ADVERTISEMENT

ವಿಜ್ಞಾನ ವಿಶೇಷ | ಜೀವಸೃಷ್ಟಿಗೆ ದೇವರೇಕೆ ಬೇಕು?

ಭಾರತೀಯ ಮೂಲದ ವಿಜ್ಞಾನಿಯಿಂದ ಜೀವಾಂಕುರದ ಹೊಸ ಸಾಧ್ಯತೆ ಪತ್ತೆ

ನಾಗೇಶ ಹೆಗಡೆ
Published 10 ಆಗಸ್ಟ್ 2022, 21:45 IST
Last Updated 10 ಆಗಸ್ಟ್ 2022, 21:45 IST
   

ಭೂಮಿಯ ಮೇಲೆ ಜೀವಾಂಕುರ ಹೇಗಾಯಿತು? ಕಲ್ಲು-ಮರಳು, ಕೆಸರುನೀರಿನ ನಿರ್ಜೀವ ಕಣಗಳು ಕೈಕೈ ಬೆಸೆದು ನಿಂತು ತನ್ನನ್ನೇ ತಾನು ನಕಲು ಮಾಡುವಂಥ ಸಜೀವ ಕಣವನ್ನು ಸೃಷ್ಟಿಸಿದ್ದು ಹೇಗೆ? ಈ ಕುರಿತು ಕಳೆದ 150 ವರ್ಷಗಳಿಂದ ವಿಜ್ಞಾನ ಲೋಕದಲ್ಲಿ ಚರ್ಚೆಗಳು ನಡೆಯುತ್ತಿವೆ. ಚರ್ಚುಗಳಿಗೆ ತಲ್ಲಣ ಹುಟ್ಟಿಸುವಷ್ಟು ಮಟ್ಟಿಗೆ ಬಿಸಿ ವಾಗ್ವಾದಗಳೂ ನಡೆದಿವೆ. ದೇವರ ಹಸ್ತಕ್ಷೇಪವೇ ಇಲ್ಲದೆ ತಂತಾನೇ ಜೀವಸೃಷ್ಟಿ ಸಾಧ್ಯವೆಂದು ವಿಜ್ಞಾನಿಗಳು ತೋರಿಸಿಬಿಟ್ಟರೆ ಜಗತ್ತಿನ ಅನೇಕ ಮತಧರ್ಮಗಳ ಮೂಲಾಧಾರವೇ ಕುಸಿದು ಹೋಗುತ್ತದೆ ತಾನೆ? ಸದ್ಯಕ್ಕೆ ಹಾಗೆ ತಂತಾನೇ ಜೀವಸೃಷ್ಟಿಯಾಗುವುದನ್ನು ಯಾರೂ ಇದುವರೆಗೆ ಪ್ರತ್ಯಕ್ಷ ತೋರಿಸಿಲ್ಲವಾದ್ದರಿಂದ ದೇವರು ಮತ್ತು ವಿಜ್ಞಾನದ ನಡುವಣ ಜಟಾಪಟಿ ಒಳಗೊಳಗೇ ಹೊಗೆಯಾಡುತ್ತಿದೆ ಅಷ್ಟೆ.

