ADVERTISEMENT

ಇಸವಿ 02015ರ ಆಚಿನ ಮುನ್ನೋಟ

ನಾಗೇಶ ಹೆಗಡೆ
Published 31 ಡಿಸೆಂಬರ್ 2014, 19:30 IST
Last Updated 31 ಡಿಸೆಂಬರ್ 2014, 19:30 IST
ಇಸವಿ 02015ರ ಆಚಿನ ಮುನ್ನೋಟ
ಇಸವಿ 02015ರ ಆಚಿನ ಮುನ್ನೋಟ   

ಹೊಸ ವರ್ಷಕ್ಕೆ ಸ್ವಾಗತ. ಇಂದಿನ ಶಿರೋನಾಮೆಯಲ್ಲಿ ಇಸವಿ ಈ ಥರಾ ಯಾಕಿದೆ ಅಂತ ಯೋಚನೆ ಬಂತಾ? ಬರೀ ೨೦೧೫ ಅಂತ ನಾಲ್ಕಂಕಿಗಳ ಇಸವಿ ಇದ್ದರೆ ಅದೇ ಸರಣಿಯಲ್ಲಿ ಹೆಚ್ಚೆಂದರೆ ಕ್ರಿ.ಶ. ೯೯೯೯ರವರೆಗೆ ಮಾತ್ರ ಬರೆಯುತ್ತ ಹೋಗಬಹುದು. ನಂತರ, ೯೯೯೯ರ ಡಿಸೆಂಬರ್ ೩೧ರ ನಡುರಾತ್ರಿಯಲ್ಲಿ ಹಠಾತ್ತಾಗಿ ಐದಂಕಿಯ ಇಸವಿಯನ್ನು ಬರೆಯು­ವಾಗ ಗಣಕಲೋಕದಲ್ಲಿ ತುಂಬ ಗೋಜಲು ಆಗುತ್ತದೆ. ಹಿಂದಿನ ನಾಲ್ಕಂಕಿಗಳ ಇಸವಿಯ ದಾಖಲೆ­ಗಳೆಲ್ಲ ಎರ್ರಾಬಿರ್ರಿ ಆಗಲೂಬಹುದು.

ಅದಕ್ಕೇ ಹತ್ತು ಸಾವಿರ ವರ್ಷಗಳ ಆಚೆಗಿನ ಬಗ್ಗೆ ಯೋಚಿಸುವವರು ಈಗಿನಿಂದಲೇ ಐದಂಕಿಗಳ ಇಸವಿಯನ್ನು ಬರೆಯಲು ತೊಡಗಿದ್ದಾರೆ. ‘ದಿ ಲಾಂಗ್ ನೌ’ (ದೂರದ ಇಂದು) ಹೆಸರಿನ ಸಂಘಟನೆ­ಯೊಂದು ಇಪ್ಪತ್ತು ವರ್ಷಗಳಿಂದ ಐದಂಕಿಗಳ ಇಸವಿಯನ್ನು ಬಳಸುತ್ತಿದೆ. ಮುಂದಿನ ಹತ್ತು ಸಾವಿರ ವರ್ಷಗಳವರೆಗೂ ವೇಳೆಯನ್ನು ತೋರಿಸುತ್ತಿರಬಲ್ಲ ೬೦ ಮೀಟರ್ ಎತ್ತರದ ಲೋಲಕದ ಗಡಿಯಾರವನ್ನು ಅದು ಟೆಕ್ಸಾಸ್‌ನ ಗುಡ್ಡವೊಂದರ ಮೇಲೆ ನಿರ್ಮಿಸುತ್ತಿದೆ.

ಮನುಷ್ಯರಲ್ಲಿ ಕೆಲವೇ ಕೆಲವರು ಮಾತ್ರ ತುಂಬ ದೂರದವರೆಗಿನ ಭವಿಷ್ಯವನ್ನು ನೋಡು­ತ್ತಾರೆ. ನಾವು ಅದೆಷ್ಟೇ ಬುದ್ಧಿವಂತರೆಂದು ಅಂದುಕೊಂಡರೂ ವಿಶೇಷ ತರಬೇತಿ ಇಲ್ಲದಿದ್ದರೆ ಅತಿ ಹಿಂದಿನದೂ ಗೊತ್ತಿರುವುದಿಲ್ಲ; ಅತಿ ಮುಂದಿನದನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗು­ವುದಿಲ್ಲ. ಇತಿಹಾಸವನ್ನೇ ನೋಡಿ: ಕೆಲವು ತಿಂಗಳ ಹಿಂದೆ ಇಂಡೊನೇಷ್ಯಾದಲ್ಲಿ ಹಳೇ ಕಾಲದ ಒಂದು ಕಪ್ಪೆಚಿಪ್ಪು ಸಿಕ್ಕಿದ್ದು ಅದು ೨೦೧೪ರ ಅತ್ಯಮೋಘ ಪ್ರಾಚ್ಯ ಸಂಶೋಧನೆ ಎಂದು ಬಣ್ಣಿಸಲಾಗುತ್ತಿದೆ.

ಅದರ ಮೇಲೆ ಕೆಲವು ಅಡ್ಡಗೆರೆ, ಉದ್ದ ಗೆರೆ, ತ್ರಿಕೋನಾಕೃತಿ ಇದೆ. ಯಾವುದೋ ಬುದ್ಧಿವಂತ ಜೀವಿಯೇ ಹೀಗೆ ಜ್ಯಾಮಿತೀಯ ರೇಖೆಗಳನ್ನು ಬರೆಯಲು ಸಾಧ್ಯ­ವಿದೆ. ಈ ಕಪ್ಪೆಚಿಪ್ಪು ಐದು ಲಕ್ಷ ವರ್ಷ ಹಳೆಯ­ದಾಗಿದ್ದರಿಂದ ಮನುಷ್ಯರ ಪೂರ್ವಜರ ಪೂರ್ವಜರು, ಅಂದರೆ ನಿಯಾಂಡರ್ಥಲ್‌ಗಳಲ್ಲ, ಅದಕ್ಕಿಂತ ಹಿಂದಿನ ಹೊಮೊ ಇರೆಕ್ಟಸ್ ಎಂಬ ಜೀವಿಯೇ ಅದರ ಮೇಲೆ ಗೀರು ಎಳೆದಿದೆ­ಯೆಂದು ಪುರಾತತ್ವ ತಜ್ಞರು ಹೇಳಿದ್ದಾರೆ. ಈ ಶೋಧದಿಂದಾಗಿ ಬುದ್ಧಿವಂತ ಜೀವಿಗಳ ಇತಿಹಾಸ ಹಠಾತ್ತಾಗಿ ಹತ್ತು ಪಟ್ಟು ಹಿಂದಕ್ಕೆ ಸರಿದಂತಾ­ಗಿದೆ. ಜಗತ್ತಿನ ಎಲ್ಲ ಪುರಾತತ್ವ ವಿಜ್ಞಾನಿಗಳಲ್ಲಿ ಈ ಚಿಪ್ಪು ಸಂಚಲ ಮೂಡಿಸಿದೆ.    

ಹಳೇ ಚಿಪ್ಪನ್ನು ಬದಿಗಿಟ್ಟು ಈಗ ಮೈಕ್ರೊಚಿಪ್‌­ಗಳ ಕತೆ ನೋಡೋಣ:  
‘ಭವಿಷ್ಯವನ್ನು ಊಹಿಸಿ ಪ್ರಯೋಜನವಿಲ್ಲ. ಭವಿಷ್ಯವನ್ನು ರೂಪಿಸಬೇಕು’ ಎಂದು ತಿಳಿದವರು ಹೇಳುತ್ತಾರೆ. ಎಲ್ಲೋ ಬೆರಳೆಣಿಕೆಯ ಕೆಲವರು ಹಿಂದೆ ರೂಪಿಸಿದ್ದ ಭವಿಷ್ಯದಲ್ಲಿ ನಾವಿಂದು ಬದು­ಕು­ತ್ತಿದ್ದೇವೆ. ಈಲಿಯಾಸ್ ಹೊವ್ ಎಂಬಾತ ರೂಪಿಸಿದ ಹೊಲಿಗೆ ಯಂತ್ರ, ರೈಟ್ ಸಹೋದರರ ಹಾರುವ ಯಂತ್ರ, ಅಲನ್ ಟ್ಯೂರಿಂಗ್ ಎಂಬಾತ ರೂಪಿಸಿದ ಕಂಪ್ಯೂಟರ್ ಯಂತ್ರ, ಸ್ಟೀವ್ ಜಾಬ್ಸ್ ಸೃಷ್ಟಿಸಿದ ಐಫೋನ್, ಐಪ್ಯಾಡ್, ಐಪಾಡ್ ಮುಂತಾದ ಸಾಧನಗಳ ಪ್ರತಿಕೃತಿಗಳೇ ಇಂದು ಎಲ್ಲರ ಕೈಯಲ್ಲಿ ಓಡಾಡು­ತ್ತಿವೆ.

