ಆತ್ಮಹತ್ಯೆಗಳನ್ನು ಮಾನಸಿಕ ಕಾಯಿಲೆ, ದೌರ್ಬಲ್ಯ ಅಥವಾ ಹೇಡಿತನ ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಇದರ ಕುರಿತಾಗಿ ಮುಕ್ತವಾದ ಚರ್ಚೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮೊಳಗೆ ಇಂತಹ ಒತ್ತಡ ಪ್ರಚೋದನೆಗಳು ಮೂಡುತ್ತಿವೆ ಎನ್ನುವುದನ್ನು ಹಿಂಜರಿಕೆಯಿಲ್ಲದೆ ಹೇಳಿಕೊಳ್ಳಲು ಮತ್ತು ಸಹಾಯ ಕೇಳಲು ಸಾಧ್ಯವಾಗುತ್ತದೆ. ಆತ್ಮಹತ್ಯೆಯನ್ನು ಅವಮಾನ ದೌರ್ಬಲ್ಯ ಅಥವಾ ಕಳಂಕ ಎಂದುಕೊಳ್ಳುವ ಸಮಾಜದಲ್ಲಿ ಅದನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ.
ಇತ್ತೀಚೆಗೆ ಐಐಟಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಸುದ್ದಿಗಳು ವರದಿಯಾಗುತ್ತಿವೆ. ಆದರೆ ನಮ್ಮ ಸರ್ಕಾರಗಳು ಮತ್ತು ಸಮಾಜ ಇದಕ್ಕೆ ಪ್ರತಿಕ್ರಿಯಿಸುತ್ತಿರುವ ರೀತಿಯನ್ನು ನೋಡಿದರೆ ಸಮಸ್ಯೆಯ ತ್ರೀವ್ರತೆ ಯಾರೂ ಗ್ರಹಿಸಿದಂತೆ ಕಾಣಿಸುವುದಿಲ್ಲ. ಬದಲಿಗೆ, ಕೇವಲ ಅರ್ಥಹೀನ ಶಬ್ದಗಳಿಂದ ಧೈರ್ಯ ಹೇಳುವವರೇ ಹೆಚ್ಚಾಗಿದ್ದಾರೆ. ಕೆಲವರಂತೂ ‘ಆತ್ಮಹತ್ಯೆಯಂತಹ ಹೇಡಿತನದ ಪ್ರಯತ್ನಕ್ಕೆ ಕೈಹಾಕಬೇಡಿ’ ಎಂದು ಕಳಕಳಿಯ ಮನವಿ ಮಾಡುವ ಭರದಲ್ಲಿ ಆತ್ಮಹತ್ಯಗೆ ಶರಣಾಗುತ್ತಿರುವವರನ್ನು ಅವಮಾನಿಸುತ್ತಿರುತ್ತಾರೆ. ಈ ದೃಷ್ಟಿಕೋನದಿಂದ ಪ್ರಾಮಾಣಿಕ ಪ್ರಯತ್ನದಿಂದ ವಿಫಲನಾಗುವ ವಿದ್ಯಾರ್ಥಿ ದುರ್ಬಲನಾದರೆ ಮೋಸದಿಂದ ಸಫಲನಾಗುವವನು ಧೈರ್ಯವಂತ ಎನ್ನಿಸಿಕೊಳ್ಳುತ್ತಾನೆ !