ಈ ಮಧ್ಯೆ, ಎರಡು ವಾರಗಳ ಹಿಂದೆ, ‘ಭಾರತೀಯ ಮೂಲದ ವಿಜ್ಞಾನಿಯಿಂದ ಜೀವಾಂಕುರದ ಹೊಸ ಸಾಧ್ಯತೆ ಪತ್ತೆ’ ಎಂಬ ಶಿರೋನಾಮೆಯೊಂದಿಗೆ ದಿಲ್ಲಿಯ ವಿಜ್ಞಾನ ಪತ್ರಕರ್ತ ಕಲ್ಯಾಣ್‌ ರೇ ವರದಿ ಮಾಡಿದ್ದು ‘ಡೆಕ್ಕನ್‌ ಹೆರಾಲ್ಡ್‌’ನ ಮೊದಲ ಪುಟದಲ್ಲಿ ಪ್ರಕಟವಾಯಿತು. ವಿಜ್ಞಾನಕ್ಕೆ ಇದುವರೆಗೂ ಗೊತ್ತಿರದ ಹೊಸತೊಂದನ್ನು ಅಮೆರಿಕದ ಖ್ಯಾತ ಸ್ಕ್ರಿಪ್ಸ್‌ ಸಂಶೋಧನಾ ಸಂಸ್ಥೆಯ ರಾಮನಾರಾಯಣನ್‌ ಕೃಷ್ಣಮೂರ್ತಿ ಕಂಡುಹಿಡಿದಿದ್ದರು. ಈ ಕುರಿತ ಅವರ ಪ್ರಬಂಧವೊಂದು ಪ್ರತಿಷ್ಠಿತ ‘ನೇಚರ್‌ ಕೆಮಿಸ್ಟ್ರಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತುಸು ಮುಂಚೆ, ಮಾರ್ಚ್‌ ತಿಂಗಳಲ್ಲೇ ಅವರ ಸಂಶೋಧನೆ ನ್ಯಾಶನಲ್‌ ಜಿಯಾಗ್ರಫಿ ಮತ್ತಿತರ ಮಾಧ್ಯಮಗಳಲ್ಲಿ ಚರ್ಚಿತವಾಗಿತ್ತು. ದೇವರನ್ನು ಸತತವಾಗಿ ನೇಪಥ್ಯಕ್ಕೆ ತಳ್ಳುತ್ತಿರುವ ವಿಜ್ಞಾನಿಗಳು ಈಗ ಆದಿಜೀವಿಯನ್ನೂ ಲ್ಯಾಬಿನಲ್ಲೇ ಸೃಷ್ಟಿಸಿದರೆ ಪಶ್ಚಿಮದ ಮತಧರ್ಮಗಳ ಜಗತ್ತಿನಲ್ಲಿ ತುಮುಲ ಎದ್ದೀತೆ?

ವಿಜ್ಞಾನಿಗಳು ವಿವರಿಸುವ ಬ್ರಹ್ಮಾಂಡದ ಸೃಷ್ಟಿಸ್ವರೂಪ ನಮಗೆಲ್ಲ ಗೊತ್ತೇ ಇದೆ: ಸುಮಾರು 1350 ಕೋಟಿ ವರ್ಷಗಳ ಹಿಂದೆ ಕಾಲವೂ ಇರಲಿಲ್ಲ, ಖಾಲಿಜಾಗವೂ (ಸ್ಪೇಸ್‌) ಇರಲಿಲ್ಲ. ಶೂನ್ಯ ಕೂಡ ಇರಲಿಲ್ಲ. ಆಗ ಇದ್ದಕ್ಕಿದ್ದಂತೆ ಮಹಾಸ್ಫೋಟ ಉಂಟಾಗಿ ಅಪಾರ ಶಕ್ತಿ ಮತ್ತು ದ್ರವ್ಯ ಎಲ್ಲೆಡೆ ಚೆಲ್ಲಾಡಿತು. ಹೈಡ್ರೊಜನ್‌ ಮತ್ತು ಹೀಲಿಯಂನ ಮೂಲಕಣಗಳು ಗೆಲಾಕ್ಸಿಗಳಾಗಿ, ತಾರಾಪುಂಜಗಳಾಗಿ ಮಹಾವೇಗದ ಗುರುತ್ವ ತರಂಗಬಲದಿಂದ ದೂರದೂರಕ್ಕೆ ಈಗಲೂ ಚದುರುತ್ತಲೇ ಇವೆ. ಕೆಲವು ನಕ್ಷತ್ರಗಳ ಸುತ್ತಲಿನ ತಾರಾಕಣಗಳು ತಂಪಾಗುತ್ತ, ಉಂಡೆಗಟ್ಟುತ್ತ ಗ್ರಹಗಳಾಗಿ, ಗಿರಕಿ ಹೊಡೆಯುತ್ತ ಕಾರ್ಬನ್‌, ನೈಟ್ರೊಜನ್‌, ಕಬ್ಬಿಣ, ಸಿಲಿಕಾನ್‌ನಂಥ ಮೂಲವಸ್ತುಗಳನ್ನು ಸೃಷ್ಟಿಸಿಕೊ
ಳ್ಳುತ್ತ 450 ಕೋಟಿ ವರ್ಷಗಳೀಚೆಗೆ ಬುಧ, ಶುಕ್ರ, ಭೂಮಿ ಯಂಥ ಗಟ್ಟಿಗ್ರಹಗಳಾದವು; ಅಥವಾ ಗುರು, ಶನಿ, ನೆಪ್ಚೂನ್‌, ಪ್ಲುಟೋಗಳಂತೆ ಅನಿಲದ ಉಂಡೆಗಳಾದವು. ಭೂಮಿಯಲ್ಲಿ ಮಾತ್ರ 350 ಕೋಟಿ ವರ್ಷಗಳ ಹಿಂದೆ ಈ ನಿರ್ಜೀವ ಮೂಲವಸ್ತುಗಳೇ ಒಂದರೊಳಗೊಂದು ಸೇರಿಕೊಂಡು ಜೀವಾಂಕುರ ಆಯಿತು.

