ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪದ ಘಟನೆ ಅದು. ಆಚೀಚೆ ಮಿಸುಕಾಡಲು ಅವಕಾಶವೇ ಇಲ್ಲದಂತೆ ಬೆನ್ನ ಮೇಲೆ ಹತ್ತು ಮೀಟರ್ ದಪ್ಪದ ಹಿಮರಾಶಿ ಬಿದ್ದಿದ್ದರೂ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರು ಘನಘೋರ ಚಳಿಯಲ್ಲಿ ಐದು ದಿನಗಳ ಕಾಲ ಉಸಿರು ಉಳಿಸಿಕೊಂಡು ಬದುಕಿರುವುದು ಅಸಾಮಾನ್ಯ ಸಂತಸದ ಘಟನೆ. ಅವರನ್ನು ಮೇಲೆತ್ತಲು ಶ್ರಮಿಸಿದವರಿಗೆಲ್ಲ ಅಭಿನಂದನೆಗಳು. ಆದರೆ ಅವರ ದೇಹದಡಿ ಹೂತಿದ್ದ ಅನೇಕ ಪ್ರಶ್ನೆಗಳನ್ನೂ ನಾವು ಮೇಲೆತ್ತಿ ನೋಡಬೇಕಿದೆ.
ಹಿಮ ಪರ್ವತಗಳೆಂದರೆ ಹೆಜ್ಜೆಹೆಜ್ಜೆಗೂ ಅಪಾಯದ ಸರಮಾಲೆಗಳೇ ಇರುತ್ತವೆ. ಹೊಸದಾಗಿ ಹಿಮ ಸುರಿದಿದ್ದರೆ ಹೆಜ್ಜೆ ಇಟ್ಟಲ್ಲೆಲ್ಲ ಮೊಣಕಾಲಿನವರೆಗೆ ಕುಸಿಯುತ್ತಿರುತ್ತದೆ. ಪರ್ವತ ಪ್ರದೇಶದಲ್ಲಿ ಆಮ್ಲಜನಕವೂ ಕಡಿಮೆ ಇರುವುದರಿಂದ ಚಲನೆಯೇ ದುಸ್ತರದ, ಆಯಾಸದ ಕೆಲಸ. ಕೆಲವೊಮ್ಮೆ ಕಾಲ ಕೆಳಗೆ ಪ್ರಪಾತವಿದ್ದರೂ ಅದರ ಮೇಲೆ ಹಿಮದ ಚಿಕ್ಕ ಬಂಡೆ ಇದ್ದರೆ ಅಪ್ಪಟ ಖೆಡ್ಡಾ ಆಗಿರುತ್ತದೆ.
ಜೊತೆಗಾರನೊಬ್ಬ ಕಣ್ಣೆದುರೇ ಅದೃಶ್ಯನಾಗಬಹುದು. ಇನ್ನು ಹೊಸ ಹಿಮ ಸುರಿದಿಲ್ಲವೆಂದರೆ ಇನ್ನೂ ಅಪಾಯ. ಹಳೇ ಹಿಮ ತನ್ನ ತೂಕದಿಂದಾಗಿ ತಾನೇ ಗಟ್ಟಿ ಬಂಡೆಯಾಗಿ ಜಾರುಬಂಡಿ ಆಗಿರುತ್ತದೆ. ಮುಳ್ಳಿನ ಅಟ್ಟೆಯಿರುವ ಪಾದರಕ್ಷೆ ಹಾಗೂ ಚೂಪಾದ ಊರುಗೋಲು ಹಿಡಿದೇ ಅಂಥ ಸ್ಥಳದಲ್ಲಿ ಚಲಿಸಬೇಕು.
