ಹೀಗೊಂದು ಸಾಧ್ಯತೆಯನ್ನು ಊಹಿಸಿಕೊಳ್ಳಿ: ಸೌರ ಮಂಡಲದ ಅಂಚಿಗೆಲ್ಲೋ ಸುತ್ತುತ್ತಿದ್ದ ಧೂಮಕೇತು ತನ್ನ ಕಕ್ಷೆಯಿಂದ ಮೇಲೆದ್ದು ಹೊರಟಿದೆ. ಅದು ಹೊರಟಿದೆ ಎಂಬುದು 20 ವರ್ಷಗಳ ಹಿಂದೆ ಮಬ್ಬು ಮಬ್ಬಾಗಿ ಕಂಡಿತ್ತು. ಹತ್ತು ವರ್ಷಗಳಿಂದ ಸ್ಪಷ್ಟವಾಗಿ ಕಾಣಿಸುತ್ತಿರುವ ಅದು ನಮ್ಮ ಭೂಮಿಯತ್ತಲೇ ಬರುತ್ತಿದೆ ಎಂಬುದೂ ಗೊತ್ತಾಗಿದೆ. ಅದು ಸಮೀಪ ಬಂದಂತೆಲ್ಲ ಇಲ್ಲಿ ಉತ್ಪಾತಗಳು ಹೆಚ್ಚುತ್ತಿವೆ. ಸೆಕೆ, ಕಾಡಿನ ಬೆಂಕಿ, ಭೂಕುಸಿತ, ಚಂಡಮಾರುತ, ಮಿಡತೆಮೇಳ, ಮೇಘಸ್ಫೋಟ, ದಿಢೀರ್ ಜಡಿಮಳೆ ಎಲ್ಲರ ಅನುಭವಕ್ಕೆ ಬರುತ್ತಿವೆ. ಆ ಧೂಮಕೇತುವಿನ ಮೇಲೆ ಕಣ್ಣಿಟ್ಟ ತಜ್ಞರ ತಂಡವೊಂದು ‘ಇನ್ನು 30 ವರ್ಷಗಳಲ್ಲಿ ಭೂಪ್ರಳಯ ಸಂಭವಿಸಲಿದೆ. ಸಜ್ಜಾಗಿರಿ’ ಎಂದು ಆರನೇ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದೆ. ನಾವೇನು ಮಾಡುತ್ತೇವೆ? ಮಾಡಬೇಕು?
ವಾಸ್ತವದಲ್ಲಿ ಈ ಅಪಾಯ ದೂರದ ಧೂಮಕೇತು ವಿನಿಂದ ಅಲ್ಲ, ನಮ್ಮಿಂದಾಗಿಯೇ ಎದುರಾಗಿದೆ. ಭೂಮಿ ಹಿಂದೆಂದಿಗಿಂತ ಜಾಸ್ತಿ ವೇಗದಲ್ಲಿ ಬಿಸಿಯಾಗುತ್ತಿದೆ ಎಂದು ಇದೀಗ ವಿಶ್ವಸಂಸ್ಥೆಯ ಐಪಿಸಿಸಿ ತಂಡ ತನ್ನ ಆರನೇ ಎಚ್ಚರಿಕೆಯ ವರದಿಯನ್ನು ಮುಂದಿಟ್ಟಿದೆ. ‘ಅಷ್ಟೇ ತಾನೆ, ಐದರ ಜೊತೆ ಆರನೇದು’ ಎನ್ನುವಂತಿಲ್ಲ. ಈ ವರದಿಯಲ್ಲಿ ಅನೇಕ ವಿಶೇಷಗಳಿವೆ. ಎಲ್ಲಕ್ಕಿಂತ ಮುಖ್ಯ ಏನೆಂದರೆ ಈಗಾಗಲೇ ಈ ವರದಿಯ ಮುಖ್ಯಾಂಶಗಳ ಪ್ರತೀ ಸಾಲನ್ನೂ 165 ದೇಶಗಳ ಸರ್ಕಾರಿ ಪ್ರತಿನಿಧಿಗಳು ಆಗಲೇ ಓದಿ, ಒಪ್ಪಿ, ಸಹಿ ಹಾಕಿದ್ದಾರೆ. ಅದರಲ್ಲಿನ ಐದು ಮುಖ್ಯಾಂಶಗಳೆಂದರೆ:
