ಹರಿಯಾಣದಲ್ಲಿ ಭತ್ತ-ಗೋಧಿ ಪೈರಿನ ಮೇಲೆ ಡ್ರೋನ್ ಮೂಲಕ ಹೆಣ್ಣುಮಕ್ಕಳೇ ರಸಗೊಬ್ಬರ ಸಿಂಚನ ಮಾಡತೊಡಗಿದ್ದಾರೆ. ಅತ್ತ ಬ್ರಿಟನ್ನಿನ ಆಯ್ದ ಹೊಲಗಳಿಗೆ ಕೃಷಿ ವಿಜ್ಞಾನಿಗಳು ಕಲ್ಲಿನ ನುಣ್ಣನೆಯ ಪುಡಿಯನ್ನು ಎರಚುತ್ತಿದ್ದಾರೆ. ಭೂಮಿಯ ಕಾವನ್ನು ಹೆಚ್ಚಿಸುವ ಕೆಲಸ ಒಂದು ಕಡೆ, ಭೂಮಿಯನ್ನು ತಂಪು ಮಾಡುವ ಕೆಲಸ ಇನ್ನೊಂದು ಕಡೆ! ಇವುಗಳ ವಿವರ ಇಂತಿದೆ:
ಕಳೆದ ತಿಂಗಳ ಇದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯ ಪೂಸಾ ಕೃಷಿ ಕ್ಯಾಂಪಸ್ಸಿನಲ್ಲಿ ‘ಡ್ರೋನ್ ದೀದಿ’ಯರ ಜೊತೆ ಸೇರಿ ರಂಗುರಂಗಿನ ಶೋ ಕೊಟ್ಟರು. ಹಸಿರು ಚಿಮ್ಮುತ್ತಿದ್ದ ಪ್ರಾಯೋಗಿಕ ಹೊಲಗಳ ಮೇಲೆ ಹತ್ತಿಪ್ಪತ್ತು ಡ್ರೋನ್‌ಗಳು ದುಂಬಿಗಳಂತೆ ಹಾರುತ್ತ ರಸಗೊಬ್ಬರ ಸಿಂಚನ ಮಾಡಿದವು. ಒಂದೊಂದು ಡ್ರೋನನ್ನು ಒಬ್ಬೊಬ್ಬ ಗ್ರಾಮೀಣ ಮಹಿಳೆ ನಿಯಂತ್ರಿಸುತ್ತಿದ್ದಳು. ‘ಇದು ಮಹಿಳಾ ಸ್ವಯಂಸಹಾಯದ ಬಹುದೊಡ್ಡ ಕ್ರಾಂತಿಯ ನಾಂದಿ’ ಎನ್ನುತ್ತ ಮೋದಿಯವರು ಕ್ಯಾಮೆರಾ ಕಡೆ ಕೈಬೀಸಿದರು.
ರಸಗೊಬ್ಬರ ತಯಾರಿಸುವ ‘ಇಫ್ಕೊ’ ಕಂಪನಿಯ ಮೂಲಕ ‘ನಮೋ ಡ್ರೋನ್ ದೀದಿ’ ಹೆಸರಿನಲ್ಲಿ ಆರಂಭವಾದ ಈ ನಡೆ ನಿಜಕ್ಕೂ ಗ್ರಾಮಭಾರತದಲ್ಲಿ ಹೊಸ ಸಂಚಲನ ಮೂಡಿಸಬಹುದಾಗಿದೆ. ಡ್ರೋನ್ ಚಾಲನೆಯ ತರಬೇತಿ ಪಡೆದ ಪ್ರತಿ ಮಹಿಳೆಗೆ ತಲಾ ₹ 10 ಲಕ್ಷ ಮೌಲ್ಯದ, 30 ಕಿಲೊ ಭಾರದ ಒಂದೊಂದು ಡ್ರೋನ್ ಯಂತ್ರವನ್ನೂ ಅದಕ್ಕೆ ಜೋಡಿಸಲೆಂದು ಯೂರಿಯಾ ಅಥವಾ ಡಿಎಪಿಯ ಡಬ್ಬಿಯನ್ನೂ ಜೊತೆಗೆ ಅವನ್ನು ಸಾಗಿಸಲು ಬ್ಯಾಟರಿ ಚಾಲಿತ ವಾಹನವನ್ನೂ ನೀಡಲಾಗುತ್ತಿದೆ. ಒಬ್ಬ ಮಹಿಳೆ ದಿನಕ್ಕೆ ಸರಾಸರಿ 35 ಎಕರೆ ಪ್ರದೇಶಕ್ಕೆ ರಸಗೊಬ್ಬರ ಅಥವಾ ಪೀಡೆನಾಶಕ ವಿಷವನ್ನು ಸಿಂಪಡಿಸಬಹುದಾಗಿದೆ. ಶರ್ಮಿಳಾ ಯಾದವ್ ಹೆಸರಿನ ರೈತಮಹಿಳೆ ‘ಐದು ವಾರಗಳ ಅವಧಿಯಲ್ಲಿ 150 ಎಕರೆಗಳ ಹೊಲದ ಮೇಲೆ ಎರಡು ಬಾರಿ ಸಿಂಪಡನೆ ನಡೆಸಿ ₹ 50 ಸಾವಿರ ಗಳಿಸಲಿದ್ದಾಳೆ’ ಎಂದು ಎಎಫ್‌ಪಿ ವಾರ್ತಾ ಸಂಸ್ಥೆ ವರದಿ ಮಾಡಿದೆ. ಹರಿಯಾಣದಲ್ಲಿ ಡ್ರೋನ್ ಕ್ರಾಂತಿಯೇ ನಡೆಯುತ್ತಿದೆ. ಅಲ್ಲಿ ಐದು ಸಾವಿರ ಮಹಿಳೆಯರಿಗೆ ತರಬೇತಿ ಕೊಟ್ಟು ಅವರನ್ನೆಲ್ಲ ‘ಲಕ್ಷಾಪತಿ ದೀದಿ’ಯರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಖಟ್ಟರ್ ಘೋಷಿಸಿದ್ದಾರೆ.
ರಸಗೊಬ್ಬರ ಸಿಂಪಡನೆಯ ಹಿಂದೆ ಇಷ್ಟೇ ರಸವತ್ತಾದ ಇನ್ನೊಂದು ಸಂಗತಿ ಇದೆ: ಎರಡು ವರ್ಷಗಳ ಹಿಂದೆ ಗುಜರಾತಿನ ಕಲೋಲ್ ಎಂಬಲ್ಲಿ ಜಗತ್ತಿನ ಮೊದಲ ದ್ರವರೂಪಿ ನ್ಯಾನೊ ಯೂರಿಯಾ ಘಟಕವನ್ನು ಇಷ್ಟೇ ವಿಜೃಂಭಣೆಯಿಂದ ಮೋದಿಯವರು ಉದ್ಘಾಟಿಸಿದ್ದರು. ಒಂದಿಡೀ ಮೂಟೆ ಯೂರಿಯಾವನ್ನು ಹೊಲಕ್ಕೆ ಸುರಿಯುವ ಬದಲು, ಗೇಣುದ್ದದ ಒಂದು ಕ್ಯಾನ್‌ನಲ್ಲಿರುವ ನ್ಯಾನೊ ಯೂರಿಯಾವನ್ನು ಸಿಂಪಡಿಸಿದರೆ ಅಷ್ಟೇ ಇಳುವರಿ ಸಿಗುತ್ತದೆ, ರಸಗೊಬ್ಬರ ಆಮದು ತಗ್ಗುತ್ತದೆ ಎಂದಿದ್ದರು. ಆದರೆ ಕೆಲವು ವಿಜ್ಞಾನಿಗಳು ಇಳುವರಿ ಕುಸಿದೀತೆಂದು ಅಪಸ್ವರ ಎತ್ತಿದ್ದರು. ರೈತರೂ ಸಿಂಪಡನೆಗೆ ಹಿಂದೇಟು ಹಾಕುತ್ತಿದ್ದರು.
