ಇಂದು `ಪ್ರೇಮಿಗಳ ದಿನ' . ಬುದ್ಧಿಯನ್ನು ಬದಿಗಿಟ್ಟು ಹೃದಯವನ್ನು ವೈಭವೀಕರಿಸುವ, ಆರಾಧಿಸುವ ದಿನ. ಭಾವನೆಗಳು ಉಕ್ಕುವುದು ಹೃದಯದಿಂದ ಎಂಬ ತಪ್ಪು ಸಂಗತಿಯನ್ನೇ ಮತ್ತೆ ಮತ್ತೆ ಜಗತ್ತಿಗೆಲ್ಲ ಸಾರಿ ಹೇಳುವ ದಿನ.
ತಮಾಷೆ ಏನು ಗೊತ್ತೆ? ಅಸಾಧ್ಯ ಸಾಮರ್ಥ್ಯದ ಮಿದುಳನ್ನು ತಲೆಯೊಳಗೆ ಹೊತ್ತಿರುವ ಈ ಮನುಷ್ಯ ಪ್ರಾಣಿ ತನಗೆ ಮಿದುಳು ಇದೆ ಎಂಬುದನ್ನು ಕಂಡುಕೊಂಡಿದ್ದೇ ತೀರ ಇತ್ತೀಚೆಗೆ. ಆಧುನಿಕ ಜಗತ್ತಿನ ಸಂಪರ್ಕವಿಲ್ಲದ ಜನರಿಗೆ ಈಗಲೂ ಮಿದುಳಿನ ಬಗ್ಗೆ ಗೊತ್ತಿರುವುದಿಲ್ಲ.
ಅವರ ಪಾಲಿಗೆ ತಲೆ ಅನ್ನೋದು ಸಾಮಗ್ರಿ ಹೊರುವ ಒಂದು ಸಾಧನ; ಆಗಾಗ ತಲೆನೋವಿನ ಆಗರ. ಐದು ಸಾವಿರ ವರ್ಷಗಳ ಹಿಂದಿನ ಈಜಿಪ್ತಿನ `ಸುಧಾರಿತ ಸಮಾಜ'ದಲ್ಲೂ ಹೃದಯವೇ ಮನುಷ್ಯನ ಗುಣಗಳನ್ನೂ ಭಾವನೆಗಳನ್ನೂ ನಿಯಂತ್ರಿಸುತ್ತದೆ ಎಂದೇ ನಂಬಿಕೆಯಿತ್ತು. ಮಹತ್ವದ ವ್ಯಕ್ತಿಗಳ ಕಳೇವರಗಳನ್ನು `ಮಮ್ಮಿಫೈ' ಮಾಡಿ, ಅಂದರೆ ಕೆಡದಂತೆ ಇಡುವಾಗಲೂ ಆ ವ್ಯಕ್ತಿಯ ತಲೆಯ ಒಳಗಿನ ಮಿದು(ಭಾಗಗ)ಳನ್ನುಕಬ್ಬಿಣದ ಕೊಕ್ಕೆಯಿಂದ ಆದಷ್ಟೂ ಚೊಕ್ಕದಾಗಿ ಕೆರೆಸಿ ತೆಗೆದು ಬುರುಡೆಯನ್ನು ಖಾಲಿ ಮಾಡಿ ಇಡುತ್ತಿದ್ದರು.
ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಬದುಕಿದ್ದ ಅರಿಸ್ಟಾಟಲ್ ಕೂಡ ಹೃದಯವನ್ನೇ ಬುದ್ಧಿಶಕ್ತಿಯ ಕೇಂದ್ರ ಎಂದು ಭಾವಿಸಿದ್ದ. ತಲೆ ಎಂದರೆ ರಕ್ತವನ್ನು ತಂಪು ಮಾಡುವ ಅಂಗ ಎಂದೇ ಆತ ಭಾವಿಸಿದ್ದ.
