ಸುಮಾರು 30 ಸಾವಿರ ವರ್ಷಗಳ ಹಿಂದೆ ನಮಗೊಬ್ಬ ಅಣ್ಣನಿದ್ದ. `ನಿಯಾಂಡರ್ತಲ್' ಹೆಸರಿನ ಆತ ನಮ್ಮಂತೆಯೇ ಎರಡು ಕಾಲುಗಳಲ್ಲಿ ನಡೆಯುವ, ಮಾತಾಡುವ, ಕಟ್ಟುಮಸ್ತಾದ, ಪ್ರಾಯಶಃ ನಮಗಿಂತ ಚುರುಕಾದ ಜೀವಿಯಾಗಿದ್ದು ಮನಷ್ಯರಿಗಿಂತ ತುಸು ಭಿನ್ನ ವಂಶಸ್ಥನಾಗಿದ್ದ. ಋತುಮಾನ ಏರುಪೇರಾಯಿತೊ, ಜ್ವಾಲಾಮುಖಿ ಸಿಡಿಯಿತೊ, ಮನುಷ್ಯರೇ ಬಡಿದು ಕೊಂದರೊ ಅಂತೂ, ನಿಗೂಢ ಕಾರಣಗಳಿಂದ ಆತನ ವಂಶವೇ ನಿರ್ನಾಮವಾಯಿತು.
ಅವನ ವಂಶಜರ ಹಳೇ ಮೂಳೆಗಳಿಂದ ಮತ್ತೆ ನಿಯಾಂಡರ್ತಲ್‌ಗೆ ಜನ್ಮ ಕೊಡಲು ಸಾಧ್ಯವಿದೆ. ಕಂಪ್ಯೂಟರ್ ಕಲಿಸಿ, ಸರ್ಕಸ್ ಮಾಡಿಸಿ, ಅವನನ್ನು ಮಂಗಳಲೋಕಕ್ಕೂ ಕಳಿಸಿ ಮಜಾ ನೋಡಬಹುದು. ಅಂಥ ಸಾಧ್ಯತೆಯ ಬಗ್ಗೆ ಮಾತಾಡಲು ಹೋಗಿ ವಿಜ್ಞಾನಿಯೊಬ್ಬ ಫಜೀತಿಗೆ ಸಿಲುಕಿದ ಘಟನೆ ಈಚೆಗೆ ನಡೆಯಿತು. `ಅವರ ಜೀವಂತ ಭ್ರೂಣಗಳನ್ನು ಮರುಸೃಷ್ಟಿ ಮಾಡುತ್ತೇವೆ. ಆದರೆ ಅದನ್ನು ಗರ್ಭದಲ್ಲಿಟ್ಟು ಪೋಷಿಸಿ, ಮಗುವಿಗೆ ಜನ್ಮ ಕೊಡಬಲ್ಲ ಧೀರ ಮಹಿಳೆ ಯಾರಾದರೂ ಇದ್ದಾರೆಯೆ?' ಎಂದು ಹಾರ್ವರ್ಡ್ ಪ್ರೊಫೆಸರ್ ಜಾರ್ಜ್ ಚರ್ಚ್ ಎಂಬಾತ ಕೇಳಿದ್ದು ಜರ್ಮನಿಯ ಖ್ಯಾತ `ಡರ್‌ಸ್ಪೀಗೆಲ್' ಪತ್ರಿಕೆಯಲ್ಲಿ ಪ್ರಕಟವಾಯಿತು.