ದ್ರವರೂಪಿ ಸಾರಜನಕವನ್ನು ಡ್ರೋನ್ ಮೂಲಕ ಸಿಂಪಡಿಸಿದರೆ ರೈತರಿಗೆ ಶ್ರಮ ಕಡಿಮೆ, ಕೂಲಿಯಾಳುಗಳ ಸಮಸ್ಯೆ ನೀಗುತ್ತದೆ, ಮಹಿಳೆಯ ಕೈಯಲ್ಲಿ ಹಣ ಓಡಾಡುತ್ತದೆ ಎಲ್ಲವೂ ಹೌದು. ಇವೆಲ್ಲ ಅನುಕೂಲಗಳನ್ನು ಗಮನಿಸಿದರೆ ರಸಗೊಬ್ಬರ ಬಳಕೆ (ಈಗಾಗಲೇ ವರ್ಷಕ್ಕೆ ಶೇ 7ರಂತೆ ಹೆಚ್ಚುತ್ತಿದೆ) ಇನ್ನಷ್ಟು ಹೆಚ್ಚಲಿದೆ. ಕಾರ್ಬನ್ ಡೈಆಕ್ಸೈಡ್‌ಗೆ ಹೋಲಿಸಿದರೆ, ರಸಗೊಬ್ಬರದ ಮೂಲಕ ಬಿಡುಗಡೆಯಾಗುವ ನೈಟ್ರಸ್ ಆಕ್ಸೈಡ್‌ನಲ್ಲಿ ವಾತಾವರಣ ಶಾಖವರ್ಧನ ಸಾಮರ್ಥ್ಯ 300 ಪಟ್ಟು ಹೆಚ್ಚಿಗೆ ಇದೆ. ಕೃತಕ ಗೊಬ್ಬರಗಳ ಬಳಕೆ ಹೆಚ್ಚುತ್ತಲೇ ಹೋದಷ್ಟೂ ಭೂತಾಪಮಾನ ಹೆಚ್ಚುತ್ತಲೇ ಇರುತ್ತದೆ ಎಂದು ವಿಶ್ವಸಂಸ್ಥೆಯ ಐಪಿಸಿಸಿ ವಿಜ್ಞಾನಿಗಳ ತಂಡ ಹಿಂದೆಯೇ ಹೇಳಿದೆ.
ಅದು ಅತ್ತ ಇರಲಿ. ಈಗ ಬ್ರಿಟಿಷ್ ವಿಜ್ಞಾನಿಗಳು ಹೊಲಕ್ಕೆ ಕಲ್ಲಿನ ಪುಡಿಯನ್ನು ಸಿಂಪಡಿಸುವ ಕತೆಗೆ ಬರೋಣ. ಬೆಸಾಲ್ಟ್ ಎಂಬ ಕಲ್ಲನ್ನು ನುಣ್ಣಗೆ ಅರೆದು ಬೆಳೆಗಳ ಮೇಲೆ ಸಿಂಪಡಿಸಿದರೆ ವಾತಾವರಣದ ಕಾರ್ಬನ್ನನ್ನು ಭೂಮಿಯಲ್ಲಿ ಇಂಗಿಸಲು ಸಾಧ್ಯವೆಂಬುದು ಹತ್ತು ವರ್ಷಗಳ ಹಿಂದೆಯೇ ಗೊತ್ತಿತ್ತು. ಕಳೆದ ನಾಲ್ಕಾರು ವರ್ಷಗಳಿಂದ ಯುರೋಪ್ ಮತ್ತು ಅಮೆರಿಕದ ದೇಶಗಳಲ್ಲಿ ಹೊಲಗಳಿಗೆ ಬೆಸಾಲ್ಟ್ ಪುಡಿಯನ್ನು ಎರಚಲಾಗುತ್ತಿದೆ (ಬೆಸಾಲ್ಟ್ ಎಂದರೆ ಮತ್ತೇನಲ್ಲ; ದಕ್ಷಿಣ ಭಾರತದಲ್ಲಿ ಆರು ಕೋಟಿ ವರ್ಷಗಳ ಹಿಂದೆ ಪದೇ ಪದೇ ಲಾವಾ ರಸ ಉಕ್ಕಿ ಹರಿದಾಗಿನ ಹಾಸುಗಲ್ಲೇ ಬೆಸಾಲ್ಟ್ ಶಿಲೆ. ಅದು ಕ್ರಮೇಣ ಕಪ್ಪು ಎರೆಮಣ್ಣಾಗುವಾಗ ಗಾಳಿಯಲ್ಲಿನ ನೀರಾವಿಯನ್ನೂ ಇಂಗಾಲಾಮ್ಲವನ್ನೂ ಹೀರಿಕೊಂಡು ಸುಣ್ಣವನ್ನಾಗಿಸಿ ಭೂಮಿಗೆ ಸೇರಿಸುತ್ತದೆ). ಈ ಕಲ್ಲನ್ನು ಪುಡಿರೂಪದಲ್ಲಿ ಎರಚಿದರೆ ಪ್ರಕೃತಿಯಲ್ಲಿ ಸಹಜವಾಗಿ, ನಿಧಾನ ನಡೆಯುತ್ತಿದ್ದ ಕ್ರಿಯೆ ಸಾವಿರಾರು ಪಟ್ಟು ಶೀಘ್ರವಾಗುತ್ತದೆ. ವಾತಾವರಣದ ಇಂಗಾಲ ತ್ವರಿತವಾಗಿ ಭೂಮಿಗೆ ಸೇರುತ್ತದೆ.
