ಈಚೆಗೆ ಸಂಸತ್ತಿನಲ್ಲಿ ಅಷ್ಟೆಲ್ಲ ಗದ್ದಲ ನಡೆಯುತ್ತಿದ್ದಾಗ ಯಾರ ಗಮನಕ್ಕೂ ಬಾರದಷ್ಟು ಮೆಲ್ಲಗೆ ‘ಡಿಎನ್‌ಎ ಪ್ರೊಫೈಲ್ ಮಸೂದೆ’ ಮಂಡನೆಯಾಯಿತು. ಪ್ರಭುತ್ವದ ಕೈಗೆ ಡೈನಮೈಟ್ ಕೊಡಬಲ್ಲ ಶಕ್ತಿ ಈ ಮಸೂದೆಗಿದೆ. ಅದು ಎರಡೂ ಸದನಗಳಲ್ಲಿ ಓಕೆಯಾಗಿ ಕಾನೂನಿನ ಸ್ವರೂಪ ಪಡೆದುಬಿಟ್ಟರೆ ನಮ್ಮ ನಿಮ್ಮೆಲ್ಲರ ಶರೀರದ ಗುಣಲಕ್ಷಣಗಳ ಪಟ್ಟಿಯನ್ನು ಪೊಲೀಸ್ ಕಡತಗಳಿಗೆ ಸೇರಿಸಬಹುದಾಗಿದೆ. ಈಗ ‘ಆಧಾರ್’ ಗುರುತಿನ ಚೀಟಿಯ ಮೂಲಕ ನಮ್ಮ ವ್ಯಾವಹಾರಿಕ ವಿವರಗಳೆಲ್ಲ ಸರ್ಕಾರದ ಕಡತಗಳಿಗೆ ಸೇರುವ ಹಾಗೆ ಇನ್ನುಮೇಲೆ ಡಿಎನ್‌ಎ ಕಾನೂನು ಬಂದಮೇಲೆ ನಮ್ಮ ಶರೀರದ ಒಳಗಿನ ವಿವರಗಳೆಲ್ಲ ಕಡತಗಳಿಗೆ ಸೇರುತ್ತವೆ.
ಅದು ಹೇಗೆ? ನಮ್ಮ ಪ್ರತಿಯೊಂದು ಜೀವಕೋಶದಲ್ಲೂ ವಂಶವಾಹಿ ‘ಡಿಎನ್‌ಎ’ ತಂತುಗಳು ಇರುತ್ತವೆ. ಒಂದು ಹನಿ ರಕ್ತ, ಜೊಲ್ಲು, ಕೂದಲು, ಮೂಗಿನ ಕಿಟ್ಟ, ಒಣ ಗಾಯದ ಮೇಲಿನ ಹಕ್ಕಳೆ ಹೀಗೆ ಯಾವುದನ್ನಾದರೂ ಪ್ರಯೋಗಶಾಲೆಗೆ ಒಯ್ದು ಡಿಎನ್‌ಎ ನಕ್ಷೆಯನ್ನು ಸಿದ್ಧಪಡಿಸಬಹುದು. ಅದಕ್ಕೆ ‘ಡಿಎನ್‌ಎ ಪ್ರೊಫೈಲಿಂಗ್’ ಅಥವಾ ‘ಡಿಎನ್‌ಎ ಫಿಂಗರ್ ಪ್ರಿಂಟಿಂಗ್’ ಎನ್ನುತ್ತಾರೆ.
