ADVERTISEMENT

‘ಉರಿಯ ನಾಲಗೆ’

ಲಕ್ಷ್ಮೀಶ ತೋಳ್ಪಾಡಿ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ಚಿತ್ರ: ಸಿದ್ರಪಾಲ
ಚಿತ್ರ: ಸಿದ್ರಪಾಲ   

‘ಮಹಾಭಾರತ’ವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳ–ಸುಕರವಾದುದೇನಲ್ಲ. ಮಹಾಭಾರತದ ಒಳಗಿನಿಂದಲೇ ಒಂದು ಚಿತ್ರವನ್ನು ಆಯ್ದು ಹೋಲಿಸುವುದಾದರೆ – ದ್ರೌಪದಿಯ ಬಿಚ್ಚಿದ – ಮುಡಿಯಂತೆಯೇ ಇದೆ ಮಹಾಭಾರತದ ಸ್ವರೂಪ! ಒಪ್ಪ–ಓರಣಕ್ಕಿಂತ, ಕೆದರಿರುವ ಕೇಶಪಾಶಪ್ರಂಚವೇ ನೆಮ್ಮದುರು ತೀರ ಪ್ರಕಟಗೊಳ್ಳುವುದು! ದೊಡ್ಡದೊಂದು ಬೀಸಿನಲ್ಲಿ ಬದುಕನ್ನು ನೋಡಬಯಸುವ ಗ್ರಂಥವಿದು.

ಆ ಬೀಸನ್ನು ಕಾಲವೆನ್ನಿ–ಇತಿಹಾಸವೆನ್ನಿ–ಯುಗ ಧರ್ಮವೆನ್ನಿ–ಆಧ್ಯಾತ್ಮಿಕವೆನ್ನಿ–ದೇವರ ಮಹಿಮೆ ಎನ್ನಿ (ಇಲ್ಲಿನೋಳ್ಪುದು ಪದುಮನಾಭನ ಮಹಿಮೆ – ಕುಮಾರವ್ಯಾಸ). ಈ ಹಾಸುಬೀಸಿನಲ್ಲಿ, ಇಲ್ಲಿನ ಬದುಕನ್ನು ನೋಡುವ ಪ್ರಯತ್ನದಲ್ಲಿ, ನಮ್ಮದಿದು ಈ ಬದುಕು; ಇದಕ್ಕೊಂದು ಸ್ವಾಯತ್ತತೆ ಇದೆ ಎಂಬ ಭಾವನೆಯೇ ಒಂದು ಭ್ರಮೆ ಎಂದೇ ಅನ್ನಿಸುವುದು.

ದೊಡ್ಡ ಪ್ರವಾಹವೊಂದರಲ್ಲಿ ಕೊಚ್ಚಿ ಒಯ್ಯಲ್ಪಡುತ್ತಿರುವ ಮರದ ದಿಮ್ಮಿಗಳಂತೆ – ಇಲ್ಲಿ ವ್ಯಕ್ತಿಗಳ ಜೀವನ ಎನ್ನುವರು – ವ್ಯಾಸ. ಈ ದಿಮ್ಮಿಗಳು ಕೆಲವೊಮ್ಮೆ ಪರಸ್ಪರ ಕೂಡಿಕೊಳ್ಳುತ್ತವೆ; ಕೆಲವೊಮ್ಮೆ ಬೇರ್ಪಡುತ್ತವೆ. ಹಾಗೆ ಕೂಡಿಕೊಳ್ಳುವುದಾಗಲೀ ಬೇರ್ಪಡುವುದಾಗಲೀ ಅವುಗಳ ಇಚ್ಛೆಯಿಂದಲ್ಲ, ಇದು ಅನಿವಾರ್ಯ. ಪ್ರವಾಹದ ಗತಿಯಲ್ಲಿ ಇದು ಸಿಲುಕಿವೆಯಲ್ಲವೆ? – ಎನ್ನುವರು.

ADVERTISEMENT

ಇದು ವ್ಯಾಸರಿಗೆ ಪ್ರಿಯವಾದ ದೃಷ್ಟಾಂತ. ಇದೊಂದು ಬರಿಯ ತಾತ್ತ್ವಿಕವಾದ ಗ್ರಹಿಕೆಯಲ್ಲ. ಗಾಢವಾದ ಜೀವನನುಭವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಾಣ್ಕೆಯಾಗಿ ನಮ್ಮನ್ನು ಆಳವಾಗಿ ಮುಟ್ಟುವುದು.

ಈ ಗ್ರಹಿಕೆಯನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ – ಇತಿಹಾಸಕ್ಕೆ ಎಲ್ಲರೂ ಬರಿಯ ‘ನಿಮಿತ್ತ’ಗಳೆಂದು ಹೇಳುವರು ವ್ಯಾಸ. ಇತಿಹಾಸವೆಂದರೆ ಏನು? ಒಂದು ಅಖಂಡ ಸಮುದಾಯ ಭಾವ. ಸಮುದಾಯ ಮನಸ್ಸು. ದೂರ ಕಾಲಾಂತರದಿಂದ ನಡೆದು ಬಂದ ಮಾನುಷ ಅನುಭವಗಳೆಲ್ಲದರ ಒಟ್ಟು ಮೊತ್ತ. ಮತ್ತು ಅವುಗಳೆಲ್ಲದರ ನೆನಪು. ಮನದಾಳದಲ್ಲಿ ಅಡಗಿರುವ ಅಗಾಧ ಸ್ಮೃತಿಕೋಶ!

ಇತಿಹಾಸವೆಂದರೆ ಎಲ್ಲವೂ ಎಲ್ಲರೂ ಸೇರಿಕೊಂಡ ಅನುಭವರಾಶಿ. ಇಂಥ ಇತಿಹಾಸಕ್ಕೆ – ವ್ಯಕ್ತಿಗತ ಜೀವನವೆಂಬುದು, ಜೀವನದ ವೈಯಕ್ತಿಕ ಅನುಭವಗಳು ಎನ್ನುವುದು – ತಾನು ಪ್ರಕಟವಾಗುವುದಕ್ಕೆ ಬರಿಯ ಒಂದು ‘ನಿಮಿತ್ತ’–‘ನೆಪ’ವಾಗಿ ಒದಗುವುದು. ಈ ಇತಿಹಾಸವನ್ನು ‘ವಿಶ್ವ–ರೂಪ’ ಎಂಬ ಪರಿಭಾಷೆಯಲ್ಲಿಯೂ ವ್ಯಾಸರು ಕರೆಯುವರು.

ಅರ್ಜುನನಿಗೆ ಗೀತೆಯನ್ನು ಹೇಳುತ್ತಿರುವ ಸಂದರ್ಭದಲ್ಲಿ ಕೃಷ್ಣನು ತನ್ನ ವಿಶ್ವ–ರೂಪವನ್ನು ಪ್ರಕಟಿಸುವನು. ಆ ವಿಶ್ವರೂಪದಲ್ಲಿ ಅರ್ಜುನನೂ ಇರುವನು. ಇರಲೇಬೇಕಷ್ಟೆ! ತನ್ನನ್ನು ಹೀಗೆ ವಿಶ್ವಾತ್ಮಕವಾಗಿ ಪ್ರಕಟಿಸುತ್ತ ಕೃಷ್ಣನು ತಾನು ‘ಕಾಲ’ ಎನ್ನುವನು. ‘ಕಾಲೋsಸ್ಮಿ’. ಕಾಲವು ಎಲ್ಲವನ್ನೂ ಸೃಷ್ಟಿಸಿ, ಎಲ್ಲವನ್ನೂ ಕಟ್ಟುತ್ತ – ಆದುದರಿಂದಲೇ ಎಲ್ಲವನ್ನೂ ನಾಶಗೊಳಿಸಿ ಎಲ್ಲವನ್ನೂ ಮುರಿಯುತ್ತ ಅಪ್ರತಿಹತವಾಗಿ ಮುನ್ನಡೆಯುವುದನ್ನು ತೋರಿಸುವನು.

