ಹಲವು ರಾಜ್ಯಗಳಲ್ಲಿ ಬಿಜೆಪಿಯು ಅಧಿಕಾರದ ಗದ್ದುಗೆಗೆ ಏರಿರುವ ಪ್ರಸಕ್ತ ಸಂದರ್ಭದಲ್ಲಿ, ರಾಜ್ಯಗಳ ಮಟ್ಟದಲ್ಲಿ ಪಕ್ಷದ ಹಲವು ನಾಯಕರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗಾಗಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ. ಈ ಕೂಗಿಗೆ ಇತ್ತೀಚೆಗೆ ದನಿ ಸೇರಿಸಿರುವವರು, ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ಸೂತ್ರ ಹಿಡಿದಿರುವ ಪುಷ್ಕರ್ ಸಿಂಗ್ ಧಾಮಿ. ಈ ವಿಚಾರವನ್ನು ಪರಿಶೀಲಿಸಿ ಕರಡು ಸಂಹಿತೆ ರೂಪಿಸುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲು ಧಾಮಿ ಕಳೆದ ವಾರ ನಡೆದ ತಮ್ಮ ಸಂಪುಟದ ಮೊದಲ ಸಭೆಯಲ್ಲಿ ನಿರ್ಧರಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಈ ಕುರಿತಾದ ಭರವಸೆಯನ್ನು ಅವರು ನೀಡಿದ್ದರು. ಈಗ, ಕಾನೂನು ರಚನೆಯ ಯತ್ನಗಳನ್ನು ಆರಂಭಿಸಿರುವ ಉತ್ತರಾಖಂಡ, ಬೇರೆ ರಾಜ್ಯಗಳಿಗೂ ಈ ನೆಲೆಯಲ್ಲಿ ಪ್ರೇರಣೆ ನೀಡಿದೆ.
ಸಂವಿಧಾನದ 44ನೇ ವಿಧಿಯು ಏಕರೂಪ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸಿ, ‘ಭಾರತದಾದ್ಯಂತ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ದೊರಕಿಸಿಕೊಡಲು ಪ್ರಭುತ್ವವು ಯತ್ನಿಸುತ್ತದೆ’ ಎಂದು ಹೇಳುತ್ತದೆ. ರಾಜ್ಯ ನಿರ್ದೇಶಕ ತತ್ವಗಳನ್ನು ನಿರ್ವಹಿಸುವ ಅಧ್ಯಾಯದಲ್ಲಿ ಇದು ಇದೆ. ಹೀಗಾಗಿ, ಇದನ್ನು ಸಲಹೆಯ ರೂಪದಲ್ಲಿ ಭಾವಿಸಲಾಗುತ್ತದೆ. ಆದರೆ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಹಲವು ವಿಷಯಗಳು ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಗಡಿಗಳನ್ನು ವಿವರಿಸುವ ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯಲ್ಲಿರುವ 5ನೇ ವಿಷಯದಲ್ಲಿವೆ. ಈ ಪಟ್ಟಿಯಲ್ಲಿರುವ ವಿಚಾರಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯಗಳೆರಡೂ ಕಾನೂನುಗಳನ್ನು ರೂಪಿಸಬಹುದು.
1937ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಳವಡಿಕೆಯ ಕಾಯ್ದೆಯ ಅಡಿ ವಿವಾಹ, ಜೀವನಾಂಶ, ವರದಕ್ಷಿಣೆ, ವಿಚ್ಛೇದನ ಹಾಗೂ ಉತ್ತರಾಧಿಕಾರದಂತಹ ವಿಚಾರಗಳು ಬರುತ್ತವೆ. ಇಂತಹ ಹಲವು ಅಂಶಗಳು ಸಮವರ್ತಿ ಪಟ್ಟಿಯ 5ನೇ ವಿಷಯದಡಿ ಬರುತ್ತವೆ. ಹಾಗೆಯೇ, ಇಂತಹ ಕಾನೂನನ್ನು ರಚಿಸಲೇಬೇಕೆಂದರೆ ಉತ್ತರಾಖಂಡವು ಅದನ್ನು ರೂಪಿಸಿದ ಮೊದಲ ರಾಜ್ಯವೇನೂ ಆಗದು. ವಾಸ್ತವವಾಗಿ, ಪೋರ್ಚುಗೀಸ್ ಆಡಳಿತ ಕಾಲದಿಂದಲೂ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಇರುವ ಏಕೈಕ ರಾಜ್ಯವೆಂದರೆ ಸದ್ಯಕ್ಕೆ ಗೋವಾ.
