ADVERTISEMENT

ಆಳ ಸಾಗರದಲ್ಲಿ ಆಧುನಿಕ ಬೀಸುಗತ್ತಿ

ನಾಗೇಶ ಹೆಗಡೆ
Published 11 ಫೆಬ್ರುವರಿ 2015, 19:30 IST
Last Updated 11 ಫೆಬ್ರುವರಿ 2015, 19:30 IST
ಆಳ ಸಾಗರದಲ್ಲಿ ಆಧುನಿಕ ಬೀಸುಗತ್ತಿ
ಆಳ ಸಾಗರದಲ್ಲಿ ಆಧುನಿಕ ಬೀಸುಗತ್ತಿ   

ಗುಡಿಸಿ ಬಿಸಾಕುವುದು ಎಂದರೇನೆಂಬು­ದನ್ನು ದಿಲ್ಲಿಯಲ್ಲಿ ನೋಡಿದೆವು. ಅದು ನೆಲದ ಮೇಲಿನ ವಿದ್ಯಮಾನ ಸರಿ. ಸಮುದ್ರದ ತಳದಲ್ಲಿ ಗುಡಿಸಿ ಬಾಚಿಕೊಳ್ಳುವುದು ಗೊತ್ತೆ? ಭಾರತಕ್ಕೆ ಸೇರಿದ ವಿಶಾಲ ಸಮುದ್ರದಲ್ಲಿ ಬೇಕೆಂದಷ್ಟು ಜಲಚರಗಳನ್ನು ಬಾಚಿಕೊಳ್ಳಲು ಬಹು­ರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿ­ಕೊಡಲು ಇದೀಗ ಕೇಂದ್ರ ಸರ್ಕಾರ ನಿರ್ಣ­ಯಿಸಿದೆ.

ನಮ್ಮ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳ ಆಳದಲ್ಲಿ ಎರಡು ಲಕ್ಷ ಟನ್‌ಗಳಷ್ಟು ಭರ್ಜರಿ ಮತ್ಸ್ಯಸಂಪತ್ತಿನ ಕೊಯ್ಲು ಸಾಧ್ಯವಂತೆ. ಆದರೆ ಆಳ ಸಮುದ್ರದ ಮೀನುಗಾರಿಕೆಗೆ ಬೇಕಾದ ಸೂಕ್ತ ತಂತ್ರಜ್ಞಾನ ನಮ್ಮಲ್ಲಿ ಇಲ್ಲವಂತೆ. ಸುಧಾರಿತ ದೇಶಗಳ ದೊಡ್ಡ ಕಂಪನಿಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟರೆ ೩೦೦೦ ಕೋಟಿ ರೂಪಾಯಿಗಳಷ್ಟು ಆದಾಯ ಗಳಿಕೆ ಆಗಬಹುದಂತೆ.

ದಿಲ್ಲಿಯಲ್ಲಿ ಕಳೆದ ವಾರ ಈ ನಿರ್ಣಯವನ್ನು ಹೊರಡಿಸಿದ್ದೇ ತಡ, ಕೇರಳ, ತಮಿಳುನಾಡು, ಆಂಧ್ರ­ಪ್ರದೇಶಗಳ ಕಡಲ ತಡಿಯ ಮೀನು­ಗಾರರು ಒಕ್ಕೊರಲಿನ ಪ್ರತಿಭಟನೆ ಆರಂಭಿಸಿ­ದ್ದಾರೆ. ವಿದೇಶೀ ಕಂಪನಿಗಳನ್ನು ಮೀನುಗಾರಿಕೆಗೆ ಆಹ್ವಾನಿಸಿದ್ದೇ ಆದರೆ ಜಲಜೀವಿಗಳ ಸಂಪತ್ತೆಲ್ಲ ಖಾಲಿಯಾಗುತ್ತದೆ, ತಮ್ಮ ಬದುಕು ಮೂರಾ­ಬಟ್ಟೆ ಆಗುತ್ತದೆ ಎಂದು ಅವರು ಆಕ್ರೋಶ ಹೊಮ್ಮಿಸಿ­ದ್ದಾರೆ.

