ಮುಂಗಾರು ಬಂತೆಂದರೆ ರೆಕ್ಕೆ ಬಲಿತ ಅಸಂಖ್ಯ ಗೆದ್ದಲುಗಳು ನೆಲದಿಂದ ಪುತಪುತನೆ ಮೇಲಕ್ಕೇರುತ್ತವೆ. ಡ್ರೋನ್‌ಗಳಿಗೂ ಅದೇ ಹೋಲಿಕೆಯನ್ನು ಕೊಡಬಹುದು. ಆಟಿಗೆಯಂತೆ ಕಾಣುವ, ಪುಟ್ಟ ಹೆಲಿಕಾಪ್ಟರನ್ನು ಹೋಲುವ ಈ ಯಂತ್ರಕ್ಕೆ ಡ್ರೋನ್ ಎನ್ನುತ್ತಾರೆ ಎಂಬುದೇ ನಮ್ಮಲ್ಲಿ ಐದು ವರ್ಷಗಳ ಹಿಂದೆ ಅನೇಕರಿಗೆ ಗೊತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಡ್ರೋನ್‌ಗಳು ಸುದ್ದಿ ಮಾಡುತ್ತಿದ್ದವು.
ಇಂದು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಅವು ಜನಬಳಕೆಗೆ ಬರುತ್ತಿವೆ. ಚೀನಾ, ಜರ್ಮನಿ, ಕೊರಿಯಾ, ಜಪಾನ್, ಯುಎಸ್‌ಎ, ಕೆನಡಾ, ಫಿನ್ಲೆಂಡ್ ಮುಂತಾದ ದೇಶಗಳಲ್ಲಿ ಫ್ಯಾಕ್ಟರಿಗಳು ಮೊಬೈಲ್ ಫೋನ್‌ಗಳನ್ನು ತಯಾರಿಸುವಷ್ಟೇ ಸಲೀಸಾಗಿ ಹೈಟೆಕ್ ಡ್ರೋನ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಖಾಸಗಿ ಸಾಹಸಿಗಳು ತಂತಮ್ಮ ಮನೆಯಲ್ಲೇ ಡ್ರೋನ್‌ಗಳನ್ನು ತಯಾರಿಸುತ್ತಿದ್ದಾರೆ. ವೊಲೊಕಾಪ್ಟರ್, ಕ್ವಾಡ್‌ಕಾಪ್ಟರ್, ಮಲ್ಟಿಕಾಪ್ಟರ್ ಮುಂತಾದ ಹೊಸ ಹೊಸ ಹೆಸರುಗಳು ಚಾಲನೆಗೆ ಬರುತ್ತಿವೆ. ಸ್ಮಾರ್ಟ್ ಫೋನ್‌ಗಳ ಹಾಗೆ ಅವೂ ನಮ್ಮ ಬದುಕನ್ನು ಇನ್ನಿಲ್ಲದ ಹಾಗೆ ಪ್ರಭಾವಿಸಲಿವೆ. ಹಾರುವ ತಟ್ಟೆಗಳ ಹೊಸ ಯುಗಕ್ಕೆ ನಾವೀಗ ಹಠಾತ್ತಾಗಿ ಪ್ರವೇಶ ಮಾಡುತ್ತಿದ್ದೇವೆ.
