ADVERTISEMENT

ಮಿಲಿಟರಿಯ ವಿಷವೃಕ್ಷಕ್ಕೆ ರಕ್ತಮಾಂಸದ ಗೊಬ್ಬರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:07 IST
Last Updated 16 ಜೂನ್ 2018, 10:07 IST

ಅದು ಭೋಪಾಲ್ ವಿಷಾನಿಲ ದುರಂತವನ್ನೇ ನೆನಪಿಸುತ್ತಿತ್ತು. ನಡುರಾತ್ರಿಯ ಅರೆಗತ್ತಲಲ್ಲಿ ಸಾಲು ಸಾಲು ಶವಗಳು. ಎತ್ತರದ ನಿಲುವಿನ ಕಟ್ಟುಮಸ್ತು ಯುವಕರು, ಮುದ್ದುಗಲ್ಲದ ಬಾಲಕರು ಉಸಿರಿಲ್ಲದ ನಿದ್ರೆಗೆ ಜಾರಿದ್ದರು. ನೂರೆ, ಏಳುನೂರೆ, ಸಾವಿರವೆ? ಲೆಕ್ಕ ಮಾಡಲು ಯಾರೂ ಇರಲಿಲ್ಲ. ಸತ್ತವರೆಲ್ಲ ಹೆಚ್ಚಾಗಿ ಗಂಡಸರು, ಗಂಡುಮಕ್ಕಳೇ ಆಗಿದ್ದರು. ಏಕೆಂದರೆ ತಂಪುಗಾಳಿಯಲ್ಲಿ ನಿದ್ದೆ ಮಾಡೋಣವೆಂದು ಅವರೆಲ್ಲ ಛಾವಣಿಗಳ ಮೇಲೆ ಮಲಗಿದ್ದರು. ಮನೆಯೊಳಗೇ ಮಲಗಿದ್ದ ಹೆಣ್ಣುಮಕ್ಕಳು ಮತ್ತು ಹಿರಿಜೀವಗಳ ಪ್ರಾಣ ಉಳಿದಿತ್ತು.

ಸಿರಿಯಾ ದೇಶದ ರಾಜಧಾನಿ ಡಮಸ್ಕಸ್ ಬಳಿಯ ಖಾನಲ್ಲಸಲ್ ಪಟ್ಟಣದ ಒಂದಿಡೀ ಬಡಾವಣೆ ಅಂದು ರಾತ್ರಿ ಸ್ಮಶಾನವೇ ಆಗಿತ್ತು. ಆಗಸ್ಟ್ 21ರಂದು ಆ ಊರಿನ ಬಂಡುಕೋರರ ಗುಂಪಿನ ಮೇಲೆ ವಿಷಾನಿಲ ತುಂಬಿದ ರಾಕೆಟ್‌ಗಳನ್ನು ಸಿರಿಯಾ ಮಿಲಿಟರಿ ಚಿಮ್ಮಿಸಿತ್ತು. ಹಾಗೆಂದು ಅಧಿಕೃತವಾಗಿ ಹೇಳಲು ಯಾರೂ ಉಳಿದಿರಲಿಲ್ಲ. ಈ ಉಗ್ರ ವಿಷದ ಅರಿವಿದ್ದ ಯಾರೋ ಕೆಲವರು ಎಷ್ಟೋ ಹೊತ್ತಿನ ಮೇಲೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಅರೆಗತ್ತಲಲ್ಲಿ ದಾಖಲಿಸಿದ ಮಬ್ಬು ವಿಡಿಯೊ ದೃಶ್ಯಗಳೇ ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಕಂಡುಬಂದವು.

ಕೆಲವರ ಬಾಯಿ, ಮೂಗು, ಕಿವಿಯಿಂದ ನೊರೆಯಂಥ ಏನೋ ಹೊರಸೂಸಿದಂತಿತ್ತು. ಒಂದೆರಡು ಶವಗಳ ಕಣ್ಣಾಲಿಗಳು ಅರಳಿದಂತಿದ್ದವು. ಎಲ್ಲ ಭೋಪಾಲ್ ದುರಂತದ ಹಾಗೇ. ಪೈರು- ಫಸಲಿಗೆ ಮುತ್ತುವ ಕೀಟಗಳನ್ನು ಕೊಲ್ಲಲೆಂದು ತಯಾರಿಸಿದ್ದ `ಮೀಥೈಲ್ ಐಸೊಸೈನೇಟ್' (ಎಮ್‌ಐಸಿ) ಎಂಬ ವಿಷಾನಿಲದ ಪಿಪಾಯಿಯೊಂದು ಭೋಪಾಲದ ಯೂನಿಯನ್ ಕಾರ್ಬಾಯಿಡ್ ಫ್ಯಾಕ್ಟರಿಯಿಂದ ಆಕಸ್ಮಿಕವಾಗಿ ಪ್ರೆಶರ್ ಕುಕ್ಕರ್‌ನ ಹಾಗೆ ಠುಸ್ಸೆಂದು ಸೋರಿತ್ತು. ಅಂದಾಜು ಮೂರುವರೆ ಸಾವಿರ ಜನರು ಮಲಗಿದಲ್ಲೇ ಜೀವ ಬಿಟ್ಟಿದ್ದರು. ಅದೂ ಸಾರಿನ್ ಮಾದರಿಯ ವಿಷವೇ ಆಗಿತ್ತು.

ಸಾರಿನ್, ಟಾಬುನ್ ಅಥವಾ ಸೋಮನ್ ಹೆಸರಿನ ರಾಸಾಯನಿಕ ವಿಷಗಳಿಗೆ ನ್ಯೂರೊಟಾಕ್ಸಿನ್ ಅಥವಾ ನರನಂಜು ದ್ರವ್ಯ ಎನ್ನುತ್ತಾರೆ. ಇವು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ. ದೇಹದೊಳಗಿನ ಸ್ನಾಯುಗಳಿಗೆ ಲಕ್ವ ಹೊಡೆಸುತ್ತವೆ. ಗಾಳಿಯ ಮೂಲಕ ಇದು ಶ್ವಾಸಕೋಶಕ್ಕೆ ಹೋದರೆ ತಕ್ಷಣ ಲಕ್ವ ಹೊಡೆದು ಎದೆಯ ತಿದಿ ಅಲ್ಲೇ ಸ್ಥಗಿತವಾಗುತ್ತದೆ. ಉಸಿರುಗಟ್ಟಿ ಸಾವು ಸಂಭವಿಸುತ್ತದೆ.

ಆ ಒಂದೆರಡು ಕ್ಷಣಗಳಲ್ಲಿ ಬದುಕುಳಿಯಲು ದೇಹ ಏನೆಲ್ಲ ಚಡಪಡಿಸುವಾಗ ಕಣ್ಣಾಲಿಗಳು ಉಬ್ಬಿ, ಕಿವಿ, ಮೂಗು, ಬಾಯಿ ಮುಂತಾದ ಎಲ್ಲ ರಂಧ್ರಗಳೂ ಬಿರಿದು, ಅದೇ ಸ್ಥಿತಿಯಲ್ಲೇ ಸೆಟೆದು, ಜೀವದ್ರವ ಮತ್ತು ಶೌಚದ್ರವ್ಯಗಳು ಹೊರಸೂಸುತ್ತವೆ. ಮಂಡಲ ಹಾವು ಕಚ್ಚಿದಾಗಲೂ ವಿಷ ಜಾಸ್ತಿ ಏರಿದರೆ ಹೀಗೇ ಆಗುತ್ತದೆ. ಆಗ ರಕ್ತದ ಮೂಲಕ ನಂಜು ಏರಿ ಹೃದಯಸ್ತಂಭನ ಆಗುತ್ತದೆ. ಕೈಕಾಲು ಸೆಟೆದುಕೊಳ್ಳುತ್ತವೆ. ಕೊಳಕು ಮಂಡಲ, ಚೇಳು, ಉಣ್ಣಿ, ಕೆಲವು ಬಗೆಯ ಮೀನು ಮತ್ತು ವಿಷಸಸ್ಯಗಳಲ್ಲೂ ಸಣ್ಣ ಪ್ರಮಾಣದಲ್ಲಿ ಇಂಥದೇ ವಿಷ ಇರುತ್ತದೆ. ಸಣ್ಣ ಪ್ರಾಣಿಗಳನ್ನು ಕೊಲ್ಲಲು ಅದೇ ಸಾಕು.