ಆಗಿದ್ದೇ ತಡ, ಬಾಡಿಗೆ ತಾಯಂದಿರು ಸಾಲುಗಟ್ಟಿ ಮುಂದೆ ಬರುವುದು ಹಾಗಿರಲಿ, ಪ್ರತಿಭಟನೆಯ ಸುರಿಮಳೆಗಳೇ ಬಂದವು. ನಮ್ಮ ಮೋಜಿಗಾಗಿ ಆತ ಬರಬೇಕೆ? ವಿಕಲಾಂಗ, ಮತಿಭ್ರಷ್ಟ, ದೈತ್ಯಶಿಶು ಹುಟ್ಟಿದರೆ ಏನು ಮಾಡುವುದು? ಪ್ರಸವದಲ್ಲೇ ಬಾಡಿಗೆ ತಾಯಿ ಸತ್ತರೆ ಏನು ಮಾಡುತ್ತೀರಿ? ಕಂಗಾಲಾದ ಚರ್ಚ್ ಮಹಾಶಯ, `ನಾನು ಹಾಗೆ ಹೇಳಲೇ ಇಲ್ಲ, ಅಂಥ ದುಸ್ಸಾಹಸ ಸದ್ಯಕ್ಕೆ ಸಾಧ್ಯವೇ ಇಲ್ಲ, ಜರ್ಮನ್ ವರದಿಗಾರ್ತಿ ತಪ್ಪಾಗಿ ನನ್ನ ಮಾತನ್ನು ತರ್ಜುಮೆ ಮಾಡಿದ್ದಾಳೆ... ನಾನೇನೂ ಡಾಕ್ಟರ್ ಮೋರೋ ಅಲ್ಲ!' ಎಂದೆಲ್ಲ ಹೇಳಿ, ಎಡಬಿಡಂಗಿ ರಾಜಕಾರಣಿಯ ಹಾಗೆ ನುಣುಚಿಕೊಳ್ಳಬೇಕಾಯಿತು. ಮನುಷ್ಯನಲ್ಲದ, ಆದರೆ ಮನುಷ್ಯನಂತೆ ನಡೆದಾಡುವ ಇನ್ನೊಂದು ಪ್ರಾಣಿ ಹೇಗಿರುತ್ತದೆ ಎಂದು ನೋಡುವ ತೆವಲಿದ್ದವರಿಗೆ ನಿರಾಸೆಯಾಯಿತು.
ಡಾಕ್ಟರ್ ಮೋರೋ ಎಂಬಾತ ಒಬ್ಬ ಕಾಲ್ಪನಿಕ ವಿಜ್ಞಾನಿ. ನೂರಿಪ್ಪತ್ತು ವರ್ಷಗಳ ಹಿಂದೆ ಎಚ್.ಜಿ.ವೆಲ್ಸ್ ಬರೆದ ಕಾದಂಬರಿಯ ಕೇಂದ್ರ ಪಾತ್ರ. ಆತ ಒಂದು ದ್ವೀಪದಲ್ಲಿ ಪ್ರಾಣಿಗಳನ್ನು ಮನುಷ್ಯರಲ್ಲಿ ಕಸಿ ಮಾಡಿ ದೇವತಾ ಮನುಷ್ಯರನ್ನು ಸೃಷ್ಟಿ ಮಾಡಲು ತೊಡಗುತ್ತಾನೆ. ದುಷ್ಟರಾಗದ, ಭ್ರಷ್ಟರಾಗದ ಮನುಷ್ಯ ರೂಪದ ಪ್ರಾಣಿಗಳನ್ನು ಸೃಷ್ಟಿಸಲು ಹೋಗಿ ಏನೇನು ಭಾನಗಡಿ ಮಾಡುತ್ತಾನೆ. ವೆಲ್ಸ್ ಬರೆದ `ದಿ ಐಲ್ಯಾಂಡ್ ಆಫ್ ಡಾಕ್ಟರ್ ಮೋರೋ' ಹೆಸರಿನ ಕಾದಂಬರಿಯನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಸಿನಿಮಾ ಮಾಡಲಾಗಿದೆ.
