ADVERTISEMENT

‘ಒಂದೇ ಮಗು’ವಿಂದ ಬಂದ ಕಷ್ಟಕೋಟಿಗಳು

ನಾಗೇಶ ಹೆಗಡೆ
Published 4 ನವೆಂಬರ್ 2015, 19:30 IST
Last Updated 4 ನವೆಂಬರ್ 2015, 19:30 IST
‘ಒಂದೇ ಮಗು’ವಿಂದ ಬಂದ ಕಷ್ಟಕೋಟಿಗಳು
‘ಒಂದೇ ಮಗು’ವಿಂದ ಬಂದ ಕಷ್ಟಕೋಟಿಗಳು   

ಚೀನಾ ಏನೇ ಮಾಡಿದರೂ ಜಾಗತಿಕ ಸುದ್ದಿಯಾಗುತ್ತದೆ. ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ನೀತಿಯನ್ನು ಕಳೆದ ವಾರ ಅದು ಕೈಬಿಟ್ಟಿತು. ಎರಡನೇ ಮಗುವನ್ನು ಹೆರಲಿಕ್ಕೆ ಪ್ರಜೆಗಳಿಗೆ ಅವಕಾಶ ಮಾಡಿಕೊಟ್ಟಿತು. ಜಗತ್ತಿನ ಎಲ್ಲ ಶಕ್ತಿಶಾಲಿ ಮಾಧ್ಯಮಗಳ ಗಮನ ಸೆಳೆಯಿತು. ‘ದೀರ್ಘ ಕಾಯಿಲೆಯ ನಂತರ ಕೊನೆಗೂ ಚೀನಾದ ‘ಒಂದೇ ಮಗು’ ಯೋಜನೆ ಅಸು ನೀಗಿತು. ಅದಕ್ಕೆ 35 ವರ್ಷ ವಯಸ್ಸಾಗಿತ್ತು’. -ಹೀಗೆಂದು ನ್ಯೂಯಾರ್ಕರ್ ಪತ್ರಿಕೆ ಬರೆಯಿತು.

‘ದೇಶದ ಅತ್ಯಂತ ಅಪ್ರಿಯ ಯೋಜನೆಯನ್ನು ಕೊನೆಗೂ ಚೀನಾ ಕೈಬಿಟ್ಟಿತು’ ಎಂದು ನ್ಯಾಶನಲ್ ಜಿಯಾಗ್ರಫಿಕ್ ಬರೆಯಿತು. ‘ಅಂಬೆಗಾಲಿಡುತ್ತಿದ್ದ ಮಗುವೊಂದು ಮೆಲ್ಲಗೆ ಎದ್ದು ನಿಂತ ಹಾಗೆ, ಚೀನಾದ ಬೇಬಿಫುಡ್ ಮತ್ತು ಆಟಿಗೆ ಸಾಮಗ್ರಿಗಳನ್ನು ತಯಾರಿಸುವ ಕಂಪನಿಗಳ ಶೇರುಬೆಲೆ ಮೇಲಕ್ಕೆದ್ದಿತು’ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತು.

ಚೀನಾ ಎಂದಮೇಲೆ ಎಲ್ಲವೂ ಕೋಟಿಗಟ್ಟಲೆ ಸಂಖ್ಯೆಯಲ್ಲೇ ಆಗಬೇಕು ತಾನೆ? ಮಹಾಗೋಡೆಯ ನಿರ್ಮಾಣದಿಂದ ಆರಂಭಿಸಿ ಅದು ಸಾಧಿಸಿದ ಒಂದೊಂದು ‘ಕ್ರಾಂತಿ’ಯಲ್ಲೂ ಕಷ್ಟಕೋಟಲೆಗಳಿಗೆ ಬಲಿಯಾದವರ ಸಂಖ್ಯೆ ಕೋಟಿಗಟ್ಟಲೆ ಇದೆ. 1950ರ ದಶಕದ ‘ಮಹಾ ಮುಂಜಿಗಿತ’ ಮತ್ತು 60ರ ದಶಕದ ‘ಸಾಂಸ್ಕೃತಿಕ ಕ್ರಾಂತಿ’ಯ ಹಾಗೆ 1980ರಲ್ಲಿ ಜಾರಿಗೆ ಬಂದ ‘ಒಂದೇ ಮಗು’ ಯೋಜನೆಯ ಕರಾಳ ಕತೆಗಳು ಒಂದೆರಡಲ್ಲ.

