ADVERTISEMENT

ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಇಂದಿನ ಭೂಕುಸಿತಗಳೇ ನಾಳಿನ ಇಂಧನ; ಹಾಕಬೇಕು ಈ ಇಂಗಾಲಚಕ್ರಕ್ಕೆ ದಿಗ್ಬಂಧನ!

ನಾಗೇಶ ಹೆಗಡೆ
Published 7 ಆಗಸ್ಟ್ 2024, 23:32 IST
Last Updated 7 ಆಗಸ್ಟ್ 2024, 23:32 IST
   

ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತರ ನೆರವಿಗೆ ಧಾವಿಸಿ ಬಂದ ಪಡೆಯನ್ನು ಗಮನಿಸಿದಿರಾ? ದುರ್ಗಮ ಪ್ರದೇಶದಲ್ಲಿ ಬಂದಿಳಿದ ಹೆಲಿಕಾಪ್ಟರ್‌ಗಳು, ಯೋಧರು, ಅವರ ನೆರವಿಗೆ ಬಂದ ಜೆಸಿಬಿಗಳು, ಸೇತುವೆ ಸರಂಜಾಮುಗಳು, ಕ್ರೇನ್‌ಗಳು, ಅವಕ್ಕೆ ಬೇಕಾದ ಡೀಸೆಲ್‌, ಅವರಿಗೆಲ್ಲ ಕೋಟು, ಗಂಬೂಟು, ಊಟ-ಉಣಿಸು. ಲಕ್ಷಾಂತರ ಸಹಾಯಹಸ್ತ. ದುರಂತದ ಮಧ್ಯೆಯೂ ನಾವೆಲ್ಲ ಮೆಚ್ಚಬೇಕಾದ ನೋಟ.

ಹೋಲಿಕೆಗೆ, ಇತ್ತೀಚೆಗೆ 24.5.24ರಂದು ಪಾಪುವಾ ನ್ಯೂಗಿನಿಯ ‘ಎಂಗಾ’ ಎಂಬಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯವನ್ನು ನೋಡಬೇಕು (ಕನ್ನಡದಲ್ಲೇ ಹುಡುಕಿದರೂ ಗೂಗಲ್‌ನಲ್ಲಿ ಸಿಗುತ್ತದೆ). ಅಲ್ಲಿ, ಕಾವ್ಕಾಲಮ್‌ ಎಂಬ ಊರು ಹೀಗೇ ನಡುರಾತ್ರಿಯೇ ಕೆಸರು, ಬಂಡೆರಾಶಿಗಳ ನಡುವೆ ಭೂಗತವಾಯಿತು. ಮೊದಲ ದಿನ ‘300 ಜನ ನಾಪತ್ತೆ’ ಎಂಬ ವರದಿ ಬಂತು. ಮೂರು ದಿನಗಳ ನಂತರ ಇಡೀ ಹಳ್ಳಿಯ 2,000ಕ್ಕೂ ಹೆಚ್ಚು ಜನ ಸಮಾಧಿ ಎಂದು ತೀರ್ಮಾನಿಸಲಾಯಿತು. ಸಹಾಯಕ್ಕೆ ಧಾವಿಸಿ
ದವರು ಕೈಯಲ್ಲಿ ಉದ್ದನ್ನ ದೊಣ್ಣೆ, ಬಿದಿರು ಬೊಂಬಿನಿಂದ ಆಳೆತ್ತರದ ಬಂಡೆಯನ್ನು ಹೊರಳಿಸಲು ಯತ್ನಿಸುತ್ತಿ
ದ್ದರು. ಕೆಲವರ ಕೈಯಲ್ಲಿ ಸನಿಕೆ. ಅಂತೂ ಐವರು ಗಾಯಾಳುಗಳನ್ನು ಮೇಲೆತ್ತಿದ ಕ್ಷೀಣ ವರದಿ ಬಂತು. ಹೆಚ್ಚಿನ ವಿವರಣೆಗೆ ಮಾಧ್ಯಮಗಳು ಅಷ್ಟೇನೂ ಆಸಕ್ತಿ ತೋರಿಸಲಿಲ್ಲ.

