ಗರ್ಭದ ಶಿಶುಗಳಿಗೆ ಗೀತಾಪಾಠ, ರಾಮಾಯಣ, ಯೋಗವಿದ್ಯೆಗಳನ್ನು ಪರಿಚಯಿಸುವ ಹೊಸ ಅಭಿಯಾನವನ್ನು ಆರ್‌ಎಸ್‌ಎಸ್‌ನ ಅಂಗಸಂಸ್ಥೆ ‘ಸಂವರ್ಧಿನೀ ನ್ಯಾಸ್’ ಆರಂಭಿಸಿದೆ. ಇದರ ಆರಂಭಿಕ ಕಾರ್ಯಾಗಾರವನ್ನು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಳೆದ ಭಾನುವಾರ ಏರ್ಪಡಿಸಲಾಗಿತ್ತು. ಪ್ರಗತಿಪರ ವಿಚಾರಗಳ ತೊಟ್ಟಿಲು ಎಂದೇ ಹೆಸರಾಗಿದ್ದ ಈ ವಿಶ್ವ
ವಿದ್ಯಾಲಯದಲ್ಲಿ ಈಗ ಬೇರೆ ತೊಟ್ಟಿಲೂ ತೂಗತೊಡಗಿದೆ.
ಗರ್ಭದಲ್ಲಿರುವ ಜೀವಿಗಳು ಹೊರಗಿನ ಸದ್ದುಗದ್ದಲಗಳಿಗೆ ಹೇಗೆ ಸ್ಪಂದಿಸುತ್ತವೆ ಎಂಬ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಪ್ರಯೋಗಗಳನ್ನು ನಡೆಸಿದ್ದಾರೆ. ಇದುವರೆಗೆ ಗೊತ್ತಾಗಿರುವ ತಥ್ಯ ಏನೆಂದರೆ, ಗರ್ಭದ ಚೀಲದಲ್ಲಿರುವ ದ್ರವದಲ್ಲಿ ಎಳೆಜೀವ ಮುಳುಗಿರುವುದರಿಂದ ಹೊರಗಿನ ಧ್ವನಿ ತರಂಗಗಳು ಅಲ್ಲಿಗೆ ಯಥಾವತ್ತಾಗಿ ತಲುಪಲಾರವು. ಮೇಲಾಗಿ, ಚೀಲದ ಸುತ್ತ ತಾಯಿಯ ಶರೀರದ ಅನೇಕ ಪದರಗಳೂ ಬಟ್ಟೆಯೂ ಇರುವುದರಿಂದ ಭಜನೆ, ಕೀರ್ತನೆಗಳೆಲ್ಲ ಅಲ್ಲಿಗೆ ತಲುಪುವುದು ಕಷ್ಟ. ಅದೂ ಅಲ್ಲದೆ, ದಿನದ ಬಹುಕಾಲ ಶಿಶು ನಿದ್ರಾಸ್ಥಿತಿಯಲ್ಲೇ ಇರುತ್ತದೆ. ಹಠಾತ್ತಾಗಿ ಜೋರಾದ ಸದ್ದು ಕೇಳಿದಾಗ ಅದು ಬೆಚ್ಚಿ ಬೀಳುತ್ತದೆ; ಗಂಟೆ- ಜಾಗಟೆಗಳಂಥ ಸದ್ದು ಪದೇಪದೇ ಬರುತ್ತಿದ್ದರೆ ಶಿಶು ಮತ್ತೆ ನಿದ್ದೆಹೋಗುತ್ತದೆ.