ಪುಟ್ಟ ವಿಮಾನದಂತೆ ಕಾಣುವ ಮಾನವರಹಿತ ಹಾರುಯಂತ್ರಗಳನ್ನು ಬಳಸಿ ಅಮೆರಿಕದ ಮಿಲಿಟರಿಯವರು ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಯೋಧರ ನೆಲೆಗಳನ್ನು ನೆಲಸಮ ಮಾಡುತ್ತಿರುವ ಬಗ್ಗೆ ಕೇಳಿದ್ದೆವು. ಮೊದಮೊದಲು ಇಡಿ ಇಡೀ ಶಿಬಿರಗಳನ್ನು ಧ್ವಂಸ ಮಾಡುತ್ತ ಕ್ರಮೇಣ ಅವು ಉಗ್ರರ ನಾಯಕರನ್ನೇ ಹೆಕ್ಕಿ ಹೆಕ್ಕಿ ಹೊಡೆಯುವಷ್ಟು ಮೊನಚಾದವು. ಈಗ ಡ್ರೋನ್‌ಗಳು ಮಿಲಿಟರಿಯ ತೆಕ್ಕೆಯಿಂದ ಬಿಡಿಸಿಕೊಂಡು ಇತರ ಹತ್ತಾರು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಗೆ ಬರುತ್ತಿವೆ. ಗೂಗಲ್, ಅಮೆಝಾನ್ ಕಂಪನಿಗಳು ಡ್ರೋನ್ ಮೂಲಕ ಸರಕು ಸಾಗಣೆ ಪ್ರಯೋಗ ಆರಂಭಿಸಿವೆ. ಕಳೆದ ವರ್ಷ ಸ್ವಿತ್ಸರ್ಲೆಂಡಿನ ಅಂಚೆ ಇಲಾಖೆಯವರು ಡ್ರೋನ್ ಮೂಲಕವೇ ಪಾರ್ಸೆಲ್ ಬಟವಾಡೆ ಆರಂಭಿಸಿದರು. ಜಪಾನ್‌ನಲ್ಲಿ ಡ್ರೋನ್‌ಗಳ ಸಂಚಾರ ಪರೀಕ್ಷೆಗೆಂದೇ ಚೀಬಾ ನಗರವನ್ನು ಆಯ್ಕೆ ಮಾಡಲಾಗಿದೆ.
ಔಷಧ, ಹುಟ್ಟುಹಬ್ಬದ ಉಡುಗೊರೆ, ವಾಹನ ರಿಪೇರಿ ಸಾಮಗ್ರಿ ಹೀಗೆ ನಾನಾ ಬಗೆಯ ವಸ್ತುಗಳ ತುರ್ತು ಬಟವಾಡೆಗೆ ವಿವಿಧ ಗಾತ್ರದ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಇನ್ನು ಮುಂದೆ ಹೊಸ ಕಟ್ಟಡಗಳಲ್ಲಿ ಡ್ರೋನ್‌ಗಳು ಇಳಿಯಲು ಅನುಕೂಲವಾಗುವಂತೆ ಬಾಲ್ಕನಿ ನಿರ್ಮಿಸಬೇಕೆಂದು ಜಪಾನಿನಲ್ಲಿ ಕಾನೂನಿನ ತಿದ್ದುಪಡಿ ಕೂಡ ಮಾಡಲಾಗುತ್ತಿದೆ. ಮಾಹಿತಿ ವಿನಿಮಯಕ್ಕೆ ಇಂಟರ್ನೆಟ್ ಬಳಕೆಗೆ ಬಂದಂತೆ ವಸ್ತುಗಳ ವಿನಿಮಯಕ್ಕೆ ಮ್ಯಾಟರ್ನೆಟ್ ವ್ಯವಸ್ಥೆ ಬರುತ್ತಿದೆ. ಮೊಬೈಲ್ ಟವರ್ ಇದ್ದಂತೆ, ಈ ಡ್ರೋನ್‌ಗಳಿಗೆ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳುವ ಗೋಕಟ್ಟೆಗಳು ಝೂರಿಕ್‌ನಲ್ಲಿ ನಿರ್ಮಾಣವಾಗುತ್ತಿವೆ. ಸರಕು ಸಾಗಣೆ ಮಾಡುವ ಡಿಎಚ್‌ಎಲ್ ಕಂಪನಿ ಆಗಲೇ ಆಲ್ಪ್ಸ್ ಪರ್ವತ ಕಣಿವೆಗಳಲ್ಲಿ ಪಾರ್ಸೆಲ್ಕಾಪ್ಟರ್‌ಗಳ ಮೂಲಕ ತುರ್ತು ನೆರವನ್ನು ರವಾನಿಸತೊಡಗಿದೆ.