ಅದು ಅವನ ತಪ್ಪಲ್ಲ ಬಿಡಿ. ಮಿದುಳು ತನ್ನನ್ನು ತಾನು ಘೋಷಿಸಿಕೊಳ್ಳುವುದಿಲ್ಲ. ಪ್ರೇಮಿಯ ನೆನಪಾದಾಗ ಹೃದಯ ಹೊಡೆದುಕೊಳ್ಳುತ್ತದೆ ವಿನಾ ತಲೆ ಎಂದೂ ಡವಡವ ಅನ್ನೋದಿಲ್ಲ; ಪ್ರೇಮಿ ಕೈಕೊಟ್ಟಿದ್ದು ಗೊತ್ತಾದಾಗ ಕರುಳು ಕಿವುಚಿದಂತಾಗುತ್ತದೆ ವಿನಾ ತಲೆಗೆ ಒತ್ತಡ ಬಂದಂತಾಗುವುದಿಲ್ಲ. ಕೈಕೊಟ್ಟ ಪ್ರೇಮಿ ಬೇರೊಂದು ಸಂಗಾತಿಯನ್ನು ಅಪ್ಪಿಕೊಂಡಾಗ ಹೊಟ್ಟೆಯುರಿ ಹೆಚ್ಚುತ್ತದೆ ವಿನಾ ತಲೆ ಉರಿಯುವುದಿಲ್ಲ.
ಮಧುರ ಮಿಲನದ ಕ್ಷಣ ಬಂದಾಗ ಹೃದಯ ತಮಟೆಯ ಥರಾ ಬಡಿಯುತ್ತದೆಯಾದರೂ ತಮಟೆ ಬಡಿಯುವ ಆಸಾಮಿ ತಲೆಯೊಳಕ್ಕೆ ತೆಪ್ಪಗೆ ಕೂತಿರುತ್ತದೆ. ಅದು ನಮಗೆ ಗೊತ್ತಾಗುವುದಿಲ್ಲ. ಈಗ ಗೊತ್ತಾಗಿದೆಯಾದರೂ ತಲೆಯೊಳಗಿನ ಆ ವಕ್ರವಕ್ರಅಂಗದ ಚಿತ್ರವನ್ನು ಹೃದಯದಷ್ಟು ಸುಂದರವಾಗಿ ಬರೆಯಲು ಸಾಧ್ಯವೆ? ಬರೆಯಲು ಹೋದರೆ ಪ್ರೇಮಿಯಿಂದ ಬೈಸಿಕೊಳ್ಳಬೇಕಾದೀತು. ಅದಕ್ಕೇ ಜಗತ್ತಿನ ಎಲ್ಲ ಸಂಸ್ಕೃತಿಯಲ್ಲೂ ಹೆಡ್‌ಗಿಂತ ಹೆಚ್ಚಾಗಿ ಹಾರ್ಟ್‌ಗೇ ಮಾನ್ಯತೆ ಇದೆ.
ಉರು ಹೊಡೆಯುವುದನ್ನು ಇಂಗ್ಲಿಷ್‌ನಲ್ಲಿ `ಬೈ ಹಾರ್ಟ್' ಮಾಡುವುದು ಎಂತಲೇ ಕರೆಯುತ್ತಾರೆ. ಮನಸ್ಸಿಗೆ ತೀರ ಆಹ್ಲಾದಕರ ಸಂಗತಿಯನ್ನು ನಾವು `ಹೃದಯಂಗಮ' ಎಂದು ಬಣ್ಣಿಸುತ್ತೇವೆ. ಹೃದಯದ ಕರೆಗೆ ಓಗೊಡುತ್ತೇವೆ ವಿನಾ ಮಿದುಳಿನ ಕರೆಗೆ ಕ್ಯಾರೇ ಅನ್ನುವುದಿಲ್ಲ.
