ADVERTISEMENT

ಗಣತಿ ಈಗ ‘ಜಾತ್ಯತೀತ’ ವಿರೋಧಿ!

ಎನ್‌ಪಿಆರ್‌: ಸತ್ಯವನ್ನು ಎದುರಿಸಲು ಕೆಲವರು ಭಯಪಡುತ್ತಿದ್ದಾರೆಯೇ?

ಎ.ಸೂರ್ಯ ಪ್ರಕಾಶ್
Published 31 ಡಿಸೆಂಬರ್ 2019, 19:45 IST
Last Updated 31 ಡಿಸೆಂಬರ್ 2019, 19:45 IST
   
""

ಪೌರತ್ವ (ತಿದ್ದುಪಡಿ) ಕಾಯ್ದೆ– 2019ರ ವಿರುದ್ಧ ಕೆಲವು ರಾಜಕೀಯ ಪಕ್ಷಗಳು ನಡೆಸಿದ ಸುಳ್ಳು ಪ್ರಚಾರವು ಈಗ ‘ರಾಷ್ಟ್ರೀಯ ಜನಸಂಖ್ಯೆ ನೋಂದಣಿ’ಗೆ (ಎನ್‌ಪಿಆರ್‌) ನಡೆಸುವ ಕಡ್ಡಾಯ ಕಾರ್ಯಕ್ರಮ ಹಾಗೂ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯನ್ನು (ಇದು 2020 ಹಾಗೂ 2021ರಲ್ಲಿ ನಡೆಯಬೇಕಿದೆ) ಕೂಡ ವಿರೋಧಿಸುವ ಹಂತ ತಲುಪಿದೆ. ಎನ್‌ಪಿಆರ್‌ ಮತ್ತು ಜನಗಣತಿಯು ಆಡಳಿತಕ್ಕೆ ಅಗತ್ಯವಾಗಿರುವ ಪರಿಕರಗಳು. ಆದರೆ, ನವದೆಹಲಿಯಲ್ಲಿ ಈಗ ಇರುವ ಸರ್ಕಾರಕ್ಕೆ ವಿರುದ್ಧವಾಗಿರುವ ಹಲವರು ಈ ಕಾರ್ಯಕ್ರಮಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರು 2014ರ ಡಿಸೆಂಬರ್‌ 31ಕ್ಕೆ ಮುನ್ನ ಭಾರತ ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶ. ಈಗಾಗಲೇ ಭಾರತದ ಪೌರರಾಗಿರುವ ಯಾರಿಗೂ– ಅವರು ಯಾವುದೇ ಧರ್ಮಕ್ಕೆ ಸೇರಿರಲಿ– ಈ ತಿದ್ದುಪಡಿ ಕಾಯ್ದೆಗೂ ಯಾವ ಸಂಬಂಧವೂ ಇಲ್ಲ. ತಿದ್ದುಪಡಿ ಕಾಯ್ದೆಯಲ್ಲೇ ಒಂದು ಸಮಯಮಿತಿಯನ್ನು ನಿಗದಿ ಮಾಡಿರುವ ಕಾರಣ, ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯೂ ಇಲ್ಲ.