ನಾವೇನೂ ಹಿಂದೆ ಬಿದ್ದಿಲ್ಲ. ಕರ್ನಾಟಕ ನೀರಾವರಿ ನಿಗಮದವರು ಕಾಲುವೆಗಳ ಪರೀಕ್ಷೆಗೆಂದು ಡ್ರೋನ್‌ಗಳನ್ನು ಬಳಸುವ ಪ್ರಾತ್ಯಕ್ಷಿಕೆಯನ್ನು ಕಳೆದ ವಾರ ನೀಡಿದರು. ನಮ್ಮ ಬಹಳಷ್ಟು ನೀರಾವರಿ ಕಾಲುವೆಗಳು ಕೆಲವೆಡೆ ಕುಸಿದಿವೆ, ಅಲ್ಲಲ್ಲಿ ಪೊದೆಗಳು ಬೆಳೆದಿವೆ; ಸಾಕಷ್ಟು ಕಡೆ ನೀರಿನ ಸೋರಿಕೆ ಆಗುತ್ತಿದೆ. ಕಾಲುವೆಯ ತುದಿಯಲ್ಲಿದ್ದ ರೈತರಿಗೆ ನೀರು ಹೋಗಿದ್ದೇ ಅಪರೂಪ. ದುರಸ್ತಿಗೆಂದು ಸಮೀಕ್ಷೆ ನೆಪದಲ್ಲಿ ಹಣದ ಸೋರಿಕೆ; ಕ್ಯಾಮರಾವನ್ನು ಜೋಡಿಸಿದ ಡ್ರೋನ್‌ಗಳನ್ನು ಕಾಲುವೆಯ ಉದ್ದಕ್ಕೂ ಓಡಿಸಿದರೆ ಒಂದೇ ದಿನದಲ್ಲಿ 30 ಕಿಲೊಮೀಟರ್ ನಿಖರ ಸಮೀಕ್ಷೆ ಸಾಧ್ಯವಿದೆ. ಇನ್ನು, ನಮ್ಮ ಪೊಲೀಸರೂ ಕಾನೂನು ಬಾಹಿರ ಕೃತ್ಯಗಳ ತಪಾಸಣೆಗಾಗಿ ಡ್ರೋನ್‌ಗಳ ಪ್ರತ್ಯೇಕ ತುಕಡಿಯನ್ನೇ ಸಜ್ಜು ಮಾಡಿದ್ದಾರೆ. ರಸ್ತೆ ಅಪಘಾತದ ಜಾಗದಲ್ಲಿ ಡ್ರೋನನ್ನು ಓಡಾಡಿಸಿ ವಾಹನ ಚಾಲನೆಗೆ ಬದಲೀ ಮಾರ್ಗ ಸೂಚಿಸುವುದೂ ಸಾಧ್ಯವಾಗಬಹುದು.
ಅರೆ, ಇಷ್ಟು ಬೇಗ ಸರ್ಕಾರಿ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನವೊಂದು ಬಳಕೆಗೆ ಬಂದಿದ್ದು ಹೇಗೆಂದು ಅಚ್ಚರಿ ಪಡಬೇಕಿಲ್ಲ. ಮೂರು ವರ್ಷಗಳ ಹಿಂದೆಯೇ ಪ್ರಯೋಗಶೀಲ ಯುವಕರು ಡ್ರೋನ್‌ಗಳನ್ನು ಬಳಸಿ ಮದುವೆ ಫೋಟೊಗ್ರಫಿ ಮಾಡುತ್ತಿದ್ದಾರೆ. ಹಳ್ಳಿಯ ಜಾತ್ರೆ, ಸ್ವಾಮೀಜಿಗಳ ಪಾದಪೂಜೆ, ಕಾಲೇಜು ತಂಡಗಳ ಆಟೋಟಗಳನ್ನೂ ಈಗ ಅಂತರಿಕ್ಷದಿಂದ ನೋಡಬಹುದಾಗಿದೆ. ಅಘನಾಶಿನಿ ನದಿ ಪಾತ್ರ ಪರಿಚಯ ಮಾಡಿಸುವ ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವ ಟೆಕಿ ಅಶ್ವಿನಿ ಕುಮಾರ್ ಮತ್ತು ಸುನೀಲ್ ತಟ್ಟೀಸರ ಅವರ ತಂಡ ಈಚೆಗಷ್ಟೆ ಯಾಣದ ಚೂಪು ಶಿಖರಗಳ ಮೇಲ್ತುದಿಯಲ್ಲಿ ಡ್ರೋನ್ ಕ್ಯಾಮರಾವನ್ನು ಚಕ್ರಾಕಾರ ಸುತ್ತಿಸಿ ಅನೂಹ್ಯ ಚಿತ್ರಣವನ್ನು ಸೊಗಸಾಗಿ ತೋರಿಸಿದೆ. ಜಾಹೀರಾತು ಕಂಪನಿಗಳಿಗೆ, ಸಿನೆಮಾ ನಿರ್ಮಾಪಕರಿಗೆ ಡ್ರೋನ್‌ಗಳೆಂದರೆ ಕ್ಯಾಮರಾದಷ್ಟೇ ಅತ್ಯಗತ್ಯ ವಸ್ತುವಾಗುತ್ತಿವೆ.
