ADVERTISEMENT

ವಿಜ್ಞಾನ ವಿಶೇಷ: ಈಗಿನದೂ ಡಬಲ್‌ ಎಂಜಿನ್‌ ಸರ್ಕಾರ!

ಪ್ರಕೃತಿಯ ಧ್ವಂಸಕಾರ್ಯದಲ್ಲಿ ಕೇಂದ್ರದ ಜೊತೆ ಕೈಜೋಡಿಸಿದಂತಿದೆ ಕರ್ನಾಟಕ

ನಾಗೇಶ ಹೆಗಡೆ
Published 14 ನವೆಂಬರ್ 2024, 0:21 IST
Last Updated 14 ನವೆಂಬರ್ 2024, 0:21 IST
   

ಆಕಾಶದಲ್ಲಿ ಈಗ ಉಲ್ಕೆಗಳ ಸುರಿಮಳೆ ಆಗುತ್ತಿದೆ. ಅವು ವೃಷಭ ರಾಶಿಯಿಂದ ಬರುತ್ತಿರುವಂತೆ ಕಾಣುವುದರಿಂದ ಅದಕ್ಕೆ ವೃಷಭ ಉಲ್ಕಾಪಾತ (ಟಾರಿಡ್‌ ಮಿಟಿಯೊರ್‌ ಶಾವರ್‌) ಎನ್ನುತ್ತಾರೆ. ಪ್ರತಿ 3.3 ವರ್ಷಗಳಿಗೊಮ್ಮೆ ಸೂರ್ಯನ ಪ್ರದಕ್ಷಿಣೆ ಹಾಕಿ ಹೋಗುವ ‘ಎನ್ಕಿ’ ಹೆಸರಿನ ಧೂಮಕೇತು ತನ್ನ ತಲೆಯಲ್ಲಿನ ದೂಳು ಮತ್ತು ಹಿಮಕಣ ಗಳನ್ನು ಚೆಲ್ಲುತ್ತ ಸಾಗುತ್ತಿರುತ್ತದೆ. ಭೂಮಿ ತನ್ನ ಪಾಡಿಗೆ ತಾನು ಸುತ್ತುತ್ತ ವೃಷಭ ರಾಶಿಯ ಬಳಿ ಬಂದಾಗ ಅಲ್ಲಿ ಚೆಲ್ಲಾಡಿದ ದೂಳು ಕಣಗಳನ್ನೆಲ್ಲ ಹೀರುತ್ತ ಸಾಗುತ್ತದೆ. ಆದರೆ ಅಂಥ ಕಣಗಳೆಲ್ಲ ನೆಲಕ್ಕೆ ತಲುಪುವ ಮೊದಲೇ ವಾತಾವರಣದ ಘರ್ಷಣೆಗೆ ಉರಿದು ಬೂದಿಯಾಗುತ್ತವೆ. ಹೀಗಿದ್ದರೂ ಅಕಸ್ಮಾತ್‌ ಬುಟ್ಟಿಗಾತ್ರದ ಹಿಮದ ತುಂಡೊಂದು ಭೂಮಿಗೆ ಅಪ್ಪಳಿಸಿದರೂ ಭಾರೀ ದುರಂತ ಆಗಬಹುದಾಗಿದೆ. ಆಗಿಲ್ಲ, ಅದು ನಮ್ಮ ಅದೃಷ್ಟ.

