ADVERTISEMENT

ರಥಾಶ್ವಗಳಿಂದ ರಫೇಲ್‍ವರೆಗೆ

ವಿಜ್ಞಾನ ಎಂದರೆ ನಾಳೆಗಳನ್ನು ರೂಪಿಸುವುದಷ್ಟೇ ಅಲ್ಲ, ನಿನ್ನೆಗಳನ್ನೂ ತಿದ್ದಬಹುದು

ನಾಗೇಶ ಹೆಗಡೆ
Published 11 ಅಕ್ಟೋಬರ್ 2019, 10:23 IST
Last Updated 11 ಅಕ್ಟೋಬರ್ 2019, 10:23 IST
ರಫೇಲ್‌ ಯುದ್ಧವಿಮಾನ
ರಫೇಲ್‌ ಯುದ್ಧವಿಮಾನ   

ಕಳೆದ ಸೆಪ್ಟೆಂಬರ್ 6ರಂದು ಇಡೀ ದೇಶವೇ ಚಂದ್ರಯಾನದ ಯಶಸ್ಸನ್ನು ಹಾರೈಸುತ್ತ ಭಾರತದ ಉಜ್ವಲ ಭವಿಷ್ಯದ ಕಡೆ ದೃಷ್ಟಿ ನೆಟ್ಟಿದ್ದಾಗ, ದಿಲ್ಲಿಯಲ್ಲಿ ಪುರಾತತ್ವ ವಿಜ್ಞಾನಿಗಳು ಮತ್ತು ಡಿಎನ್‍ಎ ತಜ್ಞರು ಮಾಧ್ಯಮಗೋಷ್ಠಿಯನ್ನು ಏರ್ಪಡಿಸಿದರು. ಒಂದು ಪುರಾತನ ಅಸ್ಥಿಪಂಜರ, ಅದರ ಒಂದು ತುಣುಕು ಕಿವಿಮೂಳೆ, ಅದರ ಡಿಎನ್‍ಎ ಪರೀಕ್ಷೆಯ ಫಲಿತಾಂಶ ವನ್ನು ಮುಂದಿಟ್ಟರು. ಇಡೀ ದೇಶದ ಉಜ್ವಲ ಸನಾತನ ಚರಿತ್ರೆಯೇ ಉತ್ಪ್ರೇಕ್ಷಿತವಾದುದು ಎಂದು ಸಾರಿದರು.

ಅದು ಹರ್ಯಾಣಾದ ರಾಖಿಗಢಿ ಎಂಬ ಪಟ್ಟಣದ ಅಂಚಿನ ಅಗೆತದ ಕತೆ. ಅಲ್ಲಿ 4,500 ವರ್ಷಗಳ ಹಿಂದೆ ಹೂಳಲಾಗಿದ್ದ ಒಬ್ಬ ಮಹಿಳೆಯ ತಲೆ ಮೂಳೆಯಿಂದ ವಿಜ್ಞಾನಿಗಳು ಶ್ರಮಪಟ್ಟು ಒಂದಿಷ್ಟು ಡಿಎನ್‍ಎ (ವರ್ಣತಂತು) ತೆಗೆದಿದ್ದರು. ಅದೊಂದು ಆರೆಂಟು ವರ್ಷಗಳ ಅಂತರರಾಷ್ಟ್ರೀಯ ಸಾಹಸವೇ ಆಗಿತ್ತು. ಅಮೆರಿಕ, ಜರ್ಮನಿ ಮತ್ತು ಭಾರತದ 22 ತಜ್ಞರ ಸಾಧನೆ ಅದು. ಈ ವಿಜ್ಞಾನಿಗಳು ನಖಶಿಖಾಂತ ಕವಚ ಹಾಕಿಕೊಂಡು, ಮಣ್ಣಲ್ಲಿ ಬೋರಲು ಮಲಗಿ, ಹುಷಾರಾಗಿ ಮೂಳೆಯ ಪುಟ್ಟ ಭಾಗವನ್ನು ಕಿತ್ತು, ಭದ್ರ ಪೆಟ್ಟಿಗೆಯಲ್ಲಿ ದೂರದ ಲಖ್ನೋ ಲ್ಯಾಬಿಗೆ ಸಾಗಿಸಿ ಅದರಲ್ಲಿ ವರ್ಣತಂತು ಇದೆಯೇ ನೋಡಬೇಕು. ಆ ಮೂಳೆಚೂರಿಗೆ ವಿಜ್ಞಾನಿಗಳ ಸ್ವಂತದ ಚರ್ಮದ ಹಕ್ಕಳೆ ಅಥವಾ ರೋಮದ ತುಣುಕು ಕೂಡ ಅಂಟಬಾರದು. ಅಷ್ಟೆಲ್ಲ ಮಾಡಿಯೂ ಆ ಮೂಳೆ ಯಲ್ಲಿ ಡಿಎನ್‍ಎ ಸಿಕ್ಕಿಲ್ಲ ಎಂದರೆ ಮರಳಿ ಯತ್ನಿಸಬೇಕು. ಅಂತೂ ಇಂತೂ ರಾಖಿಗಢಿಯಲ್ಲಿ ಸಿಕ್ಕ ಐದಾರು ಅಸ್ಥಿಪಂಜರಗಳಲ್ಲಿ ಇದೊಂದರಲ್ಲಿ ಡಿಎನ್‍ಎ ಸಿಕ್ಕಿತು. ಅದನ್ನು ನಾಜೂಕಾಗಿ ವಿಶ್ಲೇಷಣೆ ಮಾಡಿ, ಅದರಲ್ಲಿ ಈ ಸಂಶೋ ಧಕರ ಡಿಎನ್‍ಎಗಳು ಕಲಸುಮೇಲೋಗರ ಆಗಿಲ್ಲವೆಂದು ಖಾತ್ರಿಯಾದ ನಂತರ, ಅದರ ಅಧ್ಯಯನ ಮಾಡಬೇಕು.

ಒಬ್ಬ ವ್ಯಕ್ತಿಯ ಡಿಎನ್‍ಎಯಲ್ಲಿ ಇಡೀ ಪೀಳಿಗೆಯ ಚರಿತ್ರೆ ಅಡಗಿರುತ್ತದೆ. ಈಯಮ್ಮನ ಪೂರ್ವಜರು ದಕ್ಷಿಣ ಭಾರತದ ಜನರನ್ನು ಹೋಲುತ್ತಿದ್ದರೆ? ಅಥವಾ ಗ್ರೀಕರ, ಇರಾನಿಗಳ ಲಕ್ಷಣವಿದೆಯೆ ಅಥವಾ ಅನೇಕ ಜನಾಂಗಗಳ ಮಿಶ್ರಣ ಆಗಿದೆಯೆ ಎಂಬುದನ್ನು ಆಯಾ ಜನಾಂಗಗಳ ಜನರ ಡಿಎನ್‍ಎ ಜತೆ ಹೋಲಿಸಿ ನೋಡಿದರು. ಅದೇ ವೇಳೆಗೆ 111 ವಿಜ್ಞಾನಿಗಳ ಬೇರೊಂದು ತಂಡ ಯುರೋಪ್, ಏಷ್ಯಾಗಳ ವಿವಿಧ ರಾಷ್ಟ್ರಗಳಲ್ಲಿ ಸಿಕ್ಕಿದ್ದ 523 ಅಸ್ಥಿಪಂಜರಗಳ ಡಿಎನ್‍ಎ ಪರೀಕ್ಷೆ ಮಾಡಿತು. ಎರಡೂ ತಂಡಗಳ ಸಂಶೋಧನ ಪ್ರಬಂಧ ಕಳೆದ ವರ್ಷವೇ ಸಿದ್ಧವಾಗಿತ್ತು. ಈ ವಿಷಯದ ಬಗ್ಗೆ ವಿದ್ವಜ್ಜನರ ಅಪಾರ ಕುತೂಹಲ ಇದ್ದುದರಿಂದ, ಅಷ್ಟಿಷ್ಟು ಫಲಿತಾಂಶ ಸೋರಿಕೆಯಾಗಿ ವಿವಾದಗಳ ಬಿರುಗಾಳಿಯೇ ಎದ್ದಿತ್ತು. ಎಲ್ಲರೂ ಅಧಿಕೃತ ಪ್ರಕಟನೆಗೆ ಕಾಯುತ್ತಿದ್ದರು. ಅಂತೂ ರಾಖಿಗಢಿಯ ಮೂಳೆಯ ಫಲಿತಾಂಶ ‘ಸೆಲ್’ ಎಂಬ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಯಲ್ಲಿ ಕಳೆದ ತಿಂಗಳು ಪ್ರಕಟವಾಯಿತು. ಪ್ರಕಟನೆಯ ದಿನವೇ ದಿಲ್ಲಿಯಲ್ಲಿ ಕಿಕ್ಕಿರಿದ ಗೋಷ್ಠಿಯಲ್ಲಿ ಇಬ್ಬರು ವಿಜ್ಞಾನಿಗಳು ಸಂಶೋಧನೆಯ ಮುಖ್ಯಾಂಶವನ್ನು ಜಾಹೀರು ಮಾಡಿದರು. ಅದೇ ದಿನ, ‘ಸೈನ್ಸ್’ ಎಂಬ ಬೇರೊಂದು, ಅಷ್ಟೇ ಪ್ರತಿಷ್ಠಿತ ಪತ್ರಿಕೆಯಲ್ಲಿ ಆ ದೊಡ್ಡ ಸಂಶೋಧನಾ ತಂಡದ ಪ್ರಬಂಧವೂ ಪ್ರಕಟವಾಯಿತು. ಆ ದಿನ ಜನರ ಗಮನವೆಲ್ಲ ಚಂದ್ರಯಾನದ ಮೇಲೆ ಇತ್ತಾದರೂ ಬೌದ್ಧಿಕ ವಲಯದಲ್ಲಿ ಈ ಎರಡು ವರದಿಗಳು ವಾಗ್ವಾದದ ಬಿರುಗಾಳಿಗೆ ಕಾರಣವಾದವು.

ADVERTISEMENT

ಒಟ್ಟೂ ವಿವಾದದ ಹಿನ್ನೆಲೆ ಹೀಗಿದೆ: 1920ರಲ್ಲಿ ಸಿಂಧೂ ಕಣಿವೆಯ ಮೊಹೆಂಜೊ-ದಡೊ ಮತ್ತು ಹಡಪ್ಪಾಗಳ ಹೂಳುಮಣ್ಣಿನಲ್ಲಿ ಆರೇಳು ಸಾವಿರ ವರ್ಷಗಳ ಹಿಂದಿನ ಅವಶೇಷಗಳು ಪತ್ತೆಯಾದಾಗ ಜಗತ್ತೇ ಅಚ್ಚರಿಗೊಂಡಿತ್ತು. ಏಕೆಂದರೆ ಅಷ್ಟು ಹಿಂದಿನ ಕಾಲದಲ್ಲಿ ದೂರದ ಈಜಿಪ್ಟ್‌, ಬ್ಯಾಬಿಲೋನಿಯಾದಲ್ಲೆಲ್ಲ ಕಾಡು ಜನಾಂಗವೇ ಇದ್ದಾಗ, ನಮ್ಮಲ್ಲಿ ನಾಗರಿಕತೆ ಬೇರೂರಿದ ಕುರುಹುಗಳು ಅಲ್ಲಿ ಸಿಂಧೂ ಕಣಿವೆಯಲ್ಲಿ ಸಿಕ್ಕವು. ನಾವು ಹೆಮ್ಮೆ ಪಟ್ಟೆವು. ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ಪುರಾತನವಾಗಿದ್ದು, ವೇದಗಳು ಭಾರತದಲ್ಲೇ ಸೃಷ್ಟಿಯಾಗಿವೆ ಎಂದು ಹೇಳುತ್ತ ಬಂದಿದ್ದ ಪುರಾಣತಜ್ಞರಿಗೆ ಆಧಾರ ಸಿಕ್ಕಂತಾಯಿತು. ಆದರೆ ಇತಿಹಾಸಕಾರರು, ಉತ್ಖನನತಜ್ಞರು ಅದನ್ನು ಒಪ್ಪುತ್ತಿರಲಿಲ್ಲ. ಮಧ್ಯ ಏಷ್ಯಾದಿಂದ ವಲಸಿಗರು ಬಂದು ಇಲ್ಲಿನವರ ಜೊತೆ ಸೇರಿ ಮಿಶ್ರ ಸಂಸ್ಕೃತಿಯನ್ನು ಹುಟ್ಟು ಹಾಕಿದರು ಎನ್ನುತ್ತಿದ್ದರು. ನಮ್ಮ ಪೂರ್ವಜರ ಸಂಸ್ಕೃತಿ, ಕಸುಬು, ಜ್ಞಾನ, ಭಾಷೆ, ವಿಜ್ಞಾನಗಳಲ್ಲೆಲ್ಲೂ ಅಪ್ಪಟ ಭಾರತೀಯತೆ ಅನ್ನೋದು ಇಲ್ಲ ಎಂಬುದು ವಿಜ್ಞಾನಿಗಳ ವಾದವಾಗಿತ್ತು. ಇದನ್ನು ನಮ್ಮ ಹಿಂದುತ್ವವಾದಿಗಳು ಒಪ್ಪುತ್ತಿಲ್ಲ. ಆರ್ಯರ ದಾಳಿಯಾಗಿಲ್ಲ, ಅವರ ಪ್ರಭಾವ ಬಿದ್ದೇ ಇಲ್ಲ, ಇದು ಹಿಂದೂಗಳದ್ದೇ ರಾಷ್ಟ್ರ ಎಂಬುದು ಇವರ ವಾದ.

ಈಗ ರಾಖಿಗಢಿಗೆ ಬರೋಣ: ಮೊಹೆಂಜೊ-ದಡೊ ಮತ್ತು ಹಡಪ್ಪ ಎರಡೂ ಪಾಕಿಸ್ತಾನಕ್ಕೆ ಸೇರಿದವು. ಆದರೆ 1962ರಲ್ಲಿ ಹರ್ಯಾಣಾದಲ್ಲಿ ರಾಖಿಗಢಿ ಎಂಬಲ್ಲಿ ಪುರಾತನ ನಾಗರಿಕತೆಯ ಅವಶೇಷಗಳು ಪತ್ತೆಯಾದವು. ಸಿಂಧೂ ನಾಗರಿಕತೆಗಿಂತ ಹೆಚ್ಚಿನ ಖ್ಯಾತಿ ಇದಕ್ಕೆ ಸಿಕ್ಕಿತು. ಇದು ಅವೆರಡಕ್ಕಿಂತ ದೊಡ್ಡದು; ಇನ್ನಷ್ಟು ಹಳೆಯದೂ ಹೌದೆಂಬುದು ಗೊತ್ತಾಗಿದೆ. ಅಷ್ಟೇ ಅಲ್ಲ, ಸಿಂಧೂ ನಾಗರಿಕತೆಯ ಅವಸಾನದ ನಂತರವೂ ರಾಖಿಗಢಿಯಲ್ಲಿ ನಾಗರಿಕತೆ ಮುಂದುವರಿದ ಲಕ್ಷಣಗಳು ಸಿಕ್ಕಿವೆ. ನಾಲ್ಕೈದು ಸಾವಿರ ವರ್ಷಗಳ ಹಿಂದೆಯೇ ಅಚ್ಚುಕಟ್ಟಾದ ಗಟ್ಟಿ ರಸ್ತೆಗಳು, ಶಿಸ್ತಿನ ಕಾಲುವೆ- ಚರಂಡಿಗಳು, ಸುಟ್ಟಿಟ್ಟಿಗೆ, ಮೊಹರು, ತೂಕದ ಬಟ್ಟು, ವಿಗ್ರಹ, ಆಭರಣಗಳು, ಚಿನ್ನಬೆಳ್ಳಿ ಖಚಿತ ಕಂಚಿನ ಪಾತ್ರೆಗಳು ಸಿಕ್ಕಿವೆ.

ಹಾಗಿದ್ದರೆ ಡಿಎನ್‍ಎ ಸಂಶೋಧನೆಗಳು ಹೇಳಿದ್ದೇನು? 111 ವಿಜ್ಞಾನಿಗಳು 523 ಮೂಳೆಗಳ ಪರೀಕ್ಷೆ ಮಾಡಿ, ಇನ್ನಿತರ ದಾಖಲೆಗಳನ್ನು ಆಧರಿಸಿ ಹೇಳಿದ ಪ್ರಕಾರ, 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ಬಂದ ಮೂಲಜನರು ಸಿಂಧೂತೀರ, ದಕ್ಷಿಣ ಭಾರತ, ಶ್ರೀಲಂಕಾ, ಅಂಡಮಾನ್, ಮಲೇಶ್ಯ, ಆಸ್ಟ್ರೇಲಿಯಾ ವರೆಗೆ ಹೋಗಿ ನೆಲೆಸಿದ್ದರು. ನಾಲ್ಕೈದು ಸಾವಿರ ವರ್ಷಗಳ ಹಿಂದೆ ಇರಾನ್ ಮತ್ತು ಮಧ್ಯ ಏಷ್ಯಾದಲ್ಲಿ ಪಶುಪಾಲನೆ ಮಾಡುತ್ತಿದ್ದ ಜನರು ಸಿಂಧೂಕಣಿವೆಗೆ ಬಂದು ಇಲ್ಲಿನ ಮೂಲ ಜನರ ಜೊತೆ ಬೆರೆತು ಕೃಷಿ ಮತ್ತು ನಗರಸಂಸ್ಕೃತಿಯನ್ನು ಬೆಳೆಸಿದರು. ಈ ಬೆರಕೆ ಪೀಳಿಗೆಯ ಒಂದು ಧಾರೆ ದಕ್ಷಿಣ ಭಾರತಕ್ಕೂ ಬಂತು. ಮೂರನೆಯ ಹಂತದಲ್ಲಿ, ಅಂದರೆ ಸುಮಾರು 3,500 ವರ್ಷಗಳ ಹಿಂದೆ, ಕಂಚಿನ ಯುಗದ ಜನರು ಪೂರ್ವ ಯುರೋಪ್, ಸಿರಿಯಾ, ಕಝಾಕ್‍ಸ್ತಾನ ಕಡೆಯಿಂದ (ಆರ್ಯರು) ಬಂದರು. ರಥ, ಕುದುರೆ ಮತ್ತು ಸಂಸ್ಕೃತದಂಥ ಇಂಡೋ- ಐರೋಪ್ಯ ಭಾಷೆಯನ್ನೂ ತಂದರು. ಅವರು ಭಾರತದ ಎಲ್ಲೆಡೆ, ವಿಶೇಷವಾಗಿ ಉತ್ತರ ಭಾರತದ ಕಡೆ ನೆಲೆಸಿದರು. ಹಾಗಾಗಿಯೇ ಇಂದು ಎಲ್ಲ ಭಾರತೀಯರ ಡಿಎನ್‍ಎಯಲ್ಲೂ ಆರ್ಯನ್ ಲಕ್ಷಣಗಳಿವೆ.

ಹಾಗಿದ್ದರೆ ವೇದ- ಪುರಾಣಗಳ ಕತೆ ಏನು? ಅವುಗಳಲ್ಲಿ ಹೇಳಲಾದ ಖಗೋಳ ಲಕ್ಷಣಗಳನ್ನು ಆಧರಿಸಿದ ಹಿಂದುತ್ವವಾದಿಗಳು ವಾದಿಸುವ ಪ್ರಕಾರ, ವೇದಗಳು 9,000, ರಾಮಾಯಣ 7,000 ಮತ್ತು ಮಹಾಭಾರತ 5,000 ವರ್ಷಗಳ ಹಿಂದಿನದಾಗಿದ್ದು, ವೇದಗಳೇ ಸಿಂಧೂ- ಸರಸ್ವತಿ ನಾಗರಿಕತೆಯನ್ನು ಬೆಳಗಿಸಿವೆ. ಆದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಆರ್ಯರ ಆಗಮನದ ನಂತರವೇ ಕುದುರೆ, ರಥಗಳು ಬಂದವು; ವರ್ಣಾಶ್ರಮ, ಯಜ್ಞ ಯಾಗಾದಿಗಳು ಬಂದವು. ರಾಖಿಗಢಿಯ ಆ ಅಮ್ಮನ ಡಿಎನ್‍ಎಯಲ್ಲಿ ಅಂಥ ಆರ್ಯ ಸಂಸ್ಕೃತಿಯ ಕುರುಹುಗಳೇ ಇಲ್ಲ. ಅವಳು ಬದುಕಿದ ಪರಿಸರಕ್ಕೆ ರಥಗಳು ಬಂದಿರಲಿಲ್ಲ.

ನಿನ್ನೆಗಳನ್ನೇ ಅಪ್ಪಿ ಹಿಡಿದ ಹಿಂದೂ ಸನಾತನಿಗಳು ಇದನ್ನು ಈಗಲೂ ಒಪ್ಪುತ್ತಿಲ್ಲ; ರಥಾಶ್ವಗಳು, ದೇವೇಂದ್ರನ ವಜ್ರಾಯುಧವೂ ನಮ್ಮವೆಂದೇ ವಾದಿಸುತ್ತಾರೆ. ಇರಲಿ ಬಿಡಿ. ಫ್ರಾನ್ಸ್ ದೇಶದ ರಫೇಲ್ ಯುದ್ಧವಿಮಾನಕ್ಕೆ ಗಂಧ ತಿಲಕ ಹಚ್ಚಿ ತಂದು, ನಾಳೆ ಅದೂ ನಮ್ಮದೆಂದೇ ವಾದಿಸಬಹುದಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.