ಅದೇನು ಮಾಯೆಯೋ! ‘ಸಭೆ’ ಎಂದರೆ ತಬ್ಬಿಬ್ಬುಗೊಳಿಸುವಂಥದೇ ಆಗಿರುತ್ತದೆ! ತಮ್ಮ ತಾಯಿಯ ಕಾರಣವಾಗಿ ಹಸ್ತಿನೆಯ ಅರಮನೆಯಲ್ಲಿ ಒಡನಾಡಬೇಕಾಗಿಬಂದ ವ್ಯಾಸರಿಗೆ ಈ ಸತ್ಯ ಚೆನ್ನಾಗಿ ಗೊತ್ತು. ಅವರು ಬೆಳೆದುಬಂದದ್ದೆಲ್ಲ ಒಂದು ದ್ವೀಪದಲ್ಲಿ. ಯಮುನೆಯ ನಡುವೆ. ಅಲ್ಲಿ ಎಂದೂ ಕಾಣಿಸದ ಗೊಂದಲ ಅರಮನೆಗೆ ಹೊಕ್ಕ ಕೂಡಲೇ ವ್ಯಾಸರಿಗೆ ಅನುಭವಕ್ಕೆ ಬಂತು. ನಿಜಕ್ಕಾದರೆ ಬಯಲಿನಲ್ಲಿ ದಿಕ್ಕುತಪ್ಪಿ ತಬ್ಬಿಬ್ಬಾಗಬಹುದೆಂದು ಆಲಯವನ್ನು ಕಟ್ಟುವೆವು. ಆದರೆ ಆಲಯವೆ ತಬ್ಬಿಬ್ಬುಗೊಳಿಸುವುದು; ಬಯಲಲ್ಲ.
ಪಾಂಡವರು ರಾಜಸೂಯದಂಥ ದೊಡ್ಡ ಯಾಗವೊಂದನ್ನು ನಡೆಸದೆ ಪ್ರತಿಷ್ಠೆಗಳಿಸುವುದು ಕಷ್ಟ. ಅದಕ್ಕಾಗಿ ದೊಡ್ಡ–ವಿಶಿಷ್ಟ ಸಭಾಮಂದಿರವೊಂದು ಬೇಕು; ಅಂಥದೊಂದನ್ನು ನಿರ್ಮಿಸಿಕೊಡು ಎಂದು ‘ಮಯ’ನೆಂಬ ಶಿಲ್ಪಿಗೆ ಸೂಚಿಸಿದವನು ಸ್ವಯಂ ಕೃಷ್ಣ; ಯಾದವರಿಗಾಗಿ ದ್ವಾರಕೆಯನ್ನು ಕಟ್ಟಿಸಿದವನು ಮತ್ತು ತಾನು ಈ ಲೋಕದಿಂದ ನಿರ್ಗಮಿಸುವ ಮುನ್ನ, ಇನ್ನೇಳು ದಿನಗಳಲ್ಲಿ ದ್ವಾರಕೆ; ಕಡಲಲ್ಲಿ ಮುಳುಗುತ್ತದೆ ಎಂದು ಭವಿಷ್ಯವನ್ನು ಸೂಚಿಸಿಯೇ ನಿರ್ಮಮವಾಗಿ ತೆರಳಿದವನು! ರಾಜಸೂಯದ ಸಭಾಗೃಹವನ್ನು ಹೇಗೆ ಕಟ್ಟಿದ್ದರೆಂದರೆ – ಅಲ್ಲಿ ನೆಲ–ನೀರುಗಳ ಅಂತರವೇ ಸುಲಭದಲ್ಲಿ ತಿಳಿಯುತ್ತಿರಲಿಲ್ಲ. ಹಾಗೆ ತಿಳಿಯದೆ, ರಾಜಸೂಯಕ್ಕೆ ಬಂದಿದ್ದ ಸುಯೋಧನ, ನೀರೆಂದುಕೊಂಡಲ್ಲಿ ಒದ್ದೆಯಾಗದೆ ನೆಲವೆಂದುಕೊಂಡಲ್ಲಿ ಒದ್ದೆಮುದ್ದೆಯಾಗಿ ತಬ್ಬಿಬ್ಬುಗೊಂಡು ಎಲ್ಲರ ಮುಂದೆ – ದ್ರೌಪದಿ, ಭೀಮ, ಕೃಷ್ಣರ ಮುಂದೆ – ಗೇಲಿಗೊಳಗಾಗಿದ್ದ. ಅವನಿಗೆ ತೀವ್ರವಾದ ಮುಖಭಂಗವಾಗಿತ್ತು. ಆದುದರಿಂದಲೇ ಸಭೆಯ ಮುಂದೆ ದ್ರೌಪದಿಯನ್ನು–ಪಾಂಡವರನ್ನು ಹೀನಾಯಗೊಳಿಸುವುದೇ ಅವನ ಸಂಕಲ್ಪವಾಗಿಬಿಟ್ಟಿತ್ತು. ಸಭೆಯ ಸತ್ಯದ ಜಾಡು ಅವನು ಕಂಡುಕೊಂಡಿದ್ದ.