ಒಬ್ಬ ವ್ಯಕ್ತಿಯ ನಕ್ಷೆಯನ್ನು ಬೇರೊಬ್ಬನಲ್ಲಿ ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಕೊಲೆ, ದರೋಡೆ, ಅತ್ಯಾಚಾರ ಮುಂತಾದ ಪ್ರಕರಣಗಳಲ್ಲಿ ರಕ್ತದ ಕಲೆ, ವೀರ್ಯಬಿಂದು, ಮೈ ರೋಮ ಮುಂತಾದ ಅತ್ಯಂತ ಸಣ್ಣ ಸಾಕ್ಷ್ಯ ಸಿಕ್ಕರೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅಂಥವರ ಡಿಎನ್‌ಎ ಚೆಹರೆಪಟ್ಟಿಯನ್ನು ಸಿದ್ಧಪಡಿಸಬಹುದು. ಸಂಶಯಾಸ್ಪದ ವ್ಯಕ್ತಿಗಳ ಡಿಎನ್‌ಎಯ ಚಿತ್ರಣವನ್ನು ಹೋಲಿಸಿ ನೋಡಬಹುದು. ಅಪರಾಧ ಕುರಿತು ಬೇರೆಲ್ಲ ಸಾಕ್ಷ್ಯಗಳು ದುರ್ಬಲವಾಗಿದ್ದಾಗ ಪೊಲೀಸರು ಅಂತಿಮವಾಗಿ ಡಿಎನ್‌ಎ ಪ್ರೊಫೈಲನ್ನೇ ನ್ಯಾಯಾಲಯಕ್ಕೆ ಒದಗಿಸುತ್ತಾರೆ.
ಅಪರಾಧ ಪತ್ತೆಗೆ ಇಂಥದ್ದೊಂದು ಶಸ್ತ್ರವಿದೆ ಎಂಬುದು ಗೊತ್ತಾದಾಗ ಆಳುವ ಸರ್ಕಾರ ಅದನ್ನು ತಕ್ಷಣ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. 2010ರಲ್ಲಿ ತಮಿಳು ನಾಡು ಸರ್ಕಾರ ತನ್ನ ಜೈಲಿನಲ್ಲಿರುವ ಎಲ್ಲ ವಿಚಾರಣಾಧೀನ ಕೈದಿಗಳ ಡಿಎನ್‌ಎ ನಕ್ಷೆಯನ್ನು ಪಡೆಯಲು ಬಯಸಿತ್ತು. ಅದೇ ರೀತಿ 2012ರಲ್ಲಿ ಪುಣೆಯ ಸಶಸ್ತ್ರ ಮೀಸಲು ಪಡೆಯ ವೈದ್ಯಕೀಯ ಇಲಾಖೆಯವರು ಮಿಲಿಟರಿಗೆ ಸೇರಿದ ಎಲ್ಲರ ಡಿಎನ್‌ಎ ಡೇಟಾನಿಧಿ ಸ್ಥಾಪಿಸಬೇಕೆಂದು ಶಿಫಾರಸು ಮಾಡಿದ್ದರು. ಉತ್ತರ ಪ್ರದೇಶ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೃತ ಶರೀರದ ಡಿಎನ್‌ಎ ನಕ್ಷೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕೆಂಬ ಆಜ್ಞೆ ಹೊರಡಿಸಿತ್ತು.