ಮೋದಿ ಸರ್ಕಾರ ‘ಎಲ್ಲ­ರೊಂದಿಗೆ ಎಲ್ಲರ ವಿಕಾಸ’ ಮಾಡುತ್ತೇನೆಂದು ಹೇಳಿ ಇದೇನು ಕಡಲ ಸಂಪತ್ತಿನ ಭರ್ಜರಿ ಗಣಿಗಾರಿಕೆಗೆ ಹೊರಟಿದೆ? ಇದರಿಂದ ಯಾರ ವಿಕಾಸ ಆಗಲಿದೆ? ತುಸು ಆಳಕ್ಕಿಳಿದು ನೋಡೋಣ: ಆಳ ಸಮುದ್ರದಲ್ಲಿ ದೊಡ್ಡ ಜಲಚರಗಳು ಸದಾ ಸಂಚಾರಿಯಾಗಿರುತ್ತವೆ. ಭಾರೀ ದಂಡು ಕಟ್ಟಿಕೊಂಡು ಅವು ಹಿಂದೂ ಮಹಾಸಾಗರದಿಂದ ಶಾಂತಸಾಗರಕ್ಕೆ, ಅಲ್ಲಿಂದ ಅಟ್ಲಾಂಟಿಕ್‌ಗೆ, ಅಲ್ಲಿಂದ ಮತ್ತೆ ಹಿಂದೂ ಮಹಾಸಾಗರದ ಮೂಲಕ  ಶಾಂತಸಾಗರಕ್ಕೆ ಹೀಗೆ ಪರ್ಯಟನ ಮಾಡುತ್ತಲೇ ಇರುತ್ತವೆ.

ಸಾಲ್ಮನ್, ಶಾರ್ಕ್, ಹ್ಯಾಡಕ್, ಕಾಡ್, ಹೆರ್ರಿಂಗ್ ಮುಂತಾದ ಮೀನುಗಳ ಜೊತೆಗೆ ಡಾಲ್ಫಿನ್, ತಿಮಿಂಗಿಲಗಳೂ ಖಂಡಾಂತರ ತಿರುಗಾಟ ಮಾಡುತ್ತಿರುತ್ತವೆ. ಇತರ ದೇಶಗಳು ಹಿಡಿಯದೆ ಬಿಟ್ಟರೆ ಅವು ನಮ್ಮಲ್ಲಿಗೆ ಬರುತ್ತವೆ, ನಾವು ಹಿಡಿಯದೆ ಹಾಗೇ ಬಿಟ್ಟರೆ ಮಾರಿಷಸ್, ಮಲೇಷ್ಯ, ಥಾಯ್ಲೆಂಡ್, ಜಪಾನ್ ಮುಂತಾದ ದೇಶಗಳು ಬಲೆಬೀಸಿ ಹಣ ಗಳಿಸುತ್ತವೆ.- ಇದು ನಮ್ಮ ಧೋರಣೆ.

ಯೋಗಾಯೋಗ ಹೇಗಿದೆ ಎಂದರೆ ಮೊನ್ನೆ ಮೊನ್ನೆ ಜನವರಿ ೨೦ರಂದು ಬ್ರಿಟನ್ನಿನ ಎಲ್ಲ ಪಕ್ಷಗಳ ಸಾಂಸದರು ಸೇರಿ ಇಂಥ ಆಳ ಸಮುದ್ರದ ತಳಬಾಚು ಮೀನುಗಾರಿಕೆಯನ್ನು ಇಡೀ ಯುರೋಪಿನಲ್ಲಿ ನಿಷೇಧಿಸುವಂತೆ ಮನವೊಲಿಸಬೇಕೆಂದು ತಮ್ಮ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅವರ ಒತ್ತಾಯಕ್ಕೆ ಕಾರಣ ಏನೆಂದರೆ ಆಳ ಕಡಲಿನ ವಿಧ್ವಂಸಕ ಮೀನುಗಾರಿಕೆಯಿಂದ ಏನೆಲ್ಲ ಅಪಾಯಗಳಿವೆ ಎಂಬು­ದನ್ನು ಅಲ್ಲಿನ ಪ್ರಮುಖ ವಿಶ್ವವಿದ್ಯಾಲ­ಯದ ೬೦ ಮಂದಿ ಸಾಗರ ವಿಜ್ಞಾನಿಗಳು ಒಂದಾಗಿ ತಮ್ಮ ಮೀನುಗಾರಿಕೆ ಸಚಿವರಿಗೆ ಸೂಕ್ತ ಸಾಕ್ಷ್ಯಾ­ಧಾರಗಳ ಮೂಲಕ ಮನವರಿಕೆ ಮಾಡಿ­ಕೊಟ್ಟಿದ್ದಾರೆ.

