ನಾಲಗೆಗೆ ತೊಡರುವ ಮಾತುಗಳನ್ನು ಹೇಳುವಾಗ ಇಂಗ್ಲಿಷ್‌ನ ‘ಷಿ ಸೆಲ್ಸ್ ಸೀಶೆಲ್ಸ್ ಅಟ್ ಸೇಶೆಲ್ಸ್’ (ಅವಳು ಸೇಶೆಲ್ಸ್‌ನಲ್ಲಿ ಕಪ್ಪೆಚಿಪ್ಪು ಮಾರುತ್ತಾಳೆ) ಎಂಬುದೂ ನೆನಪಾಗುತ್ತದೆ. ಈ ಮಾತನ್ನು ಬರೆಯುವಾಗ ಪ್ರಧಾನಿ ಮೋದಿಯವರು ಸೇಶೆಲ್ಸ್‌ನ ಕಡಲ ತಡಿಯಲ್ಲಿದ್ದಾರೆ. ಅವರು ಸಂಸತ್ತಿನಲ್ಲಿ ಅಲ್ಲಾಡಿದ ಭೂಗ್ರಹಣದ ದೋಣಿಯನ್ನು ಹೇಗೋ ಹೊಳೆದಾಟಿಸಿ ಇದೀಗ ತಿಳಿ ನೀಲಿಹಸುರು ನೀರಿನಿಂದ ಆವೃತವಾದ ಸುಂದರ ದ್ವೀಪಮಾಲೆಯನ್ನು ಪ್ರವೇಶಿಸಿದ್ದಾರೆ.
ಸೇಶೆಲ್ಸ್‌ನಂಥದ್ದೇ ಮೋಹಕ ಕಡಲಂಚು ನಮ್ಮಲ್ಲೂ ಇದೆ. ಗೋಕರ್ಣ–- ಕುಮಟಾ ನಡುವಣ ಅಘನಾಶಿನಿ ನದಿಮುಖದ ತದಡಿ ಎಂಬ ಊರಿಗೆ ಬರಬೇಕು. ಕಪ್ಪೆಚಿಪ್ಪು ಸಂಗ್ರಹಿಸಿ ಮಾರುವುದು ಅಲ್ಲಿನ ಬಹುಮುಖ್ಯ ಉದ್ಯೋಗ. ಅಲ್ಲೀಗ ಅವರ ಹೊಟ್ಟೆಗೆ ಕಲ್ಲು ಹಾಕುವ ಬಹುದೊಡ್ಡ, ೩೮ ಸಾವಿರ ಕೋಟಿ ರೂಪಾಯಿ ಬಂಡವಾಳದ ಭರ್ಜರಿ ಬಂದರು ಕಟ್ಟೆಯನ್ನು ನಿರ್ಮಿಸಲು ಸಿದ್ಧತೆ ನಡೆದಿದೆ. ಈ ಯೋಜನೆಯ ವಿಶೇಷ ಏನೆಂದರೆ ಭೂಸ್ವಾಧೀನ ಮಸೂದೆ ರಾಜ್ಯಸಭೆಯಲ್ಲೂ ಗೆದ್ದು ಬಂದಿದ್ದೇ ಆದರೆ ತದಡಿಗೇ ಅದು ಮೊದಲು ಅಪ್ಪಳಿಸಲಿದೆ.
ಬರುವ ಮಾರ್ಚ್ ೨೩ರಂದು ಅಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಏರ್ಪಾಡಾಗುತ್ತಿದೆ. ತದಡಿಗೆ ಈ ಮಹಾನ್ ಯೋಜನೆ ಬರಬೇಕೆ, ಬೇಡವೆ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ. ಬರಬೇಕು ಎಂಬುದನ್ನು ದೂರದವರು, ದೊಡ್ಡವರು ಎಂದೋ ನಿರ್ಧರಿಸಿ ಆಗಿದೆ. ಕೇಂದ್ರ ಸರ್ಕಾರ ಆಗಲೇ ಪೂರ್ವಭಾವಿ ಸಿದ್ಧತೆಗಳನ್ನು ಮುಗಿಸಿದೆ. ನಾಗಪುರದ ‘ನೀರಿ’ (ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ)ಯ ವಿಜ್ಞಾನಿಗಳು ಅಘನಾಶಿನಿ ಅಳಿವೆಯ ಸಮೀಕ್ಷೆ ನಡೆಸಿ ಆಗಲೇ ಪರಿಸರ ಪರಿಣಾಮ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈಗೇನಿದ್ದರೂ ಜನಸಾಮಾನ್ಯರ ಅಹವಾಲು ಆಲಿಸುವುದು. ಕಾಟಾಚಾರದ ಫಾರ್ಮಾಲಿಟಿ.
