ಇಬ್ಬರೂ ಜಾಗತಿಕ ಖ್ಯಾತಿಯ ವಿಜ್ಞಾನಿಗಳು; ಇಬ್ಬರೂ ಬೆಂಗಳೂರಿನಲ್ಲಿಯೇ ತಮ್ಮ ವೈಜ್ಞಾನಿಕ ಮೇರುಗಿರಿಯನ್ನು ಮುಟ್ಟಿದವರು: ಇಬ್ಬರೂ ಪದ್ಮಪ್ರಶಸ್ತಿ ವಿಜೇತರು. ಒಬ್ಬರು ಹಿಂದಿನ ಪ್ರಧಾನ ಮಂತ್ರಿಯವರ ಸಲಹಾ ಸಮಿತಿಯಲ್ಲಿದ್ದರೆ ಇನ್ನೊಬ್ಬರು ಯೋಜನಾ ಆಯೋಗದ ಈಗಿನ ಸದಸ್ಯರು. ಒಬ್ಬರು ಪಶ್ಚಿಮ ಘಟ್ಟಸಾಲಿನ ಮೇಲ್ತುದಿಯಿಂದ ಬಂದರೆ ಇನ್ನೊಬ್ಬರು ಕೇರಳದ ತುದಿಯಿಂದ ಬಂದವರು. ಇವರಿಬ್ಬರೂ ಈಗ ಪಶ್ಚಿಮ ಘಟ್ಟ ಕುರಿತ ಹೊಸ ವಿವಾದದಲ್ಲಿ ಎರಡು ಧ್ರುವಗಳಾಗಿ ನಿಂತಿದ್ದಾರೆ. ಒಬ್ಬರು ತುಳಿತಕ್ಕೊಳಗಾದ ನಿಸರ್ಗದ ಪರವಾಗಿ, ಬೇರುಮಟ್ಟದ ಪರವಾಗಿ ನಿಂತು ವಾದಿಸಿದರೆ ಇನ್ನೊಬ್ಬರು ಅಭಿವೃದ್ಧಿಯ ಪರವಾಗಿ, ದೊಡ್ಡ ಯೋಜನೆಗಳ ಪರವಾಗಿ, ಸರ್ಕಾರದ ವಕ್ತಾರರಾಗಿ ವಾದ ಮಂಡಿಸಿದ್ದಾರೆ; ಮಾಧ್ಯಮಗಳಲ್ಲಿ ಚರ್ಚೆಯ ವಸ್ತುವಾಗಿದ್ದಾರೆ. ಒಬ್ಬರು ಪರಿಸರ ತಜ್ಞ ಪ್ರೊ ಮಾಧವ ಗಾಡ್ಗೀಳ್, ಇನ್ನೊಬ್ಬರು ಅಂತರಿಕ್ಷ ತಜ್ಞ ಡಾ. ಕಸ್ತೂರಿರಂಗನ್.
