ADVERTISEMENT

ನಂಬಿ ನಾರಾಯಣನ್, ರಾಜೇಂದ್ರ ಪಚೌರಿ: ಇಬ್ಬರು ವಿಜ್ಞಾನಿಗಳು, ಹಲವು ಸಾಮ್ಯತೆಗಳು

ನಂಬಿ ಕೆಟ್ಟವರಲ್ಲ, ಸಭ್ಯರನು ನಂಬುವಂತಿಲ್ಲ: ಎಷ್ಟೆಲ್ಲ ಮಸಾಲೆಗಳ ಗಿರ್ಮಿಟ್ ಇದು

ನಾಗೇಶ ಹೆಗಡೆ
Published 21 ಜನವರಿ 2020, 9:43 IST
Last Updated 21 ಜನವರಿ 2020, 9:43 IST
ರಾಜೇಂದ್ರ ಪಚೌರಿ ಮತ್ತು ನಂಬಿ ನಾರಾಯಣನ್
ರಾಜೇಂದ್ರ ಪಚೌರಿ ಮತ್ತು ನಂಬಿ ನಾರಾಯಣನ್   

ಇಂಥ ಸಂಯೋಗ ತೀರ ಅಪರೂಪಕ್ಕೆ ಘಟಿಸುತ್ತವೆ: ಕಳೆದವಾರ ಇಬ್ಬರು ವಿಜ್ಞಾನಿಗಳ ಕುರಿತು ಒಂದೇ ದಿನ ಎರಡು ಪ್ರತ್ಯೇಕ ಸುದ್ದಿಗಳು ಪ್ರಕಟವಾದವು. ಇಬ್ಬರೂ ಪ್ರತಿಷ್ಠಿತರು. ಇಬ್ಬರೂ 77ರ ಅಂಚಿನವರು. ಇಬ್ಬರ ಸಂಕಷ್ಟಗಳೂ ಹೆಣ್ಣಿನಿಂದಲೇ ಆರಂಭವಾಗಿ ಇಬ್ಬರ ಪ್ರತಿಷ್ಠೆಗೂ ಕಳಂಕ ತಗುಲಿದೆ. ಒಬ್ಬರಿಗೆ ಕಳಂಕದ ಕುಣಿಕೆ ಇದೀಗ ಬಿಗಿಯಾಗುತ್ತಿದೆ; ಇನ್ನೊಬ್ಬರಿಗೆ ಸಂಪೂರ್ಣ ಬಿಡುಗಡೆ ಆಗಿದೆ. ಒಬ್ಬರಿಗೆ ಬ್ರಿಟನ್ನಿನಲ್ಲಿ ₹50 ಲಕ್ಷ ಮಾನನಷ್ಟ ಪರಿಹಾರ ಸಿಕ್ಕಿದೆ. ಇನ್ನೊಬ್ಬರಿಗೆ ನಮ್ಮ ಸರ್ವೋಚ್ಚ ನ್ಯಾಯಾಲಯ ₹50 ಲಕ್ಷ ಪರಿಹಾರ ಘೋಷಿಸಿದೆ. ಮೊದಲಿನವರು ಡಾ. ರಾಜೇಂದ್ರ ಕುಮಾರ್ ಪಚೌರಿ. ಎರಡನೆಯವರು ಇಸ್ರೊ ವಿಜ್ಞಾನಿ ಎಸ್. ನಂಬಿ ನಾರಾಯಣನ್.

