ ಪ್ರವಾಸಿಗರಿಂದ ಆತಂಕಕ್ಕೆ ಒಳಗಾದ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಸಂಸ್ಥೆಯ ವಿಜ್ಞಾನಿಗಳು ಅಪಾಯದ ಸಾಧ್ಯತೆಗಳ ಬಗ್ಗೆ ಎಚ್ಚರಿಸಿ, ಈ ತಾಣಗಳ ಪ್ರವಾಸಿ ಧಾರಣಶಕ್ತಿಯ ಬಗ್ಗೆ ಆ ಕೂಡಲೇ ಅಧ್ಯಯನ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಮುಂದಿನ ನಾಲ್ಕೇ ತಿಂಗಳಿನಲ್ಲಿ ಜೋಶಿಮಠದ ಭೂಕುಸಿತ ಸಂಭವಿಸಿದೆ.

ಆಹಾರ, ನೀರು, ಆವಾಸ ಮುಂತಾದವುಗಳ ಆಧಾರದ ಮೇಲೆ ನಿರ್ದಿಷ್ಟ ಪ್ರದೇಶ ಅಥವಾ ಪರಿಸರ ವೊಂದು ಪೋಷಿಸಬಹುದಾದ ಜೀವಿಗಳ ಗರಿಷ್ಠ ಸಂಖ್ಯೆಯೇ ಆ ಪ್ರದೇಶದ ಧಾರಣಶಕ್ತಿ. ಈ ಪೋಷಿಸುವ ಪ್ರಕ್ರಿಯೆ ಸುಸ್ಥಿರವಾಗಿರಬೇಕು. ಅಂದರೆ ಈ ಪ್ರಕ್ರಿಯೆಯ ಯಾವ ಹಂತದಲ್ಲೂ ಪರಿಸರದ ಗುಣಮಟ್ಟ ಹಾಳಾಗಬಾರದು. ವನ್ಯಜೀವಿ ನಿರ್ವಹಣೆಯ ಭಾಗವಾಗಿ ವ್ಯಾಪಕ
ವಾಗಿ ಬಳಕೆಗೆ ಬಂದ ಈ ಪರಿಕಲ್ಪನೆಯನ್ನು, ಪ್ರವಾಸಿ ತಾಣಗಳು ಭರಿಸಬಹುದಾದ ಪ್ರವಾಸಿಗರ ಗರಿಷ್ಠ ಸಂಖ್ಯೆಯನ್ನು ನಿರ್ಧರಿಸಲು ಬಳಸುವ ಪ್ರಯತ್ನಗಳು 70- 80ರ ದಶಕಗಳಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ಪ್ರಾರಂಭವಾದವು.

2018ರಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಆಯಾ ರಾಜ್ಯಗಳ ಪರಿಸರ ಸೂಕ್ಷ್ಮ ವಲಯಗಳಲ್ಲಿ (ಇಕೊ ಸೆನ್ಸಿಟಿವ್ ಜೋನ್) ಧಾರಣಶಕ್ತಿಯ ಅಧ್ಯಯನ ಕೈಗೊಳ್ಳುವಂತೆ ಆದೇಶ ನೀಡಿತು. ನಮ್ಮ ದೇಶದಲ್ಲಿ ರಾಷ್ಟ್ರೀಯ ಉದ್ಯಾನ, ಅಭಯಾರಣ್ಯದಂತಹ ರಕ್ಷಿತ ಪ್ರದೇಶಗಳ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ. ಅನೇಕ ರಾಜ್ಯಗಳು ಈ ಆದೇಶ ಪಾಲನೆಯಲ್ಲಿ ವಿಳಂಬ ನೀತಿ ಅನುಸರಿಸಿದ್ದರಿಂದ, 2022ರ ಮಾರ್ಚ್‌ನಲ್ಲಿ ಹಸಿರು ನ್ಯಾಯಮಂಡಳಿಯು ರಾಜ್ಯಗಳಿಗೆ ಎಚ್ಚರಿಕೆ ನೀಡಿತ್ತು, ಇದೀಗ ಈ ಕೆಲಸ ಪ್ರಾರಂಭವಾಗಿದೆ. ಧಾರಣಶಕ್ತಿಯ ಅರ್ಥವ್ಯಾಪ್ತಿ ಇಂದು ವಿಸ್ತಾರಗೊಂಡಿದ್ದು, ಯಾವುದೇ ಪ್ರದೇಶದಲ್ಲಿ ನಡೆಸಬಹುದಾದ ಜೈವಿಕ, ಕೃಷಿ, ಅಭಿವೃದ್ಧಿ, ಕೈಗಾರಿಕೆ, ಪ್ರವಾಸೋದ್ಯಮದ ಗರಿಷ್ಠ ಮಿತಿಯನ್ನು ಅದು ಸೂಚಿಸುವುದರಿಂದ, ಪ್ರವಾಸಿಗರ ತೀವ್ರ ಒತ್ತಡವಿರುವ ಎಲ್ಲ ಸೂಕ್ಷ್ಮ ವಲಯಗಳಲ್ಲೂ ಅಧ್ಯಯನ ನಡೆಯಲಿದೆ.

