ಬೆಲಾರಸ್ ದೇಶದ ವಿರೋಧ ಪಕ್ಷದ ನಾಯಕಿ ಮಾರಿಯಾ ಕಲೆಸ್ನಿಕಾವಾ ಅವರಿಗೆ ಇದೇ 7ರಂದು ಹನ್ನೊಂದು ವರ್ಷಗಳ ಜೈಲು ಶಿಕ್ಷೆ ಕಾಯಂಗೊಳಿಸ ಲಾಯಿತು. ಅದಕ್ಕೆ ಆಕೆ ತನ್ನ ಪ್ರತಿಭಟನೆಯನ್ನು ದಾಖಲಿಸಿದ ರೀತಿ ವಿನೂತನವಾಗಿತ್ತು. ತುಟಿಗೆ ಗಾಢ ಕೆಂಪಿನ ಲಿಪ್‌ಸ್ಟಿಕ್ ಲೇಪಿಸಿಕೊಂಡು ಮುಖದಲ್ಲಿ ಕಿರುನಗೆ ಸೂಸಿ ಫೋಟೊಗೆ ಪೋಸ್ ಕೊಡುವ ಮೂಲಕ ಅವರು ಪ್ರತಿಭಟಿಸಿದರು. ಆಳುವ ಸರ್ಕಾರದ ನಾಯಕನನ್ನು ಟೀಕಿಸಿದ ಆಕೆಯ ಮೇಲೆ ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಈ ಶಿಕ್ಷೆ ನೀಡಲಾಯಿತು. ತನ್ನದೊಂದು ಟೀಕೆಗೆ ಹೆದರಿದ ಸರ್ಕಾರ ತನಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟಿದ್ದಕ್ಕೆ ತಾನು ಹೆದರುವುದಿಲ್ಲ ಮತ್ತು ದ್ವೇಷವೇ ರಾಜಕೀಯವಲ್ಲ ಎಂಬ ಸಂದೇಶವನ್ನು ಅವರು ಈ ಚಿತ್ರದ ಮೂಲಕ ರವಾನಿಸಿದರು. ದಿಟ್ಟತನವೆಂದರೇನು ಎಂಬುದನ್ನು ಅವರು ಮಾತಿಲ್ಲದೇ ವ್ಯಾಖ್ಯಾನಿಸಿದರು. ತನ್ನನ್ನು ಟೀಕಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಲು ಹೀಗೆ ಮಾಡಿದ ಸರ್ಕಾರದ ಕ್ರಮವನ್ನು ಅಂಜುಬುರುಕತನ ಎಂದು ಸಾರುವಂತೆ, ಪ್ರಪಂಚಕ್ಕೇ ತಿಳಿಯುವಂತೆ ಆಕೆಯ ಫೋಟೊ ಜಗತ್ತಿನಾದ್ಯಂತ ಅಚ್ಚಿಗೆ ಹೋಯಿತು.
ಇನ್ನೊಂದೆಡೆ, ಬೀದಿಗೆ ಬಂದರೆ, ಹಕ್ಕುಗಳನ್ನು ಕೇಳಿದರೆ ಬಂದೂಕಿನಿಂದ ಸುಟ್ಟು ಹಾಕಲಾಗುವುದು ಎಂದು ಹೆದರಿಸುತ್ತಿದ್ದ ತಾಲಿಬಾನೀಯರ ಬೆದರಿಕೆಗೆ ಜಗ್ಗದೆ, ಮಹಿಳಾ ಹಕ್ಕುಗಳನ್ನು ಹತ್ತಿಕ್ಕುತ್ತಿರುವುದನ್ನು ಪ್ರತಿಭಟಿಸಿ ಸುಮಾರು ನಲವತ್ತರಿಂದ ಐವತ್ತು ಅಫ್ಗನ್ ಮಹಿಳೆಯರು ಬೀದಿಗೆ ಬಂದು ಪ್ರತಿಭಟಿಸಿದರು. ಆಗ ಅವರ ಹಣೆಯನ್ನು ಗುರಿಯಾಗಿಸಿ ತಾಲಿಬಾನೀಯರು ಬಂದೂಕು ಹಿಡಿದರೆ, ಜಗ್ಗದ ಹೆಣ್ಣುಮಕ್ಕಳು ನೇರ ತಲೆ ಎತ್ತಿ ದಿಟ್ಟಿಸಿ ನೋಡಿದ ಚಿತ್ರಗಳೂ ಪ್ರಕಟವಾದವು (ಚಿತ್ರ ತೆಗೆದವರನ್ನು ಶಿಕ್ಷಿಸಿದ ಸುದ್ದಿ ಆಮೇಲೆ ಬಂತು). ದಿನವೂ ಸಾಯುತ್ತಾ ಬದುಕುವುದಕ್ಕಿಂತಲೂ ಒಮ್ಮೆಗೇ ಸಾಯುವುದು ಕಡಿಮೆ ಶಿಕ್ಷೆ ಎಂಬುದನ್ನು ಹೇಳುವಂತಿತ್ತು ಈ ಚಿತ್ರ.