1. ಬಿಸಿಪ್ರಳಯ ಭೂಮಿಯ ಎಲ್ಲ ಭಾಗವನ್ನೂ ಪ್ರಭಾವಿಸುತ್ತಿದೆ. ಆದರೆ ಅದರ ಪರಿಣಾಮಗಳು ಏಕರೂಪವಾಗಿರುವುದಿಲ್ಲ. ಸಮುದ್ರದ ಉಷ್ಣಕ್ಕಿಂತ ನೆಲದ ಉಷ್ಣತೆ ಜಾಸ್ತಿ ಏರುತ್ತಿದೆ. ಅಟ್ಲಾಂಟಿಕ್ ಸಾಗರಕ್ಕಿಂತ ಅರಬ್ಬೀ ಸಮುದ್ರ ಹೆಚ್ಚು ಬಿಸಿಯಾಗುತ್ತಿದೆ. ಎತ್ತರದ ಪ್ರದೇಶಗಳ ಸಂಕಷ್ಟ ಹೆಚ್ಚುತ್ತದೆ. ಸಮುದ್ರಪಾತಳಿಯ ಸಂಕಷ್ಟಗಳೂ ಹೆಚ್ಚುತ್ತವೆ.
2. ಎಲ್ಲೆಲ್ಲೂ ಚಳಿಗಾಲದ ಅವಧಿ ಕಡಿಮೆಯಾಗುತ್ತ ಬೇಸಿಗೆ ಹೆಚ್ಚುತ್ತ ಹೋಗಲಿದೆ. ಹಿಮಖಂಡಗಳು ಇನ್ನಷ್ಟು ಶೀಘ್ರವಾಗಿ ಕರಗುತ್ತವೆ.
3. ಜಲಚಕ್ರ ವೇಗವಾಗಿ ಸುತ್ತುತ್ತದೆ. ಅಂದರೆ, ಸಮುದ್ರದ ನೀರು ಆವಿಯಾಗಿ ಮೋಡಗಟ್ಟುವ ವೇಗ, ಅದು ಮಳೆಯಾಗಿ, ಹೊಳೆಯಾಗಿ ಸಮುದ್ರಕ್ಕೆ ಸೇರುವ ವೇಗ ಎಲ್ಲವೂ ಹೆಚ್ಚುತ್ತವೆ.
4. ಆದಷ್ಟು ಬೇಗ, ಆದಷ್ಟು ದೊಡ್ಡ ಪ್ರಮಾಣದಲ್ಲಿ ಆದಷ್ಟು ಹೆಚ್ಚು ದೇಶಗಳು ಫಾಸಿಲ್ ಇಂಧನಗಳ ಬಳಕೆ ಯನ್ನು ಕಡಿತ ಮಾಡದೇ ಇದ್ದರೆ ಸರಾಸರಿ ತಾಪವನ್ನು ಒಂದೂವರೆ ಡಿಗ್ರಿಗೆ ನಿರ್ಬಂಧಿಸುವುದು ಕಷ್ಟವಾಗಲಿದೆ. ಎರಡು ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಾಗುವ ಸಂಭವ ಇದೆ.
5. ಹಾಗೇನಾದರೂ ಆದರೆ ಸಾವಿರ ವರ್ಷಗಳಲ್ಲೊಮ್ಮೆ ಸಂಭವಿಸುವ ಗರಿಷ್ಠ (ಮಳೆ, ಸೆಕೆ, ಗಾಳಿಯ ವೇಗದ) ದಾಖಲೆಗಳೆಲ್ಲ ಪ್ರತೀ ದಶಕದ, ಪ್ರತೀ ವರ್ಷದ ದಾಖಲೆ ಗಳಾಗುತ್ತವೆ. ಮುಂದಿನ ಅನೇಕ ಶತಮಾನಗಳ ವರೆಗೆ ಪೃಥ್ವಿ ತನ್ನನ್ನು ತಾನು ಸರಿಪಡಿಸಿಕೊಳ್ಳಲಾಗದು.
