ಭಾರತದಲ್ಲಿ ಕಾಂಗ್ರೆಸ್ ಪಕ್ಷವು ತನ್ನನ್ನು ಹೈಜಾಕ್ ಮಾಡಲು ತೀರಾ ಎಡಪಂಥೀಯರಿಗೆ ಅವಕಾಶ ಮಾಡಿಕೊಟ್ಟ ಬಗೆಯಲ್ಲೇ, ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಎಡಪಂಥೀಯ ಬುದ್ಧಿಜೀವಿಗಳ ಬಲೆಗೆ ಬಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡರು.
ಡೆಮಾಕ್ರಟಿಕ್ ಪಕ್ಷವು ದುಡಿಯುವ ವರ್ಗದವರ ಪರ ಎನ್ನಲಾಗಿತ್ತು. ಆದರೆ ಹಲವು ವರ್ಷಗಳಿಂದ ಅದು ಅಮೆರಿಕದ ಜನಸಾಮಾನ್ಯರ ಭಾವನೆಗಳು, ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ. ದಕ್ಷಿಣ ಅಮೆರಿಕ ಮತ್ತು ಅರಬ್ ದೇಶಗಳಿಂದ ಅಕ್ರಮ ವಲಸಿಗರು ಭಾರಿ ಸಂಖ್ಯೆಯಲ್ಲಿ ಅಮೆರಿಕವನ್ನು ಪ್ರವೇಶಿಸಿ, ಅಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿ, ಉದ್ಯೋಗ ಕಡಿತ ಎದುರಾದರೂ ಡೆಮಾಕ್ರಟಿಕ್ ಪಕ್ಷವು ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಹಮಾಸ್ ಪರವಾದ ರ‍್ಯಾಲಿಗಳಿಗೆ ಬೆಂಬಲ ನೀಡುವ ಕಾರ್ಯದಲ್ಲಿ ತೊಡಗಿತ್ತು. ಅಮೆರಿಕದ ಜನಸಾಮಾನ್ಯರ ಆರ್ಥಿಕ ಸಂಕಷ್ಟಕ್ಕಿಂತಲೂ ಹೆಚ್ಚಾಗಿ, ಅಕ್ರಮ ವಲಸಿಗರ ಸ್ಥಿತಿ ಹಾಗೂ ಅವರ ಮಾನವ ಹಕ್ಕುಗಳ ಬಗ್ಗೆ ಪಕ್ಷವು ಹೆಚ್ಚು ಚಿಂತಿತವಾಗಿದೆ ಎಂಬ ಅರ್ಥವನ್ನು ಪಕ್ಷದ ನಾಯಕರ ಹೇಳಿಕೆಗಳು ನೀಡುತ್ತಿದ್ದವು. ಅಲ್ಲಿನ ಬಹುಸಂಖ್ಯಾತರ– ಅಂದರೆ, ಬಿಳಿಯರು, ಕ್ರೈಸ್ತರು– ಭಾವನೆಗಳಿಗೆ ಬೆಲೆಯೇ ಇರಲಿಲ್ಲ. ಜನರು ಎದುರಿಸುತ್ತಿದ್ದ ಹಣದುಬ್ಬರದ ಸಮಸ್ಯೆ ಬಗ್ಗೆ ಕಮಲಾ ಅವರಿಗೆ ಅರಿವೇ ಇದ್ದಂತಿರಲಿಲ್ಲ.
ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರು ನೇರವಾಗಿ, ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ಜನರು ತಮಗೆ ಮತ ನೀಡಬೇಕು, ಆಗ ಅಪರಾಧ ಹಿನ್ನೆಲೆಯ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಸಾಧ್ಯವಾಗುತ್ತದೆ, ಮೆಕ್ಸಿಕೊ ಹಾಗೂ ಇತರ ದೇಶಗಳಿಂದ ಅಕ್ರಮ ವಲಸಿಗರು ದೇಶವನ್ನು ಪ್ರವೇಶಿಸುವುದನ್ನು ತಡೆಯಲು ಬೇಲಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಟ್ರಂಪ್ ಹೇಳಿದರು. ಅಮೆರಿಕದಲ್ಲಿ ತಯಾರಿಕೆಗೆ ಉತ್ತೇಜನ ನೀಡಲಾಗುತ್ತದೆ, ಚೀನಾದ ವಸ್ತುಗಳ ಆಮದು ತಗ್ಗಿಸಲು ಅವುಗಳ ಮೇಲೆ ತೆರಿಗೆ ಹೆಚ್ಚಿಸಲಾಗುತ್ತದೆ, ಅಮೆರಿಕದ ಅರ್ಥವ್ಯವಸ್ಥೆಗೆ ಶಕ್ತಿ ನೀಡಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷವು ಭಾರತದಲ್ಲಿ ವಿಭಜನಕಾರಿ ಶಕ್ತಿಗಳಿಗೆ ಹಾಗೂ ಅಕ್ರಮವಾಗಿ ವಲಸೆ ಬರುವ ರೊಹಿಂಗ್ಯಾ ಸಮುದಾಯದವರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡುವ ರೀತಿಯಲ್ಲಿ, ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳು ಮತ್ತು ಪಾತಕಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ವಿರೋಧಿಸುವ ರೀತಿಯಲ್ಲೇ ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷ ಕೂಡ ವರ್ತಿಸುತ್ತದೆ. ಪಾಕಿಸ್ತಾನದ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸುವ ಫಾರೂಕ್ ಅಬ್ದುಲ್ಲಾ ಅವರಂಥವರು ಕಾಂಗ್ರೆಸ್ಸಿಗೆ ಮಿತ್ರರು.
ಎಡಪಂಥದ ಬಲೆಯಲ್ಲಿ ಸಿಲುಕಿದ ಅಮೆರಿಕದ ಮಾಧ್ಯಮಗಳ ಒಂದು ದೊಡ್ಡ ವರ್ಗವು ರಿಪಬ್ಲಿಕನ್ ಪಕ್ಷ ಹಾಗೂ ಟ್ರಂಪ್ ವಿರುದ್ಧ ವಿಷಕಾರುತ್ತಿತ್ತು. ಅಧ್ಯಕ್ಷೀಯ ಚುನಾವಣೆಯ ಗತಿಯ ವಿಚಾರವಾಗಿ ಅಮೆರಿಕದ ಜನರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸಿತು. ಕಮಲಾ ಅವರು ಚುನಾವಣೆಯಲ್ಲಿ ಮುಂದಿದ್ದಾರೆ ಎಂದು ಜಗತ್ತಿನ ಇತರೆಡೆಗಳಲ್ಲಿನ ಜನ ನಂಬುವಂತೆ ಮಾಡಿದರೂ ಅಮೆರಿಕದ ಜನ ಮೋಸ ಹೋಗಲಿಲ್ಲ, ಅವರು ಇಂಥವರಿಗೆ ಪಾಠ ಕಲಿಸಲು ತೀರ್ಮಾನಿಸಿದರು.
ಕಮಲಾ ಮತ್ತು ಅವರ ತಂಡದ ಸದಸ್ಯರು ಟ್ರಂಪ್ ಅವರನ್ನು ‘ಹಿಟ್ಲರ್, ಸರ್ವಾಧಿಕಾರಿ, ಜನಾಂಗೀಯವಾದಿ, ಸ್ತ್ರೀದ್ವೇಷಿ, ನಂಬಲು ಅರ್ಹರಲ್ಲ, ಅವಲಕ್ಷಣದ ವ್ಯಕ್ತಿ, ಸಾರ್ವಜನಿಕ ಹುದ್ದೆಯನ್ನು ಹೊಂದಲು ಅನರ್ಹ’ ಎಂದೆಲ್ಲ ಕರೆದರು. ಕಮಲಾ ಪರವಾಗಿ ಮಾತನಾಡಲು ಇದ್ದ ಬಹುತೇಕರು ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಯೇಲ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಬಂದವರು.
