ಯಳಂದೂರು: ‘ಅಶ್ವಿನಿ... ಯುವರಾಣಿಯ ಕಿರು ಬೆರಳಿನಚ್ಟು ಗಾತ್ರದ ತೋಳಿಗೆ ರವಿಕೆ ಹೊಲಿದುಕೊಡು. ಗೇಣುದ್ದದ ಸೊಂಟದ ಅಳತೆಗೆ ಜರಿ ಲಂಗ ಸೇರಿಸು. ಪಟ್ಟದ ರಾಣಿಗೆ ನಾಲ್ಕಿಂಚು ಮೊಗ್ಗಿನ ಜಡೆ ಕಟ್ಟಿಕೊಡು. ಮಿನಿಗುವ ಕಣ್ಣಿಗೆ ಕಾಡಿಗೆ, ಮೃದುವಾದ ಕಾಲಿಗೆ ಸಣ್ಣ ಅಳತೆಯ ಚೈನು. ಕಿವಿಗೆ ರಿಂಗು, ಕೊರಳಿಗೆ ಕಟ್ಟಾಣಿ ಹಾಕಿಕೊಡುವೆಯಾ...?’ ಎಂದು ಮನೆಗೆ ಬಂದು ಕೇಳಿದಾಗ ಅಶ್ವಿನಿ ಲಘು ಬಗೆಯಿಂದ ಒಪ್ಪಿಕೊಳ್ಳುತ್ತಾರೆ.
ಪಟ್ಟಣದ ದೇವಾಂಗ ಬೀದಿಯಲ್ಲಿ ದಶಕದಿಂದಲೂ ದಸರಾ ಗೊಂಬೆಗಳಿಗೆ ಜೀವ ತುಂಬುತ್ತಿರುವ ಅಶ್ವಿನಿ ಒಂದು ಅರ್ಥದಲ್ಲಿ ಗೊಂಬೆಗಳ ಜನ್ಮದಾತೆ. ಈಕೆಯ ಕರದಲ್ಲಿ ಅರಳಿರುವ ಗೊಂಬೆಗಳು ನೂರಾರು.
ವೈ.ಎಸ್. ಅಶ್ವಿನಿಗೆ ಗೊಂಬೆಯ ಸಾಂಗತ್ಯ ಅಜ್ಜಿಯಿಂದ ಸಿಕ್ಕಿದ ಬಳುವಳಿ. ಪಿಯುಸಿ ಕಲಿಕೆಯ ಜೊತೆಯಾಗಿ ಒಲಿದು ಬಂದ ಹೊಲಿಗೆ ಹವ್ಯಾಸ ದಸರಾ ಗೊಂಬೆಗಳಿಗೆ ಬೇಕಾದ ವಸ್ತ್ರ ಸಿದ್ಧಗೊಳಿಸಲು ನೆರವಾಯಿತು. ಚಿತ್ರಕಲೆಯ ನಂಟಿನಿಂದ ಅಲಂಕಾರ ಮಾಡುವ ಕಲೆ ಸಿದ್ಧಿಸಿತು. ವರ್ಷ ಪೂರ್ತಿ ಗೊಂಬೆಗಳೊಡನೆ ಬದುಕು ಕಟ್ಟಿಕೊಂಡಿರುವ ಇವರು ಮೈಸೂರು ಮತ್ತು ಚನ್ನಪಟ್ಟಣ ಕಡೆಯ ಚಂದದ ಗೊಂಬೆಗಳಿಗೆ ಅಂದಚಂದದ ದಾವಣಿ, ಲಂಗ, ಕುಪ್ಪಸ ತೊಡಿಸುವ ಕಲೆಯಲ್ಲಿ ನಿಷ್ಣಾತರು.
ಮಿರುಗುವ ರೇಷ್ಮೆ, ಸಣ್ಣಂಚಿಗೆ ದಾರ, ನಿರಿಗೆಗೆ ಕೈ ಕುಸರಿಯ ಸ್ಪರ್ಶ, ಅಂಟು ಮತ್ತು ಕತ್ತರಿ ಇದ್ದರೆ ದೇವನೋ, ದೇವತೆಯೋ ಸೃಷ್ಟಿಯಾಗುತ್ತಾರೆ. ‘ಗ್ರಾಹಕರ ಬಜೆಟ್‌ಗೆ ತಕ್ಕಂತೆ ಅಲಂಕರಿಸಿ ಲಲನೆಯರನ್ನು ಅವರವರ ಮನೆ ಮುಟ್ಟಿಸುತ್ತೇನೆ’ ಎಂದು ಹೇಳುತ್ತಾರೆ ಅಶ್ವಿನಿ.
‘ನಾಡಹಬ್ಬಕ್ಕೆ ಬೇಕಿದ್ದ ರಾಧಕೃಷ್ಣ ಮತ್ತು ಜಟಾಧೀಶ ಹಾಗೂ ರೇಷ್ಮೆವಸ್ತ್ರದಲ್ಲಿ ಕಂಗೊಳಿಸುವ ಭೂದೇವಿಯರ ಅಗತ್ಯ ಇತ್ತು. ₹500 ಮುಂಗಡ ನೀಡಿದೆ. 3 ದಿನಗಳಲ್ಲಿ ರಂಗಿನ ಉಡುಗೆ–ತೊಡುಗೆ ತೊಟ್ಟ ಗೊಂಬೆ ದಂಪತಿ ನಮ್ಮ ಮನೆಗೆ ಬಂದರು’ ಎಂದು ಸಂಭ್ರಮಿಸುತ್ತಾರೆ ಸಂತೇಮರಹಳ್ಳಿ ಶಿಕ್ಷಕಿ ಸುಮನಾಕುಮಾರಿ.
ಹೊಸ ಅಲಂಕಾರಕ್ಕಾಗಿ ಕಾದು ಕುಳಿತ ಪಟ್ಟದ ರಾಣಿ, ತ್ರಿಷಿಕಾಕುಮಾರಿ ಮತ್ತು ಪ್ರಮೋದಾದೇವಿ, ಯುದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್,ಜರತಾರಿ ಜುಬ್ಬಾ ಮತ್ತು ಪೈಜಾಮ ತೊಟ್ಟಿರುವ ನರೇಂದ್ರ ಮೋದಿ ಮತ್ತು ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರ ಗೊಂಬೆಗಳುಇವರ ಹೊಸ ಸಂಗ್ರಹದಲ್ಲಿವೆ.
‘ಅಡುಗೆ ಭಟ್ಟರು, ಸೆಲ್ಫಿ ಮೋಹಕ್ಕೆ ಬಿದ್ದ ಯವ್ವನೆಯರು, ಧಡೂತಿ ಅಜ್ಜಿಯೋ, ಇಲ್ಲವೇ ಮೊಮ್ಮಕ್ಕಳ ಪಟಾಲಮ್ಮು ನವರಾತ್ರಿ ಊಟಕ್ಕಾಗಿ ಯಾರ್ಯಾರ ಮನೆಗೊ ಬರಲಿದ್ದಾರೆ’ ಎಂದು ನಗುತ್ತಲೇ ಹೇಳುವ ಸುಮನಾ ಅವರು ಅಶ್ವಿನಿಯ ಗೊಂಬೆ ಅಲಂಕಾರ ಕೌಶಲವನ್ನು ಬಣ್ಣಿಸುತ್ತಾರೆ.
‘ಬಗೆಬಗೆಯ ಪರಿಕಲ್ಪನೆಯ ಗೊಂಬೆ ಕೂರಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಸಾಂಪ್ರದಾಯಿಕ ಆಚರಣೆಗೆ ಸಮಕಾಲೀನ ಸ್ಪರ್ಶ ನೀಡಿ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಪರಂಪರೆ ಕಾಪಿಡಬೇಕು. ಇದನ್ನು ಮನಗಂಡು ದಸರಾ ಗೊಂಬೆಗಳಿಗೆ ಜೀವ ಕೊಡಬೇಕು ಎನ್ನುತ್ತಾರೆ’ ಅಶ್ವಿನಿ.
ನವರಾತ್ರಿ ವಿಶೇಷ
ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿಯಲ್ಲಿ ದುರ್ಗೆಯ ವಿವಿಧ ರೂಪಗಳನ್ನು 9 ದಿನಗಳಲ್ಲಿ ಪೂಜಿಸಲಾಗುತ್ತದೆ. ಇದು ನವಮಿಯ ದಿನ ಮುಗಿಯುತ್ತದೆ. ಕಾಳರಾತ್ರಿ, ಸರಸ್ವತಿ ಆವಾಹನೆ, ಆಯುಧಪೂಜೆ, ಗಜಾಶ್ವಾಧಿ ಪೂಜೆ, ಶಕ್ತಿ ದೇವತೆಯರ ವಿಶೇಷ ಪೂಜೆ ನಡೆಸಲಾಗುತ್ತದೆ. ವಿದ್ಯಾ ದೇವತೆಯನ್ನು ಪುಸ್ತಕಗಳ ರೂಪದಲ್ಲಿ ಅರ್ಚಿಸಲಾಗುತ್ತದೆ. ಅಷ್ಟಮಿಯಿಂದ 3 ದಿನ ತ್ರಿರಾತ್ರಿ. ಇದು ದುರ್ಗಾ ಪೂಜೆಯ ಸುದಿನ. ನವಮಿಯನ್ನು ಮಹಾ ನವಮಿ ಎನ್ನುತ್ತಾರೆ. ಈ ದಿನ ಆಯುಧ ಪೂಜೆಗೆ ಮೀಸಲು. ವಿಜಯದಶಮಿಯೂ ನವರಾತ್ರಿಯ ಮುಕ್ತಾಯದ ಪವಿತ್ರ ದಿನ. ಅಂದು ಶಮೀಪೂಜೆ ನೆರವೇರಿಸಿ, ಮೈಸೂರು ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. ಅಷ್ಟು ದಿನಗಳ ಕಾಲ ಬೊಂಬೆಗಳಿಗೆ ನೈವೇದ್ಯ ಮಾಡಿ ತಿಂಡಿ ಹಂಚಲಾಗುತ್ತದೆ ಎನ್ನುತ್ತಾರೆ ಅರ್ಚಕ ಗೋಪಾಲ.
ಅಶ್ವಿನಿ ಅವರ ಗೊಂಬೆಮನೆ ವೀಕ್ಷಿಸಲು ಮೊಬೈಲ್ ಸಂಖ್ಯೆ 9164355515 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.