ಜರ್ಮನಿಯ ವಿಜ್ಞಾನಿಗಳು ಕೀಟಗಳನ್ನು ಕೊಲ್ಲಲೆಂದು ಸೃಷ್ಟಿಸಿದ ಈ ರಂಜಕಮೂಲದ ಪಾಷಾಣಗಳ ಉಗ್ರತೆ ಎಷ್ಟಿತ್ತೆಂದರೆ ಪ್ರಯೋಗಾಲಯದ ಬೆಂಚ್ ಮೇಲೆ ಒಂದು ಹನಿ ಬಿದ್ದಿದ್ದರಿಂದಲೇ ಅದನ್ನು ತಯಾರಿಸಿದ್ದ ವಿಜ್ಞಾನಿ ಜಿರ್ಹಾರ್ಡ್ ಶ್ರೇಡರ್ ಎಂಬಾತ ಪ್ರಜ್ಞೆತಪ್ಪಿ ಎರಡು ವಾರಗಳ ಕಾಲ ಆಸ್ಪತ್ರೆಗೆ ಸೇರಿದ್ದ. ಸೈನೈಡ್‌ಗಿಂತ ಐದುನೂರು ಪಟ್ಟು ವಿಷಕಾರಿಯಾದ ಸಾರಿನ್ ಎಂಬ ವಸ್ತು ಕೃಷಿರಂಗಕ್ಕಾಗಿ ಸೃಷ್ಟಿಯಾಗಿದೆ ಎಂಬ ವಾಸನೆ ತಿಳಿದಿದ್ದೇ ತಡ ನಾತ್ಸಿ ಸರ್ಕಾರ ಇವನ್ನು ಯುದ್ಧಾಸ್ತ್ರವಾಗಿ ಉತ್ಪಾದಿಸಲೆಂದು ಕಾರ್ಖಾನೆಗಳನ್ನು ಆರಂಭಿಸಿತು. ಅದೂ ಸುಲಭದ ಕೆಲಸವಾಗಿರಲಿಲ್ಲ. ಉತ್ಪಾದನೆ ಆರಂಭವಾಗುವ ಮುನ್ನವೇ 300ಕ್ಕೂ ಹೆಚ್ಚು ಚಿಕ್ಕದೊಡ್ಡ ಅಪಘಾತಗಳಾದವು. ಮಿಲಿಟರಿ ಎಂದರೇನೇ ದುರ್ವಿದ್ಯೆ, ದುಸ್ಸಾಹಸ, ದುರ್ವ್ಯಯ, ದೌರ್ಜನ್ಯ ತಾನೆ?

ರಾಸಾಯನಿಕ ಅಸ್ತ್ರಗಳ ವಿಶೇಷ ಏನೆಂದರೆ ಅದನ್ನು ಪ್ರಯೋಗಿಸಿ ಶತ್ರುವನ್ನು ಮಣಿಸಿದಾಗ ಸೈನಿಕರು ಸಾಯುತ್ತಾರೆ ವಿನಾ ಅವರ ಶಸ್ತ್ರಾಸ್ತ್ರಗಳು ಹಾಳಾಗುವುದಿಲ್ಲ. ಅವನ್ನೆಲ್ಲ ಕೈವಶ ಮಾಡಿಕೊಂಡು, ಅವುಗಳನ್ನೆಲ್ಲ ಬಿಚ್ಚಿ ನೋಡಿ ಇನ್ನಷ್ಟು ಬಲ ಗಳಿಸಬಹುದು. ಅದೇ ಕಾರಣಕ್ಕೆ ರಾಸಾಯನಿಕ ಅಸ್ತ್ರಗಳಿಗೆ ಆಗ ಇನ್ನಿಲ್ಲದ ಬೇಡಿಕೆ ಬಂತು. ಜರ್ಮನಿಯ ಮೂಲಕ ಅವು ರಷ್ಯ ಮತ್ತು ಮಿತ್ರದೇಶಗಳ ಕೈವಶವಾಗಿ, ಇನ್ನಷ್ಟು ಉಗ್ರವಾಗಿ, ಇನ್ನಷ್ಟು ವ್ಯಾಪಕವಾಗಿ ನಾನಾ ದೇಶಗಳ ನಿಗೂಢ ಕಮ್ಮಟಗಳಲ್ಲಿ ತಯಾರಾಗುತ್ತ, ನಾನಾ ಬಗೆಯ ಗ್ರೆನೇಡ್‌ಗಳಲ್ಲಿ, ಬಾಂಬ್‌ಗಳಲ್ಲಿ, ರಾಕೆಟ್‌ಗಳಲ್ಲಿ ಕೂತು ರಹಸ್ಯ ಉಗ್ರಾಣಗಳನ್ನು ಸೇರಿಕೊಂಡವು. ಕ್ರಮೇಣ ಉಗ್ರರ ಕೈಗೂ ಬಂದವು.