ಆತ್ಮಹತ್ಯೆಗೆ ಕೇವಲ ವೈಯುಕ್ತಿಕವಾದ ಮಾನಸಿಕ ದೌರ್ಬಲ್ಯ ಕಾರಣ ಎನ್ನುವುದು ಸತ್ಯವಲ್ಲ. ಜನಸಮುದಾಯದ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಒಟ್ಟಾರೆ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಆರ್ಥಿಕ ಪರಿಸ್ಥಿತಿಗಳೆಲ್ಲದರ ಪ್ರಭಾವ ಇದ್ದೇ ಇರುತ್ತದೆ. ವ್ಯಕ್ತಿಯನ್ನು ಸಮಾಜದಿಂದ ಹೊರತಾಗಿಸಿ ನೋಡುವುದು ಸಾಧ್ಯವೇ ಇಲ್ಲ. ಹಾಗಾಗಿ ಅಂಕಗಳಿಕೆಯಲ್ಲಿ ವಿಫಲನಾಗುವ ವಿದ್ಯಾರ್ಥಿ ಅಥವಾ ಸಾಲಬಾಧೆಯಿಂದ ನರಳುತ್ತಿರುವ ರೈತ ಆತ್ಮಹತ್ಯೆ ಮಾಡಿಕೊಂಡರೆ ಅದರಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮುಂತಾದ ವ್ಯವಸ್ಥೆಯ ಪಾಲು ಇರಲೇಬೇಕು. ವ್ಯವಸ್ಥೆ ಹೇರುವ ಒತ್ತಡಗಳನ್ನು ಸಹಿಸಲಾಗದೆ ಇರುವುದಕ್ಕೆ ವೈಯುಕ್ತಿಕ ಮಾನಸಿಕ ಅಂಶಗಳು ಕಾರಣವಾಗಬಹುದು.
ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ, ಹಣ ಸಾಧನೆಗಳನ್ನು ವೈಭವೀಕರಿಸುವ ನಾಗರಿಕತೆ, ಮಕ್ಕಳ ಯಶಸ್ಸಿಗಾಗಿ ಆತಂಕದಲ್ಲಿರುವ ಪೋಷಕರು.. ಇಂಥವೆಲ್ಲವೂ ಮಕ್ಕಳ ಮೇಲೆ ಪ್ರಭಾವ ಬೀರಲೇಬೇಕಲ್ಲವೇ? ಇವು ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ಮಿದುಳು ನರಮಂಡಲಗಳ ಮೇಲೆ ಹಾಕುವ ಒತ್ತಡ ಅಗಾಧವಾಗಿರುತ್ತದೆ. ಇದನ್ನು ನಿಭಾಯಿಸಲು ಸೂಕ್ತ ಬೆಂಬಲ ಸಿಗದಿದ್ದಾಗ ಅವರು ಆತ್ಮಗೌರವವನ್ನು ಕಳೆದುಕೊಂಡು ಸುತ್ತಲಿನ ಪರಿಸ್ಥಿತಿಗಳಿಂದ ಸಂಪರ್ಕವನ್ನು ಕಡಿದುಕೊಳ್ಳುತ್ತಾ ಹೋಗುತ್ತಾರೆ. ಅವರ ಒಂಟಿತನ ಹತಾಶೆಗಳು ಹೆಚ್ಚುತ್ತಾ ಹೋಗುತ್ತವೆ. ಎಲ್ಲರಿಂದ ಭಾವನಾತ್ಮಕವಾಗಿ ದೂರಹೋದಂತೆ ಯಾವ ಸಂಬಂಧವೂ ಅರ್ಥಪೂರ್ಣ ಎನ್ನಿಸದೆ ನನ್ನ ಬದುಕು ನಿಷ್ಪ್ರಯೋಜಕ ಎನ್ನುವ ಮನಸ್ಥಿತಿಗೆ ಬರುತ್ತಾರೆ. ತಮ್ಮದೇ ಕಣ್ಣುಗಳಲ್ಲಿ ಕುಸಿಯುತ್ತಾ ಹೋದಾಗ ಯಾವುದೇ ಧೈರ್ಯದ ಮಾತುಗಳು ಆಶ್ವಾಸನೆಗಳು ಅವರ ಅಂತರಂಗ ವನ್ನು ತಲುಪುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಬೇಕಿರುವುದು ಅವರ ನೋವು ತಲ್ಲಣಗಳನ್ನು ಕೇಳಬಲ್ಲ ಅರ್ಥಮಾಡಿಕೊಳ್ಳಬಲ್ಲ ಮತ್ತು ಮೌಲ್ಯಮಾಪನೆ ಮಾಡದೆ ಸ್ಪಂದಿಸಬಲ್ಲ ಒಂದು ಆತ್ಮೀಯ ಸಂಬಂಧ. ಕುಟುಂಬದವರಿಗೆ ಇದು ಸಾಧ್ಯವಾಗದಿದ್ದಾಗ ಒಬ್ಬ ಮನೋಚಿಕಿತ್ಸಕ ತಾತ್ಕಾಲಿಕವಾಗಿಯಾದರೂ ಇಂತಹ ಆತ್ಮೀಯತೆಯ ಅನುಭವವನ್ನು ನೀಡಿ ನಿಧಾನವಾಗಿ ವ್ಯಕ್ತಿಯ ಮಾನಸಿಕ ಏರುಪೇರುಗಳನ್ನು ಶಾಂತಗೊಳಿಸಬಹುದು. ಕೆಲವೊಮ್ಮೆ ಮನೋವೈದ್ಯರ ಸಹಾಯವೂ ಬೇಕಾಗಬಹುದು.
ಅಂಕಿಅಂಶಗಳ ಆಧಾರದ ಮೇಲೆ ಆತ್ಮಹತ್ಯೆಯ ಕಾರಣಗಳನ್ನು ನಿಖರವಾಗಿ ಪಟ್ಟಿಮಾಡಲಾಗುವುದಿಲ್ಲ. ಎಲ್ಲಾ ಆತ್ಮಹತ್ಯೆಗಳ ಹಿಂದೆ ನಿಧಾನವಾಗಿ ಮಡುವುಗಟ್ಟುತ್ತಾ ಹೋಗುವ ಹಲವಾರು ಕಾರಣಗಳಿರುತ್ತವೆ. ದುರ್ಘಟನೆಗೆ ಕೊನೆಯಲ್ಲಿ ಕಾರಣವಾಗುವ ಒಂದೇ ಅಂಶದ ಆಧಾರದ ಮೇಲೆ ಏನನ್ನೂ ನಿರ್ಧರಿಸಲಾಗುವುದಿಲ್ಲ. ಕೆಲವೊಮ್ಮೆ ತಜ್ಞರು ಆತ್ಮಹತ್ಯೆಯ ಕಾರಣಗಳಲ್ಲಿ ಕೆಲವನ್ನು ಕ್ಷುಲ್ಲಕ ಎನ್ನುತ್ತಾರೆ. ಇದೂ ಕೂಡ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲನಾದವನು ಎಂದು ಅವಮಾನಿಸುವ ಹೇಳಿಕೆಯಾಗುತ್ತದೆ. ಶೇ 90 ಅಂಕಗಳನ್ನು ಗಳಿಸಿಯೂ ಇನ್ನೂ ಹೆಚ್ಚಿಗೆ ಪಡೆಯಲಾಗದ್ದಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದರೆ ಅನುತ್ತೀರ್ಣನಾಗಿರುವ ವಿದ್ಯಾರ್ಥಿ ವೈಫಲ್ಯವನ್ನು ಸಹಜವಾಗಿ ಸ್ವೀಕರಿಸಬಹುದು. ಇದರ ಅರ್ಥವೇನೆಂದರೆ ಹೊರಗಡೆ ನಡೆಯುವ ಘಟನೆಗಳು ಮುಖ್ಯವಲ್ಲ, ಆದರೆ ಆ ಘಟನೆಗಳ ಪರಿಣಾಮಗಳನ್ನು ವ್ಯಕ್ತಿ ಸ್ವೀಕರಿಸುವ ರೀತಿ ಮಾತ್ರ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆ. ವ್ಯಕ್ತಿಯೊಬ್ಬನ ಆಂತರಂಗದ ಮಾನಸಿಕ ಹೋರಾಟಗಳನ್ನು ಯಾವ ಮಾನದಂಡದ ಆಧಾರದಿಂದ ಕ್ಷುಲ್ಲಕ ಅಥವಾ ಗಹನವಾದದ್ದು ಎಂದು ವರ್ಗೀಕರಿಸಲು ಸಾಧ್ಯ?
