ವಿಜ್ಞಾನದ ಕಲಿಕೆಯು ಜಗತ್ತಿನ ಬಗೆಗಿನ ಮೂಲಭೂತ ಅರಿವನ್ನು ಎಚ್ಚರಿಸುವ ಪ್ರಕ್ರಿಯೆ. ಕಣ್ಣಿಗೆ ಕಾಣುವ ಜಗತ್ತಿನ ಹಿಂದಿರುವ ಕಾಣದ ತತ್ವವನ್ನು ಅನ್ವೇಷಿಸುವ ಮಹಾಯಾನವಿದು. ಇಂಥ ಶೋಧಕ್ಕೆ ಬಹು ದೀರ್ಘ ಚರಿತ್ರೆಯೇ ಇದೆ. ಕಾಲಕ್ರಮದಲ್ಲಿ ವಿಜ್ಞಾನವು ನಮ್ಮ ನೋಟಕ್ರಮಗಳನ್ನು ಬದಲಿಸಿದೆ. ನಮ್ಮ ತಿಳಿವುಗಳನ್ನು ಪುನರ್‌ರಚಿಸಿಕೊಳ್ಳುತ್ತಲೇ ಇರುವುದನ್ನು ಕಲಿಸಲು ವಿಜ್ಞಾನದಂಥ ಜ್ಞಾನಮಾರ್ಗ ಇನ್ನೊಂದಿಲ್ಲ.
‘ವಿಜ್ಞಾನವು ಸತ್ಯದ ಬಗೆಗಿನ ಸಾಹಿತ್ಯ’ ಎಂಬ ಮಾತನ್ನು ಕೇಳಿ ಚಕಿತಳಾದೆ. ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಋಷಿಗಳು ಅದನ್ನು ಅನುಭಾವದ ದರ್ಶನವಾಗಿಸಿಕೊಂಡರೆ, ಆಧುನಿಕ ವಿಜ್ಞಾನ ಅದನ್ನು ಲೋಕದ ಬಗೆಗಿನ ವಿವರಣೆಯಾಗಿ ತತ್ವೀಕರಿಸಿದೆ. ವೈಜ್ಞಾನಿಕ ಮನೋಭಾವವನ್ನು ಸಂಶೋಧನೆಯ ಪ್ರಾಯೋಗಿಕ ಮಾರ್ಗವಾಗಿ ರೂಪಿಸಿಕೊಂಡಿದೆ. ಮುಂದುವರಿದು, ವಾಸ್ತವ ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ವಿಜ್ಞಾನವನ್ನು ನಾವಿಂದು ಬಳಸಿಕೊಳ್ಳುತ್ತಿದ್ದೇವೆ. ಅದನ್ನು ತಂತ್ರಜ್ಞಾನವಾಗಿ ರೂಪಿಸಿಕೊಂಡು ಇಂದಿನ ಸರಕು ಜಗತ್ತಿನ ಎಲ್ಲ ಪ್ರಲೋಭನೆಗಳ ಹಿಂದಿನ ತಂತ್ರವಾಗಿಯೂ ಮಾಡಿಕೊಂಡಿದ್ದೇವೆ. ಹಾಗಾದರೆ ಇಂದು ತರಗತಿಗಳಲ್ಲಿ ವಿಜ್ಞಾನ ಬೋಧನೆ ಯಾವ ದಿಕ್ಕಿನಲ್ಲಿದೆ ಎಂಬ ಜಿಜ್ಞಾಸೆ ಮೂಡುತ್ತದೆ.
