ADVERTISEMENT

ವಿಜ್ಞಾನದ ಬೆನ್ನೇರಿ ಮೌಢ್ಯದ ಮೀಮ್ ಸವಾರಿ

ನಾಗೇಶ ಹೆಗಡೆ
Published 16 ಜೂನ್ 2018, 10:07 IST
Last Updated 16 ಜೂನ್ 2018, 10:07 IST
ವಿಜ್ಞಾನದ ಬೆನ್ನೇರಿ ಮೌಢ್ಯದ ಮೀಮ್ ಸವಾರಿ
ವಿಜ್ಞಾನದ ಬೆನ್ನೇರಿ ಮೌಢ್ಯದ ಮೀಮ್ ಸವಾರಿ   
ಕಳೆದ ಒಂದು ವಾರದಿಂದ ಜಾಗತಿಕ ಮಟ್ಟದಲ್ಲಿ ಒಂದು ವಿಲಕ್ಷಣ ಸಂಘರ್ಷ ನಡೆಯುತ್ತಿದೆ.  `ಮೀಮ್' ಎಂಬ ಮಿದುಳು ಜ್ವರದ ವಿರುದ್ಧ ವಿಜ್ಞಾನಿಗಳ ಜಟಾಪಟಿ ಅದು. ಯುರೋಪ್, ಅಮೆರಿಕ, ಕೆನಡಾ, ಚೀನಾ ಮತ್ತು ರಷ್ಯದಲ್ಲಿ ಈ ಮೀಮ್ ಜ್ವರ ಸಾಂಕ್ರಾಮಿಕದಂತೆ ಹಬ್ಬಿದೆ. ನಾಳೆ ಬಿಸಿಲೇರುತ್ತಿದ್ದಂತೆ ಜ್ವರದ ಕಾವು ಇಳಿಯತೊಡಗುತ್ತದೆ. ಸಂಜೆಯೊಳಗೆ ಎಲ್ಲವೂ ಶಾಂತವಾಗಲಿದೆ.  
 
ಅದು ಪ್ರಳಯದ `ಮೀಮ್' ಜ್ವರ. ನಾಳೆ ಜಗತ್ತು ಮುಗಿದೇ ಹೋಗುತ್ತದೆಂಬ ಭಯ, ಆವೇಶ, ಬದುಕುಳಿಯಲು ಹೋರಾಟ, ಆತ್ಮಹತ್ಯೆಯ ಬಯಕೆ, ದಿಗಿಲು ಎಲ್ಲವೂ ಕೋಟ್ಯಂತರ ಜನರನ್ನು ಆವರಿಸಿದೆ. ವಿಶೇಷವಾಗಿ ಚೀನಾ ಮತ್ತು ರಷ್ಯದಲ್ಲಿ ಈ ಜ್ವರ ಪ್ರಖರವಾಗಿದೆ. ಹುಚ್ಚು ಆವೇಶ ಬಂದಂತೆ ಜನರು `ಕೊನೇ ನಿಮಿಷ'ದ ಸಿದ್ಧತೆಗಾಗಿ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ. ಅವರ ಆವೇಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ' ವಿಶೇಷ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಅದಕ್ಕೆ ಪ್ರತಿಯಾಗಿ, ಪ್ರಳಯದ ನಾನಾ ಮುಖಗಳನ್ನು ಕುರಿತು ಅನೇಕ ಟಿವಿ ಚಾನೆಲ್‌ಗಳು ಹಳೇ ಚಿತ್ರಗಳ ತುಣುಕುಗಳನ್ನು ತೋರಿಸುತ್ತ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸುತ್ತಿವೆ. ಅತ್ತ ರಷ್ಯದಲ್ಲಿ ಪ್ರಳಯದ ಭ್ರಮೆಯಿಂದ ಚಿತ್ತ ಸಮತೋಲ ಕಳೆದುಕೊಂಡವರಿಗೆ ಸರ್ಕಾರ ಮನೋವೈದ್ಯರನ್ನು, ಧರ್ಮಗುರುಗಳನ್ನು ಕರೆಸಿ ಶಮನಕ್ರಮ ಕೈಗೊಳ್ಳುತ್ತಿದೆ.

