‘ವಕ್ಫ್ ತಿದ್ದುಪಡಿ ಮಸೂದೆ– 2024’ ಸಂಸತ್ತಿನಲ್ಲಿ ಮಂಡನೆಯಾಗಿದೆ. ಇದು ನಿರೀಕ್ಷೆಯಂತೆಯೇ ತೀವ್ರ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು (ಎನ್‌ಡಿಎ) ವಿರೋಧಿಸುವ ರಾಜಕೀಯ ಪಕ್ಷಗಳ ಮುಸ್ಲಿಂ ಹಾಗೂ ಮುಸ್ಲಿಮೇತರ ರಾಜಕಾರಣಿಗಳು ಈ ಮಸೂದೆಯಲ್ಲಿನ ತಿದ್ದುಪಡಿಗಳನ್ನು ವಿರೋಧಿಸಿದ್ದಾರೆ. ಸರ್ಕಾರದ ಭಾಗವಾಗಿರುವವರು ಬದಲಾವಣೆಗಳನ್ನು ಸ್ವಾಗತಿಸಿದ್ದಾರೆ.
ಮಸೂದೆಗೆ ವಿವಿಧ ರಾಜಕೀಯ ಪಕ್ಷಗಳಿಂದ ಆರಂಭದಲ್ಲಿ ಬಂದಿರುವ ಪ್ರತಿಕ್ರಿಯೆಗಳು ವಿಷಯದ ಬಗ್ಗೆ ಬೆಳಕು ಚೆಲ್ಲುವುದಕ್ಕಿಂತಲೂ, ವಿಷಯದ ಸುತ್ತ ಕಾವು ಹೆಚ್ಚಿಸುವ ಕೆಲಸ ಮಾಡಿವೆ. ಏಕೆಂದರೆ ಮೊದಲಿಗೆ ಬರುವ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಹೆಚ್ಚಿನ ಆಲೋಚನೆ ಇಲ್ಲದೆ ಬರುವಂಥವು. ಭೀತಿ ಹಾಗೂ ಪೂರ್ವಗ್ರಹಗಳ ಪರಿಣಾಮವಾಗಿ ಅಂತಹ ಪ್ರತಿಕ್ರಿಯೆಗಳು ಬರುತ್ತವೆ; ಅವು ತರ್ಕಬದ್ಧವಾದ ಅಭಿಪ್ರಾಯದ ಪರಿಣಾಮವಾಗಿ ಬರುವಂಥವಲ್ಲ. ಹೀಗಾಗಿ, ಮಸೂದೆಯನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ ನಡೆ. ಇದರಿಂದಾಗಿ ಎಲ್ಲ ಪಕ್ಷಗಳಿಗೂ ಮಸೂದೆಯನ್ನು ಪರಿಶೀಲಿಸಲು ಹಾಗೂ ಹೊಟ್ಟು ಮತ್ತು ಗಟ್ಟಿ ಕಾಳನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತದೆ.
ವಕ್ಫ್ ಕಾಯ್ದೆ–1995ರ ಅಂಶಗಳನ್ನು ಸಂವಿಧಾನದ ಮೂಲ ಆಶಯಗಳೊಂದಿಗೆ ಸರಿಹೊಂದುವಂತೆ ಮಾಡುವುದು, ದೇಶದಲ್ಲಿ ಮುಸ್ಲಿಮರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಒಳಗೊಳ್ಳುವುದು ಹಾಗೂ ರಾಜ್ಯಸಭೆಯ ಉಪ ಸಭಾಪತಿಯಾಗಿದ್ದ ಕೆ. ರೆಹಮಾನ್ ಖಾನ್ ನೇತೃತ್ವದ ಸಂಸತ್ ಸಮಿತಿಯು ಹೇಳಿದ್ದ ಕೆಲವು ಮಾತುಗಳನ್ನು ಒಳಗೊಳ್ಳುವುದು ಸರ್ಕಾರದ ಉದ್ದೇಶ ಎಂಬುದು ವಕ್ಫ್ ಕಾಯ್ದೆಯನ್ನು ಹಾಗೂ ಪ್ರಸ್ತಾವಿತ ತಿದ್ದುಪಡಿಗಳನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ.
