ಕೆನಡಾದ ‘ಅಥಾಬಸ್ಕಾ’ ತೈಲನಿಕ್ಷೇಪದ ಹೆಸರನ್ನು ನಾವೆಲ್ಲ ಕೇಳಿರುತ್ತೇವೆ. ಇಡೀ ಕರ್ನಾಟಕದಷ್ಟು ವಿಸ್ತಾರದ ಭೂಮಿಯಲ್ಲಿ ನೂರು ಮೀಟರ್ ಆಳದವರೆಗೆ ಕಚ್ಚಾತೈಲ ಅಲ್ಲಿ ಮರಳು ಮಿಶ್ರಿತ ಡಾಂಬರ್ ಥರಾ ಹಾಸಿಕೊಂಡಿದೆ. ಭೀಮಗಾತ್ರದ ಅದೆಷ್ಟೊ ಸಾವಿರ ಯಂತ್ರಗಳು ಅಲ್ಲಿ ಪ್ರತಿದಿನ ಸರಾಸರಿ ಒಂದೊಂದು ಕೋಟಿ ಟನ್ ಮರಳನ್ನು ಎತ್ತಿ ಮಗುಚಿ, ಬಿಸಿ ಮಾಡಿ, ಹಿಂಡಿ, ಸುಮಾರು 40 ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ತೆಗೆಯುತ್ತಿವೆ. ಜಗತ್ತಿನ ಎಲ್ಲ ನದಿಗಳೂ ಒಟ್ಟಾಗಿ ಸಮುದ್ರಕ್ಕೆ ಸಾಗಿಸುವ ಹೂಳಿಗಿಂತ ಜಾಸ್ತಿ ಮರಳನ್ನು ಹೊರಳಿಸುತ್ತ ಈ ಯಂತ್ರಗಳು ಅಲ್ಲಿ ಹೊಗೆ, ಕೆಸರು, ಕೆಮಿಕಲ್‌ಗಳನ್ನು ವಾತಾವರಣಕ್ಕೆ ತಳ್ಳುತ್ತ ಭೂಮಿಯ ಅತಿ ದೊಡ್ಡ ಶಾಶ್ವತ ರಣರಂಗವೆಂಬ ಕುಖ್ಯಾತಿಗೆ ಕಾರಣವಾಗಿವೆ.
ಪೈನ್ ಅರಣ್ಯಗಳ ಸತತ ನಾಶ, ನದಿ-ಕೆರೆಗಳ ಗಂಧಕದ ವಿಷಮಡುಗಳಲ್ಲಿ ಜಲಚರಗಳ ನಾಶ, ವಲಸೆ ಪಕ್ಷಿಗಳ ಸಾಮೂಹಿಕ ಸಾವು, ಎಸ್ಕಿಮೊಗಳಂತಿರುವ ಆದಿವಾಸಿಗಳ ಪ್ರತಿಭಟನೆಯ ಕೂಗು ಯಾವುದೂ ಹೊರಜಗತ್ತಿಗೆ ಕೇಳಿಸದು. ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ವಿಸ್ತೀರ್ಣದಲ್ಲಿ ಸದ್ಯಕ್ಕೆ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿ ಇನ್ನೂ 150 ವರ್ಷಗಳವರೆಗೂ ಇದೇ ಪ್ರಮಾಣದಲ್ಲಿ ಡಾಂಬರನ್ನು ಬಾಚುತ್ತಲೇ ಹೋಗಬಹುದು. ಅತ್ತ ಸಮರೋಪಾದಿಯಲ್ಲಿ ತೈಲ ಗಣಿಗಾರಿಕೆ ನಡೆಯುತ್ತಿದ್ದರೆ ಇತ್ತ ಪ್ರಳಯೋಪಾದಿಯಲ್ಲಿ ಬೆಂಗಳೂರಿನ ಮಹಾಮಳೆ, ಚೀನಾದ ಘೋರ ಬಿಸಿಲು, ಪಾಕಿಸ್ತಾನದ ಜಲಪ್ರಳಯ, ಐರೋಪ್ಯ ದೇಶಗಳ ಕಡುಬೇಸಿಗೆ, ಅಮೆರಿಕದ ಚಂಡಮಾರುತಗಳ ರೂಪದಲ್ಲಿ ನಿಸರ್ಗದ ರುದ್ರನರ್ತನ ನಡೆಯುತ್ತಿದೆ.