ಉತ್ಪಾದನಾ ಹಂತಗಳಲ್ಲಿನ ಸೋರಿಕೆ ಹಾಗೂ ಪರೀಕ್ಷಾ ಹಂತಗಳಲ್ಲಿ ನಡೆದ ಚಿಕ್ಕಪುಟ್ಟ ಅವಘಡಗಳಲ್ಲಿ ಈ ರಾಸಾಯನಿಕ ಯುದ್ಧಾಸ್ತ್ರಗಳ ಪರಿಣಾಮ ಅದೆಷ್ಟು ಭೀಕರವಾಗಿದ್ದವು ಎಂದರೆ ಯಾವುದೇ ನೇರ ಯುದ್ಧಗಳಲ್ಲಿ ಅವು ಬಳಕೆಗೆ ಬರಲೇ ಇಲ್ಲ. ಹಿಟ್ಲರನಿಗೆ ತನ್ನ ದೇಶದ ಈ ರಹಸ್ಯ ಅಸ್ತ್ರಗಳ ಸೂತ್ರಗಳು ರಷ್ಯದ ಮಿಲಿಟರಿ ವಿಜ್ಞಾನಿಗಳ ಕೈಗೆ ಸಿಕ್ಕಿವೆಯೆಂಬ ಸುಳಿವು ಸಿಕ್ಕಿದ್ದೇ ತಡ, ಅವುಗಳ ಪ್ರಯೋಗ ಬೇಡವೇ ಬೇಡ ಎಂದು ತಾನಾಗಿ ನಿರ್ಧರಿಸಿದನೆಂದು ಜೋಸೆಫ್ ಬಾರ್ಕಿನ್ ಎಂಬ ಇತಿಹಾಸಕಾರ ದಾಖಲಿಸಿದ್ದಾನೆ.

ಹಿಟ್ಲರನಿಗೆ ರಷ್ಯದ ಮಿಲಿಟರಿಯ ಬಗ್ಗೆ ಕರುಣೆ ಇತ್ತೆಂದಲ್ಲ. ತಾನು ವಿಷಾಸ್ತ್ರಗಳನ್ನು ರಷ್ಯದ ಸೈನಿಕರ ಮೇಲೆ ಪ್ರಯೋಗಿಸಿದರೆ ಅವರು ತನ್ನ ಪ್ರಜೆಗಳ ಮೇಲೆಯೇ ಇಂಥ ಘೋರ ವಿಷಬಾಂಬ್‌ಗಳನ್ನು ತೂರಿಬಿಟ್ಟಾರೆಂಬ ಭಯವಿತ್ತು. ಈಗಿನ ರಾಸಾಯನಿಕ ಶಸ್ತ್ರಾಸ್ತ್ರಗಳೂ ಯಾವ ಸೈನ್ಯದ ಮೇಲೂ ಬಳಕೆಯಾಗಿಲ್ಲ ನಿಜ.