ರಾಜಸೂಯದ ಸಭೆಯ ತಬ್ಬಿಬ್ಬುಗೊಳಿಸುವ ನಿರ್ಮಾಣ ಕೌಶಲವೊಂದು ಸಂಕೇತವಾಗಿರುವಂತಿದೆ – ಮಹಾಭಾರತದಲ್ಲಿ. ಸಭೆಯಲ್ಲಿ ಸರಳ ಸತ್ಯವೂ ಕೂಡ ಗೊಂದಲಗೊಳಿಸುವ ವ್ಯಾಖ್ಯಾನಗಳಿಗೆ ತಿಳಿದುತಿಳಿದೇ ಒಳಗಾಗುತ್ತದೆ. ನೆಲ–ನೀರುಗಳ ಗಡಿಗುರುತುಗಳನ್ನು ಅಳಿಸುವುದೇ ಸಭೆಯ ಸತ್ಯ – ತನ್ನ ಅನುಕೂಲಕ್ಕೆ ತಕ್ಕಂತೆ. ಸಭಾನಾಯಕರ ಇಂಗಿತವನ್ನೇ ‘ಸತ್ತ್ಯ’ವೆಂದು ‘ಧರ್ಮ’ವೆಂದು ತೋರಿಸಬೇಕೆನ್ನುವುದೇ ಸಭೆಯ ಸತ್ತ್ಯ. ಸಭಾಜೀವಿಗಳಷ್ಟೇ ಸತ್ಯಸಂಧರೆನ್ನುವುದು ಸಭೆಯ ಸತ್ಯ. ಈ ಸತ್ಯವನ್ನು ಸಾಧಿಸಬಯಸುವ ಬುದ್ಧಿವಂತರು, ನ್ಯಾಯವೇತ್ತರು, ಮಾತುಗಾರರು, ಮಾತೇ ಆಡದೆ ಮೌನದಿಂದ ನೆರವಾಗುವವರು – ಇವರೆಲ್ಲ ಇದನ್ನೇ ಸತ್ಯವೆಂದು ನಿಜವಾಗಿ ನಂಬಿದ್ದಾರೋ ಅಥವಾ ಇಲ್ಲವೋ ಎಂಬ ಗೊಂದಲವನ್ನೂ ಉಂಟುಮಾಡಿ ಆ ಗೊಂದಲವನ್ನೂ ತನಗೆ ಅನುಕೂಲವಾಗುವಂತೆ ಅಂದರೆ ಎಲ್ಲರ ಒಳತೋಟಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ನಾಚದೆ ಇರುವುದು ಸಭೆಯ ಸತ್ಯ. ನಿಜ, ಧರ್ಮಜ ದ್ಯೂತದಲ್ಲಿ ದ್ರೌಪದಿಯನ್ನು ಪಣವಿಟ್ಟಾಗ ಸಭೆಗೆ ಸಭೆಯೇ ದಿಗ್‌ಭ್ರಮಿತವಾದುದನ್ನು, ಇದು ತಪ್ಪೆಂದು ಹೇಳಿದುದನ್ನು ವ್ಯಥೆಯಿಂದ ಒಳಗೊಳಗೇ ಕೊರಗಿದುದನ್ನು ಮಹಾಭಾರತ ಹೇಳುತ್ತದೆ ಎನ್ನುವುದೂ ನಿಜ. ಆದರೆ ಯಾರಿಗೂ ಇದನ್ನು ತಡೆಯಲಾಗಲಿಲ್ಲ ಎನ್ನುವುದು, ಆಮೇಲೆ ನಡೆದ ಘೋರಕ್ಕೂ ಈ ಸಭೆಯೇ ಸಾಕ್ಷಿಯಾಯಿತೆನ್ನುವುದೂ ಅಷ್ಟೇ ನಿಜ! ಇದೇ ಸಭೆಯ ಸತ್ಯವೆನ್ನುವ ಮಾಯೆ. ಸಭೆಯ ಸತ್ಯ ಹೆಣ್ಣಿಗೆ ತಿಳಿದಂತೆ, ಮತ್ತವಳ ದೈವಕ್ಕೆ ತಿಳಿದಂತೆ ಮತ್ತಾರಿಗೆ ತಿಳಿಯುವುದು ಸಾಧ್ಯ ಎಂದು ವ್ಯಾಸರು ಹೇಳುವಂತಿದೆ. ಏಕೆಂದರೆ ಉಳಿದೆಲ್ಲರೂ ಸಭೆಯ ಈ ಮಾಯೆಗೆ ಒಳಗಾದವರೇ. ದುರ್ಯೋಧನನಂತೆ ನೆಲ–ನೀರು ತಿಳಿಯದೆ ಹೆಜ್ಜೆ ತಪ್ಪಿದವರೇ!
