ADVERTISEMENT

ವಿಜ್ಞಾನ ವಿಶೇಷ: ಸ್ಥಾವರಗಳಿಗೀಗ ಜಂಗಮ ದೀಕ್ಷೆ

ಬಿಸಿಪ್ರಳಯ ತಡೆಗೆ ಚಲಿಸುವ ಪರಮಾಣು ಸ್ಥಾವರಗಳು ಸಿದ್ಧವಾಗುತ್ತಿವೆ, ಸುರಕ್ಷೆಯ ಕತೆ?

ನಾಗೇಶ ಹೆಗಡೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
   

ಮಿತ್ರದೇಶಗಳಿಗೆಲ್ಲ ಪರಮಾಣು ಸ್ಥಾವರಗಳನ್ನು ಕಟ್ಟಿಸಿಕೊಡುವ ರಷ್ಯಾ ಈಚೆಗೆ ತನ್ನದೇ ‘ಕುರ್ಕ್‌’ ಪರಮಾಣು ಸ್ಥಾವರದ ಸುತ್ತ ಗಡಿಬಿಡಿಯಲ್ಲಿ ಕಂದಕವನ್ನು ತೋಡುತ್ತಿತ್ತು. ಉಕ್ರೇನಿನ ಸೇನೆ ಆ ಕಡೆ ನುಗ್ಗಿ ಬರುತ್ತಿರುವುದು ಅದರ ಆತಂಕಕ್ಕೆ ಕಾರಣವಾಗಿತ್ತು. ಸ್ಥಾವರದ ಹತ್ತಿರಕ್ಕೆಲ್ಲೂ ವೈರಿ ಸೈನ್ಯ ಬಾರದಂತೆ ಅದು ಹೇಗಾದರೂ ತಡೆಯಬೇಕಿತ್ತು.

ಇದೊಳ್ಳೇ ತಮಾಷೆ ಆಯ್ತಲ್ಲ? ಪರಮಾಣು ಸ್ಥಾವರಗಳೆಂದರೆ ಬಾಂಬ್‌ ದಾಳಿಗೂ ಕುಸಿಯದಂತೆ ಭದ್ರವಾಗಿ ಕಟ್ಟಿರುತ್ತಾರೆ. ವೈರಿ ವಿಮಾನಗಳು ಅತ್ತ ಸುಳಿದರೆ ಹೊಡೆದು ಉರುಳಿಸಲು ಕ್ಷಿಪಣಿಗಳು ಸದಾ ಸಜ್ಜಾಗಿ ರುತ್ತವೆ. ಹೀಗಿದ್ದೂ ಈಗ ನೆಲದ ಮೇಲೆಯೇ ಹೊಟ್ಟೆ ಹೊಸೆಯುತ್ತ ಬರುವ ಟ್ಯಾಂಕ್‌ಗಳಿಗೆ, ತುಪಾಕಿಗಳಿಗೆ ಹೆದರುವುದೆ?