ಇವೆರಡು ದುರಂತಗಳನ್ನು ಹೋಲಿಸಿದಾಗ ಅಭಿವೃದ್ಧಿಯ ರೋಚಕ ಸಾಧ್ಯತೆಗಳ ಕಡೆಗೇ ನಾವು ಒಲವು ತೋರಿಸುತ್ತೇವೆ. ವಿಜ್ಞಾನ ಅದೆಷ್ಟು ಮುಂದುವರಿದಿದೆ ಎಂದರೆ, ಶಿರೂರಿನ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ನಾಪತ್ತೆಯಾದ ಮಲೆಯಾಳಿ ವ್ಯಕ್ತಿಯನ್ನು ಹುಡುಕಲು ಆಕಾಶದಿಂದಲೇ ಸ್ಕ್ಯಾನ್‌ ಮಾಡಬಲ್ಲ ರಡಾರನ್ನು ತರಿಸಬೇಕೆಂದು ಕೇರಳದ ಶಾಸಕರೊಬ್ಬರು ಒತ್ತಾಯಿಸಿದ್ದರು. ನಮ್ಮಲ್ಲಿ ಅಂಥ ಸಾಧನಗಳೂ ಇವೆ ಎಂಬುದು ಗೊತ್ತಾಗುವಂತಾಯಿತು. ಅಷ್ಟರಲ್ಲೇ ಮಾಧ್ಯಮದ ಬೆಳಕು ಅತ್ತ ಮಂಡಕ್ಕೂರು, ಚೂರನ್ಮಲೈ ಕಡೆ ಹರಿದಿದ್ದರಿಂದ ಈ ಕಥನ ನೇಪಥ್ಯಕ್ಕೆ ಸರಿಯಿತು. ಈಗ ಹೇಳಿ, ರೋಚ
ಕತೆಯನ್ನೇ ನಮಗೆಲ್ಲ ಉಣ್ಣಿಸುತ್ತ ಈ ವಿಜ್ಞಾನ-ತಂತ್ರಜ್ಞಾನ ನಮ್ಮನ್ನೆಲ್ಲ ಎತ್ತ, ಯಾವ ವೇಗದಲ್ಲಿ ಸಾಗಿಸುತ್ತಿದೆ?.

ADVERTISEMENT

ಸುಧಾರಿತ ದೇಶಗಳು ನೂರಾರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂನಂಥ ಪಳೆಯುಳಿಕೆ ಇಂಧನಗಳನ್ನು ಉರಿಸುತ್ತ ಬಂದಿದ್ದೂ ಅಲ್ಲದೆ, ಜಗತ್ತಿಗೆಲ್ಲ ಅದೇ ಬಗೆಯ ಅಭಿವೃದ್ಧಿಯ ಮಾದರಿಯನ್ನು ತೋರಿಸಿದ್ದಕ್ಕೇ ಭೂಮಿಗೆ ಸಂಕಟ ಬಂದಿದೆ ಎಂಬುದು ಈಗ ಸಾಬೀತಾಗಿದೆ. ವಾಯುಮಂಡಲ ಬಿಸಿಯಾಗುತ್ತ, ನೆಲವೂ ಕಾಯುತ್ತ, ಸಮುದ್ರದ ಉಷ್ಣಾಂಶದಲ್ಲೂ ಏರಿಕೆ ಆಗುತ್ತಿದೆ. ಅದರಿಂದಾಗಿಯೇ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ, ಪಶ್ಚಿಮಘಟ್ಟಗಳಲ್ಲಿ ಪದೇ ಪದೇ ಮೇಘಸ್ಫೋಟ ಆಗುತ್ತಿದೆ ಎಂತಲೂ ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಈ ಘಟ್ಟಗಳು ಕೋಟ್ಯಂತರ ವರ್ಷಗಳಿಂದ ಸಮುದ್ರದ ಕಡೆಯಿಂದ ಬರುವ ಬಿರುಗಾಳಿ ಮತ್ತು ಜಡಿಮಳೆಯ ಪೆಟ್ಟು ತಿಂದು ತಿಂದು ಶಿಥಿಲವಾಗಿವೆ. ಈಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯ ಹೊಸ ಪೆಟ್ಟು ಅದರ ಮೇಲೆ ಬೀಳು
ತ್ತಿದೆ. ಸಾಲದೆಂಬಂತೆ, ನಾವು ಅತ್ಯಾಧುನಿಕ ಯಂತ್ರಾಯುಧಗಳನ್ನು ಈ ಜರ್ಝರಿತ ಬೆಟ್ಟಗಳ ಕಡೆಗೇ ನುಗ್ಗಿಸುತ್ತಿದ್ದೇವೆ (ಯಂತ್ರಾಯುಧಗಳು ಅಂದರೆ, ಈಗ ವಯನಾಡಿನಲ್ಲಿ ಸಂತ್ರಸ್ತರ ನೆರವಿಗೆ ಬಳಕೆ ಆಗುತ್ತಿವೆಯಲ್ಲ, ಅವೇ!). ಇವೆಲ್ಲವುಗಳಿಂದಾಗಿ ಈಗ ಪಂಚಭೂತಗಳು- ನೀರು, ಭೂಮಿ, ಆಕಾಶ, ಬೆಂಕಿ ಮತ್ತು ಗಾಳಿ ಐದೂ- ಉದ್ದೀಪನ ಮದ್ದನ್ನು (ಸ್ಟೀರಾಯ್ಡ್) ಸೇವಿಸಿದಂತೆ ಪಶ್ಚಿಮಘಟ್ಟಗಳನ್ನು ತಾಡನ ಮಾಡುತ್ತಿವೆ.