ಅಥಾಬಸ್ಕಾ ನಿಕ್ಷೇಪವನ್ನೇ ಹೋಲುವ ಡಾಂಬರು ನಿಧಿಗಳು ವೆನೆಜುವೆಲಾ ದೇಶದಲ್ಲೂ ಸೌದಿ ಅರೇಬಿಯಾದಲ್ಲೂ ಇವೆ; ಸದ್ಯ ಅವು ನಿದ್ರಿತ ಸ್ಥಿತಿಯಲ್ಲಿವೆ; ಏಕೆಂದರೆ ಅದಕ್ಕಿಂತ ಜಾಸ್ತಿ ಕಚ್ಚಾ ತೈಲವನ್ನು ಅಲ್ಲಿನ ಕೊಳವೆ ಬಾವಿಗಳು ಮೇಲೆತ್ತಿ ವಿತರಿಸುತ್ತ ಜಗತ್ತನ್ನು ನಡೆಸುತ್ತಿವೆ. ಆದರೆ ಅಥಾಬಸ್ಕಾ ರಣರಂಗವನ್ನೇ ಹೋಲುವ ಬೃಹತ್ ಕಲ್ಲಿದ್ದಲ ಗಣಿಗಳು ಅಮೆರಿಕ, ಚೀನಾ ಮತ್ತು ಆಸ್ಟ್ರೇಲಿಯಾಗಳಲ್ಲಿ ನಿಸರ್ಗದ ಮೇಲೆ ನಿತ್ಯ ಬಾಂಬಿಂಗ್ ನಡೆಸುತ್ತಿವೆ. ನಮ್ಮದೇ ಛತ್ತೀಸಗಡದಲ್ಲಿ ಏಷ್ಯದ ಅತಿ ದೊಡ್ಡದೆನಿಸಿದ ‘ಗೇವ್ರಾ’ ಕಲ್ಲಿದ್ದಲ ಗಣಿಯನ್ನೂ ಅದೇ ಸಾಲಿಗೆ ಸೇರಿಸಬಹುದು.
ಎಲ್ಲ ಭೂಖಂಡಗಳಲ್ಲಿ ಹೆಚ್ಚುತ್ತಿರುವ ನೈಸರ್ಗಿಕ ಉತ್ಪಾತಗಳಿಗೆಲ್ಲ ನಾವು ಉರಿಸುತ್ತಿರುವ ತೈಲ, ಅನಿಲ ಮತ್ತು ಕಲ್ಲಿದ್ದಲಿನಂಥ ಫಾಸಿಲ್ ಇಂಧನಗಳೇ ಕಾರಣ ಎಂದು ವಿಜ್ಞಾನಿಗಳು ಪದೇಪದೇ ಎಚ್ಚರಿಸುತ್ತಿದ್ದಾರೆ. ‘2030ರೊಳಗೆ ನಾವು ಇಂಥ ಇಂಧನಗಳ ಬಳಕೆಯನ್ನು ಅರ್ಧಕ್ಕರ್ಧ ಇಳಿಸದಿದ್ದರೆ ಈ ಗ್ರಹ ವಾಸಯೋಗ್ಯ ಇರಲಾರದು’ ಎಂದು ಐಪಿಸಿಸಿ ವಿಜ್ಞಾನಿಗಳು ಖಡಕ್ಕಾಗಿ ಹೇಳಿದ್ದಾರೆ (ಐಪಿಸಿಸಿ ಎಂದರೆ ಭೂಮಿಯ ಹವಾಗುಣ ಬದಲಾವಣೆಯ ಅಧ್ಯಯನಕ್ಕೆಂದೇ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಕೆಲಸ ಮಾಡಲೆಂದು ವಿವಿಧ ದೇಶಗಳಿಂದ ನೇಮಕಗೊಂಡ ವಿಜ್ಞಾನಿಗಳ ಸಮೂಹ).