ಮಹಾಭಾರತದಲ್ಲಿ ಗರ್ಭದ ಶಿಶುವಿಗೆ ಪಾಠ ಹೇಳಿದ ಪ್ರಸಂಗವಿದೆ. ಚಕ್ರವ್ಯೂಹವನ್ನು ಭೇದಿಸುವುದು ಹೇಗೆಂದು ತಂಗಿ ಸುಭದ್ರೆಯ ಗರ್ಭದಲ್ಲಿನ ಅಭಿಮನ್ಯುವಿಗೆ ಶ್ರೀಕೃಷ್ಣ ಅರ್ಧದಷ್ಟು ಬೋಧಿಸಿದನೆಂದೂ ನಂತರ ಸುಭದ್ರೆ ನಿದ್ದೆ ಹೋಗಿದ್ದರಿಂದ ಚಕ್ರವ್ಯೂಹದಿಂದ ಹೊರಕ್ಕೆ ಬರುವ ಪಾಠ ಹಾಗೇ ಬಾಕಿ ಉಳಿಯಿತೆಂದೂ ಕತೆ ಇದೆ. ರೇಖಾಚಿತ್ರಗಳಿಲ್ಲದೆ ಬರೀ ಬಾಯಿಮಾತಿನಲ್ಲಿ ವ್ಯೂಹರಚನೆಯ ತಾಂತ್ರಿಕ ವಿವರಗಳನ್ನು ಹೇಳುತ್ತಿದ್ದರೆ ಯಾರಿಗಾದರೂ ನಿದ್ದೆ ಬರುತ್ತದೆ. ಅಂಥ ಚಂದದ ಕತೆಗಳನ್ನು ಕತೆಗಳೆಂದು ಆಸ್ವಾದಿಸಬೇಕೆ ವಿನಾ ಅವೇ ನಿಜವೆಂದು ನಂಬಲಾಗದು. ಗಾಂಧಾರಿ ತನ್ನ ಗರ್ಭದ ತುಣುಕುಗಳನ್ನು ನೂರೊಂದು ಮಡಕೆಗಳಲ್ಲಿ ಬೆಳೆಸಿದಳೆಂಬ ಕತೆಯನ್ನು ಆಧಾರವಾಗಿಟ್ಟುಕೊಂಡು ಆಗಿನ ಕಾಲದ ‘ವೈಜ್ಞಾನಿಕ ಸಾಧನೆ’ಗಳನ್ನು ಹೊಗಳಿದವರನ್ನು ಈಗಿನ ವಿಜ್ಞಾನಿಗಳು ಕಟುವಾಗಿ ಟೀಕಿಸಿದ್ದು ನಮಗೆ ಗೊತ್ತೇ ಇದೆ.
ಮಗುವಿಗೆ ಎರಡು ವರ್ಷ ತುಂಬುವವರೆಗೂ ಈ ‘ಗರ್ಭ ಸಂಸ್ಕಾರ’ ಅಭಿಯಾನ ನಡೆಯಲಿದೆಯಂತೆ. ಎರಡೇನು, ಬದುಕಿನುದ್ದಕ್ಕೂ ಪುರಾಣ ಪುಣ್ಯಕತೆಗಳನ್ನು ಕೇಳಿಸಿಕೊಂಡವರೂ ಹಾದಿ ತಪ್ಪುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು ಮಠ-ಮಂದಿರಗಳಲ್ಲಿ ಪದೇಪದೇ ಸಿಗುತ್ತಿವೆ. ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಪಾಂಡೆ ಎಂಬ ಮಹಿಳೆ 2019ರ ಮಹಾತ್ಮ ಗಾಂಧಿ ಪುಣ್ಯತಿಥಿಯ ದಿನವೇ ಗಾಂಧೀಜಿಯ ವರ್ಣಚಿತ್ರಕ್ಕೆ ಆಟಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಕೆಂಪುಬಣ್ಣ ಜಿನುಗುವಂತೆ ಮಾಡಿದಳು. ಆಕೆಯ ಜೊತೆಗಿದ್ದವರು ‘ಮಹಾತ್ಮ ನಾಥೂರಾಮ್ ಗೋಡ್ಸೆ ಅಮರ್ ರಹೇ’ ಎಂದು ಘೋಷಣೆ ಕೂಗಿದರು. ಆ ‘ಸಂಭ್ರಮ’ದ ದೃಶ್ಯವನ್ನು ಟ್ವಿಟರ್ ಮೂಲಕ ಲೋಕಕ್ಕೆಲ್ಲ ವಿತರಿಸಲಾಯಿತು. ಅವರಿಗೆಲ್ಲ ಬಾಲ್ಯದಲ್ಲಿ ಅದೆಂಥ ಸಂಸ್ಕಾರ ಸಿಕ್ಕಿತ್ತೊ?
ಹುಟ್ಟಲಿರುವ ಶಿಶುಗಳಿಗೆ ನೀತಿ- ನಡಾವಳಿಯನ್ನು ಬೋಧಿಸಲೆಂದು ಕಾಲವನ್ನು ಹಿಂದಕ್ಕೆ ತಳ್ಳುವವರನ್ನು ಅಲ್ಲೇ ಬಿಟ್ಟು ಮುಂದೆ ಹೋಗೋಣ. ನಮ್ಮ ಇಡೀ ನಾಗರಿಕತೆ ಇಂದು ಯಾಂತ್ರಿಕ ಬುದ್ಧಿಮತ್ತೆಯ (ಯಾಂಬು) ಲೋಕಕ್ಕೆ ತ್ವರಿತವಾಗಿ ಜಾರುತ್ತಿದೆ. ಅಲ್ಲೂ ಎರಡು ದಾರಿಗಳಲ್ಲಿ ತೀವ್ರ ಸಂಶೋಧನೆಗಳು ನಡೆಯುತ್ತಿವೆ: 1. ಯಾಂತ್ರಿಕ ಬುದ್ಧಿ ಚುರುಕಾಗಿದ್ದರೂ ಭಾವನೆಗಳ ವಿಷಯದಲ್ಲಿ ಈಗಿನ್ನೂ ಬಾಲ್ಯಾವಸ್ಥೆಯಲ್ಲಿರುವ ರೋಬಾಟ್‌ಗಳಿಗೆ ಸಂವೇದನೆಯನ್ನು ತುಂಬುವುದು ಹೇಗೆ? 2. ಎಳೆಯ ಮಕ್ಕಳನ್ನು ಯಾಂಬು ಲೋಕವೆಂಬ ಚಕ್ರವ್ಯೂಹದಲ್ಲಿ ತೊಡಗಿಸುವುದು ಹೇಗೆ?
ಈಗಂತೂ ಯಾಂಬು ಸಾಧನಗಳೇ ಪೊಲೀಸರ, ಪೈಲಟ್‌ಗಳ, ಸಂಶೋಧಕರ, ಶಿಕ್ಷಕರ, ಎಂಜಿನಿಯರ್‌ಗಳ ಕೆಲಸಗಳನ್ನು ಇನ್ನಷ್ಟು ದಕ್ಷತೆಯಿಂದ ಇನ್ನಷ್ಟು ಶೀಘ್ರವಾಗಿ ಮಾಡತೊಡಗಿವೆ. ರೋಗಿಯ ಹೊಟ್ಟೆಯೊಳಗಿನ ಗಡ್ಡೆಯನ್ನು ಯಂತ್ರಗಳೇ ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆ ನಡೆಸಿ, ಔಷಧಗಳನ್ನೂ ಸೂಚಿಸುತ್ತಿವೆ. ಕಲೆ, ಸಂಗೀತ ಕ್ಷೇತ್ರದಲ್ಲೂ ಪಳಗಿವೆ. ರೋಬಾಟ್ ರಚಿಸಿದ ತೈಲಚಿತ್ರವೊಂದು 4.32 ಲಕ್ಷ ಡಾಲರ್‌ಗೆ ಐದು ವರ್ಷಗಳ ಹಿಂದೆಯೇ ಲಿಲಾವಾಗಿತ್ತು. ಆರು ವರ್ಷದ ಮಗು ಕೂಡ ಈಗ ತನ್ನ ಕೈಯಲ್ಲಿನ ಮೊಬೈಲ್‌ಗೆ ಆದೇಶ ಕೊಟ್ಟು ತನ್ನ ಊಹೆಯ ಚಿತ್ರವನ್ನು ತಾನೇ ಸೃಷ್ಟಿಸಬಹುದು. ‘ಜೋಕಾಲಿಯ ಮೇಲೆ ಕೂತ ಕೋತಿಯ ಕೈಯಲ್ಲಿ ಹಗ್ಗವಲ್ಲ, ಹಾವು’ ಎಂದು