ADVERTISEMENT

ಅದು ಹೇಗಾಯಿತು ಎಂಬುದಕ್ಕೆ ನಾನಾ ಥಿಯರಿಗಳು ಹುಟ್ಟಿಕೊಂಡವು. ಜೀವಿಗಳು ತಂತಾವೇ ಹುಟ್ಟುತ್ತವೆ ಎಂದು ಕೊಳೆತ ಹಣ್ಣು-ಗಿಣ್ಣ, ಮಾಂಸದ ಮುದ್ದೆಯ ಮೇಲೆ ಹುಳುಗಳು ಹುಟ್ಟುವುದನ್ನು ನೋಡಿ ಹೇಳಿದ್ದರು. ಇಲ್ಲ, ನೊಣಗಳು ಅಲ್ಲಿ ಮೊಟ್ಟೆ ಇಡುತ್ತವೆ ಎಂದು ಸೂಕ್ಷ್ಮದರ್ಶಕದ ಮೂಲಕ ಗೊತ್ತಾಯಿತು. ಬಾಹ್ಯಾಕಾಶದಿಂದ ಸದಾ ಜೀವಕಣಗಳ ಸುರಿಮಳೆ ಆಗುತ್ತಿದೆ ಎಂದು ಇನ್ನು ಕೆಲವರು ಹೇಳಿದರು. ಇಲ್ಲ, ಅಲ್ಲಿನ ಘೋರಶೀತ ಮತ್ತು ರುದ್ರ ವಿಕಿರಣಗಳ ಮಧ್ಯೆ ಜೀವಕಣ ಬದುಕಿರಲು ಸಾಧ್ಯವೇ ಇಲ್ಲ ಎಂಬುದು ಗೊತ್ತಾಯಿತು. ಮಂಗಳ ಗ್ರಹದಿಂದ ಸಿಡಿದು ಬಂದ ಶಿಲಾ ತುಣುಕಿನ ಮೂಲಕ ಜೀವಕಣ ಬಂತೆಂದು ಮತ್ತೆ ಕೆಲವರು ಹೇಳಿದರು. ಅಂಥ ಶಿಲಾತುಣುಕು ಉಲ್ಕೆಯಂತೆ ಉರಿಕೊಳ್ಳಿಯಾಗಿ ಬೀಳುವಾಗ ಜೀವಂತ ಕಣಗಳು ಉಳಿದಿರಲು ಸಾಧ್ಯವೇ ಇಲ್ಲ ಎಂಬ ವಾದ ಮುಂದಕ್ಕೆ ಬಂತು. ಆಳಸಮುದ್ರದ ತಳದ ಬಿರುಕಿನ ಕುದಿನೀರಲ್ಲೂ ಏಕಾಣುಜೀವಿಗಳು ಪತ್ತೆಯಾದ ಮೇಲೆ ಉಲ್ಕಾಜೀವಿಯೂ ಸಾಧ್ಯ ಎಂತಲೂ ತರ್ಕಿಸುವಂತಾಯಿತು.