ಆದರೆ ವಿಜ್ಞಾನಿಗಳಿಗೆ ಮಿದುಳು ತನ್ನ ವಿರಾಟ್ ರೂಪವನ್ನು ಹಂತಹಂತವಾಗಿ ತೋರಿಸುತ್ತಿದೆ. ತನ್ನ ಯಾವ ಕ್ರಿಯೆಯನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನೂ ಅದು ಕಲಿಸುತ್ತಿದೆ. ಪ್ರೀತಿ, ಭಕ್ತಿ, ಕೋಪ, ವಿಶ್ವಾಸ, ಮದ, ಮತ್ಸರ, ದೋಸ್ತಿ ಇಂಥ ಎಲ್ಲ ಬಗೆಯ ಭಾವನೆಗಳೂ ನಮ್ಮ ಮಿದುಳಿನಲ್ಲೇ ಸಿದ್ಧವಾಗುತ್ತವೆ; ಅವಕ್ಕೆ ಬೇಕಾದ ಚೋದರಸ (ಹಾರ್ಮೋನ್)ಗಳು ದೇಹದ ಅನೇಕ ಭಾಗಗಳಲ್ಲಿ ಉದ್ಭವವಾಗುತ್ತವೆ.
ನಮ್ಮ ದೇಹದಲ್ಲಿ ಸುಮಾರು 65 ಬಗೆಯ ಸ್ರಾವಗಳಿದ್ದು ಅವುಗಳಲ್ಲಿ ಕೇವಲ ಎಂಟು ಮಾತ್ರ ನಮ್ಮ ದಿನನಿತ್ಯದ ಕ್ರಿಯೆಗಳನ್ನು ಅಂದರೆ ಬೆಳವಣಿಗೆ, ಜೀರ್ಣಕ್ರಿಯೆ, ಲೈಂಗಿಕ ಚಟುವಟಿಕೆ, ಕೋಪತಾಪಗಳನ್ನು ನಿರ್ಧರಿಸುತ್ತವೆ. ಹಠಾತ್ತಾಗಿ ಅಪಾಯವನ್ನು ಎದುರಿಸಿದಾಗ ಮಿಂಚಿನ ವೇಗದಲ್ಲಿ ಅಡ್ರಿನಾಲಿನ್ ಸ್ಫುರಿಸಿ, ನಮ್ಮನ್ನು ಓಡಲು ಇಲ್ಲವೆ ಹೋರಾಡಲು ಪ್ರೇರೇಪಿಸುತ್ತವೆ. ಕತ್ತಲೆಯಲ್ಲಿ ಹಾವಿನಂಥ ಬಳ್ಳಿಯೊಂದು ಕಾಲಿಗೆ ತಾಕಿತಾಗ ಶಾಕ್ ಹೊಡೆದವರಂತೆ ಆಚೆ ಜಿಗಿಯುತ್ತೇವೆ.
ಹೃದಯ ಜೋರಾಗಿ ಬಡಿದುಕೊಳ್ಳುತ್ತ ರಕ್ತವನ್ನು ಎಲ್ಲೆಡೆ ರವಾನಿಸುತ್ತದೆ. ಜೋರಾಗಿ ಉಸಿರಾಟ ಆರಂಭವಾಗಿ ರಕ್ತಕ್ಕೆ ತುರ್ತಾಗಿ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ಕಣ್ಣಾಲಿಗಳು ದೊಡ್ಡದಾಗಿ ಅಕ್ಷಿಪಟಲಕ್ಕೆ ಆದಷ್ಟು ಹೆಚ್ಚು ಬೆಳಕನ್ನು ನುಗ್ಗಿಸುತ್ತದೆ; ನಸುಗತ್ತಲಲ್ಲೂ ದೃಶ್ಯಗಳೆಲ್ಲ ಚೆನ್ನಾಗಿ ಕಾಣುವಂತಾಗುತ್ತದೆ. ರೋಮಗಳು ನಿಮಿರಿ ನಿಂತು ಬೆವರಿನ ಗ್ರಂಥಿಗಳು ತೆರೆದುಕೊಂಡು ದೇಹವನ್ನು ತಂಪು ಮಾಡಲು ಯತ್ನಿಸುತ್ತವೆ.