ಕರಾವಳಿಯ ಮುಂದಾಳುಗಳು ಹಡಗುಕಟ್ಟೆಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಓಡಾಡುತ್ತಿದ್ದಾರೆ. ಕಡಲಂಚಿನ ನಿಸರ್ಗವನ್ನು ರಕ್ಷಿಸಲು ಅವರು ಹಿಂದೆಲ್ಲ ನಡೆಸಿದ ಓಡಾಟ, ಹೋರಾಟಗಳಿಗೆ ಲೆಕ್ಕವಿಲ್ಲ. ೧೯೮೭ರಲ್ಲಿ ಹಡಗು ಒಡೆಯುವ ಉದ್ಯಮ ಬರಬೇಕಿತ್ತು. ಅದನ್ನು ತಡೆಗಟ್ಟಿದರು. ೧೯೯೬ರಲ್ಲಿ ತೆಪ್ಪದ ಮೇಲಿನ ಶಕ್ತಿಸ್ಥಾವರ ಬರಬೇಕಿತ್ತು. ಅದು ಬೇಡವೆಂದರು. ೨೦೦೦ದಲ್ಲಿ ಇದೇ ಬಂದರು ವಿಸ್ತರಣೆ ಯೋಜನೆ ಬರಬೇಕಿತ್ತು; ಅದು ಹೇಗೋ ಹಿಂದೆ ಸರಿಯಿತು. ನಂತರ ೨೦೦೬ರಲ್ಲಿ ಅಲ್ಲೊಂದು ಶಾಖೋತ್ಪನ್ನ ಮಹಾ ವಿದ್ಯುತ್ ಸ್ಥಾವರ ಬರಬೇಕಿತ್ತು. ಅದಂತೂ ಮಹಾ ಹೋರಾಟಗಳ ನಂತರವೇ ತಣ್ಣಗಾಯಿತು. ಈಗ ಮತ್ತೆ ಮಹಾ ಬಂದರು ನಿರ್ಮಾಣದ ನೀಲನಕ್ಷೆ ಸಿದ್ಧವಾಗಿದೆ. ಅಭಿವೃದ್ಧಿಯ ಈಗಿನ ಈ ಸುನಾಮಿಯನ್ನು ಎದುರಿಸುವುದು ಸುಲಭವಲ್ಲ. ಏಕೆಂದರೆ ಈ ಹೊಸ ಯೋಜನೆಯಲ್ಲಿ ಯಾವ ದುಷ್ಪರಿಣಾಮಗಳೂ ಎದ್ದು ಕಾಣುವುದಿಲ್ಲ. ಜಲ ನಿಲ್ದಾಣ ನಿರ್ಮಾಣದಿಂದ ಹೊಗೆ ಮಾಲಿನ್ಯವಿಲ್ಲ; ಜನರನ್ನು ಗುಳೆ ಎಬ್ಬಿಸುವ ಪ್ರಮೇಯವಿಲ್ಲ. ಜಲಮಾಲಿನ್ಯವೂ ಮೇಲ್ನೋಟಕ್ಕೆ ಕಾಣುವುದಿಲ್ಲ. ಹಾಗಾಗಿ ಹೋರಾಟಗಾರರಿಗೆ ಅಸ್ತ್ರವೇ ಉಳಿದಿಲ್ಲವೆಂಬಂತಾಗಿದೆ.