ಜಪಾನಿನ ಔಂ ಶರ್ಯೆಂಕೊ ಹೆಸರಿನ ಉಗ್ರರ ತಂಡವೊಂದು ನೆಲದಾಳದಲ್ಲಿ ಚಲಿಸುತ್ತಿದ್ದ ರೈಲಿನ ಪ್ರಯಾಣಿಕರ ಮೇಲೆ ಸಾರಿನ್ ವಿಷಾನಿಲದ ಸ್ಫೋಟಕವನ್ನು ಸಿಡಿಸಿದಾಗ ಮುಗ್ಧ ಪಯಣಿಗರ ಎದೆ ಬಿಗಿಯಾಗಿ, ಕಣ್ಣಾಲಿಗಳು ಉಬ್ಬಿ, ಎಲ್ಲ ಬಗೆಯ ಸ್ರಾವಗಳೂ ದೇಹದ ಸಕಲ ರಂಧ್ರಗಳಿಂದ ಹೊರಹೊಮ್ಮಿ ನೂರಾರು ಮಂದಿ ನಿಷ್ಕ್ರಿಯರಾದರು. ಹನ್ನೆರಡು ಜನರು ಸಾವಪ್ಪುವ ಮೊದಲೇ ನರಕ ಅನುಭವಿಸಿದರು. ಅದೊಂದೇ ಉದಾಹರಣೆ ಬಿಟ್ಟರೆ ಬೇರೆಲ್ಲೂ ವಿಷಾಸ್ತ್ರಗಳ ಬಹಿರಂಗ ಪ್ರದರ್ಶನ ನಡೆದೇ ಇಲ್ಲ. ಆದರೂ ಅದನ್ನು ಯಾರೂ ಬಳಸಕೂಡದೆಂದು ಅಂತರರಾಷ್ಟ್ರೀಯ ಒಪ್ಪಂದವಾಗಿದೆ.

ವಿಷಾಸ್ತ್ರಗಳನ್ನು ಸೃಷ್ಟಿ ಮಾಡಿದ ಮಿಲಿಟರಿ ತಂತ್ರಜ್ಞಾನವೇ ಅದರಿಂದ ಬಚಾವಾಗುವ ವಿಧಾನಗಳನ್ನೂ ಸೃಷ್ಟಿ ಮಾಡಿದೆ ನಿಜ. ಅಡಿಯಿಂದ ಮುಡಿಯವರೆಗೆ ಐದು ಪದರಗಳ ಭದ್ರ ಕವಚ ತೊಟ್ಟು, ಕೃತಕ ಉಸಿರಾಟದ ಡಬ್ಬಿಗಳನ್ನು ಕಟ್ಟಿಕೊಂಡು ಯೋಧರು, ವೈದ್ಯರು, ರೆಡ್‌ಕ್ರಾಸ್ ಸಹಾಯಕರ ಪಡೆಯೇ ಯುದ್ಧರಂಗಕ್ಕೆ ಇಳಿಯುವಂತಾಯಿತು.

ಸಾರಿನ್, ಟಾಬುನ್ ಅಥವಾ ಸೋಮನ್‌ಗಳಿಗೆ ಪ್ರತ್ಯಸ್ತ್ರಗಳು ಬಂದವು (ಸೋಮನ್ ಅಂದರೆ ಸೋಮರಸದ ಸಮೀಪ ಸಂಬಂಧಿ. ಲ್ಯಾಟಿನ್ ಭಾಷೆಯಲ್ಲಿ ದೀರ್ಘ ನಿದ್ರೆ, ಬವಳಿ, ಪ್ರಜ್ಞಾಶೂನ್ಯ ಸ್ಥಿತಿ ಇವೆಲ್ಲಕ್ಕೂ ಸೋಮ್ನಿಯಾ ಎಂಬ ಮೂಲ ಪದ ಇದೆ. ಸಂಸ್ಕೃತದಲ್ಲೂ ಅದೇ ಇದೆ. ಹಿಂದೆ ರಾವಣನ ಮಗ ಇಂದ್ರಜಿತು ವಾನರ ಸೈನ್ಯದ ಮೇಲೆ ಅಂಥ ಅಸ್ತ್ರವನ್ನು ಪ್ರಯೋಗಿಸಿದ ಪರಿಣಾಮವಾಗಿ ಲಕ್ಷ್ಮಣ ಪ್ರಜ್ಞಾಹೀನನಾಗಿ ಅದಕ್ಕೆ ಪ್ರತಿವಿಷವನ್ನು ಹುಡುಕುತ್ತ ಗಂಧಮಾರ್ದನ ಪರ್ವತವನ್ನೇ ಹನುಮಂತ ಹೊತ್ತು ತಂದನೆಂಬ ಕತೆ ನಮಗೆಲ್ಲ ಗೊತ್ತು. ತುತ್ತೂರಿಯಂಥ ಹೂಬಿಡುವ ದತ್ತೂರಿ ಸಸ್ಯಗಳಲ್ಲಿ ಅಟ್ರೊಪೈನ್ ಎಂಬ ಅಂಶವಿದೆ. ಅದೇ ಸಂಜೀವಿನಿ ಸಸ್ಯ ಇದ್ದೀತೆಂದು ಕೆಲವರು ತರ್ಕಿಸುತ್ತಾರೆ. ಅದೇ ಅಟ್ರೊಪೈನ್ ಅಂಶವನ್ನೇ ಆಧುನಿಕ ವಿಷಾಸ್ತ್ರಗಳ ಉಪಶಮನಕ್ಕೂ ಬಳಸುತ್ತಾರೆ).