ಈ ದಿನಗಳಲ್ಲೇ ಅಜರ್‌ಬೈಜಾನ್‌ ದೇಶದ ರಾಜಧಾನಿ ‘ಬಾಕು’ ನಗರದಲ್ಲಿ ಇನ್ನೊಂದು ಬಗೆಯ (ಮಾತಿನ) ಸುರಿಮಳೆ ನಡೆದಿದೆ. ಭೂಮಿಯನ್ನು ಬಿಸಿಪ್ರಳಯದ ಗಂಡಾಂತರದಿಂದ ಪಾರು ಮಾಡುವುದು ಹೇಗೆಂಬ ಬಗ್ಗೆ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖರೂ ವರ್ಷಕ್ಕೊಮ್ಮೆ ಒಂದೆಡೆ ಸೇರುತ್ತಿದ್ದಾರೆ ತಾನೆ? ಆ ಸರಣಿಯ 29ನೇ ಸಭೆ (ಕಾಪ್‌29) ನವೆಂಬರ್‌ 11ರಿಂದ ಹತ್ತು ದಿನಗಳ ಕಾಲ ನಡೆಯಲಿದೆ. ಈ ವರ್ಷವಂತೂ ಬಿರುಬೇಸಿಗೆ, ಜಡಿಮಳೆ, ಚಂಡಮಾರುತ, ಹಿಮಪಾತಗಳು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿವೆ. ಕಳೆದ 10 ಸಾವಿರ ವರ್ಷಗಳಲ್ಲಿ ಇಂಥ ಪ್ರಳಯಾಂತಕ ಸಂಚಲನ ಎಂದೂ ನಡೆದಿರಲಿಲ್ಲ ಎಂದೂ ‘ನಾಸಾ’ ಸಂಸ್ಥೆ ಹೇಳಿದೆ. ಯಾವ ಯಾವ ದೇಶ ಏನೇನು ಕ್ರಮಗಳನ್ನು ಸ್ವಇಚ್ಛೆಯಿಂದ ಕೈಗೊಳ್ಳಬೇಕು ಎಂಬುದರ ಬಗ್ಗೆ 2015ರಲ್ಲಿ ಘೋಷಿಸಲಾಗಿದ್ದ ‘ಪ್ಯಾರಿಸ್‌ ಒಪ್ಪಂದ’ವನ್ನು ಯಾವ ದೇಶವೂ ಪಾಲಿಸುತ್ತಿಲ್ಲ. ಬಡದೇಶಗಳಿಗೆ ಬಿಸಿಪ್ರಳಯದಿಂದ ಬಚಾವಾಗಲು ಶ್ರೀಮಂತ ದೇಶಗಳು ವಂತಿಗೆ ನೀಡಬೇಕೆಂಬ ಒಪ್ಪಂದವನ್ನು ಅನೇಕ ರಾಷ್ಟ್ರಗಳು ಪಾಲಿಸುತ್ತಿಲ್ಲ. ಪೃಥ್ವಿಯ ರಕ್ಷಣೆಗೆ ನಾವೆಲ್ಲ ಕಟಿಬದ್ಧ ಆಗಬೇಕೆಂದು ವರ್ಷವರ್ಷವೂ ಭಾಷಣ ಮಾಡುತ್ತಿದ್ದ ಕೆಲವು ಪ್ರಮುಖ ದೇಶಗಳ ನಾಯಕರು ಈ ಬಾರಿಯ ಸಮ್ಮೇಳನಕ್ಕೆ ಹಾಜರಾಗುತ್ತಿಲ್ಲ.

ಈ ಮಧ್ಯೆ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಪಮಾನ ಏರಿಕೆ ಎಂಬುದೇ ಸುಳ್ಳೆಂದು ವಾದಿಸುತ್ತ ಬಂದ ಈ ಮಹಾಶಯ, ಹಿಂದಿನ ಬಾರಿ ಅಧ್ಯಕ್ಷರಾಗಿದ್ದಾಗ ಪ್ಯಾರಿಸ್‌ ಒಪ್ಪಂದವನ್ನೇ ಧಿಕ್ಕರಿಸಿದ್ದರು. ನಂತರ ಬಂದ ಬೈಡನ್‌ ನೇತೃತ್ವದ ಸರ್ಕಾರ ಆ ಒಪ್ಪಂದಕ್ಕೆ ಮತ್ತೆ ಮಾನ್ಯತೆ ನೀಡಿತ್ತು. ಈಗಿನ ಟ್ರಂಪ್‌ 2 ಅವಧಿಯಲ್ಲಿ ಪುನಃ ಪೆಟ್ರೊಧನಿಕರದ್ದೇ ಮೇಲುಗೈ ಆಗಲಿದೆ ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತಿವೆ. ತಾಪಮಾನ ಏರಿಕೆಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ದೇಶವೇ ಹೀಗೆ ಜಾಗತಿಕ ಒಪ್ಪಂದವನ್ನು ಧಿಕ್ಕರಿಸುತ್ತಿದ್ದರೆ ಪ್ರಳಯಕಾಲ ದೂರವಿಲ್ಲ ಎಂಬಂತಾಗಿದೆ. ಬಾಕು ಸಮ್ಮೇಳನದ ಸಂದರ್ಭದಲ್ಲಿ ಟ್ರಂಪ್‌ ಎಂಬ ಧೂಮಕೇತು ಭೂಮಿಯತ್ತ ಧಾವಿಸುತ್ತಿರುವಂತೆ ವ್ಯಂಗ್ಯ ಚಿತ್ರಕಾರ ಸುಜಿತ್‌ ಕುಮಾರ್‌ ಬರೆದ ಕಾರ್ಟೂನ್‌ ಮೊನ್ನೆ ‘ಡೆಕ್ಕನ್‌ ಹೆರಾಲ್ಡ್‌’ನಲ್ಲಿ ಪ್ರಕಟವಾಗಿತ್ತು.