ಅರ್ಜುನನಿಗೆ ಇದನ್ನು ಎಚ್ಚರದಿಂದ ನೋಡಲಾಗಲಿಲ್ಲ ಎನ್ನುವುದು ಬೇರೆ ಮಾತು. ಅರ್ಜುನನು ಉದ್ವಿಗ್ನಗೊಂಡನು. ಈ ಸರ್ವನಾಶವನ್ನು ನೋಡಲಾರೆನೆಂದು ಮೊರೆ ಇಟ್ಟನು. ಇದು ವೈಯಕ್ತಿಕತೆಯ ಪಾಡು. ವೈಯಕ್ತಿಕತೆಯು ಸ್ವ–ನಾಶವನ್ನು ನೋಡಲಾರದು. ಕಲ್ಪಿಸಲೂ ಆರದು. ತಾನು ಆಯ್ಕೆ ಮಾಡಿಕೊಂಡ ಅನುಭವಗಳಲ್ಲಿ ಮತ್ತೆ ಮತ್ತೆ ಲೋಲುಪವಾಗಿರುವುದೇ – ವೈಯಕ್ತಿಕತೆಯ ಪಾಡು! ಈ ಲೋಲುಪತೆಯಿಂದ ಅದು ಹೊರಬರಲಾರದು. ತಾನು ಕಾಣಬೇಕೆಂದಿರುವುದಕ್ಕಿಂತ ಬೇರೆಯಾದುದನ್ನು, ತನಗಿಂತ ‘ಅನ್ಯ’ವನ್ನು ಪ್ರಾಯಃ ಕಾಣಲಾರದು. ಕಂಡರೆ, ವೈಯಕ್ತಿಕತೆಯು ಭಯ–ಭೀತವಾಗುವುದು!

ಇದು ತಿಳಿದಿದ್ದೂ ಕೃಷ್ಣನು – ನೀನು ನನ್ನ ನಿಮಿತ್ತನಾಗು ಎಂದು ಅರ್ಜುನನಿಗೆ ಹೇಳಿದ್ದನು. ನಿಮಿತ್ತನಾಗುವುದು ಅರ್ಜುನನ ಸಾಧ್ಯತೆ ಎಂಬುದರಿಂದ. ನನ್ನ ನಿಮಿತ್ತನಾದರೆ ನನ್ನ ಅನುಭವಗಳೆಲ್ಲವೂ ನಿನ್ನದೂ ಆದಂತೆ ಎಂಬ ಭಾವವಿದೆ ಇಲ್ಲಿ. ಇತಿಹಾಸಕ್ಕೆ ತನ್ನ ಅಖಂಡ ಅನುಭವವನ್ನು ಪ್ರಕಟಿಸಲು ಒಂದು ನಿಮಿತ್ತ ಬೇಕಿದೆ ಮತ್ತು ಅದು ಅಂಥ ನಿಮಿತ್ತವೊಂದನ್ನು ಹುಡುಕುತ್ತಿದೆ ಎಂದರೂ ತಪ್ಪಾಗಲಾರದು.

ದ್ರೌಪದಿಯೂ ಇಂಥ ಒಂದು ‘ನಿಮಿತ್ತ’ಳಾಗಿದ್ದಾಳೆ. ಯಜ್ಞವೇದಿಯಲ್ಲಿ ಕೃಷ್ಣೆ ಹುಟ್ಟಿಬರುವಾಗಲೇ ಅಶರೀರವಾಣಿ ಆಗಿತ್ತು. ಅಶರೀರವಾಣಿ ಎಂದರೆ ಸಮುದಾಯದ ಒಳ ಮನಸ್ಸಿನ ಬೀಜವಾಕ್ಯಗಳೇ. ‘ಸರ್ವಯೋಷಿದ್ವರಾ ಕೃಷ್ಣಾನಿನೀಷುಃ ಕ್ಷತ್ರಿಯಾನ್‌ ಕ್ಷಯಮ್‌’ –ಹೆಣ್ಣುಮಕ್ಕಳಲ್ಲೆಲ್ಲ ಶ್ರೇಷ್ಠಳಾದ ಈ ಕೃಷ್ಣೆ, ಕ್ಷತ್ರಿಯರನ್ನು ನಾಶದೆಡೆಗೆ ಒಯ್ಯುವಳು – ನಾಶಕ್ಕೆ ಕಾರಣಳಾಗುವಳು – ಸಂಹಾರಕವಾದ ಯುಗಶಕ್ತಿಗೆ ದ್ರೌಪದಿ ನಿಮಿತ್ತಳಾಗುವಳು.

ದ್ರೌಪದಿಗೆ ತಪ್ಪಿ ನಡೆಯದೆ ಇರುತ್ತಿದ್ದರೆ ಕ್ಷತ್ರಿಯರು ನಾಶಯೋಗ್ಯರಾಗುತ್ತಿರಲಿಲ್ಲ ಎನ್ನುವ ಮಾತು ಬೇರೆ. ಕ್ಷತ್ರಿಯರು ತಪ್ಪಿ ನಡೆದರು. ತನಗೆ ನ್ಯಾಯ ಸಿಗಬೇಕೆನ್ನುವ ದ್ರೌಪದಿಯ ಮೊರೆಯಲ್ಲಿ ಆರ್ತತೆ ಮಾತ್ರವಲ್ಲ, ಪ್ರಶ್ನೆ ಇತ್ತು, ಜಿಜ್ಞಾಸೆ ಇತ್ತು; ವಿಪರ್ಯಾಸಗಳ ಅರಿವಿತ್ತು, ವ್ಯಕ್ತಿಗಳ ಇಬ್ಬಂದಿತನದ ಕುರಿತು ಧಿಕ್ಕಾರವಿತ್ತು, ‘ಸತ್ಯ’ವನ್ನು ಕುರಿತು ಹೊಸದಾಗಿ ವಿವೇಚನೆ ಮಾಡಿರೆನ್ನುವ ಆಹ್ವಾನವಿತ್ತು, ದೈವದ ಮುಂದೆ ತನ್ನನ್ನು ಒಪ್ಪಿಸಿಕೊಳ್ಳುವ ಭಕ್ತಿ ನಿರ್ಭರತೆ ಇತ್ತು, ಲೋಕದ ಆತ್ಮಸಾಕ್ಷಿಯನ್ನೇ ಕಲಕುವ ಭಾವದ ಕೋಲಾಹಲವಿತ್ತು.

