ಮೈಸೂರು: ಮೋಡ ಕವಿದ ತಂಪಿನ ವಾತಾವರಣದಲ್ಲಿ ‘ಲಕ್ಷ್ಮಿ’ ಹಾಗೂ ‘ವರಲಕ್ಷ್ಮಿ’ಯರ ಜೊತೆ ಸೊಂಪಾಗಿ ರಾಜಠೀವಿಯಲ್ಲಿ ಹೆಜ್ಜೆ ಹಾಕುತ್ತಾ ಬಂದ ಅಂಬಾರಿ ಆನೆ ‘ಅಭಿಮನ್ಯು’ ದಸರೆಗೆ ಮೆರುಗು ತುಂಬಿದ.
ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಿಗ್ಗೆ ಗಜಪಡೆಯನ್ನು ಬೀಳ್ಕೊಡಲು ನೂರಾರು ಮಂದಿ ಜಮಾಯಿಸಿದ್ದರು.
ಮಂಗಳವಾದ್ಯ ನಿನಾದದಲ್ಲಿ ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ, ಬೆಳಿಗ್ಗೆ 10.20ರಿಂದ 10.45ರ ಶುಭ ಸಮಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಪೂಜೆ ಸಲ್ಲಿಸಿ, ‘ಗಜಪಯಣ’ಕ್ಕೆ ಚಾಲನೆ ನೀಡಿದರು.
ಅಭಿಮನ್ಯು ಜೊತೆ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಇದೇ ಮೊದಲ ಬಾರಿ ಭಾಗವಹಿಸುತ್ತಿರುವ ‘ಏಕಲವ್ಯ’ ಆನೆಗಳಿಗೆ ಬೆಳಿಗ್ಗೆಯೇ ಮಾವುತರು, ಕಾವಾಡಿಗಳು ಬಣ್ಣ ಮತ್ತು ಹೂಗಳು ಹಾಗೂ ವಸ್ತ್ರಾಭರಣಗಳಿಂದ ಅಲಂಕರಿಸಿದ್ದರು.
ಗಜಪಯಣಕ್ಕೆ ಕಲಾವಿದರ ಮೆರುಗು: ವೀರನಹೊಸಳ್ಳಿಯ ಅರಣ್ಯ ಇಲಾಖೆ ವಲಯ ಕಚೇರಿಯಿಂದ ಆಶ್ರಮ ಶಾಲೆವರೆಗೆ ಸುಮಾರು ಒಂದೂವರೆ ಕಿ.ಮೀ ದೂರ ಆನೆಗಳು ಹೆಜ್ಜೆ ಹಾಕಿದವು. ಅಭಿಮನ್ಯು ಆನೆಯನ್ನು ಎಲ್ಲ ಆನೆಗಳು ಹಿಂಬಾಲಿಸಿದವು.
ಚಿಕ್ಕಹೆಜ್ಜೂರಿನ 45 ಮಂದಿ ಹೆಣ್ಣುಮಕ್ಕಳು, ಮಹಿಳೆಯರು ಆನೆಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಜಾನಪದ ಕಲಾತಂಡಗಳು ಮೆರಗು ಹೆಚ್ಚಿಸಿದವು. ಪುಟ್ಟುಸ್ವಾಮಿ ಮತ್ತು ತಂಡದಿಂದ ಕಂಸಾಳೆ, ಶಿವಕುಮಾರ್ ಮತ್ತು ತಂಡದ ಡೊಳ್ಳು ಕುಣಿತ, ಪುನೀತಾ- ಕೀರ್ತನಾ ನೇತೃತ್ವದ ಪೂಜಾಕುಣಿತ ಗಮನ ಸೆಳೆದವು. ವೀರಭದ್ರನ ವೇಷಧಾರಿಗಳಾಗಿದ್ದ ಗದ್ದಿಗೆಯ ತಿಮ್ಮಯ್ಯ, ಬಸವಣ್ಣ, ವಿಜಿ, ಲಿಂಗರಾಜ ‘ವೀರಗಾಸೆ’ ಪ್ರದರ್ಶಿಸಿದರು. ಚಂಡೆ ಮೇಳ, ತಮಟೆ, ನಾದಸ್ವರ ಕಲಾವಿದರ ಸಂಗೀತದ ಧಿಮಿತವು ರಂಗನ್ನು ಹೆಚ್ಚಿಸಿತು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ದೊಡ್ಡ ಹೆಜ್ಜೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬಿಕಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಮರೀಗೌಡ, ಐಜಿಪಿ ಬೋರಲಿಂಗಯ್ಯ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್‌ಗಳಾದ ಐ.ಬಿ.ಪ್ರಭುಗೌಡ, ಕೆ.ಎನ್.ಬಸವರಾಜು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಡಿಸಿಪಿ ಎಂ.ಮುತ್ತುರಾಜ್ ಹಾಜರಿದ್ದರು.