ಡಿಎನ್‌ಎ ತಳಿನಕ್ಷೆಯಲ್ಲಿ ನಮ್ಮ ಕುಲಗೋತ್ರದ ವಿವರಗಳೆಲ್ಲ ಸಿಗುತ್ತವೆ. ನಮಗೆ ಹಿರಿಯರಿಂದ ಬಳುವಳಿಯಾಗಿ ಏನಾದರೂ ಕಾಯಿಲೆ ಬಂದಿದ್ದರೆ ಅಥವಾ ನಾಳೆ ಬರುವಂತಿದ್ದರೆ ಅದು ಗೊತ್ತಾಗುತ್ತದೆ. ಅಂಥ ರಹಸ್ಯಗಳೆಲ್ಲ ಪೊಲೀಸ್ ಕಡತದಿಂದ ದಾಟಿ ಖಾಸಗಿ ವ್ಯಕ್ತಿಗಳ ಕೈಗೆ, ವಿಮಾ ಕಂಪನಿ ಅಥವಾ ಔಷಧ ಕಂಪನಿಗಳ ಕೈಗೆ ಸಿಕ್ಕರೆ ಅದರ ದುರ್ಬಳಕೆಯಾಗಲು ಸಾಧ್ಯವಿದೆ. ನಿಮಗೆ ಇಂಥದ್ದೇ ಕಾಯಿಲೆ ಇದೆ ಅಥವಾ ಬರಲಿದೆ ಎಂಬುದು ಗೊತ್ತಾದರೆ ಕೆಲವು ಬಗೆಯ ಉದ್ಯೋಗಾವಕಾಶ ನಿಮ್ಮ ಕೈತಪ್ಪಿ ಹೋಗಬಹುದು. ನೀವು ಮಗಳ ಮದುವೆಗೆ ಮೂರು ಪಟ್ಟು ಹೆಚ್ಚು ವರದಕ್ಷಿಣೆ ತೆರಬೇಕಾಗಿ ಬರಬಹುದು. ಅಥವಾ ನಿಮ್ಮ ಜೀವವಿಮೆಯ ಕಂತಿನ ಮೊತ್ತ ಎಷ್ಟೋ ಪಟ್ಟು ಹೆಚ್ಚಲೂಬಹುದು. ಮತ್ತೇನಿಲ್ಲದಿದ್ದರೂ ನಿಮಗೆ ಇಂಥದ್ದೊಂದು ಕಾಯಿಲೆ ಬರಲಿದೆ ಎಂದು ಔಷಧ ಕಂಪನಿಗಳು ಅಥವಾ ಹೋಮ ಹವನ ನಡೆಸುವ ಪಂಡಿತೋತ್ತಮರು ನಿಮ್ಮ ಹಿಂದೆ ಬೀಳಬಹುದು. ಏನೂ ಆಗಬಹುದು.
ಒಳ್ಳೆಯದೂ ಆಗಬಹುದು. ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಅದಲಾ ಬದಲಿ ಆದಾಗ ಮಗುವಿನ ಅಸಲೀ ತಾಯಿ ಅಥವಾ ತಂದೆ ಯಾರೆಂಬುದನ್ನು ಖಚಿತವಾಗಿ ಪತ್ತೆ ಮಾಡಬಹುದು. ಹಾಗೇ ಜಾತ್ರೆಯ ಗದ್ದಲದಲ್ಲಿ ಎಲ್ಲೋ ಕಾಣೆಯಾದ ಮಗು ಇನ್ಯಾರದೋ ಮನೆಯಲ್ಲಿ ಬೆಳೆದು ಖ್ಯಾತಿಯನ್ನೂ ಧನಕನಕವನ್ನೂ ಪಡೆದಾಗ ಅದು ತನ್ನದೇ ಮಗುವಾಗಿತ್ತೆಂದು ಅನೇಕರು ಮುಂದೆ ಬಂದರೆ ಅಸಲೀ ತನ್ನ ತಂದೆ ತಾಯಿಯನ್ನು ಗುರುತಿಸಲು ಡಿಎನ್‌ಎ ನಕ್ಷೆ ಸಹಾಯಕ್ಕೆ ಬರಬಹುದು. ಕಾಮುಕನಿಂದ ನಲುಗಿದ ಹುಡುಗಿಯ ಭ್ರೂಣದ ಪರೀಕ್ಷೆಯಲ್ಲಿ ಅಸಲೀ ತಂದೆ ಯಾರೆಂದು ಹೇಳಬಹುದು. ಕಾಂಗ್ರೆಸ್‌ನ ಹಿರಿಯ ಧುರೀಣ ಎನ್.ಡಿ. ತಿವಾರಿಯೇ ತನ್ನ ಅಪ್ಪನೆಂದು ವಾದಿಸಿ ರೋಹಿತ್ ಶೇಖರ್ ತಿವಾರಿ ನ್ಯಾಯಾಲಯದಲ್ಲಿ ಗೆದ್ದಿಲ್ಲವೆ?
