ADVERTISEMENT

ಸೂರ್ಯ– ನಮಸ್ಕಾರ | ಸುನಕ್ ಆಯ್ಕೆ: ಭಾರತದಿಂದ ಕಲಿತ ಬ್ರಿಟನ್

ನಾವು ಬ್ರಿಟನ್ನಿನಿಂದ ಕಲಿಯಬೇಕು ಎಂಬುದು ವಾಸ್ತವ ಮರೆತ ಭಾವಾವೇಶದ ಮಾತು

ಎ.ಸೂರ್ಯ ಪ್ರಕಾಶ್
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST
   

ರಿಷಿ ಸುನಕ್ ಅವರು ಬ್ರಿಟನ್ನಿನ ರಾಜಕಾರಣದಲ್ಲಿ ಮೇಲಕ್ಕೆ ಬಂದಿದ್ದನ್ನು, ಅಲ್ಲಿನ ಪ್ರಧಾನಿಯಾಗಿ ನೇಮಕ ಆಗಿದ್ದನ್ನು ವಿಶ್ವದ ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಕಾಂಗ್ರೆಸ್ ಮಾದರಿಯ ಕೆಲವು ರಾಜಕಾರಣಿಗಳು, ವಿಶ್ವದ ಅತ್ಯಂತ ವೈವಿಧ್ಯಮಯ ದೇಶವಾದ ಭಾರತದ ಪ್ರಜೆಗಳಿಗೆ ಬಹುತ್ವದ ಗುಣಗಳ ಕುರಿತು ಪ್ರವಚನ ನೀಡುವ ಪ್ರಯತ್ನ ನಡೆಸಿದ್ದಾರೆ. ಪಿ.ಚಿದಂಬರಂ ಮತ್ತು ಶಶಿ ತರೂರ್ ಈ ಬಗೆಯ ಇಬ್ಬರು ವ್ಯಕ್ತಿಗಳು. ಚಿದಂಬರಂ ಅವರು ಟ್ವೀಟ್ ಮಾಡಿ, ಅಮೆರಿಕ (ಕಮಲಾ ಹ್ಯಾರಿಸ್ ಅವರು ಅಲ್ಲಿ ಉಪಾಧ್ಯಕ್ಷೆ ಆಗಿದ್ದಾರೆ) ಮತ್ತು ಬ್ರಿಟನ್ ದೇಶಗಳು ತಮ್ಮಲ್ಲಿ ಬಹುಸಂಖ್ಯಾತ ಸಮುದಾಯಕ್ಕೆ ಸೇರಿಲ್ಲದವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿವೆ ಮತ್ತು ‘ಇದರಲ್ಲಿ ಭಾರತ ಕಲಿಯಬೇಕಾದ ಪಾಠ ಇದೆ’ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಅತ್ಯಂತ ಶಕ್ತಿಶಾಲಿ ಹುದ್ದೆಯಲ್ಲಿ ಕೂರಿಸುವ ಮೂಲಕ ಬ್ರಿಟನ್ನಿನ ಜನ ವಿಶ್ವದಲ್ಲಿ ಅತ್ಯಂತ ಅಪರೂಪದ ಕೆಲಸವೊಂದನ್ನು ಮಾಡಿದ್ದಾರೆ ಎಂಬುದನ್ನು ನಾವೆಲ್ಲ ಒಪ್ಪಿಕೊಳ್ಳಬೇಕು ಎಂದು ತರೂರ್ ಟ್ವೀಟ್ ಮೂಲಕ ಹೇಳಿದ್ದಾರೆ. ‘ರಿಷಿ ಸುನಕ್ ಅವರು ಉನ್ನತ ಸ್ಥಾನಕ್ಕೆ ಏರುವುದನ್ನು ಸಂಭ್ರಮದಿಂದ ಕಾಣುತ್ತಲೇ, ನಮ್ಮಲ್ಲಿ ಇಂಥದ್ದೊಂದು ಸಾಧ್ಯವಾಗಬಹುದೇ ಎಂಬುದನ್ನು ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