ಹೀಗೆ ಒಂದೊಂದು ಸಂದರ್ಭದಲ್ಲಿ ಒಂದೊಂದು ಬಗೆಯ ಅಂತಸ್ರಾವಗಳು ನಮಗೆ ಅರಿವಿಲ್ಲದಂತೆ ರಸದುತ್ಪತ್ತಿ ಮಾಡುತ್ತವೆ. ಮೆಲನಿನ್‌ನಂಥ ಕೆಲವು ಹಾರ್ಮೋನ್‌ಗಳು ಭ್ರೂಣದ ಸ್ಥಿತಿಯಲ್ಲೇ ಸ್ರವಿಸುತ್ತ ಹಗಲು-ರಾತ್ರಿಯ ವ್ಯತ್ಯಾಸವನ್ನು ಹೇಳುವ ಜೈವಿಕ ಗಡಿಯಾರಕ್ಕೆ ಚಾಲನೆ ನೀಡಲು ತೊಡಗುತ್ತವೆ. ಲೈಂಗಿಕ ಹಾರ್ಮೋನ್‌ಗಳು ಹದಿಹರಯದವರೆಗೂ ಬಾಗಿಲು ಮುಚ್ಚಿಕೊಂಡಿದ್ದು ಆಮೇಲೆ ತೆರೆದುಕೊಳ್ಳುತ್ತವೆ.
ಪ್ರೇಮಕ್ಕೆ ಯಾವ ಹಾರ್ಮೋನ್ ಕಾರಣ? ಲವ್‌ಎಂಬುದು ಎಲ್ಲಿ, ಯಾಕೆ, ಹೇಗೆ ಉದ್ಭವವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಜೀವವಿಜ್ಞಾನಿಗಳು, ಮನೋ ವಿಜ್ಞಾನಿಗಳು ಸಾಕಷ್ಟು ಹೆಣಗಿದ್ದಾರೆ. ಉತ್ಕಟ ಪ್ರೇಮಿಗಳನ್ನು ಪ್ರಯೋಗಶಾಲೆಯಲ್ಲಿ ಕೂರಿಸಿ, ಮಲಗಿಸಿ, ಚಿತ್ರ ತೋರಿಸಿ ಪ್ರಶ್ನೆ ಕೇಳಿ ಉತ್ತರ ಪಡೆದು,ರಕ್ತ ಪರೀಕ್ಷೆ ಮಾಡಿ, ಇಡೀ ದೇಹವನ್ನು ಸ್ಕ್ಯಾನ್ ಮಾಡಿ, ಮಿದುಳಿನ ನರವ್ಯೆಹಗಳಿಗೆ ಕೆಮಿಕಲ್ ತೂರಿಸಿ, ದಾಖಲಿಸಿದ್ದಾರೆ.
ಪ್ರೇಮದ ಮತ್ತಿನಲ್ಲಿರುವ ಪ್ರಾಣಿಗಳನ್ನು ಪಂಜರದಲ್ಲಿ ಕೂಡಿ ಹಾಕಿ ಇಂಜಕ್ಷನ್ ಕೊಟ್ಟು ಅವರ ಮಧ್ಯೆ ವಿರಸದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಪರಸ್ಪರ ಕ್ಯಾರೇ ಎನ್ನದ ಗಂಡು ಹೆಣ್ಣನ್ನು ಒಟ್ಟಿಗೆ ಇಟ್ಟು ಅವುಗಳ ರಕ್ತಕ್ಕೆ ಆಕ್ಸಿಟೋಸಿನ್ ಎಂಬ ಹಾರ್ಮೋನ್ ತೂರಿಸಿ ಅವೆರಡೂ ಪ್ರಾಣಿಗಳು ಊಟಉಣಿಸು ಬಿಟ್ಟು ಅಪ್ಪುಗೆಯಲ್ಲಿರುವಂತೆ ಮಾಡಿದ್ದಾರೆ. ಪ್ರೇಮಿಯ ನ್ಯೂನತೆಗಳೆಲ್ಲ ಹೇಗೆ ತಂತಾನೆ ಮುಚ್ಚಿಹೋಗಿ, ಪ್ರೇಮ ಕುರುಡಾಗುತ್ತದೆ ಎಂದು ಬಣ್ಣಿಸಿದ್ದಾರೆ. ಪ್ರೇಮದ ಅಮಲು ಏಕೆ ಕ್ರಮೇಣ ಇಳಿಯುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ಒಲವು, ಪ್ರೇಮ, ಪ್ರೀತಿ, ಲೈಂಗಿಕ ಇಚ್ಛೆ, ಒಂದಲ್ಲ, ನಾಲ್ಕು ಪ್ರಮುಖ ಕೆಮಿಕಲ್‌ಗಳು ಕಾರಣವಾಗುತ್ತವೆ ಎಂದು ನಿರ್ಧರಿಸಿ, ಅವುಗಳನ್ನು ಹಂತಹಂತವಾಗಿ ವಿವರಿಸಿದ್ದಾರೆ.