ಯುದ್ಧನೀತಿಯೂ ಬದಲಾಗುತ್ತ ಬಂತು. ಸೈನ್ಯದ ಮೇಲೆ ದಾಳಿ ಮಾಡುವ ಬದಲು ಕಾರ್ಖಾನೆ, ವಿದ್ಯುದಾಗಾರ, ಸೇತುವೆ, ಅಣೆಕಟ್ಟು ಮುಂತಾದ ನಾಗರಿಕ ವ್ಯವಸ್ಥೆಗಳ ಮೇಲೆ ದಾಳಿಯಿಡುವ, ಆ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿಯಬಲ್ಲ ಯೋಜನೆಗಳನ್ನು ಮಿಲಿಟರಿ ತಜ್ಞರು ರೂಪಿಸತೊಡಗಿದರು. ಅಂಥ ಪೈಪೋಟಿಯಲ್ಲೇ ವಿಜ್ಞಾನವನ್ನು ಕೈವಶ ಮಾಡಿಕೊಂಡು ಪರಮಾಣು ಬಾಂಬ್, ನ್ಯೂಟ್ರಾನ್ ಬಾಂಬ್, ಹೈಡ್ರೊಜನ್ ಬಾಂಬ್‌ಗಳ ಜೊತೆಗೆ ಕೆಮಿಕಲ್ (ರಾಸಾಯನಿಕ) ಬಾಂಬ್, ಜೀವಾಣು ಬಾಂಬ್‌ಗಳೂ ಸೃಷ್ಟಿಯಾದವು.

ಇಪ್ಪತ್ತನೆಯ ಶತಮಾನದ ಚರಿತ್ರೆಯುದ್ದಕ್ಕೂ ಅವಿವೇಕ- ವಿವೇಕಗಳ ಈ ತಿಕ್ಕಾಟವೇ ಹೊಸ ಹೊಸ ಮಾರಕ ತಂತ್ರಜ್ಞಾನಕ್ಕೆ ಜನ್ಮ ಕೊಡುತ್ತ ಹೋಯಿತು. ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದವರೇ ರಾಸಾಯನಿಕ ಶಸ್ತ್ರಾಸ್ತ್ರಗಳ ಹೊಸ ಸಂಶೋಧನೆಗೆ ಹಣ ಮಂಜೂರು ಮಾಡಿ ಸಹಿ ಹಾಕಿದರು. ರಾಸಾಯನಿಕ ಅಸ್ತ್ರಗಳ ಬಳಕೆ ಬೇಡವೆಂಬ ಒಪ್ಪಂದ ಜಾರಿಗೆ ಬರುತ್ತಲೇ ಜೀವಾಣು ಅಸ್ತ್ರಗಳ ತಯಾರಿಕೆ ಶಸ್ತ್ರಾಸ್ತ್ರಗಳಿಗೆ ಕುಮ್ಮಕ್ಕು ಕೊಟ್ಟರು.