ಶಕ್ತಿತಜ್ಞ ಡಾ. ರಾಜೇಂದ್ರ ಪಚೌರಿಯ ಕತೆಯನ್ನು ಮೊದಲು ನೋಡೋಣ: ಅವರು ಸೌರಶಕ್ತಿ, ಗಾಳಿಶಕ್ತಿಯಂಥ ಬದಲೀ ವಿದ್ಯುತ್ ಮೂಲಗಳನ್ನು ಪ್ರಚಾರಕ್ಕೆ ತರಲೆಂದು ‘ದಿ ಎನರ್ಜಿ ರೀಸರ್ಚ್ ಇನ್‌ಸ್ಟಿಟ್ಯೂಟ್’ (ಟೆರಿ) ಎಂಬ ಬಹುದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಭಾರತದ ಅನೇಕ ನಗರಗಳಲ್ಲಿ ವಿಸ್ತರಿಸಿ ಅದರ ಮಹಾನಿರ್ದೇಶಕನ ಪದವಿಯಲ್ಲಿದ್ದವರು. ಟೆರಿಯ ಬಲದಿಂದಲೇ ವಿಶ್ವಸಂಸ್ಥೆಯಲ್ಲೂ ಖ್ಯಾತಿ ಪಡೆದವರು. ಹವಾಗುಣ ಬದಲಾವಣೆಯ ಅಧ್ಯಯನಕ್ಕೆಂದು ವಿಶ್ವಸಂಸ್ಥೆಯಿಂದ ನೇಮಕಗೊಂಡ ಐಪಿಸಿಸಿ ಎಂಬ ಅಂತರರಾಷ್ಟ್ರೀಯ ಸಂಘಟನೆಯ ಅಧ್ಯಕ್ಷರಾಗಿ, ಹತ್ತಾರು ಸಾವಿರ ವಿಜ್ಞಾನಿಗಳ ಕೈಗೆ ಥರ್ಮಾಮೀಟರ್ ಹಿಡಿಸಿ ಭೂಮಿಯ ಒಳಹೊರಗಿನ ತಾಪಮಾನ ಏರಿಕೆಯನ್ನು ದಾಖಲಿಸುತ್ತ, ಬಿಸಿಪ್ರಳಯದಿಂದ ಮನುಕುಲವನ್ನು ಉಳಿಸಲೆಂದು ಎಲ್ಲ ರಾಷ್ಟ್ರಗಳ ಮೇಲೆ ಸತತ ಒತ್ತಡ ಹೇರುತ್ತ ಬಂದವರು. ಅಮೆರಿಕದ ಅಧ್ಯಕ್ಷರ ವಿರೋಧ ಕಟ್ಟಿಕೊಂಡವರು. ಐಪಿಸಿಸಿಗೆ 2007ರಲ್ಲಿ ಲಭಿಸಿದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕದ ಉಪಾಧ್ಯಕ್ಷ ಅಲ್ ಗೋರ್ ಜತೆ ಜಂಟಿಯಾಗಿ ಸ್ವೀಕರಿಸಿದವರು. ಸ್ವತಂತ್ರ ಭಾರತದ ಮಟ್ಟಿಗೆ ವಿಜ್ಞಾನರಂಗದಲ್ಲಿ ನೊಬೆಲ್ ಪ್ರಶಸ್ತಿಯನ್ನು (ಐಪಿಸಿಸಿ ಪರವಾಗಿ) ಸ್ವೀಕರಿಸಿದ ಮೊದಲ ಪ್ರಜೆ ಎನ್ನಿಸಿಕೊಂಡವರು.