ಹುಡುಕಿದರೆ ಅಸ್ತ್ರಗಳ ಖಜಾನೆ ‘ನೀರಿ’ಯ ವರದಿಯಲ್ಲೇ ಇದೆ. ಆಧುನಿಕ ಅಭಿವೃದ್ಧಿಯ ಯಾವ ಪಾಪವನ್ನೂ ತಟ್ಟಿಸಿಕೊಳ್ಳದೆ ಹರಿಯುತ್ತಿರುವ ನದಿ ಅಘನಾಶಿನಿ. ಯಾವುದೇ ದೊಡ್ಡ ಉದ್ಯಮ, ಅಣೆಕಟ್ಟೆ, ಶಕ್ತಿಸ್ಥಾವರ ಅಥವಾ ನಗರ ಕೊಳಚೆಯ ಸ್ಪರ್ಶವಿಲ್ಲದೆ ೧೫೦ ಟಿಎಮ್‌ಸಿ ಅಡಿಗಳಷ್ಟು ಭಾರೀ ನೀರನ್ನು ಸಮುದ್ರಕ್ಕೆ ಸಾಗಿಸುತ್ತಿರುವ ಅಂಥ ಬೇರೊಂದು ನದಿ ಇಡೀ ಭಾರತದಲ್ಲಿ ಬೇರೊಂದಿಲ್ಲ. ಆ ಕಾರಣದಿಂದಲೇ ಅದು ಅತ್ಯಂತ ಸಮೃದ್ಧ ಕಾಂಡ್ಲವನಗಳ, ವೈವಿಧ್ಯಮಯ ಜಲಜೀವಿಗಳ ಆಗರವಾಗಿದೆ. ಅಲ್ಲಿ ಪ್ರತಿ ವರ್ಷ ೬೨೦ ಲಕ್ಷ ಟನ್ ಸಾಮಗ್ರಿಗಳನ್ನು ಏರಿಸುವ ಇಳಿಸುವ ಸಾಗಿಸುವ ವ್ಯವಸ್ಥೆ ಬರಲಿದೆ. ನಾಲ್ಕರಿಂದ ೧೨ ಸಾವಿರ ಟ್ರಕ್‌ಗಳು ರೈಲು ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾಗುತ್ತಿರುತ್ತವೆ. ಬೃಹತ್ ಗಾತ್ರದ ಸಾವಿರಾರು ಹಡಗುಗಳು ಬಂದು ಹೋಗುತ್ತಿದ್ದರೆ ನೀರಿನಲ್ಲಿ ತೈಲ ಮತ್ತು ಹಾನಿಕಾರಕ ಕೆಮಿಕಲ್‌ಗಳ ಸೋರಿಕೆಯಾಗುತ್ತಿರುತ್ತದೆ. ಹೊಗೆ ಹೆಚ್ಚಲಿದೆ. ಎಲ್ಲಕ್ಕೂ ಮಿಗಿಲಾಗಿ, ರಫ್ತಿಗಿಂತ ಆಮದು ಸರಕುಗಳೇ ಭಾರೀ ದೊಡ್ಡ ಪ್ರಮಾಣದಲ್ಲಿ ಪೇರಿಕೆಯಾಗಲಿದ್ದು ಆಸ್ಟ್ರೇಲಿಯಾ, ಹಾಂಗ್ಕಾಂಗ್, ಸಿಂಗಪುರ, ಇಂಡೊನೇಷ್ಯಾಗಳಿಂದ ಬರುವ ಕಲ್ಲಿದ್ದಲು, ಯುರೇನಿಯಂ ಮತ್ತು ತೈಲಾಧರಿತ ಕೆಮಿಕಲ್‌ಗಳಿಗೆ ಇದೊಂದು ಮಹಾದ್ವಾರವಾಗುತ್ತದೆ. ಕಲ್ಲಿದ್ದಲು ಬಂದಮೇಲೆ ಕರಾವಳಿಯುದ್ದಕ್ಕೂ ಸೂಪರ್ ಥರ್ಮಲ್ ಸ್ಥಾವರಗಳ ನಿರ್ಮಾಣ ಸುಲಭವಾಗುತ್ತದೆ. ಕಲ್ಲಿದ್ದಲ ದಾಸ್ತಾನು ಮತ್ತು ಬಳಕೆಯಿಂದಾಗಿ ಜಲ, ನೆಲ ಮತ್ತು ವಾಯುಮಾಲಿನ್ಯ ಹೆಚ್ಚುವ ಸಾಧ್ಯತೆಯಿದೆ. ಯೋಜಿತ ಮುಂಬೈ–-ದಿಲ್ಲಿ ಉದ್ಯಮಪಟ್ಟಿಯನ್ನು ಬಿಟ್ಟರೆ ಕರ್ನಾಟಕ ಕರಾವಳಿಯೇ ಅತಿದೊಡ್ಡ ಉದ್ಯಮ ಪಟ್ಟಿಯಾಗುತ್ತದೆ. ಈಗಾಗಲೇ ಹೆದ್ದಾರಿ ವಿಸ್ತರಣೆಗೆಂದು ರಾಜ್ಯದ ಕರಾವಳಿಗುಂಟ ೨೫ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆಂದು ‘ವೃಕ್ಷಲಕ್ಷ ಆಂದೋಲನ’ ದ ವಕ್ತಾರ ಅನಂತ ಅಶೀಸರ ಸಮೀಕ್ಷಾ ಪಟ್ಟಿ ಕೊಟ್ಟಿದ್ದಾರೆ. ಪರಿಹಾರ ರೂಪದಲ್ಲಿ ಅರಣ್ಯ ಬೆಳೆಸಲೆಂದು ಹೆದ್ದಾರಿ ಪ್ರಾಧಿಕಾರ ಹಣವನ್ನು ತೆಗೆದಿಟ್ಟರೂ ‘ರಸ್ತೆಯನ್ನು ಸುಗಮ ಮಾಡುವುದೇ ನಮ್ಮ ಆದ್ಯತೆಯೇ ವಿನಾ ಗಿಡಮರಗಳಲ್ಲ ಎಂದು ರಸ್ತೆ ಎಂಜಿನಿಯರ್‌ಗಳು ಹೇಳ್ತಾರ್ರೀ.... ಅಭಿವೃದ್ಧಿಯ ಈ ಮಹಾರಥಕ್ಕೆ ಬ್ರೇಕ್ ಹೇಗೆ ಹಾಕೋದ್ರೀ?’ ಎಂದು ಅಶೀಸರ ಕೇಳುತ್ತಾರೆ.
ಕಾಕತಾಳೀಯವಾಗಿ, ಸಾರ್ವಜನಿಕ ಅಹವಾಲು ಸಭೆ ನಡೆಯುವ ಮಾರ್ಚ್ ೨೩ ಜಾಗತಿಕ ಪವನವಿಜ್ಞಾನ ದಿನ. (ಪ್ರತಿವರ್ಷ ಮಾರ್ಚ್ ೨೧ ವಿಶ್ವ ಅರಣ್ಯ ದಿನ, ಮಾರ್ಚ್ ೨೨ರಂದು ವಿಶ್ವ ಜಲ ದಿನ ಮತ್ತು ಮರುದಿನ ಪವನದಿನ-– ಹೀಗೆ ಮೂರೂ ಸರಣಿಯಲ್ಲಿ ಬರುತ್ತವೆ). ಈಗೀಗ ಹವಾಗುಣ ವೈಪರೀತ್ಯಗಳಿಂದಾಗಿ ಋತುಮಾನಗಳು ಏನೇನೆಲ್ಲ ವಿಧಗಳಲ್ಲಿ ಏರುಪೇರಾಗುತ್ತಿವೆ. ಜಗತ್ತಿನ ಎಲ್ಲ ದೇಶಗಳಲ್ಲೂ ಅದಕ್ಕೆ ಉದಾಹರಣೆಗಳು ಕಾಣುತ್ತೇವೆ. ಮುಂದಿನ ದಶಕಗಳಲ್ಲಿ ಕಡಲಂಚಿನ ತಾಣಗಳೇ ಅತ್ಯಂತ ಹೆಚ್ಚು ಸಂಕಷ್ಟಗಳಿಗೆ ತುತ್ತಾಗಲಿವೆ. ಸಮುದ್ರದ ಮಟ್ಟ ಮೇಲೇರಿ, ಜನಸಾಮಾನ್ಯರು ಸಿಹಿನೀರಿಗಾಗಿ ಪರದಾಡಬೇಕಾದ ದಿನಗಳು ಬಂದಾಗ ೧೫೦ ಟಿಎಮ್‌ಸಿ ಅಡಿಯಷ್ಟು ಸಿಹಿನೀರು ಖಾಸಗಿ ಕಂಪನಿಗಳ ಮುಷ್ಟಿಯಲ್ಲಿದ್ದರೆ ಅದೇ ಒಂದು ಹೊಸ ಬಿಕ್ಕಟ್ಟಿಗೆ ಕಾರಣವಾಗಬಹುದು. ಛತ್ತೀಸ್‌ಗಡದಲ್ಲಿ ಶಿವನಾಥ್ ಎಂಬ ಚಿಕ್ಕ ನದಿಯ ೨೪ ಕಿಲೊಮೀಟರ್ ಭಾಗವನ್ನು ‘ರೇಡಿಯಸ್ ವಾಟರ್’ ಕಂಪನಿಗೆ ಕೊಟ್ಟಿದ್ದೇ ನದಿಯುದ್ದಕ್ಕೂ ಮೀನುಗಾರರ ಹಾಗೂ ಕೃಷಿಕರ ಬಹುದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಅತಿವೃಷ್ಟಿ, ಅನಾವೃಷ್ಟಿ ಎರಡೂ ಸಂದರ್ಭಗಳಲ್ಲಿ ಹಡಗು ಕಟ್ಟೆಯ ಉಸ್ತುವಾರಿಗೆಂದು ಭಾರೀ ಪ್ರಮಾಣದ ಹೂಳನ್ನು ಎತ್ತಿ ದಡದಲ್ಲಿ ಪೇರಿಸಬೇಕಾಗುತ್ತದೆ.
ಮೊನ್ನೆ ಶನಿವಾರವಷ್ಟೇ ಅಮೆರಿಕದ ಖ್ಯಾತ ಮಯಾಮಿ ಬಂದರಿನ ತಳದಲ್ಲಿನ ಜಲಜೀವಿಗಳ ದುಃಸ್ಥಿತಿಯ ಕುರಿತು ಅಲ್ಲಿನ ನ್ಯೂಯಾರ್ಕ್ ಟೈಮ್ಸ್ ಚಿತ್ರವರದಿಯನ್ನು ಪ್ರಕಟಿಸಿದೆ. ಅದರ ಮೊದಲ ವಾಕ್ಯ ಹೀಗಿದೆ: ‘ಸರ್ಕಾರಿ ಜಲವೇಧಿಗಳು (ಡೈವರ್ಸ್) ಪ್ರತಿಬಾರಿ ಅಲ್ಲಿ ಮುಳುಗು ಹಾಕಿದಾಗಲೂ ಮತ್ತೆ ಮತ್ತೆ ಕೆಟ್ಟ ಸುದ್ದಿಯನ್ನೇ ಮೇಲೆತ್ತಿ ತರುತ್ತಿದ್ದಾರೆ: ಹೂಳೆತ್ತುವ ಕೆಲಸದಿಂದಾಗಿ ತಳದಲ್ಲಿನ ಹವಳಗಳು ಭಾರೀ ಸಂಖ್ಯೆಯಲ್ಲಿ ಸತ್ತಿವೆ ಅಥವಾ ಸಾಯುತ್ತಿವೆ’. ದೊಡ್ಡ ಹಡಗುಗಳ ದಾರಿ ಸುಗಮವಾಗುವಂತೆ ಅಲ್ಲಿ ಆಗಾಗ ಡ್ರೆಜರ್ ಮೂಲಕ ಹೂಳನ್ನು ಬಾಚಿ ಮೇಲೆತ್ತುತ್ತಾರೆ. ಅಪರೂಪದ ಜೀವಿಗಳು ತಳದಲ್ಲಿ ಬದುಕಲು ಅವಕಾಶವೇ ಇರುವುದಿಲ್ಲ. ‘ಶೇಕಡ ೯೦ರಷ್ಟು ಹವಳಜೀವಿಗಳು ನಾಶವಾಗಿವೆ; ಇಲ್ಲಿನ ಸಾಗರತಳ ಈಗ ಚಂದ್ರನ ನೆಲದಂತಾಗಿದೆ’ ಎಂದಿದ್ದಾರೆ ಫ್ಲಾರಿಡಾದ ಸಾಗರವಿಜ್ಞಾನಿ ರ್ಯಾಶೆಲ್ ಸಿಲ್ವರ್‌ಸ್ಟೀನ್.