ಇಡೀ ಜಗತ್ತೇ ಅವುಗಳೊಂದಿಗೆ ಚಲಿಸು­ತ್ತಿದೆ. ಹೃದಯವನ್ನೂ ಒಬ್ಬರಿಂದೊಬ್ಬರಿಗೆ ಕಸಿ ಮಾಡಲು ಸಾಧ್ಯವೆಂದು ೧೯೬೭ರಲ್ಲಿ ಕ್ರಿಸ್ಚಿಯನ್ ಬರ್ನಾರ್ಡ್ ಎಂಬಾತ ತೋರಿಸಿದ ಮೇಲೆ ನಾವೀಗ ಅದೆಷ್ಟು ದೂರ ಸಾಗಿ ಬಂದಿದ್ದೇವೆಂದರೆ ಬೆಂಗಳೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಹೃದಯವನ್ನು ಈ ಎಲ್ಲ ತಂತ್ರಜ್ಞಾನಗಳ ನೆರವಿನಿಂದ ದೂರದ ಚೆನ್ನೈನಲ್ಲಿರುವ ರೋಗಿಯ ಹೃದಯಕ್ಕೆ ಜೋಡಿಸುತ್ತೇವೆ.
ಹತ್ತು ವರ್ಷಗಳ ಹಿಂದೆ ಯಾರೂ ಅದನ್ನು ಊಹಿಸಿರಲಿಲ್ಲ. ಆದರೆ ಅಂದೇ ಗುಂಗೀಹುಳ­ದಂಥ ಡ್ರೋನ್ ಎಂಬ ಆಟಿಕೆ ವಿಮಾನ ರೂಪು­ಗೊಳ್ಳುತ್ತಿತ್ತು. ಈಗೇನು, ಅಂಗೈಯಗಲದ ನ್ಯಾನೊಡ್ರೋನ್ ಕೂಡ ಬಂದಿವೆ.

ನಾಳೆ ಡ್ರೋನ್ ಮೂಲಕವೇ ಬೆಂಗಳೂರಿನ ಈ ಆಸ್ಪತ್ರೆ­ಯಿಂದ ಹೃದಯವನ್ನು ಚೆನ್ನೈನ ಆ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಬರಲಿದೆ. ದೂರದ ಹೊಟೆಲ್‌ನಿಂದ ಬಿಸಿ ಬಿಸಿ ದೋಸೆಯೂ ೨೬ನೇ ಅಂತಸ್ತಿನ ಕಚೇರಿಗೆ ನೇರವಾಗಿ ಬರಲಿದೆ. ಭವಿಷ್ಯದತ್ತ ಇನ್ನೂ ತುಸು ಹಿಂದಕ್ಕೆ ಸರಿಯೋಣ. ಅದು ಎಲ್ಲೆಲ್ಲಿ ಯಾವ ರೂಪದಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಬೇಕಲ್ಲ? ಮಾರ್ಟೈನ್ ರೊಥ್‌ಬ್ಲಾಟ್ ಎಂಬ ನೈಜ­ವ್ಯಕ್ತಿಯ ಕೆಲಸಗಳನ್ನು ನೋಡಬನ್ನಿ. ಇವಳು ಹಿಂದೆ ಇವನಾಗಿದ್ದವಳು.