ಮೌಖಿಕ ಆದೇಶ ಕೊಟ್ಟರೂ ಸಾಕು, ಆ ಚಿತ್ರ ತಂತಾನೇ ಸೃಷ್ಟಿಯಾಗಿ ಮೊಬೈಲ್ ಪರದೆಯ ಮೇಲೆ ಮೂಡುತ್ತದೆ. ಚಿತ್ರ ರಚನೆಗೆ ಕಲಾವಿದ ಬೇಕಾಗಿಯೇ ಇಲ್ಲ. ಕಾರಕೂನಿಕೆಯೂ ಅಷ್ಟೆ: ಬಾಯಲ್ಲಿ ಹೇಳಿದ್ದನ್ನು ಅಕ್ಷರ ರೂಪಕ್ಕೆ ಪರಿವರ್ತಿಸುವ ಸಾಫ್ಟ್‌ವೇರ್ ಬಂದಿದ್ದೇ ತಡ, ಮೆಡಿಕಲ್ ಟ್ರಾನ್ಸ್‌ಕ್ರಿಪ್ಶನ್ ಎಂಬ ಉದ್ಯೋಗ ಮೂಲೆಗುಂಪಾಯಿತು. ಈಗ ಅದರ ತದ್ವಿರುದ್ಧದ ಸಾಧ್ಯತೆಗಳೂ ಕೈಗೆಟಕಿವೆ.
ಅಂದರೆ, ಕೈಯಲ್ಲಿ ಬರೆದ ಪ್ರಬಂಧವನ್ನು ನಿಮ್ಮದೇ ಕೃತಕ ಧ್ವನಿಯಲ್ಲಿ ಭಾಷಣವನ್ನಾಗಿಸಬಹುದು. ಅದನ್ನು ನಿಮ್ಮದೇ ವಿಡಿಯೊ ಉಪನ್ಯಾಸವಾಗಿ ಪರಿವರ್ತಿಸುವ ಸಾಧನ ಕೂಡ ರೂಪುಗೊಳ್ಳುತ್ತಿದೆ.
ಮನುಷ್ಯನ ಮಿದುಳಿನ ಸಾಮರ್ಥ್ಯವನ್ನು ಮೀರಿದ ಮಹಾಮಿದುಳುಗಳು ಈಗ ಇಲೆಕ್ಟ್ರಾನಿಕ್ ಬಿಲ್ಲೆಗಳಲ್ಲಿ ರೂಪುಗೊಂಡಿವೆ. ಆದರೆ ಅದೇನಿದ್ದರೂ ಯಾಂತ್ರಿಕ ಮಿದುಳು. ಅದರಲ್ಲಿ ಸಂವೇದನೆಯನ್ನು ತುಂಬಿದ ವಿನಾ ಅದು ಮನುಷ್ಯ ಮಿದುಳಿಗೆ ಸಮನಾಗಲಾರದು. ಮಾತು-ಕೃತ್ಯ ಇಲ್ಲದಿದ್ದರೂ ನಾವು ಬೇರೆಯವರ ಭಾವನೆ, ನಂಬುಗೆ, ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುವ ಹಾಗೆ ಯಂತ್ರ
ಗಳಿಗೆ ಅದು ಅರ್ಥವಾಗುವುದಿಲ್ಲ. ಕೃತಕ ಮಿದುಳುಗಳಲ್ಲಿ ಭಾವನೆಗಳನ್ನು ತೂರಿಸುವುದು ಹೇಗೆಂಬ ಬಗ್ಗೆ ಮನೋ ವಿಜ್ಞಾನಿಗಳ ನೆರವಿನಿಂದ ಸಂಶೋಧನೆಗಳು ನಡೆಯುತ್ತಿವೆ. ಆ ಕ್ಷೇತ್ರದಲ್ಲಿ ಹುಷಾರಾಗಿ ಕಾಲಿಡಬೇಕೆಂಬ ಎಚ್ಚರಿಕೆಯ ಮಾತುಗಳೂ ಕೇಳಬರುತ್ತಿವೆ.