ಯಾವ ಆತ್ಮಹತ್ಯೆಯೂ ಆ ಕ್ಷಣದ ನಿರ್ಧಾರವಾಗಿರುವುದಿಲ್ಲ. ನಿಧಾನವಾಗಿ ಒಟ್ಟಾಗುತ್ತಾ ಹೋಗುವ ಮಾನಸಿಕ ನೋವು ಹತಾಶೆಗಳು ಸ್ಪೋಟವಾಗಲು ಹಲವಾರು ವರ್ಷಗಳೇ ಬೇಕಾಗಬಹುದು. ಸಮೀಕ್ಷೆಗಳ ಪ್ರಕಾರ ಮಾರಣಾಂತಿಕ ಪ್ರಯತ್ನ ಮಾಡುವ ಮೊದಲು ವ್ಯಕ್ತಿಯೊಬ್ಬನು ಅದರ ಸೂಚನೆಗಳನ್ನು ನೀಡಿರುತ್ತಾನೆ ಅಥವಾ ಕೆಲವೊಂದು ವಿಫಲ ಪ್ರಯತ್ನಗಳನ್ನೂ ಮಾಡಿರುತ್ತಾನೆ. ಇಂತಹ ಪ್ರಾಥಮಿಕ ಹಂತದಲ್ಲಿ ವ್ಯಕ್ತಿ ಮತ್ತು ಅವನ ಕುಟುಂಬದವರು ಸೂಕ್ತ ಸಹಾಯವನ್ನು ಪಡೆಯಲು ಸಾಧ್ಯವಾದರೆ ಸಾಕಷ್ಟು ಆತ್ಮಹತ್ಯೆಗಳನ್ನು ತಪ್ಪಿಸಬಹುದು. ಹಾಗಾಗಿ ಮೊದಲು ಸಹಾಯವನ್ನು ಕೇಳಲು ಸಾಧ್ಯವಾಗುವಂತಹ ಒಂದು ಮುಕ್ತವಾತಾವರಣವನ್ನು ಸೃಷ್ಟಿಸುವುದು ಕುಟುಂಬ ಸರ್ಕಾರ ಸಮಾಜವಿಜ್ಞಾನಿಗಳ ಹೊಣೆಯಾಗಬೇಕು.
ಕುಟುಂಬದವರೇನು ಮಾಡಬಹುದು?
1 ಮಕ್ಕಳೊಡನೆ ಭಾವನಾತ್ಮಕ ಬಾಂಧವ್ಯ ಉಳಿಸಿಕೊಳ್ಳುವುದು ಪೋಷಕರ ಪ್ರಥಮ ಆದ್ಯತೆಯಾಗಬೇಕು. ಯಾವುದೇ ಸಂದರ್ಭದಲ್ಲಿಯೂ ಅಂತಹ ಬಾಂಧವ್ಯಕ್ಕೆ ಹಾನಿಯಾಗದಂತೆ ಎಚ್ಚರವಿರಬೇಕು. ಮಕ್ಕಳಿಂದ ಸಾಧನೆ ಯಶಸ್ಸನ್ನು ನಿರೀಕ್ಷಿಸುವುದು ಸಹಜ. ಅವು ಸಾಧ್ಯವಾಗದಿದ್ದರೂ ನಮ್ಮ ಪ್ರೀತಿಯ ಕೊರತೆಯಾಗುವುದಿಲ್ಲ ಎನ್ನುವ ಸಂದೇಶ ಮಕ್ಕಳಿಗೆ ತಲುಪಬೇಕು.