ಅದರ ಪರಿಣಾಮವಾಗಿ ಇಂದು ಅಲ್ಲಿ ಕೋಟಿಗಟ್ಟಲೆ ‘ಅನಧಿಕೃತ’ ಮಕ್ಕಳು ಅಂತರ್ಪಿಶಾಚಿಗಳಂತೆ ಬದುಕಬೇಕಿದೆ. ಹುಟ್ಟುವ ಏಕೈಕ ಮಗುವು ಗಂಡೇ ಆಗಬೇಕೆಂಬ ಬಯಕೆಯಿಂದಾಗಿ ಎಡಬಿಡಂಗಿ ಲಿಂಗಪತ್ತೆ ತಂತ್ರಗಳಿಗೆ ಬಲಿಯಾಗಿ ಕೋಟಿಗಟ್ಟಲೆ ಸಂಸಾರಗಳು ಸಂಕಷ್ಟಕ್ಕೆ ಸಿಲುಕಿವೆ. ಅದರ ಪರಿಣಾಮವಾಗಿ ಗಂಡುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿದ್ದರಿಂದ ಅಲ್ಲಿ ಈಗ ಕೋಟಿಗಟ್ಟಲೆ ಯುವಕರು ಮದುವೆಯ ಆಸೆಯನ್ನೆಲ್ಲ ಬಿಟ್ಟು ಒಬ್ಬಂಟಿ ಓಡಾಡುತ್ತಿದ್ದಾರೆ.

ಲಕ್ಷಾಂತರ ಮಕ್ಕಳು ಅಪ್ಪ ಅಮ್ಮಂದಿರ ಸಂಪರ್ಕವಿಲ್ಲದೆ ವಿದೇಶಗಳಲ್ಲಿ ಜೀವಿಸಬೇಕಿದೆ. ಸಾಕಷ್ಟು ಪೂರ್ವ ಸಿದ್ಧತೆ ಇಲ್ಲದೆ, ಗಟ್ಟಿ ವೈಜ್ಞಾನಿಕ ತಳಹದಿ ಇಲ್ಲದೆ, ಪರಿಪಕ್ವ ತಂತ್ರಜ್ಞಾನದ ಆಸರೆ ಇಲ್ಲದೆ ಅವಸರದಲ್ಲಿ ರಾಷ್ಟ್ರವ್ಯಾಪಿ ಯೋಜನೆಗಳನ್ನು ಜಾರಿಗೆ ತಂದರೆ ಏನೇನಾಗುತ್ತದೆ ಎಂಬುದಕ್ಕೆ ಚೀನಾ ಮಹಾನ್ ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತದೆ.

ಹಿಂದೆ ಮಾವೊ ನೇತೃತ್ವದಲ್ಲಿ ಚೀನಾದಲ್ಲಿ 1958ರಿಂದ ಮೂರು ವರ್ಷಗಳ ಕಾಲ ‘ಮಹಾನ್ ಮುಂಜಿಗಿತ’ (ದಿ ಗ್ರೇಟ್ ಲೀಪ್ ಫಾರ್ವರ್ಡ್) ಹೆಸರಿನ ಕ್ರಾಂತಿ ನಡೆಯಿತು. ರೈತರೆಲ್ಲ ಏಕಾಏಕಿ ಖಾಸಗಿ ಕೃಷಿಯನ್ನು ಕೈಬಿಟ್ಟು ಸಹಕಾರಿ ಬೇಸಾಯ ಮಾಡಬೇಕೆಂದು ಆದೇಶ ಹೊರಡಿಸಲಾಯಿತು. ಗ್ರಾಮೀಣ ಉತ್ಪಾದನೆಯನ್ನು ದಿಢೀರ್ ಹೆಚ್ಚಿಸಿ, ನಗರವಾಸಿಗಳಿಗೆ ಆಹಾರ ಮತ್ತು ಉದ್ಯಮಗಳಿಗೆ ಕಚ್ಚಾವಸ್ತುಗಳನ್ನು ಒದಗಿಸುವ ಗುರಿ ಹೂಡಲಾಗಿತ್ತು. ಹಳ್ಳಿಯ ಜನರನ್ನೆಲ್ಲ ಸಹಕಾರಿ ದೊಡ್ಡಿಗಳಿಗೆ ದಬ್ಬಲಾಯಿತು.