ಇಂಥದ್ದು ಭಾರತದಲ್ಲಿಯೂ ಆಗಿದ್ದನ್ನು ಗುರುತಿಸಬಹುದು. ನಮ್ಮ ದೇಶದಲ್ಲಿ ಪ್ರತಿಷ್ಠಿತ ಎಂದು ಕರೆಸಿಕೊಂಡ ಜೆಎನ್‌ಯುನಂತಹ ವಿಶ್ವವಿದ್ಯಾಲಯಗಳು, ಸೇಂಟ್ ಸ್ಟೀಫನ್ಸ್‌ನಂತಹ ಕಾಲೇಜಿನಿಂದ ಬಂದವರು ದೇಶವನ್ನು ನಡೆಸಬೇಕಿರುವುದು ಹೇಗೆಂಬುದು ತಮಗೆ ತಿಳಿದಿದೆ ಎಂದು ಭಾವಿಸಿದ್ದಾರೆ. ತಮ್ಮ ಮಾತೇ ಅಂತಿಮವಾಗಬೇಕು ಎಂದು ಭಾವಿಸಿರುವ ಇವರು, ಮಾಧ್ಯಮಗಳ ಕಾರ್ಯಸೂಚಿ ಏನಿರಬೇಕು ಎಂಬುದನ್ನು ನಿರ್ಧರಿಸಲು ಯತ್ನಿಸುತ್ತಾರೆ. ಇವರಲ್ಲಿ ಬಹುತೇಕರು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ದ್ವೇಷಿಸುತ್ತಾರೆ. ಕಮ್ಯುನಿಸ್ಟ್ ಅಥವಾ ಎಡಪಂಥದ ಒಲವು ಇಲ್ಲದವರು ನಮ್ಮ ಪ್ರಜಾತಂತ್ರದಲ್ಲಿ ಸ್ಥಾನ ಹೊಂದಿರಬಾರದು ಎಂದು ಇವರು ನಂಬಿದ್ದಾರೆ. ಇಂಥ ಮನಃಸ್ಥಿತಿಯಿಂದ ಇವರು ಮೋದಿ ಅವರನ್ನು ಗುರಿಯಾಗಿಸಿ ಕಳೆದ ಎರಡು ದಶಕಗಳಲ್ಲಿ ಬಹಳ ಕೆಟ್ಟ ನಿಂದನೆಗಳನ್ನು ಸುರಿಸಿದ್ದಾರೆ, ಮೋದಿ ಅವರನ್ನು ರಾಜಕೀಯವಾಗಿ ‘ಮುಗಿಸಲು’ ತಮ್ಮಿಂದಾದ ಎಲ್ಲ ತಂತ್ರಗಳನ್ನೂ ಪ್ರಯೋಗಿಸಿದ್ದಾರೆ. ಆದರೆ, ಎಡಪಂಥದ ಒಲವಿರುವ ಈ ಅಲ್ಪಸಂಖ್ಯಾತರು ಆಲೋಚಿಸಿದಂತೆ ದೇಶದ ಬಹುಜನರು ಆಲೋಚಿಸುವುದಿಲ್ಲವಾದ ಕಾರಣ ಮೋದಿ ಅವರು ಈ ದಾಳಿಗಳ ನಡುವೆಯೂ ಉಳಿದುಕೊಂಡಿದ್ದಾರೆ.
ಭಾರತ ಮತ್ತು ಅಮೆರಿಕದಂತಹ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಈ ಎಡಪಂಥೀಯ ಅಲ್ಪಸಂಖ್ಯಾತರು ಹಲವು ದಶಕಗಳಿಂದ ಸಾರ್ವಜನಿಕ ಸಂವಾದಗಳಲ್ಲಿ ಯಥೋಚಿತವಲ್ಲದ ಪ್ರಮಾಣದಲ್ಲಿ ಪಾಲು ಹೊಂದಿದ್ದಾರೆ. ಜನರಿಂದ ಸಂಪೂರ್ಣವಾಗಿ ತಿರಸ್ಕೃತಗೊಂಡಿದ್ದರೂ ಅವರು ಟಿ.ವಿ. ಸ್ಟುಡಿಯೊಗಳ ಮೂಲಕ ತಮ್ಮ ‘ಜ್ಞಾನ’ವನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಉದಾಹರಣೆಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಹಾಗೂ ಸಿಪಿಎಂ ಪಕ್ಷಗಳ ಒಟ್ಟು ಮತಗಳಿಕೆ ಪ್ರಮಾಣವು ಶೇಕಡ 2.26ರಷ್ಟು ಮಾತ್ರ. ಅಂದರೆ, ಭಾರತದ ಜನರು ಇವರನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದನ್ನು ಇದು ಹೇಳುತ್ತದೆ. ಆದರೆ, ಜೆಎನ್‌ಯು, ಸೇಂಟ್ ಸ್ಟೀಫನ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಬಳಸಿಕೊಂಡು ಇವರು ಕಾರ್ಯಸೂಚಿ ಏನಿರಬೇಕು ಎಂಬುದನ್ನು ನಿರ್ಧರಿಸಲು ಯತ್ನಿಸುತ್ತಾರೆ. ಕಳೆದ 24 ವರ್ಷಗಳಲ್ಲಿ ಈ ಕಾರ್ಯಸೂಚಿಗಳಲ್ಲಿ ಒಂದು, ಮೋದಿ ಅವರ ರಾಜಕೀಯ ಬದುಕನ್ನು ನಾಶ ಮಾಡುವುದು.