ಆದರೆ, ಏಕರೂಪ ನಾಗರಿಕ ಸಂಹಿತೆ ಪರಿಕಲ್ಪನೆಯು ಮುಸ್ಲಿಂ ಸಮುದಾಯದಿಂದ ಸತತವಾಗಿ ಪ್ರತಿರೋಧವನ್ನು ಎದುರಿಸಿದೆ. ಈ ಪರಿಕಲ್ಪನೆಗೆ ವಿರುದ್ಧವಾಗಿ ಇರುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಳೆದ ನವೆಂಬರ್‌ನಲ್ಲಿ ಘೋಷಿಸಿತ್ತು. ಅಲ್ಲದೆ, ಭಾರತದಂತಹ ವಿಸ್ತಾರವಾದ, ಬಹು ಧರ್ಮಗಳ ರಾಷ್ಟ್ರಕ್ಕೆ ‘ಇದು ಸೂಕ್ತವಲ್ಲ ಅಥವಾ ಉಪಯುಕ್ತವೂ ಅಲ್ಲ’ ಎಂದೂ ಅದು ಹೇಳಿತ್ತು.
ಇತ್ತೀಚಿನ ವರ್ಷಗಳಲ್ಲಿ ಏಕರೂಪ ನಾಗರಿಕ ಸಂಹಿತೆಗೆ ವಿರುದ್ಧವಾಗಿ ಮುಸ್ಲಿಂ ಸಂಘಟನೆಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು, ಸಂವಿಧಾನ ರಚನಾ ಸಭೆಯಲ್ಲಿ 1948ರ ನವೆಂಬರ್ 23ರಂದು 44ನೇ ವಿಧಿ ಚರ್ಚೆಗೆ ಬಂದಾಗ ಮುಸ್ಲಿಂ ಸದಸ್ಯರು ವ್ಯಕ್ತಪಡಿಸಿದ್ದಂತಹ
ಅಭಿಪ್ರಾಯಗಳನ್ನೇ ಹೋಲುವಂತಿವೆ. ಈ ವಿಧಿಯು ಕೇವಲ ಸಲಹಾ ರೂಪದಲ್ಲಿದ್ದರೂ ಅವರೆಲ್ಲರೂ ಈ ವಿಧಿಗೆ ವಿರೋಧ ತೋರಿದ್ದರು. ಭಾರತ ಸ್ವಾತಂತ್ರ್ಯ ಗಳಿಸಿಕೊಂಡು 75 ವರ್ಷಗಳಾಗಿ ಏನೆಲ್ಲಾ ಆಗಿದ್ದರೂ ಈ ವಿಚಾರದಲ್ಲಿ ಕೆಲವು ಮುಸ್ಲಿಂ ಮುಖಂಡರ ದೃಷ್ಟಿಕೋನ ಬದಲಾಗದೇ ಉಳಿದಿದೆ ಎಂಬುದು ಆ ಚರ್ಚೆಗಳನ್ನು ನೋಡಿದಾಗ ಗೊತ್ತಾಗುತ್ತದೆ.
ಸಂವಿಧಾನ ರಚನಾ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದವರಲ್ಲಿ ಮೊಹಮ್ಮದ್ ಇಸ್ಮಾಯಿಲ್ ಸಾಹಿಬ್, ನಾಝಿರುದ್ದೀನ್ ಅಹ್ಮದ್, ಮಹಬೂಬ್ ಅಲಿ ಬೇಗ್ ಸಾಹಿಬ್ ಬಹಾದ್ದೂರ್, ಪೋಕರ್ ಸಾಹಿಬ್ ಬಹಾದ್ದೂರ್ ಹಾಗೂ ಹುಸೇನ್ ಇಮಾಮ್ ಸೇರಿದ್ದಾರೆ.
ಜನರ ನಾಗರಿಕ ಕಾನೂನುಗಳನ್ನು ಸೈನಿಕ ಶಿಸ್ತಿಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಇಸ್ಮಾಯಿಲ್ ಸಾಹಿಬ್ ವಾದಿಸಿದ್ದರು. ಇಂತಹದ್ದೇ ವಾದ ಮಂಡಿಸುವ ರೀತಿಯಲ್ಲಿ ವಿವಾಹ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನುಗಳು ಧಾರ್ಮಿಕ ಕಟ್ಟಳೆಯ ಭಾಗ ಎಂದು ಹೇಳಿ ನಾಝಿರುದ್ದೀನ್ ಅಹ್ಮದ್ ಅವರು ತಿದ್ದುಪಡಿ ಮಂಡಿಸಿದ್ದರು. 1,350 ವರ್ಷಗಳಿಂದಲೂ ಮುಸ್ಲಿಮರು ವೈಯಕ್ತಿಕ ಕಾನೂನು ಅನುಸರಿಸಿಕೊಂಡು ಬಂದಿದ್ದು ಎಲ್ಲ ಅಧಿಕಾರ ವರ್ಗಗಳೂ ಮಾನ್ಯತೆ ನೀಡಿದ್ದವು ಎಂದು ಮಹಬೂಬ್ ಅಲಿ ಬೇಗ್ ಸಾಹಿಬ್ ಬಹಾದ್ದೂರ್
ಪ್ರತಿಪಾದಿಸಿದ್ದರು.