ಡಿಎನ್‌ಎ ಪ್ರೊಫೈಲ್‌ನಿಂದ ಏನೆಲ್ಲ ಸಾಧ್ಯವಿದೆ ಎಂದು ವರ್ಣಿಸುತ್ತ ಎರಡು ವರ್ಷಗಳ ಹಿಂದೆ ಖಾಸಗಿ ಕಂಪನಿಯೊಂದು ಕೆಲವು ಬುರುಡೆ ಮಾತುಗಳನ್ನೂ ತನ್ನ ವೆಬ್‌ಸೈಟಿನಲ್ಲಿ ಹಾಕಿಕೊಂಡಿತ್ತು. ‘ಯಾರಲ್ಲಿ ಅಪರಾಧ ಮನೋವೃತ್ತಿ, ವಂಚನಾಗುಣ ಇದೆ, ಯಾರಲ್ಲಿ ಇಲ್ಲ ಎಂಬುದೂ ಗೊತ್ತಾಗುವುದರಿಂದ ಪೊಲೀಸರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ’ ಎಂದು ಹೇಳಿತ್ತು. ಅಂಥದ್ದೇನೂ ಸಾಧ್ಯವಿಲ್ಲ ಏಕೆಂದರೆ ಅಪರಾಧ ಮನೋವೃತ್ತಿ ಹುಟ್ಟಿನಿಂದ ಬರುವ ಗುಣವೇನಲ್ಲ. ಸಲಿಂಗ ಕಾಮಿಗಳ ಡಿಎನ್‌ಎಯಲ್ಲಿ ಕೆಲವು ಗುಣಾಣು (ಜೀನ್)ಗಳು ಲೈಂಗಿಕ ಪ್ರವೃತ್ತಿಯನ್ನು ಸೂಚಿಸುತ್ತವೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರಾದರೂ ಲೋಭ, ಮತ್ಸರ, ಮದ ಅಥವಾ ಅಪರಾಧ ಪ್ರವೃತ್ತಿಗಳು ಜೀನ್‌ನಲ್ಲಿ ಗೊತ್ತಾಗುತ್ತದೆ ಎನ್ನುವಂತಿಲ್ಲ. ಅವೆಲ್ಲ ಅವರವರು ಬೆಳೆದುಬಂದ ಪರಿಸರದ ಮೇಲೆ ನಿರ್ಧರಿತವಾಗುತ್ತವೆ. ಆದರೂ ನಿಮ್ಮ ಹುಟ್ಟಿದ ಕ್ಷಣದ ಕುಂಡಲಿ ಅಥವಾ ಜಾತಕದ ಮೇಲೆ ನಿಮ್ಮ ಭವಿಷ್ಯ ಆಧರಿಸಿದೆ ಎಂದು ಹೇಳುತ್ತ ಮುಗ್ಧರನ್ನು ಮೋಡಿ ಮಾಡುವವರು ನಮ್ಮ ಸಮಾಜದಲ್ಲಿ ಇರುವ ಹಾಗೇ ವೈಜ್ಞಾನಿಕ ವಿಧಾನದ ಡಿಎನ್‌ಎ ಪ್ರೊಫೈಲ್ ಹೆಸರಿನಲ್ಲೂ ಜನಸಾಮಾನ್ಯರಿಗೆ ಚಳ್ಳೇಹಣ್ಣು ತಿನ್ನಿಸಬಲ್ಲ ಚಾಣಾಕ್ಷರು ಹುಟ್ಟಿಕೊಳ್ಳುತ್ತಾರೆ.