ಆಳ ಸಮುದ್ರದ ಜೀವಲೋಕದ ಅದ್ಭುತ­ಗಳನ್ನು ಉಳಿಸುವಂತೆ ವಿಶ್ವಸಂಸ್ಥೆಯಲ್ಲಿ ಜಾಗತಿಕ ಒಪ್ಪಂದ ರೂಪಿಸುವಲ್ಲಿ ಬ್ರಿಟನ್ನೇ ಬಹುಮುಖ್ಯ ಪಾತ್ರ ವಹಿಸಿತ್ತು.  ತಳಬಾಚು ಮೀನುಗಾರಿಕೆ (ಬಾಟಮ್ ಟ್ರಾಲಿಂಗ್) ಎಂದರೆ ಹೊಲದಲ್ಲಿ ಕುಂಟೆ ಹೊಡೆದಂತೆ, ಸಮುದ್ರ ತಳವನ್ನು ಬಾಚುತ್ತ ಸಾಗುವುದು. ನೂರಿನ್ನೂರು ಮೀಟರ್ ಅಗಲದ ಬಲೆಯನ್ನು ಭಾರವಾದ ಉಕ್ಕಿನ ಸರಪಳಿಗಳ ಮೂಲಕ ಸಮುದ್ರದ ತಳಕ್ಕೆ ಇಳಿಸಿ ಎಳೆಯುತ್ತ ಹೋಗುತ್ತಾರೆ.

ನೂರೈವತ್ತು ವರ್ಷಗಳ ಹಿಂದೆ ಇಂಗ್ಲಂಡಿನಲ್ಲಿ ಈ ತಂತ್ರ ಜಾರಿಗೆ ಬಂದಿದ್ದೇ ತಡ, ಅಲ್ಲಿನ ಮೀನುಗಾರರೆಲ್ಲ ಪ್ರತಿಭಟನೆ ಮಾಡಿದ್ದರು. ಅವರ ಆಕ್ರೋಶ ಜೋರಾದಾಗ ೧೮೬೬ರಲ್ಲಿ ತಳಬಾಚು ಮೀನುಗಾರಿಕೆಯ ಪರಿಣಾಮದ ಅಧ್ಯಯನಕ್ಕೆಂದೇ ಅಲ್ಲಿ ರಾಯಲ್ ಕಮೀಶನ್ ಬೈಠಕ್ ನಡೆಸಿತ್ತು. ಮೀನುಗಾರರ ಪ್ರತಿನಿಧಿಗಳನ್ನು ಕರೆಸಿ ಸಾಕ್ಷ್ಯ ಕೋರಲಾಗಿತ್ತು. ‘ನಾನು ಆಬರ್ಡೀನ್ ಆಚೆ ೫೦ ಮೈಲು ಅಗಲದ ತಳವನ್ನು ಬಾಚಿದ್ದೇನೆ.

ಯಾವ ಜೀವಿಯೂ ನನ್ನ ಬಲೆಯಿಂದ ಬಚಾವಾಗಲು ಸಾಧ್ಯವೇ ಇರಲಿಲ್ಲ’ ಎಂದು ಅಂದು ಜಿ. ಕೊರ್ಮಾಕ್ ಎಂಬ ಮೀನು­ಗಾರ ಕೊಚ್ಚಿಕೊಂಡಿದ್ದನ್ನು ಅಂದಿನ ನಡಾವಳಿ­ಯಲ್ಲಿ ದಾಖಲಿಸಲಾಗಿದೆ. ಇಂಥವರ ಹಾವಳಿ­ಯಿಂದ ತತ್ತರಿಸಿದ್ದ ಸಾಮಾನ್ಯ ಮೀನುಗಾರ ಬಿ. ಸಿಂಪ್ಸನ್ ನೀಡಿದ ಹೇಳಿಕೆಯೂ ದಾಖಲಾಗಿದೆ: ‘ಇಪ್ಪತ್ತು ವರ್ಷಗಳ ಹಿಂದೆ ನಾವು ಪ್ರತಿಯೊಬ್ಬ ಮೀನುಗಾರರೂ ದಿನಕ್ಕೆ ೬೦೦–- ೭೦೦ ಮೀನು­ಗಳನ್ನು ಹಿಡಿದು ತರುತ್ತಿದ್ದೆವು. ಈಗ ತಲಾ ಇಪ್ಪತ್ತೂ ಸಿಗುವುದು ಕಷ್ಟ, ೩೦-–೪೦ ಸಿಕ್ಕರೆ ಅದೇ ದೊಡ್ಡ ವಿಷಯ’ ಎಂದು ಆತ ಹೇಳಿದ್ದ.