ಪರ್ವತ ಕಣಿವೆಗಳಲ್ಲಿ ಚಲಿಸುವಾಗ ಅಕ್ಕಪಕ್ಕದ ಕಡಿದಾದ ಬೆಟ್ಟಗಳಿಂದ ಹಿಮ ಕುಸಿತ ಸಂಭವಿಸಬಹುದು. ಅಕ್ಕಿಹಿಟ್ಟಿನಂತೆ ಅನೇಕ ದಿನಗಳಿಂದ ಸುರಿಯುತ್ತಿದ್ದ ಹಿಮ ಅಲ್ಲಲ್ಲಿ ಬಂಡೆಗಳ ಮೇಲೆ, ದಿಬ್ಬದ ಮೇಲೆ ರಾಶಿಗಟ್ಟಿ ಕೂತಿರುತ್ತದೆ. ತನ್ನದೇ ತೂಕದಿಂದಾಗಿ ಯಾವ ಕ್ಷಣದಲ್ಲಾದರೂ ಕುಸಿಯಬಹುದು.
ಅದೆಷ್ಟು ಸೂಕ್ಷ್ಮ ಸಮತೋಲ ಅಲ್ಲಿರುತ್ತದೆ ಎಂದರೆ, ಒಂದು ಚಪ್ಪಾಳೆ ಸದ್ದು, ಒಂದು ಕೆಮ್ಮಿನ ಸದ್ದು ಕೂಡ ಅದನ್ನು ಕೆಡವಬಹುದು. ಹಾಗೆ ಸಣ್ಣದೊಂದು ದಿಬ್ಬ ಕುಸಿದರೂ ಅದು ತನ್ನ ಕೆಳಗಿನ ಅನೇಕ ಚಿಕ್ಕದೊಡ್ಡ ದಿಬ್ಬಗಳನ್ನು, ಹಿಮಬಂಡೆಗಳನ್ನು ಬೀಳಿಸುತ್ತ ಕ್ಷಣಕ್ಷಣಕ್ಕೂ ದೊಡ್ಡದಾಗಿ ಬೆಳೆಯುತ್ತ ಮಹಾಕುಸಿತದ ಸರಮಾಲೆಯನ್ನೇ ಸೃಷ್ಟಿಸುತ್ತದೆ.
ಇದು ಗೊತ್ತಿಲ್ಲದ ಸಂಗತಿಯೇನಲ್ಲ. ಯುರೋಪಿನ ಆಲ್‌ಪ್ಸ್ ಪರ್ವತ ಮಾಲೆ, ಅಮೆರಿಕದ ರಾಕಿ ಪರ್ವತ ಮಾಲೆ, ಕೆನಡಾದ ಆಚಿನ ಅಲಾಸ್ಕಾ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಹೀಗೆ ಹಿಮದ ರಾಶಿ ಇದ್ದಲ್ಲೆಲ್ಲ ಅದರೊಂದಿಗೆ ಮನುಷ್ಯರು ಮುಖಾಮುಖಿ ಆಗುತ್ತ, ಹಿಮದೊಂದಿಗೆ ಏಗುವ ವಿದ್ಯೆಯನ್ನು ಕಲಿಯುತ್ತಲೇ ಬಂದಿದ್ದಾರೆ. ಅಂಥ ದುರ್ಗಮ ಪ್ರದೇಶಗಳಲ್ಲಿ ಚಲಿಸುವಾಗ ಮುನ್ನೆಚ್ಚರಿಕೆಗೆಂದು ನಾನಾ ಬಗೆಯ ಸಾಧನ ಸಲಕರಣೆಗಳು ರೂಪುಗೊಂಡಿವೆ. ಎಚ್ಚರಿಕೆಯ ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಚಲಿಸುವವರಿಗೆ ಮೊದಲೇ ಬಾಯಿಪಾಠ ಮಾಡಿಸಲಾಗುತ್ತದೆ.