ಪ್ರತಿ ದೊಡ್ಡಿಯಲ್ಲೂ ಐದೈದು ಸಾವಿರ ಜನರಂತೆ 25  ಸಾವಿರ ಸಮುದಾಯಗಳನ್ನು ನಿರ್ಮಿಸಲಾಯಿತು. ಪ್ರತಿಭಟನೆ ಅಥವಾ ಪರಾರಿಗೆ ಯತ್ನಿಸಿದವರನ್ನು ಬಲಿ ಹಾಕಲಾಯಿತು. ಈ ಅವಸರದ ಕ್ರಾಂತಿಗೆ ಸೋವಿಯತ್ ಸಂಘದ ತಲೆತಿರುಕ ಕೃಷಿ ವಿಜ್ಞಾನಿ ಲೈಸೆಂಕೊ ಎಂಬಾತನ ಮಾರ್ಗದರ್ಶನ ಬೇರೆ ಸಿಕ್ಕಿತು. ‘ಒಂದೇ ಜಾತಿಯ ಗಿಡಗಳನ್ನು ಎಷ್ಟೇ ಸಮೀಪ ನೆಟ್ಟರೂ ಅವು ಬೆಳೆಯುತ್ತವೆ’ ಎಂಬ ಆತನ ತಪ್ಪು ತತ್ವವನ್ನು ಆಧರಿಸಿ ಲಕ್ಷಾಂತರ ಎಕರೆಯಲ್ಲಿ ದಟ್ಟ ನಾಟಿ ಮಾಡಿದ್ದೆಲ್ಲ ವಿಫಲವಾದವು. ಮಳೆಮಾರುತಗಳ ಲೆಕ್ಕಾಚಾರವಿಲ್ಲದೆ ಬಿತ್ತನೆ ಮಾಡಿದ್ದರಿಂದ ಮತ್ತಷ್ಟು ಫಸಲು ನಷ್ಟ ಉಂಟಾಯಿತು. ಮೂರು ವರ್ಷಗಳ ಜಿಗಿತದಿಂದಾಗಿ ವ್ಯಾಪಕ ಬರಗಾಲ ಬಂದು ಇಡೀ ದೇಶ ತತ್ತರಿಸಿತು.

ಈ ಮಹಾ ಮುಂಜಿಗಿತಕ್ಕೆ ಇನ್ನಷ್ಟು ಭದ್ರ ಬುನಾದಿ ಒದಗಿಸಲೆಂದು ಅನೇಕ ನದಿ ತಿರುವು ಯೋಜನೆ, ಜೋಡಣೆ ಯೋಜನೆ, ಮಹಾ ಕಾಲುವೆ ಯೋಜನೆಗಳು ಜಾರಿಗೆ ಬಂದವು. ಅಷ್ಟೊಂದು ಕಾಮಗಾರಿಗೆ ಕಬ್ಬಿಣ ಉಕ್ಕು ತುರ್ತು ಬೇಕಲ್ಲ? ಆಸುಪಾಸಿನ ಗುಜರಿ ಕಬ್ಬಿಣವನ್ನು ಕರಗಿಸಿ ಉಕ್ಕು ಉತ್ಪಾದಿಸಲೆಂದು ನಗರಗಳ ಸಮೀಪ ಸಾವಿರಾರು ‘ಹಿತ್ತಿಲ ಕುಲುಮೆ’ಗಳು ಸ್ಥಾಪನೆಗೊಂಡವು. ಅದೆಷ್ಟೊ ಮಿಲಿಯನ್ ಟನ್ ಉಕ್ಕಿನ ಉತ್ಪಾದನೆಯ ಭಾರೀ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲೇಬೇಕೆಂಬ  ಹಠಕ್ಕೆ ಬಿದ್ದವರ ಧ್ವಂಸಕೃತ್ಯಗಳಿಗೆ ಲೆಕ್ಕವಿಲ್ಲ. ಕುಲುಮೆಗೆ ಇದ್ದಿಲು ಬೇಕೆಂದು ಹಳ್ಳಿಯ ಮನೆಗಳ ಬಣವೆ, ಸೂರು, ಬೇಲಿ, ಮನೆಬಾಗಿಲುಗಳನ್ನು ಕಿತ್ತು ತಂದು ತಿದಿ ಊದಿದರು; ಗುಜರಿ ಕಬ್ಬಿಣ ವಸ್ತುಗಳ ಅಭಾವ ಎದುರಾದಾಗ ಹಳ್ಳಿಗರ ಮನೆಗಳ ಗೇಟು, ಕಿಟಕಿ ಪಾತ್ರೆಪಡಗಗಳ ಯಜ್ಞ ನಡೆಯಿತು.