ನಮ್ಮ ಕಲ್ಪನೆಯನ್ನು ವಿಸ್ತರಿಸಿದಷ್ಟೂ ಡ್ರೋನ್‌ಗಳ ಉಪಯುಕ್ತತೆ ಬೆಳೆಯುತ್ತ ಹೋಗುತ್ತದೆ. ಕ್ಯಾಮರಾ ಬದಲು ಪುಟ್ಟ ಶಕ್ತಿಶಾಲಿ ಲೌಡ್ ಸ್ಪೀಕರನ್ನು ಜೋಡಿಸಿ ಏನೇನು ಮಾಡಬಹುದು ಯೋಚಿಸಿ. ಕೆನಡಾದ ಒಟ್ಟಾವಾ ನಗರದ ನಡುವಣ ಉದ್ಯಾನದಲ್ಲಿ ಬೆಳ್ಳಕ್ಕಿಗಳು ಸಂತೆ ನೆರೆದು ದೊಡ್ಡ ಸಮಸ್ಯೆಯನ್ನೇ ಸೃಷ್ಟಿ ಮಾಡಿದ್ದವು. ಅವುಗಳ ಉಚ್ಚಿಷ್ಟದಿಂದಾಗಿ ಅಲ್ಲಿ ಓಡಾಡುವುದೂ ಕಷ್ಟವಾಗಿತ್ತು. ಯಾರೋ ಒಬ್ಬ ಚುರುಕು ತಲೆಯ ಹುಡುಗ ಅದ್ಯಾವುದೋ ಗಿಡುಗದ ಕೂಗನ್ನು ರೆಕಾರ್ಡ್ ಮಾಡಿ ತಂದ. ಹಕ್ಕಿಹಿಡುಕ ಗಿಡುಗ ಕೇಕೆ ಹಾಕಿತೆಂದರೆ ಎಲ್ಲ ಚಿಕ್ಕದೊಡ್ಡ ಪಕ್ಷಿಗಳೂ ಭಯಪಟ್ಟು ರೆಕ್ಕೆಗೆ ಬುದ್ಧಿ ಹೇಳುತ್ತವೆ ತಾನೆ? ಡ್ರೋನ್‌ಗೆ ಆ ಧ್ವನಿಮುದ್ರಿಕೆಯನ್ನು ಲಗತ್ತಿಸಿ, ಬೆಳ್ಳಕ್ಕಿಗಳು ಕೂತಿದ್ದ ಮರಗಳ ಸುತ್ತ ಓಡಾಡಿಸಿದ. ಆಗೊಮ್ಮೆ ಈಗೊಮ್ಮೆ ರಿಮೋಟ್ ಒತ್ತಿ ಗಿಡುಗದ ಕೇಕೆಯನ್ನು ಬಿತ್ತರಿಸಿದ. ಆಯ್ತಲ್ಲ, ಒಂದೇ ಒಂದು ಹುಸಿಗುಂಡು ಹಾರಿಸದೆ, ಕವಣೆ ಕಲ್ಲನ್ನು ಬೀರದೇ ಬೆಳ್ಳಕ್ಕಿಗಳು ಮಾಯ.