ಮುಸ್ಲಿಂ ಸದಸ್ಯರ ವಾದಗಳಿಗೆ ಕೆ.ಎಂ.ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಹಾಗೂ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರತಿವಾದಗಳನ್ನು ಮಂಡಿಸಿದ್ದರು. ಹಲವು ರಾಷ್ಟ್ರಗಳು ಸಮಾನ ನಾಗರಿಕ ಸಂಹಿತೆಗಳನ್ನು ಹೊಂದಿವೆ ಎಂದು ಹೇಳಿ, ಈ ವಿಧಿಯ ವಿರುದ್ಧ ಮಂಡಿಸಲಾದ ವಾದಗಳಿಗೆ ಕೆ.ಎಂ.ಮುನ್ಷಿ ಅಸಮ್ಮತಿ ಸೂಚಿಸಿದ್ದರು. ಅಭಿವೃದ್ಧಿ ಹೊಂದಿದ ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳಿಗೆ ಮಾನ್ಯತೆ ದೊರೆತಿಲ್ಲ ಎಂದು ಅವರು ಹೇಳಿದ್ದರು. ಟರ್ಕಿ ಹಾಗೂ ಈಜಿಪ್ಟ್ ಉದಾಹರಣೆಗಳನ್ನು ನೀಡಿದ್ದ ಅವರು, ಈ ರಾಷ್ಟ್ರಗಳಲ್ಲಿನ ಯಾವುದೇ ಅಲ್ಪಸಂಖ್ಯಾತರಿಗೂ ತಮ್ಮದೇ ವೈಯಕ್ತಿಕ ಕಾನೂನು ಹೊಂದಲು ಅವಕಾಶವಿಲ್ಲ ಎಂದಿದ್ದರು.
ಅಲ್ಲದೆ, ಶರಿಯತ್ ಕಾನೂನು 1937ರಲ್ಲಿ ಶಾಸನಸಭೆಯಲ್ಲಿ ಅನುಮೋದನೆಗೊಂಡಾಗ, ಖೋಜಾ ಹಾಗೂ ಕುಚ್ಚಿ ಮೆಮನ್ ಅವರು ಅದಕ್ಕೆ ಒಳಪಡಲು ಇಷ್ಟಪಡದಿದ್ದರೂ ಇದು ಎಲ್ಲಾ ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದು ಬಲವಂತದಿಂದ ಹೇರುವ ರೀತಿಯಲ್ಲಿ ಮುಸ್ಲಿಂ ಸದಸ್ಯರು ಹೇಳಿದ್ದರು. ಆಗ ಅಲ್ಪಸಂಖ್ಯಾತರ ಹಕ್ಕುಗಳು ಎಲ್ಲಿದ್ದವು?
ಇಡೀ ಭಾರತವನ್ನು ಒಟ್ಟಾಗಿ ಏಕರಾಷ್ಟ್ರವಾಗಿ ಒಂದುಗೂಡಿಸಲು ಭಾರತದ ನಾಯಕರು ಬಯಸಿದ್ದರು ಎಂದು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಹೇಳಿದ್ದರು. ಈ ಪ್ರಕ್ರಿಯೆಗೆ ನಾವು ಸಹಾಯ ಮಾಡುತ್ತಿದ್ದೇವೆಯೇ ಅಥವಾ ಈ ದೇಶವು ಸದಾ ಪ್ರತಿಸ್ಪರ್ಧಿಗಳಾಗಿರುವ ಸಮುದಾಯಗಳ ಸರಣಿಯಾಗಿಯೇ ಉಳಿಯುತ್ತದೆಯೇ? ನಮ್ಮ ಮುಂದಿರುವ ಪ್ರಶ್ನೆ ಇದು.
