ಹುಣಸೂರು: ‘ಗಜಪಯಣ’ ನಂತರ ವೀರನಹೊಸಹಳ್ಳಿಯ ಆಶ್ರಮ ಶಾಲೆಯ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಾವುತರು– ಕಾವಾಡಿಗರಿಗೆ ಸನ್ಮಾನ, ನಾಗಾಪುರ ಆದಿವಾಸಿ ಗಿರಿಜನರ ಪುನರ್ವಸತಿ ಕೇಂದ್ರದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸೂಜಿಗಲ್ಲಿನಂತೆ ಸೆಳೆದವು.
ಹಾಡಿ ನಿವಾಸಿಗಳು, ಸುತ್ತಮುತ್ತಲ ಗ್ರಾಮಸ್ಥರಿಗೆ ‘ಪುಟ್ಟ ದಸರೆ’ಯಂತೆ ಕಂಗೊಳಿಸಿತು. ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಚಾಮರಾಜನಗರವಲ್ಲದೇ ದೂರದೂರುಗಳಿಂದ ಆನೆಪ್ರಿಯರು ಜಮಾಯಿಸಿದ್ದರು. ಆದಿವಾಸಿ ಸಮುದಾಯದ ಜನರು ಹಬ್ಬದ ಹೊಸ ಬಟ್ಟೆ ಧರಿಸಿ, ಮಕ್ಕಳೊಂದಿಗೆ ಬಂದು ಆನೆಗಳಿಗೆ ಕೈಮುಗಿದರು.
ಕೊಳವಿಗೆ ಆಶ್ರಮ ಶಾಲೆ ವಿದ್ಯಾರ್ಥಿಗಳು ಗಿರಿಜನರ ಸಾಂಪ್ರದಾಯಕ ‘ದೂರಿ... ದೂರಿ..’ ಹಾಡಿಗೆ ಹೆಜ್ಜೆ ಹಾಕಿದರು. ನಾಗಾಪುರ ವಾಲ್ಮೀಕಿ ವಸತಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ‘ಅಡವಿ ದೇವಿಗೆ..’ ಚಲನ ಚಿತ್ರಗೀತೆಗೆ ಹೆಜ್ಜೆ ಹಾಕಿದರು.
ನಾಗಾಪುರ ಬ್ಲಾಕ್ ಎರಡರ ಮಕ್ಕಳು ಬಿರ್ಸಾ ಮುಂಡಾ ಅವರ ಸ್ವಾತಂತ್ರ್ಯ ಪೂರ್ವ ಚಳುವಳಿಯ ನೃತ್ಯರೂಪಕ ಪ್ರದರ್ಶಿಸಿ ಗಮನ ಸೆಳೆದರು. ಗುರುಪುರ ಟಿಬೆಟನ್ ಕಾಲೊನಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಟಿಬೆಟನ್ ನೃತ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ನಂತರ ಮಾತನಾಡಿ, ‘ಅರಣ್ಯದಂಚಿನ ಗ್ರಾಮಸ್ಥರು ಕಾಡಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅರಣ್ಯ ನಾಶದಿಂದ ಎದುರಾಗುತ್ತಿರುವ ನೈಸರ್ಗಿಕ ವಿಕೋಪ ತಡೆಯಬೇಕು’ ಎಂದರು.
‘70ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದ್ದರಿಂದ ದೇಶದ ಅರಣ್ಯ ಸಂಪತ್ತು ಉಳಿಯಿತು. ಇಲ್ಲವಾದಲ್ಲಿ ಇಂದು ಅರಣ್ಯ ಸಂಪತ್ತು ವಿನಾಶದಂಚಿಗೆ ಹೋಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.
‘ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಸರ್ಕಾರ ಕ್ರಮವಹಿಸಿದೆ. ರೈಲ್ವೆ ಹಳಿ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 120 ಕಿ.ಮೀ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಿದ್ದು, ಇಲಾಖೆಯಿಂದ 250 ರಿಂದ 300 ಕಿ.ಮಿ. ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ’ ಎಂದು ಮಾಹಿತಿ ನೀಡಿದರು.
‘ಪುನರ್ವಸತಿ ಪಡೆದ ಆದಿವಾಸಿ ಗಿರಿಜನ ಸಮುದಾಯದವರಿಗೆ ಮೂಲಸೌಕರ್ಯ ಕಲ್ಪಿಸಲು ವಾರದೊಳಗೆ ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುವುದು’ ಎಂದರು.
ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಆನೆಗಳ ಕಿರು ಪರಿಚಯದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಭೋಜನ: ಗಜಪಯಣದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು, ಮಾವುತರು, ಕಾವಾಡಿಗರ ಕುಟುಂಬದವರಿಗೆ ಹೋಳಿಗೆ ಊಟ ಉಣಬಡಿಸಲಾಯಿತು. ಪಾಯಸ, ಹೋಳಿಗೆ, ಪೂರಿ, ಮದ್ದೂರು ವಡೆ, ಮೆಣಸಿನ ಕಾಯಿ ವಡೆ, ಒಣ ಹಣ್ಣುಗಳ ಪಲ್ಯ, ಹೆಸರುಕಾಳು ಪಲ್ಯ, ಹಪ್ಪಳ, ಪಲಾವ್, ಅನ್ನ ಸಾಂಬಾರು, ತಿಳಿಸಾರು ಮೊಸರು ಇದ್ದವು. ಸಾರ್ವಜನಿಕರಿಗೆ ಪಲಾವ್ ಮತ್ತು ಮೊಸರನ್ನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.