ಹೆದರಬೇಕಾದ ವಿಲಕ್ಷಣ ಸ್ಥಿತಿಯನ್ನು ರಷ್ಯಾ ತಾನೇ ತಂದುಕೊಂಡಿದೆ. ಕಳೆದ ವರ್ಷ ಈ ದೇಶ ಉಕ್ರೇನಿನ ಒಂದು ಪರಮಾಣು ಸ್ಥಾವರವನ್ನು ತನ್ನ ಕೈವಶ ಮಾಡಿಕೊಂಡಿದೆ. ಅದರಲ್ಲಿ ರಷ್ಯನ್‌ ಸೈನಿಕರು ಬೀಡುಬಿಟ್ಟಿದ್ದಾರೆ. ಯುರೋಪ್‌ನ ಅತ್ಯಂತ ದೊಡ್ಡ ಪರಮಾಣು ಸಂಕೀರ್ಣವೆಂದು ಪ್ರಸಿದ್ಧ ಪಡೆದಿದ್ದ ಆ ಝಪೊರಿಝ್ಝಿಯಾ ಸ್ಥಾವರ ಈಗ ಎರಡೂ ದೇಶಗಳಿಗೆ ಬಿಸಿತುಪ್ಪವಾಗಿದೆ. ಅಲ್ಲಿ ಈಗ ವಿದ್ಯುತ್‌ ಉತ್ಪಾದನೆ ಆಗುತ್ತಿಲ್ಲ. ಆದರೂ ಅದನ್ನು ಸದಾ ತಂಪು ಮಾಡುತ್ತಲೇ ಇರಬೇಕು. ಇಲ್ಲವಾದರೆ ತಾನಾಗಿ ಕುದಿದು ಸ್ಫೋಟ ವಾಗುತ್ತದೆ. ತಂಪು ಮಾಡಬೇಕೆಂದರೆ ಅದಕ್ಕೆ ಸದಾ ವಿದ್ಯುತ್‌ ಪೂರೈಕೆ ಆಗುತ್ತಿರಬೇಕು. ಉಕ್ರೇನ್‌ ದೇಶವೇ ಅದಕ್ಕೆ ವಿದ್ಯುತ್‌ ಶಕ್ತಿಯನ್ನು ನೀಡುತ್ತಿರಬೇಕು. ಹಾಗೆಂದು ರಷ್ಯಾದ ಸೈನಿಕರನ್ನು ಹೊಡೆದಟ್ಟುವ ಹಾಗೂ ಇಲ್ಲ. ಆ ಚಕಮಕಿಯಲ್ಲಿ ಬಾಂಬ್‌ ಗೀಂಬ್‌ ಸ್ಫೋಟವಾದರೆ ಅದು ಚೆರ್ನೊಬಿಲ್‌ ಮಾದರಿಯ ಮತ್ತೊಂದು ಕರಾಳ ಕಥನವಾದೀತು.

ADVERTISEMENT

ರಷ್ಯಾ ಈಗ ತನ್ನ ಸ್ವಂತದ್ದೇ ಆದ ಕುರ್ಕ್‌ ಸ್ಥಾವರದ ಸುತ್ತ ಏಕೆ ಕಂದಕ ತೋಡುತ್ತಿದೆ ಅರ್ಥವಾಯಿತೆ? ಉಕ್ರೇನಿನ ಸೈನಿಕರು ಅದನ್ನು ವಶಪಡಿಸಿಕೊಂಡರೆ, ಅವರ ಮೇಲೆ ಬಾಂಬ್‌ ಹಾಕುವ ಬದಲಿಗೆ ಅವರಿಗೆ ಊಟ ಹಾಕಬೇಕಾಗಿ ಬಂದೀತು. ಎಂಥಾ ಫಜೀತಿ. ಈ ಮಧ್ಯೆ ಇನ್ನಷ್ಟು ಮತ್ತಷ್ಟು ಪರಮಾಣು ಸ್ಥಾವರಗಳನ್ನು ನಿರ್ಮಿಸುವ ಪೈಪೋಟಿ ಎಲ್ಲೆಡೆ ಹೆಚ್ಚುತ್ತಿದೆ. ಏಕೆಂದರೆ, ಅದರಿಂದ ವಿದ್ಯುತ್‌ ಉತ್ಪಾದನೆ ಆಗುತ್ತಿರುವಾಗ ಕಾರ್ಬನ್‌ ಡೈ ಆಕ್ಸೈಡ್‌ ಹೊಮ್ಮುವುದಿಲ್ಲ. ಹಾಗಾಗಿ, ಬಿಸಿ ಪ್ರಳಯವನ್ನು ತಡೆಗಟ್ಟಬೇಕೆಂದರೆ ಅಂಥ ನ್ಯೂಕ್ಲಿಯರ್‌ ರಿಯಾಕ್ಟರ್‌ಗಳೇ ಬೇಕೆಂದು ಬಿಂಬಿಸಲಾಗುತ್ತಿದೆ. ವಿವಿಧ ದೇಶಗಳಲ್ಲಿ ಸದ್ಯಕ್ಕೆ 416 ರಿಯಾಕ್ಟರ್‌ಗಳು ಚಾಲ್ತಿಯಲ್ಲಿವೆ. ವಿಪರೀತ ವೆಚ್ಚ ಮತ್ತು ನಿರ್ವಹಣೆಯ ಸಂಕಷ್ಟಗಳಿಂದಾಗಿ ಕಳೆದ 40 ವರ್ಷಗಳಿಂದ ಹೊಸ ಪರಮಾಣು ಸ್ಥಾವರಗಳ ನಿರ್ಮಾಣ ಪಾಶ್ಚಿಮಾತ್ಯ ದೇಶಗಳಲ್ಲಿ ಬಹುತೇಕ ನಿಂತೇ ಹೋಗಿತ್ತು. ಈಗ ‘ಕಳಚಿ ಕೂಡಿಸಬಹುದಾದ’ ಚಿಕ್ಕಚಿಕ್ಕ ‘ಮಾಡ್ಯೂಲರ್‌ ರಿಯಾಕ್ಟರ್‌’ಗಳ (ಮಾ.ರಿ.) ನಿರ್ಮಾಣ ಸಿದ್ಧತೆ ಜೋರಾಗಿ ನಡೆಯುತ್ತಿದೆ.