ಕೈಯಲ್ಲೊಂದು ಸುತ್ತಿಗೆ ಹಿಡಿದವನಿಗೆ ಎಲ್ಲವೂ ಮೊಳೆಗಳಂತೆಯೇ ಕಾಣುತ್ತವೆ ಎಂಬರ್ಥದ ಒಂದು ಇಂಗ್ಲಿಷ್ ಗಾದೆ ಇದೆ. ನಿಮ್ಮಲ್ಲೊಂದು ಚುರುಕು ಡ್ರೋನ್ ಇದ್ದರೆ ಅದನ್ನು ಬಳಸುವ ನೂರೊಂದು ಹೊಸ ಹೊಸ ವಿಚಾರಗಳು ಹೊಳೆಯುತ್ತ ಹೋಗುತ್ತವೆ. ಕೆಲವು ಒಳ್ಳೆಯವು, ಇನ್ನು ಕೆಲವು ತಲೆಹರಟೆಯವು. ಮತ್ತೆ ಹಲವು ಬರೀ ಕೇಡಿ ಕೆಲಸಗಳು. ಪಶ್ಚಿಮದ ದೇಶಗಳಲ್ಲಿ ಕೈದಿಗಳಿಗೆ ಮಾದಕ ದ್ರವ್ಯಗಳನ್ನು, ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡುವ ಕೇಡಿ ಕೆಲಸಗಳನ್ನು ಡ್ರೋನ್‌ಗಳು ಮಾಡತೊಡಗಿವೆ. ಹಕ್ಕಿಗಳನ್ನು ಓಡಿಸಲು ಡ್ರೋನನ್ನು ಬಳಸುವಂತೆ ಜೈಲಿನ ಸುತ್ತ ಡ್ರೋನ್‌ಗಳನ್ನು ಓಡಿಸಲು ಇನ್ನು ಯಾವ ಉಪಾಯ ಹುಡುಕಬೇಕೊ ಎಂದು ಅಧಿಕಾರಿಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.
ಬರಲಿದೆ ಅದಕ್ಕೂ ಒಂದು ಉಪಾಯ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮೊಬೈಲ್ ಕರೆಗಳನ್ನು ತಡೆಗಟ್ಟಬಲ್ಲ ಜಾಮರ್‌ಗಳನ್ನು ಹಾಕುವ ಹಾಗೆ ಜೈಲಿನತ್ತ ಬರುವ ಡ್ರೋನ್‌ಗಳ ದಿಕ್ಕು ತಪ್ಪಿಸುವ ಸಿಗ್ನಲ್‌ಗಳನ್ನು ಹೊಮ್ಮಿಸಬಲ್ಲ ಸಾಧನಗಳೂ ಇಂದಲ್ಲ ನಾಳೆ ಬರುವ ಸಂಭವ ಇದೆ. ಇಂದಲ್ಲ, ನಾಳೆ ಬಂದೀತು. ಡ್ರೋನ್ ತಂತ್ರಜ್ಞಾನ ಅದೆಷ್ಟು ವೇಗದಲ್ಲಿ ವಿಕಾಸವಾಗುತ್ತಿದೆ ಎಂದರೆ ಅದರ ವೇಗಕ್ಕೆ ತಕ್ಕಂತೆ ಕಾನೂನು ರೂಪುಗೊಳ್ಳುವುದಿಲ್ಲ. ‘2020ರ ವೇಳೆಗೆ ಸುಮಾರು 15 ಸಾವಿರ ಡ್ರೋನ್‌ಗಳು ನಮ್ಮ ಆಕಾಶದಲ್ಲಿ ಹಾರಾಡಬಹುದು’ ಎಂದು ಐದು ವರ್ಷಗಳ ಹಿಂದೆ ಅಮೆರಿಕದ ವಾಯುಯಾನ ನಿಯಂತ್ರಣ ಇಲಾಖೆ ಅಂದಾಜು ಮಾಡಿತ್ತು. ಈಗ ನೋಡಿದರೆ ಅದಕ್ಕಿಂತ ಹೆಚ್ಚು ಡ್ರೋನ್‌ಗಳು ಪ್ರತಿ ತಿಂಗಳೂ ಅಂತರಿಕ್ಷಕ್ಕೆ ಏರುತ್ತಿವೆ. ಬ್ರಿಟಿಷ್ ವಾರಪತ್ರಿಕೆ ದಿ ಎಕಾನಮಿಸ್ಟ್ ವರದಿಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿ ವರ್ಷವೂ ಹತ್ತು ಲಕ್ಷಕ್ಕಿಂತ ಹೆಚ್ಚು ಡ್ರೋನ್‌ಗಳು ತಯಾರಾಗುತ್ತಿವೆ.