ಈ ಎಲ್ಲವೂ ದ್ರೌಪದಿಯ, ತನಗೆ ನ್ಯಾಯ ಸಿಗಬೇಕೆನ್ನುವ ಮೊರೆಯಲ್ಲಿ ಇತ್ತು! ಅಂದರೆ ತನ್ನ ಒಳಗಿನ ಆಳವಾದ ಪ್ರಶ್ನೆಯನ್ನು ಕೇಳಿದರೆ, ಎಲ್ಲ ದಾಕ್ಷಿಣ್ಯಗಳನ್ನೂ ಮೀರಿ ಕೇಳಿದರೆ, ಕೇಳಿದಾಗ ಮಾತ್ರ ವೈಯಕ್ತಿಕತೆಯು ಸಾರ್ಥಕವಾಗುವುದು! ಸಾರ್ಥಕವಾಗುವಾಗ ಅದು ತನ್ನ ತಾನೇ ಇತಿಹಾಸದ ‘ನಿಮಿತ್ತ’ವಾಗುವುದು! ಅಂದರೆ ಈ ಕಾರಣದಿಂದ ಕಾಲದ ಗತಿಯೇ ಬದಲಾಗುವುದು.

ತನ್ನನ್ನು ತಾನೇ ಪಣವಿಟ್ಟಂತೆ ಆಡಿದ ಮಾತಿಗೆ ಕ್ರಾಂತಿಯ ಗುಣ! ತಾನು ಪ್ರಕಟಗೊಳ್ಳಲು ಯೋಗ್ಯವಾದ ‘ನಿಮಿತ್ತ’ವನ್ನು ಹುಡುಕುವಂತಿರುವ ಯುಗಶಕ್ತಿಯು ದ್ರೌಪದಿಯಲ್ಲಿ – ಉಳಿದ ಯಾರಲ್ಲೂ ಅಲ್ಲ – ತನ್ನ ಆಯ್ಕೆಗೆ ತಾನೇ ತೃಪ್ತವಾದಂತೆನಿಸುತ್ತದೆ. ತನಗೆ ನ್ಯಾಯ ಬೇಕೆನ್ನುವ ಮೊರೆ ಒಂದೆಡೆ, ಈ ಕೃಷ್ಣೆಯು ಕ್ಷತ್ರಿಯರ ನಾಶಕ್ಕೆ ನಿಮಿತ್ತಳಾಗುವಳೆನ್ನುವ ಸೂಚನೆ ಇನ್ನೊಂದೆಡೆ – ಇವೆರಡೂ ತಿಕ್ಕಾಡುತ್ತ ಮಹಾಭಾರತದ ಉದ್ದಕ್ಕೆ ತಲ್ಲಣಗಳನ್ನು ಹರಿಬಿಡುತ್ತಿದೆ. ಯುಗಧರ್ಮವು ನೋವಿನ ಮೂಲಕವೇ ಪ್ರಕಟವಾಗುವುದೇನೋ!

ವ್ಯಾಸರು ಇನ್ನೊಂದು ಬಗೆಯ ಪ್ರಯೋಗವನ್ನೂ ಮಾಡುವರು. ಈ ಪ್ರಯೋಗದಲ್ಲಿ ಧರ್ಮಜನನ್ನು ಅವರು ‘ನಿಮಿತ್ತ’ವಾಗಿಸುವರು. ರಾಜಸೂಯಯಾಗ ಕಳೆದಿತ್ತು. ಅದರ ವೈಭವದ ಗುಂಗು ಇನ್ನೂ ಕಳೆದಿರಲಿಲ್ಲ. ರಾಜಸೂಯದ ಕೊನೆಯ ಆಹುತಿ ಎಂಬಂತೆ ಶಿಶುಪಾಲನ ವಧೆಯಾಗಿತ್ತು. ಅಗ್ರಪೂಜೆಯನ್ನು ಕೊನೆಗೂ ಒಪ್ಪಿಕೊಂಡಿದ್ದ ಕೃಷ್ಣನೇ ಶಿಶುಪಾಲನೆಂಬ ಈ ಕಂಟಕವನ್ನು ಕಳೆದಿದ್ದ. ಅಗ್ರಪೂಜೆಯಲ್ಲಿ ಕೃಷ್ಣ.

ದೊರೆಯಾಗಿ ಧರ್ಮಜ. ಸಿಂಹಾಸನದಲ್ಲಿ ಧರ್ಮಜನೊಡನೆ ದ್ರೌಪದಿ. ನೆಲ ಯಾವುದು – ನೀರು ಯಾವುದು ಎಂದು ಮೊದಲನೋಟಕ್ಕೆ ತಿಳಿಯಲಾರದಷ್ಟು ಕುಶಲತೆಯಿಂದ ನಿರ್ಮಾಣವಾಗಿದ್ದ ಅಪೂರ್ವವಾದ ಸಭಾಗೃಹ. ಪಾಂಡವರು ಅವರ ವೈಭವದ ದಿನಗಳಲ್ಲಿದ್ದರು. ಆದರೆ ಧರ್ಮಜನಿಗೆ ಆಳದಲ್ಲಿ ಒಂದು ಚಿಂತೆ ಕಾಡುತ್ತಿತ್ತು. ನಾರದ ಮುನಿಗಳು ಅವನೊಡನೆ ಹಿಂದೆ ಹೇಳಿದ್ದರು, ತುಂಬ ಉತ್ಪಾತಗಳಾಗಲಿವೆ ಎಂದು.

ಈ ಉತ್ಪಾತಗಳನ್ನೆಲ್ಲ ಅವನು ಕಂಡಿದ್ದ; ಉಂಡಿದ್ದ ಕೂಡ. ಈಗ ಈ ಶಿಶುಪಾಲನ ವಧೆಯಿಂದಾಗಿ, ಅದೂ ಸಾಕ್ಷಾತ್‌ ಕೃಷ್ಣನೇ ಇದನ್ನು ಮಾಡಿದ್ದನಾಗಿ, ಉತ್ಪಾತಗಳ ಸರಣಿ ಮುಕ್ತಾಯವಾಯಿತೆಂದು ಭಾವಿಸಲೆ? ವ್ಯಾಸರಲ್ಲಿ ಧರ್ಮಜ ಹೀಗೆ ಕೇಳಿದಾಗ ವ್ಯಾಸರು ಭವಿಷ್ಯದ ದಿಗಿಲನ್ನು ಬಣ್ಣಿಸಿದರು – ಇಲ್ಲ, ಮುಗಿದಿಲ್ಲ, ಮುಂದಿನ ಹದಿಮೂರು ವರ್ಷಗಳ ಕಾಲ, ಕೆಡುಕಿನ ಕಾಲ.

ಕ್ಷತ್ರಿಯರ ವಿನಾಶವೇ ದೊಡ್ಡದಾಗಿ ಸಂಭವಿಸಬಹುದು – ಈ ಕಾಲದಲ್ಲಿ. ಇನ್ನಷ್ಟು ಚಿಂತಿಸಬೇಕಾದ ವಿಷಯವೆಂದರೆ – ನಿನ್ನನ್ನೇ (=ಧರ್ಮಜನನ್ನೇ) ‘ನಿಮಿತ್ತ’ವಾಗಿಸಿ ಈ ದೊಡ್ಡ ಮಟ್ಟದ ಕ್ಷತ್ರವಿನಾಶ ನಡೆದುಬಿಡುತ್ತದೆ. ‘ತ್ವಾಮೇಕಂ ಕಾರಣಂ ಕೃತ್ತ್ವಾ– ಕಾಲೇನ ಭರತರ್ಷಭ, ಸಮೇತಂ ಪಾರ್ಥಿವಂ ಕ್ಷತ್ರಂ ಕ್ಷಯಂ ಯಾಸ್ಯತಿ ಭಾರತ.’ ನಿನ್ನನ್ನೇ ಕಾರಣವಾಗಿಸಿ ಲೋಕದ ದೊರೆಗಳೆಂಬವರು ಕ್ಷತ್ರಿಯ ಸಮೂಹದೊಂದಿಗೆ ನಾಶಹೊಂದುವರು!

ಸ್ವಯಂ ವ್ಯಾಸರ ಮಾತುಗಳನ್ನು ಕೇಳಿದ ಧರ್ಮಜನಿಗೆ ವಿಕಟ ಸಂಕಟವಾಗಿಬಿಟ್ಟಿತು. ಆ ಕ್ಷಣದಿಂದ ಅವನು ಆಳದಲ್ಲಿ ದುಃಖಿತನಾದ. ಇದೇನು ವಿಧಿವಿಲಾಸ! ಎಲ್ಲರಿಗೂ ಒಳಿತನ್ನೇ ಹಾರಯಿಸುವ ತನ್ನನ್ನೇ ನಿಮಿತ್ತವಾಗಿಸಿ ಕ್ಷತ್ರಿಯಕುಲವೆಲ್ಲ ನಾಶವಾಗಿಬಿಡುವುದೆ? ಕಾಲದ, ಇತಿಹಾಸದ ಈ ನಡೆಗೆ ಯಾವ ತರ್ಕಗಳೂ ಇಲ್ಲವೆ? ಈ ಮಾತಿಗೆ ಹೇಗೆ ಸ್ಪಂದಿಸಬೇಕೆಂದೇ ತಿಳಿಯದಲ್ಲ! ಏನಿದ್ದರೂ ಇಂಥದೊಂದು ಸಮೂಹನಾಶ ನಡೆಯಬಾರದು. ನಡೆಯಲೇಬಾರದು.

ತನ್ನ ನಿಮಿತ್ತವಾಗಿಯಂತೂ ನಡೆಯಲೇಕೂಡದು. ವ್ಯಾಸವಚನವನ್ನು ಸುಳ್ಳಾಗಿಸುವುದು ಹೇಗೆ? ಒಂದೇ ಒಂದು ಉಪಾಯವಿದೆ. ಅದೆಂದರೆ ತಾನೇ ಸತ್ತುಬಿಡುವುದು! ಯಮಧರ್ಮನ ಮಗನಿಗೆ ಈ ಹಂತದಲ್ಲಿ ಮೊದಲ ಬಾರಿಗೆ ಆತ್ಮಹತ್ಯೆಯ ಯೋಚನೆ ಮನದಲ್ಲಿ ತೊಡಗಿತು ಎನ್ನುತ್ತದೆ ಮಹಾಭಾರತ! ಆದರೆ ಈ ಯೋಚನೆಯನ್ನು ಭೀಮಾರ್ಜುನರೆಲ್ಲ ತುಂಬ ಪ್ರಯತ್ನಿಸಿ ತಡೆದರೆಂದು, ಧರ್ಮಜ ತನಗೆ ತಾನೇ ಅತೀವ ಎಚ್ಚರಿಕೆಯಿಂದ ಕೆಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡನಂತೆ – ಅದೂ ಹದಿಮೂರು ವರ್ಷಗಳ ಕಾಲ ತಾನು ಬದುಕಿರಬೇಕೆನ್ನುವುದಕ್ಕೆ ಕಾರಣಗಳೇ ಇಲ್ಲ ಎಂದು ಹೇಳಿಕೊಳ್ಳುತ್ತಲೇ.

ಆ ಕಟ್ಟುಪಾಡುಗಳೇನು ಎಂದರೆ – ಯಾರೊಡನೆಯೂ, ಸೋದರರು, ಬಂಧುಗಳು, ದಾಯಾದಿಗಳು, ಇತರರು ಯಾರೊಡನೆಯೂ – ಕಟು ಮಾತುಗಳಾಡಲಾರೆ ಎಂದುಕೊಂಡ. ಕಟು ಮಾತುಗಳೇಕೆ? ಯುದ್ಧಕ್ಕೆ ಕಟುಮಾತುಗಳು ಮಾತ್ರ ಕಾರಣವೆ? ಬೇರೆ ಅನೇಕ ಸೂಕ್ಷ್ಮ ಕಾರಣಗಳಿಲ್ಲವೆ? ಇವೆ. ಆದುದರಿಂದ, ಯುದ್ಧವಾಗಬಾರದು ಎಂಬ ಒಂದೇ ಕಾರಣಕ್ಕಾಗಿ, ಇತರರು ಅದರಲ್ಲೂ ದಾಯಾದಿಗಳು ಹೇಳಿದಂತೆಯೇ ಕೇಳುವೆನೆಂದುಕೊಂಡ.

‘ಸ್ಥಿತೋ ನಿದೇಶೇ ಜ್ಞಾತೀನಾಂ ಯೋಕ್ಷ್ಯೇತತ್ಸಮುದಾಹರನ್’. ಜ್ಞಾತಿಗಳು ಬಯಸಿದಂತೇ ಇದ್ದು ಬಿಡುವೆ. ಯಾರಲ್ಲೂ ಯಾವ ಭೇದವನ್ನೂ ಎಣಿಸದೆ ಬದುಕುವೆ. ಭೇದವೇ ಯುದ್ಧಮೂಲವಲ್ಲವೆ! ಯುದ್ಧ ಕಾರಣಗಳನ್ನೆಲ್ಲ ಪ್ರಜ್ಞಾಪೂರ್ವಕವಾಗಿ ದೂರ ಇಡುವೆ. ಧರ್ಮಜನು ಕ್ಷತ್ರನಾಶಕ್ಕೆ ಕಾರಣನಾದನೆಂಬ ನಿಂದೆಯನ್ನು – ಅಯ್ಯೋ ಸಹಿಸಲಾರೆನೆಂದುಕೊಂಡ!

ಅಯ್ಯೋ ಧರ್ಮಜ! ಯಾವ ಕಟ್ಟುಪಾಡುಗಳನ್ನೆಲ್ಲ ತನ್ನ ಮೇಲೆ ಹೇರಿಕೊಂಡು ಹಲ್ಲುಕಚ್ಚಿ ಅದರಂತೆ ನಡೆದುಕೊಂಡು ಯುದ್ಧವಾಗಬಾರದೆಂದುಕೊಂಡನೋ ಅದೇ ಕಾರಣಗಳಿಂದಲೇ ಭಯಾನಕವಾದ ಯುದ್ಧವಾಗಿಹೋಯಿತು! ದಾಯಾದಿಗಳ ಮಾತಿಗೆ ಎದುರಾಡಬಾರದೆಂದು ತನ್ನ ನಿಯಮವನ್ನು ತಾನೇ ಸರ್ವಾತ್ಮನಾ ಪಾಲಿಸಿದ. ಆದುದರಿಂದಲೇ ದ್ಯೂತದ ಕರೆ ಬಂದಾಗ ಒಲ್ಲೆನೆನ್ನಲಿಲ್ಲ.