ಎನ್‌ಪಿಆರ್‌ ಮತ್ತು ದಶವಾರ್ಷಿಕ ಜನಗಣತಿ ನಡೆಯುವುದು ಜನಸಂಖ್ಯೆಯ ವಿಚಾರದಲ್ಲಿ ಒಂದಿಷ್ಟು ಮಾಹಿತಿ ಪಡೆಯಲು. ದೇಶದ ವಿವಿಧ ಪ್ರದೇಶಗಳಲ್ಲಿನ ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಕುರಿತ ಮಾಹಿತಿಯನ್ನೂ ಇದು ನೀಡುತ್ತದೆ. ಈ ಎರಡು ಕಾರ್ಯಕ್ರಮಗಳು ಕೂಡ ಯಾರೊಬ್ಬರ ಪೌರತ್ವ ಕಸಿದುಕೊಳ್ಳುವಂಥವಲ್ಲ. ಎನ್‌ಪಿಆರ್‌ ಕಾರ್ಯಕ್ರಮವನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2010ರಲ್ಲಿ ಸಿದ್ಧಪಡಿಸಿತು. ಇದರ ಉದ್ದೇಶ ಜನಸಂಖ್ಯೆಯ ವಿಸ್ತೃತ ಮಾಹಿತಿ ಪಡೆಯುವುದು ಹಾಗೂ ವ್ಯಕ್ತಿಗಳ ಬಯೊಮೆಟ್ರಿಕ್ ವಿವರ ಪಡೆಯುವುದು. ಈ ಕಾರ್ಯಕ್ರಮದ ಅಡಿ ಮಾಹಿತಿ ಪಡೆಯುವವರು ಪ್ರತೀ ಮನೆಗೆ ತೆರಳಿ, ‘ಸಾಮಾನ್ಯ ನಿವಾಸಿ’ಗಳ (ಒಂದು ಸ್ಥಳದಲ್ಲಿ ಆರು ತಿಂಗಳುಗಳಿಂದ ವಾಸ ಮಾಡುತ್ತಿರುವವರು) ಕುರಿತು ವಿವರ ಸಂಗ್ರಹಿಸುತ್ತಾರೆ. ಹಾಗಾಗಿ, ಈ ಕಾರ್ಯಕ್ರಮದ ರೂವಾರಿಯಾದ ಕಾಂಗ್ರೆಸ್ ಪಕ್ಷ ಈಗ ಇದನ್ನೇ ವಿರೋಧಿಸುತ್ತಿರುವುದು ತೀರಾ ವಿಚಿತ್ರ ಅನಿಸುತ್ತದೆ. ಅಷ್ಟೇ ಅಲ್ಲ, ಅದು ವ್ಯಕ್ತಪಡಿಸುತ್ತಿರುವ ವಿರೋಧದ ತೀವ್ರತೆಯು ಅದೊಂದು ನಾಟಕೀಯ ಕೃತ್ಯ ಅನಿಸುವಂತೆ ಮಾಡುತ್ತದೆ.

ADVERTISEMENT

ಭಾರತದಲ್ಲಿ ಗಣತಿ ಎಂದರೆ ಜನರ ಸಂಖ್ಯೆಯನ್ನು ಲೆಕ್ಕ ಹಾಕುವುದು. ಇದನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಹಾಗೂ ಸಾಂಖ್ಯಿಕ ಕೆಲಸ ಎಂದು ಬಣ್ಣಿಸಲಾಗಿದೆ. ಮಾಹಿತಿ ಸಂಗ್ರಹಕ್ಕೆ ಮೂವತ್ತು ಲಕ್ಷ ಜನರನ್ನು ನಿಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಎಂಬಂತೆ, ಮಾಹಿತಿ ಕ್ರೋಡೀಕರಣಕ್ಕೆ ಮೊಬೈಲ್‌ ಆ್ಯಪ್‌ನಂತಹ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತದೆ.

ದಶವಾರ್ಷಿಕ ಜನಗಣತಿಯನ್ನು ದೇಶದಲ್ಲಿ 1892ರಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಹತ್ತು ವರ್ಷಗಳ ಅವಧಿಯಲ್ಲಿ ರಾಷ್ಟ್ರ ಹಾಗೂ ಸ್ಥಳೀಯ ಮಟ್ಟದಲ್ಲಿ ಜನಸಂಖ್ಯೆಯಲ್ಲಿ ಆದ ಬದಲಾವಣೆಗಳು ಏನು ಎಂಬುದನ್ನು ಇದು ವಿವರಿಸುವ ಕಾರಣ, ಈ ಗಣತಿಯು ರಾಷ್ಟ್ರದ ಹಿತದೃಷ್ಟಿಯಿಂದ ಬಹಳ ಮುಖ್ಯ. ರಾಷ್ಟ್ರೀಯ ಕಾರ್ಯಕ್ರಮಗಳನ್ನು ರೂಪಿಸಲು, ಅದರಲ್ಲೂ ಮುಖ್ಯವಾಗಿ ಸಮಾಜದಲ್ಲಿ ಸ್ಥಿತಿವಂತ ಅಲ್ಲದ ವರ್ಗಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈ ಎರಡು ಕಾರ್ಯಕ್ರಮಗಳಿಂದ ನೀತಿ ನಿರೂಪಕರಿಗೆ ಮಹತ್ವದ ಮಾಹಿತಿ ದೊರೆಯುತ್ತದೆ.