ಹಿಂದೆಲ್ಲ ಬೃಹತ್‌ ಸ್ಥಾವರ ಸಂಕೀರ್ಣದ ಒಂದೊಂದು ಘಟಕವೂ ಸಾವಿರ ಮೆಗಾವಾಟ್‌ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸುತ್ತಿತ್ತು. ಈಗಿನ ಪುಟ್ಟ ‘ಮಾ.ರಿ.’ಗಳು ಕೇವಲ 200-300 ಮೆಗಾವಾಟ್‌ ಸಾಮರ್ಥ್ಯದ ಅಥವಾ ಅದಕ್ಕೂ ಚಿಕ್ಕವಿರುತ್ತವೆ. ಚಳಿದೇಶಗಳಲ್ಲಿ ಬರೀ ಬಿಸಿನೀರನ್ನು ಪೂರೈಸುವ ಕೆಲಸವನ್ನೂ ಅವು ಮಾಡಬಲ್ಲವು. ರಷ್ಯಾ ಮತ್ತು ಚೀನಾ ಆಗಲೇ ತಲಾ ಒಂದೊಂದು ಮಾ.ರಿ.ಯನ್ನು ಸ್ಥಾಪಿಸಿದ್ದು, ವಿವಿಧ ದೇಶಗಳಲ್ಲಿ 80ಕ್ಕೂ ಹೆಚ್ಚು ಅಂಥ ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ.

ಅದು ಸಾಲದೆಂಬಂತೆ ಹಡಗಿನಂತೆ ತೇಲುವ ರಿಯಾಕ್ಟರ್‌ಗಳ (ತೇ.ರಿ.) ನಿರ್ಮಾಣಕ್ಕೂ ಚಾಲನೆ ಸಿಕ್ಕಿದೆ. ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ ಬಳಿಯ ಸಮುದ್ರದಂಚಿಗೆ ಇಂಥದ್ದೊಂದು ಸ್ಥಾವರ ಸಿದ್ಧವಾಗಿದೆ. ಜಂಗಮ ಮಾದರಿಯ ‘ಈ ಸ್ಥಾವರ ನಿಮಗೂ ಉಪಯುಕ್ತ’ ಎನ್ನುತ್ತ ರಷ್ಯಾ ಇತರ 17 ರಾಷ್ಟ್ರಗಳ ಮನವೊಲಿಸಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅಂಥ ಹಡಗುಗಳನ್ನು ರಷ್ಯಾಕ್ಕೇ ತರಿಸಿ, ಅಲ್ಲಿ ಹಳೇ ಇಂಧನವನ್ನು ಕಳಚಿ ಹೊಸ ಇಂಧನ ತುಂಬಿಸಿ ಕಳಿಸಬಹುದು. ಮಿತ್ರತ್ವವೂ ಗಟ್ಟಿ ಉಳಿಯುತ್ತದೆ. ಅದಕ್ಕೆ ಭಾರತವೂ ಉತ್ಸಾಹ ತೋರಿಸಿದೆ. ಅತ್ತ ಅಮೆರಿಕದಲ್ಲಿ ಬಸ್‌ ಗಾತ್ರದ ಉರುಳುವ ರಿಯಾಕ್ಟರ್‌ಗಳ (ಉ.ರಿ) ವಿನ್ಯಾಸ ಸಿದ್ಧ ವಾಗುತ್ತಿದೆ. ಭೂಕುಸಿತ, ಚಂಡಮಾರುತ ದುರಂತದಲ್ಲಿ ತುರ್ತಾಗಿ ವಿದ್ಯುತ್‌ ಒದಗಿಸಲು ಇಂಥವು ಬೇಕು ಎಂದು ಪರಮಾಣು ಪೂರೈಕೆದಾರರು ವಶೀಲಿಕೆಯಲ್ಲಿ ತೊಡಗಿದ್ದಾರೆ. ಇನ್ನೇನು, ಸಿನಿಮಾ ಶೂಟಿಂಗಿಗೂ ಡೀಸೆಲ್‌ ಜನರೇಟರ್‌ ಬದಲಿಗೆ ಶೂ.ರಿ.ಗಳು ಬರಬಹುದು.