ADVERTISEMENT

ಭಾರತ ಸರ್ಕಾರದಿಂದಲೂ ಪದ್ಮವಿಭೂಷಣ ಪಡೆದವರು. ಆಮೇಲೆ ಪ್ರತಿಷ್ಠೆಯ ಹಠಾತ್ ಕುಸಿತ ಕಂಡವರು.ಪಚೌರಿ ತಮ್ಮ ಸಹೋದ್ಯೋಗಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರೆಂಬ ಆರೋಪಕ್ಕೆ ಸಿಕ್ಕು, ಬಂಧನದ ಭೀತಿಯಿಂದ ಜಾಮೀನು ಪಡೆದು, ಎಲ್ಲ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಮೂರು ವರ್ಷಗಳಿಂದ ಮೂಲೆ ಸೇರಿದ್ದಾರೆ. ಇದೀಗ ಅವರ ಕುರಿತು ಆರೋಪ ಪಟ್ಟಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಮುಂಬರುವ ತಿಂಗಳುಗಳಲ್ಲಿ ಡಾ. ಪಚೌರಿ ಖುದ್ದಾಗಿ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಮಹಿಳೆಯರೆದುರು ಹಿಂದಿನಿಂದಲೂ ಸಾಕಷ್ಟು ಚೆಲ್ಲು ಸ್ವಭಾವದವರೇ ಆಗಿದ್ದ ಅವರಿಗೆ ನಿರ್ಭಯಾ ಪ್ರಕರಣದ ನಂತರ ಜಾರಿಗೆ ಬಂದ ಕಾನೂನು ತನ್ನನ್ನು ಇಷ್ಟು ಬಿಗಿಯಾಗಿ ಬಂಧಿಸುತ್ತದೆಂಬ ನಿರೀಕ್ಷೆ ಇರಲಿಲ್ಲವೇನೊ. ಅವರ ಚೆಲ್ಲಾಟಗಳು, ಬಿಗಿರಹಿತ ನಡವಳಿಕೆಯಿಂದ ಬೇಸತ್ತ ಅನೇಕ ಮಹಿಳೆಯರು ಟೆರಿಯನ್ನು ಬಿಟ್ಟು ಹೋಗಿದ್ದು, ಇನ್ನು ಕೆಲವರು ಮುಜುಗರದೊಂದಿಗೆ ಸಹಿಸಿಕೊಂಡಿದ್ದು, ಒಬ್ಬಾಕೆ ಮಾತ್ರ ಎಲ್ಲ ಸಾಕ್ಷ್ಯಗಳನ್ನೂ (ಪಚೌರಿಯ ತುಂಟ ಇ–ಮೇಲ್, ಎಸ್ಸೆಮ್ಮೆಸ್, ರಮ್ಯ ವಾಟ್ಸಾಪ್‌ಗಳೆಲ್ಲವನ್ನೂ ವ್ಯವಸ್ಥಿತವಾಗಿ ಸಂಗ್ರಹಿಸಿ) ದಾವೆ ಹೂಡಿ ಕೆಡವಿದ್ದು ನಾನಾ ಮಾಧ್ಯಮಗಳಲ್ಲಿ ಆಗಲೇ ಜನಜನಿತವಾಗಿವೆ. ಈ ಮಹಿಳೆಯ ಸಂಕಷ್ಟಗಳು ನಿಜಕ್ಕೂ ಅಷ್ಟೊಂದು ಗಂಭೀರ ಸ್ವರೂಪದ್ದೆ? ಅಥವಾ ಆಕೆ ಪಚೌರಿಯನ್ನು ಬೀಳಿಸಲೆಂದೇ ಅಮೆರಿಕದ ಬೆಂಬಲ ಪಡೆದ ಬಲಿಷ್ಠ ಪೆಟ್ರೋಲಿಯಂ ಕಂಪನಿಗಳಿಂದ ನಿಯುಕ್ತಿಗೊಂಡ ಏಜೆಂಟಳೆ? ಇದನ್ನು ಮುಂದೆ ನೋಡೋಣ.