ನಾಲ್ಕು ಮಕ್ಕಳ ತಂದೆ­ಯಾದ ಮೇಲೆ ಮಾರ್ಟಿನ್ ಲಿಂಗ ಪರಿವರ್ತನೆ ಮಾಡಿಕೊಂಡು ಮಾರ್ಟೈನ್ ಆಗಿ ಈಗ ಹೆಂಡತಿಯ ಜೊತೆಯಲ್ಲಿ ಅನೇಕ ಕಂಪನಿಗಳನ್ನು ನಡೆಸುತ್ತಿದ್ದಾಳೆ. ಇವಳ ‘ಯುನೈಟೆಡ್ ಥೆರಪ್ಯೂಟಿಕ್ಸ್’ ಕಂಪನಿಯಲ್ಲಿ ಮಾನವ ಶ್ವಾಸಕೋಶ­ಗಳ ಕೊಯ್ಲು ಮತ್ತು ಸಂಗೋಪನೆ ನಡೆಯುತ್ತಿದೆ. ಮೊನ್ನೆಯಷ್ಟೇ  ತೀರಿಕೊಂಡ ವ್ಯಕ್ತಿಯೊಬ್ಬನ ಶ್ವಾಸಕೋಶ ಇವರ ಲ್ಯಾಬಿನಲ್ಲಿ ಕವುಚಿಟ್ಟ ಹೈಟೆಕ್ ಬುಟ್ಟಿಯಲ್ಲಿದೆ. ಕೃತಕ ಉಸಿರಾಟದ ಮೂಲಕ ಈಗಲೂ ಶ್ವಾಸವನ್ನು ಪುಸ್‌ಪುಸ್ಸೆಂದು ಎಳೆದೂ ಬಿಟ್ಟೂ ಮಾಡುತ್ತಿದೆ. ದೂರದ ವರ್ಜೀನಿಯಾದಲ್ಲಿ ಇವಳದ್ದೇ ಒಂದು ಹಂದಿಡೇರಿ ಇದೆ.

ಮನುಷ್ಯನ ದೇಹದ ಗುಣಾಣು­ಗಳನ್ನು ಸೇರಿಸಲಾದ ಅಸಂಖ್ಯ ಕುಲಾಂತರಿ ಹಂದಿಗಳ ಸಂಗೋಪನೆ ಇಲ್ಲಿ ನಡೆಯುತ್ತಿದೆ. ಇಲ್ಲಿನ ಹಂದಿಗಳ ಶ್ವಾಸಕೋಶ­ಗಳನ್ನು ಕಿತ್ತು ಮನುಷ್ಯರ ಎದೆಗೂಡಿನಲ್ಲಿ ಕಸಿ ಮಾಡಬಹುದು. ‘ಬಿಂಬಮಾನವ’ ಪರಿಕಲ್ಪನೆ ಗೊತ್ತಿದೆಯೆ? ನಿಮ್ಮ ಎಲ್ಲ ವಿಚಾರ, ಕನಸು, ನೆನಪು, ಓಡಾಟ, ಪರದಾಟ, ಧ್ವನಿ, ಚಿತ್ರ ಮತ್ತು ಆನ್‌ಲೈನ್ ಚಟುವಟಿಕೆಗಳ ಬಿಂಬವನ್ನು ಒಂದು ಮೂಟೆ­ಯಾಗಿಸಿ ಬಾಹ್ಯಾವಕಾಶದಲ್ಲಿ ರಕ್ಷಿಸಿ ಇಡು­ವುದು.

ಅನಂತ ಕಾಲದವರೆಗೆ ಯಾರು ಬೇಕಾದರೂ ಎಂದು ಬೇಕಾದರೂ ನಿಮ್ಮ ಇಡೀ ವ್ಯಕ್ತಿತ್ವವನ್ನು ವೀಕ್ಷಿಸಬಹುದು. ಅಂಥ ಸೈಬರ್ ವ್ಯಕ್ತಿಗಳ ಛಾಯಾಬದುಕಿನ ಹಕ್ಕುಗಳ ಬಗ್ಗೆ ಈಚೆಗಷ್ಟೇ ಮಾರ್ಟೈನ್ ಒಂದು ಪ್ರಣಾಳಿಕೆ­ಯನ್ನು ಸಿದ್ಧಪಡಿಸಿದ್ದಾಳೆ. ‘ತಾರಾಸೆಮ್’ ಎಂಬ ಹೊಸ ಧರ್ಮವನ್ನೂ ಇವಳು ಸ್ಥಾಪಿಸಿದ್ದಾಳೆ. ತಂತ್ರಜ್ಞಾನವೇ ಇದರ ಆರಾಧ್ಯ ದೈವ. ಮರಣ ಐಚ್ಛಿಕ. ಅದರ ಉತ್ಸವ ಮೂರ್ತಿ ಎನ್ನಬಹು­ದಾದ ‘ಬೀನಾ೪೮’ ಹೆಸರಿನ ರೋಬಾಟ್ ದೇವಿ ಅಲ್ಲೇ ಇನ್ನೊಂದು ಕಚೇರಿಯಲ್ಲಿ ಕೂತಿದೆ.