ನೀರಾವರಿ ಯೋಜನೆಗಳಿಗೆ ಬಲಿಯಾದ ವನ್ಯಜೀವಿಗಳ ಲೆಕ್ಕ ಬಿಡಿ; ನೆಲೆ ಕಳೆದುಕೊಂಡು ಪ್ರತಿಭಟಿಸಲು ಹೋಗಿ ಪ್ರಾಣಬಿಟ್ಟ ಅದೆಷ್ಟೊ ಲಕ್ಷ ಜನರ ಬಗ್ಗೆ ಕ್ಯಾರೇ ಇಲ್ಲ. ಆಸ್ತಿಪಾಸ್ತಿ ಹಾನಿ, ಬರಗಾಲ, ಕ್ಷಾಮ, ಬಲಾತ್ಕಾರದ ದುಡಿಮೆಗಳಿಂದ ರೋಸಿ ದಂಗೆ ಎದ್ದು, ಬಗ್ಗು ಬಡಿತ ತಿಂದು ಅಜಮಾಸು ಮೂರೂವರೆ ಕೋಟಿ ಚೀನೀಯರು ಪ್ರಾಣ ತೆತ್ತರು. ಹಿಟ್ಲರನ ನಾತ್ಸಿ ನರಮೇಧಕ್ಕಿಂತ ದೊಡ್ಡ ಹಿಂಸಾಕಾಂಡ ಇದೆಂದು ಪ್ರತೀತಿಗೆ ಬಂತು.

ಅದಾಗಿ ಆರು ವರ್ಷಗಳ ನಂತರ ‘ಸಾಂಸ್ಕೃತಿಕ ಕ್ರಾಂತಿ’ಗೆ ಮಾವೋ ಕರೆಕೊಟ್ಟಿದ್ದ ಪರಿಣಾಮ ನಮಗೆ ಗೊತ್ತೇ ಇದೆ. ನಗರಗಳಲ್ಲಿ, ಕಾರ್ಖಾನೆಗಳಲ್ಲಿ, ಸರ್ಕಾರಿ  ಇಲಾಖೆಗಳಲ್ಲಿ ಕಮ್ಯೂನಿಸ್ಟ್ ಧೋರಣೆಯನ್ನು ಬೆಂಬಲಿಸದ, ಬಂಡವಾಳಶಾಹಿ ಮನೋಭಾವದ ಅನೇಕರಿದ್ದಾರೆ; ‘ಅವರನ್ನೆಲ್ಲ ಹೊರದಬ್ಬಬೇಕು’ ಎಂದು ಮಾವೊ ಹೇಳಿದ್ದೇ ತಡ, ತಂಡೋಪತಂಡ ಕೆಂಪು ಪಡೆಯ ಯುವಕರು ಎಲ್ಲೆಂದರಲ್ಲಿ ದಾಳಿಯಿಟ್ಟರು. ದೇಶದ ಪ್ರಮುಖ ಚಿಂತನಶೀಲರು, ಸಾಂಸ್ಕೃತಿಕ ಧುರೀಣರು ಮತ್ತು ಧಾರ್ಮಿಕ ಮುಖಂಡರೆಲ್ಲ ನಿಶ್ಶೇಷರಾದರು.