ಬ್ರಿಟನ್ನಿನ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡೆ ಅಪರೂಪದ್ದು ಎಂಬುದು ನಿಜ. ಆದರೆ ನಾವು ಅದರಿಂದಾಗಿ ಭಾವಾವೇಶದಲ್ಲಿ ತೇಲಿಹೋಗುವುದು ಬೇಡ. ನಾವು ಈ 75 ವರ್ಷಗಳಲ್ಲಿ ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಗಣರಾಜ್ಯವಾಗಿ ಸಾಧಿಸಿದ್ದನ್ನು ಮರೆಯುವುದೂ ಬೇಡ. ನಮ್ಮಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಮೂರು ಬಾರಿ ಮುಸ್ಲಿಮರು ಆಯ್ಕೆಯಾಗಿದ್ದರು (ಝಾಕಿರ್ ಹುಸೇನ್, ಫಕ್ರುದ್ದೀನ್ ಅಲಿ ಅಹಮದ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ), ಒಂದು ಬಾರಿ ಸಿಖ್ ಸಮುದಾಯದವರು (ಜೈಲ್ ಸಿಂಗ್) ಆಯ್ಕೆಯಾಗಿದ್ದರು.

ADVERTISEMENT

ಸಿಖ್ ಸಮುದಾಯಕ್ಕೆ ಸೇರಿದ ಮನಮೋಹನ ಸಿಂಗ್ ಅವರು ಹತ್ತು ವರ್ಷ ಪ್ರಧಾನಿಯಾಗಿದ್ದರು. ಇಲ್ಲಿ ಮಹಿಳೆಯರು ಪ್ರಧಾನಿಯಾಗಿದ್ದಾರೆ (ಇಂದಿರಾ ಗಾಂಧಿ), ರಾಷ್ಟ್ರಪತಿ ಆಗಿದ್ದಾರೆ (ಪ್ರತಿಭಾ ಪಾಟೀಲ್ ಮತ್ತು ದ್ರೌಪದಿ ಮುರ್ಮು). ದಲಿತ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ರಾಷ್ಟ್ರಪತಿ ಆಗಿದ್ದಾರೆ. ಬಹುತ್ವಕ್ಕೆ ಭಾರತವು ನೀಡುವ ಗೌರವ ಹಾಗೂ ಆ ಬಗ್ಗೆ ದೇಶಕ್ಕೆ ಇರುವ ಬದ್ಧತೆಗೆ ಅತ್ಯುತ್ತಮ ನಿದರ್ಶನ ಮನಮೋಹನ ಸಿಂಗ್ ಅವರು ಹತ್ತು ವರ್ಷ ಪ್ರಧಾನಿಯಾಗಿ ಇದ್ದುದು ಮತ್ತು ಜೈಲ್ ಸಿಂಗ್ ಅವರು ರಾಷ್ಟ್ರಪತಿ ಆಗಿದ್ದುದು. ಏಕೆಂದರೆ ಸಿಖ್ ಸಮುದಾಯದ ಪ್ರಮಾಣ ದೇಶದ ಜನಸಂಖ್ಯೆಯಲ್ಲಿ ಶೇ 1.7ರಷ್ಟು ಮಾತ್ರ. ದೇಶವು ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಬೌದ್ಧ ಸಮುದಾಯಗಳಿಗೆ ಸೇರಿದವರನ್ನು ಕೇಂದ್ರ ಸಚಿವರನ್ನಾಗಿ ಹಾಗೂ ಮುಖ್ಯಮಂತ್ರಿಗಳನ್ನಾಗಿ ಮಾಡಿದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಬಹುತ್ವದಲ್ಲಿ ದೇಶವು ಕಂಡುಕೊಂಡಿರುವ ನೆಮ್ಮದಿಗೆ ಇನ್ನೂ ಹೆಚ್ಚಿನ ನಿದರ್ಶನಗಳ ಅವಶ್ಯಕತೆ ಇದೆಯೇ? ನಾವು ಬ್ರಿಟನ್ನಿನಿಂದ ಕಲಿಯಬೇಕು ಎಂದು ಚಿದಂಬರಂ ಹಾಗೂ ತರೂರ್ ಅವರು ಹೇಳಿರುವುದು ತಪ್ಪು. ಅವರು ಆಡಿರುವ ಮಾತುಗಳು ಭಾರತದ ಶ್ರೀಮಂತ ಪ್ರಜಾಸತ್ತೆಯ ಬಗ್ಗೆ ಅವರಲ್ಲಿ ಇರುವ ಅರಿವಿನ ಕೊರತೆಯನ್ನು ತೋರಿಸುತ್ತಿವೆ ಅಥವಾ ರಾಜಕೀಯವಾಗಿ ಸ್ಥಳಾಂತರಗೊಂಡಿರುವ ವ್ಯಕ್ತಿಗಳು ಹೆಚ್ಚೆಚ್ಚು ಅಪ್ರಸ್ತುತ ಆದಂತೆಲ್ಲ ಅವರಲ್ಲಿ ಮೂಡುವ ಭಾರತ ವಿರೋಧಿ ಗುಣವನ್ನು ಈ ಮಾತುಗಳು ತೋರಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತೀವ್ರ ದ್ವೇಷ ಮೈಗೂಡಿಸಿಕೊಂಡಿರುವ ಭಾರತದ ಹಲವು ರಾಜಕಾರಣಿಗಳು ಮೋದಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಭಾರತವನ್ನೇ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು, ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳ ಸದಸ್ಯರು ಈ ತಂತ್ರದ ಮೊರೆ ಹೋಗುತ್ತಿದ್ದಾರೆ. ಆದರೆ ಇದು ಬಹುತೇಕ ರಾಜ್ಯಗಳ ಚುನಾವಣೆಗಳಲ್ಲಿ ಅವರಿಗೇ ಮುಳುವಾಗುತ್ತಿದೆ.