ಹೀಗೆ ಕಲ್ಲಿನ ಪುಡಿಯನ್ನು ಹೊಲಕ್ಕೆ ಎರಚಲೆಂದೇ ನಾಲ್ಕು ತಿಂಗಳ ಹಿಂದೆ ಅಲ್ಫಾಬೆಟ್ (ಗೂಗಲ್), ಮೆಟಾ (ಫೇಸ್‌ಬುಕ್) ಸೇರಿದಂತೆ ಜಗತ್ತಿನ ಅತಿ ಶ್ರೀಮಂತ ‘ಬಿಗ್ ಟೆಕ್’ ಕಂಪನಿಗಳು ನೂರು ಕೋಟಿ ಡಾಲರ್‌ಗಳ ವಂತಿಗೆ ಕೂಡಿಸಿವೆ. ಬ್ರೆಜಿಲ್, ಕ್ಯಾಲಿಫೋರ್ನಿಯಾದ ಲಕ್ಷಾಂತರ ಎಕರೆಗಳಲ್ಲಿ ಸಿಂಚನ ನಡೆಯುತ್ತಿದೆ. ಕಾದ ಭೂಮಿಯನ್ನು ತಂಪು ಮಾಡಲು ಈ ವಿಧಾನವೇ ಅತ್ಯುತ್ತಮ ಎನ್ನಲಾಗುತ್ತಿದೆ (ಇತರ ನಿಧಾನ ವಿಧಾನಗಳೆಂದರೆ ಅರಣ್ಯ ಬೆಳೆಸುವುದು, ಕಾರ್ಖಾನೆಗಳ ಹೊಗೆಯನ್ನು ಪಾತಾಳಕ್ಕೆ ಕಳಿಸುವುದು, ಸಾಗರದಾಳದಲ್ಲಿ ಪಾಚಿಯನ್ನು ಬೆಳೆಸುವುದು ಇತ್ಯಾದಿ). ಬೆಸಾಲ್ಟ್ ಶಿಲೆಯ ಪುಡಿಯನ್ನು ಎರಚಿದರೆ ಫಸಲಿನ ಮೇಲೆ ನಿಜಕ್ಕೂ ಏನು ಪರಿಣಾಮ ಆಗುತ್ತಿದೆ ಎಂಬುದನ್ನು ಬ್ರಿಟಿಷ್ ವಿಜ್ಞಾನಿಗಳು ಅಳೆದು ನೋಡುತ್ತಿದ್ದಾರೆ. ಅವರ ಪ್ರಕಾರ, ಸೋಯಾ ಇಳುವರಿ ಶೇ 16ರಷ್ಟು ಹೆಚ್ಚಾಗಿದೆ. ಇತರ ಬೆಳೆಗಳ ಇಳುವರಿ ಶೇ 8ರಿಂದ 20ರಷ್ಟು ಹೆಚ್ಚಾಗಿದೆ.