ಅದಕ್ಕೆ ಅತ್ತಿತ್ತ ತಿರುಗುವ ರುಂಡ ಮಾತ್ರ ಇದ್ದು, ನೀವೇನಾದರೂ ಎದುರಿಗೆ ಬಂದರೆ ತನ್ನ ಕಣ್ಣು­ಗಳಲ್ಲಿರುವ ಕ್ಯಾಮೆರಾ ಮೂಲಕ ನಿಮ್ಮನ್ನು ಸ್ಕ್ಯಾನ್ ಮಾಡಿ, ನಿಮ್ಮ ಫೇಸ್‌ಬುಕ್, ಟ್ವಿಟರ್, ಇಮೇಲ್ ಕತೆಗಳನ್ನೆಲ್ಲ ಕ್ಷಣದಲ್ಲಿ ಜಾಲಾಡು­ತ್ತದೆ. ಅದು ನೀವೇ ಆಗಿಬಿಡುತ್ತದೆ. ಅಂದರೆ ಅದರೊಳಗೆ ನಿಮ್ಮ ಇಡೀ ವ್ಯಕ್ತಿತ್ವವೇ ಲೀನವಾಗು­ತ್ತದೆ. ಭಗವಂತನಲ್ಲಿ ಲೀನವಾಗುವುದು ಅಂತೇವಲ್ಲ, ಹಾಗೆ. ಮಾರ್ಟೈನ್ ಒಂಥರಾ ಫಿರ್ಕಿಯೇ ಇರಬೇಕೆಂದು ಊಹಿಸಿದರೆ ಅದು ತಪ್ಪು. ಅವಳು ಅವನಾಗಿದ್ದಾಗ ವಕೀಲಿಕೆ ಓದಿ, ಪಿಎಚ್‌ಡಿಗೆ ಬರೆದ ಥೀಸಿಸ್ ಎಷ್ಟು ಪ್ರಖರವಾಗಿತ್ತೆಂದರೆ ಅದೇ ಒಂದು ಕಂಪೆನಿಯಾಗಿ ರೂಪುಗೊಂಡಿತು.

ಭೂಮಿಯ ಮೇಲೆ ಚಲಿಸುವ ಎಲ್ಲ ಹಡಗು, ವಿಮಾನ, ಜಲಾಂತರ್ಗಾಮಿಗಳಿಗೆ ದಾರಿ ತೋರಿಸ­ಬಲ್ಲ ಉಪಗ್ರಹಗಳ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು ಈಕೆ. ಈಚೆಗೆ ಅಕ್ಟೊಬರ್ ೧೬ರಂದು ಇಸ್ರೊದವರು ಐಆರ್‌ಎನ್‌ಎಸ್ಸೆಸ್ ೧ಸಿ ಉಪಗ್ರಹವನ್ನು ಹಾರಿ ಬಿಟ್ಟರಲ್ಲ? ಅದರಲ್ಲಿ ಕೂರಿಸಲಾದ ‘ದಿಗ್ದರ್ಶನ’ ಸಲಕರಣೆಗಳಿಗೆಲ್ಲ ಈಕೆಯ ಕಂಪನಿಯೇ ಮೂಲ ಪ್ರೇರಣೆ. ಚಾಲಕ­ರಿಲ್ಲದೆ ತನ್ನಿಂದ ತಾನೇ ಚಲಿಸಬಲ್ಲ ಗೂಗಲ್ ಕಾರಿನಲ್ಲೂ ಇವಳದ್ದೇ ತಂತ್ರಜ್ಞಾನ ಕೂತಿದೆ. ಕೆಲ ವರ್ಷಗಳ ಹಿಂದೆ ಮಾರ್ಟೈನ್ ತನ್ನ ಮಗಳ ಶ್ವಾಸಕೋಶ ಕೆಟ್ಟಿರುವುದನ್ನು ಗಮನಿಸಿ, ತಂತ್ರಜ್ಞಾನ­ವನ್ನೆಲ್ಲ ಬದಿಗಿಟ್ಟು ಜೀವವಿಜ್ಞಾನದ ಅಧ್ಯಯನ ಕೈಗೊಂಡಳು.