ಬೈಬಲ್ಲಿನಂಥ ಧರ್ಮಗ್ರಂಥಗಳನ್ನು ನಂಬುವವರಿಗೆ ತಲೆಬಿಸಿಯೇ ಇಲ್ಲ. ಸರ್ವಶಕ್ತ ದೇವರು ಭೂಮಿಯ ಮೇಲೆ ಎಲ್ಲ ಜೀವಿಗಳನ್ನೂ ಸೃಷ್ಟಿಸಿ, ಅವುಗಳ ಮೇಲ್ವಿಚಾರಕನಾಗಿ ಮನುಷ್ಯನನ್ನೂ ಸೃಷ್ಟಿಸಿ ಹೋಗಿದ್ದಾನೆ ಎಂಬ ನಂಬಿಕೆ ಅವರದು. ‘ಅದು ಹಾಗಲ್ಲ, ಜೀವಿಗಳು ಹಂತಹಂತವಾಗಿ ವಿಕಾಸವಾಗಿವೆ; ಶಿಲಾಪದರಗಳಲ್ಲಿ ಪಳೆಯುಳಿಕೆಗಳ ಸಾಕ್ಷ್ಯವಿದೆ’ ಎಂದು ವಿಜ್ಞಾನಿಗಳು ಹೇಳಿದರೆ ಕೇಳಬೇಕಲ್ಲ? ‘ಇಲ್ಲ, ಆ ಪಳೆಯುಳಿಕೆಗಳನ್ನೂ ದೇವರೇ ಸೃಷ್ಟಿಸಿ ಅಲ್ಲಿಟ್ಟಿದ್ದು’ ಎಂದರು. ಇಂಥ ವಿತಂಡವಾದಕ್ಕೆ ಕ್ಯಾರೇ ಎನ್ನದೇ ವಿಜ್ಞಾನಿಗಳು ಜೀವಮೂಲವನ್ನು ಹುಡುಕುತ್ತ ಹೋದರು.