ಈ ಇಬ್ಬರ ನಡುವಣ ವಿವಾದದ ವಿವರ ಹೀಗಿದೆ: ಮಾಧವ ಗಾಡ್ಗೀಳ್ ಅವರನ್ನು `ಪಶ್ಚಿಮಘಟ್ಟಗಳ ಜೀವಜಾಲ ತಜ್ಞರ ಸಮಿತಿ' ಯ ಅಧ್ಯಕ್ಷರನ್ನಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ 2010ರಲ್ಲಿ ನಿಯೋಜಿಸಿತ್ತು. ಈ ಭೂಭಾಗದ ಸೂಕ್ಷ್ಮ ಜೀವಪರಿಸರವನ್ನೂ ರಕ್ಷಿಸಬೇಕು; ಜನರ ಬದುಕಿನ ಗುಣಮಟ್ಟವನ್ನೂ ಎತ್ತರಿಸಬೇಕು. ಪರಸ್ಪರ ವಿರುದ್ಧವೇ ಎನ್ನಬಹುದಾದ `ಅಭಿವೃದ್ಧಿ ಮತ್ತು ಪರಿಸರದ ಜಟಿಲ ಪ್ರಶ್ನೆಗೆ ಪರಿಹಾರ ತೋರಿಸಿ' ಎಂದು ಕೇಳಿ ಸಚಿವ ಜೈರಾಮ್ ರಮೇಶ್ ಅಂದು ಗಾಡ್ಗೀಳ್ ಸಮಿತಿಯನ್ನು ಕೋರಿದ್ದರು. ಹದಿಮೂರು ತಜ್ಞರ ಈ ಸಮಿತಿ - ಅದರಲ್ಲಿ ಸರ್ಕಾರಿ ಅಧಿಕಾರಿಗಳು, ಪರಿಸರ ತಜ್ಞರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳೂ ಇದ್ದರು - ಆರು ರಾಜ್ಯಗಳಲ್ಲಿ ಮೈಚಾಚಿಕೊಂಡಿರುವ ಪಶ್ಚಿಮ ಘಟ್ಟ ಸರಮಾಲೆಯ ಬದುಕು ಭವಿಷ್ಯದ ಕುರಿತು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ, ಸ್ಥಳೀಯರೊಂದಿಗೆ ಚರ್ಚಿಸಿ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ವರದಿ ಸಲ್ಲಿಸಿತು. ಅದರಲ್ಲಿ, `ಸಮಿತಿಯ ತೀರ್ಮಾನಗಳು ಆಖೈರೇನಲ್ಲ; ಅದನ್ನು ಎಲ್ಲ ಆರು ರಾಜ್ಯಭಾಷೆಗಳಿಗೆ ಅನುವಾದಿಸಿ, ಭಾಗೀದಾರರ ಜೊತೆ ಚರ್ಚೆ ನಡೆಸಿ ನಂತರ ಸರ್ಕಾರವೇ ತನ್ನ ತೀರ್ಮಾನ ಪ್ರಕಟಿಸಬಹುದು' ಎಂದಿತ್ತು.
ವರದಿ ಸಿದ್ಧವಾಗುವಷ್ಟರಲ್ಲಿ ಕೇಂದ್ರ ಪರಿಸರ ಸಚಿವರೇ ಬದಲಾಗಿದ್ದರು. ಜೈರಾಮ್ ರಮೇಶ್ ಬದಲಿಗೆ ಜಯಂತಿ ನಟರಾಜನ್ ಬಂದಿದ್ದರು. ವರದಿ ಸಲ್ಲಿಕೆಯಾದದ್ದೇ ತಡ, ಸರ್ಕಾರ ಅವಸರದಲ್ಲಿ ಅದನ್ನು ಬಿಸಿಕೆಂಡದಂತೆ ಮುಚ್ಚಿಟ್ಟಿತು. ವರದಿಯನ್ನು ಬಹಿರಂಗಪಡಿಸಬೇಕೆಂದು ಕೇರಳದ ವ್ಯಕ್ತಿಯೊಬ್ಬರು ಕೇಂದ್ರ ಮಾಹಿತಿ ಆಯೋಗಕ್ಕೆ ಪ್ರಶ್ನೆ ಕೇಳಿದರು. ಏಕೆ ಬಿಡುಗಡೆ ಆಗುತ್ತಿಲ್ಲವೆಂದು ಆಯೋಗ ಪರಿಸರ ಸಚಿವಾಲಯವನ್ನು ಕೇಳಿತು. ವರದಿ ಬಹಿರಂಗವಾದರೆ ರಾಜ್ಯಗಳ `ವೈಜ್ಞಾನಿಕ ಮತ್ತು ಆರ್ಥಿಕ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು' ಎಂದೇನೋ ಅಸ್ಪಷ್ಟ ಉತ್ತರ ಬಂತು. ಮಾಹಿತಿ ಆಯುಕ್ತರಿಗೆ ತೃಪ್ತಿಯಾಗಲಿಲ್ಲ. `ವರದಿಯನ್ನು ಸರ್ಕಾರ ಒಪ್ಪುತ್ತದೊ ಬಿಡುತ್ತದೊ ಬೇರೆ ಮಾತು. ಆದರೆ ವಿಜ್ಞಾನಿಗಳು ಏನು ಹೇಳಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು. ಅದನ್ನು 2012 ಮೇ 10ರೊಳಗೆ ಬಹಿರಂಗಗೊಳಿಸಿ' ಎಂದು ಮಾಹಿತಿ ಆಯೋಗ ಸರ್ಕಾರಕ್ಕೆ ಆದೇಶ ನೀಡಿತು.