ಈಗ ಇಸ್ರೊ ಸಂಸ್ಥೆಯ ವಿಜ್ಞಾನಿ ನಂಬಿ ನಾರಾಯಣನ್ ಕತೆ: ಇವರನ್ನು ಕೆಡವಿದ್ದೂ ಅಮೆರಿಕದ ಗೂಢಚಾರ ಸಂಸ್ಥೆಯೇ ಇದ್ದೀತೆನ್ನಲು ಅನೇಕ ಸುಳಿವುಗಳಿವೆ. ತೀರ ಎತ್ತರಕ್ಕೆ ರಾಕೆಟ್ ಹಾರಿಸಬೇಕೆಂದರೆ ಮಾಮೂಲಿ ಬಂದೂಕು ಮದ್ದು ಅಥವಾ ಸೀಮೆಣ್ಣೆ ಸಾಲುವುದಿಲ್ಲ. ಜಲಜನಕ ಮತ್ತು ಆಮ್ಲಜನಕವನ್ನು ದ್ರವರೂಪಕ್ಕೆ ತಂದು ಹೊತ್ತಿಕೊಳ್ಳುವಂತೆ ಮಾಡಬೇಕು. ಆಮ್ಲಜನಕವನ್ನು ಶೂನ್ಯದ ಕೆಳಗೆ (ಮೈನಸ್ 183 ಡಿಗ್ರಿ ಸೆ.) ತಂಪು ಮಾಡಿದರೆ ಅದು ದ್ರವವಾಗುತ್ತದೆ. ಜಲಜನಕವನ್ನು ಇನ್ನೂ ಕೆಳಗೆ (ಮೈನಸ್ 230 ಡಿಗ್ರಿಯಷ್ಟು) ತಂಪು ಮಾಡಬೇಕು. ಅವೆರಡೂ ಒಂದಾದ ಕ್ಷಣದಲ್ಲಿ ಶೀತಪಾತಾಳದಿಂದ ಹಠಾತ್ ಬೆಂಕಿಯ ಬಾಂಬಿನಂತೆ ಉಷ್ಣತೆ ಏರುತ್ತಿದ್ದಾಗ ರಾಕೆಟ್ಟೂ ಚಿಮ್ಮುತ್ತದೆ. ಎರಡೂ ದ್ರವಗಳನ್ನು ಪ್ರತ್ಯೇಕ ಡಬ್ಬಗಳಲ್ಲಿ ರಾಕೆಟ್‌ಗೆ ಜೋಡಿಸುವುದಕ್ಕೆ ‘ಕ್ರಯೊಜೆನಿಕ್ಸ್’ ತಂತ್ರಜ್ಞಾನ ಎನ್ನುತ್ತಾರೆ. ಅದನ್ನು ಭಾರತಕ್ಕೆ ಕೊಡಲು ಅಮೆರಿಕ ಸಿದ್ಧವಿರಲಿಲ್ಲ. ತನ್ನ ದೇಶದ ಮೇಲೆ ದಾಳಿ ಮಾಡಬಲ್ಲ ಯಾವ ಕ್ಷಿಪಣಿಯೂ ಭೂಮಿಯ ಮೇಲೆ ಎಲ್ಲೂ ಇರಬಾರದೆಂಬ ಧೋರಣೆ ಅದರದ್ದು. ಆದ್ದರಿಂದ ನಮ್ಮ ಕೈಗೆಟುಕದಷ್ಟು ₹950 ಕೋಟಿ ಬೆಲೆ ಇಟ್ಟಿತ್ತು. ರಷ್ಯ ದೇಶ ಅದನ್ನೇ ₹235 ಕೋಟಿಗೆ ನಮಗೆ ನೀಡಲು ಬಂದಾಗ ಅಮೆರಿಕ ಸಿಟ್ಟಾಗಿ 1992ರಲ್ಲಿ ಅಂಥ ತಂತ್ರಜ್ಞಾನವನ್ನು ಭಾರತಕ್ಕೆ ಕೊಡಕೂಡದೆಂದು ರಷ್ಯದ ಮೇಲೆ ಒತ್ತಡ ಹೇರಿತು. ಭಾರತದ ಮೇಲೂ ನಿರ್ಬಂಧ ಹೇರಿತು. ನಮ್ಮ ವಿಜ್ಞಾನಿಗಳು ಬೇರೆ ಮಾರ್ಗವಿಲ್ಲದೆ ಖುದ್ದಾಗಿ ಕ್ರಯೊಜೆನಿಕ್ಸ್ ತಂತ್ರಕ್ಕಾಗಿ ಫ್ರಾನ್ಸ್ ದೇಶದ ನೆರವು ಕೋರಿದರು. ಅಮೆರಿಕದ ಖ್ಯಾತ ಪ್ರಿನ್ಸ್‌ಟನ್ ವಿವಿಯಲ್ಲಿ ಪದವಿ ಗಳಿಸಿ ಇಸ್ರೊಕ್ಕೆ ಬಂದಿದ್ದ ಇದೇ ನಂಬಿ ನಾರಾಯಣನ್ ಮತ್ತು ಕೆಲವರು ಫ್ರಾನ್ಸ್‌ನಲ್ಲಿ ತರಬೇತಿ ಪಡೆದರು. ನಂಬಿಯವರು ಇಸ್ರೊದ ಕ್ರಯೊಜೆನಿಕ್ಸ್ ವಿಭಾಗದ ನಿರ್ದೇಶಕರಾದರು. ಆಗ ಅನಿರೀಕ್ಷಿತವೊಂದು ಸಂಭವಿಸಿತು.

