ADVERTISEMENT

ದಸರಾ: ಸೌಹಾರ್ದವಿದ್ದರೆ ಪ್ರತಿ ಮನೆಯೂ ಅರಮನೆಯೇ!

ವಿಜೃಂಭಣೆಯ ದಸರಾ ಉದ್ಘಾಟಿಸಿದ ಪ್ರೊ.ಹಂ.ಪ.ನಾಗರಾಜಯ್ಯ ನೆನಪುಗಳ ಮೆರವಣಿಗೆ

ಕೆ.ನರಸಿಂಹ ಮೂರ್ತಿ
Published 4 ಅಕ್ಟೋಬರ್ 2024, 5:20 IST
Last Updated 4 ಅಕ್ಟೋಬರ್ 2024, 5:20 IST
<div class="paragraphs"><p>ದಸರಾ ಉದ್ಘಾಟನೆ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು</p></div>

ದಸರಾ ಉದ್ಘಾಟನೆ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

   

ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ದಸರಾ ಉತ್ಸವದ ಉದ್ಘಾಟನೆ ವೇದಿಕೆಯಲ್ಲಿ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಜೊತೆಗೆ ದಸರಾ ನೆನಪುಗಳ ಮೆರವಣಿಗೆಯೂ ನಡೆಯಿತು.

ಉತ್ಸವ ಉದ್ಘಾಟಿಸಿದ ಪ್ರೊ.ಹಂ.ಪ.ನಾಗರಾಜಯ್ಯ, ಯುದ್ಧ, ಹೆಣ್ಣು ಭ್ರೂಣಹತ್ಯೆ, ನಿರುದ್ಯೋಗ ಸಮಸ್ಯೆ, ರಾಜಕೀಯ ಮೇಲಾಟಗಳ ಕುರಿತು ಗಂಭೀರ ಗಮನ ಸೆಳೆಯುವ ಜೊತೆಗೆ, ಬಾಲ್ಯದಲ್ಲಿ ಕಂಡ ದಸರಾ ನೆನಪುಗಳ ಸ್ವಾರಸ್ಯಕರ ಪ್ರಸಂಗಗಳನ್ನು ಹೇಳಿ ನಗೆಗಡಲಿನಲ್ಲಿ ತೇಲಿಸಿದರು. ಉತ್ಸವದ ಉದ್ಘಾಟನೆ ಕಾರ್ಯಕ್ರಮವು ಹೀಗೆ ಲಘು–ಘನ ಶೈಲಿಯಲ್ಲಿ ಮಿಂದೆದ್ದಿತು.

ADVERTISEMENT

‘ಅನೇಕ ಹಬ್ಬಗಳು ಒಂದೆರಡು ದಿನಗಳಿಗೆ ಸೀಮಿತವಾದರೆ ದಸರೆಯು ಪಾಡ್ಯದಂದು ಅಡಿಯಿಟ್ಟು ಬಿದಿಗೆ ತದಿಗೆಗಳನ್ನು ದಾಟಿ ದಶಮಿಯವರೆಗೆ ಹತ್ತು ದಿನಗಳು ನಡೆಯುವ ಪರ್ವ. ಮೈಸೂರು ಒಡೆಯರು ಶ್ರದ್ಧಾಭಕ್ತಿಗಳಿಂದ ವೈಭವದಿಂದ ಆಚರಿಸಿದರು. ಪ್ರಜಾಪ್ರಭುತ್ವ ಬಂದಮೇಲೆ ಸ್ವರೂಪದಲ್ಲಿ ಬದಲಾವಣೆಯಾಯಿತು. ಸತ್ವದಲ್ಲಿ ಅಲ್ಲ. ಚುನಾಯಿತ ಸರ್ಕಾರ ಹಬ್ಬವನ್ನು ಜನಮುಖಿಯಾಗಿಸಿತು’ ಎಂದು ಹಂಪನಾ ಅಭಿಪ್ರಾಯಪಟ್ಟರು.