ಅಫ್ಗನ್‍ನ ಬೆಟ್ಟ ಕಣಿವೆಗಳ ಸುಂದರ ಸ್ತ್ರೀ ಪುರುಷರ ನ್ನೊಳಗೊಂಡ, ಶ್ರೀಮಂತ ಉಡುಪು, ಆಭರಣಗಳ ಪರಂಪರೆಯೇ ಇರುವ ಪ್ರದೇಶದಲ್ಲಿ ಬಂದೂಕಿನ ಭಾಷೆ ಬಿಟ್ಟು ಇನ್ನೊಂದು ಬೇಕಿಲ್ಲ ಎನ್ನುವುದಾದರೆ, ಅದು ಸಾವಲ್ಲದೇ ಮತ್ತಿನ್ನೇನು? ‘ನೀವು ಸಾಧಿಸಿದ್ದಾದರೂ ಏನು’ ಎಂದು ಆ ಹೆಣ್ಣುಮಕ್ಕಳು ನೇರ ನೋಟದ ಬಾಣ ಎಸೆಯುತ್ತಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ, ಈ ಹೆಣ್ಣುಮಕ್ಕಳ ಇಂಥ ನಡೆಗಳು ಜಗತ್ತಿಗೇ ಏನನ್ನೋ ಹೇಳುತ್ತಿವೆ ಎಂಬುದನ್ನು ಜಗದ ಉಳಿವಿನ ಪ್ರಶ್ನೆಯಾಗಿ ಗಂಭೀರವಾಗಿ ಸ್ವೀಕರಿಸ ಬೇಕಾಗಿದೆ. ಹೆದರಿಕೆ, ಬೆದರಿಕೆಯ ಈ ಪೊಳ್ಳು ಲೋಕವು ಕುಸಿಯುತ್ತಿದ್ದು ಇದನ್ನು ಉಳಿಸಬೇಕೆಂದರೆ ಪಾಲನೆ ಪೋಷಣೆಯ ನಮ್ಮ ನಡೆಯೊಂದೇ ದಾರಿ, ನಿಮಗೆ ಆಗದಿದ್ದಲ್ಲಿ ಜಾಗ ಖಾಲಿ ಮಾಡಿ ಎಂಬುದೇ ಅಲ್ಲಿ ಅಡಕಗೊಂಡಿರುವ ಮಾತಾಗಿದೆ. ಆ ದಾರಿಯಲ್ಲಿ ಸಾಗಲು ಅಹಮ್ಮಿನ ಬಂದೂಕುಗಳನ್ನು ಕೆಳಗಿಳಿಸದೇ ಅನ್ಯ ದಾರಿಯಿಲ್ಲ.
ಮೇಲಿನ ಎರಡು ಸಂದರ್ಭಗಳಲ್ಲಿ ದಬ್ಬಾಳಿಕೆ ಮತ್ತು ಪ್ರತಿಭಟನೆಗಳು ನೇರ ಕಣ್ಣಿಗೆ ಕಾಣುತ್ತಿವೆ. ಆದರೆ, ಇದ್ಯಾವುದೂ ಒಂದೇ ಸಲ ಧುತ್ತೆಂದು ಹುಟ್ಟಿದ್ದಲ್ಲ. ಹೆಣ್ಣನ್ನು ಅಧೀನ ಸ್ಥಿತಿಯಲ್ಲಿಡಲು ಸಾಮಾಜಿಕ ಸಮ್ಮತಿ ಯನ್ನು ಬೇರೆ ಬೇರೆ ರೂಪದಲ್ಲಿ ಉತ್ಪಾದಿಸಲಾಗುತ್ತದೆ. ತಾನು ಅಸಹಾಯಕಳು ಎಂಬುದನ್ನು ಅವಳೇ ಒಪ್ಪಿಕೊಂಡು ಅಲವತ್ತುಕೊಳ್ಳುವಂತೆ ಮಾಡಲಾಗುತ್ತದೆ.