ವಿದ್ಯಾರ್ಥಿಗಳಿಗೆ ಸತ್ಯಕ್ಕಿರುವ ಬಹು ಆಯಾಮಗಳನ್ನು ದರ್ಶನ ಮಾಡಿಸುವಲ್ಲಿ, ವಿಜ್ಞಾನವನ್ನು ಒಂದು ಫಿಲಾಸಫಿಯಾಗಿ ಬದುಕುವಂತೆ ಮಾಡುವಲ್ಲಿ ನಾವೇನಾದರೂ ತೊಡಗಿದ್ದೇವೆಯೇ? ವಿಜ್ಞಾನವನ್ನೂ ಸೃಜನಶೀಲ ಕಲಿಕೆಯಾಗಿ ಮಾರ್ಪಡಿಸುವ, ಅನಂತಕ್ಕೆ ತೆಕ್ಕೆ ಹಾಯುವ ಕನಸನ್ನಾಗಿ ಮಾರ್ಪಡಿಸುವ ಸಾಮರ್ಥ್ಯ ನಮ್ಮಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ವಿಜ್ಞಾನ ದಿನದಂದು (ಫೆ. 28) ನಮ್ಮ ಮುಂದಿರುವ ಸವಾಲು.
ನಮ್ಮ ಬ್ರಹ್ಮಾಂಡವು ಹೇಗೆ ಸದಾ ಆಗುತ್ತಿರುವ ಪ್ರಕ್ರಿಯೆಯೋ ಹಾಗೆಯೇ ನಮ್ಮ ಗ್ರಹಿಕೆಗಳೂ ಸದಾ ಆಗುತ್ತಿರುವ ಪ್ರಕ್ರಿಯೆಗಳೇ. ಶಿಕ್ಷಣ ಕೂಡ ಈ ಚಲನಶೀಲತೆಯನ್ನು ಗ್ರಹಿಸಲು ತನ್ನನ್ನು ಸನ್ನದ್ಧವಾಗಿ ಇರಿಸಿಕೊಳ್ಳ ಬೇಕು. ಇಲ್ಲವಾದರೆ ಅದು ಒಮ್ಮೆ ಗ್ರಹಿಸಿದ್ದನ್ನು ನಂಬಿಕೆಯಾಗಿ ಸ್ಥಿರೀಕರಿಸಿಕೊಂಡು ಸ್ಥಾಪಿಸುವ ಜಡ ವ್ಯವಸ್ಥೆಯಾಗಿ ಬಿಡುತ್ತದೆ. ತನ್ನ ಸಿದ್ಧಸೂತ್ರಗಳನ್ನು ಮತ್ತೆಮತ್ತೆ ಪುನರುಚ್ಚರಿಸುವ ಯಾಂತ್ರಿಕ ವಿಧಾನವಾಗಿಬಿಡುತ್ತದೆ. ಹೆಚ್ಚಿನ ಅಧ್ಯಾಪಕರು ಈ ‘ನಿರ್ಮಿತ’ ಸತ್ಯವನ್ನು ಅಚ್ಚುಕಟ್ಟಾಗಿ ಒಪ್ಪಿಸುವ, ಪರೀಕ್ಷಿಸುವ, ಪುನರುತ್ಪಾದಿಸುವ ವಿಧಾನವನ್ನೇ ಶೈಕ್ಷಣಿಕ ಸಾಮರ್ಥ್ಯ, ದಕ್ಷತೆ ಎಂಬ ಬಿಂಬವೊಂದನ್ನು ಗಾಢವಾಗಿ ಮೂಡಿಸಿಬಿಟ್ಟಿರುತ್ತಾರೆ. ಆದರೆ ಜ್ಞಾನವಲಯದಲ್ಲಿ ಹೊಸದನ್ನು ನಿರ್ಮಿಸಲು, ಅದನ್ನು ಹಿಗ್ಗಿಸಲು ಪೂರ್ವಗ್ರಹೀತಗಳನ್ನು ಆಗಾಗ ಕಳಚಿಕೊಳ್ಳಬೇಕಾಗುತ್ತದೆ. ಇದನ್ನೇ ‘ಅನ್ ಲರ್ನಿಂಗ್’ ಪ್ರಕ್ರಿಯೆ ಎನ್ನುತ್ತೇವೆ.