ತದಡಿಯ ಪರಿಸರ ಸಮೀಕ್ಷೆ ನಡೆಸಿದ ‘ನೀರಿ’ಯ ಪರಿಣತರು ನೀರೊಳಗೆ ಮುಳುಗು ಹಾಕಿದಂತಿಲ್ಲ. ಅಳಿವೆ ಎಲ್ಲೇ ಇದ್ದರೂ ಅದು ಜೀವಿವೈವಿಧ್ಯದ ಖಜಾನೆಯೇ ಆಗಿರುತ್ತದೆ. ಜಲಜೀವಿಗಳು ಸಂತಾನವೃದ್ಧಿಗೆಂದು ಅಲ್ಲಿಗೇ ಬರುತ್ತವೆ. ಕಾಂಡ್ಲವನಗಳು ಸಮೃದ್ಧವಾಗಿದ್ದಷ್ಟೂ ನೀರಿನಲ್ಲಿ ಜೀವಸ್ತೋಮ ಹೆಚ್ಚಾಗಿರುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ ಮತ್ತು ಕುಮಟಾದ ಡಾ. ಸುಭಾಷ್ ಚಂದ್ರನ್ ತಂಡ ಅಘನಾಶಿನಿ ಅಳಿವೆಯ ಜೀವಸ್ತೋಮದ ಸುದೀರ್ಘ ವರದಿಯನ್ನು ತಯಾರಿಸಿದೆ. ಅಲ್ಲಿನ ಕಾಂಡ್ಲವನಗಳಲ್ಲಿ ಔಷಧೀಯ ಸಸ್ಯಗಳನ್ನೂ ಐದುಬಗೆಯ ವಿಶಿಷ್ಟ ಕಪ್ಪೆಚಿಪ್ಪುಗಳನ್ನೂ ಪಟ್ಟಿ ಮಾಡಿ ಇಡೀ ಅಳಿವೆಯನ್ನು ಈ ದೇಶದ ಅಮೂಲ್ಯ ‘ಜೈವಿಕ ಪರಂಪರೆಯ ತಾಣ’ವಾಗಿ ಘೋಷಿಸಬೇಕೆಂದು ಶಿಫಾರಸು ಮಾಡಿದೆ.
‘ನೀರಿ’ಯ ಶಿಫಾರಸಿನಲ್ಲಿ ಅವುಗಳ ರಕ್ಷಣೆಗೆ ಯಾವ ಆದ್ಯತೆ ಅಥವಾ ವೆಚ್ಚದ ಪ್ರಸ್ತಾವವಿಲ್ಲ. ಆದರೆ ಈಗಿನ ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯ ಅಂಕಿತ ಸಿಕ್ಕಿದ್ದೇ ಆದರೆ ಅದರ ಪ್ರಕಾರ, ತದಡಿಯಲ್ಲೂ ‘ಸಾಮಾಜಿಕ ಪರಿಣಾಮಗಳ ಅಧ್ಯಯನ’ ನಡೆಸಬೇಕಾಗುತ್ತದೆ. ಅಂಥ ಅಧ್ಯಯನದಲ್ಲಿ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಅರ್ಥತಜ್ಞರು, ಇತಿಹಾಸ ತಜ್ಞರು, ಬೆಸ್ತರು, ಕೃಷಿಕರನ್ನೂ ತೊಡಗಿಸಬೇಕು. ಪ್ರಶಾಂತ ಕರಾವಳಿಯಲ್ಲಿ ಇಂಥ ಬೃಹತ್ ಯೋಜನೆ ಬಂತೆಂದರೆ ಅಲ್ಲಿನ ಸಾಮಾಜಿಕ ಹಂದರವೇ ಬುಡಮೇಲಾಗುತ್ತದೆ. ಕಪ್ಪೆಚಿಪ್ಪು, ಉಪ್ಪು, ಸುಣ್ಣದ ಉತ್ಪಾದನೆಯಲ್ಲಿರುವ ೧೩,೧೦೦ ಕುಟುಂಬಗಳು ಅಲ್ಲಿವೆ. ಪ್ರತಿ ಹೆಕ್ಟೇರ್ ನೀರಲ್ಲಿ ೧೧ ಲಕ್ಷ ರೂಪಾಯಿ ಮೌಲ್ಯದ ಕಪ್ಪೆಚಿಪ್ಪಿನ ಕೊಯ್ಲು ಸಾಧ್ಯವಿದೆ ಎಂದು ಇಪ್ಪತ್ತು ವರ್ಷಗಳ ಹಿಂದೆಯೇ ಅಂದಾಜು ಮಾಡಲಾಗಿದೆ. ಪ್ರತಿ ಕುಟುಂಬದಲ್ಲಿ ಐದಾರು ಮಂದಿ ಆದಾಯ ಕಳೆದುಕೊಂಡು ಅಪರೂಪಕ್ಕೆ ಒಬ್ಬನಿಗೆ ರೂಲ್ಸ್ ಪ್ರಕಾರ ಕೆಲಸ ಸಿಗಬಹುದು. ಅರವತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ ಕಾರವಾರದ ಆಸುಪಾಸಿನಲ್ಲಿ ಕೈಗಾ, ನೌಕಾನೆಲೆ, ರೈಲು ನಿಲ್ದಾಣ, ಬೇಲೆಕೇರಿ ಬಂದರು ಬಂದರೂ ಸ್ಥಳೀಯರ ಜೀವನಮಟ್ಟ ಒಂದಿಂಚೂ ಮೇಲೇಳಲಿಲ್ಲ. ಮುಳುಗಿದವರೇ ಹೆಚ್ಚು. ತದಡಿಯಲ್ಲೂ ಅನ್ಯ ಸಂಸ್ಕೃತಿಗಳ ಜನರೇ ಕಾಣುವಂತಾಗಿ ದಿನಬೆಳಗಾದರೆ ಕಳ್ಳಸಾಗಣೆ, ಕೊಲೆ (ಶಾಸಕರಾಗಿದ್ದ ಇಬ್ಬರು ಆಗಲೇ ಬಲಿಯಾಗಿದ್ದಾರೆ), ವೇಶ್ಯಾವೃತ್ತಿ, ಬೇಹುಗಾರಿಕೆ, ಭೂಗತ ಭಯೋತ್ಪಾತ, ಮಾನವ ಹಕ್ಕುಗಳ ದಮನವೇ ಮುಂತಾದವು ಅತಿಯಾಗುತ್ತವೆ.
ಜಗತ್ತಿನ ನೂರಾರು ಹಡಗುಕಟ್ಟೆಗಳು ವೇಶ್ಯಾವಾಟಿಕೆಗೇ ಕುಪ್ರಸಿದ್ಧಿ ಪಡೆದಿವೆ. ತಿಂಗಳುಗಟ್ಟಲೆ ಯಾನದಲ್ಲಿರುವ ಹಡಗಿನ ಸಿಬ್ಬಂದಿ ಸೆಕ್ಸ್‌ಗಾಗಿ ಹಸಿದಿರುತ್ತಾರೆ. ಇತ್ತ ಕಡಲಂಚಿನ ಗಂಡಸರು ಮೀನು ಹಿಡಿಯಲೆಂದು ವಾರಗಟ್ಟಲೆ ಸಮುದ್ರಯಾನಕ್ಕೆ ಹೋಗಿರುವಾಗ ಮನೆಖರ್ಚು ನಿಭಾ-ಯಿ-ಸಲೆಂದು ಹೆಣ್ಣುಮಕ್ಕಳು ಮೈಮಾರಾಟಕ್ಕೆ ಇಳಿಯುತ್ತಾರೆ. ಉಕ್ರೇನಿನ ಒಡೆಸ್ಸಾ ಬಂದರು, ಥಾಯ್ಲೆಂಡಿನ ಫುಕೆಟ್ ಮತ್ತು ಬ್ಯಾಂಕಾಕ್ ಬಂದರು, ಚೀನಾದ ಶೆಂಝುಂಗ್, ಜಮೈಕಾದ ರಾಯಲ್ ಪೋರ್ಟ್‌ಗಳ ಕುಖ್ಯಾತಿ ಬಿಡಿ; ಶಾಂತಸಾಗರದ ಕಿರಿಬಾಟಿ ಎಂಬ ದ್ವೀಪದೇಶದಲ್ಲಿ ವೇಶ್ಯೆಯರ ಭೇಟಿಗೆಂದೇ ಬರುವ ಹಡಗುಗಳ ಹಾವಳಿ ತೀರ ಹೆಚ್ಚಾಗಿ ಕೊನೆಗೆ ಕೊರಿಯಾದ ಹಡಗುಗಳನ್ನೆಲ್ಲ ಅದೊಂದೇ ಕಾರಣಕ್ಕೆ ನಿಷೇಧಿಸಬೇಕಾಯಿತು. ಬಂದರು ಎಂದರೆ ವೇಶ್ಯಾವಾಟಿಕೆ ಜತೆಜತೆಗೇ ಕ್ಲಬ್ಬು, ಬಾರು, ಹಿಂಸೆ, ಕೊಲೆ, ಡ್ರಗ್ ಸಾಗಣೆ, ಕ್ಷಯ, ಏಡ್ಸ್ ರೋಗ ಎಲ್ಲ ಸಾಲುಸಾಲಾಗಿ ಬಂದು ಪೊಲೀಸರಿಗೆ ನಿರಂತರ ಆದಾಯ ತರುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಇವೆಲ್ಲ ಅನಿವಾರ್ಯವೇನೊ. ಸದಾಕಾಲ ಜೀವಪೋಷಕ ದ್ರವ್ಯಗಳನ್ನೇ ಸಾಗರಕ್ಕೆ ಅರ್ಪಿಸುತ್ತಿದ್ದ ಅಘನಾಶಿನ ನದಿ ಇನ್ನುಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ತನ್ನ ಮುಖದಲ್ಲಿ ಪಾಪಕೂಪವನ್ನೇ ಹೊರುವಂತಾಗುತ್ತದೆ.
ಸೇಶೆಲ್ಸ್‌ಗೆ ಹೋಗೋಣ. ತುಸು ಹೆಚ್ಚುಕಮ್ಮಿ ಕುಮಟಾ ತಾಲ್ಲೂಕಿನಷ್ಟೇ ಗಾತ್ರದ, ಕುಮಟಾದಷ್ಟೇ ಜನಸಂಖ್ಯೆ ಇರುವ ದೇಶ ಅದು. ಪ್ರವಾಸೋದ್ಯಮವೇ ಮುಖ್ಯ ಆದಾಯಮೂಲವಾಗಿರುವ ಅಲ್ಲಿನ ಸುಂದರ ಕರಾವಳಿಯ ಪಹರೆಗೆಂದು ಮೋದಿಯವರು ರಾಡಾರ್‌ಗಳನ್ನು ಉಡುಗೊರೆಯಾಗಿ ನೀಡಿ ಹಾರೈಸಿದ್ದಾರೆ. ಇಲ್ಲಿ ಕುಮಟಾಕ್ಕೆ ಅವರಿಂದ ಬೇರೆಯದೇ ಉಡುಗೊರೆ ಉಂಟೇನೊ. ಪ್ರವಾಸಿಗಳನ್ನು ಸ್ವಾಗತಿಸಬೇಕಿದ್ದ ಸುಂದರ ಜಿಲ್ಲೆಯ ಕಡಲ ತೀರವೊಂದು ಸರಕು ಸಾಗಣೆಯ ಮಹಾದ್ವಾರವಾಗಿ ಹೂಳು ಅದಿರುಗಳ ದಿಬ್ಬವಾಗಬೇಕೆ?
ಅಂದಹಾಗೆ, ಸೇಶೆಲ್ಸ್ ದ್ವೀಪಮಾಲೆ ಮೂಲತಃ ಡಕಾಯಿತರಿಂದಾಗಿಯೇ ಬಳಕೆಗೆ ಬಂದರೂ ಈಗ ಅಲ್ಲಿ ಆಯಕಟ್ಟಿನ ನಾಗರಿಕ ಸಮಾಜ ರೂಪುಗೊಂಡಿದೆ. ತದಡಿ ಅದಕ್ಕೆ ತದ್ವಿರುದ್ಧದ ಇತಿಹಾಸವನ್ನು ಬರೆದೀತೆ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.