ಐಪಿಸಿಸಿ ವರದಿಯ ಸಿದ್ಧತೆಯೇ ಬೆರಗು ಹುಟ್ಟಿಸುವಂಥದ್ದು. ಇಡೀ ಮನುಕುಲದ ಸಾಮೂಹಿಕ ಪ್ರಜ್ಞೆಯನ್ನು ಎಚ್ಚರಿಸಲೆಂದೇ ತಯಾರಿಸುವ ವರದಿ ಕೂಡ ತುಂಬ ಎಚ್ಚರಿಕೆಯಿಂದಲೇ ಸಿದ್ಧವಾಗಬೇಕಾಗುತ್ತದೆ. ಅದು ಎಲ್ಲ ವಿಧದಲ್ಲೂ ದೋಷಮುಕ್ತ ಇರಬೇಕು. ಅದರಲ್ಲಿ ಎಲ್ಲ ದೇಶಗಳ ಹಿತಾಸಕ್ತಿ ಇರಬೇಕು. ತೈಲದೊರೆಗಳದ್ದೇ ಪಾರುಪತ್ಯ ಇರುವಂಥ ಕೊಲ್ಲಿ ರಾಷ್ಟ್ರಗಳ ನಾಯಕರೂ ಅದಕ್ಕೆ ಸಹಿ ಹಾಕುವಂತಿರಬೇಕು. ಅದನ್ನು ನಿಭಾಯಿಸಿದ್ದಕ್ಕೇ ಐಪಿಸಿಸಿಗೆ 2007ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. 6ನೇ ವರದಿಯಲ್ಲಿ ವಿವಿಧ ದೇಶಗಳ 234 ವಿಜ್ಞಾನಿಗಳು ಭೂಮಿಯ ವಿವಿಧ ಕಡೆ ಸಮೀಕ್ಷೆ ನಡೆಸಿ ಪ್ರಕಟಿಸಿದ 14 ಸಾವಿರ ಪ್ರಬಂಧಗಳನ್ನು ಆಧರಿಸಿ 3,949 ಪುಟಗಳ ವರದಿಯನ್ನು ಸಿದ್ಧಪಡಿಸಿ, ಅದನ್ನೂ ಜಾಗತಿಕ ಮಟ್ಟದ ಮೂರು ಸಭೆಗಳಲ್ಲಿ ಚರ್ಚಿಸಿದ ನಂತರವೇ ಇದು ಹೊರ ಬಂತು.
ವಿಜ್ಞಾನಿಗಳ ಎಚ್ಚರಿಕೆಗಿಂತ ದೊಡ್ಡ ದನಿಯಲ್ಲಿ ಪೃಥ್ವಿಯ ಆಕ್ರಂದನ ಎನ್ನಿ, ಗರ್ಜನೆ ಎನ್ನಿ, ಅದರ ಎಚ್ಚರಿಕೆಯೇ ಎಲ್ಲೆಲ್ಲೂ ಮೊಳಗುತ್ತಿದೆ. ವರದಿಯ ಪರಿಧಿಯೊಳಗೂ ಬಾರದಿದ್ದ ವಿಲಕ್ಷಣ ಸಂಗತಿಗಳು ದಾಖಲಾಗುತ್ತಿವೆ. ಕೆನಡಾ- ಅಮೆರಿಕ, ಯುರೋಪ್‌ನಲ್ಲಿ ಉರಿಗೋಲಗಳು (ಹೀಟ್ ಡೋಮ್) ಸೃಷ್ಟಿಯಾಗುತ್ತಿವೆ. ರಷ್ಯಾದ ಸೈಬೀರಿಯಾದಲ್ಲಿ ಹಿಮಪದರಗಳು ಅಲ್ಲಲ್ಲಿ ಆಸ್ಫೋಟಿಸಿ ಭಾರೀ ಹಂಡೆಗಳಂಥ ಕಂದರಗಳನ್ನು ಸೃಷ್ಟಿಸುತ್ತಿವೆ. ಅಮೆಝಾನ್ ಕಾಡಿನಲ್ಲಿ ಬೆಂಕಿ ಅದೆಷ್ಟು ಹೆಚ್ಚಿದೆ ಎಂದರೆ ಇನ್ನೇನು ಅದು ಪಲ್ಟಿಬಿಂದುವನ್ನು ತಲುಪುವ (ಅಂದರೆ ಆ ಕಾಡು ಕಾರ್ಬನ್ನನ್ನು ಹೀರಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊರಕಕ್ಕುವ) ದಿನಗಳು ಬರಲಿವೆ. ಯುರೋಪ್‌ನಲ್ಲಿ ಎರಡು ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ಎರಡೇ ದಿನಗಳಲ್ಲಿ ಸುರಿದಿದೆ. ಅಲ್ಲೇ ಗ್ರೀಸ್ ದೇಶದ ಈವಿಯಾಸ್ ದ್ವೀಪದಲ್ಲಿ ಪುರಾ ತನ ಇಡೀ ಕಾಡು ಹೊತ್ತಿ ಉರಿದಿದ್ದು ಅದನ್ನು ತಡೆಯಲಾಗದ್ದಕ್ಕೆ ಅಲ್ಲಿನ ಪ್ರಧಾನಿ ರಾಷ್ಟ್ರದ ಕ್ಷಮೆ ಕೋರಿದ್ದಾರೆ. ಉಪಗ್ರಹ ಚಿತ್ರದಲ್ಲೂ ಕಾಣುವ ಟರ್ಕಿಯ ಅಗ್ನಿಜ್ವಾಲೆಯ ಬೆನ್ನಿಗೇ ಮೇಘಸ್ಫೋಟವೂ ಸಂಭವಿಸಿ ಬೂದಿಯ ಮಹಾ ಪೂರ ಬಂದಿದೆ. ಮಧ್ಯಚೀನಾದಲ್ಲಿ ಮೆಟ್ರೊ ಸುರಂಗದಲ್ಲಿ ನೀರು ನುಗ್ಗಿದ್ದರಿಂದ ಪ್ರಾಣ ಬಿಟ್ಟ ಪ್ರಯಾಣಿಕರ ಲೆಕ್ಕ ಎಷ್ಟೆಂದು ನಿಖರ ಗೊತ್ತಾಗಬೇಕಿದೆ.
ಪ್ರಳಯವನ್ನು ಎದುರಿಸಲು ನಾವು ಏನು ಮಾಡೋಣ? ಈ ಪ್ರಶ್ನೆಯಲ್ಲಿ ‘ನಾವು’ ಎಂಬುದಕ್ಕೆ ಒಂದು ಕುಟುಂಬ, ಸಮೂಹ, ರಾಜ್ಯ, ರಾಷ್ಟ್ರ ಹೀಗೆ ವಿವಿಧ ಆಯಾಮಗಳಿವೆ. ಅವೆಲ್ಲಕ್ಕೆ ಮಿಗಿಲಾಗಿ ನಮ್ಮೆಲ್ಲರನ್ನೂ ಅಮರಿಕೊಂಡಿರುವ ಕಾರ್ಪೊರೇಟ್ ಸಂಸ್ಥೆಗಳಿವೆ. ಈಲಾನ್ ಮಸ್ಕ್ ಬ್ಯಾಟರಿಚಾಲಿತ ಕಾರುಗಳನ್ನು, ಗಗನ ನೌಕೆಗಳನ್ನು, ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ಸ್ ಸೇರಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳನ್ನೂ ಅದಾನಿಯವರು ಸೌರ ಸಾಮ್ರಾಜ್ಯಗಳನ್ನೂ ನಿರ್ಮಿಸುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಬಲ್ಲವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಬದಲೀ ಉದ್ಯೋಗ ಸೃಷ್ಟಿಸಬೇಕು. ಅರಣ್ಯಗಳನ್ನು ಸೃಷ್ಟಿಸಬೇಕು. ಆಹಾರ ಉತ್ಪಾದನೆಯ ಬದಲೀ ಸಾಧ್ಯತೆಗಳನ್ನು ಪರಿಚಯಿಸಬೇಕು. ನಗರ ವಿಸ್ತರಣೆಯನ್ನು ಪ್ರತಿಬಂಧಿಸಬೇಕು. ಪ್ರತಿಷ್ಠೆಗೆಂದು ಗೂಟದ ಕಾರಿನ ಹಿಂದೆ ಡಝನ್ ಕಾರುಗಳನ್ನು ಓಡಿಸುವ ರಾಜಕಾರಣಿಗಳಿಗೆ, ಅವರನ್ನು ಆಶೀರ್ವದಿಸಲು ನಿಂತ ಸ್ವಾಮೀಜಿಗಳಿಗೆ ಪಾಠ ಹೇಳಬೇಕು... ಒಂದೆ ಎರಡೆ?