ಸದಾ ಹುಡುಕುತ್ತಿರುವ ಅನಿಶ್ಚಿತತೆಯಲ್ಲೇ ಹೊಸ ದಾರಿಗಳು ಹೊಳೆಯುತ್ತವೆ. ಇನ್ನೊಂದು ಜ್ಞಾನಶಾಖೆಯೊಂದಿಗಿನ ಅಂತಃಸಂಬಂಧಗಳು ಕಾಣತೊಡಗುತ್ತವೆ. ಇದಕ್ಕೆ ಅಪಾರ ಕಲ್ಪನಾಶಕ್ತಿ, ಅಂತಃಸಂಬಂಧಗಳನ್ನು ಕಾಣಬಲ್ಲ ದಾರ್ಶನಿಕ ಗುಣ ಬೇಕಾಗುತ್ತದೆ. ಇಂತಹ ತರಬೇತಿಯನ್ನು ತತ್ವಶಾಸ್ತ್ರ ಹಾಗೂ ಸಾಹಿತ್ಯವು ನೀಡಬಲ್ಲವು. ಉದಾಹರಣೆಗೆ, ಒಂದು ಕಲಾಕೃತಿಯನ್ನು ಸೃಷ್ಟಿಸುವಾಗ ಕಲ್ಪನೆ ಹಾಗೂ ವಾಸ್ತವವನ್ನು ಹೇಗೆ ಸಮ್ಮಿಳಿತಗೊಳಿಸಬೇಕೆಂಬುದು ಕಲಾವಿದರಿಗೆ ಗೊತ್ತಿರುತ್ತದೆ. ಮನುಷ್ಯರ ಮನಸ್ಸಿಗಿರುವ ವೈಚಾರಿಕ ಹಾಗೂ ಆಧ್ಯಾತ್ಮಿಕ ಸಾಧ್ಯತೆಯಿದು. ಕಾಲ, ದೇಶ ಹಾಗೂ ಇಂದ್ರಿಯಗಳ ಮಿತಿಗೆ ಒಳಪಟ್ಟ ಜ್ಞಾನವನ್ನು ಪ್ರಜ್ಞೆಯ ಅಂತಃಶಕ್ತಿಯ ಮೂಲಕ ಹಿಗ್ಗಿಸುವ ವಿಧಾನವೊಂದನ್ನು ನಾವು ನಮ್ಮ ಗ್ರಹಿಕೆಗಳಿಗೆ ಕಸಿಕಟ್ಟಿಕೊಳ್ಳುವ ಅಗತ್ಯವಿದೆ.
ಸರಳ ತರ್ಕಕ್ಕೆ ಒಗ್ಗಲಾರದ್ದೆಲ್ಲವನ್ನೂ ನಾವು ಕ್ಲಿಷ್ಟವೆನ್ನುತ್ತೇವೆ. ನಾವು ಇದುವರೆಗೂ ನಂಬಿಕೊಂಡು ಹೇಳುತ್ತ ಬಂದಿದ್ದಕ್ಕೆ ಇನ್ನೊಂದು ಆಯಾಮವೂ ಇರಬಹುದೆಂಬ ಬಹು ಆಯಾಮದ ಚಿಂತನೆಗೆ ನಾವು ಅನೇಕ ಸಲ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿರುವುದಿಲ್ಲ. ಉದಾ
ಹರಣೆಗೆ, ಕ್ವಾಂಟಂ ಫಿಸಿಕ್ಸನ್ನು ಕಷ್ಟವೆಂಬಂತೆ ನಿರೂಪಿಸುವುದೇ ಈ ಬಹು ವಿನ್ಯಾಸಗಳನ್ನು ಒಪ್ಪಿಕೊಳ್ಳಲಾಗದಂತೆ ಬೆಳೆದ ಮನಸ್ಸುಗಳು. ಕಾಲಬದ್ಧವಾದ ‘ಸ್ಥಿತಿ’ಯೊಂದು ಅನಂತದಲ್ಲಿ ಪರಿವರ್ತನೆಯಾಗುತ್ತಲೇ ಚಲಿಸುತ್ತದೆ ಎಂಬುದು ಕಾವ್ಯಾತ್ಮಕ ಸಾಧ್ಯತೆಯನ್ನು ತಿಳಿದವರಿಗೆ ಬೇಗ ಅರ್ಥವಾಗುತ್ತದೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು, ಓ... ಅನಂತವಾಗಿರು’ ಎಂಬುದನ್ನು ಒಳತಿಳಿವಿನಿಂದ ಅರಿಯಬಲ್ಲ ಪ್ರಜ್ಞೆಯದು. ತತ್ವಜ್ಞಾನ, ವಿಜ್ಞಾನ ಹಾಗೂ ಕಾವ್ಯಗಳು ಸಂಧಿಸುವ ದಾರಿಯಲ್ಲಿ ನಡೆದ ಅನೇಕರು ನಮ್ಮ ನಡುವೆ ಇದ್ದಾರೆ.