ನಂತರ ಬಂದ ಮೂರನೆಯ ‘ಜನನ ನಿಯಂತ್ರಣ ಕ್ರಾಂತಿ’ಗೆ ಎರಡು ಕಾರಣಗಳಿದ್ದವು: ಜನಸಂಖ್ಯೆಯನ್ನು ಮಿತಿಯಲ್ಲಿಡುವುದು ಮತ್ತು ಮಕ್ಕಳನ್ನು ಹೆರುವ ಯಂತ್ರವೆನಿಸಿದ್ದ ಮಹಿಳೆಯರನ್ನು ದುಡಿಮೆಗೆ ತೊಡಗಿಸಿ ದೇಶದ ಉತ್ಪಾದಕತೆಯನ್ನು ಹೆಚ್ಚಿಸುವುದು. ಹೆಣ್ಣಿನ ಗರ್ಭವನ್ನೇ ಗುರಿಯಾಗಿಟ್ಟು ನಾನಾ ಅಡ್ಡ ಪರಿಣಾಮಗಳಿರುವ ಮಾತ್ರೆಗಳನ್ನು ಇಡೀ ರಾಷ್ಟ್ರಕ್ಕೆ ಹಂಚಲಾಯಿತು. ಕೆಲವರಿಗೆ ಗರ್ಭಕೋಶವೇ ಸುರುಟಿ ಸುಟ್ಟು ಹೋಗುತ್ತಿತ್ತು.

ಅಥವಾ ವಿವಿಧ ಬಗೆಯ ಕ್ಯಾನ್ಸರ್ ರೋಗ ಬರುತ್ತಿತ್ತು ಅಥವಾ ಶರೀರ ದಢೂತಿಯಾಗುತ್ತ ಹೋಗುತ್ತಿತ್ತು. ಮಾತ್ರೆಗೆ ಬೆದರಿ, ಬದಲೀ ಉಪಾಯಕ್ಕೆ ಮೊರೆ ಹೋದರೆ ಮತ್ತಷ್ಟು ಸಂಕಟ. ಮೊದಲ ಮಗು ಹುಟ್ಟಿದ ನಂತರ ಎರಡನೇ ಬಾರಿ ಗರ್ಭಿಣಿ ಆಗದಂತೆ ಕಡ್ಡಾಯ ಶಸ್ತ್ರಚಿಕಿತ್ಸೆ ಮಾಡಿದ್ದೇನು, ಗರ್ಭಪಾತ ಮಾಡಿಸಿದ್ದೇನು, ಏಳು ತಿಂಗಳ ಗರ್ಭಿಣಿಯನ್ನು ಹೊಲದ ಬದುವಿನಗುಂಟ ಅಟ್ಟಾಡಿಸಿ ಹಿಡಿದು ತಂದು ಗುಡಿಸಲಿನಂಥ ಕ್ಲಿನಿಕ್ಕುಗಳಲ್ಲಿ ಬಸಿರಿಳಿಸುವ ಮದ್ದು ಕೊಟ್ಟು ತಾಯಿ ಮಗು ಇಬ್ಬರನ್ನೂ ಕೊಂದಿದ್ದೇನು- ಒಂದೆರಡಲ್ಲ, ಒಂದೆರಡು ಲಕ್ಷವೂ ಅಲ್ಲ.

ಇಷ್ಟಾಗಿಯೂ ಅನೈಚ್ಛಿಕವಾಗಿ ಎರಡನೆಯ ಬಾರಿ ಬಸುರಾದ ಮಹಿಳೆ ಎಲ್ಲೋ ಗುಪ್ತವಾಗಿ ಹೆರಿಗೆ ಮಾಡಿಸಿಕೊಂಡಿದ್ದು ಗೊತ್ತಾದರೆ ಅಲ್ಲಿಗೆ ಹೋಗಿ ಬಲಾತ್ಕಾರವಾಗಿ ಆ ಮಗುವನ್ನು ಸೆಳೆದು ಅನಾಥಾಲಯಗಳಲ್ಲಿ ಪೋಷಿಸಿ ನಂತರ ಅಧಿಕೃತವಾಗಿಯೇ ಮಗುವನ್ನು (ಮೂರು ಸಾವಿರ ಡಾಲರ್ ಶುಲ್ಕ ನೀಡುವ ವಿದೇಶೀ ದಂಪತಿಗೆ) ದತ್ತು ಕೊಟ್ಟು ಖಜಾನೆ ಭರ್ತಿ ಮಾಡುವ ವಿಧಾನವೂ ಜಾರಿಯಲ್ಲಿತ್ತು.