ವಕ್ಫ್ ಕಾಯ್ದೆಯನ್ನು ಇನ್ನಷ್ಟು ವಿಸ್ತರಿಸಿ, ಅದು ಮುಸ್ಲಿಮರಲ್ಲಿನ ಇತರ ಗುಂಪುಗಳಿಗೂ ಅನ್ವಯವಾಗುವಂತೆ ಮಾಡುವುದು ತಿದ್ದುಪಡಿಗಳಲ್ಲಿನ ಪ್ರಮುಖವಾದ ಒಂದು ಅಂಶ. ಶಿಯಾ ಹಾಗೂ ಸುನ್ನಿ ಸಮುದಾಯಗಳ ಬಗ್ಗೆ ಮಾತ್ರ ಉಲ್ಲೇಖವಿರುವ, ಈ ಕಾಯ್ದೆಯ ಸೆಕ್ಷನ್ 5ಕ್ಕೆ ತಿದ್ದುಪಡಿ ತಂದು, ಆಗಾಖಾನಿ, ಬೊಹ್ರಾ ವಕ್ಫ್‌ಗಳನ್ನೂ ಈ ಕಾನೂನು ಒಳಗೊಳ್ಳುವಂತೆ ಮಾಡುವುದು, ಬೊಹ್ರಾ ಹಾಗೂ ಆಗಾಖಾನಿ ಸಮುದಾಯಗಳಿಗೆ ಪ್ರತ್ಯೇಕ ವಕ್ಫ್ ಮಂಡಳಿ ರಚಿಸಲು ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶ. ಶಿಯಾ, ಸುನ್ನಿ, ಬೊಹ್ರಾ, ಆಗಾಖಾನಿ ಮತ್ತು ಮುಸ್ಲಿಮರಲ್ಲಿನ ಇತರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಪ್ರಸ್ತಾವ ಕೂಡ ತಿದ್ದುಪಡಿಯಲ್ಲಿ ಇದೆ. ಇಸ್ಲಾಂನಲ್ಲಿನ ವಿಭಿನ್ನ ಪಂಗಡಗಳ ನಡುವಿನ ತಾರತಮ್ಯವನ್ನು ಕೊನೆಗೊಳಿಸುವ ಉದ್ದೇಶದ ಇವು ಬಹಳ ಮುಖ್ಯ. ಇವು ಸಮಾನತೆಯನ್ನು ಹೇಳುವ ಸಂವಿಧಾನದ 14ನೇ ವಿಧಿ, ತಾರತಮ್ಯವನ್ನು ನಿಷೇಧಿಸುವ 15ನೇ ವಿಧಿಗೆ ಅನುಗುಣವಾಗಿವೆ.
ತಿದ್ದುಪಡಿ ಮಸೂದೆಯಲ್ಲಿನ ಕೆಲವು ಪ್ರಮುಖ ಅಂಶಗಳು ಮಹಿಳೆಯರ ಸಬಲೀಕರಣದ ಉದ್ದೇಶ ಹೊಂದಿವೆ. ಉದಾಹರಣೆಗೆ, ಕೇಂದ್ರ ಹಾಗೂ ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶ ಇದೆ. ಅಲ್ಲದೆ, ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಮೂಲಕ ಮಹಿಳೆಯರಿಗೆ ವಂಶಪಾರಂಪರ್ಯವಾಗಿ ಬರಬೇಕಿರುವ ಆಸ್ತಿಯನ್ನು ನಿರಾಕರಿಸುವ ಕೆಲಸವನ್ನು ತಡೆಯುವ ಉದ್ದೇಶವನ್ನೂ ಇದು ಹೊಂದಿದೆ. ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಹಾಗೂ ಉದಾರವಾದಿ ದೇಶದ ಯಾವುದೇ ಪ್ರಜೆ ಇಂತಹ ಪ್ರಸ್ತಾವಗಳನ್ನು ವಿರೋಧಿಸುವುದು ಹೇಗೆ?
ದಾಖಲೆಗಳನ್ನು ನಿರ್ವಹಿಸುವ ಪ್ರಕ್ರಿಯೆಯನ್ನು ಆಧುನೀಕರಣಗೊಳಿಸುವ, ಕೇಂದ್ರೀಕೃತ ದತ್ತಾಂಶದ ಮೂಲಕ ವಕ್ಫ್ ಆಸ್ತಿಗಳ ನೋಂದಣಿಯನ್ನು ಸುವ್ಯವಸ್ಥಿತವಾಗಿಸುವ, ಮ್ಯುಟೇಷನ್‌ಗೆ ವಿಸ್ತೃತವಾದ ಪ್ರಕ್ರಿಯೆಯನ್ನು ಕಂದಾಯ ಕಾನೂನುಗಳಿಗೆ ಅನುಗುಣವಾಗಿ ರೂಪಿಸುವ ಉದ್ದೇಶ ಕೂಡ ಇದಕ್ಕೆ ಇದೆ.