ಮೊದಲ ದ್ಯೂತದಲ್ಲಿ ಸೋತು, ದ್ರೌಪದಿಗೆ ಸಂಬಂಧಿಸಿದ ಅವಮಾನಕಾರಿಯಾದ ಘಟನೆಯು ಸಂಭವಿಸಿ, ದೈವಕೃಪೆಯಿಂದಲೆಂಬಂತೆ ಅದರಿಂದ ಪಾರಾಗಿ ಬಂದಮೇಲೆಯೂ ಎರಡನೆಯ ಸಲದ ದೂತಕ್ಕೆ ಕೂಡ ಒಲ್ಲೆನೆನ್ನಲಿಲ್ಲ – ಧರ್ಮಜ! ಎಲ್ಲರೂ ಬೇಡವೆಂದು ತಡೆದರೂ ತಾನು ಬೇಡವೆನ್ನಲಿಲ್ಲ! ಆದರೆ ಈ ಎಲ್ಲದರಿಂದಾಗಿಯೇ ಯುದ್ಧವು ನಿಶ್ಚಿತವಾಗಿಹೋಯಿತು! ಇತಿಹಾಸದ ಗತಿ ವಿಲಕ್ಷಣವಾಗಿರುವಂತಿದೆ. ಅದಕ್ಕೆ ನಿಮಿತ್ತವಾಗುವುದೆಷ್ಟು ಕಷ್ಟ! ನಿಮಿತ್ತವಾಗದೆ ಇರುವುದೂ ಅಷ್ಟೇ ಕಷ್ಟ! ಸರ್ವನಾಶಕ್ಕೆ ಕಾರಣನಾದನೆಂಬ ನಿಂದೆ ತನಗೆ ಬಾರದೆ ಇರಲಿ ಎಂದು ಹಂಬಲಿಸಿದ್ದ ಧರ್ಮಜ. ಆದರೆ ಅಂಥದೊಂದು ನಿಂದೆ ಲೋಕಮುಖದಿಂದ ಧಾರಾಳವಾಗಿ ಹರಿದುಬಂತು ಅವನತ್ತ.

‘ಸ್ತ್ರೀಪರ್ವ’ದಲ್ಲಿ ಕೇಳಬೇಕು. ಯುದ್ಧವೆಲ್ಲ ಮುಗಿದ ಮೇಲೆ, ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡು ಎದೆಯೊಡೆದ ಸ್ತ್ರೀಯರು ಧರ್ಮಜನನ್ನು ಹೇಗೆಲ್ಲ ಹಳಿಯುತ್ತಿದ್ದರೆಂದರೆ – ಪಾಪ! ಧರ್ಮಜ, ತಲೆತಗ್ಗಿಸಿಕೊಂಡು ಕಂಬಿನಿದುಂಬಿ ಬೀದಿಗಳಲ್ಲಿ ನಡೆದುಬರುತ್ತಿದ್ದನಂತೆ. ಅವನು ಮಹಾ ಭಾರತದ ಚಿರದುಃಖಿ! ನಿಮಿತ್ತವಾಗುವುದನ್ನು ತಪ್ಪಿಸಲಾಗುವುದಿಲ್ಲ ಎಂದು ತೋರಿಸಲೆಂದೇ ವ್ಯಾಸರು, ಧರ್ಮಜನನ್ನು ಆಯ್ಕೆ ಮಾಡಿಕೊಂಡರು. ವಿಚಿತ್ರವೆಂದರೆ, ದುರ್ಯೋಧನನೊಡನೆ ಯಾರೂ ಇಂಥ ನಿಮಿತ್ತದ ಮಾತನ್ನಾಡುವುದಿಲ್ಲ.

ನಿಜ, ತುಂಬ ಉಪದೇಶಗಳನ್ನು ದುರ್ಯೋಧನನಿಗೆ ನೀಡಿದ್ದಾರೆ. ಭೀಷ್ಮ, ಧೃತರಾಷ್ಟ್ರ, ವಿದುರಾದಿಗಳೆಲ್ಲ ಭವಿಷ್ಯಸೂಚಕವಾದ ಮಾತುಗಳನ್ನು ಅವನೊಡನೆ ಆಡಿದ್ದಾರೆ. ಆದರೆ ವ್ಯಾಸರು ಧರ್ಮಜನಿಗೆ ಹೇಳಿದಂತೆ, ಕೃಷ್ಣನು ಅರ್ಜುನನಿಗೆ ಹೇಳಿದಂತೆ, ಅಥವಾ ದ್ರೌಪದಿ ಹುಟ್ಟಿಬಂದ ಹೊತ್ತಿನಲ್ಲಿ ಅಶರೀರವಾಣಿಯಾದಂತೆ ದುರ್ಯೋಧನನೊಡನೆ ‘ನಿಮಿತ್ತ’ದ ಮಾತು ಬಂದಿಲ್ಲ. ಇದು ವಿಚಾರಣೀಯ.

ಅವನೊಡನೆ ‘ನಿಮಿತ್ತ’ದ ಮಾತು ಆಡುವುದು ಸಾಧ್ಯವಿಲ್ಲ. ದುರ್ಯೋಧನನಿಗೆ ಯುದ್ಧವೇ ಆಗಬೇಕಿದೆ. ಯುದ್ಧವಿಲ್ಲದೆ ಅವನಿರಲಾರ. ನೀನು ಯುದ್ಧಕ್ಕೆ ನಿಮಿತ್ತನಾಗುವೆನೆಂದರೆ – ನಿಮಿತ್ತವೇಕೆ? ತಾನೇ ಪ್ರಧಾನ ಕಾರಣನೆನ್ನುವವನೀತ; ಎದೆತಟ್ಟಿ ಹಾಗೆಂದು ಹೇಳಬಲ್ಲವ! ಇದು ಅಹಂಕಾರದ ಮಾತು. ಇಲ್ಲಿ ‘ನಿಮಿತ್ತ’ದ ಮಾತಿಲ್ಲ. ‘ನಿಮಿತ್ತ’ವೆನ್ನುವ ಮಾತು ಅರಿವಿನ ಮಾತು. ಅಹಂಕಾರದಲ್ಲಿ ಅರಿವಿಲ್ಲ.

ಅಹಂಕಾರವು ಅರಿವಲ್ಲ. ವಿಶೇಷವೆಂದರೆ, ಮನುಷ್ಯರ ಅಹಂಕಾರವನ್ನು ದರ್ಪೋದ್ಧತ ನಡವಳಿಕೆಗಳನ್ನು ಬಳಸಿಕೊಂಡೇ, ‘ಕಾಲ’ವು ನಾಶದತ್ತ ಮಾನವಲೋಕವನ್ನು ಒಯ್ಯುತ್ತದಾದರೂ, ‘ಕಾಲ’ಕ್ಕೆ ತನ್ನನ್ನು ಅರಿಯಬಲ್ಲ ‘ನಿಮಿತ್ತ’ವೊಂದು ಬೇಕು! ಅಹಂಕಾರವು ಅರಿಯಲಾರದು! ‘ನಿಮಿತ್ತ’ವು ಅರಿಯಬಲ್ಲುದು. ಮತ್ತು ಆ ಅರಿವಿನಿಂದ ಆಳವಾಗಿ ಕೊರಗಬಲ್ಲುದು! ಇದೇನು ವಿಲಕ್ಷಣತೆ! ಧರ್ಮಜ; ಅರ್ಜುನ ಕಾಲದ ನಡೆಯನ್ನು ಅರಿಯಬಲ್ಲರು. ಅರಿತು ಕೊರಗುವರು! ದ್ರೌಪದಿ ತನಗೆ ನ್ಯಾಯಬೇಕೆನ್ನುವಳು.