ಯಾವುದೇ ಜ್ಞಾನವು ಶಾಶ್ವತ ಗೂಡುಕಟ್ಟುವಿಕೆಯಾಗಬಾರದು. ಅಂಥ ಗೂಡಲ್ಲಿ ಕತ್ತಲು ಅಮರಿಕೊಳ್ಳುತ್ತದೆ. ಸದಾ ಬೆಳಕಿನ ದಾರಿಗಳೆಡೆ ತುಡಿಯುವುದು ವಿಜ್ಞಾನ. ಕಾವ್ಯ ಕೂಡ ಜೀವಂತಿಕೆಯ ಮೂಲಕವೇ ತನ್ನನ್ನು ವಿಸ್ತರಿಸಿಕೊಂಡು ಅಚ್ಚರಿ ಮೂಡಿಸುವ ಕಲೆಗಾರಿಕೆ. ತನ್ನನ್ನೇ ತಾನು ಮೀರುವ, ಮತ್ತೆಮತ್ತೆ ರಚಿಸಿಕೊಳ್ಳುವ ಕಲೆಯನ್ನು ಕಲಿಸದಿದ್ದರೆ ಬದುಕು ಜಡವಾಗುತ್ತದೆ. ಹಾಗೆ ನೋಡಿದರೆ ಗಣಿತ ಕೂಡ ಜಡವಲ್ಲ. ‘ಗಣಿತವೆಂದರೆ ವಿನ್ಯಾಸಗಳ ಹುಡುಕಾಟ’. ಇದು ನೇಯ್ಗೆಯಲ್ಲಿದೆ. ಕಸೂತಿಯಲ್ಲಿದೆ. ಹಾಗೆ ನೋಡಿದರೆ ಜಗತ್ತಿನ ಎಲ್ಲವೂ ಒಂದು ವಿನ್ಯಾಸ. ಅದನ್ನು ಗುರುತಿಸುವ, ಮೀರುವ, ಮರುಸೃಷ್ಟಿಸುವ ಆಟವೇ ಜ್ಞಾನ. ರಂಗೋಲಿ ಕೂಡ ಜ್ಯಾಮಿತಿಯ ಸೂತ್ರಗಳನ್ನು ಬಹು ಸುಲಭವಾಗಿ ವಿವರಿಸಬಲ್ಲದು. ಇದನ್ನೆಲ್ಲ ನೋಡಿದಾಗ, ಸ್ತ್ರೀಮನಸ್ಸು ಗಣಿತ ಹಾಗೂ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವ ವಿಧಾನವೇ ಬೇರೆಯೆನಿಸುತ್ತದೆ. ನಾವದನ್ನು ಶೈಕ್ಷಣಿಕ ಶಿಸ್ತಾಗಿ ರೂಪಿಸಿಕೊಂಡಿಲ್ಲ ಅಷ್ಟೆ. ಒಟ್ಟಿನಲ್ಲಿ ಜ್ಞಾನವನ್ನು ನಿರ್ಮಿಸಲು ಹಾಗೂ ಅದನ್ನು ಸಮುದಾಯಕ್ಕೆ ಹಂಚಲು ಬೇಕಾದ ಮೆಥಡಾಲಜಿಗಳನ್ನು ನಾವು ಸೃಜನಶೀಲವಾಗಿ ರೂಪಿಸಿಕೊಳ್ಳುವ ಅನಂತ ಸಾಧ್ಯತೆಗಳಿವೆ ಎಂದಾಯಿತು. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ, ನಾವು ರೂಪಿಸಿಕೊಳ್ಳುವ ಸಿಲೆಬಸ್ಸುಗಳು, ಬೋಧನಾ ವಿಧಾನಗಳನ್ನು ಮರುರೂಪಿಸಿಕೊಳ್ಳುವ ದಾರಿ ತೆರೆಯುತ್ತದೆ.