ಪ್ರಳಯದ ಭಯ ಹಬ್ಬಿಸುವವರ ಮೇಲೆ ಡಿಸೆಂಬರ್ 22ರ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದೆ. ಚೀನಾದಲ್ಲಿ ಪೊಲೀಸರು ಪ್ರಳಯಪರ ಧಾರ್ಮಿಕ ನಾಯಕರುಗಳನ್ನು ಬಂಧಿಸುತ್ತಿದ್ದಾರೆ. ಸರಕಾರಗಳ ಕ್ರಮ ಏನೇನೂ ಸಾಲದೆಂದು ಕೆಲವು ಖಾಸಗಿ ವಿಚಾರವಾದಿಗಳು ಹೈಟೆಕ್ ವ್ಯವಸ್ಥೆ ಮಾಡುತ್ತಿದ್ದಾರೆ:

ಭೂಮಿಯತ್ತ ಯಾವುದೇ ನಿಬಿರು ಗಿಬಿರು ಗ್ರಹವಾಗಲೀ ಉಲ್ಕೆಯಾಗಲೀ ಬರುತ್ತಿಲ್ಲ ಎಂಬುದನ್ನು ಖಾತ್ರಿ ತೋರಿಸಲೆಂದು  `ಸ್ಲೂ ಬಾಹ್ಯಾಕಾಶ ಕ್ಯಾಮರಾ' ವನ್ನು ಕಳೆದ ಒಂದು ವಾರದಿಂದ ಆನ್ ಮಾಡಿ ಇಡಲಾಗಿದೆ. ಯಾರು ಬೇಕಿದ್ದರೂ ಯಾವಾಗ ಬೇಕಿದ್ದರೂ `ನಿಬಿರು ಹುಡುಕಾಟ' ನೋಡಬಹುದು. ಸೂರ್ಯನತ್ತಲೂ ಅದು ಆಗಾಗ ತನ್ನ ಕೋನವನ್ನು ತಿರುಗಿಸಿ, ಅಲ್ಲೂ ಏನೂ ಹಠಾತ್ ಜ್ವಾಲಾ ಸ್ಫೋಟ ಆಗುತ್ತಿಲ್ಲ ಎಂಬುದನ್ನು (slooh.com) ತೋರಿಸುತ್ತಿದೆ. ಆದರೂ ಜನರು ನಂಬುತ್ತಿಲ್ಲ.
 
 ಪ್ರಳಯವನ್ನು ಎದುರಿಸಲು ಚಿತ್ರ ವಿಚಿತ್ರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಸಿಗರೇಟಿನ ಆಕಾರದ 50 ಅಡಿ ಉದ್ದನ್ನ ಗೂಡುಗಳು ಮಾರಾಟಕ್ಕೆ ಸಿದ್ಧವಾಗಿವೆ. ಬೆಂಕಿ, ನೀರು, ಉಲ್ಕಾಪಾತದ ಆಘಾತಗಳನ್ನು ತಡೆಯಬಲ್ಲ ಸುಸಜ್ಜಿತ ಬಂಕರ್‌ಗಳು ಅವು. ಚೀನಾದ ಹೆಬೇಯ್ ಪ್ರಾಂತದಲ್ಲಿ ಎಂಟಡಿ ಎತ್ತರದ ಚೆಂಡಿನಾಕಾರದ ಗೂಡುಗಳು ಸಜ್ಜಾಗಿವೆ. ಒಂದೊಂದರಲ್ಲೂ ಹದಿನಾಲ್ಕು ಭೀತಾತ್ಮಗಳು ಅವಿತು ಕೂರುವ ವ್ಯವಸ್ಥೆ ಇದೆ. ವಿವೇಚನೆಯ ಯಾವ ಮಾತುಗಳೂ ಅವರನ್ನು ತಲುಪುವಂತಿಲ್ಲ. 
 