ಅಮೆರಿಕದಲ್ಲಿ ಟ್ರಂಪ್ ಅವರನ್ನು ದ್ವೇಷಿಸುವ ಕೆಲವು ವಾಹಿನಿಗಳು, ಟ್ರಂಪ್ ಅವರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವಂತೆ ಅವರ ಚುನಾವಣಾ ಪ್ರಚಾರದ ಕೆಲವು ದೃಶ್ಯಗಳನ್ನು ಮತ್ತೆ ಮತ್ತೆ ತೋರಿಸುತ್ತಿದ್ದವು. ಇದು ಟ್ರಂಪ್ ಅವರ ವಿರುದ್ಧದ ಪ್ರಚಾರಾಂದೋಲನ ಆಗಿತ್ತು. ಈ ವಾಹಿನಿಗಳ ಪ್ರಕಾರ, ಕಮಲಾ ಅವರು ತಪ್ಪು ಮಾಡುವವರೇ ಅಲ್ಲ. ಕಮಲಾ ಅವರು ಲೋಪರಹಿತರು.
ನವೆಂಬರ್ 5ರ ಮತದಾನ ನಡೆಯಬೇಕಿದ್ದ ಸಂದರ್ಭದಲ್ಲಿ ಐಯೋವಾಕ್ಕೆ ಸಂಬಂಧಿಸಿದ ಚುನಾವಣಾ ಸಮೀಕ್ಷೆಯನ್ನು ಪ್ರಕಟಿಸಿ, ಜನರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸಿದ್ದು ಬಹಳ ಆಘಾತಕಾರಿಯಾಗಿತ್ತು. ಆ ರಾಜ್ಯದಲ್ಲಿ ಕಮಲಾ ಅವರು ಟ್ರಂಪ್ ಅವರಿಗಿಂತ ಮುಂದಿದ್ದಾರೆ ಎಂದು ವಾಹಿನಿಯೊಂದರಲ್ಲಿ ತೋರಿಸಲಾಯಿತು. ಇಲ್ಲಿ ಹಿಂದಿನ ಎರಡು ಚುನಾವಣೆಗಳಲ್ಲಿ ಟ್ರಂಪ್ ಅವರಿಗೆ ಹೆಚ್ಚು ಮತಗಳು ಬಂದಿದ್ದವು. ಇದು ರಿಪಬ್ಲಿಕನ್ ಪಕ್ಷದ ಭದ್ರ ನೆಲೆ ಇರುವ ರಾಜ್ಯ ಎಂದು ಪರಿಗಣಿತವಾಗಿದ್ದರೂ ಕುಚೋದ್ಯ ಮಾಡುವ ಇವರ ಯತ್ನವು ಟ್ರಂಪ್ ಅವರು ನಿಜಕ್ಕೂ ತೊಂದರೆಗೆ ಸಿಲುಕಿದ್ದಾರೆ ಎಂದು ಮತದಾರರಿಗೆ ಹೇಳುವುದಾಗಿತ್ತು.
ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್, ಯೇಲ್‌ನಿಂದ ಬಂದ ಎಡಪಂಥೀಯರು ನಡೆಸಿದ ಕುಚೋದ್ಯವನ್ನು ಗುರುತಿಸಿದ ಅಮೆರಿಕದ ಜನರು ಕಮಲಾ ಅವರನ್ನು ತಿರಸ್ಕರಿಸಿದರು. ಇದರಲ್ಲಿ ಭಾರತದ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠವಿದೆ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಸೂಚಿ ಏನಿರಬೇಕು ಎಂಬುದನ್ನು ನಿರ್ಧರಿಸಲು ಎಡಪಂಥೀಯರಿಗೆ ಅವಕಾಶ ಕೊಡುವಷ್ಟೂ ಕಾಲ, ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿರುವಷ್ಟೂ ಕಾಲ, ಬಹುಸಂಖ್ಯಾತರ ವಿರುದ್ಧವಾಗಿ ನಿಲುವು ತೆಗೆದುಕೊಳ್ಳುವಷ್ಟೂ ಕಾಲ, ಅದು 2024ರಲ್ಲಿ ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಎದುರಾದ ಸ್ಥಿತಿಯನ್ನೇ ಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.