ನಿರ್ವಂಶವಾದ ಜೀವಿಗಳಿಗೆ ಮತ್ತೆ ಜನ್ಮ ಕೊಡುವ `ಜುರಾಸಿಕ್ ಪಾರ್ಕ್' ಕತೆ ನಮಗೆಲ್ಲ ಗೊತ್ತಿದೆ. ಆರು ಕೋಟಿ ವರ್ಷಗಳ ಹಿಂದೆ ಡೈನೊಸಾರ್ ಎಂಬ ದೈತ್ಯಗಳ ರಕ್ತವನ್ನು ಗಡದ್ದಾಗಿ ಹೀರಿದ ಕೆಲವು ಸೊಳ್ಳೆಗಳು ಅಂದಿನ ಗಿಡಮರಗಳಲ್ಲಿ ಸ್ರವಿಸುವ ಅಂಟಿನಲ್ಲಿ ಸಿಲುಕುತ್ತವೆ. ಮರಗಳು ನಾಶವಾದರೂ ಆ ಅಂಟಿನ ಮುದ್ದೆ ಮುಂದೆ ಶಿಲಾರಾಳವಾಗಿ, ಶಿಲೆಗಳ ಮಧ್ಯೆ ಸೇರಿ ಇವೊತ್ತಿನ ವಿಜ್ಞಾನಿಗೆ ಸಿಗುತ್ತದೆ. ಆ ಶಿಲಾರಾಳದಲ್ಲಿರುವ ಸೊಳ್ಳೆಯ ಹೊಟ್ಟೆಯಲ್ಲಿ ಡೈನೊಸಾರ್ ಪ್ರಾಣಿಯ ರಕ್ತವೇ ಇರುತ್ತದೆ. ಅಂಥ ರಕ್ತದಿಂದ ಆಕರಕೋಶಗಳನ್ನು ಹೀರಿ ತೆಗೆದು, ತದ್ರೂಪಿ ಡೈನೊಸಾರ್‌ಗಳ ಭ್ರೂಣಗಳನ್ನು ಸೃಷ್ಟಿಸಿ, ಮೊಟ್ಟೆಗಳಿಗೆ ಕಾವು ಕೊಟ್ಟು, ಬೃಹತ್ ಗಾತ್ರದ ಡೈನೊಸಾರ್‌ಗಳನ್ನು, ಜತೆಗೆ ಅನೇಕ ಅನರ್ಥಗಳನ್ನು ಸೃಷ್ಟಿ ಮಾಡುವ ತಲೆತಿರುಕನ ಕತೆ ಅದು.
ಅಂಥ ವೈಜ್ಞಾನಿಕ ಕಲ್ಪನೆಗಳು ಇಂದು ನಿಜವಾಗುತ್ತಿವೆ. ನಿರ್ವಂಶವಾದ ಜೀವಿಗಳ ಮರುಸೃಷ್ಟಿ ತಂತ್ರ ಈಗಿನ ತಳಿತಂತ್ರಜ್ಞಾನಿಗಳಿಗೆ ಸಿದ್ಧಿಸತೊಡಗಿದೆ. ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಗುಡ್ಡದ ಮೇಕೆಯನ್ನು ಹೋಲುವ ಬುಕಾರ್ಡೊ (ಪೈರೇನಿಯನ್ ಐಬೆಕ್ಸ್) ಎಂಬ ಪ್ರಾಣಿ ನಮ್ಮ ಕಣ್ಣೆದುರೇ ನಿರ್ವಂಶವಾಯಿತು. ಬಾಗಿದ ಉದ್ದ ಕೊಂಬುಗಳ, ಸುಂದರ ನಿಲುವಿನ ಈ ಪ್ರಾಣಿ ಫ್ರಾನ್ಸ್ ಮತ್ತು ಸ್ಪೇನ್ ಗಡಿಯ ಗುಡ್ಡಗಾಡುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದವು. ಬಂದೂಕು ಬಂದಿದ್ದೇ ಅವಕ್ಕೆ ಮುಳುವಾಯಿತು.