ಈಗ ‘ಡ್ರೋನ್ ದೀದಿ’ಯರ ಶ್ಲಾಘನೀಯ ಹೆಜ್ಜೆಯತ್ತ ಮತ್ತೊಮ್ಮೆ ಬರೋಣ. ಅವರು ಎರಚುವ ಬಹುಪಾಲು ರಸಗೊಬ್ಬರವೆಲ್ಲ ಅಧಿಕ ಇಳುವರಿಯ ಭತ್ತ-ಗೋಧಿಯ ತಳಿಗಳಿಗೇ ತಾನೆ? ಈ ಎರಡು ಫಸಲುಗಳಲ್ಲಿ ಪ್ರಮುಖ ಪೋಷಕಾಂಶಗಳು ವರ್ಷವರ್ಷವೂ ಕಡಿಮೆ ಆಗುತ್ತಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಕಳೆದ 50 ವರ್ಷಗಳಲ್ಲಿ ಅಕ್ಕಿಯಲ್ಲಿ ಸತುವಿನ ಅಂಶ ಶೇ 33ರಷ್ಟು ಕಡಿಮೆ ಆಗಿದೆ, ಕಬ್ಬಿಣದ ಅಂಶ ಶೇ 27ರಷ್ಟು ಕಡಿಮೆ ಆಗಿದೆ. ಗೋಧಿಯಲ್ಲಿ ಇವೇ ಪೋಷಕಾಂಶಗಳು ಕ್ರಮವಾಗಿ ಶೇ 30 ಮತ್ತು 19ರಷ್ಟು ಕಮ್ಮಿಯಾಗಿವೆ. ಸಾಲದೆಂಬಂತೆ, ಆರೋಗ್ಯಕ್ಕೆ ಅಪಾಯವನ್ನೇ ತಂದೊಡ್ಡಬಲ್ಲ ಆರ್ಸೆನಿಕ್ ಅಂಶ 15 ಪಟ್ಟು (ಶೇ 1,493) ಹೆಚ್ಚಾಗಿದೆ! ನಮ್ಮ ಊಟ-ತಿಂಡಿಯಲ್ಲಿ ಈ ಎರಡು ಧಾನ್ಯಗಳದ್ದೇ ಹೆಚ್ಚಿನ ಪಾಲು ಇರುವುದರಿಂದ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಅಸ್ಥಿಪಂಜರ ಮತ್ತು ಯಕೃತ್ತಿಗೆ ಬರುವ ‘ಅಸಾಂಸರ್ಗಿಕ’ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗೆಂದು ಪಶ್ಚಿಮ ಬಂಗಾಳದ ಕೃಷಿ ವಿಶ್ವವಿದ್ಯಾಲಯ ಮತ್ತು ತೆಲಂಗಾಣದ ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯ ಹನ್ನೊಂದು ವಿಜ್ಞಾನಿಗಳು ಆರು ತಿಂಗಳ ಹಿಂದೆ ಪ್ರತಿಷ್ಠಿತ ‘ನೇಚರ್’ ಪತ್ರಿಕೆಯಲ್ಲಿ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಹೊಟ್ಟೆತುಂಬ ತಿಂದಂತೆನಿಸಿದರೂ ಅದರಲ್ಲಿ ಪೋಷಕಾಂಶ ಕೊರತೆ ಇದ್ದರೆ ಅದಕ್ಕೆ ‘ಗುಪ್ತ ಹಸಿವೆ’ ಎನ್ನುತ್ತಾರೆ. ಈಗಾಗಲೇ ನಮ್ಮಲ್ಲಿ ಶೇ 35ರಷ್ಟು ಮಕ್ಕಳು ಪೋಷಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಅಕ್ಕಿ ಅಥವಾ ಗೋಧಿಯನ್ನೇ ಮುಖ್ಯ ಆಹಾರವಾಗಿ ಸೇವನೆ ಮಾಡುವವರಲ್ಲಿ ಅಸಾಂಸರ್ಗಿಕ ರೋಗ ಸಾಧ್ಯತೆ ಹೆಚ್ಚುತ್ತಲೇ ಹೋಗಲಿದೆ. ನಮ್ಮ ದೇಶ ಎದುರಿಸಬೇಕಾದ ಈ ಸವಾಲಿಗೆ ‘ನಿಶ್ಶಬ್ದ ಕ್ಷಾಮ’ ಎಂದು ಹೆಸರಿಸಿ, ದಿಲ್ಲಿಯ ‘ಡೌನ್ ಟು ಅರ್ಥ್’ ಪತ್ರಿಕೆ ಈಚೆಗೆ ಪ್ರಧಾನ ಲೇಖನವನ್ನು ಪ್ರಕಟಿಸಿದೆ.
2047ನೇ ಇಸವಿಯ ವೇಳೆಗೆ ನಮ್ಮದು ‘ವಿಕಸಿತ ಭಾರತ’ ಆಗಬೇಕು. ನಾವು ಧನಿಕ ರಾಷ್ಟ್ರಗಳ ಸಾಲಿಗೆ ಸೇರಬೇಕು. ಅಂದರೆ ಈಗ ‘ಸಾಲೆ’ಗೆ ಸೇರುವ ಮಕ್ಕಳಿಗೆ ಪೌಷ್ಟಿಕ ಆಹಾರ ಮೊದಲು ಸಿಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.