ಅಂದಿನ ದಿನಗಳಲ್ಲಿ ಮೀನುಗಾರಿಕೆ ಎಂದರೆ ಕುಟುಂಬದ ವ್ಯವಸಾಯವಾಗಿತ್ತು. ಹೆಚ್ಚೆಂದರೆ ೪೦ ಅಡಿ ಉದ್ದದ ದೋಣಿ ಹಿಡಿದು, ಅಷ್ಟೇ ಅಗಲದ ಬಲೆ ಬೀಸಿ ಸಾಗರತಳವನ್ನು ಬಾಚುತ್ತಿ­ದ್ದರು. ಗಾಳಿಮಳೆ ಜೋರಾಗಿದ್ದರೆ ಅಂಥ ಸಾಹ­ಸಕ್ಕೆ ಇಳಿಯುತ್ತಿರಲಿಲ್ಲ. ಈಗಿನದು ಔದ್ಯ­ಮಿಕ ಮೀನುಗಾರಿಕೆ. ಹವಾಮಾನ ಹೇಗೇ ಇದ್ದರೂ ಎಲ್ಲ ಋತುಗಳಲ್ಲೂ ಮೀನುಗಾರಿಕೆ ನಡೆಯು­ತ್ತದೆ.

ದೂರ ಸಂವೇದಿ ತಂತ್ರಜ್ಞಾನವನ್ನು ಬಳಸಿ, ಮೀನು ಸಂಪತ್ತು ಎಲ್ಲೇ ಇದ್ದರೂ ಭಾರೀ ದೊಡ್ಡ ಯಾಂತ್ರಿಕ ಹಡಗುಗಳಲ್ಲಿ ೩೦ ಟನ್ ಭಾರದ ಬಲೆಗೆ ಉಕ್ಕಿನ ಸರಪಳಿಗೆ ಸರಳುಗಳನ್ನು ನೇಯ್ದು, ಸಮುದ್ರದ ತಳಕ್ಕಿಳಿಸಿ ಪ್ರತಿ ಬಾರಿಗೆ ೧೫೦ ಮೀಟರ್ ಅಗಲದ ಪಟ್ಟಿಗುಂಟ ಎಳೆಯುತ್ತಾರೆ. ‘ನೆಲದ ಮೇಲೆ ಅಂಥದ್ದೊಂದು ಸರಂಜಾಮನ್ನು

ಎಳೆಯಲು ಸಾಧ್ಯವಾಗಿದ್ದೇ ಆದರೆ ಕೆಲವೇ ತಿಂಗಳಲ್ಲಿ ನಮ್ಮ ನ್ಯೂ ಫಾರೆಸ್ಟ್ ಸಪಾಟಾಗುತ್ತದೆ. ಇನ್ನುಳಿದ ಗ್ರಾಮೀಣ ಹೊಲ-ಗದ್ದೆ ಗೋಮಾಳಗಳೂ ಅದೇ ವೇಗದಲ್ಲಿ ನೆಲಸಮ ಆಗುತ್ತವೆ. ಬಾಚಿದ ಜಾಗದಲ್ಲೇ ಮತ್ತೆ ಮತ್ತೆ ಬಾಚುವುದರಿಂದ ಹೊಸ ಪೀಳಿಗೆಗಳ ಸಾಧ್ಯತೆಯನ್ನೇ ಹೊಸಕಿ ಹಾಕಲಾಗುತ್ತದೆ’ ಎನ್ನುತ್ತಾರೆ, ಬ್ರಿಟನ್ನಿನ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಬ್ರಯಾನ್ ಬೆಟ್.
ಸಾಗರತಳ ಎಂದರೆ ಅಲ್ಲಿ ಮೀನುಗಳಷ್ಟೇ ಅಲ್ಲ, ಇತರ ಲಕ್ಷೋಪಲಕ್ಷ ಬಗೆಯ ಜೀವಿ­ಗಳಿ­ರುತ್ತವೆ.