ನೂರಾರು ವರ್ಷಗಳ ಬಿಗಿ ಸಂರಕ್ಷಣೆಯ ಮಧ್ಯೆಯೂ ಈ ಪ್ರಭೇದದ ಕೊನೆಯ ಕೊಂಡಿ 2000 ಇಸವಿಯಲ್ಲಿ ಸ್ಪೇನಿನಲ್ಲಿ ಸಾವಪ್ಪಿದ ವರದಿ ಬಂದಾಗ ವನ್ಯಪ್ರೇಮಿಗಳು ಕಂಬನಿ ಮಿಡಿದಿದ್ದರು. 2003ರಲ್ಲಿ ಅದರ ಶವದ ಮಜ್ಜೆಗಳಿಂದ ಡಿಎನ್‌ಎ ತುಣುಕುಗಳನ್ನು ಕಿತ್ತು ಒಂದಿಷ್ಟು ಹೊಸ ಭ್ರೂಣಗಳನ್ನು ಸೃಷ್ಟಿ ಮಾಡಿದಾಗ ಮತ್ತೆ ವಿಜ್ಞಾನ ಲೋಕ ಸಂಭ್ರಮಿಸಿತ್ತು. ಮೂಲ ಪ್ರಾಣಿಯನ್ನೇ ತುಸು ಮಟ್ಟಿಗೆ ಹೋಲುವ ಇಂದಿನ 57 ಮೇಕೆಗಳ ಗರ್ಭದಲ್ಲಿ ಅದನ್ನು ಬೆಳೆಸಿದರು. ಏಳರಲ್ಲಿ ಗರ್ಭ ನಿಂತವು. ಒಂದೊಂದಾಗಿ ಆರು ಮೇಕೆಗಳ ಗರ್ಭಸ್ರಾವವಾಯಿತು.
ಏಳನೆಯದಕ್ಕೆ ದಿನ ತುಂಬಿ, ಕ್ಯಾಮರಾ ಎದುರು ಅದಕ್ಕೆ ಸಿಸೇರಿಯನ್ ಮಾಡಿದಾಗ ಮುದ್ದಾದ ಬುಕಾರ್ಡೊ ಮರಿ ಹೊರಬಂತು. ಮನುಕುಲಕ್ಕೇ ಹೆಮ್ಮೆ ಎನಿಸುವ ಕ್ಷಣ ಅದಾಗಿತ್ತು. ಆದರೆ ಅಂದಿನ ಅಪಕ್ವ, ಅರೆಬರೆ ತಂತ್ರಜ್ಞಾನದಿಂದಾಗಿ ಹುಟ್ಟಿ ಐದಾರು ನಿಮಿಷ ಚಡಪಡಿಸಿ ಸತ್ತೇಹೋಯಿತು. ಒಂದು ಸುಂದರ ಪ್ರಾಣಿ ಎರಡನೆ ಬಾರಿಗೆ ನಿರ್ವಂಶವಾಯಿತು.
ಆದರೆ ಮನುಷ್ಯನ ಕನಸುಗಳಿಗೆ ಕೊನೆಯಿಲ್ಲವಲ್ಲ. ವ್ಯಥಿಸುವ ಬದಲಿಗೆ ಇನ್ನಷ್ಟು ಹುಮ್ಮಸಿನಿಂದ ಮರುಸೃಷ್ಟಿಯ ಕೆಲಸಗಳು ನಡೆಯತೊಡಗಿವೆ. ಜೈವಿಕ ತಂತ್ರಜ್ಞಾನದ ದಾಪುಗಾಲುಗಳು ನಾಳೆಗಳನ್ನೇ ಹಿಂದಿಕ್ಕಿ ಸಾಗುತ್ತಿವೆ. `ಸಿಂಥೆಟಿಕ್ ಬಯಾಲಜಿ' ಎಂಬ ಜ್ಞಾನಶಾಖೆ ವಿಕಾಸವಾಗುತ್ತಿದೆ. ಡೈನೊಸಾರ್‌ಗಳಂಥ ತೀರಾ ಪುರಾತನ ಜೀವಿಗಳ ಪುನರುತ್ಥಾನವೆಲ್ಲ ಆಗುಹೋಗದ ಮಾತು, ಏಕೆಂದರೆ ಅವುಗಳ ಜೀವಕೋಶಗಳು ಧ್ವಂಸಗೊಂಡಿವೆ.