ತನಗೆ ನಡೆದ ಅನ್ಯಾಯಕ್ಕಾಗಿ ಕೊರಗುವಳು. ಇಂಥ ಅನ್ಯಾಯವನ್ನು ಎಸಗಿದ ಲೋಕ ತಾನು ಬಾಳಿಬದುಕುವ ಹಕ್ಕನ್ನು ನೀಗಿಕೊಂಡಂತಲ್ಲವೆ ಎಂದು ಸೂಚಿಸುವಳು. ಇಂಥ ಸೂಚನೆಯ ಮೂಲಕ, ನಾಶದತ್ತ ನಡೆಯುವುದೇ ಈ ಯುಗದ ಧರ್ಮವಾಗಿರುವಂತಿದೆ ಎಂದು ಹೊಳೆಯಿಸುವಳು! ನಿಮಿತ್ತಗಳ ನಡುವೆಯೂ ವ್ಯತ್ಯಾಸಗಳಿರುವಂತಿದೆ. ಅರ್ಜುನ, ಧರ್ಮಜ ವೈಯಕ್ತಿಕತೆಯನ್ನು ಮೀರಲಾರದ ದುರ್ಬಲ ನಿಮಿತ್ತರು.

ದ್ರೌಪದಿಯಾದರೋ ತನ್ನ ತೀವ್ರ ವೈಯಕ್ತಿಕತೆಯ ಮೂಲಕವೇ ವೈಯಕ್ತಿಕತೆಯನ್ನು ಮೀರಬಲ್ಲವಳಾಗಿ ನಿಮಿತ್ತಪ್ರಬಲಳು! ಈಗ ದ್ಯೂತ ಪ್ರಸಂಗವನ್ನು ನೋಡಬಹುದು.

ರಾಜಸೂಯವನ್ನು ಅದ್ಭುತವಾಗಿ ನಡೆಯಿಸಿ ತಮ್ಮ ಏರುಗಾಲದಲ್ಲಿದ್ದರು ಪಾಂಡವರು. ಕೃಷ್ಣನಂಥವನು ಪಾಂಡವರ ಜೊತೆಗಾರನಿದ್ದ. ರಾಜಸೂಯದ ಅಗ್ರಪೂಜೆಗೆ ಕೃಷ್ಣನನ್ನೇ ಆಯ್ಕೆ ಮಾಡಿದ್ದರು. ಅದು ಪಿತಾಮಹ ಭೀಷ್ಮನ ಆಯ್ಕೆಯಾಗಿತ್ತು. ‘ಜ್ಞಾನ’ ಮತ್ತು ‘ಬಲ’ ಅಂದರೆ ‘ಬ್ರಾಹ್ಮ’ ಮತ್ತು ‘ಕ್ಷಾತ್ರ’ – ಇವೆರಡರಲ್ಲಿಯೂ ಕೃಷ್ಣನಿಗೆ ಸಾಟಿಯಾದವರಿಲ್ಲ ಎಂದು ತನ್ನ ಆಯ್ಕೆಯನ್ನು ಭೀಷ್ಮ ಸಮರ್ಥನೆ ಮಾಡಿದ್ದ. ಈ ಸಂದರ್ಭದಲ್ಲಿ ಆಕ್ಷೇಪಿಸಿದ್ದ ಶಿಶುಪಾಲನ ವಧೆಯಾಗಿತ್ತು. ಅದೂ ಕೃಷ್ಣನಿಂದಲೇ ನಡೆದಿತ್ತು.

ಶಿಶುಪಾಲ ಸಹಜವಾಗಿ ಕೃಷ್ಣನ ಗೆಳೆಯನಾಗಿದ್ದ. ರಾಜಸೂಯವು ನಡೆದ ಮಯಸಭೆಯ ಸಿರಿ–ಕೌಶಲ ಮೈಮರೆಸುವಂತಿತ್ತು. ಅಲ್ಲಿ ನೆಲ–ನೀರು ತಿಳಿಯದೆ ದುರ್ಯೋಧನ ಗೇಲಿಗೊಳಗಾಗಿದ್ದ. ಈ ಎಲ್ಲ ಹಿನ್ನೆಲೆಯಲ್ಲಿ ಪಾಂಡವರ ಏರಿಕೆಯನ್ನು ಹೇಗಾದರೂ ತಡೆಯದಿದ್ದರೆ ತಮಗೆ ಉಳಿಗಾಲವಿರದೆಂದು ದುರ್ಯೋಧನನಾದಿಗಳು ತಿಳಿದದ್ದು ಸಹಜವಾಗಿತ್ತು. ಹಾಗೆ ದ್ಯೂತಪ್ರಸಂಗ ಏರ್ಪಟ್ಟಿತು.

ಯುದ್ಧದಲ್ಲಿ ಸಾಧಿಸಲಾಗದೆ ಇರಬಹುದಾದುದನ್ನು ದ್ಯೂತದಲ್ಲಿ ಸಾಧಿಸಬಹುದೆಂದುಕೊಂಡರು. ಯುದ್ಧವು ಕುರುಕ್ಷೇತ್ರದಂಥ ಬಯಲಿನಲ್ಲಿ ನಡೆವ, ಭೂಮಿಯಲ್ಲಿ ರಕ್ತದ ಹೊಳೆ ಹರಿಸುವ ಕ್ಷಾತ್ರಕರ್ಮವಾಗಿದ್ದರೆ, ದ್ಯೂತವು ಸಭೆಯಲ್ಲೇ ಜರಗುವ, ಪಣಕ್ಕೆ ಬದ್ಧರಾಗಿ ನಡೆಯುವ, ಸರ್ವಸ್ವವನ್ನೂ ಗೆಲ್ಲಬಲ್ಲ–ಸೋಲಬಲ್ಲ ಆರ್ಥಿಕ ಚಟುವಟಿಕೆಯೂ ಆಗಿ ಯುದ್ಧದಂತೆಯೇ ಆಳುವವರ ಭವಿಷ್ಯವನ್ನು ನಿರ್ಧರಿಸಬಲ್ಲ ಊಹಾಪೋಹ ಪ್ರಚುರ ರೋಚಕ ಉಪಕ್ರಮವಾಗಿತ್ತು. ಕೌರವರ ಮಾವ ಶಕುನಿ ದ್ಯೂತದಲ್ಲಿ ಪಾರಂಗತನಿದ್ದ.

ಧರ್ಮಜನಿಗೆ ಜೂಜಿನ ಮೋಹವಿತ್ತು! ಜೂಜೆನ್ನುವುದು ಅಕ್ಷಕ್ರೀಡೆಯಾಗಿ ಅದೃಷ್ಟದೊಡನೆ ಆಡುವ ಆಟವಾಗಿತ್ತು, ಅನುಸಂಧಾನವಾಗಿತ್ತು. ಅದೃಷ್ಟವನ್ನು ಚಿಂತಿಸದ ಮನುಷ್ಯ ಜೀವವುಂಟೆ ಈ ಭೂಮಿಯಲ್ಲಿ? – ಹಾಗೆ ತೊಡಗಿತು ದ್ಯೂತಪ್ರಸಂಗ – ಹಸ್ತಿನೆಯ ಅರಮನೆಯಲ್ಲಿ, ದುರ್ಯೋಧನ ಮತ್ತು ಧರ್ಮಜನ ನಡುವೆ. ದುರ್ಯೋಧನನ ಪ್ರತಿನಿಧಿಯಾಗಿ ಶಕುನಿ ಆಡತೊಡಗಿದ್ದ.