ಮನುಕುಲದ ಅದೃಷ್ಟ ಏನೆಂದರೆ ಅಂಥ ಅವಿವೇಕದ ಪೈಪೋಟಿಯನ್ನು ಮೆಟ್ಟಿ ನಿಲ್ಲಬಲ್ಲ ಮಾನವೀಯತೆಯನ್ನೂ ವಿವೇಕವನ್ನೂ ಹೊಂದಿದ್ದ ಮುತ್ಸದ್ದಿತನವೇ ಇದುವರೆಗೆ ಮೇಲುಗೈ ಪಡೆದಿದೆ. ಹಿರೊಶಿಮಾ ನಾಗಾಸಾಕಿಯ ಮೇಲೆ ಅಣ್ವಸ್ತ್ರ ದಾಳಿ ನಡೆದು 68 ವರ್ಷಗಳ ಬಳಿಕವೂ ಮತ್ತೊಮ್ಮೆ ಅಂಥ ಸಮೂಹನಾಶಕ ಶಸ್ತ್ರಾಸ್ತ್ರ ಬಳಕೆಯಾಗಿಲ್ಲ ಎಂಬುದೇ ನೆಮ್ಮದಿಯ ಸಂಗತಿ. ಆದರೆ ಅಂಥ ಒಪ್ಪಂದಗಳು ರಾಷ್ಟ್ರ-ರಾಷ್ಟ್ರಗಳ ನಡುವಣ ಪೈಪೋಟಿಯನ್ನು ಸಂಭಾಳಿಸಲು ಸಾಧ್ಯವಾದೀತೆ ವಿನಾ ಬಂಡುಕೋರ ರಾಷ್ಟ್ರವನ್ನು, ಆ ರಾಷ್ಟ್ರದೊಳಗಿನ ಉಗ್ರರನ್ನು ನಿರ್ಬಂಧಿಸಲು ಸಾಧ್ಯವೆ? 

ದುರದೃಷ್ಟಕರ ಸಂಗತಿ ಏನೆಂದರೆ ಈಗಿನ ಶಸ್ತ್ರಾಸ್ತ್ರಗಳು ಯುದ್ಧಕೋರ ರಾಷ್ಟ್ರಗಳಿಗೆ ಅಸೀಮ ಶಕ್ತಿಯನ್ನು ನೀಡಿವೆ. ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಕ್ಯಾರೇ ಎನ್ನದೆ ಹದ್ದುಮೀರಿ ವರ್ತಿಸುತ್ತ ವಿಶ್ವಸಂಸ್ಥೆಯ ನಿಯಮಗಳಿಗೇ ಸೆಡ್ಡು ಹೊಡೆಯುವ ಲಿಬ್ಯಾ, ಇರಾನ್, ಸಿರಿಯಾ, ಉತ್ತರ ಕೊರಿಯಾದಂಥ ರಾಷ್ಟ್ರಗಳು ಒಂದು ಕಡೆ; ಅವುಗಳನ್ನೆಲ್ಲ ದಾರಿಗೆ ತರಲು ತಾನೊಬ್ಬನೇ ಸಮರ್ಥ ದೊಡ್ಡಣ್ಣನೆಂದು ಹೂಂಕರಿಸುತ್ತ ಇನ್ನಷ್ಟು ಭಯಾನಕ ಶಸ್ತ್ರಾಸ್ತ್ರಗಳನ್ನು ಝಳಪಿಸುವ ಶಕ್ತ ದೇಶಗಳು ಇನ್ನೊಂದು ಕಡೆ.