ಗ್ರಾಮ, ಪಟ್ಟಣ ಮತ್ತು ವಾರ್ಡ್‌ ಮಟ್ಟದ ಪ್ರಾಥಮಿಕ ಮಾಹಿತಿಯ ಅತಿದೊಡ್ಡ ಮೂಲ ಗಣತಿ ಎಂದು ಸರ್ಕಾರ ಹೇಳಿದೆ. ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಸಾಕ್ಷರತೆ, ವಲಸೆ, ಭಾಷೆ, ಧರ್ಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತ ಮಾಹಿತಿ ಜನಗಣತಿಯಿಂದ ಸಿಗುತ್ತದೆ. ಎನ್‌ಪಿಆರ್‌ ಸಿದ್ಧಪಡಿಸುವುದು ಹಾಗೂ ದಶವಾರ್ಷಿಕ ಗಣತಿ ನಡೆಸುವುದು ಕೇಂದ್ರ ಸರ್ಕಾರದ ಕಾನೂನುಬದ್ಧ ಚಟುವಟಿಕೆ. ಈ ಎರಡು ಕಾರ್ಯಕ್ರಮಗಳ ಮೂಲಕ ಸಿಗುವ ಮಾಹಿತಿಯು ಕೇಂದ್ರ, ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನೀತಿ ನಿರೂಪಣೆಗೆ ಆಧಾರವಾಗುತ್ತದೆ. ಹಾಗಾಗಿ, ಮಾಹಿತಿ ಸಂಗ್ರಹವನ್ನೇ ವ್ಯರ್ಥಗೊಳಿಸುವ ಉದ್ದೇಶದಿಂದ ಜನ ತಮ್ಮ ಸುಳ್ಳು ಹೆಸರು ಹಾಗೂ ಸುಳ್ಳು ವಿಳಾಸ ನೀಡಬೇಕು ಎಂದು ಅರುಂಧತಿ ರಾಯ್ ಅವರಂಥವರು ಕರೆ ನೀಡಿರುವುದು ಆಘಾತಕಾರಿ.

2024ರವರೆಗೆ ದೇಶದ ಆಡಳಿತ ನಡೆಸಲು ಜನಾದೇಶ ಪಡೆದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಕೊಡಬಾರದು ಎಂದು ಅರುಂಧತಿ ಹೇಳಿರುವುದು ಇದಕ್ಕೂ ಹೆಚ್ಚು ವಿಚಿತ್ರವಾಗಿದೆ. ಜನಸಂಖ್ಯೆಯ ಮಾಹಿತಿಯನ್ನು ಕಲೆಹಾಕುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಕೈಕಟ್ಟಿಹಾಕುವ ಹಾಗೂ ನಿಯಮಬದ್ಧವಾಗಿ ಆಯ್ಕೆಯಾದ ಸರ್ಕಾರದ ಅವಧಿಯನ್ನು ಮೊಟಕುಗೊಳಿಸುವ ಅವರ ಯತ್ನವು ಸಂವಿಧಾನವನ್ನು ಬುಡಮೇಲು ಮಾಡುವುದಕ್ಕೆ ಸಮ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದು ರಾಷ್ಟ್ರದ ಏಕತೆ ಹಾಗೂ ಒಗ್ಗಟ್ಟಿಗೆ ಒಳ್ಳೆಯದಲ್ಲ. ಭಿನ್ನಾಭಿಪ್ರಾಯ ಹೊಂದಿರುವವರು ಸಣ್ಣ ಸಂಖ್ಯೆಯಲ್ಲಿದ್ದು, ಆಡಳಿತ ಹಾಗೂ ಪ್ರಜಾತಾಂತ್ರಿಕ ಪರಂಪರೆಯನ್ನು ಈ ರೀತಿ ಅಸ್ತವ್ಯಸ್ತಗೊಳಿಸಲು ಅವಕಾಶ ನೀಡಬಾರದು.

ಎನ್‌ಪಿಆರ್‌ಗೆ ಮಾಹಿತಿ ಸಂಗ್ರಹಿಸುವುದು ದೇಶದ ಮುಸ್ಲಿಮರ ವಿರುದ್ಧವಾಗಿರುವ ಕಾರಣ ಅದನ್ನು ತಡೆಯಬೇಕು ಎಂದು ಮಾಡುತ್ತಿರುವ ಪ್ರಚಾರಕ್ಕೆ ಯಾವ ಆಧಾರವೂ ಇಲ್ಲ. ಸತ್ಯವನ್ನು ಎದುರಿಸಲು ಕೆಲವರು ಭಯಪಡುತ್ತಿದ್ದಾರೆ ಎಂಬಂತೆ ಕಾಣುತ್ತಿದೆ.