ಇಂಥ ಹಿಮ ಪರಿಸರಕ್ಕೆಂದೇ ವಿಶೇಷ ಬಗೆಯ, ಸಾಕಷ್ಟು ಕರಾರುವಾಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ರೂಪುಗೊಂಡಿದೆ. ಸುಧಾರಿತ ದೇಶಗಳಲ್ಲಿ ಹಿಮಪಾತದ ಮುನ್ಸೂಚನೆ ಸಿಗುತ್ತಲೇ ಪ್ರವಾಸಿಗಳು ಸ್ಕೀಯಿಂಗ್ ತಾಣಗಳತ್ತ ಹೊರಡುತ್ತಾರೆ. ಪ್ರವಾಸಿಗಳು ಪದೇ ಪದೇ ಭೇಟಿ ಕೊಡುವ ಸ್ಕೀಯಿಂಗ್ ತಾಣಗಳ ಸುತ್ತ ಎತ್ತರದ ದಿಬ್ಬಗಳಲ್ಲಿ ಹಿಮಶೇಖರಣೆ ಆಗುತ್ತಿದ್ದರೆ, ಅವು ದೊಡ್ಡದಾಗಿ ಬೆಳೆಯದ ಹಾಗೆ ಅಲ್ಲೆಲ್ಲ ಆಗಾಗ ಡೈನಮೈಟ್ ಸಿಡಿಸಿ, ಚಿಕ್ಕಪುಟ್ಟ ಕೃತಕ ಹಿಮಕುಸಿತ ಮಾಡಿಸುತ್ತಾರೆ.
ಅಥವಾ ಅಲ್ಲಲ್ಲಿ ಗುಡ್ಡದ ಓರೆಗಳಲ್ಲಿ ಲೋಹದ ಕಂಬಗಳನ್ನು ನೆಟ್ಟು ಹಿಮಕುಸಿತವನ್ನು ತಡೆದು ನಿಲ್ಲಿಸುತ್ತಾರೆ. ಆಗಾಗ ಹಿಮವನ್ನು ತೆರವು ಮಾಡುತ್ತಾರೆ. ಹಿಮಭರಿತ ಕಣಿವೆಗಳಲ್ಲಿ ಮಿಲಿಟರಿ ತುಕಡಿಗಳು ಟೆಂಟ್ ಹೂಡುವ ಮುನ್ನ ಸಾಧ್ಯವಿದ್ದಲ್ಲೆಲ್ಲ ಹೆಲಿಕಾಪ್ಟರ್ ಓಡಾಡಿಸುತ್ತಾರೆ. ಕೃತಕ ಗಾಳಿ ಬೀಸುವಂತೆ ಮಾಡಿ ಮತ್ತು ಕೆಲವೊಮ್ಮೆ ಡೈನಮೈಟ್ ಸಿಡಿಸಿ ಹಿಮದ ಸಡಿಲ ರಾಶಿಗಳನ್ನು ಕೆಡವುತ್ತಾರೆ.
ಹಿಮಹಾಸಿನಲ್ಲಿ ಚಾರಣ ಮಾಡುವ ಎಲ್ಲರೂ ಕಡ್ಡಾಯವಾಗಿ ಉದ್ದುದ್ದ ಬಣ್ಣದ ಹಗ್ಗಗಳನ್ನು ಟೊಂಕಕ್ಕೆ ಸಿಕ್ಕಿಸಿಕೊಳ್ಳಲೇಬೇಕು. ಎಲ್ಲರ ಕಿಸೆಯಲ್ಲೂ ಮೊಬೈಲ್‌ನಂಥ ‘ಬೀಕನ್’ ಇರಲೇಬೇಕು. ಈ ಸಾಧನ ನೂರಿನ್ನೂರು ಮೀಟರ್ ದೂರದವರೆಗೆ ತಾನೆಲ್ಲಿದ್ದೇನೆ ಎಂಬ ಸಿಗ್ನಲ್ ಕೊಡುತ್ತಿರುತ್ತದೆ. ಬೇರೆಯವರ ಸಿಗ್ನಲ್‌ಗಳನ್ನೂ ಅದು ಸ್ವೀಕರಿಸುತ್ತಿರುತ್ತದೆ. ಅಕಸ್ಮಾತ್ ಆಳಕ್ಕೆ ಯಾರಾದರೂ ಕುಸಿದರೆ ಎಲ್ಲಿ ಅಗೆಯಬೇಕು ಎಂಬುದು ಇತರರಿಗೆ ಗೊತ್ತಾಗಲು ಈ ಹಗ್ಗ ಮತ್ತು ಬೀಕನ್‌ಗಳು ನೆರವಾಗುತ್ತವೆ.
