ADVERTISEMENT

ಗುಂಡ್ಲುಪೇಟೆ: ಪುರಾಣಗಳ ಮಹತ್ವ ಸಾರುವ ಗೊಂಬೆಗಳು

80 ವರ್ಷಗಳಿಂದ ದಸರಾ ಗೊಂಬೆಗಳನ್ನು ಕೂರಿಸುತ್ತಿರುವ ಕುಟುಂಬ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 14:22 IST
Last Updated 12 ಅಕ್ಟೋಬರ್ 2018, 14:22 IST
ಸುಬ್ಬರಾವ್‌ ಅವರ ಮನೆಯಲ್ಲಿ ಇಡಲಾಗಿರುವ ಗೊಂಬೆಗಳು
ಸುಬ್ಬರಾವ್‌ ಅವರ ಮನೆಯಲ್ಲಿ ಇಡಲಾಗಿರುವ ಗೊಂಬೆಗಳು   

ಗುಂಡ್ಲುಪೇಟೆ: ದಸರಾ ಎಂದರೆ ಅದು ಗೊಂಬೆಗಳ ಹಬ್ಬವೂ ಹೌದು. ನವರಾತ್ರಿ ಸಮಯದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಆರಾಧಿಸುವ ಪದ್ಧತಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ಕೆಲವರು ತಮ್ಮ ಶಕ್ತ್ಯಾನುಸಾರ ಗೊಂಬೆಗಳನ್ನು ಕೂರಿಸುತ್ತಾರೆ. ಕೆಲವರು ಎರಡು ಮೂರು ತಲೆಮಾರುಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದವರೂ ಇದ್ದಾರೆ. ಪಟ್ಟಣದಲ್ಲಿರುವ ಕುಟುಂಬವೊಂದು 80 ವರ್ಷಗಳಿಂದ ಗೊಂಬೆ ಕೂರಿಸುವುದನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಾ ಬಂದಿದೆ.

ಚಾಮರಾಜನಗರ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಇರುವ ವಿ.ಆರ್‌.ಸುಬ್ಬರಾವ್‌ ಅವರು ಹಿರಿಯರು ಆರಂಭಿಸಿದ ಸಂಪ್ರದಾಯವನ್ನು ಮುಂದುವರಿಸುತ್ತಾ ಬಂದಿದ್ದಾರೆ. ನವರಾತ್ರಿ (ದಸರಾ), ರಾಮಾಯಣ ಮತ್ತು ಮಹಾಭಾರತದ ಮಹತ್ವವನ್ನು ವಿವರಿಸುವ ನೂರಾರು ಬೊಂಬೆಗಳನ್ನು ಇವರು ಕೂರಿಸುತ್ತಾರೆ. ಇದನ್ನು ಕಣ್ತುಂಬಿಕೊಳ್ಳಲು ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಇವರ ಮನೆಗೆ ಬರುತ್ತಾರೆ.

ADVERTISEMENT

ಭಾರಿ ಸಿದ್ಧತೆ:ದಸರಾ ಆರಂಭಕ್ಕೂ ಮುನ್ನವೇ ಸಿದ್ಧತೆಮಾಡಿಕೊಂಡು ನಾಡಹಬ್ಬಕ್ಕೆ ಚಾಲನೆ ನೀಡುವ ದಿನವೇ ಇವರು ಸಹ ಗೊಂಬೆಗಳನ್ನು ಕೂರಿಸುತ್ತಾರೆ. 9 ದಿನಗಳ ಕಾಲ ಗೊಂಬೆಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಸಂಜೆ ಸಮಯ ಗೊಂಬೆಗಳಿಗೆ ಪೂಜೆ ಮಾಡಿ ವೀಕ್ಷಣೆ ಮಾಡಲು ಬರುವ ಮಕ್ಕಳಿಗೆ ಬೊಂಬೆ ಮಿಠಾಯಿ ನೀಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ದಶಾವತಾರ, ರಾಮಾಯಣದಲ್ಲಿ ರಾವಣನ ದರ್ಬಾರ್, ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ, ನವದುರ್ಗೆಯರು, ಪಟ್ಟದರಾಣಿ, ಶ್ರೀನಿವಾಸ ಕಲ್ಯಾಣ, ಹಿಂದಿನ ಕಾಲದಲ್ಲಿ ಗೃಹ ಬಳಕೆಗೆ ಮತ್ತು ಕೃಷಿ ಮಾಡಲು ಬಳಸುತ್ತಿದ್ದ ವಸ್ತುಗಳು, ಆಂಜನೇಯ ಸಂಜೀವಿನಿ ತರಲು ಹೋದದ್ದು, ಹಂಪಿಯ ಕಲ್ಲಿನ ರಥ, ಹಿತ್ತಾಳೆಯಹಳೆಯ ಪದಾರ್ಥಗಳು, ಏಸುವಿನ ಜನನ, ಇಂದಿನ ಮಾದರಿ ಗ್ರಾಮ, ಗ್ರಾಮಾಂತರ ಪ್ರದೇಶಗಳಲ್ಲಿ ವ್ಯವಸಾಯವನ್ನು ಹೇಗೆ ಮಾಡಬೇಕು, ತಿರುಪತಿ ನವರಾತ್ರಿ ವೈಭವ, ಪಕ್ಷಿಧಾಮಗಳು, ವಿಜಯನಗರದ ಅರಸರ ಆಳ್ವಿಕೆ, ಮೈಸೂರಿನ ಪ್ರವಾಸಿ ತಾಣಗಳು, ಭಾರತೀಯ ಕ್ರಿಕೆಟ್ ತಂಡ, ಕಾರ್ಗಿಲ್ ವಿಜಯೋತ್ಸವ ಮುಂತಾದ ಕಲ್ಪನೆಗಳನ್ನು ಗೊಂಬೆಗಳ ಮೂಲಕ ಇಲ್ಲಿ ಪ್ರಸ್ತುತ ಪಡಿಸಲಾಗಿದೆ.