ಈ ಕಾನೂನು ಜಾರಿಗೆ ಬಂದ ಹೊಸದರಲ್ಲಿ ಫ್ಯಾಕ್ಟರಿಗಳಲ್ಲಿ ದುಡಿಯುವ ಮಹಿಳೆ ತಾನು ಗರ್ಭಿಣಿ ಆಗಿಲ್ಲವೆಂದು ತಿಂಗಳಿಗೊಮ್ಮೆ ಸಾಕ್ಷ್ಯ ಒದಗಿಸಬೇಕಿತ್ತು. ಕೆಲಸದ ವೇಳೆಯಲ್ಲಿ ಶೌಚಾಲಯಕ್ಕೆ ಹೋಗಿ ಮುಟ್ಟಿನ ಕಲೆಯಿರುವ ಪ್ಯಾಡ್‌ಗಳನ್ನು ತಂದು ತೋರಿಸಬೇಕಿತ್ತು. ಇಷ್ಟಾಗಿಯೂ ಮಗು ಹುಟ್ಟಿದರೆ ಅದನ್ನು ಅಡಗಿಸಿ ಬೆಳೆಸಿ, ಆ ಮಗು ಯಾವುದೇ ಸರ್ಕಾರಿ ದಾಖಲೆಗೆ ಸೇರದಂತೆ ನೋಡಿಕೊಂಡು ಅದು ಕದ್ದುಮುಚ್ಚಿ ಕೂಲಿ ನಾಲಿ ಮಾಡುತ್ತ ಬದುಕುವುದನ್ನು ಅಮ್ಮ ಅಪ್ಪ ಮೌನವಾಗಿ ನೋಡುವಂತಾಯಿತು.

ಅದರ ಫಲವಾಗಿ ಹೊಮ್ಮಿದ ಈ ಜೋಕ್ ನೋಡಿ: ಆಟಿಗೆಯ ಬಂದೂಕು ಹಿಡಿದ ಮಗು ‘ಡಿಶೂಂ ಡಿಶೂಂ’ ಎಂದು ಕಾಲ್ಪನಿಕ ವೈರಿಗಳ ಮೇಲೆ ಗುರಿ ಇಡುತ್ತದೆ ತಾನೆ? ಚೀನೀ ಮಕ್ಕಳಿಗೆ ಆ ವೈರಿಗಳು ಸಹಜವಾಗಿ ಜಪಾನೀಯರೇ ಆಗಿರುತ್ತಾರೆ. ತಪ್ಪಿದರೆ, ಚೀನಾದ್ದೇ ಕುಟುಂಬ ಯೋಜನೆ ಅಧಿಕಾರಿಗಳಾಗಿರುತ್ತಾರೆ. ಬೆಳೆದು ನಿಂತ ಏಕೈಕ ಮಗು ಅಕಸ್ಮಾತ್ ಸಾವಪ್ಪಿದರೆ ವೃದ್ಧಾಪ್ಯದಲ್ಲಿ ಚೀನೀ ಅಪ್ಪ ಅಮ್ಮ ಅನಾಥರಾಗುತ್ತಾರೆ.