ಹದಿಹರಯದ ಮೊದಲ ಹಂತವೆಂದರೆ ಆಕರ್ಷಣೆ: ಅವನನ್ನು/ ಅವಳನ್ನು ಕಂಡಾಗ ಮಿದುಳಿನಲ್ಲಿ ಫಿನೈಲೀಥೈಲ್ ಅಮೈನ್ ಎಂಬ ಹಾರ್ಮೋನು ಸ್ರವಿಸುತ್ತದೆ. ಹೃದಯ ಡವಗುಡುತ್ತದೆ; ಹೊಟ್ಟೆಯಲ್ಲಿ ತಳಮಳ ಉಂಟಾಗುತ್ತದೆ. ಕೈಕಾಲು ಅದುರುತ್ತವೆ. ದೇಹಗಳು ಸಮೀಪ ಬಂದಾಗ ಟೆಸ್ಟೊಸ್ಟೆರೊನ್ ಎಂಬ ಇನ್ನೊಂದು ಹಾರ್ಮೋನ್ ಬಿಡುಗಡೆಯಾಗುತ್ತದೆ. ಇವೆಲ್ಲವೂ ಬೇಡಬೇಡವೆಂದರೂ ಆಗುವಂಥ ಪ್ರಕ್ರಿಯೆ. ಏಕೆಂದರೆ ಮಿದುಳಿನ ತೀರ ಆಳದಲ್ಲಿ ಜರುಗುವ ಮೃಗೀಯ ಸ್ಪಂದನ ಇದು.
ಎರಡನೆಯ ಹಂತದ್ದು ಪ್ರಣಯ: ಮಿದುಳಿನ ಉನ್ನತ ವಲಯದಲ್ಲಿ ಡೋಪಮೈನ್ ಎಂಬ ಕೆಮಿಕಲ್ ಸ್ಫುರಿಸಿದಾಗ ಆಗುವಂಥದ್ದು. ದೃಷ್ಟಿಗೆ ದೃಷ್ಟಿ ಕೂಡುತ್ತದೆ. ಪದಗಳಿಗೆ ಸಿಗದ ಸಿಗ್ನಲ್‌ಗಳು ಎರಡೂ ದೇಹಗಳಿಂದ ವಿನಿಮಯ ಆಗುತ್ತವೆ. `ಐ ಲವ್ ಯೂ' ಎಂಬ ಪದವನ್ನು ಬಳಸುವ ಮೊದಲೇ ಇಬ್ಬರಲ್ಲೂ ಸಂಚಲನವಾಗಿರುತ್ತದೆ. ಕೆಲವು ಬಾರಿ ಇದು ಏಕಮುಖವಾಗಿರುತ್ತದೆ. ಡೋಪಮೈನ್ ಸ್ರಾವದ ಫಲದಿಂದಾಗಿ ಒಂದು ಬಗೆಯ ಅಂಧಚಿಂತನೆ ಆವರಿಸುತ್ತದೆ. ತಾನು ಪ್ರೇಮಿಸಿದ ವ್ಯಕ್ತಿಯ ಯಾವ ದೋಷವೂ ಗಮನಕ್ಕೆ ಬರುವುದಿಲ್ಲ. ಹಗಲೂ ರಾತ್ರಿ ಪ್ರೇಮಿಯದೇ ಚಿಂತೆ.