ಇದು ಸರಿಯಲ್ಲ ಎಂದ ಧರ್ಮಜ. ಬೇಕಾದರೆ ನಿನ್ನ ಪ್ರತಿನಿಧಿಯನ್ನೂ ಇಡು ಎಂದ ದುರ್ಯೋಧನ. ಆಟದಲ್ಲಿ ಎರಡು ಬಗೆಯ ರುಚಿ. ನಾವೇ ಆಡೋದು ಒಂದು ಬಗೆ. ನಮ್ಮ ಪರವಾಗಿ ಆಡಿಸುವುದು ಇನ್ನೊಂದು ಬಗೆ. ಇದೇನೂ ಕಡಿಮೆ ಮಾದಕವಲ್ಲ. ಬೇಕಾದರೆ ತುಸು ಹೆಚ್ಚೇ –ಉದ್ವೇಗಕರ! ನೋಡುವವರ ಉದ್ವೇಗ ಆಡುವವರಿಗಿಂತಲೂ ಹೆಚ್ಚಲ್ಲವೆ! ಹಾಗೆ ತೊಡಗಿತು ದ್ವಾಪರದ ಉತ್ಕಟವಾದ ಜೂಜು!

ಮೊದಮೊದಲು ಜೂಜು ಒಂದು ವಿನೋದವಾಗಿತ್ತು. ಆದರೆ ಪಣ ಇಡದೆ ಜೂಜಿನಲ್ಲಿ ಯಾವ ರುಚಿಯೂ ಉಂಟಾಗಲಾರದು. ಬೇಟೆಯ ರುಚಿ ಕಗ್ಗಾಡಿನಲ್ಲಿ! ಮೃಗಶಾಲೆಯಲ್ಲಿ ಎಂಥ ಬೇಟೆ? ಹಾಗೆ, ಪಣಕ್ಕೆ ಬದ್ಧವಾದ ಜೂಜು – ಮೊದಲಾಯಿತು. ಸಮುದ್ರಮಥನ ಕಾಲದಲ್ಲಿ ಸಿಕ್ಕಿದ ರತ್ನಹಾರವಿದು – ಇದನ್ನು ಪಣವಿಡುತ್ತಿದ್ದೇನೆ ಎಂದ ಧರ್ಮಜ. ಅಮೂಲ್ಯ ವಸ್ತುಗಳನ್ನು ಪಣವಿಡುವುದೊಂದು ಹೆಮ್ಮೆ! ಅಲ್ಲದೆ, ಯಾವ ಕಾಲದ ಸಂಪತ್ತು ಎಷ್ಟೋ ಕೈಗಳನ್ನು ದಾಟಿ ಇನ್ನೆಲ್ಲಿಗೋ ಹೋಗಿ ಸೇರುವುದು.

ಜೂಜೆನ್ನುವುದು ಸಂಪತ್ತಿನ ವಿಲಕ್ಷಣ ನಡಿಗೆ! ಜೂಜುಕೋರರ ಮನೋಧರ್ಮವು ಕೂಡ ತುಂಬ ಸಂಕೀರ್ಣ. ಲೆಕ್ಕಾಚಾರಗಳನ್ನು ಅವಲಂಬಿಸಿಯೂ ಅದು ಎಲ್ಲ ಲೆಕ್ಕಾಚಾರಗಳನ್ನೂ ಮೀರಿರುತ್ತದೆ! ಜೂಜಿನ ಉದ್ವೇಗದ ಜೀವಂತಿಕೆಯ ಮುಂದೆ ಉಳಿದೆಲ್ಲವೂ ಅದಕ್ಕೆ ಸಪ್ಪೆ ಎನಿಸುತ್ತದೆ. ಲೋಕದ ಎಲ್ಲ ವಸ್ತುಗಳನ್ನೂ ಎಲ್ಲವನ್ನೂ ಜೂಜುಕೋರ ತನ್ನ ಪಣವನ್ನಾಗಿಯೇ ನೋಡುತ್ತಾನೆ.

ಕೊನೆಗೆ ತನ್ನನ್ನು ಕೂಡ! ಜೂಜಿನ ಉದ್ವೇಗ ಧರ್ಮಜನಂಥ ಧರ್ಮಜನಲ್ಲಿ ತನ್ನ ಉಚ್ಚಾಂಕವನ್ನು ಮುಟ್ಟಿತು! ಎಲ್ಲ ಹಿರಿಯರೂ ಅಲ್ಲಿದ್ದರು. ಎಲ್ಲರೂ ಗಮನಿಸುತ್ತಿದ್ದರು. ಜೂಜು ವಿಚಿತ್ರ ತಿರುವುಗಳನ್ನು ಪಡೆಯುತ್ತಿತ್ತು. ಧರ್ಮಜ ನಿರಂತರವಾಗಿ ಸೋಲುತ್ತಿದ್ದ. ವಿದುರ ಈ ಆಟವನ್ನು ನಿಲ್ಲಿಸಿ ಎಂದು ಮತ್ತೆ ಮತ್ತೆ ಹೇಳುತ್ತಿದ್ದ. ಯಾರು ಕೇಳಬೇಕು ಈ ಮಾತನ್ನು? ಸೋತವರು ಕೇಳಬೇಕು – ಸಾಮಾನ್ಯವಾಗಿ. ಆದರೆ ಸೋತವರು ಖಂಡಿತ ಕೇಳಲಾರರು.

ಏಕೆಂದರೆ – ಇನ್ನೊಂದನ್ನು ಪಣವಾಗಿಟ್ಟು ಅದುವರೆಗೆ ಸೋತುದನ್ನೆಲ್ಲ ಮರಳಿ ಗೆಲ್ಲಬಹುದೆನ್ನುವ ಅತ್ಯುತ್ಕಟವಾದ ಹಂಬಲವೊಂದು ಜೀವನ್ಮರಣ ಪ್ರಶ್ನೆಯಾಗಿರುತ್ತದೆ – ಜೂಜಿನಲ್ಲಿ ಸೋತವರಲ್ಲಿ. ಧರ್ಮಜ ತನ್ನದೆಲ್ಲವನ್ನೂ ಸೋತು – ಶಕುನಿಯ ಸಲಹೆಯಂತೆ – ತನ್ನ ತಮ್ಮಂದಿರನ್ನೆ ಪಣ ಇಡಲು ತೊಡಗಿದ.

ಮುಂದೆ ವನವಾಸದ ಸಂದರ್ಭದಲ್ಲಿ ನಡೆದ ಯಕ್ಷಪ್ರಶ್ನೆಯ ಪ್ರಸಂಗದಲ್ಲಿ ತನ್ನ ನಾಲ್ಕು ಮಂದಿ ತಮ್ಮಂದಿರಲ್ಲಿ ‘ನಕುಲ’ ಬದುಕಲಿ ಎಂದ ಸೋದರವತ್ಸಲನಾದ ಧರ್ಮಜ ಈಗ ಮೊದಲು ‘ನಕುಲ’ನನ್ನೇ ತನ್ನ ಪಣವಾಗಿಟ್ಟುಬಿಟ್ಟ. ಮಾದ್ರಿಯ ಪುಣ್ಯದಿಂದಲಾದರೂ ತಾನು ಗೆದ್ದೇನು ಎಂಬೊಂದು ಆಸೆ!