‘ಸತ್ಯದ ಅನ್ವೇಷಣೆಯನ್ನು ಮಾಡು, ಸತ್ಯವೇ ನಿನಗೆ ಸ್ವಾತಂತ್ರ್ಯ ಕೊಡಿಸುತ್ತದೆ’ ಎನ್ನುತ್ತಾರೆ ಅಬ್ದುಲ್ ಕಲಾಂ. ಸತ್ಯವು ವೈಯಕ್ತಿಕ ಕೊಳೆಯನ್ನು ಅಂಟಿಸಿಕೊಳ್ಳದ ಅಗ್ನಿ. ಸತ್ಯದ ಬೆಂಕಿಗೆ ಬಿದ್ದಾಗಲೇ ನಮಗೆ ಅಂಟಿಕೊಂಡ ಮಿತಿಗಳನ್ನೂ ಮಿಥ್ಯೆಗಳನ್ನೂ ಕರಗಿಸಿ ಶುದ್ಧಗೊಳ್ಳಲು ಸಾಧ್ಯ. ವಿಜ್ಞಾನವು ಪರೋಕ್ಷವಾಗಿ ಇದನ್ನು ಕಲಿಸಬಲ್ಲದೆಂಬುದೇ ನನ್ನ ಭಾವನೆ. ವಿಜ್ಞಾನವನ್ನು ಪದವಿಗಾಗಿ ಮಾತ್ರ ಓದದೇ ಪ್ರಜ್ಞೆಯ ಭಾಗವಾಗಿಸಿಕೊಂಡಾಗ ಸತ್ಯಕ್ಕೆ ಮುಖಾಮುಖಿಯಾಗುವ ಸ್ಥೈರ್ಯವು ಒದಗುತ್ತದೆ. ರೇಡಿಯಂ ಮೂಲಧಾತುವನ್ನು ಕಂಡುಹಿಡಿದು, ಅದನ್ನು ಶುದ್ಧವಾಗಿ ಪ್ರತ್ಯೇಕಿಸುವ ವಿಧಾನವನ್ನು ಕಂಡುಹಿಡಿದ ಮೇರಿ ಕ್ಯೂರಿ ‘ವಿಜ್ಞಾನವು ಜ್ಞಾನ ಪ್ರಸಾರದ ಸಾಧನ. ವಿಜ್ಞಾನಿ ತನ್ನ ಸಂಶೋಧನೆಯ ಫಲವನ್ನು ಮುಚ್ಚುಮರೆಯಿಲ್ಲದೇ ಪ್ರಕಟಿಸಬೇಕು. ನಮ್ಮ ಆವಿಷ್ಕರಣಕ್ಕೆ ಹಣದ ಸಾಧ್ಯತೆ ಇರುವುದು ಆಕಸ್ಮಿಕ. ರೇಡಿಯಂ ಮಾನವ ಸೇವೆಗೆ ಮೀಸಲಿದೆ’ ಎನ್ನುತ್ತಾ, ‘ಪೇಟೆಂಟ್ ಮಾಡುವುದು ವೈಜ್ಞಾನಿಕ ಪ್ರವೃತ್ತಿಗೆ ವಿರುದ್ಧ’ ಎನ್ನುತ್ತಾರೆ. ಜ್ಞಾನದ ಅಧಿಕಾರ, ಮಾರಾಟ ಹಾಗೂ ಲಾಭಕೋರತನದ ವಿರುದ್ಧ ತಾತ್ವಿಕ ಬಂಡಾಯವಿದು.