ಪರಮಾಣು ಕೆಂಡದ ಸಾಮಗ್ರಿ ಹೀಗೆಲ್ಲ ಚಲಾವಣೆಗೆ ಬಂದಿದ್ದೇ ಆದರೆ ಸುರಕ್ಷೆಯ ಗತಿಯೇನು ಎಂದು ಪರಮಾಣು ತಜ್ಞರೇ ಆತಂಕಕ್ಕೀಡಾಗಿದ್ದಾರೆ. ಆಸ್ಪತ್ರೆಗಳ ಸ್ಕ್ಯಾನಿಂಗ್‌ ಯಂತ್ರಗಳಲ್ಲಿ ಜೋಡಿಸಿಟ್ಟ ಬ್ಯಾಟರಿ ಸೆಲ್‌ ಗಾತ್ರದ ಪರಮಾಣು ಡಬ್ಬಿಯೇ ಕಾಣೆಯಾಗಿ ಹಿಂದೆ ಎಷ್ಟೊಂದು ಕಡೆ ಏನೆಲ್ಲ ಕೋಲಾಹಲ ಸೃಷ್ಟಿಯಾಗಿತ್ತು. ಆಸ್ಪತ್ರೆಗಳ ಮಂಚ, ಕುರ್ಚಿಗಳನ್ನೂ ಕರಗಿಸಿ ಹೂತು, ನಗರಗಳನ್ನೇ ಖಾಲಿ ಮಾಡಿಸಿದ ಪ್ರಸಂಗ ಕೂಡ ನಡೆದಿದೆ. ಪರಮಾಣು ಸುರಕ್ಷೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕಾದ ಐಎಇಎ (ಅಂತರರಾಷ್ಟ್ರೀಯ ಪರಮಾಣು ಶಕ್ತಿ ನಿಗಮದ) ತಜ್ಞರು ಕಂಗೆಟ್ಟವರಂತೆ ಒಮ್ಮೆ ರಷ್ಯಾಕ್ಕೂ ಮತ್ತೊಮ್ಮೆ ಉಕ್ರೇನಿಗೂ ಈಗ ಇರಾನಿಗೂ ಧಾವಿಸಿ ಅಲ್ಲಿನ ಘಟಕಗಳ ಸುರಕ್ಷಾ ಪರೀಕ್ಷೆ ನಡೆಸುತ್ತಿದ್ದಾರೆ. ಇರಾನ್‌ ಕೆಲವೆಡೆ ಗೋಪ್ಯವಾಗಿ ಪರಮಾಣು ಬಾಂಬ್‌ ತಯಾರಿಕೆಯ ಘಟಕಗಳನ್ನು ಹೂಡಿಕೊಂಡಿದೆ. ಅದರ ಮೇಲೆ ಇಸ್ರೇಲ್‌ ಕಣ್ಣಿಟ್ಟಿದೆ. ಅಲ್ಲಿ ಬಾಂಬ್‌ ಹಾಕಬೇಡಿರೆಂದು ಐಎಇಎ ಗೋಗರೆಯುತ್ತಿದೆ. ಕದ್ದುಮುಚ್ಚಿಟ್ಟ ಸ್ಥಾವರಕ್ಕೂ ಅದು ಅಧಿಕೃತ ರಕ್ಷಣೆ ನೀಡಬೇಕಾಗಿದೆ.

ಹಿಂದೆಲ್ಲ ಭಯೋತ್ಪಾದಕರ ದಾಳಿಯನ್ನು ತಡೆಗಟ್ಟುವ ಮಟ್ಟಕ್ಕೆ ಮಾತ್ರ ಪರಮಾಣು ಸ್ಥಾವರಗಳ ಸುರಕ್ಷಾ ವ್ಯವಸ್ಥೆ ಸೀಮಿತವಾಗಿತ್ತು. ವೈರಿದೇಶವೇ ಬಾಂಬ್‌ ದಾಳಿ ನಡೆಸಿದರೆ ಅದರ ಕತೆಯೇ ಬೇರೆ. ಸ್ಥಾವರ ಗಟ್ಟಿಮುಟ್ಟಾಗಿದ್ದರೂ ತಂಪುನೀರಿನ ಅಥವಾ ವಿದ್ಯುತ್‌ ಪೂರೈಕೆ ವಾರಗಟ್ಟಲೆ ಸ್ಥಗಿತವಾದರೆ ಇಡೀ ಸ್ಥಾವರವೇ ಫುಕುಶಿಮಾ ಮಾದರಿಯಲ್ಲಿ ಸ್ಫೋಟ ಆದೀತು. ದ್ವೇಷದ ಕಿಚ್ಚಿಗೆ ದೇಶವೇ ನಿರ್ನಾಮ ಆಗಿ, ಗಡಿಯಾಚೆಗೂ ವಿಕಿರಣ ಮೇಘ ಪಸರಿಸಬಹುದು. ಕಾಳ್ಗಿಚ್ಚಿಗೆ ಗಡಿ ಇಲ್ಲವಲ್ಲ?

ಬಿಸಿ ಪ್ರಳಯದ ಕಿಚ್ಚನ್ನು ಆರಿಸಲೆಂದು ಪರಮಾಣು ಶಕ್ತಿಮೂಲವನ್ನು ಆರಿಸಿಕೊಳ್ಳುವುದು ಸರಿಯೆ? ಕಾವಲಿಯಿಂದ ಬೆಂಕಿಗೆ ಜಂಪ್‌ ಮಾಡಿದಂತಲ್ಲವೆ? ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚೀನಾದ ಪರಮಾಣು ಚಾಲಿತ ಜಲಾಂತರ್ಗಾಮಿ ಯೊಂದು ನಿರ್ಮಾಣ ಹಂತದಲ್ಲೇ ಮುಳುಗಿದೆ. 2000ದಲ್ಲಿ ರಷ್ಯಾದ ಅಂಥದ್ದೇ ಹಡಗು ಮುಳುಗಿ118 ಯೋಧರ ಜೀವಂತ ಜಲಸಮಾಧಿಯಾಗಿತ್ತು.ಇನ್ನು ತೇ.ರಿ.ಗಳು ಬಂದರಂತೂ ಭಯೋತ್ಪಾದಕರಿಗೆ ದೀಪಾವಳಿ ಸಂಭ್ರಮ. ಅಂತೂ ಸೆಕೆ ತಡೆಯಲೆಂದು ಗಾಳಿ ಹಾಕಿಕೊಳ್ಳು
ತ್ತಲೇ ಉಡಿಯಲ್ಲಿ ಕೆಂಡ ಕಟ್ಟಿಕೊಳ್ಳುವವರ ಕತೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.