ADVERTISEMENT

ಅದು ಜಾಗತಿಕ ವಿದ್ಯಮಾನವಾದರೆ ನಮ್ಮ ದೇಶದ ಚಿತ್ರ ಏನು? ಇದುವರೆಗಿನ ಅತ್ಯಂತ ಉಗ್ರ ಬಿಸಿಗಾಳಿ, ಕಠೋರ ಬೇಸಿಗೆ ಮತ್ತು ಮಹಾಮಳೆಯನ್ನು ದಿಲ್ಲಿಯೇ ಈ ವರ್ಷ ನೋಡಿದೆ. ದಿಲ್ಲಿಯ ಸಚಿವೆಯಾಗಿದ್ದ, ಈಗ ಮುಖ್ಯಮಂತ್ರಿಯಾಗಿರುವ ಆತಿಷಿ ಕುಡಿಯುವ ನೀರಿಗಾಗಿ ಉಪವಾಸ ಕೂತೆದ್ದ ದಿನವೇ ಪ್ರಚಂಡ ಮಳೆ ಸುರಿದು ಟ್ಯಾಂಕರ್‌ಗಳನ್ನೂ ಮುಳುಗಿಸಿತ್ತು. ಯಮುನೆ ಉಕ್ಕೇರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲಿಗೆ ಬಂದಿತ್ತು. ನವನವೀನ ಸಂಸತ್‌ ಭವನದಲ್ಲೂ ನೀರು ಸೋರಿತ್ತು. ಈಗಂತೂ ಹೊಗೆ ಮತ್ತು ಮಂಜು (ಹೊಂಜು) ಜೊತೆಗೆ ಪಟಾಕಿ ಸುಡುಮಾರಿಗಳ ಅಬ್ಬರದಿಂದಾಗಿ ಗಾಳಿಯ ಗುಣಮಟ್ಟ ಇಡೀ ದೇಶವೇ ನಾಚಿಕೆಯಿಂದ ತಲೆತಗ್ಗಿಸಿ ನೋಡುವಷ್ಟು ಕೆಳಕ್ಕೆ ಕುಸಿದಿದೆ. ದೇಶದ ಇತರ ಭಾಗಗಳಲ್ಲಿ ಸೇತುವೆ ಕುಸಿತ, ಭೂಕುಸಿತದ ಕಥನಗಳು ನಮಗೆ ಗೊತ್ತೇ ಇವೆ. ಸರ್ಕಾರಿ ಅಂಕಿ ಅಂಶಗಳನ್ನೇ ಆಧರಿಸಿ ‘ಡೌನ್‌ ಟು ಅರ್ಥ್‌’ ಪತ್ರಿಕೆ ನೀಡಿದ ವಿಶ್ಲೇಷಣೆಯ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ವರೆಗಿನ ಮೊದಲ 274 ದಿನಗಳಲ್ಲಿ 255 (ಅಂದರೆ ಶೇ 93) ದಿನಗಳಲ್ಲಿ ದೇಶದ ಒಂದಲ್ಲ ಒಂದು ಕಡೆ ಅತಿ ವಿಪರೀತ ಘಟನೆಗಳು ಜರುಗಿವೆ. ಒಟ್ಟು 3,200 ಜನರ, 9,800 ಜಾನುವಾರುಗಳ ಜೀವ ಹೋಗಿದೆ; 32 ಲಕ್ಷ ಹೆಕ್ಟೇರಿನ ಪೈರುಫಸಲು ನಾಶವಾಗಿದೆ. 236 ಸಾವಿರ ಮನೆಗಳು ಕುಸಿದಿವೆ.