ಹವಳ, ಸ್ಪಾಂಜು, ಕಡಲ ಕುದುರೆ, ನಕ್ಷತ್ರ­ಮೀನು, ಕಪ್ಪೆಚಿಪ್ಪುಗಳು, ಚಿಪ್ಪಿಲ್ಲದ ಮೃದ್ವಂಗಿ­ಗಳು, ನೆಮಟೋಡ್‌ಗಳು ಮತ್ತು ಇನ್ನೂ ಹೆಸರಿಡದ ಅಸಂಖ್ಯ ಜೀವಿಗಳ ವಾಸಸ್ಥಾನ ಅದು. ಜೊತೆಗೆ ಅವುಗಳಿಗೆ ಆಸರೆಯಾಗಿ ನಾನಾ ಬಗೆಯ ಜೊಂಡು ಸಸ್ಯಗಳು, ಬಳ್ಳಿಗಳು, ಪೊಟರೆಗಳಿರುತ್ತವೆ. ತಳಬಾಚು ತಂತ್ರದಿಂದ ಅವೆಲ್ಲವೂ ನಿರ್ನಾಮವಾಗುತ್ತವೆ; ಅವುಗಳ ಮೊಟ್ಟೆ, ಗೊದಮೊಟ್ಟೆ ಹಾಗೂ ಅಳಿದುಳಿದ ಕಿರುಜೀವಿಗಳ ಬದುಕಿಗೆ ಆಸರೆಯಾಗಿದ್ದ ಎಲ್ಲವೂ ಸಪಾಟಾಗುತ್ತವೆ. ಬಲೆಗೆ ಸಿಕ್ಕು ಮೇಲಕ್ಕೆ ಬರುವ ಜೀವಿಗಳಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಸತ್ತೊ, ಅರೆಜೀವ­ವಾಗಿಯೊ ದಡ ಸೇರಿ ಗೊಬ್ಬರ­ವಾಗು­ತ್ತವೆ ಅಥವಾ ತಮ್ಮ ನೆಲೆ ತಪ್ಪಿ ಬೇರೆಲ್ಲೋ ಅವಸಾನ ಸ್ಥಿತಿಗೆ ತಲುಪುತ್ತವೆ. 

ತಳಬಾಚು ವಿಧಾನದಷ್ಟೇ ಕ್ರೂರವಾದುದು ‘ಗಿಲ್ ನೆಟ್ಟಿಂಗ್’ ತಂತ್ರ. ಎರಡು ಹಡಗುಗಳ ನಡುವೆ ಪರದೆಯಂತೆ ವಿಶಾಲ ಬಲೆಯನ್ನು ಸಮುದ್ರದ ತಳದವರೆಗೂ ಇಳಿಬಿಡುತ್ತಾರೆ. ಬಲೆ­ಯನ್ನು ದಿನಗಟ್ಟಲೆ ಅಲ್ಲೇ ನಿಲ್ಲಿಸಿ ಬಿಟ್ಟು ಹಡಗು­ಗಳು ದೂರ ಬೇರೆಡೆ ಬಲೆ ಹಾಕಲು ಹೋಗು­ತ್ತವೆ. ಬಲೆಯಲ್ಲಿರುವ ಅತಿಸೂಕ್ಷ್ಮ ಪಾರದರ್ಶಕ ನೈಲಾನ್ ಎಳೆಗಳಲ್ಲಿ ಮೀನುಗಳು ಸಿಕ್ಕಿಬಿದ್ದು ಕೊಸರಾಡುವಾಗ ಅವುಗಳ ಕಿವಿರು (ಗಿಲ್), ಕತ್ತು, ರೆಕ್ಕೆಗಳು ಸಿಕ್ಕಿಹಾಕಿಕೊಳ್ಳುತ್ತವೆ. ಭಕ್ಷ್ಯ­ಯೋಗ್ಯ ಮೀನುಗಳ ಜೊತೆಗೆ ಕಡಲಾಮೆ, ಪ್ರಾಪಾ­ಯಿಸ್‌ನಂಥ ಇತರ ಸಂಚಾರಿ ಜೀವಿಗಳು ಉಸಿರು­ಗಟ್ಟಿ ಸಾಯುತ್ತವೆ ಇಲ್ಲವೆ ಗಾಯ­ಗೊಂಡು ನರಳುತ್ತ ತೂಗಾಡುತ್ತಿರುತ್ತವೆ.