ಮಿದುಳನ್ನು ಆವರಿಸುವ ಈ ಬಗೆಯ ಆವೇಶಕ್ಕೆ  `ಮೀಮ್'  (meme) ಎನ್ನುತ್ತಾರೆ. ಅದೊಂದು ಬಗೆಯ ವೈರಸ್ ಎಂದೇ ಹೇಳಬಹುದು. ನೆಗಡಿ, ಫ್ಲೂ, ಕೆಂಗಣ್ಣು, ಹಕ್ಕಿಜ್ವರದ ವೈರಸ್‌ಗಳು ದೇಹದಿಂದ ದೇಹಕ್ಕೆ ದಾಟುವ ಹಾಗೆ ಮಿದುಳಿನಿಂದ ಮಿದುಳಿಗೂ ಮಾಹಿತಿಯ  ಸೋಂಕು  ದಾಟುತ್ತ ಹೋಗುತ್ತದೆ. ಕೆಲವರಿಗೆ ತೀವ್ರವಾಗಿ ತಟ್ಟುತ್ತದೆ, ಕೆಲವರಿಗೆ ಕಮ್ಮಿ. ಈ ಬಗೆಯ ಮೀಮ್‌ಗಳಲ್ಲಿ ಕೆಟ್ಟವೂ ಇರುತ್ತವೆ, ಒಳ್ಳೆಯವೂ ಇರುತ್ತವೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಭಕ್ತಿಯ ಮೀಮ್ ಹಠಾತ್ತಾಗಿ ವ್ಯಾಪಿಸಿತ್ತು. ಕೆಲವು ಮೀಮ್‌ಗಳು ಹಂದಿಜ್ವರದ ಭಯದ ಹಾಗೆ ವಾರಗಟ್ಟಲೆ ಕಾಡಿ ಕ್ಷಿಪ್ರವಾಗಿ ಮಾಯವಾಗುತ್ತವೆ. ಇನ್ನು ಸ್ವಾತಂತ್ರ್ಯ ಸಂಗ್ರಾಮದಂಥ ಕೆಲವು ಮೀಮ್ ನಿಧಾನ ಹಬ್ಬುತ್ತ ಕ್ರಮೇಣ ತಾರಕಕ್ಕೆ ಏರುತ್ತದೆ. ಕೆಲವರನ್ನು ಅದು ತಟ್ಟಿದ್ದೇ ಇಲ್ಲ ಬಿಡಿ. 
 
ಮತ್ತೆ ಕೆಲವು ಮೀಮ್‌ಗಳು ಜೀವನವಿಡೀ ಆಕ್ರಮಿಸಿ ಕೂತಿರುತ್ತವೆ. ಅದು ಹಿಂದೂತ್ವ ಮೀಮ್ ಇರಬಹುದು ಅಥವಾ ಮಾವೊವಾದಿ ಮೀಮ್ ಇರಬಹುದು. ಹಾಲು ಕುಡಿದ ಗಣೇಶನಂಥ ಕೆಲವು ಮೀಮ್‌ಗಳು ಹಠಾತ್ ಕೋರೈಸಿ ಮಾಯವಾದರೆ ಇನ್ನು ಕೆಲವು ಉದಾ: ಜಾತಿ ಮೀಮ್ - ಖಾಪ್ ಮೀಮ್‌ಗಳು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಲೇ ಇರಬಹುದು.