‘ಪರಿಸೀಮಾ’ ಕಾಯ್ದೆಯ (ಲಿಮಿಟೇಷನ್ ಆ್ಯಕ್ಟ್) ಅಂಶಗಳು ವಕ್ಫ್ ಕಾಯ್ದೆ– 1995ಕ್ಕೆ ಅನ್ವಯವಾಗುವುದಿಲ್ಲ. ಅಂದರೆ, ಸಿವಿಲ್ ವಿಚಾರಗಳಲ್ಲಿ ದಾವೆ ಹೂಡುವುದಕ್ಕೆ ಇರುವ ಕಾಲಮಿತಿಯು ವಕ್ಫ್ ಆಸ್ತಿಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಈ ಅಂಶವನ್ನು ತೆಗೆಯಬೇಕಾಗುತ್ತದೆ.
ಭಾರತದಲ್ಲಿನ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯು ವಕ್ಫ್‌ಗಳು ಹಾಗೂ ವಕ್ಫ್ ಕಾಯ್ದೆ–1995ರ ಬಗ್ಗೆಯೂ ಪರಿಶೀಲನೆ ನಡೆಸಿದೆ. ಮುಸ್ಲಿಂ ಸಮುದಾಯದ ಹಿರಿಯರಾದ ಸಯೀದ್ ಹಮೀದ್, ಎಂ.ಎ. ಬಸಿತ್, ಅಖ್ತರ್ ಮಜೀದ್ ಮತ್ತು ಅಬುಸಾಲೆ ಶರೀಫ್ ಅವರೂ ಈ ಸಮಿತಿಯ ಸದಸ್ಯರಾಗಿದ್ದರು. ಶರೀಫ್ ಅವರು ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದರು.
‘ಬಹಳ ಆಳಕ್ಕೆ ತಲುಪಿರುವ ಬೇನೆಯೊಂದನ್ನು, ವಕ್ಫ್ ಆಸ್ತಿಗಳನ್ನು ವ್ಯಕ್ತಿಗಳು ಹಾಗೂ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು’ ವಕ್ಫ್‌ಗಳ ಕುರಿತ ಪರಿಶೀಲನೆಯು ತೆರೆದಿಟ್ಟಿದೆ ಎಂದು ಸಮಿತಿಯು ಹೇಳಿದೆ. ಅಲ್ಲದೆ, ‘ಸಂಘಟನಾತ್ಮಕವಾದ, ನಿರ್ವಹಣೆಗೆ ಸಂಬಂಧಿಸಿದ ಹಾಗೂ ಕಾನೂನಿಗೆ ಸಂಬಂಧಿಸಿದ ಹಲವು ಅಡ್ಡಿಗಳ ಕಾರಣದಿಂದಾಗಿ ಇಂತಹ ಪರಿಸ್ಥಿತಿ ಉಂಟಾಗಿದೆ’ ಎಂಬುದನ್ನು ಕೂಡ ಈ ಪರಿಶೀಲನೆಯು ತೆರೆದಿಟ್ಟಿದೆ ಎಂದು ಸಮಿತಿ ಹೇಳಿತ್ತು.
ಈ ಕಾರಣಗಳಿಂದಾಗಿ, ‘ಲೋಪಗಳನ್ನು ಸರಿಪಡಿಸುವ, ವಕ್ಫ್ ಆಸ್ತಿಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಕ್ರಮಗಳು ಸರ್ಕಾರಗಳ ಕಡೆಯಿಂದ ಹಾಗೂ ಕಾನೂನು ವ್ಯವಸ್ಥೆಯ ಕಡೆಯಿಂದ ಆಗಬೇಕಿದೆ’ ಎಂದು ಅದು ಹೇಳಿತ್ತು. ಹಾಗೆಯೇ, ಲಿಂಗ ಸಮಾನತೆಯನ್ನು ಸಾಧ್ಯವಾಗಿಸಲು ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಸಮಿತಿಯು ಬಲವಾದ ಆಗ್ರಹ ಮಂಡಿಸಿತ್ತು. ಕೇಂದ್ರ ವಕ್ಫ್ ಮಂಡಳಿ ಹಾಗೂ ರಾಜ್ಯ ವಕ್ಫ್ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕಿರುವುದು ಬಹಳ ಮುಖ್ಯವಾದುದು ಎಂದು ಅದು ಹೇಳಿತ್ತು. ಇದರಿಂದ ಲಿಂಗ ಸಮಾನತೆ ಸಾಧ್ಯವಾಗುವುದಷ್ಟೇ ಅಲ್ಲದೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಅಭಿವೃದ್ಧಿ ಕ್ರಮಗಳ ಪ್ರಯೋಜನ ನೇರವಾಗಿ ಸಿಗುವಂತೆ ಆಗುತ್ತದೆ ಎಂದೂ ಹೇಳಿತ್ತು.