ದ್ರೌಪದಿಯ ಪ್ರಶ್ನೆಯ ಹಿಂದಿರುವ ಸರಳ ಇಂಗಿತಕ್ಕೆ ಸ್ಪಂದಿಸುವುದು ಯಾರಿಗೂ ಬೇಕಿರಲಿಲ್ಲ. ತಾನು ಸೋಲುವ ಮುನ್ನ ನನ್ನನ್ನು ಪಣವಿಟ್ಟನೆ? ಅಥವಾ ತಾನು ತನ್ನನ್ನೇ ಸೋತ ಮೇಲೆಯೇ? ಎನ್ನುವ ದ್ರೌಪದಿಯ ಈ ಜಿಜ್ಞಾಸೆಯ ಇಂಗಿತವೇನು? ನನ್ನನ್ನು ಪಣವಾಗಿ ಇಡುವ ಹೊತ್ತಿನಲ್ಲಿ ನಿನ್ನ ವಶದಲ್ಲಿ ನೀನಿದ್ದೆಯೇನು? ಅಥವಾ ಬೇರಾರ, ಬೇರಾವ ಪ್ರಭಾವಕ್ಕೆ ಒಳಗಾಗಿದ್ದೆ ನೀನು? ನಿನ್ನನ್ನೆ ಪಣ ಇಟ್ಟು ಜೂಜು ನಡೆಸಬೇಕಾದರೆ ಆಗ ನಿನ್ನ ವಶದಲ್ಲೇ ನೀನು ಇರಲಿಲ್ಲ ಎನ್ನುವುದೇ ನಿಜ – ಎರಡು ಅರ್ಥಗಳಲ್ಲಿಯೂ. ಪಣವನ್ನು ಸೋತು ಎದುರಾಳಿಯ ದಾಸನಾದನೆನ್ನುವ ಅರ್ಥದಲ್ಲೂ ನಿಜ. ಪ್ರಭಾವಕ್ಕೆ ಒಳಗಾಗಿ ವಿವಶನಾಗಿದ್ದನೆನ್ನುವ ಅರ್ಥದಲ್ಲೂ ನಿಜ. ಈ ಇಂಗಿತ, ಧರ್ಮಜನನ್ನು ಉಳಿಸಬಯಸುವ ಏಕಮಾತ್ರ ತಂತುವಾಗಿತ್ತು. ಅದೆಂದರೆ – ಶಕುನಿಯ, ದುರ್ಯೋಧನನ ಪ್ರಚೋದನೆಗೆ ಒಳಗಾಗಿದ್ದಾನೆ ಈತ. ಪ್ರಭಾವಿತನಾಗಿದ್ದಾನೆ. ಇಂಥ ಜೂದಾಳಿಗಳ ನಡವಳಿಕೆಯನ್ನು ದೊಡ್ಡ ಮೇಧಾವಿಗಳಿರುವ ಈ ಸಭೆ ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುವ ಇಂಗಿತ.
ಈ ಇಂಗಿತ ಯಾರಿಗೂ ಅರ್ಥವಾಗದೆ ಹೋಯಿತು. ಅರ್ಥವಾಗಬಹುದಾಗಿದ್ದ ಸೂಕ್ಷ್ಮಜ್ಞ ಭೀಷ್ಮ ತನ್ನನ್ನು ಕುರಿತಾಗಿ ಕೇಳಿದ ದ್ರೌಪದಿಗೆ – ಇದು ಬಹಳ ಸೂಕ್ಷ್ಮವಾದ ವಿಷಯ. ದಾಸನಾದವನಿಗೂ ಪತ್ನಿ ಇರುತ್ತಾಳಲ್ಲವೆ? ತನ್ನ ಪತ್ನಿಯ ಮೇಲೆ ಅವನಿಗೆ ಅಧಿಕಾರ ಇರುತ್ತದೆಯಲ್ಲವೆ? ಈ ಧರ್ಮಸೂಕ್ಷ್ಮವನ್ನು ಸ್ವಯಂ ಧರ್ಮಜನೇ ಬಲ್ಲವನಿದ್ದಾನೆ. ಅವನನ್ನೇ ಕೇಳು – ಎಂದುಬಿಟ್ಟ. ತನ್ನನ್ನು ಪಣವಾಗಿಟ್ಟು ಸೋತವನಲ್ಲಿ ತಾನು ಮತ್ತೆ ಇದೊಂದು ಧರ್ಮಜಿಜ್ಞಾಸೆ ಎಂಬಂತೆ ಕೇಳಬೇಕು! ದ್ರೌಪದಿಯನ್ನು ಎಂಥ ಹತಾಶೆಗೆ ತಳ್ಳಿಬಿಟ್ಟ ಈ ಪಿತಾಮಹ! ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ದ್ರೌಪದಿಗೆ ಧರ್ಮಜ ಹೇಳಬಹುದಾದ ಉತ್ತರದ ಸುಳಿವೊಂದನ್ನು ಭೀಷ್ಮ ತನ್ನ ಮಾತಿನಲ್ಲಿ ಇಟ್ಟಿದ್ದನೆನ್ನಬೇಕು. ಅದೆಂದರೆ – ದಾಸನಿಗೇ ಆದರೂ ತನ್ನ ಪತ್ನಿಯ ಮೇಲೆ ಅಧಿಕಾರವಿರುತ್ತದೆ ಎಂಬ ಸುಳಿವು!