ಪಾಪುವಾ ನ್ಯೂಗಿನಿಯ ಪರಿಸ್ಥಿತಿ ಏನು? ಅದೂ ಪಶ್ಚಿಮ ಘಟ್ಟಗಳ ಹಾಗೆ ದಟ್ಟ ಗುಡ್ಡಬೆಟ್ಟಗಳ ದೇಶ. ಈಗಿನ ಅಭಿವೃದ್ಧಿಯ ಅಳತೆಗೋಲಿನ ಪ್ರಕಾರ ತೀರಾ ‘ಹಿಂದುಳಿದ’ ದೇಶವೂ ಹೌದು. ಕೈಗಾರಿಕೆಗಳು, ದೊಡ್ಡ ನಗರಗಳು ಇಲ್ಲ. ಜನರೂ ನಮ್ಮ ದೇಶದ ಮೂಲ ನಿವಾಸಿಗಳಂತೆಯೇ ಕಾಣುತ್ತಾರೆ. ಸುಮಾರು 35 ಸಾವಿರ ವರ್ಷಗಳ ಹಿಂದೆ ಭಾರತದತ್ತ ಸಾಗಿಬಂದ ಜನಾಂಗದ ಒಂದು ತುಕಡಿಯೇ ಇನ್ನೂ ಪೂರ್ವಕ್ಕೆ ವಲಸೆ ಹೋಗುತ್ತ, ಆಸ್ಟ್ರೇಲಿಯಾವರೆಗೂ ಹೋಗಿ ನೆಲೆಸಿತು. ನಂತರ ಸಮುದ್ರಮಟ್ಟ ಏರಿದ್ದರಿಂದ (ನಮ್ಮಿಂದ ಶ್ರೀಲಂಕಾ ಬೇರ್ಪಟ್ಟ ಹಾಗೆ) ನ್ಯೂಗಿನಿ ಕೂಡ ಆಸ್ಟ್ರೇಲಿಯಾದಿಂದ ಬೇರ್ಪಟ್ಟಿತು. ಸುಧಾರಣೆಯ ಗಾಳಿ ಜೋರಾಗಿ ಬೀಸಿಲ್ಲವಾದ್ದರಿಂದ ಈಗಲೂ ಅಲ್ಲಿ ಹಣದ ವಹಿವಾಟೇ ಕಡಿಮೆ. ತಾವು ಬೆಳೆದು
ದನ್ನು ತಾವೇ ಹಂಚಿಕೊಂಡು ಬದುಕುತ್ತಿದ್ದಾರೆ. ಹಾಗಿದ್ದರೆ ಅಲ್ಲೇಕೆ ಅಷ್ಟೊಂದು ಭಾರೀ ಭೂಕುಸಿತ ಸಂಭವಿಸಿದೆ?

