ADVERTISEMENT

97 ಲಕ್ಷ ಜನರಿಂದ ಮೈಸೂರು ದಸರಾ ನೇರ ಪ್ರಸಾರ ವೀಕ್ಷಣೆ!

ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಲೈವ್‌ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ

ಎಂ.ಮಹೇಶ
Published 19 ಅಕ್ಟೋಬರ್ 2024, 7:18 IST
Last Updated 19 ಅಕ್ಟೋಬರ್ 2024, 7:18 IST
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂಸವಾರಿಯ ನೋಟ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂಸವಾರಿಯ ನೋಟ   

ಮೈಸೂರು: ನಗರದಲ್ಲಿ ಅ.3ರಿಂದ 12ರವರೆಗೆ ಆಯೋಜಿಸಿದ್ದ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳ ‘ನೇರಪ್ರಸಾರ’ವು ದಾಖಲೆಯ 97 ಲಕ್ಷ ಒಟ್ಟು ವೀಕ್ಷಣೆಯನ್ನು ಕಂಡಿದೆ. ನಿತ್ಯವೂ ಸರಾಸರಿ ಬರೋಬ್ಬರಿ 60 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಇದೇ ಮೊದಲ ಬಾರಿಗೆ ಉತ್ತನಹಳ್ಳಿ ಸಮೀಪದ ಖಾಲಿ ಜಾಗದಲ್ಲಿ ಆಯೋಜಿಸಿದ್ದ ಯುವ ದಸರಾದಲ್ಲಿ ಖ್ಯಾತ ಗಾಯಕರಾದ ಬಾದ್‌ಷಾ, ರವಿ ಬಸ್ರೂರ್, ಧ್ವನಿ ಭಾನುಶಾಲಿ ಹಾಗೂ ಇಳಯರಾಜಾ ಕಾರ್ಯಕ್ರಮಗಳನ್ನು 2.65 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಯುವ ದಸರಾ ಉದ್ಘಾಟನೆ ಕಾರ್ಯಕ್ರಮವೊಂದನ್ನೇ 2.30 ಲಕ್ಷ ಮಂದಿ ನೋಡಿದ್ದಾರೆ.

ಫ್ಯೂಷನ್‌ ಮೈಂಡ್ಸ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಡೆಡ್‌ನ ಸರಾಸರಿ 40 ಮಂದಿ ವೃತ್ತಪರರ ತಂಡವು ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ನೇರಪ್ರಸಾರ ಮಾಡಿತು. ಫ್ಯೂಷನ್‌ ಮೈಂಡ್ಸ್‌ ತಂತ್ರಜ್ಞಾನಗಳು, ಸಮಗ್ರ ವೆಬ್‌ಸ್ಟ್ರೀಮಿಂಗ್‌ ತಾಂತ್ರಿಕ ಸಹಯೋಗದಲ್ಲಿ ಕಾರ್ಯಕ್ರಮಗಳು ಸ್ಮಾರ್ಟ್‌ ಫೋನ್‌ ಬಳಸುವವರನ್ನು ದೊಡ್ಡ ಮಟ್ಟದಲ್ಲಿ ತಲುಪಿವೆ. ಜಿಲ್ಲಾಡಳಿತದಿಂದ ರೂಪಿಸಿದ್ದ ಅಧಿಕೃತ ಜಾಲತಾಣ https://www.mysoredasara.gov.in/ ಮೂಲಕ ನೇರಪ್ರಸಾರಗಳನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಈ ಜಾಲತಾಣವು ಶುಕ್ರವಾರದವರೆಗೆ 1,82 ಲಕ್ಷ ‘ಹಿಟ್ಸ್‌’ಗಳನ್ನು ಕಂಡಿದೆ.

ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮವೂ ಹಿಟ್: ಕಾರ್ಯಕ್ರಮಗಳನ್ನು ಯೂಟ್ಯೂಬ್, ಫೇಸ್‌ಬುಕ್‌, ಇನ್‌ಸ್ಟಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮದಲ್ಲಿ ನೇರಪ್ರಸಾರ ಮಾಡಲಾಯಿತು. ಕೆಲವು ವಾಹಿನಿಗಳು ಹಾಗೂ ದಿನಪತ್ರಿಕೆಗಳ ವೆಬ್‌ಸೈಟ್‌ನಲ್ಲೂ ನೇರಪ್ರಸಾರ ನಡೆದಿತ್ತು. ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಮಹೋತ್ಸವದ ಉದ್ಘಾಟನೆಯನ್ನು ನೇರಪ್ರಸಾರದಲ್ಲಿ 1.80 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಂಬಾವಿಲಾಸ ಅರಮನೆ ಆವರಣದಲ್ಲಿನ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿತ್ಯವೂ ಸರಾಸರಿ 1 ಲಕ್ಷದಿಂದ 1.75 ಲಕ್ಷ ಮಂದಿವರೆಗೆ ವೀಕ್ಷಿಸಿದ್ದಾರೆ.