ಆಳ ಸಮುದ್ರದಲ್ಲಿ ಮೀನು ಹಿಡಿಯಲೆಂದು ‘ಬುಲ್ ಟ್ರಾವ್ಲಿಂಗ್’ ಮತ್ತು ‘ಬೀಮ್ ಟ್ರಾವ್ಲಿಂಗ್’ ಎಂಬ ವಿಧಾನಗಳೂ ಇವೆ. ಬುಲ್ ಟ್ರಾವ್ಲಿಂಗ್‌ನಲ್ಲಿ ಜೋಡೆತ್ತಿನಂತೆ ಎರಡು ಹಡಗು­ಗಳು ವಿಶಾಲ ಬಲೆಯನ್ನು ಸಮುದ್ರದ ತಳದವರೆಗೂ ಇಳಿಬಿಟ್ಟು ಎಳೆಯುತ್ತ ಹೋಗು­ತ್ತವೆ. ಎರಡೂ ಹಡಗುಗಳ ಒಟ್ಟೂ ಸಾವಿರ ಅಶ್ವ­ಶಕ್ತಿಯ ಎಂಜಿನ್‌ಗಳು ಭಾರೀ ದೊಡ್ಡ ಪ್ರಮಾಣ­ದಲ್ಲಿ ಮೀನುಗಳನ್ನು ತ್ವರಿತವಾಗಿ ಸಾಗಿಸಿಕೊಂಡು ಬರುತ್ತವೆ. ಬೀಮ್ ಟ್ರಾವ್ಲಿಂಗ್‌ನಲ್ಲಿ ಬಲೆಯನ್ನು ತಳದವರೆಗೂ ಇಳಿಬಿಡುವ ಬದಲು ತಳಕ್ಕಿಂತ ತುಸು ಎತ್ತರದಲ್ಲಿ ಸಾಗಿಸುತ್ತಿರುತ್ತವೆ. 

ಆಳ ಸಮುದ್ರದಲ್ಲಿ ಇಂಥ ವಿಧ್ವಂಸಕ ವಿಧಾನಗಳನ್ನು ಬಳಸಬಾರದೆಂಬ ಜಾಗತಿಕ ಒಪ್ಪಂದವಿದ್ದರೂ ಅದನ್ನು ಜಾರಿಗೆ ತರುವವರು ಯಾರು? ಆಳ ಕಡಲಿಗೆ ಹೋಗಿ ತಪಶೀಲು ಮಾಡುವವರು ಯಾರು? ಹಿಂದೆ ೧೯೭೬ರಲ್ಲಿ ಭಾರತದಲ್ಲಿ ವಿದೇಶೀ ದೊಡ್ಡ ಟ್ರಾವ್ಲರ್‌ಗಳಿಗೆ ಆಳ ಸಮುದ್ರದ ಮೀನುಗಾರಿಕೆ ಗುತ್ತಿಗೆ ನೀಡಲಾಗಿತ್ತು. ಮೆಕ್ಸಿಕೋದಿಂದ ಎರಡು ವಿಶೇಷ ಟ್ರಾವ್ಲರ್‌ಗಳು ಬಂದವು. ಅವುಗಳ ಯಶಸ್ಸನ್ನು ನೋಡಿ ಅಂಥ ನೂರಾರು ಯಾಂತ್ರೀಕೃತ ಹಡಗುಗಳು ನಮ್ಮ ಕಡಲಿಗೆ ಬಂದವು. ಆದರೆ ಅವು ನೂರು ಕಿ.ಮೀ. ಆಚೆಗಿನ ಆಳಕ್ಕೆ ಹೋಗುವ ಬದಲು ೫೦ ಕಿ.ಮೀ. ಈಚೆಗಷ್ಟೇ ಜಾಲಾಡುತ್ತ, ಸ್ಥಳೀಯ ಮೀನುಗಾರರ ಪಾಲಿನದನ್ನಷ್ಟೆ ಬಾಚಿಕೊಳ್ಳತೊಡಗಿದ್ದವು.