ಈ ಹಾರ್ಮೋನಿನ ಅಡ್ಡ ಪರಿಣಾಮದಿಂದಾಗಿ ನಿದ್ದೆ ಹತ್ತುವುದಿಲ್ಲ; ಊಟ ಸೇರುವುದಿಲ್ಲ. ಒಂದರ್ಥದಲ್ಲಿ `ಪ್ರೇಮಜ್ವರ' ಬಾಧಿಸುತ್ತದೆ. ತನ್ನನ್ನು ಆದಷ್ಟೂ ಹೆಚ್ಚು ಸಿಂಗರಿಸಿಕೊಳ್ಳುತ್ತ, ಕವಿತೆ ಬರೆಯುತ್ತ, ಅವಳನ್ನು/ ಅವನನ್ನು ಮೆಚ್ಚಿಸುವ ಕೆಲಸಗಳಲ್ಲೇ ಮನಸ್ಸು ತಲ್ಲೆನವಾಗುತ್ತದೆ. ತಾನು ಪ್ರೇಮಿಸಿದ ವ್ಯಕ್ತಿಯನ್ನು ಅಡಿಗಡಿಗೂ ಹಿಂಬಾಲಿಸಬೇಕೆಂಬ `ಸ್ಟಾಕಿಂಗ್' ವಾಂಛೆ ಬೆಳೆಯುತ್ತದೆ. ಒಂದೆರಡು ದಿನ ಪ್ರೇಮಿ ಕಾಣಿಸದಿದ್ದರೂ ಚಿತ್ತ ವಿಲವಿಲ ಎನ್ನುತ್ತದೆ.
ಡೋಪಮೈನ್ ಹಾರ್ಮೋನಿನಿಂದಾಗಿ ಸ್ಫುರಿಸುವ ಈ ಪ್ರಣಯ ಭಾವನೆ ತೀರ ಬಲಶಾಲಿ ಮತ್ತು ಅಷ್ಟೇ ಸೂಕ್ಷ್ಮವೂ ಆಗಿರುತ್ತದೆ. ತಾನು ಪ್ರೇಮಿಸಿದ ವ್ಯಕ್ತಿಯಿಂದ ಸೂಕ್ತ ಸ್ಪಂದನ ಸಿಗದಿದ್ದರೆ ಪ್ರೇಮವೇ ಅತಿಯಾದ ಹತಾಶೆಗೆ, ಕೋಪಕ್ಕೆ ತಿರುಗುತ್ತದೆ. ವಿವೇಕ ಕಳೆದುಕೊಂಡ ವ್ಯಕ್ತಿ ತನ್ನದೇ ಪ್ರೇಮಿಯ ಮುಖಕ್ಕೆ ಆಸಿಡ್ ಎರಚಬಹುದು; ಹತ್ಯೆಗೆ ಮುಂದಾಗಬಹುದು.
ಮೂರನೆಯ ಹಂತದ್ದು ಪ್ರೇಮ ಬಂಧನ. ಫೆರೊಮೊನ್ ಸ್ರವಿಸುತ್ತದೆ. ಇಬ್ಬರದೂ ಕೂಡಿಕೆಯಾಗುತ್ತದೆ. ಎಂಡಾರ್ಫಿನ್ ಎಂಬ ಉಲ್ಲಾಸದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಪ್ರೇಮ ಮತ್ತು ಸೆಕ್ಸ್ ಎರಡನ್ನೂ ಜೋಡಿಸುವ ಅಂಟು ಅನ್ನಿ. ಜೊತೆಗೆ ಟೆಸ್ಟೊಸ್ಟೆರೋನ್ ಮತ್ತು ಈಸ್ಟ್ರೋಜೆನ್ ಸೇರಿ ಒಂದು ಬಗೆಯ ಉನ್ಮಾದದ ಸ್ಥಿತಿ ಇಬ್ಬರನ್ನೂ ಆವರಿಸುತ್ತದೆ.