80ರ ದಶಕದಲ್ಲಿ ಕಚೇರಿಯ ಮೇಜಿನ ಮೇಲೆ ಕೂರಬಲ್ಲ ಕಂಪ್ಯೂಟರ್‌ಗಳನ್ನು ಐಬಿಎಮ್ ಮತ್ತು ಆಪಲ್ ಕಂಪನಿಗಳು ಹೊರತಂದಾಗ ಅಲ್ಲೊಂದು ಇಲ್ಲೊಂದು ವಾಣಿಜ್ಯ ಸಂಸ್ಥೆಗಳು ಅವನ್ನು ಖರೀದಿಸುತ್ತಿದ್ದವು. ಕಂಪ್ಯೂಟರಿನ ವಿಭಿನ್ನ ಅವತಾರಗಳು ಕ್ರಮೇಣ ಎಲ್ಲರ ಮನೆಮನೆಯಲ್ಲಿ, ಚೀಲದಲ್ಲಿ, ಕಿಸೆಯಲ್ಲಿ, ಮುಷ್ಟಿಯಲ್ಲಿ, ಮಣಿಕಟ್ಟಿನಲ್ಲಿ ಕೂರುತ್ತವೆಂದು ನಾವು ಊಹಿಸಿರಲಿಲ್ಲ. ಡ್ರೋನ್ ತಂತ್ರಜ್ಞಾನವೂ ಹಾಗೆ ದಿನದಿನಕ್ಕೆ ಸುಧಾರಿಸುತ್ತಿದೆ. ಬೆಲೆ ಕಡಿಮೆ ಆಗುತ್ತಿದೆ. ಹೇರಳ ದುಡ್ಡಿರುವ ಪಾಲಕರು ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಿಸುವಷ್ಟೇ ಲೀಲಾಜಾಲವಾಗಿ ಡ್ರೋನ್‌ಗಳನ್ನೂ ಕೊಡಿಸುವ ದಿನಗಳು ಬರಬಹುದು. ಪಡಿತರ ತರಲೆಂದು ಪ್ರತಿ ಮತದಾರ ಕುಟುಂಬಕ್ಕೂ ಒಂದೊಂದು ಉಚಿತ ಡ್ರೋನ್ ಕೊಡುತ್ತೇನೆಂದು ಜಯಲಲಿತಾ ಆಶ್ವಾಸನೆ ಕೊಡಲೂಬಹುದು.
ಡ್ರೋನ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುವ ಕಂಪನಿಗಳು ಸಾಕಷ್ಟು ಸುರಕ್ಷಾ ಕ್ರಮಗಳನ್ನು ಡ್ರೋನ್‌ಗಳಲ್ಲೇ ಅಳವಡಿಕೆ ಮಾಡಿರುತ್ತಾರೆ. ಮೇಲಕ್ಕೇರಿದ ಡ್ರೋನ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆಯದ ಹಾಗೆ, ಕಳೆದು ಹೋಗದ ಹಾಗೆ, ಬ್ಯಾಟರಿ ಖಾಲಿಯಾಗಿ ನಡುರಸ್ತೆಯಲ್ಲಿ ಬೀಳದ ಹಾಗೆ ಅದಕ್ಕೆ ಆತ್ಮರಕ್ಷಣ ವ್ಯವಸ್ಥೆಗಳು ಇದ್ದೇ ಇರುತ್ತವೆ. ಆದರೆ ಅಂಥ ಸುಭದ್ರ ಡ್ರೋನ್‌ಗಳನ್ನೂ ಜನರು ದುರ್ಬಳಕೆ ಮಾಡಿ ಖಾಸಗಿ ಆಸ್ತಿಪಾಸ್ತಿಯ ಹಾನಿ ಇಲ್ಲವೆ ಸಾರ್ವಜನಿಕ ಸಂಕಷ್ಟಗಳನ್ನೊ ತರುವ ಸಂಭವ ಇದ್ದೇ ಇರುತ್ತದೆ. ಹಾಗೆ ಆಗದ ಹಾಗೆ ಕಾನೂನಿನ ಬೇಲಿಯನ್ನು ಕಟ್ಟುವ ಕೆಲಸವೂ ಅಷ್ಟೇ ಚುರುಕಾಗಿ ನಡೆಯಬೇಕು. ಕಾರು, ಬೈಕ್‌ಗಳನ್ನು ನೋಂದಣಿ ಮಾಡಿಸುವ ಹಾಗೆ ಡ್ರೋನ್ ಖರೀದಿ ಮಾಡಿದವರು ಅದನ್ನು ನೋಂದಣಿ ಮಾಡಿಸಿ, ಡ್ರೋನ್ ಮೇಲೆ ನಂಬರನ್ನು ಅಂಟಿಸಬೇಕೆಂದು ಈಚೆಗಷ್ಟೇ ಅಮೆರಿಕ ಸರ್ಕಾರ ಕಡ್ಡಾಯ ಮಾಡಿದೆ.