ಮಾಲ್ಡೀವ್ಸ್ ದೇಶದಿಂದ ಪ್ರವಾಸಕ್ಕೆಂದು ಬಂದ ಮಹಿಳೆಯನ್ನು ಗೂಢಚಾರಿಣಿ ಎಂದು ಬಂಧಿಸಲಾಯಿತು. ಆಕೆಯ ಡೈರಿಯಲ್ಲಿ ಅದೇನೊ ಸುಳಿವು, ಕ್ರಯೊಜೆನಿಕ್ಸ್ ನಕ್ಷೆಯ ನೆರಳಚ್ಚು ಪ್ರತಿ ಸಿಕ್ಕಿತು. ವಿಜ್ಞಾನಿ ನಂಬಿ ನಾರಾಯಣನ್ ಇದೇ ಕ್ರಯೊಜೆನಿಕ್ಸ್ ತಂತ್ರಗಳನ್ನು ದೊಡ್ಡ ಮೊತ್ತದ ಹಣಕ್ಕೆ ಪಾಕಿಸ್ತಾನಕ್ಕೆ ಮಾರಲಿದ್ದಾರೆ ಎಂದು ಆರೋಪಿಸಿ 1994ರಲ್ಲಿ ಈ ವಿಜ್ಞಾನಿಯ ಜೊತೆಗೆ ಇನ್ನೂ ಐವರನ್ನು ಲಾಕಪ್ಪಿಗೆ ಹಾಕಿ, ಬಗೆಬಗೆಯ ಮಾನಸಿಕ, ದೈಹಿಕ ಕಿರುಕುಳ ಕೊಟ್ಟು 50 ದಿನಗಳವರೆಗೆ ಜೈಲಿಗೆ ತಳ್ಳಲಾಯಿತು. ವಿವಾದದ ಈ ದಳ್ಳುರಿಯಲ್ಲೇ ತಮ್ಮ ಬೇಳೆ ಬೇಯಲೆಂದು ರಾಜಕಾರಣಿಗಳು ಮಾಧ್ಯಮಗಳ ಮುಂದೆ ಮಸಾಲೆ ಹೇಳಿಕೆ ಕೊಡುತ್ತ ಕೊನೆಗೂ ಕೇರಳದ ಮುಖ್ಯಮಂತ್ರಿ ಕರುಣಾಕರನ್ ರಾಜೀನಾಮೆ ನೀಡಿ ಅಂಥೊನಿ ಪಟ್ಟಕ್ಕೆ ಬರುವಂತಾಯಿತು. ಗೂಢಚರ್ಯೆ ಕುರಿತು ಸಿಬಿಐ ತನಿಖೆ ನಡೆದು, ನಂಬಿ ಮತ್ತಿತರ ವಿಜ್ಞಾನಿಗಳು ನಿರಪರಾಧಿ ಎಂದು ಸಾಬೀತಾಗಿ,1998ರಲ್ಲಿ ಸರ್ವೋಚ್ಚ ನ್ಯಾಯಾಲಯವೂ ಅದನ್ನೇ ಸಾರಿತು. ‘ಅಲ್ಲಾರೀ, ಬರೀ ನಕ್ಷೆಯಿಂದ ತಂತ್ರಜ್ಞಾನ ವರ್ಗಾವಣೆ ಸಾಧ್ಯವೆ? ನಾವು ಅನೇಕ ಎಂಜಿನಿಯರ್‌ಗಳು ಫ್ರಾನ್ಸ್‌ಗೆ ಅದೆಷ್ಟೊ ಬಾರಿ ಹೋಗಿ, ಕೆಲವೊಮ್ಮೆ ನಾಲ್ಕೈದು ವರ್ಷ ಅಲ್ಲಿ ಕೆಲಸ ಮಾಡಿ, ಅಲ್ಲಿನ ವೈಕಿಂಗ್ ಎಂಜಿನ್ನಿಗೆ ಇಲ್ಲಿನ ಹತ್ತಾರು ಸಂಸ್ಥೆಗಳ ಸಾವಿರಾರು ಎಂಜಿನಿಯರ್‌ಗಳ ನೆರವಿನಿಂದ ಹೊಸ ರೂಪ ಕೊಟ್ಟು ‘ವಿಕಾಸ್’ ಎಂದು ಹೆಸರಿಟ್ಟು ಪಿಎಸ್‌ಎಲ್‌ವಿ ರಾಕೆಟ್‌ಗೆ ಜೋಡಿಸಿ ಬಾಹ್ಯಾಕಾಶಕ್ಕೆ ಕಳಿಸುತ್ತಿದ್ದೇವೆ. ತಂತ್ರಜ್ಞಾನ ಏನೇನೂ ಗೊತ್ತಿಲ್ಲದ ಹೆಂಗಸೊಬ್ಬಳು ಒಂದೆರಡು ನಕ್ಷೆಗಳನ್ನು ಸಾಗಿಸಿ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಲು ಸಾಧ್ಯವೆ?’ ಎಂದು ನಂಬಿ ತಮ್ಮ ಕತೆ ಕೇಳುತ್ತಾರೆ. ಮಾನನಷ್ಟಕ್ಕೆ ಪರಿಹಾರ ಬೇಕೆಂದೂ, ಅದಕ್ಕೆ ಕಾರಣರಾದ ಅಧಿಕಾರಿಗಳ ತನಿಖೆ ನಡೆಯಬೇಕೆಂದೂ ಅವರು ಕೋರಿದ್ದಕ್ಕೆ ಇದೀಗ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ₹50 ಲಕ್ಷ ಪರಿಹಾರವನ್ನು ಕೇರಳ ಸರ್ಕಾರವೇ ಕೊಡಬೇಕೆಂದು ಆಜ್ಞಾಪಿಸಿದೆ.