ತೀರ ಅಪಾಯಕಾರಿ ತಾಣದಲ್ಲಿ ಹೆಜ್ಜೆ ಹಾಕುವವರು ತಮ್ಮ ಎದೆಗೆ ಅವಾಲಂಗ್ ಎಂಬ ಸಾಧನವನ್ನು ಕಟ್ಟಿಕೊಳ್ಳುತ್ತಾರೆ. ಅಕಸ್ಮಾತ್ ಕಾಲ್ಕೆಳಗಿನ ಹಿಮ ಕುಸಿದು ಹೂತು ಹೋದರೆ ತಕ್ಷಣ ಉಸಿರು ಕಟ್ಟದ ಹಾಗೆ ಇದು ಕೆಲವು ಹೊತ್ತ ಪ್ರಾಣವಾಯುವನ್ನು ಕೊಡುತ್ತಿರುತ್ತದೆ. ಅದಕ್ಕಿಂತ ಸುಧಾರಿತ, ಬೆನ್ನಿನ ಚೀಲಕ್ಕೆ ಜೋಡಿಸಬಲ್ಲ ಏರ್‌ಬ್ಯಾಗ್‌ಗಳೂ ಬಂದಿವೆ.
ದುಬಾರಿ ಕಾರುಗಳ ಸ್ಟೀರಿಂಗ್ ಚಕ್ರದ ಮಧ್ಯೆ ಇರುವಂಥ ಈ ಬ್ಯಾಗ್ ತನ್ನ ಮೇಲೆ ಒತ್ತಡ ಬಿದ್ದಾಗ ತಂತಾನೆ ಸಿಡಿದು ಒಂದು ಜೋಡಿ ಪುಗ್ಗಿಗಳು ಊದಿಕೊಳ್ಳುತ್ತವೆ. ಶ್ವಾಸಕೋಶಗಳ ಹಾಗೆ ಕಾಣುವ ಪ್ರಖರ ಬಣ್ಣದ ಈ ಚೀಲಗಳು ಉಬ್ಬಿನಿಂತು ಹಿಮದ ಒತ್ತಡವನ್ನು ತಡೆಯುತ್ತವೆ. ಹಿಮದ ಹೊರಕ್ಕೆ ಮೈಚಾಚಿ ತಮ್ಮ ಇರುವನ್ನು ತೋರಿಸುತ್ತವೆ. ಹಿಮ ತೀರಾ ದಪ್ಪ ಇದ್ದರೆ ನೂರಿನ್ನೂರು ಮೀಟರ್ ದೂರದವರೆಗೆ ಸಂಕೇತವನ್ನು ಕಳಿಸುತ್ತದೆ.
ಈಗಂತೂ ತಾನೆಲ್ಲಿದ್ದೇನೆ ಎಂದು ತೋರಿಸುವ ಜಿಪಿಎಸ್ ವ್ಯವಸ್ಥೆ ಬಹುತೇಕ ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲೂ ಇದೆ. ಇದರ ಅನೇಕ ಸುಧಾರಿತ ಮಾದರಿಗಳನ್ನು ಮಿಲಿಟರಿಗಾಗಿಯೇ ರೂಪಿಸಲಾಗಿದೆ. ಹಿಮಚಾರಣಕ್ಕೆ ಹೊರಡುವ ಮುನ್ನ ಮೂಲ ಶಿಬಿರಕ್ಕೆ ತುರ್ತು ಸಂದೇಶವನ್ನು ರವಾನಿಸುವ ವ್ಯವಸ್ಥೆ ಇದೆ.
ಇಷ್ಟೆಲ್ಲ ಇದ್ದರೂ ಸಿಯಾಚಿನ್ ಹಿಮಹಾಸಿನಲ್ಲಿ ಸಿಲುಕಿದವರಲ್ಲಿ ಒಂಬತ್ತು ಯೋಧರು ಹೇಗೆ ಜೀವ ಕಳೆದುಕೊಂಡರು? ಈಚಿನ ಯಾವುದೇ ಆಧುನಿಕ ತಾಂತ್ರಿಕ ಸಾಧನಗಳು ಈ ನತದೃಷ್ಟರಿಗೆ ಲಭ್ಯ ಇರಲಿಲ್ಲವೇನೊ. ಮೊದಲನೆಯದಾಗಿ, ಈ ಯಾರೂ ಗಡಿವೀಕ್ಷಣಾ ಚಾರಣಕ್ಕೆ ಹೊರಟಿರಲಿಲ್ಲ. ಬದಲಿಗೆ ಗಟ್ಟಿ ದಾರದಿಂದ ಹೆಣೆಯಲಾಗಿದ್ದ ವಿಶೇಷ ‘ಆರ್ಕ್‌ಟಿಕ್ ಟೆಂಟ್’ನಲ್ಲಿ ಇದ್ದರು.