ದೇಶದ ಆರ್ಥಿಕತೆಯ ದೃಷ್ಟಿಯಿಂದ ಪ್ರವಾ‌‌ಸೋದ್ಯಮ ಬಹಳ ಮುಖ್ಯವಾದ ವಲಯ. 2030ರ ವೇಳೆಗೆ ದೇಶದ ಜಿಡಿಪಿಗೆ ₹ 20 ಲಕ್ಷ ಕೋಟಿ ಹಾಗೂ ವಿದೇಶಿ ವಿನಿಮಯಕ್ಕೆ ₹ 4.5 ಲಕ್ಷ ಕೋಟಿ ಕೊಡುಗೆ ನೀಡುವ ಅಂದಾಜಿರುವ ಈ ವಲಯ ಸುಮಾರು 14 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ಮಿತಿಮೀರಿದ ಪ್ರವಾಸಿಗರ ಸಂಖ್ಯೆಯಿಂದ ಪ್ರವಾಸಿ ತಾಣಗಳು ಕುಸಿದು ನಾಶವಾಗದಂತೆ ಕಾಪಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಗಿರಿಧಾಮಗಳ ಧಾರಣಶಕ್ತಿಯನ್ನು ಗೊತ್ತುಪಡಿಸುವ ಅಧ್ಯಯನಗಳು ತ್ವರಿತಗತಿಯಲ್ಲಿ ನಡೆಯಬೇಕಾದ ಅಗತ್ಯವಿದೆ.

ವಿಶ್ವವಿಖ್ಯಾತ ತಾಜ್‍ಮಹಲಿಗೆ ಪ್ರತಿನಿತ್ಯ 40,000 ಪ್ರವಾಸಿಗರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಿರುವ ಭಾರತೀಯ ಪುರಾತತ್ವ ಇಲಾಖೆಯ ವಿವೇಕದ ನಿರ್ಧಾರ ಈಗ ಜಾರಿಯಲ್ಲಿದೆ. ಹಿಮಾಲಯವೂ ಸೇರಿದಂತೆ, ಪ್ರವಾಸಿಗರ ತೀವ್ರ ಒತ್ತಡವಿರುವ ಎಲ್ಲ ಗಿರಿಧಾಮಗಳಿಗೂ ಈ ರೀತಿಯ ನಿರ್ಬಂಧ ವಿಧಿಸುವುದು ಸಾಧ್ಯವಾದರೂ, ಚಾರ್‌ಧಾಮ್‍ನಂತಹ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಜಾರಿಗೆ ತರುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಪರ್ವತ ಪ್ರದೇಶಗಳ ಸೂಕ್ಷ್ಮ ಪರಿಸರ ಮತ್ತು ಸ್ಥಳೀಯ ನಿವಾಸಿಗಳ ಒಳಿತಿನ ದೃಷ್ಟಿಯಿಂದ ಅಂತಹ ಕ್ರಮ ತೀರಾ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.