ಫಾಸಿಲ್ ಇಂಧನಗಳ ಬಳಕೆಯನ್ನು ನಿಲ್ಲಿಸುವುದು ಹಾಗಿರಲಿ, ಕಡಿತಗೊಳಿಸುವುದೂ ಭಾರೀ ಕ್ಲಿಷ್ಟದ ಕೆಲಸ. ಆದರೂ ಈ ಕೊಳಕು ಇಂಧನಗಳ ಬಳಕೆಗೆ ಕಡಿವಾಣ ಹಾಕಬೇಕೆಂದು ಎಲ್ಲ ದೇಶಗಳೂ ಇದುವರೆಗೆ 26 ಬಾರಿ ಸಭೆ ಸೇರಿ ಚರ್ಚೆ ನಡೆಸಿವೆ. ಅದ್ಧೂರಿಯ ಶೃಂಗಸಭೆಗಳಲ್ಲಿ ಮಹಾನ್ ನಾಯಕರು ಭಾಷಣದ ಹೊಳೆ ಹರಿಸಿದ್ದಾರೆ. ‘ಭೂಮಿಯ ತಾಪಮಾನ 1.5 ಡಿಗ್ರಿ ಸೆ.ಗಿಂತ ಹೆಚ್ಚಾಗಲು ಬಿಡಬಾರದು; ಬಿಡುವುದಿಲ್ಲ’ ಎಂದು ಕಳೆದ ನವೆಂಬರಿನಲ್ಲಿ ಬ್ರಿಟನ್ನಿನ ಗ್ಲಾಸ್ಗೊದಲ್ಲಿ ನಡೆದ 26ನೇ ಶೃಂಗಸಭೆಯಲ್ಲಿ ಎಲ್ಲ ರಾಷ್ಟ್ರಗಳು ಪ್ರತಿಜ್ಞೆ ಮಾಡಿವೆ.
ಪ್ರತಿವರ್ಷ 40 ಶತಕೋಟಿ ಟನ್ ಸಿಓಟು (ಕಾರ್ಬನ್ ಡೈಆಕ್ಸೈಡ್) ಅನಿಲ ವಾಯುಮಂಡಲಕ್ಕೆ ಸೇರುತ್ತಿದೆ. ಕ್ರಮೇಣ ಅದನ್ನು 40-30-20 ಹೀಗೆ ಕಡಿಮೆ ಮಾಡುತ್ತ ಇನ್ನು ಮೂರು ದಶಕಗಳಲ್ಲಿ 10 ಶತಕೋಟಿ ಟನ್‌ಗೆ ಇಳಿಸಬೇಕು. ಆದರೆ ಆಗಿದ್ದೇನು? ವಾಸ್ತವ ಏನೆಂದು ನೋಡಲೆಂದು ಬ್ರಿಟನ್ನಿನ ‘ಗಾರ್ಡಿಯನ್’ ಪತ್ರಿಕೆಯ ವರದಿಗಾರರು ಐದು ತಿಂಗಳು ಕಾಲ ಮುಂಚೂಣಿ ರಾಷ್ಟ್ರಗಳಲ್ಲಿ ಗುಪ್ತ ಸಮೀಕ್ಷೆ ನಡೆಸಿ ಕರಾಳ ಸಂಗತಿಗಳನ್ನು ಹೊರಗೆಳೆದಿದ್ದಾರೆ. ಇವರ ವರದಿಯ ಪ್ರಕಾರ, 195 ‘ಕಾರ್ಬನ್ ಬಾಂಬ್’ಗಳು ಶಕ್ತ ರಾಷ್ಟ್ರಗಳಲ್ಲಿ ಸಜ್ಜಾಗಿ ಕೂತಿವೆ (ಪ್ರತಿಯೊಂದು ಗಣಿಯೂ ತನ್ನ ಜೀವಿತಾವಧಿಯಲ್ಲಿ ವಾಯುಮಂಡಲಕ್ಕೆ ಕನಿಷ್ಠ ತಲಾ ಒಂದು ಶತಕೋಟಿ ಟನ್ ಸಿಓಟು (CO2) ಅನಿಲವನ್ನು ತೂರಬಲ್ಲ ಯೋಜನೆಗಳನ್ನು ಅದು ‘ಕಾರ್ಬನ್ ಬಾಂಬ್’ ಎಂದು ಹೆಸರಿಸಿದೆ). ಅವುಗಳಲ್ಲಿ 110 ಯೋಜನೆಗಳು ಆಗಲೇ ಗಣಿಗಾರಿಕೆ ಆರಂಭಿಸಿವೆ. ಅಮೆರಿಕ ದೇಶವೊಂದೇ ತನ್ನ 22 ಕಾರ್ಬನ್ ಬಾಂಬ್‌ಗಳಿಂದ 140 ಶತಕೋಟಿ ಟನ್ ಸಿಓಟುವನ್ನು ಹೊರಕ್ಕೆ ಕಕ್ಕುವಂತಿದೆ.