ಟೆಂಟ್ ಮೇಲೆಯೇ ಹಿಮ ಕುಸಿದಿದೆ ಎಂದರೆ, ಶಿಬಿರವನ್ನು ಹೂಡುವ ಮುನ್ನ ಸುರಕ್ಷಿತ ತಾಣದ ಆಯ್ಕೆ ಮಾಡಿಕೊಂಡಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾಗಿ ಇಂಥ ಅಪಾಯಕರ ತಾಣದಲ್ಲಿ ಟೆಂಟ್ ಹೂಡುವ ಮೊದಲು ಹೆಲಿಕಾಪ್ಟರ್ ಮೂಲಕ ಸರ್ವೇಕ್ಷಣೆ ಮಾಡಬೇಕಿತ್ತು. ಹಿಮಕುಸಿತ ಸಂಭವ ಇಲ್ಲದ ತಾಣವನ್ನು ಗುರುತಿಸಿ ಅಲ್ಲೇ ಟೆಂಟ್ ಹೂಡಬೇಕೆಂದು ಈ ತುಕಡಿಗೆ ನಿರ್ದೇಶನ ನೀಡಬೇಕಿತ್ತು.
ಟೆಂಟ್ ಅಲ್ಲಿದೆ ಎಂದಮೇಲೆ, ಅದರ ಮೇಲೆ ಬೆಂಗಾವಲು ಪಡೆಯವರ ನಿಗಾ ಸದಾ ಇರಬೇಕಿತ್ತು. ಅಪಾಯ ಸಂಭವಿಸಿದ್ದು ಗೊತ್ತಾದರೂ ಆ ತಾಣ ಎಲ್ಲಿದೆ ಎಂದು ನಿಖರವಾಗಿ ಇವರಿಗೆ ಗೊತ್ತಾದಂತಿಲ್ಲ. ಧಾವಿಸಿ ಹೋದ ಬಚಾವು ತಂಡ ಅಲ್ಲಿ ರಡಾರ್ ಸಲಕರಣೆಗಳನ್ನು ಹೂಡಿದೆ.
ರಡಾರ್ ಎಂದರೆ, ಸ್ವಿಚ್ ಒತ್ತಿದಾಗ ಅದರ ತರಂಗಗಳು ಇಪ್ಪತ್ತು ಮೀಟರ್ ಆಳದವರೆಗೆ ಮಣ್ಣು, ಕಾಂಕ್ರೀಟ್ ಅಥವಾ ಹಿಮದ ರಾಶಿಯ ನಡುವೆ ತೂರಿ ಹೋಗಿ, ಅಲ್ಲಿ ಏನೇ ಲೋಹದ ವಸ್ತು, ಅಥವಾ ಬಿಸಿವಸ್ತು ಇದ್ದರೂ ಪ್ರತಿಫಲಿಸಿ ಅದರ ಚಿತ್ರಣವನ್ನು ಕೊಡುತ್ತವೆ. ಹಾಗೆ ಪ್ರತಿಫಲಿಸಬಲ್ಲ ವಸ್ತು ಏನೂ ಕಾಣದಿದ್ದರೆ ಹತ್ತಾರು ಮಾರು ಆಚೆ ಹೊತ್ತೊಯ್ದು ಮತ್ತೆ ಸ್ವಿಚಾನ್ ಮಾಡಬೇಕು.