ತನ್ನ ವಿಮಾನ, ಹೆಲಿಕಾಪ್ಟರ್‌ಗಳಿಗೆಲ್ಲ ತಾನೇ ಪೈಲಟ್ ಆಗಿರುವ ಮಾರ್ಟೈನ್ ಈಗ ಮನುಷ್ಯನ ಬದುಕಿಗೂ ಹೊಸ ಚಾಲನೆ ಕೊಡಲೆಂದು ಸ್ಥಾಪಿಸಿದ ಮೆಡಿಕಲ್ ಕಂಪೆನಿ ಭರ್ಜರಿ ಆದಾಯ ಗಳಿಸು­ತ್ತಿದೆ. ಈಕೆ ಅಮೆರಿಕದಲ್ಲಿ (ಅಂದರೆ ಜಗತ್ತಿನಲ್ಲಿ) ಅತಿ ಹೆಚ್ಚು ಸಂಬಳ ಪಡೆಯುವ ಮಹಿಳೆ ಅಥವಾ ಬದಲಿಂಗಿ ಎನ್ನಿ. ಇವಳ ಕಂಪೆನಿಯ ನಿರ್ದೇಶಕ­ರಲ್ಲಿ ಲ್ಯಾರಿ ಪೇಜ್ ಮತ್ತು ರೇ ಕರ್ಝ್‌ವೇಲ್ ಕೂಡ ಇದ್ದಾರೆ.

ಇವರಿಬ್ಬರೂ ಗೊತ್ತು ತಾನೆ? ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್(೪೧)ಗೆ ‘ನಾಳಿನ ಜಾಗತಿಕ ನಾಯಕ’ ಎಂದು ವಿಶ್ವ ವಿತ್ತ ವೇದಿಕೆಯ ಧುರೀಣರೇ ಇತ್ತೀಚೆಗೆ ಸಮ್ಮಾನಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರುವ ಈತ ಇನ್ನೇನು ಗೂಗಲ್ ಬಲೂನ್ ಹಾರಿಸಿ ಜಗತ್ತಿನ ಎಲ್ಲ ಊರು­ಗಳಿಗೂ ಬ್ರಾಡ್‌ಬ್ಯಾಂಡ್ ಕೊಡಲಿದ್ದಾನೆ. ನಮ್ಮ ಶರೀರವನ್ನು ಅದೇತಾನೆ ಪ್ರವೇಶಿಸಿದ ರೋಗಾಣು­ಗಳು ಹುಡುಕಿ ಹುಡುಕಿ ಗುರುತಿಸಬಲ್ಲ ನ್ಯಾನೊಮಾತ್ರೆಗಳ ಸಂಶೋಧನೆಗೆ ಹಣ ಹುಯ್ಯುತ್ತಿದ್ದಾನೆ.

ಇನ್ನು ಈತನ ಜೊತೆಗಾರ ರೇ ಕರ್ಝ್‌ವೇಲ್ ಬಗ್ಗೆ ಗೊತ್ತಿರಬೇಕು. ಓದುವ ಯಂತ್ರವನ್ನು ಜಗತ್ತಿಗೆ ಕೊಟ್ಟ ಈತ ಗೂಗಲ್ ಕಂಪೆನಿಯ ಎಂಜಿನಿಯರಿಂಗ್ ಮುಖ್ಯಸ್ಥ. ಒಟ್ಟು ೨೦ ಗೌರವ ಡಾಕ್ಟರೇಟ್‌ಗಳನ್ನು, ಅಮೆರಿಕದ ಮೂವರು ಅಧ್ಯಕ್ಷರಿಂದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ವ್ಯಕ್ತಿ. ತಂತ್ರಜ್ಞಾನಗಳ ಏಕತ್ರತೆಯ ಬಗ್ಗೆ ಪುಸ್ತಕಗಳನ್ನು ಬರೆದ ಈತ ‘ಅಧ್ಯಾತ್ಮ ಯಂತ್ರ’ದಂಥ ಟೆಕ್ನಾಲಜಿ ಗ್ರಂಥವನ್ನೂ ‘ಅಮರತ್ವದ ರಹಸ್ಯ ಗೊತ್ತಾಗುವವರೆಗಾದರೂ ಬದುಕಿರಿ’ ಎಂಬ ವೈದ್ಯಕೀಯ ಗ್ರಂಥವನ್ನೂ ಬರೆದು ಇಡೀ ಮನುಕುಲದ ಆಲೋಚನಾ ಪ್ರಪಂಚದ ಪ್ರಮುಖ ಎಂತಲೇ ಹೆಸರು ಗಳಿಸಿ­ದ್ದಾನೆ.