ಅಂಥ ಬಲಾಢ್ಯ ಗುತ್ತಿಗೆದಾರರ ವಿರುದ್ಧ ಆಗೆಲ್ಲ ಭಾರತದ ಕರಾವಳಿಯುದ್ದಕ್ಕೂ ಹಣಾಹಣಿ ಸಮರವೇ ನಡೆಯಿತು. ಐದು ವರ್ಷಗಳ ಆ ಸೆಣಸಾಟದಲ್ಲಿ ಅಂತೂ ಅವನ್ನು ಆಳ ಸಮುದ್ರಕ್ಕೆ ತಳ್ಳುವ ಯತ್ನಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದಾಗ ಒಂದೊಂದಾಗಿ ಟ್ರಾವ್ಲರ್‌ಗಳು ತಂತಮ್ಮ ದೇಶಗಳಿಗೆ ಮರಳಿದವು.

ಅವು ಮರಳಿ ಹೋಗಿದ್ದೇ ತಡ, ನಮ್ಮದೇ ಖಾಸಗಿ ಕಂಪನಿಗಳು ಹೊಸ ಮಾದರಿಯ, ಹೊಸ ತಂತ್ರಜ್ಞಾನದ ಟ್ರಾವ್ಲರ್‌ಗಳನ್ನು ನೀರಿಗೆ ಇಳಿಸತೊಡಗಿದವು. ವಿದೇಶೀ ವಿನಿಮಯ ಗಳಿಸುತ್ತೇವೆಂದು ಹೇಳುತ್ತ ಈ ಸ್ವದೇಶೀ ಕಂಪನಿ­ಗಳು ಸರ್ಕಾರಿ ವೆಚ್ಚದಲ್ಲಿ ತಂಪು ಉಗ್ರಾಣ­ಗಳನ್ನು ಹಾಕಿಸಿಕೊಂಡು, ಮೀನುಗಾರರ ಕೆಲವು ಮುಖಂಡರನ್ನೂ ಬುಟ್ಟಿಗೆ ಹಾಕಿಕೊಂಡು ಹತ್ತಾರು ವರ್ಷ ಆಳ್ವಿಕೆ ನಡೆಸಿದವು. ಆದರೆ ಇವ­ರಿಂದಾಗಿ ಮೀನು ನಿಕ್ಷೇಪ ಖರ್ಚಾಗತೊಡಗಿತ್ತು.

ಸ್ಥಳೀಯ ಬಡ ಮೀನುಗಾರರು ಸಮುದ್ರಕ್ಕೆ ಹೋಗಿ ಬರಿಗೈಯಲ್ಲಿ ಮರಳುವಂತಾಯಿತು. ಮತ್ತೊಮ್ಮೆ ಕರಾವಳಿಯಲ್ಲಿ ಮೀನುಗಾರ ಸಂಘಟನೆ­ಗಳೆಲ್ಲ ಒಗ್ಗಟ್ಟಾಗಿ ನಿಂತು ವ್ಯಾಪಕ ಪ್ರತಿ­ಭಟನೆ ನಡೆಸಿದವು. ದೊಡ್ಡ ಹಡಗುಗಳ ಓಡಾಟ­ವನ್ನು ನಿಯಂತ್ರಿಸುವ ನಿಯಮಗಳು ರೂಪು­ಗೊಂಡವು: ಬುಲ್ ಟ್ರಾವ್ಲಿಂಗ್ ಮಾಡ­ಕೂಡದು. ಹಡಗುಗಳು ೪೦ ಕಿ.ಮೀ. ಈಚೆ ಬೇಟೆಯಾಡಕೂಡದು; ಕೊಯ್ಲು ಮುಗಿಸಿ ದಡಕ್ಕೆ ಬಂದಾಗ ಫಸಲು ವರದಿ ನೀಡಬೇಕು... ಈ ಎಲ್ಲ ನಿಯಮಗಳೂ ಪದೇ ಪದೇ ಉಲ್ಲಂಘನೆಯಾಗುತ್ತಿವೆ.