ಮೀಮ್‌ಗಳ ವೈವಿಧ್ಯಕ್ಕೆ ಕೊನೆಯಿಲ್ಲ. ಜಿಹಾದ್ ಮೀಮ್, ಸಾಯಿಬಾಬಾ ಮೀಮ್, ಗಾಂಧೀ ಮೀಮ್, ಅಣ್ಣಾವ್ರ ಮೀಮ್, ಠಾಕ್ರೆ ಮೀಮ್, ಅಷ್ಟಗ್ರಹ ಮೀಮ್, ಶಂಕರನಾಗ್ ಮೀಮ್, ಶನಿ ಮೀಮ್, ಕೆಜೆಪಿ ಮೀಮ್, ಐಪ್ಯಾಡ್ ಮೀಮ್,ರುದ್ರಾಕ್ಷಿ ಮೀಮ್, ನವಂಬರ್‌ನಲ್ಲಿ ಕನ್ನಡ ಮೀಮ್, ಡಿಸೆಂಬರಿನಲ್ಲಿ ಅಯ್ಯಪ್ಪ ಮೀಮ್..... ಇಂಥವುಗಳ ಅಧ್ಯಯನಕ್ಕೆಂದೇ ಮೆಮೆಟಿಕ್ಸ್ (memetics) ಎಂಬ ಶೋಧಶಾಖೆಯೇ ಹುಟ್ಟಿಕೊಂಡಿದೆ. ಕೆಲವರಿಗೆ ಮೆಮೆಟಿಕ್ಸ್  ಮೀಮ್ ಅಂಟಿಕೊಂಡಿರಲೂಬಹುದು.
 
ಪ್ರಳಯ ಮೀಮ್‌ನ ವಿಶೇಷ ಏನೆಂದರೆ ಧೂಮಕೇತುವಿನ ಹಾಗೆ ಆಗಾಗ ಬಂದು ಕೆಲವರನ್ನು ಬೆದರಿಸಿ ಕಂಗಾಲು ಮಾಡಿ ಹೋಗುತ್ತದೆ. ಬೈಬಲ್ ಹೆಸರು ಹೇಳಿಕೊಂಡು ಕಳೆದ ಎರಡು ಸಾವಿರ ವರ್ಷಗಳಲ್ಲಿ ಕಡೇ ಪಕ್ಷ ಇನ್ನೂರು  `ಖಚಿತ' ,  `ನಿಖರ'  ದಿನಾಂಕದ ಪ್ರಳಯ ಮುನ್ಸೂಚನೆ ಬಂದಿದ್ದು ಅವೆಲ್ಲವೂ ಸುಳ್ಳಾಗಿವೆ.

ನಮ್ಮ ಜ್ಯೋತಿಷಿಗಳಂತೂ ಹೊಸ ಹೊಸ ಮೀಮ್‌ಗಳನ್ನು ಸೃಷ್ಟಿಸುತ್ತ ಹಳತಕ್ಕೆ ಹೊಳಪು ಕೊಡುತ್ತಲೇ ಇರುತ್ತಾರೆ. ಅವುಗಳ ಪ್ರಸಾರಕ್ಕೆ ಟಿವಿ, ಕೇಬಲ್, ಅಂಟೆನಾಗಳೇ ಬೇಕು; ವಿಜ್ಞಾನ ತಂತ್ರಜ್ಞಾನ ಬೆಂಬಲವೇ ಬೇಕು. ಕೆಲವೊಮ್ಮೆ ವಿಜ್ಞಾನಿಗಳೇ ಬೇಕು. ಹಿಂದೆ 1982ರಲ್ಲಿ ಏಳು ಗ್ರಹಗಳು ಆಕಾಶದಲ್ಲಿ ಒಂದೇ ಚಾಪದಲ್ಲಿ ಬರುತ್ತವೆಂದೂ ಭೂಮಿಯ ಮೇಲೆ ಸರಣಿ ಭೂಕಂಪನ ಆಗಲಿವೆಯೆಂದೂ ಸ್ವತಃ ಖಭೌತ ವಿಜ್ಞಾನಿಯೇ ಆದ ಡಾ. ಜಾನ್ ಗಿಬ್ಬಿನ್ ಎಂಬಾತ ಸ್ಟೀಫನ್ ಪ್ಲೇಜ್‌ಮನ್ ಜತೆ ಸೇರಿ `ಗುರು ಪರಿಣಾಮ' ಎಂಬ ಪುಸ್ತಕವನ್ನು ಬರೆದು ಅಮೆರಿಕವನ್ನು ಕಂಗಾಲು ಮಾಡಿದ್ದರು.