ನಮ್ಮ ಶಾಸಕಿಯರೇ ಮನೆಯಲ್ಲಿ ಬಿಟ್ಟು ಬಂದಿರುವ ಹೆಣ್ಣುಮಕ್ಕಳ ರಕ್ಷಣೆಯ ಕುರಿತುಸದನದಲ್ಲಿ ಆತಂಕ ವ್ಯಕ್ತಪಡಿಸುತ್ತಾರೆ. ಹೆಣ್ಣೇ ಒಂದು ಪರ್ಯಾಯ ಶಕ್ತಿಯಾಗಿದ್ದು ಅದನ್ನು ಒಗ್ಗೂಡಿಸಿಕೊಳ್ಳಲು ನಾವು ವಿಫಲವಾಗಿರುವುದರ ಸಂಕೇತವಾಗಿಯೂ ಇದನ್ನು ಕಾಣಬಹುದು. ಹೀಗೆ ಹೆಣ್ಣಿನ ಮನಃಸ್ಥಿತಿಯನ್ನು ಕುಗ್ಗಿಸುವಲ್ಲಿ ಚಿಕ್ಕಂದಿನಿಂದಲೇ ನಮಗೆ ಹೇಳಲಾಗುವ ರಮ್ಯ ಕತೆಗಳ ಪಾತ್ರವೂ ಇರುತ್ತದೆ. ನಾವು ಅಲ್ಲಿಂದಲೇ ಬದಲಾವಣೆಗೆ ಕೈ ಹಾಕಬೇಕಿದೆ. ಇಂತಹ ಪ್ರಯತ್ನಗಳು ಈಗ ಆಗತೊಡಗಿವೆ. ಹೆಣ್ಣಿನ ಚಿತ್ರಣ ಮತ್ತು ಗಂಡಿನ ಚಿತ್ರಣಗಳೆರಡೂ ಬದಲಾಗಬೇಕಿದೆ.
ನಮ್ಮ ಜನಪದ ಕತೆಗಳಲ್ಲಿ ಏಳು ಮಲ್ಲಿಗೆ ತೂಕದ ರಾಜಕುಮಾರಿಯನ್ನು ರಕ್ಷಿಸಿ ತರಲು ಎಂದೋ ಒಬ್ಬ
ಧೀರ ರಾಜಕುಮಾರ ಬರುತ್ತಾನೆ. ಅದಕ್ಕಾಗಿ ಅವಳು ಕಾದು ಕುಳಿತಿರಬೇಕು. ಕೊನೆಗೂ ಒಂದು ದಿನ ಆತ ಬಂದು ಅವಳ ಸೆರೆ ಬಿಡಿಸಿ ಕರೆದುಕೊಂಡು ಹೋಗಿ ಅವಳನ್ನು ಮದುವೆಯಾಗುತ್ತಾನೆ. ಆ ನಂತರ ಅವರು ಸುಖವಾಗಿ ಬಾಳಿದರು ಎಂದು ಕತೆ ಕೊನೆಯಾಗುತ್ತದೆ. ಅದರಂತೆ ಪಾಶ್ಚಾತ್ಯರ ಸಿಂಡ್ರೆಲಾ ಕತೆ ಕೂಡ. ದುಷ್ಟ ಮಲತಾಯಿ ಕೊಡುವ ಕಷ್ಟಗಳಿಗೆ ಅಳುತ್ತಾ ಕೂರುವ ಆಕೆಗೆ ಅದೃಷ್ಟದ ಸಹಾಯ ಸಿಗುತ್ತದೆ. ಅವಳ ಉಳಿದು ಹೋದ ಒಂದು ಬೂಟಿನ ಅಳತೆ ಹುಡುಕುತ್ತಾ ಅವಳನ್ನು ಅರಸುವ ರಾಜಕುಮಾರ, ಅವಳ ಬಳಿ ಬಂದು ‘ನಿನ್ನನ್ನು ಮದುವೆಯಾಗುತ್ತೇನೆ’ ಅಂದಾಕ್ಷಣವೇ ಅವಳು ಸಂತೋಷದಿಂದ ಮದುವೆಗೆ ಸಮ್ಮತಿಸಿಬಿಡುತ್ತಾಳೆ. ಈ ಕತೆ ಒಂದು ರೂಪಕವೇ ಆಗುವಷ್ಟು ಜನಪ್ರಿಯವಾಗಿ, ಗಡಿದಾಟಿ ಹೆಣ್ಣುಮಕ್ಕಳ ಕನಸಿನ ಒಂದು ಭಾಗವೇ ಆಗಿದೆ.