ನಾವು ಬಿಸಿಪ್ರಳಯವನ್ನು ಎದುರಿಸಲು ನಡೆಸುವ ಸಿದ್ಧತೆಯೇ ಅದರ ಅಪಾಯವನ್ನು ಇನ್ನಷ್ಟು ಹೆಚ್ಚಿಸ ಬಹುದು. ಸೆಕೆಯನ್ನು ತಡೆಯಲೆಂದು ಇನ್ನಷ್ಟು ಹವಾ
ನಿಯಂತ್ರಕಗಳು ಬಳಕೆಯಾಗುತ್ತವೆ (ಚೀನಾದ ಹೆ ಷಾಂಜನ್ ಎಂಬಾತ ಎ.ಸಿ. ಯಂತ್ರಗಳನ್ನು ಮಾರಿ ಶತ ಕೋಟ್ಯಧೀಶರ ಪಟ್ಟಿಗೆ ಸೇರಿದ್ದಾನೆ.) ಕೃಷಿಯ ಸಂಕಟಗಳು ಹೆಚ್ಚಿದಂತೆಲ್ಲ ನಗರಗಳಿಗೆ ಧಾವಿಸುವವರ ಸಂಖ್ಯೆ ಹೆಚ್ಚಾಗಬಹುದು. ನಗರಕ್ಕೆ ಹೇಗಾದರೂ ವಿದ್ಯುತ್ತು, ನೀರು, ಸಾರಿಗೆ ಇನ್ನಷ್ಟು ಕಲ್ಲಿದ್ದಲು, ಇನ್ನಷ್ಟು ಮೆಟ್ರೊ, ಇನ್ನಷ್ಟು ಕೊಳವೆಬಾವಿ, ಇನ್ನಷ್ಟು ದೊಡ್ಡ ಡ್ಯಾಮ್, ಇನ್ನಷ್ಟು ಟ್ಯಾಂಕರ್‌ಗಳು ಬೇಕಾಗುತ್ತವೆ. ನಿಭಾಯಿಸಬೇಕು.
ಈ ಮಧ್ಯೆ ‘ಎಲ್ಲರನ್ನೂ ಒಳಗೊಳ್ಳುವ’ ಧೋರಣೆ ಅಲ್ಲಲ್ಲಿ ಕಾಣುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ‘ಇನ್ನಷ್ಟು ವೇಗ’, ‘ಇನ್ನಷ್ಟು ಎತ್ತರ’, ‘ಇನ್ನಷ್ಟು ಪ್ರಬಲ’ ಎಂಬ ಮಾಮೂಲಿನ ಮೂರು ಘೋಷಪದಗಳ ಜೊತೆಗೆ ಇದೇ ಮೊದಲ ಬಾರಿಗೆ ‘ನಾವೆಲ್ಲ ಒಂದಾಗಿ’ ಎಂಬ ಮಾತನ್ನೂ ಸೇರಿಸಲಾಗಿದೆ. ಮೊನ್ನೆ ಆಗಸ್ಟ್ 9ರ ‘ವಿಶ್ವ ಮೂಲನಿವಾಸಿ ದಿನ’ದ ಸಂದರ್ಭದ ಘೋಷಣೆಯೂ ‘ಯಾರೂ ಹಿಂದು ಳಿಯಬಾರದು’ ಎಂತಲೇ ರೂಪಿತವಾಗಿದೆ. ಭೂಮಿ ಸಂಕಷ್ಟ ನಿವಾರಣೆಯಲ್ಲೂ ಎಲ್ಲರನ್ನೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ನಾವೆಲ್ಲ ಒಂದಾದರೆ ವಿಪತ್ತನ್ನು ತಡೆಯಲು ಈಗಲೂ ಸಮಯವಿದೆ. ಒಂದಾಗಲು ವಿಫಲರಾದರೆ ‘ನಮ್ಮೆಲ್ಲರದೂ ಒಂದೇ ಭವಿಷ್ಯ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.