ನಿಜ. ದಾಸನಿಗೇ ಆದರೂ ತನ್ನ ಪತ್ನಿಯ ಮೇಲೆ ಅಧಿಕಾರವಿರಬಹುದು. ಅಂದರೆ ಅವಳಿಂದ ತಾನು ಸೇವೆಯನ್ನು ಪಡೆದುಕೊಳ್ಳುವ ಅಧಿಕಾರಕ್ಕೆ ಅದು ಸೀಮಿತ. ಇನ್ನೊಬ್ಬರ ಸೇವೆಗೆ ಪತ್ನಿಯನ್ನು ತಳ್ಳುವ ಅಧಿಕಾರವಿರುತ್ತದೆಯೆ? ಇದ್ದರೆ ಇಂಥದೊಂದು ಉಪಕ್ರಮ ತನ್ನ ಅಧಿಕಾರವನ್ನು ತಾನು ಕಳೆದುಕೊಂಡಂತಲ್ಲವೆ? ತನ್ನ ಅಧಿಕಾರವನ್ನು ತಾನು ಕಳೆದುಕೊಳ್ಳುವುದೂ ಅಧಿಕಾರ ಚಲಾವಣೆಯ ಒಂದು ರೀತಿಯೆ? ರೀತಿಯಾಗುವುದು ಸಾಧ್ಯವೆ? ಇದು ಅಂತರ್ಗತ ವಿಪರ್ಯಾಸವಲ್ಲವೆ? ಈ ವಿಪರ್ಯಾಸವನ್ನು ಗುರುತಿಸಲಾದರೆ ದ್ರೌಪದಿಯ ಪ್ರಶ್ನೆ ಗೆದ್ದಂತೆಯೇ ಸರಿ. ಆದರೆ ಸಭೆಯ ಸತ್ಯಕ್ಕೆ ವಿಪರ್ಯಾಸಗಳನ್ನು ಗುರುತಿಸುವ ಮೊನಚು ಇರುವುದಿಲ್ಲ ಅಥವಾ ಸಭೆಯ ಸತ್ಯಕ್ಕೆ ವಿಪರ್ಯಾಸಗಳ ಅರಿವಿನ ಕುರಿತು ತನ್ನದೇ ಆದ ಅಳುಕಿರುತ್ತದೆ. ಅಷ್ಟೇಕೆ? ವಿದುಷಿ ಇರಾವತಿ ಕರ್ವೆಯವರು ತಮ್ಮ ‘ಯುಗಾಂತ’ದಲ್ಲಿ ದ್ರೌಪದಿಯ ಪ್ರಶ್ನೆಯ ಕುರಿತು ವಿಚಾರ ಮಾಡುತ್ತ ಭೀಷ್ಮನಂತೆಯೇ ಚಿಂತಿಸಿದ್ದಾರೆ. ದಾಸನಿಗೆ ತನ್ನ ಪತ್ನಿಯ ಮೇಲೆ ಅಧಿಕಾರವಿದೆ ಎಂದ ಮೇಲೆ ದ್ರೌಪದಿಯ ಪ್ರಶ್ನೆ ಉದ್ಧಟತನದ್ದು ಎಂದುಬಿಟ್ಟಿದ್ದಾರೆ! ಸಭೆಯ ಸತ್ಯದ ಮಾಯೆ ಯಾರನ್ನೂ ಬಿಟ್ಟಿಲ್ಲವೆನಿಸುತ್ತದೆ!
ಇಂಥ ಸಭಾಸತ್ಯದ ಪಕ್ಷಪಾತಿಗಳಾದವರು ಯಾವುದನ್ನು ತಮ್ಮ ಕಣ್ಣ ಮುಂದೆ ನೋಡಲು ಯೋಗ್ಯರಿದ್ದಾರೋ ಅಂಥ ಘಟನೆ ನಡೆದೇಹೋಯಿತು. ದ್ರೌಪದಿಯನ್ನು ಸಭೆಗೆ ಎಳೆದು ತರಲಾಯಿತು. ಎಳೆದು ತಂದವನು ದುಃಶಾಸನ. ದ್ರೌಪದಿ ತಾನು ಸಭೆಗೆ ಬರಲಾಗದ ಬರಬಾರದ ಸ್ಥಿತಿಯಲ್ಲಿರುವೆನೆಂದಳು. ರಜಸ್ವಲೆಯಾಗಿರುವೆನೆಂದಳು. ಒಂದೇ ಬಟ್ಟೆಯಲ್ಲಿರುವೆನೆಂದಳು. ದುಃಶಾಸನ ಹೀನಮಾತುಗಳನ್ನಾಡಿದ. ವಿ–ವಸ್ತ್ರಳೇ ಆಗು ಎಂದ. ತನ್ನ ಮಾತಿನಿಂದಲೇ ಅವನು ದ್ರೌಪದಿಯ ಸೀರೆಯನ್ನು ಸೆಳೆದಾಗಿತ್ತು. ಕುರುರಾಯಭವನದಲಿ ಫಲವತಿಯಾಗು ಎಂದ. ಏಕೆ ಈ ಮಾತಿನ ಹಿಂಸೆ? ಏಕೆಂದರೆ – ದಾಸಿಯರಲ್ಲಿ ಹೇಗೂ ನಡೆದುಕೊಳ್ಳಬಹುದು ಎಂದ. ನೀನೀಗ ನ್ಯಾಯವಾಗಿಯೇ ನಮ್ಮ ದಾಸಿಯಾಗಿರುವೆ ಎಂದ. ಎದೆಗೆಟ್ಟರೂ ತನ್ನ ಪ್ರಶ್ನೆಯ ಮೇಲಿರುವ ವಿಶ್ವಾಸದಿಂದ ದ್ರೌಪದಿ ಸಭೆಯಲ್ಲಿ ಗೋಳಿಡುತ್ತಲೇ ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಈ ಪ್ರಶ್ನೆಗೆ ಸ್ಪಂದಿಸಿದವರು, ವಿದುರನನ್ನು ಹೊರತಾಗಿ ಬೇರಾರೂ ಇಲ್ಲವೆ? ಎಂದರೆ ಒಬ್ಬನಿದ್ದ. ಅವನು ವಿಕರ್ಣ. ನೂರು ಮಂದಿ ಕೌರವ ಸೋದರರಲ್ಲಿ ಓರ್ವ. ಇದು ವ್ಯಾಸರ ಆಯ್ಕೆ! ವಿಕರ್ಣ ದ್ರೌಪದಿಯ ಮಾತಿನ ಇಂಗಿತವನ್ನು ಗ್ರಹಿಸಿದ. ಅದನ್ನು ಒಪ್ಪಿದ. ಜೂಜಿನಲ್ಲಿ ಉನ್ಮತ್ತರಾಗಿ ಇನ್ನೊಬ್ಬರ ಪ್ರಭಾವಕ್ಕೆ ಒಳಗಾದ ಜೂದಾಳಿಗಳ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಕೂಡದು ಎಂದವನೀತ. ದ್ರೌಪದಿಯ ಪ್ರಶ್ನೆಗೆ ಉತ್ತರಿಸುವುದು ಈ ಸಭೆಯ ಹೊಣೆಗಾರಿಕೆಯಾಗಿದೆ ಎಂದವನೀತ. ಆಗ, ವಿಕರ್ಣನನ್ನು ಗದರಿಸಿ ಎತ್ತರಿಸಿ ಮಾತಾಡಿದವನು ಕರ್ಣ. ದ್ರೌಪದಿಗೆ ಕೆಡು ನುಡಿದ. ಐವರ ಪತ್ನಿ ನೀನು. ಇನ್ನು ಈ ಜೂದಾಳಿಗಳ ಗೊಡವೆಯನ್ನು ಬಿಡು ಎಂದ. ಆರನೆಯವನನ್ನು ಹುಡುಕಿಕೋ ಎಂದ. ಜೂಜಾಡದವನನ್ನು ಆರಿಸಿಕೋ ಎಂದ. ಸೂತನನ್ನು ಮದುವೆಯಾಗಲಾರೆನೆಂದು ಸ್ವಯಂವರ ಕಾಲದಲ್ಲಿ ತನ್ನ ಕುರಿತು ದ್ರೌಪದಿ ಆಡಿದ ಮಾತನ್ನು ಕರ್ಣ ಮರೆತಿರಲಿಲ್ಲ. ದುಃಶಾಸನ ಮೊದಲು ಹೇಳಿದ ‘ವಿವಸ್ತ್ರಾ’ ಎಂಬ ಪದವನ್ನು ಮತ್ತೆ ಎತ್ತಿಹೇಳಿ ದ್ರೌಪದಿಯ ಸೀರೆಯನ್ನು ಸೆಳೆ ಎಂದವನು ಕರ್ಣನೇ. ಈ ಕ್ಷಣದಲ್ಲಿ ಕರ್ಣ ತನ್ನ ವ್ಯಕ್ತಿತ್ತ್ವವನ್ನೇ ಕಳೆದುಕೊಂಡ. ಸಭೆಯ ಸತ್ಯದ ಪರಿಣಾಮಕ್ಕೆ ಕರ್ಣ ಇಡಿಯಾಗಿ ಒಳಗಾಗಿದ್ದ. ಈ ಸಂದರ್ಭದಲ್ಲಿ ಮಹಾಭಾರತ ಸಭೆಯ ಸತ್ಯದ ಕುರಿತು ತುಂಬ ಒಳನೋಟದ ಮಾತುಗಳನ್ನಾಡುತ್ತದೆ. ‘ನ ಸಾ ಸಭಾ ಯತ್ರ ನಸಂತಿ ವೃದ್ಧಾಃ’ ಎನ್ನುತ್ತದೆ. ‘ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು; ಸಭೆಯಲ್ಲ’. ಯಾರು ಹಿರಿಯರು? ‘ವೃದ್ಧಾಃ ನ ತೇ ಯೇ ನ ವದಂತಿ ಧರ್ಮಂ’. ಧರ್ಮವನ್ನು ಹೇಳಲಂಜುವವರು ಹಿರಿಯರಲ್ಲ. ಇಂಥ ಮೌನವ್ರತಿಗಳನ್ನು ಕುಮಾರವ್ಯಾಸ ‘ಯಥಾರ್ಥಭಾಷಣ ಭೀತಚೇತನರು’ ಎಂದು ಅದ್ಭುತವಾಗಿ ಹೇಳುತ್ತಾನೆ. ಯಾವುದು ಧರ್ಮ? ‘ನಾಸೌ ಧರ್ಮೋ ಯತ್ರ ಚ ನಾಸ್ತಿ ಸತ್ಯಂ’. ಯಾವುದು ಸತ್ಯವಲ್ಲವೋ ಅದು ಧರ್ಮವಾಗಲಾರದು. ಯಾವುದು ಸತ್ಯ? ‘ನತತ್ ಸತ್ಯಂ ಯತ್ ಛಲೇನಾನುವಿದ್ಧಂ’. ಯಾವುದು ತೋರಿಕೆಯೋ ಕಪಟವೋ ಛದ್ಮವೋ ಮುಖವಾಡವೋ ಅದು ಸತ್ಯವಾಗಲಾರದು. ಇದು ದ್ರೌಪದಿಯ ಮಾತು. ವ್ಯಾಸರು ಆಡಿಸಿದ್ದು. ಇಲ್ಲಿನ ಮಾತುಗಾರಿಕೆಯೇ ವಿಶಿಷ್ಟವಾಗಿದೆ. ಇದಲ್ಲ, ಹೀಗಲ್ಲ ಎಂಬ ನಿಷೇಧಾತ್ಮಕತೆಯ ಮೂಲಕವೇ ನಿಜವೇನು ಎನ್ನುವುದನ್ನು ಹೊಳೆಯಿಸುವ ಮಾತಾಗಿದೆ. ಸಭೆಯ ಸತ್ಯವೇ ಬೇರೆ, ಸತ್ಯದ ಸಭೆಯೇ ಬೇರೆ ಎಂದು ಸೂಚಿಸುವ ಮಾತಾಗಿದೆ. ಸ್ತ್ರೀಯನ್ನು ವಿವಸ್ತ್ರ ಮಾಡಹೊರಟವರು ‘ಸ್ತ್ರೀಮತವನುತ್ತರಿಸಲಾಗದೆ’ ತಾವೇ ವಿವಸ್ತ್ರರಾಗುತ್ತಿದ್ಸಾರೆ!
ಕಥೆ ಎಲ್ಲರಿಗೂ ತಿಳಿದಿರುವಂಥದೇ. ನಾಗರಿಕತೆಯೊಂದು ನಿಧಾನವಾಗಿ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಚಿತ್ರಣವಿದು. ಹಸ್ತಿನೆಯ ಅರಮನೆಗೆ ಮತ್ಸ್ಯಗಂಧಿಯನ್ನು ಭೀಷ್ಮನು ಬರಮಾಡಿಕೊಂಡ ಸಂದರ್ಭವನ್ನು ನೆನೆದರೆ – ಅದೇ ಹಸ್ತಿನೆಯ ಅರಮನೆಯಲ್ಲಿ ಅದೇ ಭೀಷ್ಮನು ನೋಡುತ್ತಿರುವಂತೆ ದ್ರೌಪದಿ ಪಟ್ಟಪಾಡನ್ನು ನೋಡಿದರೆ ಪತನದ ಅರಿವಾಗುತ್ತದೆ. ದ್ರೌಪದಿಯ ಪ್ರಕರಣವಾದ ಮೇಲೆ, ಸ್ತ್ರೀಯರ ಜೊತೆ ಭಾವನಾತ್ಮಕವಾಗಿ ಪ್ರೀತಿಯ ಸಹಜವ್ಯವಹಾರವನ್ನು ಮಾಡುವ ಯೋಗ್ಯತೆಯನ್ನೇ ಎಲ್ಲರೂ ಕಳೆದುಕೊಂಡರು ಎನಿಸುತ್ತದೆ. ಬಸವಣ್ಣನ ಮಡದಿ ನೀಲಾಂಬಿಕೆಯ ವಚನವೊಂದು ನೆನಪಾಗುತ್ತದೆ. ‘ಮಡದಿ ಎಂಬ ಶಬ್ದ ನಿಃಶಬ್ದವಾದೊಡೆ ನಾನೀಗ ನಿಜಸುಖಿ ಬಸವಾ’ ಎನ್ನುತ್ತಾಳೆ ನೀಲಾಂಬಿಕೆ. ಇದು ಅನುಭಾವದ ಸ್ಥಿತಿಯಲ್ಲಿ ಗಂಡ–ಮಡದಿ ಎಂಬ ಸಂಬಂಧವೇ ಅಳಿದುಹೋಗುವುದನ್ನು ಸೂಚಿಸುವ ಮಾತಾದರೂ, ‘ಶಬ್ದದೊಳಗಣ ನಿಃಶಬ್ದದಂತೆ’ ಎಂಬ ಅಲ್ಲಮನ ನುಡಿಗಟ್ಟನ್ನು ಇದು ಮತ್ತೊಮ್ಮೆ ನೆನಪಿಸುತ್ತದಾದರೂ ಈ ಮಾತಿನ ಲೌಕಿಕ ಧ್ವನಿಯೇ ಒಳಗೆ ಹೆದ್ದೆರೆಗಳನ್ನು ಎಬ್ಬಿಸುತ್ತದೆ. ದ್ರೌಪದಿ, ಲೌಕಿಕವಾದ ಅರ್ಥದಲ್ಲಿಯೇ ಹೇಳಬಹುದಾದ ಮಾತಿದು! ಮಡದಿ ಎಂಬ ಶಬ್ದ ನಿಃಶಬ್ದವಾದೊಡೆ ನಾನು ನಿಜ ಸುಖಿ – ಎನ್ನುವ ಮಾತು. ಈ ಮಾತನ್ನು ದ್ರೌಪದಿ ಹೇಳಬಹುದಾದದ್ದು ಧರ್ಮಜನೊಡನೆ! ಅದು ಧರ್ಮಜನ ಪಾಡು. ಅವನು ಪಡೆದುಬಂದದ್ದು! ವನಪರ್ವದಲ್ಲಿ ಒಂದೆಡೆ ಈ ಮಾತಿಗೆ ತುಸು ಹತ್ತಿರವಿರುವ ಮಾತೊಂದನ್ನು ದ್ರೌಪದಿ ಕೃಷ್ಣನೊಡನೆ ಹೇಳುವಳು: ‘ನೈವ ಮೇ ಪತಯಃ ಸಂತಿನ ಪುತ್ರಾಃ ನ ಚ ಬಾಂಧವಾಃ! ನ ಭ್ರಾತರೋ ನ ಚ ಪಿತಾ ನೈವ ತ್ವಂ ಮಧುಸೂದನ!’. ‘ನನಗೆ ಗಂಡಂದಿರಿಲ್ಲ. ಮಕ್ಕಳಿಲ್ಲ. ಬಂಧುಗಳಿಲ್ಲ. ಸೋದರರಿಲ್ಲ. ತಂದೆ–ತಾಯಿಗಳಿಲ್ಲ. ನನಗೆ ಓ ಕೃಷ್ಣ, ನೀನೂ ಇಲ್ಲ’ ಎನ್ನುವ ಹೃದಯವಿದ್ರಾವಕ ಮಾತಿದು. ಈ ಮಾತನ್ನು ಕೇಳಿ, ಅವಳ ಮಾತನ್ನು ಸಹಾನುಭೂತಿಯಿಂದ ಕೇಳಿದನೆಂಬ ಸಂತೋಷವನ್ನಾದರೂ ದ್ರೌಪದಿಗೆ ಉಂಟುಮಾಡಬಲ್ಲವನು ಕೃಷ್ಣನೊಬ್ಬನೇ!
ಸಂಜಯನೊಡನೆ ರಾಜಕಾರಣವನ್ನು ಮಾತನಾಡುವ ಸಂದರ್ಭದಲ್ಲಿ ಕೃಷ್ಣ ಹೇಳಿದ್ದ. ತಾನು ಕೌರವರನ್ನೂ ಪಾಂಡವರನ್ನೂ ಸಮಭಾವದಿಂದ ನೋಡಬಲ್ಲವನೆಂದಿದ್ದ. ಆದರೂ ಪಾಂಡವರ ಜೊತೆ ಇದ್ದೇನೆ – ಏಕೆಂದರೆ ‘ಕಮಲಮುಖಿ ಸುಲಿವಡೆದು ಲಕ್ಷ್ಮೀರಮಣ, ಲಕ್ಷ್ಮೀರಮಣ ಎಂದೊರಲಿದೊಡೆ ಸಂಜಯ ನೊಂದೆ ನಾನೆಂದ’. ಅದು ದ್ರೌಪದಿಯ ನೋವಿಗೆ ಕೃಷ್ಣ ಮಿಡಿದ ರೀತಿ. ದುಃಶಾಸನ ಸೀರೆಯನ್ನು ಸೆಳೆಯುತ್ತಿರುವಲ್ಲಿ, ಎಲ್ಲರೂ ಕೈ ಬಿಟ್ಟಹೊತ್ತಲ್ಲಿ ದ್ರೌಪದಿ ಕೃಷ್ಣನನ್ನು ಆರ್ತವಾಗಿ ಕರೆದದ್ದು ಕೂಡ – ‘ಕೃಷ್ಣ ದ್ವಾರಕಾವಾಸಿನ್ ಗೋಪೀಜನಪ್ರಿಯ’ ಎಂದೇ. ಗೋಪೀಜನಪ್ರಿಯ ಎಂಬ ಸಂಬೋಧನೆಯೇ ಮಾರ್ಮಿಕ! ಕೃಷ್ಣನನ್ನು ದ್ರೌಪದಿ ಬಲ್ಲಳು ಮತ್ತು ದ್ರೌಪದಿಯನ್ನು ಕೃಷ್ಣ ಬಲ್ಲ!
ಕೃಷ್ಣ, ದೇವರೆನ್ನುವ ನೆಲೆಯಲ್ಲಿ, ಅಕ್ಷಯವಸ್ತ್ರ ಪ್ರದಾನ ಮಾಡಿ ದ್ರೌಪದಿಯನ್ನು ಕಾಪಾಡಿದ ಕಥೆ ಪ್ರಸಿದ್ಧವಾದದ್ದು. ಭಾವುಕವಾದದ್ದು. ಕೃಷ್ಣ, ದುಃಶಾಸನನ ಕೈಮುರಿಯಲಿ ಎನ್ನಬಹುದಿತ್ತು. ಎನ್ನಲಿಲ್ಲ. ಸೆಳೆದಂತೆ ಸೀರೆ ಅಕ್ಷಯವಾಗಲಿ ಎಂದ! ಸೀರೆ ಸೆಳೆಯುವ ಗಂಡು ತಾನೇ ಬಸವಳಿದು ಸೋತು ಕುಸಿದು ಬೀಳಬೇಕು. ಅವನು ಸೆಳೆದ ಸೀರೆಯ ರಾಶಿ ಅವನನ್ನೇ ನಾಚಿಸಬೇಕು. ಸೀರೆ ಸೆಳೆದು ಸ್ತ್ರೀಯ ಆತ್ಮವನ್ನು ಪಡೆಯಲಾಗದು ಎಂದು ಗಂಡು ತಾನೇ ತಿಳಿಯಬೇಕು!
ಇಂಥ ಕೃಷ್ಣ, ಗೀತೆಯಲ್ಲಿ, ಎಲ್ಲರನ್ನೂ ಅಚ್ಚರಿಗೊಳಿಸುವ ಒಂದು ಮಾತನ್ನು ಹೇಳಿದ. ಅದೆಂದರೆ: ‘ದ್ಯೂತಂ ಛಲಯತಾಮಸ್ಮಿ’ ಎಂಬ ಮಾತು. ಕಪಟದಾಟಗಳಲ್ಲೆಲ್ಲ ತಾನು ದ್ಯೂತವಾಗಿದ್ದೇನೆ ಎಂಬ ಮಾತು. ಜೂಜಿನಲ್ಲಿ ತನ್ನನ್ನು ತಾನು ಸಮೀಕರಿಸಿಕೊಂಡ ಮಾತು. ಎಲ್ಲೆಡೆ ಇರುವ ದೇವರು ಜೂಜಿನಲ್ಲಿಯೂ ತಾನು ಇದ್ದೇನೆ ಎಂದು ಗುರುತಿಸಿಕೊಂಡು ಹೇಳಿದ ಮಾತು! ಭಗವದ್ಗೀತೆಯು ಮಹಾಭಾರತದ ನಡುವೆ ಇರದಿರುತ್ತಿದ್ದರೆ ಕೃಷ್ಣ ಈ ಮಾತನ್ನು ಹೇಳುತ್ತಿದ್ದನೆ? ಎನ್ನುವುದು ಸಂದೇಹಾಸ್ಪದ. ಈ ಮಾತನ್ನು ದ್ರೌಪದಿ ಕೇಳಿಸಿಕೊಳ್ಳುತ್ತಿದ್ದರೆ ಅವಳ ಪ್ರತಿಕ್ರಿಯೆ ಏನಿರಬಹುದಿತ್ತು ಎಂದೂಹಿಸುವುದು ಸುಲಭವಲ್ಲ. ಆದರೆ ತಿಳಿದೋ ತಿಳಿಯದೆಯೋ ತಾನು ಬದುಕಿನಲ್ಲಿ ಕೃಷ್ಣನಿಗೆ ಪಣವಾಗಿ ಇರಿಸಲ್ಪಟ್ಟಿದ್ದೆ ಎಂಬ ಅರಿವಿನ ಸತ್ಯ ಮಾತ್ರ ಸಭೆಯ ಸತ್ಯಕ್ಕೆ ಜೋತುಬಿದ್ದವರಿಗೆ ಎಂದೆಂದೂ ದಕ್ಕದ ತುತ್ತು ಎನ್ನಲೇಬೇಕು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.