ಇಸ್ರೊ ರೂಪಿಸಿದ ಕ್ರಯೊಜನಿಕ್ಸ್ ಎಂಜಿನ್

ಈ ಪ್ರಕರಣದಿಂದಾಗಿ ಕ್ರಯೊಜೆನಿಕ್ಸ್ ಆಧರಿತ ಜಿಎಸ್‌ಎಲ್‌ವಿ ರಾಕೆಟ್ ನಿರ್ಮಾಣ ಹತ್ತಾರು ವರ್ಷ ತಡವಾಯಿತಾದರೂ ಇಸ್ರೊ ಕೊನೆಗೂ ಮೈಕೊಡವಿ ಮೇಲೆದ್ದಿದೆ. ನಂಬಿ ನಾರಾಯಣನ್ ತಂಡದವರು ರೂಪಿಸಿದ ದ್ರವ ಇಂಧನ ಚಾಲಿತ ಕ್ಷಿಪಣಿಗಳು ಶ್ರೀಮಂತ ದೇಶಗಳ ಶೋಧಯಂತ್ರಗಳನ್ನೂ ಕಕ್ಷೆಗೆ ಸಾಗಿಸುವಷ್ಟು ಪ್ರಬಲವಾಗಿವೆ. ಏಕಕಾಲಕ್ಕೆ104 ನೌಕೆಗಳನ್ನು ಕಕ್ಷೆಗೆ ಏರಿಸಿ ದಾಖಲೆ ಮೂಡಿಸಿವೆ. ವರ್ಷಕ್ಕೆ 300 ಶತಕೋಟಿ ಡಾಲರ್‌ಗಳ ಕ್ಷಿಪಣಿ ವಹಿವಾಟಿನಲ್ಲಿ ಭಾರತಕ್ಕೂ ದೊಡ್ಡ ಪಾಲು ಸಿಗುವಂತಾಗಿದೆ. ಭಾರತ ಮುಗ್ಗರಿಸಲೆಂಬ ಹಾರೈಕೆಗಳೆಲ್ಲ ವಿಫಲವಾಗಿವೆ. ಆದರೆ ನಂಬಿ ನಾರಾಯಣನ್ ಮಾತ್ರ ಹಣ್ಣಾಗಿದ್ದಾರೆ. ಚಂದ್ರಯಾನ, ಮಂಗಳಯಾನಗಳ ಯಶಸ್ಸಿನಲ್ಲಿ ಅವರಿಗೆ ಪಾಲಿಲ್ಲ. ಪ್ರಶಸ್ತಿ, ಪದಕಗಳು ಅವರ ಪಾಲಿಗೆ ಬಂದಿಲ್ಲ.