ಹೀಗೆ ನಡೆಯಿತು ದ್ಯೂತ! ತನ್ನೆಲ್ಲ ಸೋದರರನ್ನೂ ಕೊನೆಗೆ ತನ್ನನ್ನೇ ತಾನು ಪಣವಾಗಿಟ್ಟು ಸೋತ ಮೇಲೆ ಶಕುನಿ ಸೂಚಿಸಿದ. ‘ದ್ರೌಪದಿಯನ್ನು ಪಣವಾಗಿಡು; ಅವಳ ಪುಣ್ಯದ ಬಲದಿಂದ ಸೋತುದೆಲ್ಲವನ್ನೂ ಗೆದ್ದುಬಿಡಬಲ್ಲೆ.’ ಹಾಗೆ ಧರ್ಮಜ, ತಮ್ಮೆಲ್ಲರ ಪ್ರಿಯ ಭಾರ್ಯೆ ದ್ರೌಪದಿಯನ್ನು ಜೂನಿನಲ್ಲಿ ಪಣವಾಗಿಟ್ಟು ಸೋತು ಕಂಗೆಟ್ಟು ಕುಸಿದುಕುಳಿತ.

ಕಥೆ ತಿಳಿದಿರುವಂಥದೇ. ದ್ರೌಪದಿ, ತನ್ನ ದಾಸಿಯಾಗಿರುವುದನ್ನು ದುರ್ಯೋಧನನಿಗೆ ಎಲ್ಲರ ಮುಂದೆ ತೋರಿಸಬೇಕಿತ್ತು. ದ್ರೌಪದಿಯನ್ನು ಸಭೆಗೆ ಕರೆತರಬೇಕಿತ್ತು. ಈ ಕೆಲಸಕ್ಕೆ ಅವನು ವಿದುರನನ್ನೇ ಆಯ್ಕೆ ಮಾಡಿದ. ವಿದುರ ಇದನ್ನೊಪ್ಪಿಕೊಂಡಿದ್ದರೆ ಅವನ ಸಮ್ಮತಿ ಸಿಕ್ಕಿದಂತಾಗಿ, ದೊಡ್ಡ ಪ್ರಶ್ನೆಯೊಂದು ನಿವಾರಣೆಯಾಗುತ್ತಿತ್ತು. ಆದರೆ ವಿದುರ ನಿರಾಕರಿಸಿದ. ದ್ರೌಪದಿ ದಾಸಿಯಲ್ಲ ಎಂದ.

‘ನಹಿ ದಾಸೀತ್ವಮಾಪನ್ನಾ ಕೃಷ್ಣಾ ಭವಿತುಮರ್ಹಸಿ – ಅನೀಶೇನ ಹಿ ರಾಜ್ಞೆಷಾ ಪಣೇ ನ್ಯಸ್ತೇತಿಮೇಮತಿಃ’ ಎಂದು ಸ್ಪಷ್ಟವಾಗಿ ಹೇಳಿದ. ‘ದಾಸಿಯಾಗಲಾರದಳು ದ್ರೌಪದಿ. ತಾನೇ ದಾಸನಾದ ಮೇಲೆ ಧರ್ಮಜ ಅವಳನ್ನು ಪಣವಾಗಿಟ್ಟುದರಿಂದ. ಈ ಸಂಭವವನ್ನು ಒಪ್ಪಲಾಗದು’.

ವಿದುರ ಹೇಳಿದ್ದು ದ್ರೌಪದಿಗೆ ತಿಳಿದಿರಲಿಲ್ಲ ಎನ್ನುವುದು ಮಹತ್ತ್ವದ್ದು. ಸೇವಕನೊಬ್ಬ ಬಂದು, ನಡೆದುದೆಲ್ಲವನ್ನೂ ದ್ರೌಪದಿಗೆ ಹೇಳಿ ಸಭೆಗೆ ನಿನ್ನನ್ನು ಒಯ್ಯಲು ಬಂದಿರುವೆನೆಂದಾಗ – ಕೃಷ್ಣೆ ದಿಗ್‌ಭ್ರಾಂತಳಾದಳು. ನಡುಗಿದಳು. ಆಮೇಲೆ ಸಾವರಿಸಿಕೊಂಡು ಚಿಂತಿಸಿದಳು.  ಅಪೂರ್ವವಾದ ದಿಟ್ಟತನದಿಂದ ಈ ಪ್ರಶ್್ನೆಯನ್ನು ಕೇಳಿದಳು:

‘ಗಚ್ಛ ತ್ವಂ ಕಿತವಂ ಗತ್ವಾ ಸಭಾಯಾಂ ಪೃಚ್ಛ ಸೂತಜ
ಕಿಂನು ಪೂರ್ವಂ ಪರಾಜ್ವೆಷೀರಾತ್ಮಾನ ಮಥವಾನು ಮಾಮ್‌’

ಸಭೆಯ ಮೂಲಕ ತನ್ನ ಜೂಜುಕೋರ ಗಂಡನನ್ನು ಕೇಳುತ್ತಿದ್ದಾಳೆ ಕೃಷ್ಣೆ. ಆ ಮೂಲಕ ಸಭೆಯನ್ನೂ ಪ್ರಶ್ನಿಸುತ್ತಿದ್ದಾಳೆ. ದ್ರೌಪದಿ, ದೂತನೊಡನೆ ಹೀಗೆ ಹೇಳಿದಳು: ನೀನು ಸಭೆಗೆ ಮರಳು. ಅಲ್ಲಿ ಎಲ್ಲರ ಮುಂದೆ ಆ ಜೂಜುಕೋರನೊಡನೆ ನಾನು ಈ ಪ್ರಶ್ನೆಯನ್ನು ಕೇಳುತ್ತಿರುವೆನೆಂದು ಹೇಳು.

ಅವನು ಏನು ಉತ್ತರುಸುವನೋ ಅದನ್ನು ನನಗೆ ತಲಪಿಸು. ಪ್ರಶ್ನೆ ಏನೆಂದರೆ: ಜೂಜಿನಲ್ಲಿ ತನ್ನನ್ನು ತಾನು ಪಣವಾಗಿಟ್ಟು ತಾನು ಸೋತಮೇಲೆ ಅವನು ನನ್ನನ್ನು ಪಣವಾಗಿ ಇಟ್ಟನೆ? ಅಥವಾ ಅದಕ್ಕೂ ಮುನ್ನವೆ?...

ಮೊದಲಬಾರಿಗೆ ತನ್ನ ಹಕ್ಕನ್ನು ಮಡದಿಯಾದವಳು ಪ್ರಸ್ತಾವಿಸುತ್ತಿದ್ದಾಳೆ. ಪತಿಯಾದವನನ್ನೂ ಒರೆಗೆ ಹಚ್ಚುತ್ತಿದ್ದಾಳೆ. ಗೆಲ್ಲುವ ಆಸೆಗೆ ತನ್ನನ್ನು ಬಳಸುವವನನ್ನು ತಾನೂ ಒರೆಗಲ್ಲಿಗೆ ಉಜ್ಜಿ ನೋಡಬೇಕಲ್ಲವೆ? ಇದು ‘ಗಂಡತನ’ ಎನ್ನುವುದನ್ನೆ ಪಣಕ್ಕಿಟ್ಟ ಮಾತಾಗಿದೆ. ಈ ಪ್ರಶ್ನೆಯ ಅನುರಣಗಳನ್ನು ಮುಂದೆ ಕೇಳಿಸಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.