ಆದರೆ 50-60 ಸಾವಿರ ವರ್ಷಗಳೀಚೆ ಆದಿಮಾನವರ ವಿಕಾಸದ ನಂತರ ನಿರ್ವಂಶಗೊಂಡ ಜೀವಿಸಂತತಿಯ ಮರುಸೃಷ್ಟಿ ಖಂಡಿತ ಸಾಧ್ಯವಿದೆ ಎಂಬ ಭರವಸೆ ಮೂಡಿದೆ. ಡಿ-ಎಕ್ಸ್‌ಟಿಂಕ್ಟ್ (ಅನಿರ್ವಂಶ) ಎಂಬ ಹೊಸ ಪದವೊಂದು ಚಾಲ್ತಿಗೆ ಬಂದಿದೆ. ನಿರ್ವಂಶವಾದ 24 ಪ್ರಾಣಿಗಳನ್ನು ಮತ್ತು ಒಂದು ಸಸ್ಯವನ್ನು ಮರುಸೃಷ್ಟಿ ಮಾಡುವ ಗುರಿ ಇಟ್ಟುಕೊಂಡು ನ್ಯೂಯಾರ್ಕಿನ `ರಿವೈವ್ ಅಂಡ್ ರಿಸ್ಟೋರ್' ಹೆಸರಿನ ಸಂಸ್ಥೆಯೊಂದು ವಿವಿಧ ದೇಶಗಳ ಜೀವತಂತ್ರಜ್ಞರನ್ನು ಸಂಘಟಿಸುತ್ತಿದೆ.
ಈಗಿನ ಉತ್ಸಾಹಿಗಳ ಎಲ್ಲಕ್ಕಿಂತ ದೊಡ್ಡ ಕನಸೆಂದರೆ `ವೂಲಿ ಮ್ಯೋಮತ್' ಹೆಸರಿನ ಹಿಮಗಜಕ್ಕೆ ಮತ್ತೆ ಜೀವ ಕೊಡುವುದು. ಐವತ್ತು ಸಾವಿರ ವರ್ಷಗಳ ಹಿಂದಿನ ಹಿಮಯುಗದಲ್ಲಿ ಜೀವಿಸಿದ್ದ ಈ ಭಾರೀ ಗಾತ್ರದ ಆನೆಗೆ ಮೈತುಂಬ ಕೂದಲಿತ್ತು; ಇಪ್ಪತ್ತು ಅಡಿ ಉದ್ದನ್ನ ಕೊಂಬುಗಳಿದ್ದವು. ಅವುಗಳ ಚರ್ಮ, ಮೂಳೆ, ಮೃದ್ವಸ್ಥಿ, ಅಷ್ಟೇಕೆ ಮಜ್ಜೆ ಕೂಡ ಹಿಮದ ಹಾಸುಗಳಲ್ಲಿ ಸಿಕ್ಕಿವೆ. ಈ ಪ್ರಾಣಿಗೆ ಮತ್ತೆ ಜೀವ ಬಂತೆಂದರೆ ಎಂಥ ರೋಚಕ ಸಂಗತಿ! ಅಷ್ಟೇ ದೊಡ್ಡ ಇನ್ನೊಂದು ಕನಸೇನೆಂದರೆ ಪಾರಿವಾಳಗಳನ್ನು ಹೋಲುವ `ಪ್ಯಾಸೆಂಜರ್ ಪೀಜನ್' ಎಂಬ ಪಕ್ಷಿಗಳಿಗೆ ಮರುಜನ್ಮ ಕೊಡುವುದು. ಐನೂರು ವರ್ಷಗಳ ಹಿಂದೆ ಅಮೆರಿಕ ಖಂಡದಲ್ಲಿ ಇವು ಅಕ್ಷರಶಃ ಕೋಟಿಸಂಖ್ಯೆಯಲ್ಲಿದ್ದವು.