ಉತ್ಸವದಲ್ಲಿ ಗೊಂಬೆ ಕೂರಿಸುವ ಪದ್ಧತಿ ಕುರಿತು ತಮ್ಮ ನೆನಪನ್ನು ವಿವರಿಸುವ ವೇಳೆ ಅವರು, ‘ದಸರಾ ಸಂದರ್ಭದಲ್ಲಿ ಕೂರಿಸುವ ಜೋಡಿ ಬೊಂಬೆಗಳು ಆದರ್ಶವನ್ನು ಬಿತ್ತುವ ರೂಪಕಗಳು, ಅರಮನೆ, ರಾಜರಾಣಿ, ದೇವತೆಗಳು ಇತ್ಯಾದಿ ಮಾತುಗಳು ಆಲಂಕಾರಿಕ ರೂಪಕಗಳು ಸಹನೆ ಸೌಹಾರ್ದದಿಂದ ಬಾಳಿದರೆ, ನೆಮ್ಮದಿ ಇದ್ದರೆ ಪ್ರತಿ ಮನೆಯೂ ಅರಮನೆಯೇ, ಎಲ್ಲರೂ ರಾಜ–ರಾಣಿಯರೇ’ ಎಂದು ಪ್ರತಿಪಾದಿಸಿದರು.

‘ಪ್ರತಿ ವರ್ಷ ನವರಾತ್ರಿಯಲ್ಲಿ ನನ್ನ ತಾಯಿ ಜಾಕಾಯಿ ಪೆಟಾರಿಯಿಂದ ತನ್ನ ತವರುಮನೆಯ ಬಳುವಳಿಯಾಗಿ ತಂದಿದ್ದ ಎರಡು ಬಚ್ಚಣಿಗೆ ಬೊಂಬೆ ಮತ್ತಿತರ ಪ್ರದರ್ಶನ ವಸ್ತುಗಳನ್ನು ತೆಗೆದುಕೊಡುತ್ತಿದ್ದರು. ನನ್ನ ತಮ್ಮ, ತಂಗಿಯರೊಂದಿಗೆ ನೂರಾರು ಬೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲಾಗಿ ಪೇರಿಸಿದ ಹಲಗೆಗಳ ಮೇಲೆ ಒಪ್ಪವಾಗಿ ಜೋಡಿಸುತ್ತಿದ್ದೆವು. ಮರದಲ್ಲಿ ಮಾಡಿದ ಆ ಎರಡು ಬಚ್ಚಣಿಗೆ ಬೊಂಬೆಗಳನ್ನು ದೂರ ದೂರ ಇಟ್ಟರೆ ನನ್ನ ತಾಯಿ ಕೂಡಲೇ, ಮಕ್ಕಳೇ, ಅವು ಎರಡಿದ್ದರೂ ಒಂದೇನೆ. ಅವು ಜೋಡಿ, ಶಾಶ್ವತ ದಂಪತಿಗಳು. ಅವನ್ನು ಅಗಲಿಸಬಾರದು. ಈ ಬೊಂಬೆಗಳಂತೆ ಅಗಲದೆ ಗಂಡ–ಹೆಂಡತಿಯಾಗಿ ಬಾಳಿ ಎಂದು ನನ್ನ ತಾಯಿ–ತಂದೆ ಹರಸಿ ಕೊಟ್ಟಿರುವರು. ಇವು ಬರೀ ಮರದ ಬೊಂಬೆಗಳಲ್ಲ, ಮನೆ ಬೆಳಗುವ ಜೋಡಿ. ನನ್ನಮ್ಮ ಹೇಳಿದ ಈ ಮಾತುಗಳನ್ನು ಈಗಲೂ ಮೆಲಕು ಹಾಕುತ್ತೇನೆ’ ಎಂದರು.

ಪೈಲ್ವಾನ್ ಆಗುವಾಸೆಯಿಂದ ತಲೆ ಬೋಳಿಸಿಕೊಂಡ ನೆನಪು: ‘ನಾನು ಮಂಡ್ಯದಲ್ಲಿ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ 1948ರಲ್ಲಿ ಮೈಸೂರು ಉಸ್ತಾದ್ ಟೈಗರ್ ರಾಮು ತುಂಬಾ ಜನಪ್ರಿಯರಾಗಿದ್ದರು. ಅದನ್ನು ಕಂಡು ಪೈಲ್ವಾನ್ ಆಗಬೇಕೆಂದು ಗರಡಿ ಮನೆಗೆ ಹೋಗುತ್ತಿದ್ದೆ. ತಲೆತುಂಬಾ ಗುಂಗರು ಕೂದಲಿತ್ತು. ಆದರೆ, ಉಸ್ತಾದ್ ಕಾಳಪ್ಪನವರು ಗರಡಿಯಲ್ಲಿ ಕ್ರಾಪು ಸರಿಯಿಲ್ಲವೆಂದರು. ನಾನು ತಲೆಬೋಳಿಸಿ ಮನೆಗೆ ಹೋದೆ. ನಮ್ಮ ಚಿಕ್ಕಪ್ಪ ಎಂಥಾ ತಪ್ಪು ಮಾಡಿದೆಯೋ ಬೇಕೂಫ, ತಂದೆ ಬದುಕಿರುವಾಗ ತಲೆಬೋಳಿಸಿ ಅಪಶಕುನವಾಯಿತು’ ಎಂದು ಚೆನ್ನಾಗಿ ಬೈದು ಗರಡಿ ಮನೆಗೆ ಕಾಲಿಡದಂತೆ ಮಾಡಿದರು. ಅದರಿಂದ ಈ ನಾಡಿಗೆ ಒಬ್ಬ ಶ್ರೇಷ್ಠ ಪೈಲ್ವಾನ ಸಿಗಬಹುದಾದ ಅವಕಾಶ ತಪ್ಪಿತಲ್ಲಾ ಎಂದು ಈಗಲೂ ವ್ಯಸನವಿದೆ’ ಎಂದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

ಉದ್ಘಾಟನೆ ಗೌರವ ಮಡದಿಗೆ ಅರ್ಪಣೆ: ಭಾಷಣದ ಕೊನೆಗೆ, ‘ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರು ವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ಪ್ರೊ.ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ’ ಎಂದು‌ ಅವರು ಗದ್ಗದಿತರಾದರು.

ಉಸ್ತುವಾರಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಡಾ.ಡಿ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣ ಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್ ಗೌಡ, ತನ್ವೀರ್ ಸೇಠ್, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಚಾಮುಂಡಿ‌ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾರಮ್ಮ, ಮುಡಾ ಅಧ್ಯಕ್ಷ‌ ಕೆ.ಮರಿಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪಾಲ್ಗೊಂಡಿದ್ದರು.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಮೈಸೂರಿನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆಯ ಎದುರಿನ ರಸ್ತೆಯಲ್ಲಿ ರಂಗೋಲಿ ಬಿಡಿಸಿದ್ದ ದೃಶ್ಯ ಮಂಜಿನ ನಡುವೆ ಕಂಡಿದ್ದು ಹೀಗೆ.../  ಪ್ರಜಾವಾಣಿ ಚಿತ್ರ: ಅನೂಪ್‌ ರಾಘ.ಟಿ.
ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಪುಷ್ಪ ಪ್ರದರ್ಶನದಲ್ಲಿ ಜೈ ಜವಾನ್‌–ಜೈಕಿಸಾನ್‌ ಪರಿಕಲ್ಪನೆಯ  ಕಲಾಕೃತಿ ಗಮನಸೆಳೆಯಿತು– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಕುಪ್ಪಣ್ಣ ಉದ್ಯಾನದಲ್ಲಿ ದಸರಾ ಅಂಗವಾಗಿ ಆಯೋಜಿಸಿರುವ ಪುಷ್ಪ ಪ್ರದರ್ಶನದಲ್ಲಿ ‘ಶಾಕ್ಯ ಸಂಘದಲ್ಲಿ ಪ್ರಜಾಪ್ರಭುತ್ವದ ಮೌಲ್ಯ’ವನ್ನು ಬಿಂಬಿಸುವ ನೋಟ...

‘ಮೈಸೂರು ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್‌ ತಯಾರಿಸಿ’ ‘

ಪ್ರವಾಸೋದ್ಯಮದ ಅಭಿವೃದ್ಧಿ ಸೇರಿದಂತೆ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ತಯಾರಿಸಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ದಸರಾ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಸಾಕಷ್ಟು ಕೆಲಸ ಮಾಡಿದ್ದಾರೆ. ಈಗ ನಗರದ ಒಳಚರಂಡಿ ರಸ್ತೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು’ ಎಂದರು.

ಸಮೃದ್ಧಿಯ ನಡುವೆ ಅದ್ದೂರಿ‌ ದಸರಾ: ಸಿಎಂ ‘ಕಳೆದ ವರ್ಷ ಬರಗಾಲವಿದ್ದುದರಿಂದ ಸರಳವಾಗಿ ದಸರಾ ಉತ್ಸವವನ್ನು ಆಚರಿಸಲಾಗಿತ್ತು. ಈ ವರ್ಷ ಸಾಕಷ್ಟು ಮಳೆಯಾಗಿದ್ದು ಎಲ್ಲ ನದಿ ಜಲಾಶಯಗಳು ತುಂಬಿವೆ. ಮಳೆ ಬೆಳೆಯಾದರೆ ಮಾತ್ರ ಜನ ಸಮೃದ್ಧಿ ಸುಖ-ಶಾಂತಿಯಿಂದ ಬಾಳಲು ಸಾಧ್ಯ’ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ‌ ಹೇಳಿದರು. ‘ರಾಜ್ಯದ ಎಲ್ಲಾ ರೈತರು ಸಂತೋಷದಲ್ಲಿದ್ದಾರೆ. ಬಹುತೇಕ ಬಿತ್ತನೆಯಾಗಿದೆ. ಇನ್ನೂ ಹೆಚ್ಚು ಮಳೆಯಾಗಲಿ ಬೆಳೆ ಉತ್ಪಾದನೆಯಾಗಲಿ ಎಂದು ಚಾಮುಂಡಿಯನ್ನು ಪ್ರಾರ್ಥಿಸಿದ್ದೇನೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ದೇವಿ ಚಾಮುಂಡೇಶ್ವರಿ ಕೊಟ್ಟ ಶಕ್ತಿಯೇ ಕಾರಣ. ಭಾಷಣಗಳಿಂದ‌ ಜನರ ಹೊಟ್ಟೆ ತುಂಬುವುದಿಲ್ಲ. ಯೋಜನೆಗಳನ್ನು ರೂಪಿಸಿ ಸಮಾನತೆ ತರಬೇಕು’ ಎಂದು ಪ್ರತಿಪಾದಿಸಿದರು.

‘ಬಹು ಭಾಗ್ಯಗಳ ಬ್ರಹ್ಮ’ ಸಿದ್ದರಾಮಯ್ಯ

ಹಂಪನಾ ಅವರು ಸಿದ್ದರಾಮಯ್ಯ ಅವರನ್ನು ‘ಬಹು ಭಾಗ್ಯಗಳ ಬ್ರಹ್ಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ‘ಜನಾನುರಾಗಿ’ ಎಂದು ಬಣ್ಣಿಸಿದರು. ‘ಪ್ರಭುತ್ವಗಳಲ್ಲಿ ಪ್ರಜಾಪ್ರಭುತ್ವ ಮುಡಿಯ ಮಾಣಿಕ್ಯ ಸೆ.15ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವವನ್ನು ಮನಗಾಣಿಸುವ ವಿಶ್ವದಾಖಲೆಯ ಮಾನವ ಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ’ ಎಂದರು. ‘ವರಸೆ ವರಸೆಯಾಗಿ ಅನೇಕ ಭಾಗ್ಯಗಳ ಮಳೆಗರೆದಿರುವ ಸರ್ಕಾರವು ನಡೆಸಿದ ಅರ್ಥಪೂರ್ಣವಾದ ಮಾನವ ಸರಪಳಿ ಯೋಜನೆಯೂ ಅಮೂರ್ತರೂಪದ ಇನ್ನೊಂದು ಸೃಜನಾತ್ಮಕ ಭಾಗ್ಯ. ಏಕೆಂದರೆ ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತವನ್ನು ನಿವಾರಿಸಲು ಮನುಷ್ಯ ಮನುಷ್ಯರನ್ನು ರಾಷ್ಟ್ರ ರಾಷ್ಟ್ರಗಳನ್ನು ಕೂಡಿಸುವ ಸರಪಳಿಗಳು ಇಂದಿನ ಜರೂರು’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.