ಬಚಾವು ಪಡೆಯವರು ಈ ರಡಾರನ್ನು ಅತ್ತ ಇತ್ತ ಓಡಾಡಿಸಿ ಎರಡು ಮೂರು ದಿನಗಳ ನಂತರ ಟೆಂಟ್ ಇದ್ದ ತಾಣವನ್ನು ಗುರುತಿಸಿದ್ದಾರೆ. ತಾನು ಇಲ್ಲಿದ್ದೇನೆ ಎಂಬ ಸಿಗ್ನಲ್‌ಗಳನ್ನು ಸದಾ ಹೊಮ್ಮಿಸಬೇಕಿದ್ದ ಯಾವ ಸಲಕರಣೆಯೂ ಟೆಂಟ್‌ನಲ್ಲಿ ಇರಲಿಲ್ಲವೆ?
ಟೆಂಟ್‌ನಲ್ಲಿದ್ದ ಯಾರ ಬಳಿಯೂ ಮೊಬೈಲ್‌ನಂಥ ಬೀಕನ್ ಇರಲಿಲ್ಲವೆ? ಅಪಾಯ ತಟ್ಟಿದ ತಕ್ಷಣ ಅದು ತಾನಿಲ್ಲಿ ಇದ್ದೇನೆಂದು ಚೀರಬೇಕಿತ್ತು. ಅದು ಇರಲಿಲ್ಲ ಎಂದುಕೊಳ್ಳೋಣ. ಅಥವಾ ಇತ್ತು, ಆದರೆ ಎರಡು ದಿನಗಳ ಕಾಲ ಸಿಗ್ನಲ್ ಹೊಮ್ಮಿಸಿ ಬ್ಯಾಟರಿ ಡೆಡ್ ಆಯಿತು ಎಂದುಕೊಳ್ಳಿ (ಹಾಗೆ ಡೆಡ್ ಆಗದಂಥ ದುಬಾರಿ ಸಾಧನಗಳೂ ಇವೆ, ಆ ಪ್ರಶ್ನೆ ಬೇರೆ.) ಅಕಸ್ಮಾತ್ ಬೀಕನ್ ದುಬಾರಿ ಎಂದಿದ್ದರೆ ತೀರ ಸುಲಭವಾದ ಬೇರೊಂದು ಟ್ರಾನ್ಸ್‌ಪಾಂಡರ್ ಸಾಧನ ಇದೆ. ಅದನ್ನು ಸ್ಟಿಕರ್ ಥರಾ ಬಳಸಬಹುದು.
ಅಪಾಯದ ತಾಣಕ್ಕೆ ಹೊರಡುವ ಮುನ್ನ ಯೋಧರು ಬೂಟು, ಹೆಲ್ಮೆಟ್ ಅಥವಾ ಭುಜಗವಚದ ಮೇಲೆ ಅಂಥ ಟ್ರಾನ್ಸ್‌ಪಾಂಡರ್‌ಗಳನ್ನು ಅಂಟಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ರೆಕ್ಕೊ ರಿಫ್ಲೆಕ್ಟರ್ ಎನ್ನುತ್ತಾರೆ. ಸಹಾಯಕ್ಕೆ ಬರುವವರು ಭಾರವಾದ ರಡಾರ್‌ಗಳನ್ನು ಹೊತ್ತು ತರಬೇಕಿಲ್ಲ. ಟಾರ್ಚ್‌ನಂಥ ಸರಳ ರೆಕ್ಕೊ ಸಾಧನವನ್ನು ಕೈಯಲ್ಲಿ ಹಿಡಿದಿದ್ದರೆ ಅಲ್ಲಿಂದ ಸಿಗ್ನಲ್ ಹೊಮ್ಮುತ್ತದೆ. ಯೋಧರ ಭುಜದ ಮೇಲಿನ ಸ್ಟಿಕರ್‌ನಿಂದ (ರೆಕ್ಕೊ ರಿಫ್ಲೆಕ್ಟರ್‌ನಿಂದ) ಪ್ರತಿಧ್ವನಿ ಬರುತ್ತದೆ. ಹಳೇ ಕಾಲದ ರಡಾರ್‌ಗಳಿಗಿಂತ ಇದು ಸುಲಭದ ವಿಧಾನ. ಅದೂ ಇವರಲ್ಲಿ ಇರಲಿಲ್ಲವೇನೊ.