ಪ್ರಧಾನಿ ನರೇಂದ್ರ ಮೋದಿಯವರು ಬಾಕು ಸಮ್ಮೇಳನಕ್ಕೆ ಹೋಗುತ್ತಿಲ್ಲ. ಚುನಾವಣೆಯ ಕಾವು ಇಲ್ಲಿ ಇಷ್ಟೆಲ್ಲ ಇರುವಾಗ ಭೂಮಿಯ ಕಾವಿನ ಬಗ್ಗೆ ಮಾತಾಡಲು ಯಾರಿಗೆ ಪುರಸತ್ತಿದೆ? ಗ್ಲಾಸ್ಗೋ (Cop26) ಸಮ್ಮೇಳನ ದಲ್ಲಿ ನಮ್ಮ ಪ್ರಧಾನಿ ಭೂಮಿಯ ರಕ್ಷಣೆಯ ಬಗ್ಗೆ ಅತ್ಯಂತ ಭಾವುಕವಾಗಿ ಮಾತಾಡಿ ‘ಪಂಚಾಮೃತ’ ಘೋಷಣೆಯನ್ನು ಕೊಟ್ಟರು. 2030ರ ವೇಳೆಗೆ ಒಂದು ಶತಕೋಟಿ ಟನ್‌ ಇಂಗಾಲವನ್ನು ಭಾರತ ಕಡಿಮೆ ಮಾಡುತ್ತದೆಂಬುದು ಆ ಐದು ಅಮೃತ ಘೋಷಣೆಗಳಲ್ಲಿ ಒಂದಾಗಿತ್ತು. ವಾಸ್ತವ ಏನೆಂದರೆ, ಕಲ್ಲಿದ್ದಲ ಬಳಕೆ ಹಿಂದೆಂದಿಗಿಂತ ಹೆಚ್ಚುತ್ತಿದೆ. ಹಿಂದೆಲ್ಲ ಸರ್ಕಾರಿ ಸಂಸ್ಥೆಯೇ ದೇಶದ ಬಹುಪಾಲು ಕಲ್ಲಿದ್ದಲನ್ನು (ಶೇ 95) ಗಣಿಯಿಂದ ಎತ್ತುತ್ತಿತ್ತು. ಪರಿಸರ ರಕ್ಷಣೆಯ ಕಾನೂನುಗಳನ್ನು ತಕ್ಕಮಟ್ಟಿಗೆ ಪಾಲಿಸುತ್ತ, ಅರಣ್ಯ ಇಲ್ಲದಲ್ಲೇ ಗಣಿಗಾರಿಕೆ ನಡೆಯುತ್ತಿತ್ತು. ಈಗ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದ್ದರಿಂದ ದಟ್ಟಡವಿಯನ್ನೂ ಧ್ವಂಸ ಮಾಡಿ ಲಂಗುಲಗಾಮಿಲ್ಲದೆ ಕಲ್ಲಿದ್ದಲನ್ನು ಎತ್ತಲಾಗುತ್ತಿದೆ. ‘ದಿ ವಯರ್‌’ ಪತ್ರಿಕೆ ನಡೆಸಿದ ತನಿಖಾ ವರದಿಯ ಪ್ರಕಾರ, ಛತ್ತೀಸಗಢದ ದಟ್ಟ ಕಾಡಿನಲ್ಲಿ ಕಲ್ಲಿದ್ದಲ ಗಣಿಗಾರಿಕೆಗೆ (2014ರಲ್ಲಿ ಸುಪ್ರೀಂ ಕೋರ್ಟ್‌ ನಿಷೇಧಿಸಿತ್ತಾದರೂ) ಕೋವಿಡ್‌ ಅವಧಿಯಲ್ಲಿ ಅದಾನಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಹಸ್‌ದೇವ್‌ ಬ್ಲಾಕ್‌ ಎಂಬಲ್ಲಿ ಗಗನಚುಂಬಿ ಸಾಲ್‌ ಮರಗಳಿಂದ, ವನ್ಯಜೀವಿ ಗಳಿಂದ ಸಮೃದ್ಧವಾಗಿದ್ದ ತಾಣ ಬಟಾಬಯಲಾಗಿದೆ. ಕೇಟೆ ಎಂಬ ಗ್ರಾಮವೇ ನಾಮಾವಶೇಷವಾಗಿದೆ. 1,876 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಇನ್ನೆರಡು ನಿಕ್ಷೇಪಗಳನ್ನು ಅಗೆಯಲು ಸಿದ್ಧತೆ ನಡೆದಿದೆ.