ಇವೆರಡರ ನಡುವೆ ಇವೆರಡಕ್ಕೂ ಶಸ್ತ್ರಾಸ್ತ್ರಗಳನ್ನು ಪೂರೈಸುವ ದಲ್ಲಾಳಿಗಳು ಧರ್ಮಾಂಧರಿಗೂ ಬಂಡುಕೋರರಿಗೂ ಪುಷ್ಟಿ ನೀಡುತ್ತ ಆಟ ನೋಡುವುದು ಬೇರೆ. ಈ ಕ್ಲಿಷ್ಟ ಸ್ಥಿತಿಯಲ್ಲಿ ಹಿಂದಿನ ಕಾಲದಂತೆ ಕೇವಲ ಮಾತುಕತೆಗಳ ಮೂಲಕ ಅಥವಾ ಸಿಡಿತಲೆ ಕ್ಷಿಪಣಿ ಅಥವಾ ಬಾಂಬರ್‌ಗಳ ಮೂಲಕ ಶಾಂತಿಯನ್ನು ಹೇರುವುದೂ ಸುಲಭವಲ್ಲ. ಸಾಮಾನ್ಯ ಲಕೋಟೆಯಲ್ಲಿ ಅಂಥ್ರಾಕ್ಸ್ ವಿಷಾಣುಗಳನ್ನು ಲೇಪಿಸಿಯೇ ಇಡೀ ಅಮೆರಿಕವನ್ನು ತಲ್ಲಣಗೊಳಿಸಲು ಸಾಧ್ಯವೆಂಬುದನ್ನು ಉಗ್ರರು ಹಿಂದೆಯೇ ತೋರಿಸಿಕೊಟ್ಟಿದ್ದಾರೆ.

ಇಷ್ಟಕ್ಕೂ ಸಿರಿಯಾ ದೇಶದ ಆಂತರಿಕ ವಿದ್ಯಮಾನಗಳು ತೀರಾ ಸಂಕೀರ್ಣವಾಗಿವೆ. ರಾಸಾಯನಿಕ ಶಸ್ತ್ರಾಸ್ತ್ರಗಳು ಬಂಡುಕೋರರ ಬಳಿಯೂ ಇವೆಯೆಂದು ಎರಡು ವರ್ಷಗಳ ಹಿಂದೆಯೇ ವರದಿಗಳು ಬಂದಿದ್ದವು. ಅಮೆರಿಕವಾಗಲೀ ಬ್ರಿಟನ್ ಅಥವಾ ಫ್ರಾನ್ಸ್‌ನ ಮಿಲಿಟರಿಯಾಗಲೀ ಬಾಂಬ್ ದಾಳಿಯ ಭಯವೊಡ್ಡಿ ಸಿರಿಯಾವನ್ನು ಬೆದರಿಸಲು ಸಾಧ್ಯವಿಲ್ಲ. ಏಕೆಂದರೆ ರಾಸಾಯನಿಕ ಅಸ್ತ್ರಭಂಡಾರದ ಮೇಲೆ ಬಾಂಬ್ ಹಾಕುವಂತಿಲ್ಲ. ಹಾಕಿದರೆ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತದೊ, ಯಾವ ದೇಶದ ಜನಸಾಮಾನ್ಯರು ಅದಕ್ಕೆ ಬಲಿಯಾಗುತ್ತಾರೊ ಹೇಳುವಂತಿಲ್ಲ.

ಆಧುನಿಕ ತಂತ್ರಜ್ಞಾನದ ವೈರುಧ್ಯವೆಂದರೆ ಇದು. ಸಾವಿರ ಕಿಲೊಮೀಟರ್ ಆಚಿನ ಒಂಟಿ ವ್ಯಕ್ತಿಯನ್ನಾದರೂ ಗುರಿಯಿಟ್ಟು ಕೊಲ್ಲುವಷ್ಟು ನಿಖರತೆ ಇಂದಿನ ಶಸ್ತ್ರಾಸ್ತ್ರಗಳಿಗೆ ಬಂದಿದೆ. ಆದರೆ ಒಟ್ಟಾರೆ ನೋಡಿದರೆ ಅದಕ್ಕೆ ತದ್ವಿರುದ್ಧ ಪರಿಣಾಮ ಕಾಣುತ್ತಿದೆ: ಯಾರಿಗೋ ಗುರಿ ಇಟ್ಟಿದ್ದು ಇನ್ಯಾರನ್ನೋ ಬಲಿ ತೆಗೆದುಕೊಳ್ಳುತ್ತದೆ. ಮಿಲಿಟರಿಗೆ ಗುರಿ ಇಟ್ಟು ಯುದ್ಧ ಸಾರಿದರೆ ಜನಸಾಮಾನ್ಯರೇ ಬಲಿ ಬೀಳುತ್ತಾರೆ. ಕೀಟಗಳಿಗೆ ಗುರಿ ಇಟ್ಟಿದ್ದು ತನಗೇ ತಗಲುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT