ಚಾಮರಾಜನಗರ: ಜನಪದ ಕಲೆಗಳ ತವರು ಚಾಮರಾಜನಗರದಲ್ಲಿ ಮೂರು ದಿನಗಳ ಜಿಲ್ಲಾ ದಸರಾ ಮಹೋತ್ಸವಕ್ಕೆ ಸೋಮವಾರ ಅದ್ಧೂರಿ ಚಾಲನೆ ದೊರೆಯಿತು.
ಬೆಳಿಗ್ಗೆ 12.15ರ ಶುಭ ಮಹೂರ್ತದಲ್ಲಿ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.
ಬಳಿಕ ಚಾಮುಂಡೇಶ್ವರಿ, ಕೆಂಪನಂಜಾಂಬ ದೇವಿ ಅಮ್ಮನವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ನಂತರ ದೇವಸ್ಥಾನದ ಉದ್ಯಾನದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದ ಸಚಿವರು ಚಿತ್ರಸಂತೆ, ಕಲಾ ಪ್ರದರ್ಶನ ಉದ್ಘಾಟಿಸಿದರು. ಬಳಿಕ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಹಿಳಾ ದಸರಾಗೆ ಚಾಲನೆ ನೀಡಿದರು.
ದೇವಸ್ಥಾನ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ಜ್ಯೋತಿ ಬೆಳಗಿಸಿ ಡೋಲು ಬಾರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ನಾಲ್ಕು ಶತಮಾನಗಳಿಂದಲೂ ಮೈಸೂರಿನ ರಾಜಮನೆತ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ರಾಜಪ್ರಭುತ್ವ ಮರೆಯಾಗಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರವೇ ಸರ್ಕಾರವೇ ದಸರಾ ಉತ್ಸವವನ್ನು ನಾಡಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ.
‘ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳು ಪ್ರತ್ಯೇಕವಾಗಿದ್ದರೂ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಹಿನ್ನೆಲೆಯಲ್ಲಿ 2013ರಿಂದ ಚಾಮರಾಜನಗರ ಜಿಲ್ಲೆಯಲ್ಲೂ ಅದ್ಧೂರಿಯಾಗಿ ದಸರಾ ಆಚಸಿಕೊಂಡು ಬರಲಾಗುತ್ತಿದೆ. ಈ ಬಾರಿ ಜಿಲ್ಲಾ ದಸರಾಗೆ ₹ 2 ಕೋಟಿ ಅನುದಾನ ನೀಡಲಾಗಿದೆ. ಉಭಯ ಜಿಲ್ಲೆಗಳ ಜನರು ಕಷ್ಟ, ನೋವು, ನಲಿವುಗಳ ಮಧ್ಯೆಯೂ ದಸರಾ ಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿಕೊಂಡು ಬರುತ್ತಿರುವುದು ಸಂತಸ ತಂದಿದೆ’ ಎಂದರು.
ಜಿಲ್ಲಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 650 ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿರುವ ಜಿಲ್ಲಾಡಳಿತದ ಕ್ರಮ ಶ್ಲಾಘನೀಯ. ಯುವ ದಸರಾ, ಮಹಿಳಾ ದಸರಾ, ರೈತ ದಸರಾ ಸೇರಿದಂತೆ ಮೂರು ದಿನ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಬೇಕು ಎಂದು ಸಚಿವರು ತಿಳಿಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ‘ಜಿಲ್ಲೆಯ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥಸ್ವಾಮಿ, ಹಿಮವದ್ ಗೋಪಾಲಸ್ವಾಮಿ ದೇಗುಲದಂತೆ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ, ಮಂಟೇಸ್ವಾಮಿ, ಸಿದ್ದಪ್ಪಾಜಿ ನಡೆದಾಡಿದ ಪುಣ್ಯಭೂಮಿಯಲ್ಲಿ ಅದ್ಧೂರಿ ದಸರಾ ನಡೆಯುತ್ತಿರುವುದು ಖುಷಿ ತಂದಿದೆ. ಸ್ಥಳೀಯ ಜನಪದ ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ಸಿಗಲಿ, ಜನರು ಜಿಲ್ಲೆಯ ಜನಪದ ಸಿರಿಯನ್ನು ಸವಿಯಲು ಹೆಚ್ಚು ಅವಕಾಶ ದೊರೆಯಲಿ’ ಎಂದು ಆಶಿಸಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮೈಸೂರಿಗೆ ಹೋಗಿ ದಸರಾ ನೋಡಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ ಎಂಬ ಉದ್ದೇಶದಿಂದ 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ದಸರಾ ಆಚರಣೆಗೆ ಸಮ್ಮತಿ ಸೂಚಿಸಿ ಪ್ರತಿವರ್ಷ ಅನುದಾನ ನೀಡುತ್ತಾ ಬಂದಿದ್ದಾರೆ. ಚಾಮರಾಜನಗರ ಕಲೆಗಳ ತವರೂರಾಗಿದ್ದು ವಿಶಿಷ್ಟ ಸಂಸ್ಕೃಂತಿ, ಪರಂಪರೆ ಹೊಂದಿದೆ. ದಸರಾದಲ್ಲಿ ಜಿಲ್ಲೆಯ ಎಲ್ಲಾ ಭಾಗದ ಕಲಾವಿದರಿಗೂ ಕಾರ್ಯಕ್ರಮ ನೀಡುವ ಸದವಕಾಶ ನೀಡಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್, ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಹನೂರು ಶಾಸಕ ಎಂ.ಆರ್. ಮಂಜುನಾಥ್, ಶಾಸಕರಾದ ಡಾ.ಡಿ. ತಿಮ್ಮಯ್ಯ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷೆ ಮಮತಾ, ನಗರಸಭಾ ಸದಸ್ಯರಾದ ಅಬ್ರಾರ್ ಅಹಮದ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಉಪವಿಭಾಗಾಧಿಕಾರಿ ಮಹೇಶ್ ಇದ್ದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸ್ವಾಗತಿಸಿದರು.
ಕಳೆದ ವರ್ಷ ಬರಗಾಲ ಇದ್ದ ಕಾರಣ ಅದ್ಧೂರಿಯಾಗಿ ದಸರಾ ಮಾಡಲು ಸಾದ್ಯವಾಗಿರಲಿಲ್ಲ. ಈ ವರ್ಷ ಮಳೆ ಬೆಳೆ ಸಮೃದ್ಧವಾಗಿದ್ದು ಕೆರೆ ಕಟ್ಟೆಗಳು ತುಂಬಿರುವುದರಿಂದ ಸರ್ಕಾರ ವಿಜೃಂಭಣೆಯಿಂದ ದಸರಾ ಆಚರಿಸುತ್ತಿದೆ.ಕೆ.ವೆಂಕಟೇಶ್ ಜಿಲ್ಲಾ ಉಸ್ತುವಾರಿ ಸಚಿವ
ಕಣ್ಮನ ಸೆಳೆದ ಕಲಾತಂಡಗಳ ಪ್ರದರ್ಶನ ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಡಳಿತ ಭವನದಿಂದ ಚಾಮರಾಜೇಶ್ವರ ದೇವಾಲಯದವರೆಗೆ ಹಮ್ಮಿಕೊಂಡಿದ್ದ ಮರವಣಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ಡೊಳ್ಳು ಕುಣಿತ ಗೊರವರ ಕುಣಿತ ವೀರಗಾಸೆ ಕಂಸಾಳೆ ನೃತ್ಯ ನಾದಸ್ವರ ನಂದಿಕಂಬ ಬ್ಯಾಂಡ್‌ಸೆಟ್ ಕೀಲು ಕುದುರೆ ಗಾರುಡಿಗ ಗೊಂಬೆ ಮಾರಮ್ಮನ ಕುಣಿತ ಸುಗ್ಗಿ ಕುಣಿತ ಹುಲಿ ವೇಷಧಾರಿಗಳು ತಮಟೆ ವಾದನ ದೊಣ್ಣೆ ವರಸೆ ಸೇರಿದಂತೆ ಜನಪದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರದರ್ಶನಗಳನ್ನು ವೀಕ್ಷಿಸಿ ಸಾರ್ವಜನಿಕರು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.