ಈಗ ಮತ್ತೆ ಪಚೌರಿ ಪುರಾಣಕ್ಕೆ ಬರೋಣ. ಅವರು ಅಧ್ಯಕ್ಷರಾಗಿದ್ದ ಐಪಿಸಿಸಿಯ ಸಂಸ್ಥೆಯಿಂದಾಗಿ ಎಲ್ಲ ರಾಷ್ಟ್ರಗಳೂ ಪೆಟ್ರೋಲಿಯಂ ಬಳಕೆಯನ್ನು ತಗ್ಗಿಸುವ ಸಿದ್ಧತೆಯಲ್ಲಿದ್ದವು -ಅಮೆರಿಕ ಒಂದನ್ನು ಬಿಟ್ಟು. ‘ಬಿಸಿಪ್ರಳಯ ಬರೀ ಬುರುಡೆ’ ಎಂದು ವಾದಿಸುತ್ತ ಬಂದಿದ್ದ ಪೆಟ್ರೊಧನಾಢ್ಯ ಕಂಪನಿಗಳು ಪಚೌರಿ ವಿರುದ್ಧ ಕತ್ತಿ ಮಸೆಯುತ್ತಿದ್ದವು. ಅವರ ವಿರುದ್ಧ ಲೇಖನಗಳೂ ಪ್ರಕಟವಾದವು. 2010ರ ಅಂಥದ್ದೊಂದು ಲೇಖನದಲ್ಲಿ ಪಚೌರಿಯ ಮೇಲೆ ತಪ್ಪು ಆರೋಪ ಹೊರಿಸಿದ್ದಕ್ಕೆ ಬ್ರಿಟನ್ನಿನ ‘ಸಂಡೇ ಟೆಲಿಗ್ರಾಫ್’ ಪತ್ರಿಕೆ ಕ್ಷಮೆ ಕೋರಿ 53 ಸಾವಿರ ಪೌಂಡ್ (ಅಂದರೆ ಸುಮಾರು ₹50 ಲಕ್ಷ) ಪರಿಹಾರವನ್ನೂ ನೀಡಿತ್ತು. ಭಾರತದ ಟೆರಿ ಸಂಸ್ಥೆಯ ಮತ್ತು ವಿಶ್ವಸಂಸ್ಥೆಯ ಐಪಿಸಿಸಿಯ ದೊರೆಯೆನ್ನಿಸಿದ ಪಚೌರಿಯನ್ನು ಕೆಳಕ್ಕಿಳಿಸಲು ಏನೆಲ್ಲ ಕರಾಮತ್ತು ನಡೆಯುತ್ತಿವೆ ಎಂದು ಪಶ್ಚಿಮದ ಮಾಧ್ಯಮಗಳು ಹೇಳುತ್ತಲೇ ಬಂದಿದ್ದವು.

21ನೇ ಆಗಸ್ಟ್ 2010ರಂದು ಕ್ಷಮೆಯಾಚಿಸಿದ ‘ಟೆಲಿಗ್ರಾಫ್’

ಈ ಹಂತದಲ್ಲೇ ಚಪಲಚನ್ನಿಗ ಪಚೌರಿ ಬಲೆಗೆ ಬಿದ್ದಿದ್ದು. ಈತನ ರಸಿಕತೆಯಿಂದ ಬೇಸತ್ತ ಟೆರಿ ಸಂಸ್ಥೆಯ ಉದ್ಯೋಗಿಯೊಬ್ಬಳು ದಿಲ್ಲಿಯ ಪೊಲೀಸ್ ಠಾಣೆಗೆ ಬಂದಿದ್ದು. ಆಕೆಯ ಆಕ್ರೋಶ ತೀರ ಪ್ರಾಮಾಣಿಕವೇ ಇದ್ದೀತು. ಮಹಿಳೆಯರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುವವರನ್ನು ಎಚ್ಚರಿಸಲು ತೀರ ಉನ್ನತ ಹುದ್ದೆಯಲ್ಲಿದ್ದವರನ್ನೇ ಕೆಡವಿದ್ದು ಸರಿಯೇ ಇರಬಹುದು. ಪತಂಗವೇ ದೀಪವನ್ನು ನಂದಿಸಿದ್ದು ಐತಿಹ್ಯವೂ ಆಗಬಹುದು. ಆದರೆ ಸಂಶಯದ ಹೊಗೆ ಮಾತ್ರ ಆಡುತ್ತಲೇ ಇದೆ. ಇದು ರಾಷ್ಟ್ರದಾಚಿನ ಪಿತೂರಿಯೆಂದೇ ಪಚೌರಿ ವಾದಿಸುತ್ತಿದ್ದಾರೆ. ವಾಸ್ತವ ಏನೆಂಬುದನ್ನು ನ್ಯಾಯಾಲಯವೇ ತೀರ್ಮಾನಿಸಬೇಕಿದೆ. ‘ಪಾಚಿ’ ಎಂದೇ ಸಹೋದ್ಯೋಗಿಗಳಿಂದ ಸಲುಗೆಯಿಂದ ಕರೆಸಿಕೊಳ್ಳುತ್ತಿದ್ದ ಪಚೌರಿಗೆ ಸದ್ಯಕ್ಕಂತೂ ಪಾಚಿ ಕಟ್ಟಿದೆ.