ಇನ್ನು, ಅಪಘಾತಕ್ಕೆ ಸಿಲುಕಿದವರನ್ನು ಮೇಲೆತ್ತುವಾಗ ಕೆಲವು ಆದ್ಯತೆಗಳಿರುತ್ತವೆ. ಉಸಿರಾಟ ಇದ್ದವರನ್ನು ಮೊದಲು ಗುರುತಿಸಿ ಎತ್ತಬೇಕು, ಮೃತರಿಗೆ ಕೊನೆಯ ಆದ್ಯತೆ ಕೊಡಬೇಕು. ನಮ್ಮ ಬಚಾವು ತಂಡದವರು ಹನುಮಂತಪ್ಪನವರನ್ನು ಕೊನೆಯಲ್ಲಿ ಎತ್ತಿದಂತಿದೆ.
ಹೂತು ಹೋಗಿದ್ದ ಒಬ್ಬೊಬ್ಬ ವ್ಯಕ್ತಿಯನ್ನೂ ಪತ್ತೆ ಹಚ್ಚಿ, ಇಲೆಕ್ಟ್ರಿಕ್ ಗರಗಸವನ್ನು ಬಳಸಿ, ಹಿಮದ ಹೋಳುಗಳನ್ನು ಕತ್ತರಿಸಿ ಬಾವಿಯನ್ನು ಕೊರೆದು ಅದಕ್ಕೆ ಶ್ವಾನಗಳನ್ನು ಇಳಿಸಿ ಏನೇನೊ ಸಾಹಸ ಮೆರೆದಿದ್ದಾರೆ, ಶಾಭಾಸ್. ಆದರೆ ಶ್ವಾನಗಳೆಲ್ಲ ಪಾಪ, ಓಬೀರಾಯನ ಕಾಲದ ಸಾಧನಗಳು.
ಹದಿನೈದು ವರ್ಷಗಳ ಹಿಂದೆ ಅಲ್‌ಕೈದಾ ಉಗ್ರರು ನ್ಯೂಯಾರ್ಕಿನ 110 ಅಂತಸ್ತುಗಳ ವಿಶ್ವ ವ್ಯಾಪಾರ ಕೇಂದ್ರದ ಜೋಡಿ ಕಟ್ಟಡಗಳನ್ನು ಬೀಳಿಸಿದಾಗ ಅವು ಬಳಕೆಯಲ್ಲಿದ್ದವು. ಈಗ ತಂತ್ರಜ್ಞಾನ ಸಾಕಷ್ಟು ಸುಧಾರಿಸಿದೆ. ಇಪ್ಪತ್ತು ಮೀಟರ್ ಆಳದಲ್ಲಿ ಯಾರಾದರೂ ಕ್ಷೀಣವಾಗಿ ಉಸಿರಾಡುತ್ತಿದ್ದರೆ ಅಂಥವರನ್ನು ಪತ್ತೆ ಹಚ್ಚಬಲ್ಲ ಸಾಧನಗಳು ಬಂದಿವೆ. ಅಂಥ ಪ್ರೋಬ್‌ಗಳನ್ನು ಬಳಸಿದ್ದಿದ್ದರೆ ಎರಡು ದಿನಗಳ ಮೊದಲೇ ಹನುಮಂತಪ್ಪ ಮೇಲೆ ಬರಲು ಸಾಧ್ಯವಿತ್ತು.
ಮಿಲಿಟರಿ ಬಿಡಿ, ಹಿಮಪ್ರದೇಶದಲ್ಲಿ ಸಾಗುವಾಗ ಸಾಮಾನ್ಯ ಸ್ಕೀಯಿಂಗ್ ಪ್ರವಾಸಿಗರೂ ಬೀಕನ್, ಪ್ರೋಬ್ ಮತ್ತು ರೆಕ್ಕೊ ರಿಫ್ಲೆಕ್ಟರ್ ಸಾಧನಗಳನ್ನು ತಮ್ಮೊಂದಿಗೆ ಒಯ್ಯಲೇಬೇಕು ಎಂದು ಫ್ರೆಂಚ್ ಸರ್ಕಾರ ಈಗಲ್ಲ, 2010ರಲ್ಲೇ ಶಿಫಾರಸು ಮಾಡಿದೆ. ನಮ್ಮ ಯೋಧರಿಗೆ ಅಂಥ ಯಾವ ಅತ್ಯಾಧುನಿಕ ಸುರಕ್ಷಾ ಸಾಧನಗಳನ್ನು ನೀಡಿರಲಿಲ್ಲವೆ?