ಆಗಲೂ ಸರ್ಕಾರ ಜಪ್ಪೆನ್ನಲಿಲ್ಲ. ತಾನು ಬಚ್ಚಿಟ್ಟಿದ್ದೇ ಸರಿ ಎಂದು ವಾದಿಸಿ ಮಾಹಿತಿ ಆಯುಕ್ತರ ಆಜ್ಞೆಯ ವಿರುದ್ಧ ನ್ಯಾಯಾಲಯಕ್ಕೆ ದೂರಿತು. ಅಲ್ಲೂ ಜಯ ಸಿಗದೆ, ಕೊನೆಗೂ ಗಾಡ್ಗೀಳ್ ಸಮಿತಿಯ ವರದಿಯನ್ನು ಪ್ರಕಟಿಸಲೇಬೇಕಾಯಿತು. ಆ ವೇಳೆಗಾಗಲೇ ವರದಿಯನ್ನು ಮೂಲೆಗೊತ್ತಲು ಸರ್ಕಾರ ನಿರ್ಧರಿಸಿತ್ತು. ವರದಿಯ ಮೌಲ್ಯಮಾಪನ ಮಾಡಿ ಬದಲೀ ಶಿಫಾರಸುಗಳನ್ನು ನೀಡುವಂತೆ ಕಸ್ತೂರಿ ರಂಗನ್ ನೇತೃತ್ವದಲ್ಲಿ ಇನ್ನೊಂದು ಉನ್ನತ ಮಟ್ಟದ ಕಾರ್ಯತಂಡವನ್ನು ನೇಮಕ ಮಾಡಿತ್ತು. ಕಸ್ತೂರಿರಂಗನ್ ಕಾರ್ಯತಂಡ ಚುರುಕಾಗಿ ಕೆಲಸ ಮಾಡಿ ಕಳೆದ ತಿಂಗಳು ತನ್ನ ತಿದ್ದುಪಡಿ ತೀರ್ಮಾನವನ್ನು ಸಲ್ಲಿಸಿದೆ. ಜಯಂತಿ ನಟರಾಜನ್ ಮಾಧ್ಯಮಗೋಷ್ಠಿ ಕರೆದು ವಿಜೃಂಭಣೆಯಿಂದ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಪಶ್ಚಿಮಘಟ್ಟಗಳ ಭವಿಷ್ಯ ಹೇಗಿರಬೇಕು ಎಂಬುದರ ಬಗ್ಗೆ ಈ ಎರಡು ವರದಿಗಳೂ ವಿವಾದದ ಕಿಚ್ಚನ್ನೆಬ್ಬಿಸಿವೆ. ಯುನೆಸ್ಕೊ ಮಾನ್ಯತೆಯ ವಿಶ್ವಪರಂಪರೆಯ ಪಟ್ಟಿಯ ವಿವಾದ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದರೆ ಈಗಿನ ವಿವಾದ ಕೇರಳ, ಗೋವಾ ಹಾಗೂ ಮಹಾರಾಷ್ಟ್ರಕ್ಕೂ ವಿಸ್ತರಿಸಿದೆ. ಗಾಡ್ಗೀಳ್ ವರದಿಯ ಬಗ್ಗೆ ಕೇರಳ ಸ್ಪಷ್ಟವಾಗಿ ತನ್ನ ಅಸಮ್ಮತಿ ಸೂಚಿಸಿದೆ. ಆದರೆ ವಿಜ್ಞಾನ ಪ್ರಚಾರಕ್ಕೆಂದೇ ಮೀಸಲಾದ ಕೇರಳ ಶಾಸ್ತ್ರಸಾಹಿತ್ಯ ಪರಿಷತ್ತು ಕಸ್ತೂರಿರಂಗನ್ ಕಾರ್ಯತಂಡದ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿದೆ. `ಈ ವರದಿ ಅಂಗೀಕೃತವಾದರೆ ಪಶ್ಚಿಮಘಟ್ಟಗಳ 17,645 ಚದರ ಕಿ.ಮೀ ಪ್ರದೇಶಕ್ಕೆ ರಕ್ಷಣೆ ಇಲ್ಲದಂತಾಗುತ್ತದೆ' ಎಂದು ಅದು ಹೇಳಿದೆ.