ಚಿದಂಬರಂ ಮತ್ತು ತರೂರ್ ಅವರ ಮಾತುಗಳು 2004ರಲ್ಲಿ ನಡೆದ ವಿದ್ಯಮಾನವೊಂದರ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡುವಂತಿವೆ. ಆ ವರ್ಷದಲ್ಲಿ ಕಾಂಗ್ರೆಸ್ಸಿನ ಸದಸ್ಯರು, ಇಟಲಿ ಸಂಜಾತೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಲು ಯತ್ನಿಸಿದರು. ವಾಸ್ತವ ಏನೆಂದರೆ, ಸೋನಿಯಾ ಅವರಿಗೆ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಕರೆ ಬರಲಿಲ್ಲ, ಸೋನಿಯಾ ಅವರು ತಮಗೆ ಬದಲಿಯಾಗಿ ಮನಮೋಹನ ಸಿಂಗ್ ಅವರನ್ನು ಆಯ್ಕೆ ಮಾಡಿದರು, ಅಧಿಕಾರದ ಲಗಾಮನ್ನು ತಾವೇ ಇರಿಸಿಕೊಂಡರು. ಪರಿಣಾಮವಾಗಿ, ಸೋನಿಯಾ ಗಾಂಧಿ ಅವರು ಸಾಮ್ರಾಜ್ಞಿಯಂತೆ ಆಡಳಿತ ನಡೆಸಿದರು, ಆದರೆ ಅವರಿಗೆ ಯಾವುದೇ ಉತ್ತರದಾಯಿತ್ವ ಅಥವಾ ಹೊಣೆಗಾರಿಕೆ ಇರಲಿಲ್ಲ. ಅವರು ಪ್ರಧಾನಿ ಆಗಿಲ್ಲದಿದ್ದರೂ ಆ ಹುದ್ದೆಗಿಂತ ಬಹಳ ದೊಡ್ಡ ಸ್ಥಾನದಲ್ಲಿದ್ದರು. ಬೊಂಬೆಯಾಟದ ಸೂತ್ರ ಸೋನಿಯಾ ಅವರ ಕೈಯಲ್ಲಿತ್ತು, ಪ್ರಧಾನಿಯವರಿಗೆ ಅವರ ಸೂಚನೆ ಪಾಲಿಸದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ, ಸೋನಿಯಾ ಅವರು ಇಟಲಿ ಮೂಲದವರಾದ ಕಾರಣಕ್ಕಾಗಿ ಅವರನ್ನು ಅಧಿಕಾರದಿಂದ ದೂರ ಇರಿಸಲಾಯಿತು ಎಂಬ ಪರೋಕ್ಷ ವಾದ ಸಂಪೂರ್ಣವಾಗಿ ತಪ್ಪು.