ಹಲವು ಕಾರಣಗಳಿಂದಾಗಿ ಮಾಹಿತಿ ಎಂಬುದು ಮಹತ್ವದ್ದಾಗುತ್ತದೆ. ಧಾರ್ಮಿಕ ಹಾಗೂ ಭಾಷಿಕ ಅಲ್ಪಸಂಖ್ಯಾತರ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ನೀತಿ ಹಾಗೂ ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳು ಶಿಕ್ಷಣ, ಉದ್ಯೋಗ, ಕೌಶಲ ಅಭಿವೃದ್ಧಿ ಮತ್ತು ಸ್ವಉದ್ಯೋಗಕ್ಕೆ ಹಣಕಾಸಿನ ನೆರವು ಒದಗಿಸುವುದನ್ನು ಒಳಗೊಂಡಿವೆ. ಈ ಯೋಜನೆಗಳಿಗೆ ಜನಸಂಖ್ಯೆ ಕುರಿತ ಮಾಹಿತಿ ಮುಖ್ಯ. ಗಣತಿಯ ಮೂಲಕ ಪಡೆವ ಮಾಹಿತಿಯನ್ನು ಕೇಂದ್ರ ಸರ್ಕಾರ ಮಾತ್ರವೇ ಬಳಸಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರಗಳು, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ವ್ಯವಸ್ಥೆಗಳು ಕೂಡ ಅದನ್ನು ಬಳಸಿಕೊಳ್ಳುತ್ತವೆ.

ಭಾರತದಲ್ಲಿನ ಅಲ್ಪಸಂಖ್ಯಾತರು ಮುಸ್ಲಿಮರು ಮಾತ್ರ ಎಂದು ಪೊಳ್ಳು ಜಾತ್ಯತೀತವಾದಿಗಳು ಭಾವಿಸಿದಂತಿದೆ. ಆದರೆ, ಆರು ರಾಜ್ಯಗಳಲ್ಲಿ ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ 3.5 ಕೋಟಿ ಇದ್ದ ಮುಸ್ಲಿಮರ ಜನಸಂಖ್ಯೆಯು ಈಗ 17.5 ಕೋಟಿಗೆ ಹೆಚ್ಚಳ ಆಗಿದೆ. ನಮ್ಮ ಸಂವಿಧಾನದ ಅನ್ವಯ ಭಾಷಿಕ ಅಲ್ಪಸಂಖ್ಯಾತರು ಕೂಡ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮ.

ಧಾರ್ಮಿಕ ಅಲ್ಪಸಂಖ್ಯಾತರಿಗೂ ಭಾಷಿಕ ಅಲ್ಪಸಂಖ್ಯಾತರಿಗೂ ಸಮಾನ ರಕ್ಷಣೆ ಒದಗಿಸುವುದು, ಯಾರು ಅಲ್ಪಸಂಖ್ಯಾತ ಎಂಬುದನ್ನು ತೀರ್ಮಾನಿಸುವಾಗ ರಾಜ್ಯವನ್ನು ಒಂದು ಘಟಕವಾಗಿ ಪರಿಗಣಿಸಬೇಕು ಎಂಬುದು ಸಂವಿಧಾನ ನಿರ್ಮಾತೃಗಳ ಬಯಕೆ ಆಗಿತ್ತು ಎಂಬುದು 29 ಹಾಗೂ 30ನೆಯ ವಿಧಿಯನ್ನು ಓದಿದರೆ ಗೊತ್ತಾಗುತ್ತದೆ. ಹಿಂದಿ ಬಾಹುಳ್ಯದ ಹರಿಯಾಣದಲ್ಲಿನ ಕನ್ನಡಿಗನಿಗೆ, ಹಿಂದೂ ಬಾಹುಳ್ಯದ ಹರಿಯಾಣದಲ್ಲಿನ ಮುಸ್ಲಿಂ ಒಬ್ಬನಿಗೆ ಸಿಗುವಷ್ಟೇ ರಕ್ಷಣೆ ಇದೆ.

ಹಾಗಾಗಿ, ಪೊಳ್ಳು ಜಾತ್ಯತೀತವಾದಿಗಳು ಜನಸಂಖ್ಯೆಯ ಮಾಹಿತಿ ಸಂಗ್ರಹ ಮತ್ತು ಜನಗಣತಿಯನ್ನು ವಿರೋಧಿಸುತ್ತಾರೆ ಎಂದಾದರೆ, ಆ ಕಾರ್ಯದ ಮೂಲಕ ಬಹಿರಂಗವಾಗುವ ಅಂಕಿ–ಅಂಶಗಳ ಬಗ್ಗೆ ಅವರು ಭೀತರಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ.

ಎ. ಸೂರ್ಯ ಪ್ರಕಾಶ್,ಪ್ರಸಾರ ಭಾರತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.