ಏಕೆಂದರೆ ಅಲ್ಲಿ ನೌಕರಿಯ ವಯಸ್ಸು ಮುಗಿದ ಮೇಲೆ ಪಿಂಚಣಿಯಾಗಲೀ ವಿಮೆಯಾಗಲೀ ಭವಿಷ್ಯ ನಿಧಿಯಾಗಲೀ ಸಿಗುವುದಿಲ್ಲ. ಎಲ್ಲಕ್ಕೂ ಮಕ್ಕಳನ್ನೇ ಅವಲಂಬಿಸಬೇಕು. ಮಗುವೇ ಅಪಮೃತ್ಯುವಿಗೆ ಅಥವಾ ಕಾಯಿಲೆಗೆ ಬಲಿಯಾದರೆ ವೃದ್ಧರು ಸಾಯುವವರೆಗೂ ದುಡಿಯಬೇಕು. ಮಗುವನ್ನು ಅತ್ಯಂತ ಕಾಳಜಿಯಿಂದ ಬೆಳೆಸಲು ಹೋಗಿ, ಕಂಡಿದ್ದನ್ನೆಲ್ಲ ತಿನ್ನಲು ಕೊಟ್ಟು ಅಪ್ಪ-ಅಮ್ಮ ದುಡಿಮೆಗೆ ಹೋಗುತ್ತಿದ್ದುದರಿಂದ ಈಗ ಜಗತ್ತಿನ ಅತಿ ಹೆಚ್ಚು ಸ್ಥೂಲಕಾಯದ ಮಕ್ಕಳು, ಸಕ್ಕರೆ ಕಾಯಿಲೆಯ ಮಕ್ಕಳು ಚೀನಾದಲ್ಲಿದ್ದಾರೆ.

2008ರಲ್ಲಿ ಶಿಚುವಾನ್ ಪ್ರಾಂತದಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ ಮೃತಪಟ್ಟ 70 ಸಾವಿರ ನತದೃಷ್ಟರ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಏಕೆಂದರೆ ಅನೇಕ ಶಾಲೆಗಳು ಕುಸಿದು ಬಿದ್ದವು. ಅಸು ನೀಗಿದ ಪ್ರತಿ ಮಗುವೂ ಕುಟುಂಬದ ಏಕೈಕ ಕುಡಿಯಾಗಿದ್ದರಿಂದ ಬದುಕುಳಿದ ಅದೆಷ್ಟೊ ಮಹಿಳೆಯರು ಮಗು ಬೇಕೆಂದು ಆಸ್ಪತ್ರೆಗೆ ಧಾವಿಸಿದರು. ಕೆಲವರಿಗೆ ಈ ಮೊದಲು ಗರ್ಭಕೋಶವನ್ನೇ ತೆಗೆದು ಹಾಕಲಾಗಿತ್ತು; ಮತ್ತೆ ಕೆಲವರಿಗೆ ಹೆರುವ ವಯಸ್ಸು ಮೀರಿತ್ತು. ಆದರೂ ಶಸ್ತ್ರಚಿಕಿತ್ಸೆಗೆ ಕ್ಯೂ ನಿಂತರು.

ಈ ಅವಾಂತರಗಳ ಪರಿಣಾಮ ಏನೆಂದರೆ ಇನ್ನಿಪ್ಪತ್ತು ವರ್ಷಗಳ ನಂತರ ಚೀನಾದಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿರುತ್ತದೆ. ಅದಕ್ಕೇ ಕಳೆದ ಮೂರು ವರ್ಷಗಳೀಚೆ ‘ಒಂದು ಮಗು’ ಧೋರಣೆ ತುಸುವೇ ಸಡಿಲವಾಗುತ್ತ ಬಂದ ಹಾಗೆ ಅನುಕೂಲಸ್ಥರಿಗೆ ಆದ್ಯತೆ ಸಿಗತೊಡಗಿತು. ದಂಡ ಕಟ್ಟಿ ಮಕ್ಕಳನ್ನು ಹೆರಬಹುದಿತ್ತು. ಚಿತ್ರ ನಿರ್ಮಾಪಕ ಝಾಂಗ್ ಯಿಮೂ 12 ಲಕ್ಷ ಡಾಲರ್‌ಗೆ ಸಮನಾದ ದಂಡ ಕಟ್ಟಿ ನಾಲ್ಕು ಮಕ್ಕಳ ತಂದೆಯಾಗಿದ್ದೂ ಸುದ್ದಿಯಾಯಿತು.