ಡಿಎನ್‌ಎ ಪರೀಕ್ಷೆ ಎಂಬುದು ವಿಜ್ಞಾನಕ್ಕೆ ಸಿಕ್ಕ ಒಂದು ಅದ್ಭುತ ಅಸ್ತ್ರ. ನಮ್ಮದೇ ಪೂರ್ವಜರ ಕುಲಗೋತ್ರಗಳ ವಿವರಗಳೆಲ್ಲ ಅದರಲ್ಲಿ ಸಿಗುತ್ತವೆ. ಆದ್ದರಿಂದಲೇ ಅದನ್ನು ಪುರಾತತ್ವ ತಜ್ಞರೂ ಬಳಸುತ್ತಾರೆ. ಆಫ್ರಿಕದ ಪೂರ್ವ ತೀರದಲ್ಲಿ ವಿಕಾಸಗೊಂಡ ಮೂಲ ಮಾನವರೇ ಜಗತ್ತಿನ ಎಲ್ಲೆಡೆ ಹಂಚಿ ಹೋಗಿದ್ದಾರಷ್ಟೆ? ಆ ಮೂಲ ಮಾನವರ ಗುಣಗಳು ಮೂರು ಸಾವಿರ ಪೀಳಿಗೆಗಳ ನಂತರವೂ ನಮ್ಮಲ್ಲಿ ಹುದುಗಿಕೊಂಡಿವೆ. ಅವರಲ್ಲಿ ಕೆಲವರು ಉತ್ತರಕ್ಕೆ ಹೋಗಿ ಕ್ರಮೇಣ ಬಿಳಿಯರಾಗಿ, ಮಂಗೋಲದ ಕಡೆ ಬಂದು ಹಳದಿ ವರ್ಣದವರಾಗಿ, ಪೂರ್ವಕ್ಕೆ ಬಂದು ಕಂದು ಬಣ್ಣದವರಾಗಿ ಬದಲಾಗಿದ್ದಾರೆ. ಅವರ ಅಂಥ ವಲಸೆಯ ವಿವಿಧ ಹಂತಗಳಲ್ಲೂ ಕೆಲವು ಗುಣವಿಶೇಷಗಳು ಡಿಎನ್‌ಎಗಳಲ್ಲಿ ಸೇರ್ಪಡೆಗೊಂಡಿವೆ.
ರಾಜಸ್ತಾನದ ಗುಜ್ಜರರು, ನೀಲಗಿರಿಯ ತೋಡರು, ಆಸ್ಟ್ರೇಲಿಯಾದ ಅನಂಗುಗಳು, ಉತ್ತರ ಧ್ರುವದ ಎಸ್ಕಿಮೊಗಳು ಎಲ್ಲೆಲ್ಲಿಂದ ಬಂದರು, ಯಾವ ಮಾರ್ಗದಿಂದ ಎಷ್ಟು ಸಾವಿರ ವರ್ಷಗಳ ಹಿಂದೆ ಬಂದರು ಎಂಬುದು ಗೊತ್ತಾಗುತ್ತದೆ. ಯಾರು ಮೂಲ ನಿವಾಸಿಗಳು, ಯಾರು ವಲಸೆ ಬಂದವರು ಎಂಬುದನ್ನು ಅವರವರ ಡಿಎನ್‌ಎ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಅಷ್ಟೇ ಅಲ್ಲ, ಸರ್ಕಾರಿ ಸೌಲಭ್ಯಗಳು ಬೇಕೆಂದು ಒತ್ತಾಯಿಸುವವರು (ಉದಾ: ಗುಜರಾತಿನ ಪಟೇಲರು) ನಿಜಕ್ಕೂ ಹಿಂದುಳಿದ ಸಮುದಾಯದವರು ಹೌದೇ ಅಲ್ಲವೇ ಎಂಬುದನ್ನು ನಿರ್ಣಯಿಸಲೂ ಸಾಧ್ಯವಾಗುತ್ತದೆ. ಸರ್ಕಾರ ಅದನ್ನು ಸಾರ್ವತ್ರಿಕ ಒಳಿತಿಗೂ ಬಳಸಬಹುದು; ದಮನಕ್ಕೂ ಝಳಪಿಸಬಹುದು.