ಕೊನೆಯಲ್ಲಿ, ವಿಶ್ವಮಟ್ಟದಲ್ಲಿ ಜನಾಂಗಗಳ ನಡುವೆ ಸಾಮರಸ್ಯವನ್ನು ಸಾಧಿಸಲು, ಸ್ಥಳೀಯ ನೆಲೆಯಲ್ಲಿ ಉತ್ತಮ ಸಮಾಜವೊಂದನ್ನು ನಿರ್ಮಿಸಲು ವಿಜ್ಞಾನವು ಏನು ಸಹಾಯ ಮಾಡಬಲ್ಲದು ಎಂಬ ಪ್ರಶ್ನೆಯೊಂದು ಮೂಡುತ್ತದೆ. ಏಕೆಂದರೆ, ಯಾವುದೇ ಜ್ಞಾನದ ಉತ್ಕರ್ಷವಾಗುವುದು ವೈಯಕ್ತಿಕ ಸ್ಪರ್ಶದಿಂದಲೇ. ಇದು ಕೂಡ ಶಿಕ್ಷಣದ ಗುರಿಯೇ. ವಿಜ್ಞಾನದ ಶಕ್ತಿಯನ್ನು ವಿವೇಕದಿಂದ ಬಳಸಿಕೊಳ್ಳದಿದ್ದರೆ ಅದು ನಮ್ಮನ್ನು ಕತ್ತಲಿಗೆ ತಳ್ಳಬಹುದು ಎಂಬುದನ್ನೂ ನಮಗೆ ಇತಿಹಾಸವು ತೋರಿಸಿಕೊಟ್ಟಿದೆ. ನಮ್ಮ ವಿಕಾಸವು ವಿವೇಕಪೂರ್ಣ ಜ್ಞಾನದಲ್ಲಿದೆಯೇ ವಿನಾ ಜ್ಞಾನದ ಅಹಂಕಾರದಲ್ಲಿಲ್ಲ. ಎಂಥ ಅದ್ಭುತ ತಂತ್ರಜ್ಞಾನವೂ ನೈತಿಕ ಮೌಲ್ಯದ ಉಸಿರು ಪಡೆಯದಿದ್ದರೆ ವಿನಾಶಕಾರಿಯಾಗುತ್ತದೆ. ವಿಜ್ಞಾನವನ್ನು ರಾಷ್ಟ್ರೀಯತೆಯ ಚಿಪ್ಪಿನಲ್ಲಿ ಹುದುಗಿಸುವುದು ಕೂಡ ಅವಿವೇಕವೇ.
ಜನಾಂಗ, ಜಾತಿ, ಧರ್ಮಗಳ ಹೆಸರಿನಲ್ಲಿ ಧ್ರುವೀಕರಣಗೊಳ್ಳುತ್ತಾ ಹಿಂಸೆಗೆ ಕಾರಣವೂ ಅದರ ಬಲಿಪಶುಗಳೂ ಆಗುವ ನಾವು, ವಿಜ್ಞಾನದ ವಿಶ್ವಾತ್ಮಕ ಭಾಷೆಯೊಂದನ್ನು ಕಲಿಯಬೇಕಾಗಿದೆ. ಬ್ರಹ್ಮಾಂಡದಲ್ಲಿರುವ ಸಾಮರಸ್ಯದ ಕೇಂದ್ರವೊಂದು ವಿಜ್ಞಾನದ ಮೂಲಕ ನಮ್ಮೆದೆಗಳಿಗೆ ಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.