ಅದು ಜ್ವಾಲಾಮುಖಿ, ಭೂಕಂಪನಗಳ ಪ್ರದೇಶ. ಶಾಂತಸಾಗರದ ಸುತ್ತಲಿನ ‘ಬೆಂಕಿಯ ಬಳೆ’ಯಲ್ಲಿ ಸಿಲುಕಿದ ದೇಶಗಳಲ್ಲಿ ಇದೂ ಒಂದು. ಅಷ್ಟೇ ಆಗಿದ್ದರೆ ಚಿಂತೆ ಇರಲಿಲ್ಲ. ನೆಲ ನಡುಗಿ, ತಲೆಯ ಮೇಲಿನ ಸೂರು ಕಳಚಿ ಬಿದ್ದರೂ ಅಷ್ಟೇನೂ ಆಘಾತ ಆಗದಂಥ ಸರಳ ಮನೆಗಳಲ್ಲಿ ಅಲ್ಲಿನವರು ವಾಸಿಸುತ್ತಾರೆ. ಸಮಸ್ಯೆಗೆ ಕಾರಣ ಏನೆಂದರೆ, ಅಲ್ಲಿನ ಶಿಲೆಗಳಲ್ಲಿ ಚಿನ್ನ, ತಾಮ್ರ, ನಿಕ್ಕೆಲ್‌, ಕೊಬಾಲ್ಟ್‌ ನಿಕ್ಷೇಪಗಳಿವೆ. ಅವನ್ನೆಲ್ಲ ಎತ್ತಿ ಸಾಗಿಸಲೆಂದು ವಿದೇಶಿ ಕಂಪನಿಗಳು ಅಲ್ಲಿ ಠಿಕಾಣಿ ಹೂಡಿವೆ. ಗಣಿಗಾರಿಕೆಯಿಂದ ಸರ್ಕಾರಕ್ಕೆ ಸಿಗುವ ದುಗ್ಗಾಣಿಯಿಂದಲೇ ಅಷ್ಟಿಷ್ಟು ಭೋಗಸಾಮಗ್ರಿಗಳು ವಿದೇಶಗಳಿಂದ ಬರುತ್ತಿವೆ. ಅಲ್ಲಿನ ಆಳ ಗಣಿಗಳಲ್ಲಿ ಭಾರೀ ಯಂತ್ರೋಪಕರಣಗಳ, ಸ್ಫೋಟಕಗಳ ಭರಾಟೆಯೇ ಭೂಕಂಪನಕ್ಕೆ ಕಾರಣವಾಯಿತೊ ಏನೊ, ಅಂದೂ ಭಾರೀ ಭೂಸ್ಖಲನವಾಗಿ ಇಡೀ ಗುಡ್ಡವೇ ಕುಸಿದಿದೆ. ಚಿನ್ನದ ಗಣಿಗೆ ಹೋಗುವ ಏಕೈಕ ಮಾರ್ಗವೂ ಇದರಿಂದ ಮುಚ್ಚಿಹೋಗಿದೆ ಎಂದೇ ಮಾಧ್ಯಮಗಳಲ್ಲಿ ಅಳಲು ವ್ಯಕ್ತವಾಗಿತ್ತು. ಭೂಮಿಯ ತಾಪಮಾನ ಏರಿಕೆಯೇ ಈ ದುರಂತಕ್ಕೆ ಕಾರಣ ಎಂದು ಪಾಪುವಾ ನ್ಯೂಗಿನಿಯ ಪ್ರಧಾನಿ ಜೇಮ್ಸ್‌ ಮರಾಪೆ ಹೇಳಿದರು. ಅದನ್ನು ಒಪ್ಪೋಣ. ಏಕೆಂದರೆ, ಅವರು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ.