ಈಚೆಗೆ ‘ನ್ಯೂ ಸಿಂಡ್ರೆಲಾ’ ಎಂಬ ಇಂಗ್ಲಿಷ್ ಮ್ಯೂಸಿಕಲ್ ಸಿನಿಮಾವೊಂದು ಬಂದಿದ್ದು, ಅದು ಸಿಂಡ್ರೆಲಾ ಎಂಬ ರೂಪಕವನ್ನು ಬದಲಿಸಿದೆ. ಇಲ್ಲಿನ ಸಿಂಡ್ರೆಲಾ ಮಲತಾಯಿ ಕೊಡುವ ಕಷ್ಟಗಳಿಗೆ ಅಳುತ್ತಾ ಕೂರುವವಳಲ್ಲ. ಬದಲಿಗೆ ತನ್ನನ್ನು ಕೂಡಿ ಹಾಕಿರುವ ನೆಲಕೋಣೆಯಲ್ಲೇ ತನ್ನ ಕನಸುಗಳಿಗೆ ಜೀವ ಕೊಡುವವಳು. ತನ್ನ ಹೊಲಿಗೆ ಕಲೆಯ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು, ತಾನೊಬ್ಬಳು ಡಿಸೈನರ್ ಆಗಬೇಕು, ಅದಕ್ಕೊಂದು ಅವಕಾಶ ಸಿಗುವುದಕ್ಕಾಗಿ ಕಾಯಬೇಕು ಎಂದು ತನ್ನ ಚೈತನ್ಯಕ್ಕೆ ನೀರೆರೆದುಕೊಳ್ಳುತ್ತಾ, ಲೋಕವನ್ನು ಪ್ರೀತಿಸುವವಳು. ಅಂತಹ ಅವಕಾಶವನ್ನೂ ಸಾಹಸದಿಂದ ಸೃಷ್ಟಿಸಿಕೊಳ್ಳುತ್ತಾಳೆ.
ರಾಜಕುಮಾರ ಸಾಮಾನ್ಯನ ವೇಷದಲ್ಲಿದ್ದಾಗ ಅವನ ಪರಿಚಯವಾಗಿರುತ್ತದೆ. ಆತ ಅವಳ ಪ್ರೀತಿಗೆ ಬಿದ್ದು, ಮುಂದೆ ಅವಳನ್ನು ಮದುವೆಯಾಗಲು ಕೇಳುತ್ತಾನೆ. ಆದರೆ, ‘ನನಗೆ ನನ್ನ ಕೆಲಸದ ಹಾದಿಯಲ್ಲಿ ಅವಕಾಶವೊಂದು ತೆರೆದಿದ್ದು, ನಾನಲ್ಲಿಗೆ ತೆರಳಬೇಕಿದೆ. ನಿನ್ನ ಜೊತೆ ಮದುವೆ ನನಗೆ ಹೊಂದಿಕೆಯಾಗು
ವುದಿಲ್ಲ’ ಎನ್ನುತ್ತಾಳಾಕೆ. ಅವಳ ಸ್ವಾವಲಂಬನೆಯ ದಾರಿ ಅವನಲ್ಲೂ ಬದಲಾವಣೆ ತಂದು, ಆತ ತನಗೆ ಇಷ್ಟವಿಲ್ಲದ ರಾಜಪಟ್ಟವನ್ನು ನಿರಾಕರಿಸಿ ತಾನೂ ಸ್ವಂತ ದುಡಿಮೆಯ ಹಾದಿ ಹಿಡಿಯುವ ನಿರ್ಧಾರಕ್ಕೆ ಬರುತ್ತಾನೆ. ಆಕೆ ಅವನಿಗೆ ಮದುವೆಯ ಭರವಸೆಯನ್ನು ನೀಡುವುದಿಲ್ಲವಾದರೂ ಅವನ ಪ್ರೀತಿಯನ್ನು ನಿರಾಕರಿಸುವುದಿಲ್ಲ.
ಇಲ್ಲಿನ ಸಿಂಡ್ರೆಲಾ ತನ್ನ ಬದುಕಿನ ದಾರಿಯ ನಿರ್ಣಯವನ್ನು ತಾನೇ ತೆಗೆದುಕೊಳ್ಳುವವಳು. ಸಿಡುಕುವ ಮಲತಾಯಿಗೂ ಕಷ್ಟ ಇದೆ ಎನ್ನುವುದಕ್ಕೆ ಕಿವಿಯಾಗುವವಳು. ಇಲ್ಲಿನ ರಾಣಿ, ರಾಜತ್ವದ ಅಮಲಿನಲ್ಲಿ ಪ್ರೀತಿಯ ಸಂಬಂಧಗಳನ್ನೇ ಕಳೆದುಕೊಂಡಿರುವ ರಾಜನಿಗೆ ಅದರ ನಿಸ್ಸಾರವನ್ನು ಕಾಣಿಸುವವಳು. ಮಾತ್ರವಲ್ಲ, ಮಗನಿಗೇ ಯಾಕೆ? ರಾಜ್ಯವೊಂದನ್ನು ಸಮರ್ಥವಾಗಿ ಆಳುವುದರ ಕುರಿತು ಖಚಿತ ಕಣ್ನೋಟ ಮತ್ತು ಆಕಾಂಕ್ಷೆ ಇರುವ ಮಗಳಿಗೂ ಪಟ್ಟ ಕೊಡಬಹುದು ಎಂಬುದನ್ನು ರಾಜ ಮನಗಾಣುವಂತೆ ಮಾಡಬಲ್ಲವಳು. ರಾಜಕುಮಾರನನ್ನು ಮೆಚ್ಚಿಸುವುದಕ್ಕೋಸ್ಕರವೇಅಲಂಕರಿಸಿಕೊಳ್ಳುವ, ಕುಣಿಯುವ, ದಣಿಯುವ ಹೆಣ್ಣುಮಕ್ಕಳನ್ನು ಸೃಷ್ಟಿಸುತ್ತಿರುವವರು ನಾವೇ ಎನ್ನುವುದನ್ನೂ ಈ ಸಿನಿಮಾ ಸೂಚಿಸುತ್ತದೆ. ಎಲ್ಲಿಯತನಕ ನಾವು ಹೀಗೆ ಕುಣಿಯುತ್ತಾ, ದಣಿಯುತ್ತಾ ಇರುತ್ತೇವೋ ಅಲ್ಲಿಯ ತನಕ ನಮ್ಮನ್ನು ಮಣಿಸುತ್ತಲೇ ಇರುವ ವ್ಯವಸ್ಥೆಯೂಗಟ್ಟಿಯಾಗುತ್ತಲೇ ಹೋಗುತ್ತದೆ.
ಒಂದೆಡೆ, ಮುಚ್ಚಿಡುವ, ದಂಡಿಸುವ ಪಡೆ. ಇನ್ನೊಂದೆಡೆ, ಅಳುವ ಅಸಹಾಯ ಪಡೆ. ಇದಲ್ಲದ ಆತ್ಮವಿಶ್ವಾಸದ ನಡೆ ಸಾಧ್ಯವಿದೆ. ಇಲ್ಲೊಂದು ಚೆಲುವಿನ ಲೋಕವೂ ಇದೆ. ಬದಲಾದ ಸಿಂಡ್ರೆಲಾಳಂತೆ ಹೊಸ ರೂಪಕವು ಹೊಸ ಲೋಕ ಸೃಷ್ಟಿಸಬಲ್ಲುದು. ಕಲ್ಪನೆಯ ಲೋಕ ವಾಸ್ತವಕ್ಕಿಳಿಯಲು ನಮ್ಮ ಸುತ್ತಿನ ಹೆಣ್ಣುಮಕ್ಕಳ ದಿಟ್ಟ ಹೋರಾಟಗಳು ಪ್ರೇರಣೆಗಳಾಗಬಲ್ಲುವು.
ಲೇಖಕಿ: ಪ್ರಾಧ್ಯಾಪಕಿ.ಸರ್ಕಾರಿ ಪ್ರಥಮದರ್ಜೆ ಕಾಲೇಜು, ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.