ಅಂತೂ ಇಂದಿನ `ವಿಶ್ವ ಜೀವಿವೈವಿಧ್ಯ ದಿನ'ದ (ಮೇ 22) ಸಂದರ್ಭದಲ್ಲಿ ಈ ವಿವಾದ ಪಶ್ಚಿಮ ಘಟ್ಟಗಳ ಜೀವಿವೈವಿಧ್ಯದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎನ್ನಬಹುದು. ಇದು ಗಾಡ್ಗೀಳ್ ವರ್ಸಸ್ ಕಸ್ತೂರಿ ರಂಗನ್ ತಿಕ್ಕಾಟ ಎನ್ನುವುದಕ್ಕಿಂತ ಜನಸಾಮಾನ್ಯ ವರ್ಸಸ್ ಅಧಿಕಾರಶಾಹಿಯ ಜಟಾಪಟಿ ಎಂತಲೇ ಹೇಳಬೇಕು. ಈ ಇಬ್ಬರು ವಿಜ್ಞಾನಿಗಳ ನಡುವೆ ಪಾತಾಳ - ಆಕಾಶಗಳ ವ್ಯತ್ಯಾಸವಿದೆ. ಹಾರ್ವರ್ಡ್ ವಿವಿಯಲ್ಲಿ ಗಣಿತೀಯ ಜೀವಜಾಲ ವಿಷಯದ ಮೇಲೆ ಡಾಕ್ಟರೇಟ್ ಪಡೆದ ಗಾಡ್ಗೀಳ್ ಸ್ವಇಚ್ಛೆಯಿಂದ ಪಶ್ಚಿಮಘಟ್ಟಗಳ ಅಧ್ಯಯನಕ್ಕೆಂದೇ ಮರಳಿ ಬಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತಜ್ಞರ ತಂಡ ಕಟ್ಟಿ ಬೆಳೆಸಿದವರು.