ಜೀವಸೃಷ್ಟಿ ಹೇಗಾಯಿತು ಎಂಬುದು ತೀರಾ ಗಡಚಿನ ಪ್ರಶ್ನೆಯಂತೂ ಹೌದು. ತೀರಾ ಕೆಳಹಂತದ ಬ್ಯಾಕ್ಟೀರಿಯಾದಲ್ಲೂ ಜೀವಕೋಶ ಎಂದರೇನೇ ಒಂದು ಬ್ರಹ್ಮಾಂಡ, ಅದರಲ್ಲಿ ಪ್ರೋಟೀನ್‌ ಇದೆ, ಲಿಪಿಡ್ ಕಣಗಳಿವೆ, ಕಿಣ್ವಗಳಿವೆ, ಪೆಪ್ಟೈಡ್‌ ಬಂಧಗಳಿವೆ, ಚಯಾಪಚಯ ಇದೆ, ಡಿಎನ್‌ಎ ಸುರುಳಿ ಇದೆ, ಕೋಶಪೊರೆ ಇದೆ. ಆ ಆದಿಜೀವಿ ಹೇಗಿತ್ತೊ ನೋಡೋಣವೆಂದರೆ ಯಾವ ಕುರುಹೂ ಉಳಿದಿಲ್ಲ. ಬಿಸಿನೀರ ಬುಗ್ಗೆಯಂಥ ಪುಟ್ಟ ಕೊಳದ ಆದಿರಸದಲ್ಲಿ ಮೀಥೇನ್‌, ಕಾರ್ಬನ್‌ ಡೈಆಕ್ಸೈಡ್‌ ಮುಂತಾದ ಅನಿಲಗಳು ಮಿಂಚಿನ ಹೊಡೆತಕ್ಕೆ ಸಿಕ್ಕು ಜೀವಕಣ ರೂಪುಗೊಂಡಿತು ಎಂದು ಡಾರ್ವಿನ್‌ ಹೇಳಿ ದ್ದನ್ನೇ ಜೆಬಿಎಸ್‌ ಹಾಲ್ಡೇನ್‌ ಮತ್ತು ಜೆ.ಡಿ. ಬರ್ನಾಲ್‌ ಕೂಡ ಪ್ರತಿಪಾದಿಸಿದರು. ಮುಂದೆ 1952ರಲ್ಲಿ ಷಿಕಾಗೊ ದಲ್ಲಿ ಸ್ಟ್ಯಾನ್ಲಿ ಮಿಲ್ಲರ್‌ ಮತ್ತು ಹರಾಲ್ಡ್‌ ಯುರೇ ಎಂಬಿಬ್ಬರು ಪ್ರಯೋಗ ಮಾಡಿದರು. ಆಮ್ಲಜನಕರಹಿತ ಗಾಜಿನ ಬುರುಡೆಯಲ್ಲಿ ಅಂಥ ಆದಿರಸದ ಆವಿಯನ್ನು ಅತಿನೇರಳೆ ಕಿರಣಕ್ಕೆ ಒಡ್ಡಿ, ವಿದ್ಯುತ್‌ ಆಘಾತ ಕೊಟ್ಟು, ಕೃತಕವಾಗಿ ಅಮೈನೊಆಮ್ಲವನ್ನು ಸೃಷ್ಟಿಸಿದರು. ವಿಜ್ಞಾನಲೋಕ ಉಘೇ ಎಂದಿತು. ಧರ್ಮಭೀರುಗಳು ತಂತಮ್ಮ ಆದಿಗ್ರಂಥಗಳನ್ನು, ಜಪಮಣಿಗಳನ್ನು ಅವುಚಿ ಕೊಂಡರು. ಕಾರನ್ನು ಸೃಷ್ಟಿಸದೆ ಬರೀ ಗಿಯರ್‌ ಬಾಕ್ಸ್‌ ತೋರಿಸಿದಿರೆಂದು ವಿಜ್ಞಾನಿಗಳನ್ನು ಟೀಕಿಸಿದರು. ಮಿಲ್ಲರ್‌-ಯುರೇ ಗುರುಶಿಷ್ಯರ ಪ್ರಯೋಗದಲ್ಲಿ ಜೀವ ವಿಕಾಸಕ್ಕೆ ಬೇಕಾದ ಇನ್ನೊಂದು ಘಟಕ ಮಾತ್ರ (ಸಮಯಕೋಟ್ಯಂತರ ವರ್ಷ) ಇರಲಿಲ್ಲ. ಹಾಗಾಗಿ ತಮ್ಮ ಸಲಕರಣೆಗಳನ್ನು ಸೀಲ್‌ ಮಾಡಿ ಇಟ್ಟರು. ವಿವಾದ ಬಗೆಹರಿಯಲಿಲ್ಲ.

ಖ್ಯಾತ ಕಾದಂಬರಿಕಾರ ಡ್ಯಾನ್‌ ಬ್ರೌನ್‌ ಈ ವಿವಾದವನ್ನೇ ಇಟ್ಟುಕೊಂಡು 2017ರಲ್ಲಿ ‘ಒರಿಜಿನ್‌’ ಹೆಸರಿನ ಥ್ರಿಲ್ಲರ್‌ ಬರೆದ. ಪ್ರಚಂಡ ವಿಜ್ಞಾನಿಯೊಬ್ಬ ಜೀವಿಗಳನ್ನು ಸೃಷ್ಟಿಸಿದ್ದಾನೆಂಬುದು ಗೊತ್ತಾಗಿ ಜಗತ್ತಿನ ಎಲ್ಲ ಧರ್ಮಗಳ ‘ಜಾಗತಿಕ ಧರ್ಮ ಸಂಸತ್ತು’ ರಹಸ್ಯವಾಗಿ ಸಭೆ ಸೇರುತ್ತದೆ. ಈತನ ಪ್ರಯೋಗ ಫಲಿತಾಂಶ ಹೊರಬೀಳದಂತೆ ತಡೆಯುವುದು ಹೇಗೆಂದು ಕ್ರಿಶ್ಚಿಯನ್‌, ಇಸ್ಲಾಮಿಕ್‌ ಮತ್ತು ಯಹೂದಿ ಧರ್ಮಗುರುಗಳು ಚರ್ಚಿಸುತ್ತಾರೆ. ವಿಜ್ಞಾನಿ ತನ್ನ ಸೃಷ್ಟಿಯನ್ನು ಜಗತ್ತಿಗೆ ತೋರಿಸಲೆಂದು ಮಾಧ್ಯಮಗೋಷ್ಠಿ ಆರಂಭಿಸುತ್ತಲೇ ಆತನ ಕೊಲೆಯಾಗುತ್ತದೆ. ಹೀಗಾದೀತೆಂದು ಊಹಿಸಿದ್ದ ವಿಜ್ಞಾನಿ ತನ್ನ ಗೋಷ್ಠಿಯನ್ನು ಮೊದಲೇ ರೆಕಾರ್ಡ್‌ ಮಾಡಿಟ್ಟಿರುತ್ತಾನೆ, ತಾನು ಯುರೇ-ಮಿಲ್ಲರ್‌ ಪ್ರಯೋಗದ ಸಾವಯವ ರಸಕ್ಕೆ ಕೋಟ್ಯಂತರ ವರ್ಷಗಳ ಕಾಲವನ್ನೇ ಸಂಕುಚಿತಗೊಳಿಸಿ ಸೇರ್ಪಡೆ ಮಾಡಿ ಜೀವಸೃಷ್ಟಿ ಮಾಡಿದೆನೆಂದು ಹೇಳುತ್ತಾನೆ. ಅದು ಕಟ್ಟುಕತೆ, ಬಿಡಿ.