ಅದೇನೂ ಅಚ್ಚರಿಯ ಸಂಗತಿಯಲ್ಲ. ಕೆಳಹಂತದ ಯೋಧರ ಸುರಕ್ಷೆಗೆ ನಾವು ಆದ್ಯತೆ ಕೊಡುವುದೇ ಕಡಿಮೆ. ನಕ್ಸಲರ ಗುಂಡಿಗೆ, ಉಗ್ರರ ದಾಳಿಗೆ ಎಷ್ಟೊಂದು ಸೈನಿಕರು ಬಲಿಯಾಗುತ್ತಾರೆ. ಯೋಧರಿಗಿಂತ ಉಗ್ರರ ಬಳಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಇರುತ್ತವೆ.
ಅರಣ್ಯ ರಕ್ಷಕರು ಬರೀ ದೊಣ್ಣೆ ಹಿಡಿದು ಬಂದೂಕುಧಾರಿ ಬೇಟೆಗಾರರನ್ನು ಎದುರಿಸಬೇಕು. ಸಮೂಹ ಸನ್ನಿಗೆ ಸಿಲುಕಿದ ಜನರನ್ನು ನಮ್ಮ ಪೊಲೀಸರು ಕೋಲು ಹಿಡಿದು ಎದುರಿಸಬೇಕು; ಇಲ್ಲವೆ ಠುಸ್ ಎನ್ನದ ಅಶ್ರುವಾಯು ಬಾಂಬ್‌ಗಳನ್ನು ಎಸೆಯಬೇಕು.
ಎತ್ತರದ ಸ್ತರದಲ್ಲಿ ನಮ್ಮ ಮಿಲಿಟರಿಯಲ್ಲಿ ಅತ್ಯಾಧುನಿಕ ಸಿಡಿತಲೆ ಕ್ಷಿಪಣಿಗಳಿವೆ. ಪರಮಾಣು ಬಾಂಬ್‌ಗಳಿವೆ; ಬಾಂಬರ್‌ಗಳ ಮೇಲೆ ಸವಾರಿ ಮಾಡುವ ರಡಾರ್‌ಗಳಿವೆ; ನ್ಯೂಕ್ಲಿಯರ್ ಜಲಾಂತರ್ಗಾಮಿ ನೌಕೆಗಳಿವೆ. ಕಾಲಾಳುಗಳಿಗೆ ಏನಿದೆ? ಇದು ಹೇಗೆಂದರೆ, ಪ್ರಾಥಮಿಕ ಶಾಲೆಗಳು ಎಕ್ಕುಟ್ಟಿದ ಸ್ಥಿತಿಯಲ್ಲಿದ್ದರೂ ಪರವಾಗಿಲ್ಲ, ಎತ್ತರದಲ್ಲಿ ಭವ್ಯ ವಿಶ್ವವಿದ್ಯಾಲಯ, ಐಐಎಮ್, ಥಳುಕಿನ ಐಐಟಿ ಬೇಕು ಎಂದಂತೆ.
ಉತ್ತಮ ಯೋಗಪಟು ಆಗಿದ್ದ ಹನುಮಂತಪ್ಪ ತಮ್ಮ ಉಸಿರಿನ ಬಲದಿಂದಲೇ ಬದುಕಿ ಬಂದರು ಎಂದು ಹೇಳಲಾಗುತ್ತದೆ. ಇಡೀ ದೇಶ ಉಸಿರು ಬಿಗಿ ಹಿಡಿದು ಅವರ ಚೇತರಿಕೆಯನ್ನು ಹಾರೈಸುತ್ತಿದೆ. ಅವರು ಮೊದಲಿನಂತಾಗಬೇಕು. ಹಿಮಕುಸಿತದಿಂದ ಎದ್ದು ಬಂದ ಕತೆಯನ್ನು ಹೇಳುವಂತಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.