ಕಾಡುಮೇಡು ಅಲೆಯುತ್ತ ಜನ ಮತ್ತು ವನ್ಯಜೀವಿಗಳ ನಡುವಣ ಸಂಬಂಧಗಳನ್ನು ದಾಖಲಿಸಿದವರು. ಕಸ್ತೂರಿ ರಂಗನ್ ಮುಂಬೈಯಲ್ಲಿ ಖಗೋಳ ವಿಜ್ಞಾನ ಓದಿ, ಅಹ್ಮದಾಬಾದ್‌ನಲ್ಲಿ ತಾರಾಲೋಕದ ತಜ್ಞರೆನಿಸಿ, ಇಸ್ರೊ ಬಾಹ್ಯಾಂತರಿಕ್ಷ ಸಂಸ್ಥೆಯನ್ನು ಸೇರಿ ಮೇಲೇರುತ್ತ ಭಾರತದ ಅಭಿವೃದ್ಧಿಯ ಕನಸಿಗೆ ರೆಕ್ಕೆಪುಕ್ಕ ಜೋಡಿಸುತ್ತ `ಚಂದ್ರಯಾನ'ದ ರೂವಾರಿ ಎನಿಸಿದವರು. ಗಾಡ್ಗೀಳರು ಪಶ್ಚಿಮ ಘಟ್ಟಗಳನ್ನು ಪೃಥ್ವಿಯ ಅದ್ಭುತ ವನ್ಯಕೋಶ ಎಂದು ಪರಿಗಣಿಸಿ, ಅದು ಹೇಗೆ ದಕ್ಷಿಣ ಭಾರತ ಜೀವಾಳವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸುತ್ತ ಬಂದರೆ, ಕಸ್ತೂರಿರಂಗನ್ ಭಾರತವನ್ನು ಮುಂದಿನ ಶತಮಾನದತ್ತ ಮುನ್ನಡೆಸಲು ಹೊರಟವರು. ಕಬ್ಬಿಣ, ಮ್ಯೋಂಗನೀಸ್ ಗಣಿಗಳು ಹಾಗೂ ವಿಷ ಕಾರುವ ಕಾರ್ಖಾನೆಗಳು ಪಶ್ಚಿಮ ಘಟ್ಟದಂಥ ಸೂಕ್ಷ್ಮ ಪ್ರದೇಶಗಳಲ್ಲಿ ಇರಲೇಬಾರದು ಎಂಬ ಧೋರಣೆ ಗಾಡ್ಗೀಳರದಾದರೆ, ಅಭಿವೃದ್ಧಿಯ ಮೆಟ್ಟಿಲುಗಳ ಮೇಲೆ ರಾಷ್ಟ್ರವನ್ನು ಮೇಲೆತ್ತುವುದಾದರೆ ಗಣಿ-ಕಾರ್ಖಾನೆಗಳಂಥ ಬುನಾದಿ ಬೇಕೆನ್ನುವವರು ಕಸ್ತೂರಿರಂಗನ್.
ಏನಿತ್ತು ಇವರ ವರದಿಗಳಲ್ಲಿ? ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ಒಟ್ಟೂ 142 ತಾಲ್ಲೂಕುಗಳನ್ನು ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ಪ್ರಾಂತಗಳನ್ನಾಗಿ ವಿಂಗಡಿಸಿತ್ತು. ದಟ್ಟ ವನ್ಯಜೀವಿಗಳಿರುವ ತಾಣಗಳನ್ನು `ಸೂಕ್ಷ್ಮಪ್ರಾಂತ1' , ಕೃಷಿ-ಗೋಮಾಳ, ಬೆಟ್ಟಗಳ ತಾಣಗಳನ್ನು `ಸೂ.ಪ್ರಾ.2', ಮತ್ತು ತೀರ ಜನಬಳಕೆ ಇರುವ ಪೇಟೆಪಟ್ಟಣಗಳ ತಾಣಗಳನ್ನು `ಸೂ.ಪ್ರಾ.3' ಎಂತಲೂ ಹೆಸರಿಸಿತ್ತು. ಯಾವ ಪ್ರಾಂತದಲ್ಲಿ ಏನೇನು ಚಟುವಟಿಕೆ ಇರಬೇಕು, ಇರಬಾರದು ಎಂದು ಮಾರ್ಗಸೂಚನೆ ಕೊಟ್ಟಿತ್ತು. ಪಂಚಾಯ್ತಿ ಮಟ್ಟದ ಜನಾಭಿಪ್ರಾಯ ಕೇಳಿಯೇ ಅಭಿವೃದ್ಧಿಯ ರೂಪುರೇಷೆ ಸಿದ್ಧವಾಗಬೇಕು; ಸ್ಥಳೀಯರನ್ನು ಕಡೆಗಣಿಸಿ ಕೇವಲ ಉದ್ಯಮಗಳ ಹಿತಾಸಕ್ತಿಯ ಯಾವುದೇ ಚಟುವಟಿಕೆ ಕೂಡದು ಎಂದಿತ್ತು. ಸೂ.