ನಮ್ಮಲ್ಲಿ ಸದ್ಯಕ್ಕಂತೂ ನೋಂದಣಿ ವ್ಯವಸ್ಥೆ ಬಂದಿಲ್ಲ. ಭಾರತದ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಿಧಾನಕ್ಕೆ ಕಾನೂನನ್ನು ರೂಪಿಸುತ್ತಿದೆ. ಆದರೂ ಏನು ಪ್ರಯೋಜನ? ಐದನೆಯ ಅಂತಸ್ತಿನ ಮಹಡಿ ಮನೆಯಲ್ಲಿ ಬಟ್ಟೆ ಬದಲಿಸುತ್ತಿರುವ ಹುಡುಗಿಯ ಫೋಟೊ ತೆಗೆಯಲು ಡ್ರೋನ್ ಬಳಕೆಯಾದರೆ ಯಾರ ಮೇಲೆ ಖಟ್ಲೆ ಹಾಕುತ್ತೀರಿ? ಅಮೆರಿಕದ ಕೇಡಿ ಯುವಕನೊಬ್ಬ ತನ್ನ ಡ್ರೋನ್‌ಗೆ ಬೆಂಕಿ ಉಗುಳುವ ಡಬ್ಬವನ್ನು ಸಿಕ್ಕಿಸಿ ಅರಣ್ಯಕ್ಕೆ ಹಾರಿ ಬಿಡುತ್ತಾನೆ. ಇನ್ನೊಬ್ಬ 60 ಅಡಿ ಎತ್ತರದಲ್ಲಿ ನಿಲ್ಲಿಸಿದ ಬೃಹತ್ ಜಾಹೀರಾತು ಫಲಕದ ಮೇಲೆ ಡ್ರೋನ್ ಮೂಲಕ ಮಸಿ ಎರಚಿ ವಿರೂಪಗೊಳಿಸಿ ಹೊರಟು ಹೋಗಿರುತ್ತಾನೆ. ನೋಂದಣಿ ಮಾಡಿಸಿದ ಮಾತ್ರಕ್ಕೇ ಅವರನ್ನು ಹಿಡಿದು ಖಟ್ಲೆ ಹಾಕುವುದು ಸುಲಭವೆ? ಕಾಡಿಗೆ ಬೆಂಕಿ ಬಿದ್ದಾಗ ಕುತೂಹಲಿಗಳ ಹತ್ತಾರು ಡ್ರೋನ್‌ಗಳು ಒಮ್ಮೆಗೇ ಮುಗಿ ಬಿದ್ದಿದ್ದರಿಂದ ಅಗ್ನಿಶಾಮಕ ಹೆಲಿಕಾಪ್ಟರಿನ ಸಿಗ್ನಲ್‌ಗಳೆಲ್ಲ ಏರುಪೇರಾಗಿ ಬೆಂಕಿ ಆರಿಸಲು ಸಾಧ್ಯವೇ ಆಗದೆ ಹಿಂದಿರುಗಿದ ಘಟನೆ ಅಮೆರಿಕದಲ್ಲಿ ನಾಲ್ಕಾರು ಬಾರಿ ಆಗಿದೆ. ಅಲ್ಲಿ ಯಾರದೂ ತಪ್ಪಿಲ್ಲ. ಆದರೂ ಅನರ್ಥ ತಪ್ಪಿಲ್ಲ. ಇನ್ನು ವಿಧ್ವಂಸಕ ಉದ್ದೇಶಗಳಿಗೆ ಡ್ರೋನ್‌ಗಳ ಬಳಕೆಯಾದರೆ? ಕಾಶ್ಮೀರದಲ್ಲಿ ಮಿಲಿಟರಿಯ ಅತಿರೇಕ ನಿಲ್ಲದಿದ್ದರೆ ಇಂಡಿಯಾದ ಪ್ರತಿ ನಗರದ ಮೇಲೂ ನಾವು ‘ಡ್ರೋನ್ ಹಾಕುತ್ತೇವೆ’ ಎಂದು ಮೊನ್ನೆ ಹಿಜ್‌ಬುಲ್ ಮುಖಂಡ ಸಯ್ಯದ್ ಸಲಾಹುದ್ದೀನ್ ಪಾಕಿಸ್ತಾನದಲ್ಲಿ ಕಿರುಚಾಡಿದ್ದನ್ನು ನಕ್ಕು ಕಡೆಗಣಿಸುವಂತಿಲ್ಲ.