ವಲಸೆ ಹೊರಟು ಒಮ್ಮಮ್ಮೆ ಅನೇಕ ಲಕ್ಷ ಪೀಜನ್‌ಗಳು ಹಾರತೊಡಗಿದರೆ ಗುಡುಗಿನ ಸದ್ದಿನೊಂದಿಗೆ ಆಕಾಶವೇ ಮುಚ್ಚಿ ಹೋಗುತ್ತಿತ್ತು. ಕಣ್ಣುಮುಚ್ಚಿ ಒಂದು ಬಡಿಗೆಯನ್ನು ಮೇಲಕ್ಕೆ ಎಸೆದರೂ ನಾಲ್ಕಾರು ಪಾರಿವಾಳಗಳು ನೆಲಕ್ಕೆ ಬೀಳುತ್ತಿದ್ದವು. ಹದಿನೈದನೆಯ ಶತಮಾನದ ನಂತರ ಯುರೋಪ್‌ನಿಂದ ವಲಸೆ ಬಂದ ಮನುಷ್ಯರು ಅವುಗಳನ್ನು ಹೀನಾಯ ಹಿಂಸಿಸಿ, ಕೊಂದು, ತಿಂದು, ಮುಂದಿನ ನಾಲ್ಕು ನೂರು ವರ್ಷಗಳಲ್ಲಿ 300 ಕೋಟಿ ಪಕ್ಷಿಗಳ ಸಮೂಹದಲ್ಲಿ ಒಂದೂ ಇಲ್ಲದಂತೆ ಮುಗಿಸಿಬಿಟ್ಟರು.
ಈಗ ಅಮೆರಿಕದ ಒಂದೆರಡು ವಸ್ತು ಸಂಗ್ರಹಾಲಯಗಳಲ್ಲಿ ಉಳಿದಿರುವ ಅವುಗಳ ಮೂಳೆ, ಪುಕ್ಕ, ತುಪ್ಪಳಗಳಿಂದ ಜೀವಕೋಶಗಳನ್ನು ಬೇರ್ಪಡಿಸಿ, ತಳಿನಕ್ಷೆಯನ್ನು ಸಿದ್ಧಪಡಿಸಲಾಗಿದೆ. `ಪ್ಯಾಸೆಂಜರ್ ಪೀಜನ್'ಗಳ ವಂಶದ ಕುಡಿಯನ್ನು ಮತ್ತೆ ಚಿಗುರಿಸಲು ಸಿದ್ಧತೆ ನಡೆದಿದೆ. ಅದು ವಿಜ್ಞಾನಿಗಳ, ಇಕಾಲಜಿ ತಜ್ಞರ ನಿದ್ದೆ ಕೆಡಿಸುತ್ತಿದೆ. ಏಕೆಂದರೆ, ನಿರ್ವಂಶಗೊಂಡ ಪಾರಿವಾಳದ ಮರಿ ಮತ್ತೆ ಹುಟ್ಟೀತು ನಿಜ.
ರೆಕ್ಕೆಪುಕ್ಕ ಬಲಿತು, ಕೆಂಪನ್ನ ಎದೆಯ, ನೀಲ ರೆಕ್ಕೆಗಳ ಸುಂದರ ಪಕ್ಷಿಯೇ ರೂಪುಗೊಂಡೀತು ನಿಜ. ಆದರೆ ಅದು `ಪ್ಯಾಸೆಂಜರ್ ಪೀಜನ್' ಆದೀತೆ? ತನ್ನ ಸುತ್ತ, ತನ್ನದೇ ವಂಶದ ನೂರಿನ್ನೂರು ಪಕ್ಷಿಗಳಿದ್ದರೆ ಮಾತ್ರ ಅದು ತನ್ನ ಮೂಲ ಗುಣಸ್ವಭಾವಗಳನ್ನು ಪಡೆಯುತ್ತದೆ. ಒಂದು ಜೀವಿಯ ಚಾರಿತ್ರ್ಯವನ್ನು, ಬದುಕನ್ನು ಅದರ ಸುತ್ತಲಿನ ಸಮಾಜವೇ ರೂಪಿಸುತ್ತದೆ; ಕೇವಲ ಗುಣಾಣುಗಳಿಂದ ಮರುಸೃಷ್ಟಿ ಸಾಧ್ಯವಿಲ್ಲ ಎಂದು ಒಂದು ಬಣದ ವಿಜ್ಞಾನಿಗಳು ಹೇಳುತ್ತಿದ್ದಾರೆ. ಶೇಕ್ಸ್‌ಪಿಯರ್‌ನ `ಹ್ಯಾಮ್ಲೆಟ್' ನಾಟಕದ ಪ್ರತಿಯೊಂದು ಪದವೂ ನಿಘಂಟಿನಲ್ಲಿದೆ. ಅವನ್ನೆಲ್ಲ ಸ್ಕ್ಯಾನ್ ಮಾಡಿ ಸೇರಿಸಿದರೆ `ಹ್ಯಾಮ್ಲೆಟ್' ನಾಟಕ ಸಿದ್ಧವಾದೀತೆ? ಎಂದು ಕೇಳುತ್ತಾರೆ.