ರಾಕೆಟ್, ಯುದ್ಧಕ್ಷಿಪಣಿ, ಬಾಂಬರ್, ಅಣ್ವಸ್ತ್ರ, ಜಲಾಂತರ್ಗಾಮಿ ಇಂಥವೆಲ್ಲ ಹೈಟೆಕ್ ಸಾಧನಗಳ ಸುತ್ತ ಗೂಢಚರ್ಯೆ, ಕಳ್ಳಾಟ, ಟೆಕಿಗಳ ನಾಪತ್ತೆ, ವಿಜ್ಞಾನಿಗಳ ಹೈಜಾಕ್ ನಡೆಯುತ್ತಲೇ ಇರುತ್ತವೆ. ಮಾತಾಹರಿ, ವರ್ಜಿನಿಯಾ ಹಾಲ್
ಮುಂತಾದ ಅನೇಕ ಮಹಿಳೆಯರು ದಂತಕಥೆಗಳಾಗಿ, ವಿಜ್ಞಾನಿಗಳು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಬಲಿಪಶುಗಳಾಗಿ ಚಿತ್ರಿತರಾಗಿದ್ದಾರೆ. ಅಸಲೀ ಕತೆಗಳು ಹೊರಕ್ಕೆ ಬರುವುದೇ ಅಪರೂಪ. ಈಗಲೂ ಹಾಗೇ ಆಗಿದೆ. ‘ಬಾಹ್ಯಾಕಾಶ
ದಲ್ಲಿ ರಷ್ಯ: ಮೇಲೇರಲಾರದ ವೈಫಲ್ಯ’ ಎಂಬ ಪುಸ್ತಕದಲ್ಲಿ ಬ್ರಯಾನ್ ಹಾರ್ವೆ ಎಂಬಾತ ಹೇಳಿದ ಘಟನೆ ಹೀಗಿದೆ: ರಷ್ಯನ್ನರು ಭಾರತಕ್ಕೆ ಕ್ರಯೊಜೆನಿಕ್ಸ್ ತಂತ್ರಜ್ಞಾನವನ್ನು ಕೊಡಕೂಡದೆಂದು ಅಮೆರಿಕ ದಿಗ್ಬಂಧನ ವಿಧಿಸಿತು. ತಂತ್ರಜ್ಞಾನದ ಬದಲು ಕ್ರಯೊಜೆನಿಕ್ಸ್ ಎಂಜಿನ್‌ಗಳನ್ನೇ ಹೊತ್ತು ಮೂರು ರಷ್ಯನ್ ವಿಮಾನಗಳು ರಹಸ್ಯವಾಗಿ ಭಾರತಕ್ಕೆ ಬಂದವು. ನಂಬಿದರೆ ನಂಬಿ, ಅದನ್ನು ತಂದಿದ್ದು ನಂಬಿ ನಾರಾಯಣನ್! ಈಗ ಅಂಕದ ಪರದೆ: ನಂಬಿಯವರಿಗೆ ಆ ಸಮಯದಲ್ಲಿ ನೆರವಾಗಿರಬಹುದಾಗಿದ್ದ ಕೆ. ಚಂದ್ರಶೇಖರ್ ಆಗ ರಷ್ಯದ ಬಾಹ್ಯಾಕಾಶ ಸಂಸ್ಥೆಯಲ್ಲಿ ಭಾರತದಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನೂ ಹಿಡಿದು ಕೇರಳದ ಪೊಲೀಸರು ಸಾಕಷ್ಟು ಚಿತ್ರಹಿಂಸೆ ಕೊಟ್ಟು ಅಪರಾಧಿಯನ್ನಾಗಿ ಮಾಡಿದ್ದರು. ಅಪಮಾನದಿಂದ ಮೂಲೆ
ಗುಂಪಾಗಿ, ಬೆಂಗಳೂರಿನಲ್ಲಿ ಪತ್ನಿಯ ಪಿಂಚಿಣಿಯಲ್ಲಿ ಕಷ್ಟದಿಂದ ಬದುಕುತ್ತಿದ್ದ ಅವರನ್ನು ಕಳೆದ ವಾರ ಹೆಬ್ಬಾಳದ ಆಸ್ಪತ್ರೆಗೆ ಸೇರಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿನ ವಾರ್ತೆ ಟಿವಿಯಲ್ಲಿ ಬರುವ ತುಸು ಮೊದಲು ಅವರಿಗೆ ಪ್ರಜ್ಞೆ ತಪ್ಪಿತು. ಮರುದಿನ ಬೆಳಿಗ್ಗೆ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.