ತರೂರ್ ಅವರ ಹೇಳಿಕೆಗಳು ಮುಂದಾಲೋಚನೆ ಇಲ್ಲದೆ ನೀಡಿದಂತಿವೆ. ಕನ್ಸರ್ವೇಟಿವ್ ಪಕ್ಷದಲ್ಲಿ ತಳಮಟ್ಟದಲ್ಲಿ ಭಿನ್ನಾಭಿಪ್ರಾಯ ತಲೆಎತ್ತಿರುವ ಬಗ್ಗೆ ವರದಿಗಳು ಈಗಾಗಲೇ ಬಂದಿವೆ. ಸುನಕ್ ಅವರ ಆಯ್ಕೆಯ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಹಲವರು ಈಗಾಗಲೇ ಅಸಮಾಧಾನ ತೋಡಿಕೊಂಡಿದ್ದಾರೆ.

ಬ್ರಿಟಿಷ್ ವ್ಯವಸ್ಥೆಯಲ್ಲಿ, ಪ್ರಧಾನಿ ಸ್ಥಾನದಲ್ಲಿದ್ದವರು ರಾಜೀನಾಮೆ ಸಲ್ಲಿಸಿದಾಗ, ಪಕ್ಷದ ಶಾಸಕಾಂಗ ಪಕ್ಷದ ನಾಯಕನು ಸಂಸದರನ್ನು ಕರೆದು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ತಮ್ಮ ಆಯ್ಕೆಯನ್ನು ಸೂಚಿಸುವಂತೆ ಹೇಳುತ್ತಾನೆ. ಅಭ್ಯರ್ಥಿಗೆ ಕನಿಷ್ಠ 100 ಸಂಸದರ ಬೆಂಬಲ ದೊರೆತರೆ ಮಾತ್ರ ಆ ಅಭ್ಯರ್ಥಿಯ ಉಮೇದುವಾರಿಕೆ ಪರಿಗಣಿತವಾಗುತ್ತದೆ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಇದ್ದರೆ ಶಾಸಕಾಂಗ ಪಕ್ಷವು, ಅಭ್ಯರ್ಥಿಗಳ ಪೈಕಿ ತಮ್ಮ ಆಯ್ಕೆ ಯಾರು ಎಂಬುದನ್ನು ಮತದಾನದ ಮೂಲಕ ತಿಳಿಸುವಂತೆ ಪಕ್ಷದ ಎಲ್ಲ ಸದಸ್ಯರಿಗೆ ಸೂಚಿಸುತ್ತದೆ. ಸದಸ್ಯರು ದೇಶದಾದ್ಯಂತ ಇದ್ದಾರೆ, ಅವರ ಸಂಖ್ಯೆ ಅಂದಾಜು 1.70 ಲಕ್ಷ. ಹೆಚ್ಚಿನ ಮತ ಪಡೆಯುವ ಅಭ್ಯರ್ಥಿ ಜಯಶಾಲಿ ಎಂದು ಘೋಷಿತನಾಗುತ್ತಾನೆ. ಲಿಜ್ ಟ್ರಸ್ ಅವರು ರಿಷಿ ಸುನಕ್ ಅವರನ್ನು ಸೋಲಿಸಿದ ಸೆ‍ಪ್ಟೆಂಬರ್ 5ರಂದು ಆಗಿದ್ದು ಇದೇ.