ಇತ್ತ ಮಹಾರಾಷ್ಟ್ರದಲ್ಲಿ ದಟ್ಟ ಅರಣ್ಯದ, ಆದಿವಾಸಿಗಳ ನೆಲೆವೀಡೆಂದೇ ಪ್ರಸಿದ್ಧವಾದ ಗಡ್‌ಚಿರೋಲಿ ಜಿಲ್ಲೆಯಲ್ಲಿ ದೇಶದ ಅತಿ ದೊಡ್ಡ ಉಕ್ಕಿನ ಸ್ಥಾವರ ಸಂಕೀರ್ಣವನ್ನು ನಿರ್ಮಿಸುವ ಘೋಷಣೆ ಹೊಮ್ಮಿದೆ. ಸಂಡೂರಿನ ಅರಣ್ಯದಲ್ಲಿ ಕುದುರೆಮುಖ ಕಂಪನಿಗೆ ಕಬ್ಬಿಣದ ಅದಿರಿನ ಗಣಿಗಾರಿಕೆಗೆ ಅನುಮತಿ ನೀಡುವುದಾಗಿ ಕುಮಾರಸ್ವಾಮಿಯವರು ಬೃಹತ್‌ ಉದ್ಯಮ ಸಚಿವರಾದ ಹೊಸದರಲ್ಲೇ ಘೋಷಿಸಿದ್ದಾರೆ. ರಾತ್ರಿಯಲ್ಲೂ ಗಣಿಗಾರಿಕೆ ನಡೆಸಬೇಕೆಂಬ ದುರ್ಬುದ್ಧಿ ಕೆಲವರಿಗೆ ಬಂದಂತಿದೆ. ಕಾವೇರಿ ವನ್ಯಧಾಮ ಧ್ವಂಸವಾದರೂ ಸರಿಯೆ, ಮೇಕೆದಾಟು ಅಣೆಕಟ್ಟು ಆಗಬೇಕೆನ್ನುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೀಗ ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣಕ್ಕೂ ಅನುಮತಿ ಗಿಟ್ಟಿಸುವ ದಿಸೆಯಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ಸಹಕರಿಸುವುದಾಗಿ ಹೇಳಿದ್ದಾರೆ. ಹಿಂದೆ ವಯನಾಡಿನ ಸಂಸದರಾಗಿದ್ದ ರಾಹುಲ್‌ ಗಾಂಧಿ ಕೂಡ ಕೇರಳ ಸರ್ಕಾರದ ಒತ್ತಾಯಕ್ಕೆ ಕಟ್ಟುಬಿದ್ದು ಬಂಡೀಪುರದ ವನ್ಯಜೀವಿಗಳನ್ನು ಹೆದ್ದಾರಿಯಲ್ಲಿ ಹೊಸಕಲು ಹೊರಟಿದ್ದರು. ಅದಕ್ಕೂ ಮೊದಲು ಒಡಿಶಾದ ನಿಯಾಮಗಿರಿಯಲ್ಲಿ ವೇದಾಂತ ಕಂಪನಿಗೆ ಬಾಕ್ಸೈಟ್‌ನ (ಅಲ್ಯೂಮಿನಿಯಂ ಅದುರಿನ) ಗಣಿಗಾರಿಕೆಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಅನುಮತಿ ನೀಡಿದಾಗ ಅಲ್ಲಿಗೆ ಹೋಗಿ ಆದಿವಾಸಿಗಳ ಬೆಂಬಲಕ್ಕೆ ನಿಂತಿದ್ದ ರಾಹುಲ್‌ ಗಾಂಧಿ ಇವರೇನೇ ಎಂಬಷ್ಟರ ಮಟ್ಟಿಗೆ ಇವರು ಬದಲಾಗಿದ್ದು ಹೇಗೊ?

ಒಟ್ಟಿನಮೇಲೆ, ಮತ ಹಾಕಲಾರದ ಕಾಡಿನ ಜೀವಿಗಳ ರಕ್ಷಣೆಯ ಪ್ರಶ್ನೆ ಬಂದಾಗ ಅಥವಾ ಮತದಾನದ ಹಕ್ಕು ಇನ್ನೂ ಬಂದಿಲ್ಲದ ಎಳೆಯರ ಭವಿಷ್ಯದ ಪ್ರಶ್ನೆ ಬಂದಾಗ ಎಲ್ಲ ಧುರೀಣರೂ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಯಾಕೊ? ಅಭಿವೃದ್ಧಿಯ ಮಹಾರಥದ ಸವಾರಿ ಮಾಡುವ ಧಾವಂತದಲ್ಲಿ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಸೇರಿ ಡಬಲ್‌ ಎಂಜಿನ್‌ ಸರ್ಕಾರವೇ ಆಗಿರುತ್ತದೆ.

ಹೀಗಿರುವಾಗ, ಬಾಕು ಸಮ್ಮೇಳನದಲ್ಲಿ ಮಾತಾಡಲು ಬಾಕಿ ಏನಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.