‘ನಮ್ಮ ತಾಯಿಯವರು ಇದ್ದಾಗಲೂ ಕೂರಿಸುತ್ತಿದ್ದೆವು. ಆದರೆ, ಆಗ ಗೊಂಬೆಗಳ ಸಂಖ್ಯೆ ಕಡಿಮೆ ಇತ್ತು. ನಂತರ ದಿನಗಳಲ್ಲಿ ಆಕರ್ಷಕ ಗೊಂಬೆಗಳನ್ನು ಸಂಗ್ರಹಿಸುತ್ತಾ ಬಂದೆವು. ಈಗಸಾವಿರಕ್ಕೂ ಹೆಚ್ಚಿನ ಗೊಂಬೆಗಳಿವೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಂಡಬೇಕು ಎಂಬ ಉದ್ದೇಶದಿಂದ ಈ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ’ ಎಂದು ಸುಬ್ಬರಾವ್ ಅವರ ಸಹೋದರ ವಿ.ಆರ್. ಬಾಲಸುಬ್ರಮಣ್ಯ ತಿಳಿಸಿದರು.

‘ಜೋಪಾನ ಮಾಡುವುದು ಸವಾಲಿನ ಕೆಲಸ’

‘ಗೊಂಬೆಗಳನ್ನು ಜೋಪಾನ ಮಾಡುವುದೇ ಕಷ್ಟದ ಕೆಲಸ. ಇದಕ್ಕೆ ಕುಟುಂಬದ ಮಹಿಳೆಯರ ಸಹಕಾರ ಹೆಚ್ಚಿದೆ. ದಸರಾ ಮುಗಿಯುತ್ತಿದ್ದಂತೆ ಅವುಗಳನ್ನು ಭಾಗಗಳನ್ನಾಗಿ ಮಾಡಿ ಲೇಬೆಲ್ ಹಾಕಿ ಬಾಕ್ಸ್‌ನಲ್ಲಿ ಇಡುತ್ತೇವೆ. ಪ್ರವಾಸ ಹೋದಾಗ ಇಷ್ಟವಾದುದ್ದುನ್ನು ಕೊಂಡುಕೊಳ್ಳುತ್ತೇವೆ. ಕೆಲವನ್ನು ಸಂಗ್ರಹಿಸಲಾಗಿದೆ. ಗೊಂಬೆಗಳನ್ನು ಸಂಗ್ರಹ ಮಾಡಬಹುದು, ಆದರೆ ಅವುಗಳನ್ನು ರಕ್ಷಣೆ ಮಾಡುವುದು ತುಂಬಾ ಕಷ್ಟದ ಕೆಲಸ. ಗೊಂಬೆ ಕೂರಿಸುವುದು ನಮ್ಮ ಸಂಸ್ಕೃತಿಯ ಒಂದು ಭಾಗ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಗೊಂಬೆಗಳನ್ನು ಕೂರಿಸುತ್ತೇವೆ’ ಎಂದು ಸುಬ್ಬರಾವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.