ಮುಸ್ಲಿಂ ಸದಸ್ಯರು ಮಂಡಿಸಿದ ವಾದಗಳ ಬಗ್ಗೆ ತಮಗೆ ‘ತುಂಬಾ ಅಚ್ಚರಿ’ ಆಗಿರುವುದಾಗಿ ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಏಕೆಂದರೆ, ಇಡೀ ರಾಷ್ಟ್ರಕ್ಕೆ ಅನ್ವಯಿಸುವಂತಹ ನಾಗರಿಕ ಸಂಹಿತೆ ವಾಸ್ತವಿಕವಾಗಿ ಇದೆ ಎಂಬುದನ್ನು ಸೂಚಿಸುವ ರೀತಿಯಲ್ಲಿ ಅಷ್ಟರಲ್ಲಾಗಲೇ ಏಕರೂಪದ ಸಮಗ್ರ ಅಪರಾಧ ಸಂಹಿತೆ ಇತ್ತು. ಆಸ್ತಿ ವರ್ಗಾವಣೆ ಕಾಯ್ದೆ, ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ ಮತ್ತಿತರ ಕಾನೂನುಗಳೂ ಇದ್ದವು.
ಮುಸ್ಲಿಂ ವೈಯಕ್ತಿಕ ಕಾನೂನು ಬದಲಿಸಲಾಗದಂತಹದ್ದು, ಭಾರತದಾದ್ಯಂತ ಏಕರೂಪವಾಗಿದೆ ಹಾಗೂ ಪುರಾತನ ಕಾಲದಿಂದಲೂ ಎಲ್ಲ ಮುಸ್ಲಿಮರೂ ಅನುಸರಿಸುತ್ತಿರುವಂತಹ ಕಾನೂನು ಇದು ಎಂಬಂತಹ ಮುಸ್ಲಿಂ ಸದಸ್ಯರ ವಾದಕ್ಕೆ ಡಾ. ಅಂಬೇಡ್ಕರ್
ಸವಾಲೊಡ್ಡಿದ್ದರು. ಅಲ್ಲದೆ, 1935ರವರೆಗೂ ಉತ್ತರಾಧಿಕಾರದ ವಿಚಾರದಲ್ಲಿ ವಾಯವ್ಯ ಗಡಿಯ ಪ್ರಾಂತ್ಯ ಹಾಗೂ ಇತರ ಪ್ರಾಂತ್ಯಗಳು ಹಿಂದೂ ಕಾನೂನು ಅನುಸರಿಸುತ್ತಿದ್ದವು ಎಂದೂ ಹೇಳಿದ್ದರು. ಉತ್ತರ ಮಲಬಾರ್‌ನಲ್ಲಿ, ಮಾತೃ ಪ್ರಧಾನ ವ್ಯವಸ್ಥೆಯಾದ
ಮಾರುಮಕ್ಕಾತಾಯಮ್ ಕಾನೂನು, ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತಿತ್ತು. ಸಮಾನ ನಾಗರಿಕ ಸಂಹಿತೆಯನ್ನು ರೂಪಿಸುವುದಕ್ಕಾಗಿ ಹಿಂದೂ ಕಾನೂನಿನ ಕೆಲವು ಭಾಗಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂಬಂಥ ಮಾತುಗಳ ಮೂಲಕ ತಮ್ಮ ವಾದವನ್ನು ಡಾ. ಅಂಬೇಡ್ಕರ್ ಮುಗಿಸಿದ್ದರು.
ಆದರೆ, ನಾಝಿರುದ್ದೀನ್ ಅಹ್ಮದ್ ಹಾಗೂ ಹುಸೇನ್ ಇಮಾಮ್ ಎಂಬ ಇಬ್ಬರು ಮುಸ್ಲಿಂ ಸದಸ್ಯರು, ‘ನಂತರ ಕ್ರಮೇಣ’ ಸಮಾನ ನಾಗರಿಕ ಸಂಹಿತೆಯನ್ನು ಭಾರತ ಒಪ್ಪಿಕೊಳ್ಳಬಹುದೇನೋ ಎಂದು ಭಾವಿಸಿದ್ದರು.
ಆದರೆ ಈಗ 75 ವರ್ಷಗಳೆಂಬುದು ದೀರ್ಘಾವಧಿಯಲ್ಲವೇ ಎಂಬುದು ಪ್ರಶ್ನೆ. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ಎಚ್ಚರಿಕೆ ನೀಡಿದಂತೆ, ವಿಭಿನ್ನತೆಗಳನ್ನೇ ನಿರಂತರವಾಗಿ ಜಪಿಸುತ್ತಿದ್ದರೆ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನತೆ ಹಾಗೂ ಭ್ರಾತೃತ್ವದಂತಹ ಪರಿಕಲ್ಪನೆಗಳು ರಾಷ್ಟ್ರದೊಳಗೆ ಏಕರೂಪವಾಗಿ ಬೆಳೆಯುವ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದೇ?
ಎ.ಸೂರ್ಯಪ್ರಕಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.