2 ಪೋಷಕರು ಮೊದಲು ತಮ್ಮ ಆತಂಕ ಒತ್ತಡಗಳನ್ನು ನಿಭಾಯಿಸುವುದನ್ನು
ಕಲಿಯಬೇಕು. ತಮ್ಮ ನಿರೀಕ್ಷೆಗಳ ಭಾರವನ್ನು ಮಕ್ಕಳ ಮೇಲೆ ಹಾಕಬಾರದು. ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎನ್ನುವ ಅನುಭವ ಮಕ್ಕಳಲ್ಲಿ ಮೂಡದಿದ್ದರೆ ಸಂಬಂಧಗಳ ಸಂಪರ್ಕದ ಕೊಂಡಿ ದುರ್ಬಲವಾಗುತ್ತದೆ.
3 ಮಕ್ಕಳಿಗೆ ಉಪದೇಶ ಬುದ್ಧಿವಾದ ಸಲಹೆಗಳನ್ನು ಕೊಡಲೇಬೇಕಾಗಿಲ್ಲ. ಅವರ ನೋವು ಕಷ್ಟ ಹಿಂಜರಿಕೆಗಳ ಕುರಿತು ಮಾತನಾಡಲು ಉತ್ತೇಜಿಸ ಬೇಕು. ತಮ್ಮ ಮನದಾಳದ ಮಾತುಗಳನ್ನು ಆಡಿದರೆ ಪೋಷಕರು ತಮ್ಮನ್ನು ದೂಷಿಸಬಹುದು ಅಥವಾ ಪೋಷಕರು ಆತಂಕಗೊಳ್ಳಬಹುದು, ಕೋಪಿಸಿಕೊಳ್ಳಬಹುದು ಎನ್ನಿಸುವ ವಾತಾವರಣವಿದ್ದರೆ ಸಂಬಂಧಗಳ ನಡುವೆ ಸಂವಹನ ಸಹಜವಾಗಿ ನಡೆಯುವುದಿಲ್ಲ.
4 ಸಹಾಯದ ಅಗತ್ಯವಿದೆ ಎನ್ನಿಸಿದರೆ ತಕ್ಷಣ ಮನೋಚಿಕಿತ್ಸಕರನ್ನು ಸಂಪರ್ಕಿಸಬೇಕು. ಆತ್ಮಹತ್ಯೆಯ ತೀವ್ರ ಒತ್ತಡಗಳಿದ್ದಾಗ ತಾತ್ಕಾಲಿಕವಾಗಿ ಔಷಧಗಳ ಅಗತ್ಯವೂ ಬೀಳಬಹುದು. ಆತ್ಮಹತ್ಯೆಯ ಪ್ರಯತ್ನದ ಕಳಂಕವನ್ನು ತಪ್ಪಿಸಲು ಸಹಾಯ ಪಡೆಯಲು ಹಿಂಜರಿದರೆ ಅಪಾಯದ ಸಾಧ್ಯತೆಗಳು ಹೆಚ್ಚಾಗುತ್ತವೆ.
5 ಆಪ್ತಸಮಾಲೋಚಕರ ಸಹಾಯ ಪಡೆಯುವಾಗ ಪೋಷಕರು ಕೂಡ ಅದರಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿಯೇ ದೊಡ್ಡ ತೊಂದರೆಯಿದೆ ಎನ್ನುವ ಮನೋಭಾವದಿಂದ ಅವರ ಮೇಲಿನ ಒತ್ತಡ ಹೆಚ್ಚಾಗುತ್ತದೆ. ತಮ್ಮ ಮಾತು ವರ್ತನೆಗಳು ಮಕ್ಕಳ ಮೇಲೆ ಬೀರಿರಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಪೋಷಕರು ಸಿದ್ಧರಾಗಿರಬೇಕು.
-ನಡಹಳ್ಳಿ ವಸಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.