ಪ್ರಾ.1 ಮತ್ತು 2ರಲ್ಲಿ ಗಣಿಗಾರಿಕೆ ನಿಲ್ಲಿಸಬೇಕು, ಗುಂಡ್ಯದಂಥ ಬೃಹತ್ ವಿದ್ಯುತ್ ಯೋಜನೆಗಳಿಗೆ, ಪ್ರವಾಸೋದ್ಯಮಕ್ಕೆ ಅವಕಾಶ ಇರಕೂಡದು ಎಂದಿತ್ತು. ಹಳೇ ಅಣೆಕಟ್ಟುಗಳನ್ನು ಕಳಚಿ ಹಾಕಬೇಕೆಂದೂ ಎಲ್ಲ ಆರು ರಾಜ್ಯಗಳಿಗೆ ಸೇರಿದ ಪಶ್ಚಿಮ ಘಟ್ಟಗಳ ಸಮಗ್ರ ನಿರ್ವಹಣೆಗೆಂದೇ ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಬೇಕೆಂದೂ ಸೂಚಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಜನರು ಈ ವರದಿಯನ್ನು ಓದಿ ಚರ್ಚಿಸಲು ಸಾಧ್ಯವಾಗುವಂತೆ ಎಲ್ಲ ಆರೂ ಭಾಷೆಗಳಿಗೆ ತರ್ಜುಮೆ ಮಾಡಿಸಬೇಕು ಎಂದಿತ್ತು.
ಸಹಜವಾಗಿಯೇ ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ, ಗೋವಾದ ಗಣಿದೊರೆಗಳಿಗೆ ಹಾಗೂ ವಿದೇಶೀ ನೇರ ಹೂಡಿಕೆದಾರರಿಗೆ ಈ ವರದಿ ಬೇಡವಾಗಿತ್ತು (ದೇಶದ ಶೇಕಡಾ 50ರಷ್ಟು ವಿದೇಶೀ ಹೂಡಿಕೆದಾರರ ಬಂಡವಾಳ ಪಶ್ಚಿಮಘಟ್ಟ ಪ್ರದೇಶದಲ್ಲೇ ಬಿದ್ದಿದೆ ಎಂದು ಗಾಡ್ಗೀಳ್ ಹೇಳುತ್ತಾರೆ). ಕೆಲವು ರಾಜ್ಯ ಸರ್ಕಾರಗಳೂ ಆಕ್ಷೇಪಿಸಿದವು. `ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ತಮ್ಮ ಶಾಸನಬದ್ಧ ಹಕ್ಕುಗಳಿಗೆ ಈ ವರದಿ ಮಿತಿ ಹಾಕುತ್ತಿದೆ' ಎಂದವು. ಆದರೆ ಗಾಡ್ಗೀಳ್ ಹೇಳುವ ಪ್ರಕಾರ, `ಅಂಥದ್ದೇನೂ ಆಗುವುದಿಲ್ಲ. ಬೇರುಮೂಲದ ಪ್ರಜಾಪ್ರಭುತ್ವಕ್ಕೆ ಹಾಗೂ ಸ್ಥಳೀಯರ ಆಶಯಗಳಿಗೆ ತಕ್ಕಂತೆ ಅಭಿವೃದ್ಧಿಯ ಸೂತ್ರಗಳನ್ನು ರೂಪಿಸಲು ಅವಕಾಶ ನೀಡಲಾಗಿದೆ ವಿನಾ ಹೊರಗಿನವರ ಇಷ್ಟದಂತೆ ನೈಸರ್ಗಿಕ ಸಂಪತ್ತಿನ ಬಳಕೆ ಮಾಡುವಂತಿಲ್ಲ' ಎಂದು ಅವರು ಹೇಳುತ್ತಾರೆ. ಅಂತೂ ಹೊರಗಿನ ದೊರೆಗಳಿಗೆ ಈ ವರದಿ ಇಷ್ಟವಾಗಲಿಲ್ಲ.