ಕೆಳವರ್ಗದ ಮೀನು­ಗಾರ­­ರೊಂದಿಗೆ ಜಟಾಪಟಿ ನಡೆಯು­ತ್ತಲೇ ಇದೆ. -ಏಕೆಂದರೆ ಬೇಕಾಬಿಟ್ಟಿ ಟ್ರಾವ್ಲಿಂಗ್ ಮಾಡುವ ಹಡಗುಗಳ ಮೇಲೆ ಕಣ್ಣಿಡಬೇಕಾದ ಕಟ್ಟುನಿಟ್ಟಿನ ವ್ಯವಸ್ಥೆ ನಮ್ಮಲ್ಲಿಲ್ಲ. ತಂತ್ರಜ್ಞಾನ ಸಾಕಷ್ಟು ಸುಧಾರಿಸಿದೆ ನಿಜ. ನಮ್ಮದೇ ಮಾರ್ಗದರ್ಶಿ ಉಪಗ್ರಹ ಕೂಡ ಅಂತರಿಕ್ಷದಲ್ಲಿದೆ. ಆದರೆ ಬಡಮೀನುಗಾರರ ಹಿತರಕ್ಷಣೆ ಮಾಡಬೇಕಾದ ಆಪ್ ಅದರಲ್ಲಿ ಇರಬೇಕಲ್ಲ? ಅದಕ್ಕಿಂತ ಮುಖ್ಯ­ವಾಗಿ ಸಾಗರ ಜೀವಿವೈವಿಧ್ಯದ ಹಿತರಕ್ಷಣೆಯ ಕಾಳಜಿ ಇರಬೇಕಲ್ಲ?

ಅಂಥ ಕಾಳಜಿಯುಳ್ಳ ನೂರಾರು ಮಂದಿ ವಿದೇಶೀ ವಿಜ್ಞಾನಿಗಳು ತರಾವರಿ ಸಾಧನ ಸಲಕರಣೆಗಳೊಂದಿಗೆ ಆಳ ಸಮುದ್ರಕ್ಕೆ ಡೈವ್ ಹೊಡೆಯುತ್ತಿದ್ದಾರೆ. ಬರಿದಾಗುತ್ತಿರುವ ಕಡಲಿನ ದಾರುಣ ಚಿತ್ರಗಳನ್ನು ತೋರಿಸಿ ಸಂರಕ್ಷಣೆಗೆ ಒತ್ತಾಯಿಸುತ್ತಿದ್ದಾರೆ. ನಮ್ಮಲ್ಲಿ ಅದಕ್ಕೆ ತದ್ವಿರುದ್ಧ ವಿದ್ಯಮಾನ ಆರಂಭವಾಗಿದೆ.

‘ನಮ್ಮಲ್ಲೂ ನೀಲಕ್ರಾಂತಿ ನಡೆಯಬೇಕು’ ಎಂದು ನರೇಂದ್ರ ಮೋದಿಯವರು ಕಳೆದ ಜುಲೈನಲ್ಲಿ ಹೇಳಿದ್ದೇ ತಡ, ಡಾ. ಬಿ. ಮೀನಾಕುಮಾರಿ ಎಂಬವರ ನೇತೃತ್ವದಲ್ಲಿ ಆರು ವಿಜ್ಞಾನಿಗಳು ಫಟಾಫಟ್ ಕಡತಗಳನ್ನು ಹುಡುಕಿ ‘೨.೧೬ ಲಕ್ಷ ಟನ್ ಮತ್ಸ್ಯ ಸಂಪತ್ತು ನಮ್ಮಲ್ಲಿದೆ’ ಎಂದು ಕರಾರುವಾಕ್ ವರದಿ ಸಲ್ಲಿಸಿದ್ದಾರೆ. ವಿದೇಶೀ ಹಡಗುಗಳಿಗೆ ಆಮಂತ್ರಣವೂ ಅಷ್ಟೇ ಫಟಾಫಟ್ ಸಿದ್ಧವಾಗಿದೆ.
ಕ್ಲಿಯೊಪಾಟ್ರಾ ಹುಬ್ಬೇರಿಸಿದರೆ ಸಾಕು, ಸಾವಿರ ಹಡಗುಗಳು ಲಂಗರು ಬಿಟ್ಟು ಹೊರಡುತ್ತಿದ್ದುವಂತೆ. ನಮ್ಮವರು ಹುಬ್ಬೇರಿಸಿ ಅದೆಷ್ಟು ಹಡಗುಗಳನ್ನು ಹೊರಡಿಸುತ್ತಾರೊ ನೋಡಬೇಕು.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.