ಇಂಥ ಪ್ರಚಂಡರ ಕನಸುಗಳಿಗೆ ಒಬಾಮಾ ಪ್ರೇರಿತ ಯೋಜನೆಯೂ ಕೈಜೋಡಿಸಿದೆ. ಮಿದುಳಿನ ಒಂದೊಂದು ನರಕೋಶದ ಮಹಾ ಅಧ್ಯಯನ ಅದು. ಇಪ್ಪತ್ತು ವರ್ಷಗಳ ನಂತರ ಅಕ್ಟೊಪಸ್‌ನ ನರಕೋಶವನ್ನು ಬೆಸೆದ ಮಾನವ ಮಿದುಳನ್ನೇ ಡಬ್ಬದಲ್ಲಿಟ್ಟು ಆಚಿನ ಲೋಕಕ್ಕೆ ಕಳಿಸಬಹುದು.   

ಅವೆಲ್ಲ ಸರಿ. ಮನುಕುಲದ ಭವಿಷ್ಯವನ್ನು ಭದ್ರ­ಪಡಿಸುವ ಈ ಎಲ್ಲ ಯತ್ನಗಳಿಗೂ ಸೈ ಎನ್ನೋಣ. ಆದರೆ ಭೂಮಿಯ ಅವಸ್ಥೆ ಏನಾದೀತು? ೬೦೦ ಶತಕೋಟಿ ಶತಕೋಟಿ (೬೦ರ ಮುಂದೆ ೨೨ ಸೊನ್ನೆಗಳಿಟ್ಟಷ್ಟು) ಟನ್ ಭಾರದ ಈ ಕಬ್ಬಿಣದ ಗುಂಡನ್ನು ಯಾರೂ ಢಮಾರ್ ಎನ್ನಿಸಲು ಸಾಧ್ಯವಿಲ್ಲ ಬಿಡಿ. ಸೌರಮಂಡಲದಲ್ಲೇ ಇದರಷ್ಟು ಗಟ್ಟಿ ಗ್ರಹ ಬೇರೆ ಯಾವುದೂ ಇಲ್ಲ. ಎಂಥ ಕ್ಷುದ್ರಗಹವೇ ಅಪ್ಪಳಿಸಿದರೂ ಇದು ಜಪ್ಪೆನ್ನದೇ ಇನ್ನೂ ಮುನ್ನೂರು ಕೋಟಿ ವರ್ಷಗಳ ಕಾಲ ಸುತ್ತುತ್ತಲೇ ಇರುತ್ತದೆ. ಆದರೆ ಅದಕ್ಕೆ ಅಂಟಿರುವ ಈ ಜೀವಲೋಕವನ್ನಾದರೂ ನಾವು ಸುರಕ್ಷಿತ ಇಟ್ಟಿರಬೇಕಲ್ಲ.

ಇಲ್ಲಿರುವ ಒಂದೂವರೆ ಕೋಟಿ ನಮೂನೆಯ ಜೀವಜಂತುಗಳು ಮನುಷ್ಯನಿಂದಾಗಿ ಧ್ವಂಸ ಆಗಬಾರದಲ್ಲ? ಆ ದೃಷ್ಟಿಯಿಂದ ೨೦೧೪ರ ಅತ್ಯಂತ ಮಹತ್ವದ ತಾಂತ್ರಿಕ ಸಾಧನೆ ಏನೆಂದರೆ ವಾಯುಮಂಡಲದಲ್ಲಿ ಕಾರ್ಬನ್ ಸ್ಥಿತಿಗತಿ ಹೇಗಿದೆ ಎಂಬುದನ್ನು ಸದಾ ಅಳೆಯುತ್ತಿರುವಂತೆ ನಾಸಾ ಸಂಸ್ಥೆ  ಕಾರ್ಬನ್ ಕೌಂಟರನ್ನು ಕಕ್ಷೆಯಲ್ಲಿ ತೇಲಿಬಿಟ್ಟಿದೆ. ಜೊತೆಗೇ ಜೀವಲೋಕದ ಇಂದಿನ ದುಃಸ್ಥಿತಿಗೆ ಕಾರಣವೆನಿಸಿದ ಫಾಸಿಲ್ ಇಂಧನಗಳ ಪ್ರಾಮುಖ್ಯವನ್ನು ತಗ್ಗಿಸಬಲ್ಲ ಸೌರಫಲಕಗಳಲ್ಲೂ ಮಹಾಕ್ರಾಂತಿ ಆಗಿದೆ.