ಆದರೆ, ಈ ಸಮಿತಿಯನ್ನು ನೇಮಕ ಮಾಡಿದ್ದ ಹಾಗೂ ಸಮಿತಿಯು ಕಂಡುಕೊಂಡ ಅಂಶಗಳ ಬಗ್ಗೆ ನಿರಂತರವಾಗಿ ಟಾಂಟಾಂ ಮಾಡಿಕೊಂಡು ತಿರುಗಾಡಿದ್ದ ಕಾಂಗ್ರೆಸ್ ಪಕ್ಷವು ಈಗ, ಈ ಸಮಿತಿಯ ಶಿಫಾರಸುಗಳನ್ನೇ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವುದು ವಿಚಿತ್ರ ಎಂದು ಅನಿಸುತ್ತಿಲ್ಲವೇ?
ರಾಜೇಂದ್ರ ಸಾಚಾರ್ ಸಮಿತಿ ಮಾತ್ರವೇ ಅಲ್ಲದೆ, ವಕ್ಫ್ ಆಸ್ತಿಗಳ ಬಗ್ಗೆ ಕೆ. ರೆಹಮಾನ್ ಖಾನ್ ನೇತೃತ್ವದ ಸಮಿತಿ ಕೂಡ ಪರಿಶೀಲನೆ ನಡೆಸಿದೆ. ರೆಹಮಾನ್ ಖಾನ್ ನೇತೃತ್ವದ ಸಮಿತಿಯೂ ಹಲವು ಶಿಫಾರಸುಗಳನ್ನು ಮಾಡಿದೆ. ನಂತರದಲ್ಲಿ, ರೆಹಮಾನ್ ಖಾನ್ ಅವರು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೂಡ ಆಗಿದ್ದರು. ಅವರೂ, ವಕ್ಫ್ ಕಾಯ್ದೆ–1995ರ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ‘ವಕ್ಫ್ ತಿದ್ದುಪಡಿ ಮಸೂದೆ –2013’ ಅನ್ನು ಸದನದಲ್ಲಿ ಮಂಡಿಸಿದ್ದರು.
ರಾಜಕಾರಣದ ಎರಡು ಗುಂಪುಗಳಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಗಳು ಈಗಿನ ಮಸೂದೆಗೆ ನೀಡಿರುವ ಪ್ರಾಥಮಿಕ ಪ್ರತಿಕ್ರಿಯೆಯು ಮಸೂದೆಯಲ್ಲಿನ ವಿಷಯಗಳ ಬದಲು, ತಿದ್ದುಪಡಿಗಳನ್ನು ತರುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಂದಿರುವ ಉದ್ದೇಶಗಳ ಕುರಿತಾಗಿ ಇರುವಂತಿದೆ. ಅದೇನೇ ಇರಲಿ, ವಿರೋಧ ಪಕ್ಷಗಳು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ಹೊಂದಿವೆಯಾದ ಕಾರಣ, ಪ್ರಸ್ತಾವಿತ ಮಸೂದೆಯನ್ನು ಸಂಸತ್ತಿನ ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಾತಿನಿಧ್ಯ ಇರುವ ಜಂಟಿ ಸಮಿತಿಯು ಪರಿಶೀಲಿಸುವುದು ಬಹಳ ಉತ್ತಮವಾದ ಕ್ರಮವಾಗುತ್ತದೆ. ಈಗ ನಾವು ಈ ಸಮಿತಿ ಸಲ್ಲಿಸುವ ವರದಿಗಾಗಿ ಕಾಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.