ಇಂಥ ಫಾಸಿಲ್ ಇಂಧನಗಳ ಬಳಕೆಯನ್ನು ಮಿತಗೊಳಿಸುತ್ತೇವೆಂದು ಎಲ್ಲ ದೇಶಗಳು ತಾವಾಗಿ ಘೋಷಿಸಿವೆ ವಿನಾ ಅದು ಕಡ್ಡಾಯವೇನಲ್ಲ. ನಾಳೆ ಕಡ್ಡಾಯ ಆಗುವ ಸಂದರ್ಭ ಬರುವ ಮೊದಲೇ ಆದಷ್ಟೂ ಹೆಚ್ಚು ಇಂಧನವನ್ನು ಮೇಲೆತ್ತಲು ತೈಲ ಕಂಪನಿಗಳು ತೊಡಗಿವೆ. ಸರ್ಕಾರದಿಂದ ಹೇರಳ ಸಬ್ಸಿಡಿಯನ್ನೂ ಪಡೆಯುತ್ತಿವೆ ಎಂದ ಮೇಲೆ ರಾಷ್ಟ್ರನಾಯಕರ ಮೌನ ಸಮ್ಮತಿ ಈ ಕಂಪನಿಗಳಿಗೆ ಇದ್ದೇ ಇದೆ. ಇಷ್ಟಕ್ಕೂ ಈ ಬಾಂಬ್‌ಗಳಿಗೆ ರಾಷ್ಟ್ರಗಳ ಯಜಮಾನಿಕೆಯೇ ಇದ್ದಂತಿಲ್ಲ. ಅಥಾಬಸ್ಕಾ ದಲ್ಲಿ ಚೀನೀ ಬಂಡವಾಳ; ಆಸ್ಟ್ರೇಲಿಯಾದಲ್ಲಿ ಅದಾನಿ ಬಂಡವಾಳ... ಹೀಗೆ.
ಪರಿಣಾಮ ಏನಾದೀತೆಂದರೆ, ಸಿಓಟು ಮಟ್ಟ ಕಡಿಮೆ ಆಗುವ ಬದಲು ಹೆಚ್ಚಾಗುತ್ತದೆ. ಭೂಮಿಯ ಸಂಕಟಗಳು ಇನ್ನಷ್ಟು ಉಗ್ರವಾಗುತ್ತವೆ. ಅದಕ್ಕೇ ಈ ಪ್ರಕ್ರಿಯೆಗಳನ್ನು ಹೇಗಾದರೂ ತಡೆಯಬೇಕೆಂದು ಜಗತ್ತಿನಾದ್ಯಂತ 70ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು, ಸಂಶೋಧಕರು, ವಕೀಲರು ಮತ್ತು ಆಸಕ್ತ ತಜ್ಞತಂಡಗಳು ‘ಕಾರ್ಬನ್ ಬಾಂಬ್ ನಿಷ್ಕ್ರಿಯ ಜಾಲ’ವನ್ನು ರಚಿಸಿಕೊಂಡಿವೆ. ಜನರನ್ನು ಒಗ್ಗೂಡಿಸುವುದು ಮತ್ತು ಜನನಾಯಕರ ಮನವೊಲಿಸಲು ಯತ್ನಿಸುವುದು ಈ ಜಾಲದ ಉದ್ದೇಶ. ಇಂಥ ಕೊಳಕು ಇಂಧನಗಳು ‘ಭೂತಳದಲ್ಲೇ ಕೂತಿರಲು ಬಿಡಿ’ (‘ಲೀವ್ ಇಟ್ ಇನ್‌ದಿ ಗ್ರೌಂಡ್’- LINGO) ಹೆಸರಿನ ಜಾಲತಾಣವೂ ಇದೆ.