ಭೂಮಿಯ ಚರಿತ್ರೆ ಗೊತ್ತಿದ್ದವರಿಗೆ ಒಂದು ವಿಲಕ್ಷಣ ಸತ್ಯ ಅರಿವಾಗಬಹುದು. ಏನೆಂದರೆ, ವಯನಾಡಿನ ಸಂತ್ರಸ್ತರ ನೆರವಿಗೆ ಬಂದ ಯಂತ್ರೋಪಕರಣಗಳು ಲಕ್ಷಗಟ್ಟಲೆ ಲೀಟರ್‌ ಡೀಸೆಲ್ಲನ್ನು ಸುಡುತ್ತಿವೆಯಲ್ಲ, ಅವೆಲ್ಲವೂ ಬಂದಿದ್ದೇ ಪುರಾತನ ಭೂಕುಸಿತಗಳಿಂದ. ಕೋಟಿಗಟ್ಟಲೆ ವರ್ಷಗಳ ಹಿಂದೆ ದಟ್ಟ ಅರಣ್ಯಗಳು, ಚಿಕ್ಕದೊಡ್ಡ ಡೈನೊಸಾರಸ್‌ಗಳಂಥ ಜೀವಜಂತುಗಳು ಭೂಗತವಾದಾಗ ಅಲ್ಲಿನ ಒತ್ತಡ ಮತ್ತು ಶಾಖಕ್ಕೆ ಸಿಕ್ಕು ಅವು ಪಳೆಯುಳಿಕೆ ಇಂಧನಗಳಾಗುತ್ತವೆ. ಅವನ್ನು ನಾವು ಮೇಲೆತ್ತಿ ಸುಟ್ಟು ಇಂಗಾಲದ ಚಕ್ರವನ್ನು ಜೋರಾಗಿ ತಿರುಗಿಸುತ್ತಿದ್ದೇವೆ. ಇಂದಿನ ಭೂಕುಸಿತಕ್ಕೆ ಸಿಕ್ಕ ನತದೃಷ್ಟ ಜೀವಿಗಳೆಲ್ಲ ಮುಂದೆಂದೋ ಮತ್ತೆ ಇಂಧನ ನಿಕ್ಷೇಪವಾಗುತ್ತವೆ. 1945ರ ನಾಗಾಸಾಕಿಯಲ್ಲಿ ಈ ದಿನ (ಆಗಸ್ಟ್‌ 8ರಂದು) ಬೀಳಿಸಿದ ಪರಮಾಣು ಬಾಂಬ್‌ಗೆ ಬೇಕಿದ್ದ ಇಂಧನ ಕೂಡ ಭೂಗರ್ಭದಿಂದ ಮೇಲೆತ್ತಿದ್ದೇ ಆಗಿತ್ತು. ಅಂದು ಆಕಾಶಕ್ಕೇರಿದ ದೂಳು, ಹೊಗೆ ಮತ್ತು ಕರಕಲು ಮಸಿ (ಆ ಮಿಶ್ರಣಕ್ಕೆ ‘ಏರೋಸೋಲ್‌’ ಎನ್ನುತ್ತಾರೆ) ಈಗಲೂ ಭೂಮಿಯ ತಾಪಮಾನವನ್ನು ಏರಿಸುತ್ತಿದೆ. ಈಗೀಗ ಭಾರತ ದೇಶವನ್ನು ‘ಏರೋಸೋಲ್‌ ಭಂಡಾರ’ ಎಂದೇ ಬಣ್ಣಿಸಲಾಗುತ್ತಿದೆ. ನಮ್ಮ ಆಕಾಶದಲ್ಲಿ ಸುತ್ತುತ್ತಿರುವಷ್ಟು ಹೊಗೆ, ಮಸಿ, ಗಣಿಯ ದೂಳುಕಣಗಳ ರಾಶಿ ಬೇರಾವ ದೇಶದಲ್ಲೂ ಇಲ್ಲ. ಅದಕ್ಕೇ ಇಲ್ಲಿ ಬಿರುಗಾಳಿ, ಜಡಿಮಳೆ, ಕಾಡಿನ ಬೆಂಕಿ, ಹಿಮಕುಸಿತ, ಸೇತುವೆಗಳ ಕುಸಿತ, ಭೂಕುಸಿತದ ಘನತಾಂಡವ. ಅತ್ತ ಸಂಸತ್ತಿನಲ್ಲಿ ವಿರಾಜಮಾನರಾದವರಿಗೆ ಇದನ್ನು ಸೂಚ್ಯವಾಗಿ ತಿಳಿಸುವಂತೆ, ಹೊಸ ಭವನದ ಸೂರಿನಿಂದ ಇಷ್ಟೇ ಇಷ್ಟು ಬಿಂದುಗಳು ತೊಟ್ಟಿಕ್ಕಿವೆ. ಸೂಕ್ಷ್ಮಮತಿಗಳಿಗೆ ಅಷ್ಟು ಸಾಕು ತಾನೆ?

ಪಶ್ಚಿಮಘಟ್ಟಗಳ ಹೆದ್ದಾರಿಗಳಗುಂಟ ಸಾಗುತ್ತಿರುವ ಅಭಿವೃದ್ಧಿಯ ದಾಂಗುಡಿ ಏನಿದೆ, ಅದು ಅಲ್ಲಿನ
ಸಹಜ ನಿವಾಸಿಗಳ ಅಭಿವೃದ್ಧಿಗೆ ಅಲ್ಲವೇ ಅಲ್ಲ. ಅದೇನಿದ್ದರೂ ಹೊರಗಿನಿಂದ ಬಂದು ಹೋಗುವವರ ವಿಲಾಸಕ್ಕೆ ಅಷ್ಟೆ. ಅಲ್ಲಿನ ಸಹಜ ನಿವಾಸಿಗಳ ಸುಸ್ಥಿರ ಕ್ಷೇಮಾಭಿವೃದ್ಧಿಗೆ ಏನೇನು ಮಾಡಬೇಕು ಎಂಬುದನ್ನು ಗಾಡ್ಗೀಳ್‌ ಸಮಿತಿಯ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿ ಬುಲ್‌ಡೋಝರ್‌ ಬಳಕೆಯ
ಪ್ರಸ್ತಾಪ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.