‘ಮೈಸೂರು ವಾರ್ತೆ ಮೂಲಕ ಯೂಟ್ಯೂಬ್ ಸ್ಟ್ರೀಮಿಂಗ್‌ನಲ್ಲಿ ನೂರಾರು ಚಾನಲ್‌ಗಳಿಗೆ ಕ್ರಾಸ್-ಪೋಸ್ಟಿಂಗ್ ಮಾಡಲಾಗಿದೆ. ಕಳೆದ ಐದು ವರ್ಷಗಳ ಆರ್ಕೈವ್‌ಗಳನ್ನು ಒಳಗೊಂಡ ಎಲ್ಲಾ ಇವೆಂಟ್‌ಗಳ ಸಮಗ್ರ ವೆಬ್‌ಸೈಟ್ ಲೈವ್ ಸ್ಟ್ರೀಮಿಂಗ್‌ನ ದಸರಾ ತುಣುಕನ್ನು ಒಂದೇ ಕ್ಲಿಕ್‌ನಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಅತ್ಯಾಧುನಿಕ ಕ್ಲೌಡ್ ಸ್ಟುಡಿಯೊ ತಂತ್ರಜ್ಞಾನವನ್ನು ಬಳಸಿಕೊಂಡು ದಸರಾ ಕಾರ್ಯಕ್ರಮವನ್ನು 680ಕ್ಕೂ ಹೆಚ್ಚಿನ ವಾಹಿನಿಗಳು ನೇರಪ್ರಸಾರ ಮಾಡಿವೆ (ಹೋಸ್ಟ್ ಪ್ರಸಾರ)’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಡಿಜಿಟಲ್ ಕವರೇಜ್‌ಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಜಾಗತಿಕ ಪ್ರೇಕ್ಷಕರನ್ನು ತಲುಪಲು ಡಿಜಿಟಲ್‌ ವೇದಿಕೆಯ ಮೂಲಕ ಶ್ರಮಿಸಲಾಗಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಹಾಗೂ ಎನ್‌ಐಸಿಯ ಸುದರ್ಶನ್‌ ಅವರ ಸಹಯೋಗವು ಈ ಯಶಸ್ಸಿಗೆ ಕಾರಣವಾಗಿದೆ’ ಎನ್ನುತ್ತಾರೆ ಅವರು.

‘ಲೈವ್‌ (ನೇರ ಪ್ರಸಾರದ) ಲಿಂಕ್‌ಗಳನ್ನು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹಂಚಿಕೊಂಡಿದ್ದೆವು. ಅವುಗಳನ್ನು ಬಳಸಿಕೊಂಡು ಜನರು ಕಾರ್ಯಕ್ರಮವನ್ನು ಮೊಬೈಲ್ ಫೋನ್‌ಗಳ ಮೂಲಕವೇ ನೋಡಿದ್ದಾರೆ. ಯಾವುದೇ ಅಡಚಣೆ ಇಲ್ಲದೆ ಗುಣಮಟ್ಟದ ಪ್ರಸಾರವನ್ನು ಮಾಡಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಅವರು ಹೇಳಿದರು.

ಜಂಬೂವಾರಿ ನೋಡಿದ 1.80 ಲಕ್ಷ ಮಂದಿ

ಅ.12ರಂದು ನಡೆದ ಉತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯನ್ನು 1.80 ಲಕ್ಷ ಜನರು ಹಾಗೂ ಅಂದೇ ಸಂಜೆ ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಕಾರ್ಯಕ್ರಮವನ್ನು 2.40 ಲಕ್ಷ ಮಂದಿ ಡಿಜಿಟಲ್‌ ವೇದಿಕೆಗಳಲ್ಲಿ ನೇರಪ್ರಸಾರದಲ್ಲಿ ನೋಡಿದ್ದಾರೆ. ಈ ಮೂಲಕ ನಾಡಹಬ್ಬವು ಈ ಬಾರಿ ಡಿಜಿಟಲ್ ವೇದಿಕೆಯಲ್ಲಿ ಮಹತ್ವದ ಹೆಜ್ಜೆಗುರುತುಗಳನ್ನು ಮೂಡಿಸಿದೆ.

ಕರ್ನಾಟಕದ ಮುಖ್ಯಮಂತ್ರಿ (ಚೀಫ್‌ ಮಿನಿಸ್ಟರ್‌ ಆಫ್‌ ಕರ್ನಾಟಕ) ಡಿಐಪಿಆರ್ ಕರ್ನಾಟಕ ಮೈಸೂರು ದಸರಾ ಎಂಬ ಸಾಮಾಜಿಕ ಮಾಧ್ಯಮದ ಪೇಜ್‌ಗಳಲ್ಲೂ ನೇರಪ್ರಸಾರ ಮಾಡಲಾಯಿತು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸಂಸದ ಸುನೀಲ್ ಬೋಸ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ‘ಸೆಸ್ಕ್‌’ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ವೈಯಕ್ತಿಕ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ನಲ್ಲೂ ನೇರಪ್ರಸಾರ ಆಗಿದೆ.

ಜನರು ‌ಕುಳಿತಲ್ಲೇ ದಸರಾ ಕಾರ್ಯಕ್ರಮ ವೀಕ್ಷಣೆಗೆಂದು ಮಾಡಲಾಗಿದ್ದ ನೇರಪ್ರಸಾರದ ವ್ಯವಸ್ಥೆಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿರುವುದು ಸಂತಸ ಮೂಡಿಸಿದೆ.
ಟಿ.ಕೆ. ಹರೀಶ್‌, ಸಹಾಯಕ ನಿರ್ದೇಶಕ ವಾರ್ತಾ ಇಲಾಖೆ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.