‘ಒಂದೇ ಮಗು ಸಾಕು ಎಂಬ ಧೋರಣೆಯಿಂದಾಗಿ 40 ಕೋಟಿ ಶಿಶುಜನನವನ್ನು ತಡೆದಿದ್ದೇವೆ’ ಎಂದು ಚೀನಾದ ಕುಟುಂಬ ಕಲ್ಯಾಣ ಇಲಾಖೆ ಹೇಳಿಕೊಂಡಿದೆ. ಆದರೆ ಅದರ ಹೆಗ್ಗಳಿಕೆಯೆಲ್ಲ ಸರ್ಕಾರಕ್ಕೇ ಹೋಗಬೇಕಿಲ್ಲ. ನಗರಜೀವನ ತೀರ ದುಬಾರಿಯಾಗಿದ್ದು  ಜನರು ತಾವಾಗಿಯೇ ಒಂದೇ ಮಗು ಸಾಕೆನ್ನುತ್ತಿದ್ದಾರೆ. ಈಗ ಎರಡು ಮಕ್ಕಳಿಗೆ ಅನುಮತಿ ಸಿಕ್ಕರೂ ಚೀನಾ ಜನಸಂಖ್ಯೆ ಸುಲಭಕ್ಕೆ ಮೇಲೇರುವುದಿಲ್ಲ.

ನಾವೀಗ ಭಾರತೀಯರ ಭಾಗ್ಯವನ್ನು ಕೊಂಡಾಡಬೇಕು. ನಮ್ಮಲ್ಲೂ ಬಲಾತ್ಕಾರದ ಸಂತಾನಶಕ್ತಿಹರಣ ನಡೆದಿತ್ತು. ಇಲ್ಲೂ ಗರ್ಭನಿರೋಧಕ ಕರಾಳ ಕ್ವಿನಕ್ರೈನ್ ಮಾತ್ರೆಗಳ ವಿತರಣೆ ನಡೆದಿತ್ತು. ಇಲ್ಲೂ ನೀರಾವರಿ ಯೋಜನೆಗಳಿಗೆ ಲಕ್ಷಾಂತರ ಜನ ಎತ್ತಂಗಡಿಯಾದರು. ಇಲ್ಲೂ ಜನರ ಹಕ್ಕುಗಳನ್ನು ದಮನ ಮಾಡುವ ಯತ್ನ ನಡೆದಿತ್ತು. ಇಲ್ಲೂ ಕುಲಾಂತರಿಗಳನ್ನು ನುಗ್ಗಿಸುವ ಕೆಲಸಗಳು ನಡೆದವು.

ಇಲ್ಲೂ ಹೆಣ್ಣು ಭ್ರೂಣಹತ್ಯೆಗಳು ನಡೆದವು. ಆದರೆ ಅಂಥ ವಿಕಾರಗಳನ್ನೆಲ್ಲ ಅಲ್ಲಲ್ಲೇ ಸರಿಪಡಿಸಿಕೊಂಡು ಮುಂದೆ ಸಾಗಬಲ್ಲ ಗಟ್ಟಿ ಪ್ರಜಾಪ್ರಭುತ್ವ ಇಲ್ಲಿದೆ. ಸರ್ಕಾರದ ತಪ್ಪು ನಡೆಗಳನ್ನು ಪ್ರಶ್ನಿಸಬಲ್ಲ ಜನಾಂಗೀಯ ವೈವಿಧ್ಯ ನಮ್ಮದಾಗಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2022ರ ವೇಳೆಗೆ ಚೀನಾ ‘ಅತ್ಯಂತ ಜನಭರಿತ ದೇಶ’ ಎಂಬ ಉಪಾಧಿಯನ್ನು ಭಾರತಕ್ಕೆ ಬಿಟ್ಟುಕೊಡಲಿದೆ. ಉಪಾಧಿ ಎಂದರೆ ‘ಅಡ್ಡಿ’ ಎಂಬ ಅರ್ಥವೂ ಇದೆ ಗೊತ್ತಲ್ಲ? ಅಡ್ಡಿಯಿಲ್ಲ, ದೇಶದ ಮುನ್ನಡೆಗೆ ಜನಸಂಖ್ಯೆ ಅಡ್ಡಿಯಲ್ಲ ಎಂದು ಜಗತ್ತಿಗೆ ತೋರಿಸಲು ನಾವು ಸಜ್ಜಾಗಬೇಕಿದೆ.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT