ADVERTISEMENT

ದಸರಾ ಉಪ ಸಮಿತಿ: ಅಧಿಕಾರೇತರ ಸದಸ್ಯರ ‘ದಾಖಲೆ’ ನೇಮಕ!

ಕಾಂಗ್ರೆಸ್‌ ಮುಖಂಡರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 7:15 IST
Last Updated 5 ಅಕ್ಟೋಬರ್ 2024, 7:15 IST
<div class="paragraphs"><p>ಮೈಸೂರು ದಸರಾ</p></div>

ಮೈಸೂರು ದಸರಾ

   

ಮೈಸೂರು: ದಸರಾ ಆಯೋಜನೆಗಾಗಿ ರಚಿಸಲಾಗಿರುವ ಉಪ ಸಮಿತಿಗಳಿಗೆ ‘ಅಧಿಕಾರೇತರ’ರನ್ನು ನೇಮಿಸಲಾಗಿದೆ.

ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.

ADVERTISEMENT

ಈ ಸಮಿತಿಗಳಿಗೆ ಹಿಂದೆ ಕನಿಷ್ಠ 30ರಿಂದ ಗರಿಷ್ಠ 60 ಸದಸ್ಯರನ್ನು ನೇಮಿಸಲಾಗಿತ್ತು. ಹೋದ ವರ್ಷ ಯುವ ದಸರಾ ಉಪ ಸಮಿತಿಯಲ್ಲಿ ಅತಿ ಹೆಚ್ಚು ಅಂದರೆ 60 ಸದಸ್ಯರಿದ್ದರು. ಈ ಬಾರಿ ‘ಶತಕ’ ಬಾರಿಸುವ ಮೂಲಕ ಹೊಸ ದಾಖಲೆಯನ್ನು ಸರ್ಕಾರ ಮಾಡಿದೆ. ಇವರಲ್ಲಿ ಬಹುತೇಕರು ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೇ ಆಗಿದ್ದಾರೆ. ಕೆಲವು ಸಮಿತಿಗಳಿಗೆ ಐವರು ಉಪಾಧ್ಯಕ್ಷರನ್ನು ನೇಮಿಸಲಾಗಿದೆ.

ಅಧಿಕಾರೇತರ ಸದಸ್ಯರನ್ನು ನೇಮಿಸಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಚನೆ ಮೇರೆಗೆ, ಅವರು ನೀಡಿದ ಪಟ್ಟಿಯ ಪ್ರಕಾರ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪುಸ್ತಕ ಮೇಳ ಉಪ ಸಮಿತಿಗೆ ಅತಿ ಕಡಿಮೆ ಅಂದರೆ 8 ಸದಸ್ಯರಿದ್ದರೆ, ಯೋಗ ದಸರೆಗೆ 87 ಮಂದಿ ಅಧಿಕಾರೇತರರ ನೇಮಕ ಮಾಡಲಾಗಿದೆ.

ಹೋದ ವರ್ಷ ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಸ್ಥಾನ ಪಡೆದಿದ್ದ ಜವರಪ್ಪ (ಅಹಿಂದ ಜವರಪ್ಪ) ಅವರನ್ನು ಈ ಬಾರಿ ಸಾಂಸ್ಕೃತಿಕ ದಸರಾ ಉಪ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಚಿವ ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದವರಿಗೆ ಹೆಚ್ಚಿನ ಸದಸ್ಯ ಸ್ಥಾನವನ್ನು ನೀಡಲಾಗಿದೆ. ಇತರ ವಿಧಾನಸಭಾ ಕ್ಷೇತ್ರದವರಿಗೂ ಪ್ರಾತಿನಿಧ್ಯ ಕೊಡಲಾಗಿದೆ. ಈ ಸಮಿತಿಗಳಿಗೆ ಈಗಾಗಲೇ ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ‘ಅಧಿಕಾರೇತರ’ರ ನೇಮಕದ ಬಗ್ಗೆ ಗುರುವಾರ ಆದೇಶ ಹೊರಬಿದ್ದಿದೆ.

ಅ.6ರಿಂದ ಉತ್ತನಹಳ್ಳಿ ಬಳಿ ಆರಂಭಗೊಳ್ಳಲಿರುವ ‘ಯುವ ದಸರಾ’ ಉಪ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ಶುಕ್ರವಾರದವರೆಗೂ ನೇಮಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.