ಆಗ ರಂಗಪ್ರವೇಶ ಮಾಡಿದ್ದೇ 10 ಸದಸ್ಯರ ಕಸ್ತೂರಿ ರಂಗನ್ ಕಾರ್ಯತಂಡ. ಅದು ಸ್ಥಳೀಯ ನಿವಾಸಿಗಳನ್ನು ಉಪೇಕ್ಷಿಸಿತು. ಗಾಡ್ಗೀಳ್ ಸಮಿತಿಯ `ಸೂಪ್ರ' ಸೂತ್ರಗಳನ್ನು ಉಪೇಕ್ಷಿಸಿತು. ಉಪಗ್ರಹ ನಕ್ಷೆಯನ್ನು ಎದುರಿಗೆ ಇಟ್ಟುಕೊಂಡು, ಯೋಜನಾ ತಂತ್ರಜ್ಞರ, ರಾಜಕಾರಣಿಗಳ ಹಾಗೂ ಉದ್ಯಮಪತಿಗಳ ಸಲಹೆ ಪಡೆದು ಹೊಸ ಶಿಫಾರಸುಗಳನ್ನು ಮುಂದಿಟ್ಟಿತು. ಈಗಾಗಲೇ ಸಂರಕ್ಷಿತವೆಂದು ಘೋಷಿತವಾದ ವನ್ಯಧಾಮ, ಅಭಯಾರಣ್ಯಗಳಂಥ ಅತಿಸೂಕ್ಷ್ಮ ಪ್ರದೇಶಗಳಿಗೆ ಇನ್ನೂ ಬಿಗಿಯಾದ ಕಾವಲು ಹಾಕಬೇಕೆಂದು ಹೇಳಿತು. ಅದನ್ನು ಬಿಟ್ಟರೆ ಇನ್ನುಳಿದ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳು ಬರಬಹುದು ಎಂದು ಶಿಫಾರಸು ಮಾಡಿತು.
ಸಹಜವಾಗಿಯೇ ಗಾಡ್ಗೀಳ್ ಸಮಿತಿಯ ಸದಸ್ಯರಿಗೆ ಹಾಗೂ ಬೆಂಬಲಿಗರಿಗೆ ಈ ಶಿಫಾರಸಿನಿಂದ ಆಘಾತವಾಗಿದೆ. ಅವರ ಪ್ರಕಾರ ಸ್ಥಳೀಯ ಜನರ ಸಹಕಾರದಿಂದಲೇ ಅಪರೂಪದ ವನ್ಯ ಪ್ರಾಣಿ ಪಕ್ಷಿಗಳ ಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾದೀತೆ ವಿನಾ ಬಂದೂಕು ಹೊತ್ತ ಸಿಪಾಯಿ ಕಾರ್ಯಾಚರಣೆಯಿಂದ ಅಲ್ಲ. ಜಗತ್ತಿನ 14 ಅತಿ ಶ್ರೇಷ್ಠ ಜೀವಿವೈವಿಧ್ಯದ ತಾಣಗಳಲ್ಲಿ ಒಂದೆಂಬ ಖ್ಯಾತಿ ಪಡೆದ ಈ ಪ್ರದೇಶ ಈಗಾಗಲೇ ನಾನಾ ಬಗೆಯ ಬೆಳವಣಿಗೆಗೆ ಸಿಕ್ಕು ಛಿದ್ರಗೊಂಡಿದೆ. ಇತ್ತ ರಸ್ತೆ, ಅತ್ತ ರೈಲು; ಇತ್ತ ಗಣಿ, ಅತ್ತ ವಿದ್ಯುತ್ ತಂತಿ; ಇತ್ತ ಜಲಾಶಯ, ಅತ್ತ ರೆಸಾರ್ಟ್; ಇತ್ತ ಕಳ್ಳಬೇಟೆ, ಅತ್ತ ಗಾಂಜಾಪಟ್ಟಿ.... ಇವೆಲ್ಲವುಗಳ ಮಧ್ಯೆ ಅಭಯಾರಣ್ಯಗಳಂಥ `ದ್ವೀಪ'ಗಳನ್ನು ಮಾತ್ರ ಉಳಿಸಿಕೊಳ್ಳೋಣ - ಉಳಿದವು ಏನಾದರಾಗಲಿ ಎಂದರೆ ಆದೀತೆ? ಸ್ಥಳೀಯ ಜನರ ಅಭಿಪ್ರಾಯವನ್ನೇ ಕೇಳದೆ ಬ್ರಿಟಿಷ್ ಅಧಿಕಾರಿಗಳು ತಮಗಿಷ್ಟ ಬಂದಲ್ಲಿ ತಮಗಿಷ್ಟ ಬಂದಷ್ಟು ಕಾಡುಗಳನ್ನು ಕಡಿದು ತೇಗದ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದರು. ಪ್ರತಿಭಟನೆಗೆ ಬಂದವರನ್ನು ನಿರ್ದಯವಾಗಿ ತುಳಿಯುತ್ತಿದ್ದರು. ಕಸ್ತೂರಿರಂಗನ್ ಕಾರ್ಯತಂಡದ ಶಿಫಾರಸು ಜಾರಿಗೆ ಬಂದರೆ ಅದು ಬ್ರಿಟಿಷರ ಕಾಲದ ವಸಾಹತುಶಾಹಿ ಧೋರಣೆಗಿಂತ ಕ್ರೂರವಾದೀತು ಎನ್ನುತ್ತಾರೆ, ಪ್ರೊ ಗಾಡ್ಗೀಳ್.
ಹಾಗಿದ್ದರೆ ಘಟ್ಟ ಕಣಿವೆಗಳಲ್ಲಿ ಹಿಂದುಳಿದ ಜನರು ಹಿಂದೆಯೇ ಉಳಿಯಬೇಕೆ? ಅವರಿಗೆ ರಸ್ತೆ, ಟಿವಿ, ಗ್ಯಾಸ್ ಬೇಡವೆ? ಅವೆಲ್ಲ ಬೇಕು, ಜನರ ಆರ್ಥಿಕ ಸ್ಥಿತಿಯೂ ಉತ್ತಮವಾಗಬೇಕು, ಜೊತೆಗೆ ಜೀವಿವೈವಿಧ್ಯ ರಕ್ಷಣೆಯೂ ಆಗಬೇಕು -ಅಂಥ ಸವಾಲನ್ನು ವಿಜ್ಞಾನಿಗಳು ಕೈಗೆತ್ತಿಕೊಂಡರೆ ಪರಿಹಾರ ಸಿಕ್ಕೇ ಸಿಗುತ್ತದೆ. ಹಳ್ಳಿಗಳಿಗೆ ಭೇಟಿ ಕೊಟ್ಟು ಸೆಗಣಿ ಗಂಜಲ, ಬೊಂಬಿನ ಚೊಂಬಿನ ಪರಿಸರದಲ್ಲಿ ಓಡಾಡಬಲ್ಲ ವಿಜ್ಞಾನಿಗಳಿಗೆ ಸರ್ಕಾರ ಪ್ರೇರಣೆ ಪ್ರೋತ್ಸಾಹ ನೀಡಬೇಕಿತ್ತು. ಅದನ್ನು ಜಗತ್ತಿಗೇ ತೋರಿಸಬಹುದಿತ್ತು. ಆದರೆ ಹಾಗಾಗಲಿಲ್ಲ. ವನ್ಯಲೋಕವನ್ನು ಬದಿಗೊತ್ತಿ ಚಂದ್ರಲೋಕವನ್ನು ತೋರಿಸಹೊರಟವರಿಗೇ ಮಣೆ ಹಾಕುವವರು ನಾವು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.