ಎರಡು ದೇಹ, ಒಂದು ಜೀವ. ಇಬ್ಬರ ಆಲೋಚನೆಯೂ ಒಂದೇ ಆಗುತ್ತದೆ. ಓಡಿ ಹೋಗೋಣ, ಕೂಡಿ ಬಾಳೋಣ ಅಥವಾ ಈ ಜಗತ್ತಿಗೇ ವಿದಾಯ ಹೇಳೋಣ ಎಂಬ ನಿರ್ಣಯಗಳೆಲ್ಲ ಈ ಹಂತದಲ್ಲಿ ಬರುತ್ತದೆ. ಇದೇ ಹಂತದಲ್ಲಿ ಇಬ್ಬರನ್ನೂ ಬಿಗಿ ಬಂಧದಲ್ಲಿಡಲು ಆಕ್ಸಿಟೋಸಿನ್ (ಗಂಡಸರಲ್ಲಿ ವಾಸೊಪ್ರೆಸಿನ್) ಎಂಬ ಇನ್ನೊಂದು ಹಾರ್ಮೋನ್ ಸ್ರವಿಸುತ್ತದೆ. ಇಬ್ಬರೂ ಜೊತೆಯಾಗಿರಲು ಇದು ಸಹಕಾರಿ.
ನಾಲ್ಕನೆಯ ಹಂತವೆಂದರೆ ದೀರ್ಘ ಕಾಲದ ನಂಟಿನ ಹಂತ. ಕಷ್ಟವೊ ಸುಖವೊ, ಕುರೂಪವೊ ಸುಂದರವೊ ಯಾವುದನ್ನೂ ಲೆಕ್ಕಿಸದೆ `ನನಗೆ ನೀನು, ನಿನಗೆ ನಾನು' ಎಂದೆನಿಸುವ ಸುಸ್ಥಿರ ಪ್ರೇಮದ ಹಂತ; ಈ ಹಂತದಲ್ಲಿ ಬೇರೆ ಸ್ಫುರದ್ರೂಪಿ ತರುಣನಾಗಲೀ ಸುಂದರ ಯುವತಿಯಾಗಲೀ ಇವರ ಕಣ್ಣಿಗೆ ಬೀಳುವುದೇ ಇಲ್ಲ. ಇದು ಸುಗಮ ದಾಂಪತ್ಯ ಜೀವನಕ್ಕೆ ಕಾಲಿಡುವ ಹಂತ.
ಪ್ರೇಮದ ಉನ್ಮಾದ, ಹನಿಮೂನ್ ಸಂದರ್ಭದ ಉತ್ಕಟ ಅಮಲು ಕ್ರಮೇಣ ಏಕೆ ಇಳಿಯಬೇಕು? ಬದುಕು ಹೀಗೇ ಇರಬಾರದೆ? ಎಂದು ಅನಿಸಿದರೂ ವಾಸ್ತವ ಜಗತ್ತಿಗೆ ಕ್ರಮೇಣ ಮರಳುತ್ತೇವೆ ಏಕೆ? ಇದಕ್ಕೆ ಕಾರಣ ಸರಳವಾಗಿದೆ. ಪ್ರೇಮದ ಅಮಲಿನಲ್ಲೇ ಇದ್ದುಬಿಟ್ಟರೆ ಜೀವನ ನಡೆಯಲಾರದು. ಆಹಾರ, ಆರೋಗ್ಯ ರಕ್ಷಣೆ, ನಿದ್ರೆ, ಬದುಕಿನ ಭದ್ರತೆ, ಸಂತಾನದ ಸುರಕ್ಷೆ ಇವೆಲ್ಲವನ್ನೂ ನೋಡಿಕೊಳ್ಳಬೇಕಾಗುತ್ತದೆ. ಆದರೆ ಪ್ರೇಮದ ಕಾವು ಇಳಿದು ಸ್ತಿಮಿತದ ಹಂತಕ್ಕೆ ಬಂದರೂ ಪರಸ್ಪರ ಬಂಧನದ ಬಿಗಿತ ಕಡಿಮೆಯಾಗದ ಹಾಗೆ ಆಕ್ಸಿಟೋಸಿನ್ ಆಗಾಗ ಸ್ರವಿಸುತ್ತಲೇ ಇರುತ್ತದೆ.