ಆ ಗ್ರಂಥಕ್ಕೆ ಖ್ಯಾತ ವಿಜ್ಞಾನ ಲೇಖಕ ಐಸ್ಯಾಕ್ ಅಸಿಮೊವ್‌ನಿಂದ ಮುನ್ನುಡಿ ಬೇರೆ ಬರೆಸಿದ್ದರು. ಎಲ್ಲೂ ಭೂಕಂಪನ ಆಗದಿದ್ದಾಗ, ಅದು ಏಕೆ ಆಗಿಲ್ಲ ಎಂದು ವಿವರಿಸಿ ಅವರೇ ಇನ್ನೊಂದು ಪುಸ್ತಕ ಬರೆದರು. ಇನ್ನು 2000ದ ಪ್ರಳಯಕ್ಕೆ ಕಂಪ್ಯೂಟರಿನ ಎರಡು ಸೊನ್ನೆಗಳನ್ನು ಗಂಟು ಹಾಕಿ ಸಾಫ್ಟ್‌ವೇರ್ ಲೋಕದಲ್ಲೂ ಭಾರೀ ಸಂಚಲನ ಎಬ್ಬಿಸಿದ್ದನ್ನು ನಾವು ಮರೆಯುವಂತಿಲ್ಲ. 
ಭವಿಷ್ಯವಾಣಿ ಅದೆಷ್ಟೇ ಬಾರಿ ವಿಫಲವಾದರೂ ಪ್ರಳಯದ ಈ ಮೀಮ್ ಮತ್ತೆ ಮತ್ತೆ ದಾಳಿ ಮಾಡುತ್ತಿರುತ್ತದೆ.

ವೈಜ್ಞಾನಿಕ ಮನೋಭಾವ ಹೆಚ್ಚಿದಂತೆಲ್ಲ ಇದರ ಹಾವಳಿ ಕಡಿಮೆ ಆಗಬೇಕಿತ್ತು. ಬದಲಿಗೆ ವಿಜ್ಞಾನವನ್ನೇ ಹೈಜಾಕ್ ಮಾಡುವಂತೆ ಈ ಬಾರಿ ಒಂದೆರಡಲ್ಲ, ನಾಲ್ಕಾರು ಕಪೋಲ ಕಲ್ಪಿತ  `ವೈಜ್ಞಾನಿಕ ಸಾಕ್ಷ್ಯ'ಗಳನ್ನು ಪೇರಿಸಿಕೊಂಡು ಡಿಜಿಟಲ್ ತಂತ್ರಜ್ಞಾನವನ್ನೂ ಅಂತರಜಾಲವನ್ನೂ ತನ್ನ ಪ್ರಸಾರ ಮಾಧ್ಯಮವನ್ನಾಗಿ ಮಾಡಿಕೊಂಡು ಈ ಮೀಮ್ ತಾನೇ ಖುದ್ದಾಗಿ ಪ್ರಳಯಾಂತಕ ಶಕ್ತಿಯಾಗಿ ಹಬ್ಬಿದೆ. ಚೀನಾದಲ್ಲಿ ಪ್ರಳಯದ ಭಯ ಹೆಚ್ಚಿಸುವ  `2012'  ಸಿನಿಮಾದ ಥ್ರೀಡೀ ಆವೃತ್ತಿ ಹೊಸದಾಗಿ ಬಿಡುಗಡೆಯಾಗಿದೆ. ಸಂಭವನೀಯ ಸರಣಿ ಆತ್ಮಹತ್ಯೆಗಳನ್ನೂ ಸಾಮೂಹಿಕ ಕಗ್ಗೊಲೆಗಳನ್ನೂ ತಡೆಯಲೆಂದು ಜಿನ್‌ಪಿಂಗ್ ಸರಕಾರ ತರಾವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. 
 