ಕಳೆದ ತಿಂಗಳಲ್ಲಷ್ಟೆ ಮೈಕ್ರೊಸಾಫ್ಟ್ ಕಂಪನಿ ‘ಚಾಟ್ ಜಿಪಿಟಿ’ಯನ್ನು ಬಿಡುಗಡೆ ಮಾಡುತ್ತಲೇ ಇದೀಗ ಗೂಗಲ್- ಮೆಟಾ ಕಂಪನಿ ‘ಬಾರ್ಡ್’ ಎಂಬ ಶೋಧಸಾಧನವನ್ನು ಅಂತರ್ಜಾಲದಲ್ಲಿ ಹರಿಬಿಡುತ್ತಿದೆ. ಸೈಬರ್ ಲೋಕದ ಮಾಹಿತಿ ಸಾಗರದಲ್ಲಿ ಇವೆರಡೂ ಬಿರುಗಾಳಿಯನ್ನೇ ಎಬ್ಬಿಸಿವೆ. ‘ಶಿವಾಜಿಯ ಸೈನ್ಯದಲ್ಲಿ ಎಷ್ಟು ಮುಸ್ಲಿಂ ಸೇನಾನಿಗಳಿದ್ದರು?’ ಎಂಬ ಪ್ರಶ್ನೆಯನ್ನು ಕೇಳಿದರೆ ಅದಕ್ಕೆ ಧ್ವನಿಯ ಮೂಲಕ, ಇಲ್ಲವೆ ಲಿಖಿತ ರೂಪದಲ್ಲಿ ಗೂಗಲ್ ಉತ್ತರ (=13) ನೀಡುತ್ತಿತ್ತು. ಈಗ ಚಾಟ್ ಜಿಪಿಟಿಯಲ್ಲಿ ಇನ್ನೂ ಸಂಕೀರ್ಣ ಪ್ರಶ್ನೆಗಳನ್ನು ಕೇಳಬಹುದು: ಸಾಮ್ರಾಜ್ಯ ವಿಸ್ತರಣೆಗೂ ಮತಪ್ರಸಾರಕ್ಕೂ ಸಂಬಂಧವಿಲ್ಲವೆಂಬ ವಿಷಯದ ಮೇಲೆ ಸ್ವತಂತ್ರ ಪ್ರಬಂಧವನ್ನೇ ಅದರಿಂದ ಬರೆಸಬಹುದು. ಚಾಟ್‌ಜಿಪಿಟಿಯೊಂದಿಗೆ ಪೈಪೋಟಿಗಿಳಿದಂತೆ ಗೂಗಲ್‌ನವರ ‘ಬಾರ್ಡ್’ ಇನ್ನೂ ಚುರುಕಾದಂತಿದೆ. ‘ನನ್ನ ತಲೆಯ ಮೇಲಿನ ಆಕಾಶದಲ್ಲಿ ಈ ರಾತ್ರಿ ಯಾವ ನಕ್ಷತ್ರಪುಂಜ ಅತ್ಯಾಕರ್ಷಕ?’ ಎಂತಲೋ ಅಥವಾ ನನ್ನ ಫ್ರಿಜ್‌ನಲ್ಲಿರುವ ಸಾಮಗ್ರಿಗಳಲ್ಲಿ ಏನು ಅಡುಗೆ ಮಾಡಬಹುದು ಎಂತಲೋ ಕೇಳಿ ಉತ್ತರ ಪಡೆಯಬಹುದು. ಇಂಥ ಯಾಂಬು ಈಗಿನ್ನೂ ಕಲಿಕೆಯ ಹಂತದಲ್ಲಿದೆ. ಭಾರತೀಯ ಅಡುಗೆಯನ್ನೂ ತಾನಾಗಿ ಕಲಿತು, ಭಾರತೀಯ ಭಾಷೆಗಳಲ್ಲೇ ಮಾತಾಡಲು ಕಲಿಯಬಹುದು. ಯಾರೂ ಅದಕ್ಕೆ ಟ್ಯೂಶನ್ ಹೇಳುವ ಅಗತ್ಯವೂ ಇಲ್ಲ.