ಹಾಗೆಂದು ಮರುಸೃಷ್ಟಿ ಯತ್ನವನ್ನು ಕೈಬಿಡಲು ಯಾರೂ ಸಿದ್ಧರಿಲ್ಲ. ಬೇಕಿದ್ದರೆ ಪಾರಿವಾಳದ ಮರಿಯ ಸುತ್ತ ನೂರಾರು ಪೀಜನ್‌ಗಳ ಥ್ರೀಡಿ ಬಿಂಬಗಳನ್ನು ಮೂಡಿಸಿ ಹೊಸ ಪಕ್ಷಿ ಸಮಾಜವನ್ನು ರೂಪಿಸಲು ಅವರು ಸಜ್ಜಾಗಿದ್ದಾರೆ. ಸಾವಿರಾರು ಪೀಜನ್‌ಗಳನ್ನು ಸೃಷ್ಟಿಸಿ ಹೊರ ಪರಿಸರಕ್ಕೆ ಹಾರಿಸಿದ್ದೇ ಆದರೆ ಇವೊತ್ತಿನ ಜೀವ ಪರಿಸರದಲ್ಲಿ ಇನ್ನೇನೇನು ವಿಪ್ಲವಗಳಾಗಬಹುದೊ? ಆ ಚಿಂತೆಗಳನ್ನೆಲ್ಲ ಭವಿಷ್ಯದ ಜನರ ಪಾಲಿಗೆ ಬಿಟ್ಟು ಕಳೆದ ವಾರ ಸಾಂತಾಕ್ರೂಸ್ ವಿವಿಯ ಪ್ರಯೋಗಶಾಲೆಯಲ್ಲಿ ಪ್ಯಾಸೆಂಜರ್ ಪಾರಿವಾಳಗಳ ವರ್ಣತಂತುಗಳ ಜೋಡಣೆ ಆರಂಭವಾಗಿದೆ.
ಈ ಮಧ್ಯೆ ಹೆಸರಾಂತ ನ್ಯಾಶನಲ್ ಜಿಯಾಗ್ರಫಿಕ್ ಸಂಸ್ಥೆ ಈಚೆಗೆ ಅನಿರ್ವಂಶ ತಂತ್ರಜ್ಞಾನದ ಇಂಥ ಸಾಧಕ ಬಾಧಕಗಳ ಚರ್ಚೆ ನಡೆಸಲೆಂದೇ ಒಂದು `ಟೆಡೆಕ್ಸ್' ಚಿಂತನಗೋಷ್ಠಿಯನ್ನು ನಡೆಸಿತು. `ನಾವು ದೇವರಾಟ ಆಡುತ್ತಿದ್ದೇವೆಯೆ?' ಎಂಬ ಶಿರೋನಾಮೆಯ ಈ ಗೋಷ್ಠಿಯಲ್ಲಿ ವಿಜ್ಞಾನರಂಗದ, ನೈತಿಕವಲಯದ ದಿಗ್ಗಜಗಳ ತಾಳಮದ್ದಲೆ ನಡೆಯಿತು. ಅದರ ಮುಖ್ಯಾಂಶಗಳ ವಿಡಿಯೊ ಚಿತ್ರಣ tedxdeextinction. org ಎಂಬಲ್ಲಿ ಸಿಗುತ್ತದೆ.