ವಿಜ್ಞಾನವನ್ನೇ ಮೂಢನಂಬಿಕೆಯ ಮೇರು ಸಾಧನವನ್ನಾಗಿ ಮಾಡಿಕೊಂಡ ಉತ್ತಮ ಉದಾಹರಣೆ ಫ್ರಾನ್ಸ್‌ನ  `ಬೂಗ್ಯಾರಾಶ್' ಎಂಬ ಕಲ್ಲುಬೆಟ್ಟದಲ್ಲಿದೆ. ಈ ಬೆಟ್ಟ ಮತ್ತು ಅದರ ಬಳಿಯ ಪುಟ್ಟ ಹಳ್ಳಿ ಮಾತ್ರ ಯಾವ ಪ್ರಳಯ ಬಂದರೂ ಬಚಾವಾಗುತ್ತದೆ ಎಂಬ ಪ್ರತೀತಿಯಿದೆ. ಬೆಟ್ಟದ ಗರ್ಭದಲ್ಲಿ ಅನ್ಯಲೋಕದ ಪುರಾತನ ವಿಮಾನ ಇದೆಯೆಂದೂ ಅಲ್ಲಿಗೆ ಯುಎಫ್‌ಓಗಳು ಆಗಾಗ ಬಂದು ಹೋಗುತ್ತವೆಂದೂ ಹೇಳಲಾಗುತ್ತಿದ್ದು ಈ ಪ್ರದೇಶ ಈಚೀಚೆಗೆ  `ಉಲ್ಟಾ ಬೆಟ್ಟ'  ಎಂತಲೂ ಪ್ರಸಿದ್ಧಿ ಪಡೆಯುತ್ತಿದೆ. 
 
ಏಕೆಂದರೆ ಇದರ ಶಿಖರದ ಬಂಡೆಗಳು ತೀರಾ ಪುರಾತನವಾಗಿದ್ದು, ತನಗಿಂತ ವಯಸ್ಸಿನಲ್ಲಿ ಕಿರಿದಾದ ಶಿಲಾಸ್ತರಗಳ ಮೇಲೆ ನಿಂತಿವೆ. ಇದು ಅಪರೂಪದ ಸಂಗತಿಯೇ ಹೌದಾದರೂ ಭೂವಿಜ್ಞಾನದ ಪ್ರಕಾರ ಇದು ವಿಶೇಷವೇನಲ್ಲ. ಭೂಮಿಯ 460 ಕೋಟಿ ವರ್ಷಗಳ ಚರಿತ್ರೆಯಲ್ಲಿ ಅದೆಷ್ಟೊ ಸ್ಥಿತ್ಯಂತರಗಳು ನಿಧಾನ ಗತಿಯಲ್ಲೇ ನಡೆದು ಹೋಗಿವೆ.

(ನಮ್ಮ ಹಿಮಾಲಯದ ನೆಲದಲ್ಲೂ ಹಿಂದೊಮ್ಮೆ ಟೆಥಿಸ್ ಸಮುದ್ರವಿತ್ತು.ಅದರ ತಳದ ಹೂಳಿನ ಪದರಗಳೇ ಒತ್ತಡಕ್ಕೆ ಸಿಕ್ಕು ಹಾಸಿಗೆ ವಸ್ತ್ರಗಳಂತೆ ಮಡಚಿಕೊಂಡು, ಹಿಂದುಮುಂದಾಗಿ, ತಲೆಕೆಳಗಾಗಿ, ಒಡಲಲ್ಲಿ ಶಂಖ, ಸಿಂಪು, ಮೀನುಗಳ ಪಳೆಯುಳಿಕೆಗಳನ್ನೂ ಹುದುಗಿಸಿಕೊಂಡು ಪರ್ವತವಾಗಿ ನಿಂತಿವೆ. ಶಿಲೆಗಳಲ್ಲಿ ಸಿಗುವ ಅಮೊನೈಟ್ಸ್ ಎಂಬ ಶಂಕುವಿನಂಥ ಪ್ರಾಣಿಯ ಚಿಪ್ಪಿನ ಪಳೆಯುಳಿಕೆಗಳನ್ನು ನಾವು ಪವಿತ್ರ ಸಾಲಿಗ್ರಾಮ ಎಂದು ಕರೆದು ಅದನ್ನೇ ಲಿಂಗದ ಮೀಮಾಗಿ ಮಾಡಿಕೊಂಡಿದ್ದೇವೆ.) ಶಿಲೆಗಳಿಗೂ ಎಳೆತನ, ಯೌವನ, ವೃದ್ಧಾಪ್ಯ, ಪುನರ್ಜನ್ಮ ಇರುತ್ತದೆಂದು ವಿಜ್ಞಾನಿಗಳು ತೋರಿಸಿದ್ದೇ ಹೊಸ ಬಗೆಯ ಮೂಢನಂಬಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. 
 
ಪುಟ್ಟ ಬೂಗ್ಯಾರಾಶ್ ಗ್ರಾಮದಲ್ಲಿ ವರ್ಷಗಳ ಹಿಂದೆಯೇ ಬಾಡಿಗೆ ಟೆಂಟ್‌ಗಳ ಬುಕಿಂಗ್ ಆಗಿದೆ. ಮಾಧ್ಯಮಗಳ ಯಾತ್ರಾತಾಣವಾಗಿದೆ. ನಾಳೆ ನೂಕು ನುಗ್ಗಾಟ ಜಾಸ್ತಿ ಆಗದಂತೆ ಬಂದೋಬಸ್ತು ಮಾಡಲಾಗಿದ್ದು, ಊರ 176 ಜನರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಾಗಿದೆ.ಅತ್ತ ಮಾಯನ್ ಕ್ಯಾಲೆಂಡರ್ ಇರುವ ಮೆಕ್ಸಿಕೋದ ಕಾಂಪೀಚಿಯಾ ದೇಗುಲದಲ್ಲಿ ವಿಚಾರವಾದಿಗಳು `ಝೀರೋ-ಡೇ'  ಹಬ್ಬವನ್ನು ಆಯೋಜಿಸಿದ್ದು ಅಲ್ಲಿಗೂ ಜನರ ದೌಡು ಹೆಚ್ಚಿದೆ.
 
ಮೇಲ್ನೋಟಕ್ಕೆ ಇದು ವಿಜ್ಞಾನ ಮತ್ತು ಮೌಢ್ಯದ ನಡುವಣ ಜಟಾಪಟಿ ಎನಿಸಿದರೂ ಮೂಲತಃ ವ್ಯಾಪಾರಿಶಕ್ತಿಯೇ ಎರಡೂ ಬಣಗಳನ್ನು ಕುಣಿಸುತ್ತಿದೆ.  `2012' ಹೆಸರಿನ ಸಿನಿಮಾ ತಯಾರಿಸಿ ಭಯ ಹಬ್ಬಿಸಿದವರು ಭಾರೀ ಹಣ ಗಳಿಸಿದರು. ಅದರ ಬಾಲ ಹಿಡಿದು ಅಸಂಖ್ಯ ವೆಬ್‌ಸೈಟ್‌ಗಳು, ಟಿವಿ ಚಾನೆಲ್‌ಗಳು ಟಿಆರ್‌ಪಿ ಏರಿಸಿಕೊಂಡವು. ಆದರೆ ಆದದ್ದೇನೆಂದರೆ ಕ್ರಿಸ್‌ಮಸ್ ಹಬ್ಬಕ್ಕೆ ನಾಲ್ಕು ದಿನ ಮುಂಚಿತವೇ ಪ್ರಳಯದ ಹುಚ್ಚು ತಾರಕಕ್ಕೆ ಏರುವುದರಿಂದ ಬಿಸಿನೆಸ್ ರಂಗಕ್ಕೆ ಏಟು ಬೀಳುತ್ತಿದೆ. 
 