ಭಾರತೀಯ ಮೂಲದ ರಾಮನಾರಾಯಣನ್‌ ಕೃಷ್ಣಮೂರ್ತಿ ಮತ್ತು ತಂಡದವರು ಈಗ ಆದಿರಸಕ್ಕೆ ಸೈನೈಡ್‌ ಸೇರ್ಪಡೆ ಮಾಡಿ ಜೀವಾಂಕುರಕ್ಕೆ ಇನ್ನೊಂದು ಮಾರ್ಗವನ್ನು ಸೂಚಿಸಿದ್ದಾರೆ. ಅಮೋನಿಯಾ, ಕಾರ್ಬನ್‌ ಡೈಆಕ್ಸೈಡ್‌ ಮತ್ತು ಸೈನೈಡ್‌ ಸೇರಿದರೆ ಸಹಜ ತಾಪಮಾನದಲ್ಲೂ ಸಂಕೀರ್ಣ ಜೀವಕಣಗಳನ್ನು ಸೃಷ್ಟಿಸಬಹುದೆಂದು ಅವರು ತೋರಿಸಿದ್ದಾರೆ. ಲ್ಯಾಬ್‌ ಉಡುಗೆಯಲ್ಲೂ ಹಣೆಗೆ ಢಾಳಾಗಿ ವಿಭೂತಿ ಲೇಪಿಸಿಕೊಳ್ಳುವ ಡಾ. ಕೃಷ್ಣಮೂರ್ತಿಗೆ ಧರ್ಮ ಮತ್ತು ವಿಜ್ಞಾನದ ಮಧ್ಯೆ ತಿಕ್ಕಾಟ ಕಾಣುತ್ತಿಲ್ಲ. ನಿಸರ್ಗವೇ ದೇವರೆಂದು ಪರಿಭಾವಿಸಿದರೆ ಸಂಘರ್ಷವೇ ಬೇಕಾಗಿಲ್ಲ ಎಂದು ಅವರು ವಾದಿಸುತ್ತಾರೆ.

ನಾಗೇಶ ಹೆಗಡೆ

ಅಂತೂ ಜೀವಕ್ಕೆ ಮಾರಕವಾದ ಸೈನೈಡ್‌ ವಿಷವೇ ಜೀವಸೃಷ್ಟಿಗೂ ನೆರವಾಗುತ್ತದೆ ಎಂದರೆ ಅದು ಉಪನಿಷತ್ತಿನ ಅದ್ವೈತ ತತ್ತ್ವಕ್ಕೆ ಹೊಂದುವಂತೆಯೇ ಇದ್ದೀತು. ದಾರ್ಶನಿಕರು ಹೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.