ಡಿಎನ್‌ಎ ಪ್ರೊಫೈಲ್ ಮಸೂದೆಯ ಈಗಿನ ಕಲಮುಗಳ ಪ್ರಕಾರ, ಪ್ರಜೆಗಳೆಲ್ಲರೂ ತಂತಮ್ಮ ಡಿಎನ್‌ಎ ಸ್ಯಾಂಪಲ್‌ಗಳನ್ನು ಸರ್ಕಾರಕ್ಕೆ ಕೊಡುವುದು ಕಡ್ಡಾಯವೇನಿಲ್ಲ ನಿಜ. ಆದರೆ ‘ನಿಮ್ಮ ಮೇಲೆ ಸಂಶಯವಿದೆ, ನೀವು ಸ್ಯಾಂಪಲ್ ಕೊಡಿ’ ಎಂದು ಸಬ್‌ಇನ್‌ಸ್ಪೆಕ್ಟರ್ ಬಂದು ಕೇಳಿದಾಗ ಕೊಡಲೇಬೇಕು. ನಿರಾಕರಿಸುವಂತಿಲ್ಲ. ಕೂದಲು, ಜೊಲ್ಲು ಅಥವಾ ರಕ್ತದ ಸ್ಯಾಂಪಲ್ ಕೊಟ್ಟರೆ ಸಾಲದು. ಅಧಿಕಾರಿ ಬೇಕಿದ್ದರೆ ನಿಮ್ಮ ಖಾಸಗಿ ಅಂಗಾಂಗದ ಸ್ಯಾಂಪಲ್, ಫೋಟೊ ಅಥವಾ ವಿಡಿಯೊ ಚಿತ್ರಣ ಕೂಡ ಮಾಡಬಹುದು. ನಿಮ್ಮ ಶರೀರ ನಕ್ಷೆ ಸರ್ಕಾರದ ಕಡತಕ್ಕೆ ಸೇರುತ್ತದೆ. ನೀವು ನಿರಪರಾಧಿ ಎಂದು ಗೊತ್ತಾದ ಮೇಲೂ ನಕ್ಷೆಯನ್ನು ಹಿಂಪಡೆಯುವ ಅವಕಾಶವಿಲ್ಲ. ಅಥವಾ ನಾಶ ಮಾಡಿದ್ದಕ್ಕೆ ದಾಖಲೆ ನಿಮಗೆ ಸಿಗುವುದಿಲ್ಲ. ಅವರ ಕಂಪ್ಯೂಟರಿನಲ್ಲಿದ್ದ ಮಾಹಿತಿಗಳೆಲ್ಲ ಮುಂದೊಂದು ದಿನ ನಿಮ್ಮ ದಮನಕ್ಕೆ ಬಳಕೆಯಾದರೆ ಯಾರನ್ನಾದರೂ ದೂಷಿಸುವಂತೆಯೂ ಇಲ್ಲ.
ಇಷ್ಟಕ್ಕೂ ಡಿಎನ್‌ಎ ಪರೀಕ್ಷೆಯಲ್ಲೂ ತಪ್ಪಾಗಬಹುದು. ಅಪರಾಧ ನಡೆದ ತಾಣದಲ್ಲಿ ಸ್ಯಾಂಪಲ್ ಸಂಗ್ರಹದ ವೇಳೆ ತುಸು ಎಚ್ಚರದಪ್ಪಿದರೆ, ಅಥವಾ ಸ್ಯಾಂಪಲ್ ಬಾಟಲಿಯ ಮೇಲೆ ಲೇಬಲ್ ಹಚ್ಚುವಾಗ ತಪ್ಪಾಗಬಹುದು. ಸ್ಯಾಂಪಲ್‌ಗಳನ್ನು ಎಲ್ಲೆಲ್ಲೋ ಇಟ್ಟು ಅವಕ್ಕೆ ಬೂಷ್ಟು ಹಿಡಿದು ಇಡೀ ಪರೀಕ್ಷೆಯೇ ಹಳ್ಳ ಹಿಡಿಯಬಹುದು. ಅಥವಾ ಲ್ಯಾಬ್ ತಜ್ಞನ ಮೇಲೆ ಕೆಲಸದ ಹೊರೆ ತೀರ ಜಾಸ್ತಿ ಇದ್ದರೆ (ಮೈಗಳ್ಳರಿರುವಲ್ಲಿ ಅದು ತೀರ ಸಹಜ) ಪರೀಕ್ಷೆಯ ವೇಳೆ ತುಸುವೇ ಹೆಚ್ಚುಕಮ್ಮಿಯಾದರೆ ತಪ್ಪಿತಸ್ಥ ಅಲ್ಲದ ವ್ಯಕ್ತಿಯೂ ಅಪರಾಧಿ ಎಂದೇ ಸಾಬೀತಾಗಬಹುದು. ಅದೇ ಅಂತಿಮ ಸಾಕ್ಷ್ಯವೆಂದು ಅದರ ಆಧಾರದ ಮೇಲೆ ತೀರ್ಪು ನೀಡಿದ್ದೇ ತಪ್ಪಾಗಿದ್ದು ಅನೇಕ ದೇಶಗಳಲ್ಲಿ ಬೆಳಕಿಗೆ ಬಂದಿವೆ.
ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಈ ಮಸೂದೆಯನ್ನು ಸಂಸತ್ತಿನ ಮುಂದಿಡಲು ಕಳೆದ ಹತ್ತು ವರ್ಷಗಳಲ್ಲಿ ಮೂರು ಬಾರಿ ಯತ್ನಿಸಿತ್ತು. 2013ರಲ್ಲಿ ಪರಿಶೀಲನಾ ಸಮಿತಿಯ ಸದಸ್ಯರೇ ಆಗಿದ್ದ ಕಾನೂನು ತಜ್ಞೆ ಉಷಾ ರಾಮನಾಥನ್ ಈ ಮಸೂದೆಯ ಕೆಲವು ಉಗ್ರ ಕಲಮುಗಳ ಬಗ್ಗೆ ಆಕ್ಷೇಪಿಸಿದ್ದರು. ಅಲ್ಲಲ್ಲಿ ಕೆಲವು ತಿದ್ದುಪಡಿ ತಂದು ಈಗ ನಾಲ್ಕನೆಯ ಬಾರಿ ಇದು ಸಂಸತ್ತಿಗೆ ಬಂದಿದೆ. ಬಹುಶಃ ಇದೇ ಆಖೈರು ಆವೃತ್ತಿ ಇರಬೇಕು. ಏಕೆಂದರೆ ಅದಕ್ಕೆ ಸಾರ್ವಜನಿಕರೂ ಆಕ್ಷೇಪಣೆ ಎತ್ತಲು ಅವಕಾಶ ಮಾಡಿಕೊಟ್ಟು ಅದನ್ನು ಡಿಬಿಟಿ ವೆಬ್‌ಸೈಟಿನಲ್ಲೂ ಬಿಡುಗಡೆ ಮಾಡಲಾಗಿದೆ.