ಕ್ರಿಸ್‌ಮಸ್ ಹಬ್ಬದ ಮುನ್ನ ಕೊಳ್ಳುಬಾಕರನ್ನು ಆಕರ್ಷಿಸಲೆಂದು ಮಾಲ್‌ಗಳೆಲ್ಲ ಸಿಂಗರಿಸಿಕೊಳ್ಳುವ ಸಂದರ್ಭದಲ್ಲಿ ಕೆಲವೆಡೆ ಬರೀ ಮೋಂಬತ್ತಿ, ಕಡ್ಡಿಪೆಟ್ಟಿಗೆಗಳ ವ್ಯಾಪಾರವೇ ಜೋರಾಗಿದೆ. ಪ್ರಳಯವಾದರೆ ಅವೆಲ್ಲ ನಿರುಪಯುಕ್ತ ಎಂಬ ಸರಳ ವಿಚಾರವೂ ಅವರಿಗೆ ಹೊಳೆದಂತಿಲ್ಲ. ಬಿಸಿನೆಸ್ ರಂಗದ ಒತ್ತಾಯಕ್ಕೋ ಎಂಬಂತೆ `ನಾಸಾ' ಕೂಡ ನರ್ತಿಸಿದೆ.

ಡಿಸೆಂಬರ್ 22ಕ್ಕೆ ಬಿಡುಗಡೆ ಕಾಣಬೇಕಿದ್ದ  ಪ್ರಳಯ ಏಕೆ ಆಗಲಿಲ್ಲ  ಎಂಬ ವೈಜ್ಞಾನಿಕ ವಿಡಿಯೊವನ್ನು ಎಂಟು ದಿನ ಮೊದಲೇ ಬಿಡುಗಡೆ ಮಾಡಿದೆ. ಯೂಟ್ಯೂಬ್‌ನಲ್ಲಿ nasa 12-22-12  ಹೆಸರಿನಲ್ಲಿ ನೋಡ ಸಿಗುವ ಈ ವಿಡಿಯೊದಲ್ಲಿ ` ನಿನ್ನೆ ಏಕೆ ಪ್ರಳಯ ಆಗಲಿಲ್ಲ?' ಎಂಬುದಕ್ಕೆ ಅನೇಕ ಕಾರಣಗಳನ್ನು ರೇಡಿಯೊ ಖಗೋಲವಿಜ್ಞಾನಿ ಡಾ. ಜಾನ್ ಕಾರ್ಲ್‌ಸನ್ ನೀಡುತ್ತಿದ್ದಾರೆ. 
 
ಮಾಯಾ ಸಂಸ್ಕೃತಿಯಲ್ಲಿ ಪ್ರಳಯದ ಪ್ರಸ್ತಾಪವೇ ಇಲ್ಲವೆಂದೂ ಯಾವುದೇ ಆಕಾಶಕಾಯ ಅಪ್ಪಳಿಸುವುದೇ ಆಗಿದ್ದರೆ ಅದು ಇಷ್ಟರಲ್ಲಿ ಬರಿಗಣ್ಣಿಗೆ ಎಲ್ಲರಿಗೂ ಪ್ರಖರವಾಗಿ ಕಾಣಬೇಕಿತ್ತು. ನಮ್ಮ ಯಾವ ದೂರದರ್ಶಕಕ್ಕೂ ಅಂಥ ಯಾವ ಕಾಯವೂ ಕಾಣುತ್ತಿಲ್ಲ, ಸೂರ್ಯನ ಜ್ವಾಲೆಯಲ್ಲೂ ಅಸಾಮಾನ್ಯ ಹೆಚ್ಚಳ ಕಾಣುತ್ತಿಲ್ಲ ಎಂದಿದ್ದಾರೆ.
 
ಹಾಗೆಂದು ಇಂದು -ನಾಳೆ ಯಾರೂ ಬರಿಗಣ್ಣಲ್ಲಿ ಸೂರ್ಯನನ್ನು ನೋಡಬೇಡಿ. ಕುರುಡು ನಂಬಿಕೆಯನ್ನು ಪರೀಕ್ಷಿಸಲು ಹೋಗಿ ಎಂದೂ ಏನನ್ನೂ ನೋಡಲಾಗದ ಅಂಧತ್ವ ಬಂದೀತು.
 
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.