ಮಕ್ಕಳನ್ನು ಯಾಂಬುಲೋಕಕ್ಕೆ ಪರಿಚಯಿಸಿ ಅವೂ ಆಡಾಡುತ್ತ ಈ ವಿದ್ಯೆಯನ್ನು ರೂಪಿಸುವ ಕೆಲಸದಲ್ಲಿ ಪಳಗುವಂತೆ ಮಾಡಲೆಂದೇ PopBots ಮತ್ತು Zhorai ಮುಂತಾದ ಸಾಫ್ಟ್‌ವೇರ್‌ಗಳು ರೂಪುಗೊಂಡಿವೆ. ಎಳೇ ಮಿದುಳುಗಳು ತಮ್ಮದೇ ತರ್ಕಶಕ್ತಿಯಿಂದ ಅದೆಂಥ ಹೊಸಬಗೆಯ ಕೃತಕ ಮಿದುಳುಗಳನ್ನು ಸೃಷ್ಟಿಸುತ್ತವೊ ನಾವಂತೂ ಊಹಿಸುವಂತಿಲ್ಲ. ಹೀಗೆ, ಮಗುವಿನ ಕೈಯಲ್ಲೇ
ಅದರ ನಾಳಿನ ಭವಿಷ್ಯವನ್ನು ರೂಪಿಸುವ ದಿಸೆಯಲ್ಲಿ ಯಾಂಬು ವಿಕಾಸವಾಗುತ್ತಿದೆ ಎಂದರೆ ಆ ನಾಳಿನ ಲೋಕ ಹೇಗಿದ್ದೀತು ಎಂತಲೂ ನಾವು ಊಹಿಸುವಂತಿಲ್ಲ.
ಆ ಲೋಕ ಹೇಗೂ ಇರಲಿ, ನಮ್ಮ ಲೋಕದಲ್ಲಂತೂ ಪುರಾಣ ಪ್ರವಚನಗಳು ಇನ್ನಷ್ಟು ವ್ಯಾಪಕ ಪ್ರಸಾರ ಪಡೆಯುತ್ತಿವೆ. ಪ್ರಸವಕ್ಕಾಗಿ ದಿನಗಣನೆ ಮಾಡುತ್ತಿರುವ ಮಹಿಳೆಯರಿಗೆಂದೇ ಸಿದ್ಧವಾದ ‘ಗರ್ಭ ಸಂಸ್ಕಾರ ಗುರು’ ಹೆಸರಿನ ಆ್ಯಪ್ ಜೋರಾಗಿ ಸದ್ದು ಮಾಡುತ್ತಿದೆ. ಗರ್ಭದ ಶಿಶುವಿನ ಬುದ್ಧಿಶಕ್ತಿ, ಭಾವಶಕ್ತಿ, ಶರೀರಶಕ್ತಿ ಮತ್ತು ಅಧ್ಯಾತ್ಮಶಕ್ತಿಗಳನ್ನೆಲ್ಲ (ಐಕ್ಯೂ, ಈಕ್ಯೂ, ಪಿಕ್ಯೂ, ಎಸ್‌ಕ್ಯೂ) ಹೆಚ್ಚಿಸುವ ಮಂತ್ರಗಳು ಅದರಲ್ಲಿವೆಯಂತೆ.
ಎಲ್ಲವೂ ಬರಲಿ, ವಿವೇಕವೂ ಇರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.