ಗಣ್ಯರ ಗೈರು:
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ, ಜಿ.ಟಿ.ದೇವೇಗೌಡ, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಧು ಜಿ.ಮಾದೇಗೌಡ ಗೈರಾಗಿದ್ದರು.
ಇದೇ ಮೊದಲ ಬಾರಿ ದಸರೆಗೆ ಬಂದಿರುವ ಮತ್ತಿಗೋಡು ಆನೆ ಶಿಬಿರದ ‘ಏಕಲವ್ಯ’ ಕಿವಿಯ ಸೌಂದರ್ಯಕ್ಕೆ ಮಾರು ಹೋದರು! ಎಲ್ಲ ಆನೆಗಳ ಕಿವಿ ಮೇಲ್ಭಾಗವು ಮುಂಭಾಗಕ್ಕೆ ಮಡಚಿದ್ದರೆ ಏಕಲವ್ಯನ ಕಿವಿ ಮೇಲಿನ ಭಾಗ ಹಿಂದೆ ಮಡಚಿದ್ದು ವಿಶಿಷ್ಟವಾಗಿ ಕಾಣುತ್ತಿತ್ತು. ಮತ್ತಿಗೋಡು ಆನೆ ಶಿಬಿರದಲ್ಲಿ ಅನುಭವಿ ‘ಅಭಿಮನ್ಯು’ ‘ಭೀಮ’ ಸೇರಿದಂತೆ ಅನುಭವಿ ಆನೆಗಳೊಂದಿಗೆ ಪಳಗಿದೆ. ಇದರ ಎತ್ತರ 2.88 ಮೀ ಇದ್ದು ಕಟ್ಟುಮಸ್ತಾಗಿದೆ. ಮಾವುತ ಸೃಜನ್ ಹಾಗೂ ಕಾವಾಡಿ ಇದಾಯತ್ ಸಲಹುತ್ತಿದ್ದಾರೆ. ‘ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಸಹಳ್ಳಿಯಲ್ಲಿ ಅಭಿಮನ್ಯು ಅರ್ಜುನನ ನೇತೃತ್ವದಲ್ಲಿ ಒಂದೂವರೆ ವರ್ಷದ ಹಿಂದೆ 2022ರಲ್ಲಿ ಏಕಲವ್ಯನನ್ನು ಸೆರೆ ಹಿಡಿಯಲಾಗಿತ್ತು. ಶಾರ್ಪ್ ಶೂಟರ್ ವೆಂಕಟೇಶ್ ಅವರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಗಜಪಯಣಕ್ಕೆ ಬಂದಿದ್ದ ಪರಿಸರವಾದಿ ಹುರುಡಿ ವಿಕ್ರಂ ‘ಪ್ರಜಾವಾಣಿ’ಗೆ ತಿಳಿಸಿದರು. ‘ಎಲ್ಲ ಆನೆಗಳ ಕಿವಿ ವಯಸ್ಸಾಗುತ್ತ ಮುಂದಕ್ಕೆ ಬಾಗುತ್ತದೆ. ಈ ಆನೆಯ ಕಿವಿಗಳು ಹಿಂದೆ ಬಾಗುತ್ತವೆ. ಸೆರೆ ಕಾರ್ಯಾಚರಣೆಯಲ್ಲಿ ನಾನು ನೋಡಿದ್ದೆ. ಇಂಥ ಆನೆಗಳು ನೂರಕ್ಕೆ ಒಂದು ಮಾತ್ರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.