ಕನ್ಸರ್ವೇಟಿವ್ ಪಕ್ಷದ ಸಂಸದರು (357) ಯಾರಿಗೆ ಬೆಂಬಲ ಸೂಚಿಸುವುದು ಎಂಬ ವಿಚಾರದಲ್ಲಿ ಒಮ್ಮತ ಹೊಂದಿರಲಿಲ್ಲ. ಸುನಕ್ ಅವರಿಗೆ ಹೆಚ್ಚಿನ ಬೆಂಬಲ ಇದ್ದರೂ, ಮತದಾನ ನಡೆಸುವಂತೆ ಪಕ್ಷದ ಸದಸ್ಯರನ್ನು ಕೋರಲಾಯಿತು. ಆ ಚುನಾವಣೆಯಲ್ಲಿ ಟ್ರಸ್ ಅವರು 81,326 ಮತಗಳನ್ನು ಪಡೆದರು ಹಾಗೂ ಸುನಕ್ ಅವರಿಗೆ 60,399 ಮತಗಳು ಸಿಕ್ಕವು. ತಳಮಟ್ಟದಲ್ಲಿ ಇರುವ ಕಾರ್ಯಕರ್ತರ ಅಭಿಪ್ರಾಯವು ಸಂಸದರ ಅಭಿಪ್ರಾಯಕ್ಕಿಂತ ಬೇರೆ ಆಗಿತ್ತು. ಏಕೆಂದರೆ ತಳಮಟ್ಟದಲ್ಲಿ ಜನಾಂಗ ಎಂಬುದು ಪ್ರಮುಖ ಅಂಶವಾಗಿ ಪರಿಗಣಿತವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕನ್ಸರ್ವೇಟಿವ್ ಪಕ್ಷದಲ್ಲಿ ಇದು ಮುಖ್ಯವಾಗುತ್ತದೆ. ಹಾಗಾಗಿ, ಸುನಕ್ ಅವರ ಬೇರು ಇರುವುದು ಏಷ್ಯಾದಲ್ಲಿ ಹಾಗೂ ಅವರು ಹಿಂದೂ ಎಂಬುದು ತಳಮಟ್ಟದಲ್ಲಿ ಅವರ ವಿರುದ್ಧವಾಗಿ ಕೆಲಸ ಮಾಡಿರಬಹುದು. ಅಲ್ಲದೆ, ಇತರ ಹಲವು ವಿಷಯಗಳೂ ಅವರ ವಿರುದ್ಧ ಕೆಲಸ ಮಾಡಿರಬಹುದು.

ಅದೇನೇ ಇರಲಿ, ಟ್ರಸ್ ಅವರು ಗೆದ್ದರು ಹಾಗೂ ‍ಪ್ರಧಾನಿಯಾಗಿ ನೇಮಕ ಆದರು. ಅವರು 50 ದಿನ ಮಾತ್ರ ಆ ಹುದ್ದೆಯಲ್ಲಿ ಇದ್ದರು ಎಂಬುದು ಇನ್ನೊಂದು ವಿಚಾರ. ಸುನಕ್ ಅವರು ಉನ್ನತ ಸ್ಥಾನಕ್ಕೆ ಬಂದಿರುವುದು ಭಾರತದ ಹಾಗೂ ಜಗತ್ತಿನ ಎಲ್ಲೆಡೆಗಳ ಪ್ರಜಾತಂತ್ರ ವ್ಯವಸ್ಥೆಗಳಿಗೆ ಹೆಮ್ಮೆಯ ಕ್ಷಣ. ಅದರಲ್ಲೂ ವಿಶೇಷವಾಗಿ, ಕರ್ನಾಟಕದ ಜನರಿಗೆ ಅದು ಇನ್ನೂ ಹೆಮ್ಮೆಯ ವಿಚಾರ. ಕನ್ನಡ ನಾಡಿನ ಅಳಿಯ ಬ್ರಿಟನ್ನಿನ ಪ್ರಧಾನಿ. ಅಲ್ಲಿನ ಪ್ರಧಾನಿ ನಿವಾಸದ ಸಿಬ್ಬಂದಿ ಮೊದಲ ಬಾರಿಗೆ ಕನ್ನಡದ ಮಾತುಗಳನ್ನು ಕೇಳಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.