ಅಲ್ಲೂ ಡಿಬಿಟಿಯ ಕೊಂಕು ಬುದ್ಧಿ ಧಾರಾಳವಾಗಿ ಎದ್ದು ಕಾಣುತ್ತದೆ; ಏಕೆಂದರೆ ಇಂಥ ಗಂಭೀರ ವಿಷಯವನ್ನು ಚರ್ಚಿಸಲು ಸಾರ್ವಜನಿಕರಿಗೆ ಎರಡು ವಾರಗಳ ಸಮಯವನ್ನೂ ಅದು ಕೊಟ್ಟಿಲ್ಲ (ಅದು ಸಾಲದೆಂಬ ಒತ್ತಾಯ ಬಂದ ಮೇಲೆ ಐದು ದಿನಗಳ ವಿಸ್ತರಣೆ ಮಾಡಿ, ಮೊನ್ನೆ ಆಗಸ್ಟ್ 25 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿತ್ತು). ಹಿಂದೆ 2010ರಲ್ಲಿ ಕುಲಾಂತರಿ ನಿಯಂತ್ರಣ ಮಸೂದೆಯನ್ನು ಸಿದ್ಧಪಡಿಸುವಾಗ ಅದರಲ್ಲಿ ಮೆಲ್ಲಗೆ ಒಂದು ಸಿಡಿಮದ್ದನ್ನು ಡಿಬಿಟಿ ತೂರಿಸಿತ್ತು. ಕುಲಾಂತರಿ ತಂತ್ರಜ್ಞಾನವನ್ನು ವಿರೋಧಿಸುವವರಿಗೆ ಜೈಲುಶಿಕ್ಷೆಯನ್ನೂ ಅದು ಶಿಫಾರಸು ಮಾಡಿತ್ತು. ಅದು ಮಾಧ್ಯಮಗಳಲ್ಲಿ ಸೋರಿಕೆಯಾಗಿ ಗಲಾಟೆಯಾದ ನಂತರ ಆ ತುಣುಕನ್ನು ಕೈಬಿಡಲಾಗಿದೆ. ಡಿಎನ್‌ಎ ಪ್ರೊಫೈಲಿನ ಈಗಿನ ಮಸೂದೆ ‘ಒಂದು ಅತ್ಯಂತ ಕೆಟ್ಟ ವೈಜ್ಞಾನಿಕ ಕತೆಯಂತಿದೆ. ಪ್ರಭುತ್ವವೇ ಹುಚ್ಚೆದ್ದು ಪ್ರಜೆಗಳ ಮೇಲೆ ಮುದ್ರೆ ಒತ್ತುತ್ತ ಕುಣಿಯುವಂತೆ ಭಾಸವಾಗುತ್ತದೆ’ ಎನ್ನುತ್ತಾರೆ, ಸುಪ್ರೀಮ್ ಕೋರ್ಟ್‌ನ ವಕೀಲೆ ಮೀನಾಕ್ಷಿ ಗುರುಸ್ವಾಮಿ.
ಅಪರಾಧಿಗಳ ಡಿಎನ್‌ಎ ಪ್ರೊಫೈಲನ್ನು ಎಲ್ಲ ಸುಧಾರಿತ ದೇಶಗಳೂ ಸಂಗ್ರಹಿಸುತ್ತವೆ. ಸುಮಾರು 60 ದೇಶಗಳಲ್ಲಿ ಇಂಥ ದತ್ತ ಸಂಚಯಗಳಿವೆ. ಬ್ರಿಟನ್ನಿನಲ್ಲಿ ಅದರ ದುರ್ಬಳಕೆಯಿಂದ ರೋಸಿಹೋದವರು 2012ರಲ್ಲಿ ಸಂಸತ್ತಿನಲ್ಲಿ ಗಲಾಟೆ ಎಬ್ಬಿಸಿ ‘ಸ್ವಾತಂತ್ರ್ಯ ರಕ್ಷಣಾ ಮಸೂದೆ’ಯನ್ನು ಚರ್ಚೆಗೆ ತಂದು ಪಾಸ್ ಮಾಡಿದ ಪರಿಣಾಮವಾಗಿ ಸರ್ಕಾರಿ ಕಡತಗಳಲ್ಲಿದ್ದ 17 ಲಕ್ಷ ವೈಯಕ್ತಿಕ ಮಾಹಿತಿಗಳನ್ನು ನಾಶ ಮಾಡಲಾಯಿತು.
ನಮ್ಮ ಸಂಸತ್ತಿನಲ್ಲೂ ಗಲಾಟೆ ಎಬ್ಬಿಸಬಲ್ಲ ಸದಸ್ಯರೇನೊ ಸಾಕಷ್ಟಿದ್ದಾರೆ. ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಬಲ್ಲವರು ಎಷ್ಟು ಮಂದಿ ಇದ್ದಾರೊ, ಬೆರಳೆಣಿಕೆ ಮಾಡಬೇಕು.
editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.