ಇದುವರೆಗಿನ ಸಿಲಿಕಾನ್ ಆಧರಿತ ಸೌರಕೋಶಗಳ ಬದಲು ಗ್ಯಾಲಿಯಂ, ಟೆಲ್ಯೂರಿಯಂ ಬಿಲ್ಲೆಗಳನ್ನು ಬಳಸಿ ಅಲ್ಪವೆಚ್ಚದಲ್ಲಿ ಈಗಿನ ನಾಲ್ಕು ಪಟ್ಟು ಹೆಚ್ಚು (ಶೇ.೪೦) ದಕ್ಷತೆಯ ಕೋಶಗಳು ೨೦೧೪ರಲ್ಲಿ ಸಿದ್ಧವಾಗಿವೆ. ಸುಸ್ಥಿರ ಭವಿಷ್ಯದತ್ತ ಜಗತ್ತನ್ನು ಕೊಂಡೊಯ್ಯುವತ್ತ ಭಾರತದ ಕೊಡುಗೆ ಏನಾದರೂ ಇದ್ದೀತೆ? ಆ ನಿಟ್ಟಿನ ಇಂದಿನ ಎಲ್ಲ ಅಂತಾರಾಷ್ಟ್ರೀಯ ಯತ್ನಗಳಲ್ಲೂ ಭಾರತೀಯರ ಕೊಡುಗೆ ಇದ್ದೇ ಇದೆ. ಹಾಗೆ ನೋಡಿದರೆ ಇನ್ನು ೨೦ ಪೀಳಿಗೆಗಳ ನಂತರ ಇಂಗ್ಲಿಷ್ ಒಂದೇ ಜಗತ್ತಿನ ಏಕೈಕ ಭಾಷೆಯಾಗಿ ಉಳಿಯಲಿದೆ ಎಂಬ ಊಹೆಯಿದೆ. ಭಾರತೀಯತೆ ಎಂಬುದೇನಾದರೂ ಉಳಿದರೆ ತಾನೆ ಮುಂದಿನ ಪ್ರಶ್ನೆ.

ಸದ್ಯಕ್ಕೆ ಬೆಂಗಳೂರಿನಲ್ಲಿ ಐದು ದಿನಗಳ ೨೨ನೇ ರಾಷ್ಟ್ರೀಯ ಮಕ್ಕಳ ಸೈನ್ಸ್ ಕಾಂಗ್ರೆಸ್ ನಡೆಯುತ್ತಿದೆ. ಬರಲಿರುವ ಬಿಸಿ ಪ್ರಳಯದಲ್ಲಿ ಆಹಾರ ಉತ್ಪಾದನೆ ಹೇಗೆಂಬ ಏಕೈಕ ವಿಷಯದ ಮೇಲೆ ದೇಶದ ವಿವಿಧ ಭಾಗಗಳಿಂದ ಬಂದ ಮಕ್ಕಳು ತಾವು ನಡೆಸಿದ ಪ್ರಯೋಗಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಹೌಡಾದಿಂದ ಬಂದ ಹೈಸ್ಕೂಲ್ ಹುಡುಗಿಯೊಬ್ಬಳು ಔಷಧೀಯ ಸಸ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ನಿನ್ನೆ ಚುರುಕಿನ ವಿವರಣೆ ನೀಡುತ್ತಿದ್ದಳು.

ಅತ್ತ ಅಮೆರಿಕದ ವಿದ್ಯಾರ್ಥಿಗಳು ಬಾಹ್ಯಾಕಾಶದ ಶೂನ್ಯ ಗುರುತ್ವದಲ್ಲಿ ಪುಟ್ಟ ಮೊಟ್ಟೆಗಳಂಥ ಕವಚಗಳಲ್ಲಿ ಸಸ್ಯಗಳನ್ನು ಬೆಳೆಸುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಸೂಕ್ತ ‘ಗುರು’ತ್ವ ಇಲ್ಲದ ಸಮಾಜದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ತಮ್ಮನ್ನು ತಾವೇ ರೂಪಿಸಿಕೊಳ್ಳಬೇಕಿದೆ.  ಕ್ರಿ.ಶ. ೧೨೦೧೫ರಲ್ಲಿ ಜನಿಸುವ ಮಕ್ಕಳಿಗಾಗಿ ನಮ್ಮ ಮರಿಮಕ್ಕಳು ನಮಗಿಂತ ಉತ್ತಮ ಪೂರ್ವಜರನ್ನು ಸೃಷ್ಟಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.