ಡ್ರೋನ್‌ಗಳ ಇಂಥ ದುರ್ಬಳಕೆಯ ಸಾಧ್ಯತೆ ಎಷ್ಟೇ ಇದ್ದರೂ ವಿಜ್ಞಾನಿಗಳಿಗೆ, ಯೋಜನಾ ತಜ್ಞರಿಗೆ, ಕೃಷಿ ಕಂಪನಿಗಳಿಗೆ, ಸರ್ವೆ ಕೆಲಸದವರಿಗೆ ಹಾಗೂ ವನ್ಯರಕ್ಷಣಾ ತಂಡಕ್ಕೆ ಡ್ರೋನ್ ತುಂಬಾ ಉಪಯುಕ್ತ ಸಾಧನವೆನ್ನಿಸಿದೆ. ಜ್ವಾಲಾಮುಖಿಯ ಬಾಯಿಯನ್ನೂ ಹಿಮನದಿಯ ತುಟಿಯನ್ನೂ ತಿಮಿಂಗಿಲದ ಮೂತಿಯನ್ನೂ ಅದು ಸ್ಪರ್ಶಿಸಿ ಬರಬಹುದು. ವಿಶಾಲ ಕೃಷಿ ಭೂಮಿಯಲ್ಲಿ ಸುತ್ತಾಡಿ ಅದು ಎಲ್ಲಿ ಮಣ್ಣಿನ ತೇವಾಂಶ ಕಡಿಮೆಯಾಗಿದೆ, ಎಲ್ಲಿ ಬೆಂಕಿರೋಗ ಬಂದಿದೆ ಎಂಬುದನ್ನು ನಿಖರವಾಗಿ ಹೇಳುತ್ತದೆ. ಅಡಿಕೆ ಮರದ ತುದಿಗೇರಿ ಬೋರ್ಡೋ ಮಿಶ್ರಣವನ್ನು ಎರಚಬಲ್ಲ ಡ್ರೋನ್ ಇನ್ನೂ ಬಂದಿಲ್ಲ ನಿಜ. ಆದರೆ ಈಗಿನ ಯುವಪೀಳಿಗೆಯ ಪ್ರಯೋಗಶೀಲತೆಯನ್ನು ನೋಡಿದರೆ ಅದಕ್ಕೆ ಹೆಚ್ಚು ದಿನ ಕಾಯಬೇಕಿಲ್ಲ.
‘ರಸ್ತೆಗಳಿಲ್ಲದ ಕಾಲದಲ್ಲಿ ಅಮಲ್ದಾರರು ಕುದುರೆ ಮೇಲೆ ಹೋಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು; ನಿಮಗೆ ಎಲ್ಲ ಸೌಲಭ್ಯ ಕೊಟ್ಟರೂ ಎಸಿ ರೂಮಿನಿಂದ ಹೊರಬರುತ್ತಿಲ್ಲ’ ಎಂದು ಸಿದ್ದರಾಮಯ್ಯ ಮೊನ್ನೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರಲ್ಲ? ಇನ್ನೇನು ಎಲ್ಲ ಇಲಾಖೆಗಳಿಗೆ ಡ್ರೋನ್‌ಗಳೆಂಬ ಹೊಸ ಆಟಿಗೆ ಬರುತ್ತವೆ. ಹಳ್ಳಿಗಾಡಿನ ಸಂಕಷ್ಟಗಳ ತಾಜಾ ಚಿತ್ರಣ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಕಂಡರೆ ಸಾಕೆ? ನೀರಾವರಿ ಕಾಲುವೆಗಳ ಸ್ಥಿತಿಗತಿ, ಕೆರೆಗಳ ಒತ್ತುವರಿ, ಪಟ್ಟಣಗಳ ಸುತ್ತಲಿನ ಘೋರ ತಿಪ್ಪೆಗಳ ವಿಡಿಯೊ ರಾಶಿರಾಶಿ ಬರಬಹುದು. ಆದರೆ ನೆಲಮಟ್ಟದ ದುಃಸ್ಥಿತಿಯನ್ನು ಸರಿಪಡಿಸಬಲ್ಲ ಡ್ರೋನ್‌ಗಳು ಯಾವಾಗ ಬರುತ್ತವೊ ಏನೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.