‘ಬಾಂಬ್’ ಎಂದಾಕ್ಷಣ ಢಮಾರೆಂದು ಸಿಡಿಯುವ ಸ್ಫೋಟಕದ ಚಿತ್ರವೇ ನಮ್ಮ ಕಲ್ಪನೆಗೆ ಬರುತ್ತದೆ. ಅದು ಹಾಗಿರಬೇಕೆಂದೇನಿಲ್ಲ. ಜನಸಂಖ್ಯಾ ಬಾಂಬ್ ಗೊತ್ತಲ್ಲ? 1900ನೇ ಇಸವಿಯಲ್ಲಿ ಕೇವಲ 190 ಕೋಟಿ ಇದ್ದ ಜನಸಂಖ್ಯೆ, 1950ರ ವೇಳೆಗೆ 250 ಕೋಟಿಗೆ, 2000ದ ವೇಳೆಗೆ 600 ಕೋಟಿಗೇರಿ ಈಗ 800 ಕೋಟಿಯ ಸಮೀಪ ಬಂದಿದೆಯಲ್ಲ? ಕಾರ್ಬನ್ ವಿಸರ್ಜನೆಯೂ ಹಾಗೇ ಹೆಚ್ಚುತ್ತಿದೆ.
ಕಾರ್ಬನ್ ಬಾಂಬ್ ಮುಂದೊಮ್ಮೆ ನಿಜಕ್ಕೂ ಬಾಂಬ್‌ನಂತೆ ಹಠಾತ್ ಸಿಡಿಯುವ ಸಾಧ್ಯತೆಯನ್ನೂ ವಿಜ್ಞಾನಿಗಳು ಸಾಕ್ಷ್ಯ ಸಮೇತ ತೋರಿಸುತ್ತಿದ್ದಾರೆ. ಉತ್ತರ ಧ್ರುವದ ಸಮೀಪ ಹೋದಂತೆಲ್ಲ ಕೆನಡಾ, ನಾರ್ವೆ, ಐಸ್‌ಲ್ಯಾಂಡ್ ಮತ್ತು ರಷ್ಯಾದ ನೆಲದೊಳಗೆ ಭಾರೀ
ಮೀಥೇನ್ ಖಜಾನೆಗಳಿವೆ. ಸದ್ಯಕ್ಕೆ ಅವುಗಳ ಮೇಲೆ ದಪ್ಪ ಹಿಮದ ಹಾಸು ಇದ್ದುದರಿಂದ ಭೂಮಿ ಇಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ. ಆದರೆ ಶಾಖ ಹೀಗೇ ಏರುತ್ತ ಅಲ್ಲಿನ ಹಿಮಪದರ ಕರಗಿದರೆ 1,700 ಶತಕೋಟಿ ಟನ್ ಮೀಥೇನ್ ಯಾರ ನಿಯಂತ್ರಣಕ್ಕೂ ಸಿಗದೆ ಆಕಾಶಕ್ಕೆ ಸೋರುತ್ತದೆ. ಸಿಓಟುಕ್ಕೆ ಹೋಲಿಸಿದರೆ ಮೀಥೇನ್ ಅನಿಲ 30 ಪಟ್ಟು ಶೀಘ್ರವಾಗಿ ವಾಯುಮಂಡಲವನ್ನು ಬಿಸಿ ಮಾಡುತ್ತದೆ. ನೋಡನೋಡುತ್ತ ಭೂಮಿ ಕೆಂಡದುಂಡೆ ಯಾಗುತ್ತದೆ. ಹಿಂದೆ ಐದು ಬಾರಿ ನಿಧಾನಕ್ಕೆ ಭೂಶಾಖ ಏರುಪೇರಾಗಿ ಜೀವಲೋಕದ ಸರ್ವನಾಶವಾಗಿತ್ತು. ಭೂಮಿ ಕ್ರಮೇಣ ಚೇತರಿಸಿಕೊಂಡಿತ್ತು. ಈಗಿನಷ್ಟು ಶೀಘ್ರ, ತೀವ್ರ ಏರಿಕೆ ಹಿಂದೆಂದೂ ಆಗಿರಲಿಲ್ಲ.
‘ಆದಷ್ಟು ಬೇಗ ನಮ್ಮ ದಾರಿಯನ್ನು ಬದಲಿಸದೇ ಇದ್ದರೆ ನಾವು ಹೋಗಬೇಕಾದ ಜಾಗಕ್ಕೇ ಹೋಗಿ ಮುಟ್ಟುವ ಅಪಾಯವಿದೆ!’ ಎಂದು ಅಮೆರಿಕನ್ ವ್ಯಂಗ್ಯಚಿಂತಕ ಇರ್ವಿನ್ ಕೋರೇ ಹೇಳಿದ್ದ. ಆ ಅಪಾಯ ದಿನದಿನಕ್ಕೆ ಹತ್ತಿರವಾಗುತ್ತಿರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.