ಈ ಭೂಮಿಯ ವಿಕಾಸಪಥದಲ್ಲಿ ಇದುವರೆಗೆ ಐದು ಮಹಾಮಾರಣ ಘಟ್ಟಗಳನ್ನು ಗುರುತಿಸಲಾಗಿದೆ. ಅಂದರೆ, ಅತಿ ಕ್ಷಿಪ್ರ ಅವಧಿಯಲ್ಲೇ ನಿಗೂಢ ಕಾರಣಗಳಿಂದಾಗಿ ಲಕ್ಷೋಪಲಕ್ಷ ಜೀವಿಗಳು ನಿರ್ನಾಮ ಹೊಂದಿದ ಐದು ಮಹಾಘಟನೆಗಳು ನಡೆದು ಹೋಗಿವೆ. ನಾವೀಗ ಆರನೆಯ ಮಹಾಮಾರಣ ಘಟ್ಟದಲ್ಲಿದ್ದೇವೆ. ಮನುಷ್ಯನೇ ಪ್ರಳಯಾಂತಕನಾಗಿ ದಿನವೂ ಸರಾಸರಿ ನೂರು ಜೀವಿ ಪ್ರಭೇದಗಳನ್ನು ನಾಶ ಮಾಡುತ್ತಿದ್ದಾನೆ. ತನ್ನ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಧೀಮಂತ ಹೆಜ್ಜೆಗಳನ್ನಿಟ್ಟರೆ ತಪ್ಪೇನಿದೆ ಎಂದು ಕೆಲವರು ಕೇಳುತ್ತಾರೆ. ಉತ್ತರ ಸುಲಭದ್ದಲ್ಲ. ಇಷ್ಟಕ್ಕೂ ಹೊಸ ತಳಿತಂತ್ರಜ್ಞಾನದಿಂದ ಜೀವಿಗಳ ಮರುಸೃಷ್ಟಿ ಮಾಡಿದ ಮಾತ್ರಕ್ಕೇ ಜೀವಲೋಕ ಮೊದಲಿನ ಹಾಗೆ ನಳನಳಿಸುತ್ತದೆ ಎನ್ನುವಂತಿಲ್ಲ.
ನಮ್ಮ ಮುತ್ತಜ್ಜಿಗೆ ಮತ್ತೆ ಜೀವ ಬರಿಸಿದ ಮಾತ್ರಕ್ಕೆ ಹೋಳಿಯ ಹಳೇ ವೈಭವ, ಚಂದದ ರಂಗೋಲಿ, ಕೊಟ್ಟೆಕಡುಬು, ಅಜ್ಜಿಮದ್ದು ಸಿಕ್ಕೀತೆಂದು ಹೇಳುವಂತಿಲ್ಲ. ಕುಲಾಂತರಿ ಸಸ್ಯಗಳನ್ನು ಸೃಷ್ಟಿಸಿ ಹೊಲಕ್ಕಿಳಿಸಿದ ನಂತರ, ಅದೇ ಕಾರಣದಿಂದಾಗಿ ಸಾವಿರಾರು ಸಸ್ಯತಳಿಗಳು ಕಣ್ಮರೆ ಆಗಿವೆ. ತಂತ್ರಜ್ಞಾನ ನಾಳೆ ಎಂಥ ತಿರುವು ಪಡೆದೀತು ಎಂದು ಹೇಳುವಂತಿಲ್ಲ.
ಅದು ಬಿಡಿ. ಸೆಕೆ ದಿನದಿನಕ್ಕೆ ಹೆಚ್ಚುತ್ತಿದೆ. ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ, ಅನುಕೂಲಸ್ಥರ ಮನೆಗಳಲ್ಲಿ ಹವಾನಿಯಂತ್ರಣದ ಯಂತ್ರಗಳು ಜೋರಾಗಿ ಓಡತೊಡಗಿವೆ. ಬಿಸಿಲ ಝಳವನ್ನು ತಗ್ಗಿಸುವ ಏರ್ ಕಂಡೀಶನರ್ ತಂತ್ರಜ್ಞಾನದ ಇಂದ್ರಜಾಲಕ್ಕೆ ಶಾಭಾಸ್ ಎನ್ನೋಣವೆ? ಈ ಯಂತ್ರಗಳಿಂದಾಗಿಯೇ ಸೆಕೆ ಇನ್ನಷ್ಟು ಹೆಚ್ಚುತ್ತಿದೆಯಲ್ಲ!
ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.