ಆದರೂ ಬಂಧನಗಳು ಸಡಿಲವಾಗುತ್ತವೆ. ಒತ್ತಡದ ಬದುಕಿನಲ್ಲಿ ಜಗಳ, ಖಿನ್ನತೆ, ಮನಸ್ತಾಪ, ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಸಂಸಾರ ಬಂಧನದ ವೈಖರಿ ಬದಲಾಗಿದೆ. ನಾಲ್ವತ್ತು ಸಾವಿರ ವರ್ಷಗಳಿಂದ ಗಂಡೆಂಬ ಪ್ರಾಣಿ ಬೇಟೆಯಾಡುತ್ತ, ವೈರಿಗಳೊಂದಿಗೆ ಸೆಣಸುತ್ತ, ಆಹಾರ ಮತ್ತು ಭದ್ರತೆಯ ಹೊಣೆ ಹೊತ್ತಿದ್ದಾಗ ಹೆಣ್ಣೆಂಬ ಜೀವಿ ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುತ್ತ ಸಂತಾನ ಸುಭದ್ರತೆಯ ನೋಡಿಕೊಳ್ಳುತ್ತಿದ್ದ ಪರಿಸ್ಥಿತಿ ಈಗಿಲ್ಲ.
ನಿಸರ್ಗದಿಂದ ದೂರ ದೂರ ಸಾಗುತ್ತ ಕಾಂಕ್ರೀಟ್ ಸೌಧಗಳಲ್ಲಿ ಒಟ್ಟೊಟ್ಟಿಗೇ ಇದ್ದರೂ `ನಾನೊಂದು ತೀರ, ನೀನೊಂದು ತೀರ' ಎಂಬಂತಾಗುತ್ತಿದೆ. ಅದಕ್ಕೇ ವಿಜ್ಞಾನಿಗಳು ಮಿದುಳಿನ ಸ್ರಾವಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುತ್ತಿದ್ದಾರೆ. ಲೈಂಗಿಕ ಆಕರ್ಷಣೆ ಮತ್ತು ಬಂಧನವನ್ನು ಬಿಗಿಯಾಗಿಡಬಲ್ಲ `ಥೆರಾಪುಟಿಕ್ ಬಯೊಕೆಮಿಸ್ಟ್ರಿ' ಎಂಬ ಅಧ್ಯಯನ ಶಾಖೆಯೇ ಆರಂಭವಾಗಿದೆ. ಕೃತಕ ಪರಿಮಳ, ಕೃತಕ ಬೆಳಕು, ಕೃತಕ ಕೆಮಿಕಲ್, ಕೃತಕ ಸಸ್ಯಗಳ ಜತೆಗೆ ಕೃತಕ ಆಕ್ಸಿಟೋಸಿನ್, ಕೃತಕ ಡೋಪಮೈನ್‌ಗಳೂ ಸಿದ್ಧವಾಗಿವೆ. ಮುಂಬರುವ ದಿನಗಳಲ್ಲಿ `ಪ್ರೇಮಿಗಳ ದಿನಾಚರಣೆ'ಯ ಸಂಭ್ರಮದ ಸಿದ್ಧತೆಗೆಂದು ಉಡುಗೊರೆ ಅಂಗಡಿಗಳಿಗೆ ಹೋದರೆ ಸಾಲದು, ಔಷಧ ಅಂಗಡಿಗಳನ್ನೂ ಭೇಟಿ ಮಾಡಬೇಕು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.